ರೇಷ್ಮಾ ಗುಳೇದಗುಡ್ಡಾಕರ್ ಓದಿದ ʼಬೆಳಗಿನೊಳಗು ಮಹಾದೇವಿ ಅಕ್ಕʼ

ರೇಷ್ಮಾ ಗುಳೇದಗುಡ್ಡಾಕರ್

ಉನ್ಮಾದ, ಉತ್ಕಟ, ಯಾವುದನ್ನು ಬಯಸದ ಅಕ್ಕನ ಭಾವ – ಬದುಕು ಅಕ್ಷರ ರೂಪದಲ್ಲಿ ಅರಳಿದೆ. ಅದು “ಬೆಳಗಿನೊಳಗು ಮಹಾದೇವಿ ಅಕ್ಕ”. ಎಂಬ ಕಾದಂಬರಿಯಲ್ಲಿ.

ಹೆಣ್ಣು ಎಂಬ ಜೀವದಲ್ಲಿ ಅವಳ ಭಾವಗಳ ತೊಳಲಾಟ, ಬಯಕೆ, ಕನಸು, ಉತ್ತರವಿಲ್ಲದ ಪ್ರಶ್ನೆಗಳು, ತಲ್ಲಣ, ಕಟ್ಟುಪಾಡುಗಳು ಎಲ್ಲವನ್ನು ಅಕ್ಕ ಹೇಗೆ ಎದುರಿಸಿದಳು ?. ತನ್ನತನವ ಹೇಗೆ ಪರೀಕ್ಷೆಗೆ ಒಡ್ಡಿದಳು? ಹೇಗೆ ಅಳುಕದೆ, ಜಗ್ಗದೆ ತಣ್ಣಗೆ ಸಾಗಿದಳು?…. ಎಂಬುದು ಇಂದಿಗೂ ಅರಿಯಲು ಸಾಧ್ಯವಿಲ್ಲ. ಮಹಾದೇವಿ ಎಂಬ ಹೆಣ್ಣು ಜಗತ್ತಿಗೆ ಅಕ್ಕನಾಗಿ ಉಳಿದ ಬಗೆ, ಹಾಗೂ ಶರಣೆಯಾಗಿ ಸಾಗುತ್ತಲೆ ಗಡಿಗಳನ್ನು ಮೀರಿ, ಮನಗಳಲ್ಲಿಯೂ ಬೆರತು ಸಹಜವಾಗಿಯೇ ತನ್ನ ನಿಲುವಿಗೆ ಬದ್ಧಳಾದ ಹರೆಯದ ಬಾಲೆ. ಎಲ್ಲರಂತೆ ಬೆಳೆದು ಭಕ್ತಿಗೆ ಸೆರೆಯಾದವಳು ಶರಣೆ ಅಕ್ಕ‌ಮಹಾದೇವಿ.

ಹೆಣ್ಣಿನ ನಿರ್ಧಾರ, ನಡತೆ, ಸ್ವಭಾವ, ಸಾಧನೆ ವಿಚಾರ ಬಂದಾಗಲೆಲ್ಲಾ ಹೆಣ್ಣು ಮತ್ತು ಅವಳ ಜಾತಿ, ಧರ್ಮ, ವರ್ಗದ ಹಿನ್ನೆಲೆಯನ್ನಾಧರಿಸಿ ಊರು, ಕೇರಿ, ನಗರ, ಮಹಾನಗರಗಳ ಸ್ಥಳವನ್ನಾಧರಿಸಿ ಮಾನ್ಯತೆ ದೂರೆಯುತ್ತದೆ. ಇಲ್ಲಿ ಅವಳ ಬುದ್ಧಿವಂತಿಕೆ, ವಿಚಾರ ಶೀಲತೆ, ಸ್ವಂತಿಕೆ, ಸ್ವಾಭಿಮಾನ ಗಣನೆಗೆ ಬರುವುದೇ ಇಲ್ಲ… ಕೇವಲ ಮೂಲಭೂತವಾದಿಗಳು ಕೂಗಾಡುತ್ತಾರೆ…! ಮತ್ತು ‘ಗಂಡಾಳ್ವಿಕೆ’ಯ ಸಮಾಜ ‘ಹೆಣ್ಣ’ನ್ನು ತಮಗೆ ಬೇಕಾದಂತೆ ನಿರೂಪಿಸುತ್ತದೆ…!? ಇಲ್ಲಿ ದಮನಕ್ಕೆ ಒಳಗಾಗುವವಳು ಕೇವಲ ಹೆಣ್ಣು… ಇದಕ್ಕೆ ಅಕ್ಕನ ಬದುಕು ಹೊರತಲ್ಲ…

ಯಾವುದೇ ಕಾಲಘಟ್ಟದಲ್ಲಿಯೂ ಹೆಣ್ತನವ ಒರೆಗೆಗೆ ಹಚ್ಚಿ ನೋಡಿ ಸಂಪ್ರದಾಯ, ಆಚರಣೆ, ಕಟ್ಟಳೆಗಳಿಗೆ ಮೊದಲು ಗುರಿಪಡಿಸುವದು ಹೆಣ್ಣನ್ನೆ ಇಂತಹ ಸಮಾಜದಲ್ಲಿ ಬಾಲ್ಯದಲ್ಲೇ ಲಿಂಗ ದೀಕ್ಷೆಯ ಪಡೆದು ಶರಣಸತಿಯಾಗಿ ಮೋಹವ ತೊರೆದು, ವೈರಾಗ್ಯ ಹಾದಿಯಲ್ಲಿ ದಿಗಂಬರಳಾಗಿ, ನಿರಾಳವಾಗಿಯೂ ನಡೆಯುವ. ಅಕ್ಕನ ಹಂಬಲ ಹೆಣ್ತನ ಬದುಕಿನ ವಿಶಿಷ್ಟ ಮೈಲಿಗಲ್ಲಾಗಿಸಿದೆ.

ಹಲವಾರು ಬರಹಗಳು ಮತ್ತು ಕೃತಿಗಳು‌, ಮಾಹಿತಿಗಳು ಅಕ್ಕನ ಕುರಿತು ಬಂದಿವೆ. ಅದರೆ ಡಾ. ಎಚ್.ಎಸ್ ಅನುಪಮಾ ಮೇಡಂ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿ ವಿಭಿನ್ನವಾಗಿ ಅಕ್ಕ ಎಂಬ ಸೂಜಿಗಲ್ಲು ಓದುಗರನ್ನು ಸೆಳೆಯುತ್ತದೆ. ಹಲವು ಸಂಶೋಧಕರು ನೀಡಿರುವ ಮಾಹಿತಿಗಳು ಕೃತಿಯ ಒಳನೋಟವನ್ನು ಹೆಚ್ಚಿಸಿವೆ. ಎಲ್ಲಿಯೂ ಓದುಗನ ಓದಿಗೆ ತಡೆಯಾಗದಂತೆ ವಿಷಯ ಮಂಡನೆಯಾಗಿರುವದು ಈ ಕೃತಿಯ ವಿಶೇಷ. ಮತ್ತು ಲೇಖಕರ ಪ್ರಖರ ಅಧ್ಯಯನಶೀಲತೆ ಇಡೀ ಕೃತಿಯಲ್ಲಿ ಕಾಣ ಸಿಗುತ್ತದೆ.

ಕೃತಿ 5 ವಿಭಾಗವಾಗಿ ವಿಂಗಡನೆಯಾಗಿ ಹಂತ ಹಂತವಾಗಿ ಮಹಾದೇವಿ ಅಕ್ಕನ ಜೀವನ ನಮ್ಮ ಮುಂದೆ ತೆರೆಯುತ್ತದೆ. ವಿಷಯ ವಸ್ತು 12 ನೇ ಶತಮಾನಕ್ಕೆ ಸೇರಿದ್ದಾದರೂ ಹೆಣ್ಣಿನ ಬದುಕಿನ ಚಿತ್ರಣ ಇಂದಿನ ಬದುಕಿಗೆ ಸಾಮ್ಯವಾಗಿ ಕಾಣುತ್ತದೆ‌. ಅಕ್ಕನ ಬಾಲ್ಯ, ಹರೆಯ, ತೆರವಾಗಿ ಹರಡಿದರೆ, ವೈವಾಹಿಕ ಜೀವನ ಅಲ್ಲಿ ಆಗುವ ಏರು -ಪೇರು ಸಮಾಜದಲ್ಲಿರುವದಕ್ಕಿಂದ ನಾಲ್ಕು ಗೋಡೆಯ ಮಧ್ಯೆ ಹೆಣ್ಣು ಅನುಭವಿಸಿದ ಧರ್ಮೀಯ ಅಸಹಿಷ್ಣತೆ, ತಾರತಮ್ಯ, ಹಿಂಸೆ, ಅಗಣಿತ ಮಾನಸಿಕ ವ್ಯಥೆ ಕ್ರಮೇಣ ಅವಳಲ್ಲಿ ವೈರಾಗ್ಯದ ದಾರಿ ಹಿಡಿಯುವಂತೆ ದಿಗಂಬರಳಾಗುವಂತೆ ಮಾಡುತ್ತವೆ.

ಅಕ್ಕಮಹಾದೇವಿ ಮೊಟ್ಟಮೊದಲ ಶರಣೆ ಕವಯತ್ರಿ. ಎಂಬ ಬಿರುದು ಆಕೆ ಪಡೆದ್ದು ಕಠಿಣ ಹಾದಿಯ ನಡಿಗೆಯಲ್ಲಿ, ಒಂಟಿ ಹೆಣ್ಣು ಬದುಕುವುದೇ ಕಷ್ಟವಾದ ಕಾಲ ಅಕ್ಕ ಓದು ಬರಹ ಕಲಿತು ದಿಂಗಂಬರಳಾಗಿ ಸಾಗಿದರೆ ಹೇಗೆ ಈ ಸಮಾಜ ಕಂಡಿತು ? ವೈರಾಗ್ಯ, ಮೋಹ ನಾವು ತೊರೆದರೆ ಸಾಲದು ನಮ್ಮನ್ನು ನೋಡುವ ಜಗತ್ತು ತೊರಯಬೇಕಲ್ಲ? ಸ್ನೇಹಿತ ನಂತಹ ಗಂಡ, ನೋವು- ನಲಿವುಗಳಿಗೆ ಹೆಗಲಾಗುವ ಪತಿ‌ ಬೇಕೆಂಬ ಅಕ್ಕನ‌ ಹಂಬಲ ಕನಸಾಗಿ ಅವಳಲ್ಲಿ ಆಧ್ಯಾತ್ಮಿಕ ಜೀವನದ ದಾರಿ ಹುಟ್ಟುವಂತೆ ಮಾಡುತ್ತದೆ.

ಮಹಾದೇವಿ, ಅಕ್ಕಮಹಾದೇವಿಯಾಗಲು ಸಹ ಧರ್ಮ, ಪಂಥ ಎದುರಾಗುತ್ತವೆ …..! ?, ಮತ್ತು ಏಕಾಗ್ರತೆಗೆ ಭಂಗಿ, ಸರಾಯಿ, ಮೈಥುನದ ವಿಚಾರಗಳನ್ನೂ ಸ್ವಾಮಿಗಳು, ಸನ್ಯಾಸಿಗಳು ಮಹಾದೇವಿ ಅಕ್ಕನ ಬಳಿ‌ ಪ್ರಸ್ತಾಪ ಮಾಡಿದಾಗ, ತಾತ್ವಿಕ ಸಾಧಕಿ ಅಕ್ಕ ಅಚ್ಚರಿಯಾಗುತ್ತಾಳೆ! ಸಹಜ ರೀತಿಯಲ್ಲಿ ಏಕಾಗ್ರತೆಯ ಸಾಧಿಸಿದ ಶರಣರು, ನಿರಾಕಾರ ಮೂರ್ತಿ ಆರಾಧನೆಯನ್ನು ಸರಳವಾಗಿಸಿದವರು, ಅನುಭವವೇ ಜಂಗಮವಾಗಿಸಿ. ಚಲನಶೀಲತೆಯ ವಿಚಾರವಾಗಿಸಿದವರು ಶಿವತ್ವ ಒಳಗಿನ‌ ಬೆಳಕು ಅದು ಹೊರಗಿನ ಅಂಧ ಆಚರಣೆಯಲ್ಲಿ ಇಲ್ಲ‌ ಎಂದು ಸಾರಿದ ನಮ್ಮ‌ಶರಣರು. ಆಹಾರ, ಸ್ಥಳ, ಹುಟ್ಟು ಇವುಗಳಿಂದ ಆಧ್ಯಾತ್ಮ ಸಾಧನೆಗೆ ಎಂದೂ ಮಾನದಂಡ ಆಗುವದಿಲ್ಲ ಎಂಬುದು ಅವರು ಬಾಳಿ ತೋರಿದರು ಎನ್ನುವದನ್ನು ಲೇಖಕಿಯವರು ಸಂಕೇತಿಕವಾಗಿ ಚಿತ್ರಿಸಿದ್ದಾರೆ.

ಎಲ್ಲಿಯೂ ತಡೆ ಇಲ್ಲದಂತೆ ಓದಿಸಿಕೊಂಡು ಹೋಗುವ ಈ ಕೃತಿಯು ಮಹಾದೇವಿ ಅಕ್ಕನ ಬದುಕಿನ ರೋಚಕತೆಯ ಮತ್ತು 12 ನೇ ಶತಮಾನದ ವಸ್ತು ಚಿತ್ರಣವ ಓದುಗರ ಮುಂದೆ ನೀಡುತ್ತದೆ. ಆದರೆ ಕಾಲ 12 ಶತಮಾನವಾದರೂ ಅಥವಾ ಇಂದಿನ 21 ನೇ ಶತಮಾನಕ್ಕೆ ಹೊಲಿಕೆ ಮಾಡಿದರು ಸಾಮಾಜಿಕ ವ್ಯವಸ್ಥೆಯಲ್ಲಾಗಲಿ, ಮಹಿಳಾ ಸ್ಥಾನ- ಮಾನಗಳ ಬಗ್ಗೆ ಅವಲೋಕಿಸಿದ೦ತಹ ಮಹತ್ತರವಾದ ಬದಲಾವಣೆ ಇನ್ನೂ ನಾವು ಸಾಧಿಸಿಲ್ಲ ಎಂಬುದು ಕೃತಿಯಲ್ಲಿ ಮೂಡಿ ಬಂದ ಅಕ್ಕಮಹಾದೇವಿಯ ಏಕಾಂಗಿ ಮಹಾ ಪಯಣ ಸಾಕ್ಷಿಯಾಗುತ್ತದೆ. ಶೋಷಣೆಯ ಸ್ವರೂಪ ಬೇರೆಯಾಗಿರಬಹುದು. ಆದರೆ ಹೆಣ್ಣು ಶೋಷಣೆಯಿಂದ ಮುಕ್ತವಾಗಿಲ್ಲ. ಆದರೆ ಅಕ್ಕಮಹಾದೇವಿ ಅವರ ನಿರ್ಧಾರ ಮತ್ತು ಆಲೋಚನೆಗಳಿಗೆ ಬಸವಾದಿ ಶರಣರು “ಅನುಭವಮಂಟಪ”ಕ್ಕೆ ಸ್ವಾಗತಿಸಿ ಗೌರವಿಸಿದರು.

ವೇದ-ಉಪನಿಷತ್ತು-ಪುರಾಣ-ಸ್ಮೃತಿಗಳಲ್ಲಿ ಉಲ್ಲೇಖವಾಗಿರುವ ಮಹಿಳೆಯ ಸ್ಥಾನ-ಮಾನಗಳು ನಿರಾಶಾದಾಯಕವಾಗಿವೆ. ಮಹಾಭಾರತ ಹೆಣ್ಣನ್ನು ಕೇಡಿನ ಮೂಲ ಎಂದು ಹೇಳುತ್ತದೆ. ಬೌದ್ಧ ಧರ್ಮ ಹೆಣ್ಣಿಗೆ ಅವಕಾಶ ನೀಡುತ್ತದೆ. ಆದರೆ ಜೈನ ಧರ್ಮದ ದಿಗಂಬರರು ಹೆಣ್ಣನ್ನು ನಿರಾಕರಿಸಿದರು. ಆದರೆ ಮಹಾದೇವಿ ಇವೆಲ್ಲವ ಬದಿ ಸರಿಸಿ ಸಹಜ ಮಾರ್ಗದ ಭಕ್ತಿ ಪಥದಲ್ಲಿ ಅಕ್ಕಮಹಾದೇವಿ ಸಾಗಿದರು.

ಅಕ್ಕಮಹಾದೇವಿ ಯಾವ ಪಂಥ, ವರ್ಗವನ್ನು ಅನುಸರಿಸದೆ. ತಾನೂ ಯಾವ ನಿಯಮಗಳನ್ನೊ, ನಿಬಂಧನೆಗಳನ್ನು ಮಂಡಿಸದೆ ಹೆಣ್ಣನ್ನು ದೈವದ ಹೆಸರಲ್ಲಿ ಕಾಮ, ಹಿಂಸೆಗೆ ಒಳಪಡಿಸುವದನ್ನು ಖಂಡಿಸಿ, ತನ್ನನ್ನು ತಾನು ಗೆದ್ದು ತಾನಾಗಿಯೇ ಉಳಿದು ತನ್ನ ಆಧ್ಯಾತ್ಮಿಕ ಗುರಿ ತಲುಪುತ್ತಾಳೆ, ಹೆಣ್ಣಿನ ಅಸ್ಮಿತೆಯಾಗಿ ಉಳಿಯುತ್ತಾಳೆ. ಕಣ್ಣಾಲಿಗಳು ತುಂಬಿ ಬರುತ್ತವೆ‌… ಅವಳ ಸ್ವಾಭಿಮಾನಕ್ಕೆ, ದಿಟ್ಟ ನಿರ್ಧಾರಕ್ಕೆ ಮನವು ತುಂಬಿರುತ್ತದೆ. ನೋಡದ ಶ್ರೀಶೈಲವನ್ನು ಛಲ ಬಿಡದೆ ಸೇರುವ “ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ” ಎಂಬ ವಚನದ ಸಾರವ ತನ್ನ ಬದುಕಿನಲ್ಲಿ ಪ್ರತಿಪಾದಿಸಿದ ಅಕ್ಕಮಹಾದೇವಿ, ಹೆಣ್ಣು ಕುಲದ ಸಾಕ್ಷಿಪ್ರಜ್ಞೆ.

‍ಲೇಖಕರು avadhi

February 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: