ಖ್ಯಾತ ನಟಿ ರಂಜನಿ ರಾಘವನ್ ಕಥಾ ಅಂಕಣ- ಉಪ್ಪಿಲ್ಲದ ಸತ್ಯಾಗ್ರಹ

ಕನ್ನಡ ಕಿರು ತೆರೆಯ ಮಹತ್ವದ ಕಲಾವಿದರ ಪಟ್ಟಿಯಲ್ಲಿ ರಂಜನಿ ರಾಘವನ್ ಅವರ ಹೆಸರು ಇದ್ದೇ ಇದೆ. ಕಿರುತೆರೆ ವಲಯದಲ್ಲಿ brainy ಎಂದೇ ಗುರುತಿಸಲ್ಪಡುವ ರಂಜನಿ ಅವರಿಗೆ ಓದು ಮೆಚ್ಚಿನ ಹವ್ಯಾಸ. ಸದ್ಯದ ಅತಿ ಹೆಚ್ಚು ಯಶಸ್ಸು ಕೊಟ್ಟ ಧಾರಾವಾಹಿ ‘ಕನ್ನಡತಿ’.

ಸೆಟ್ ನಲ್ಲಿಯೂ ಒಂದಿಲ್ಲೊಂದು ಪುಸ್ತಕ ಹಿಡಿದು ಹಾಜರಾಗುವ ರಂಜನಿಯವರ ಬಗ್ಗೆ ಉಳಿದವರದ್ದು ಅಚ್ಚರಿಯ ಕಣ್ಣು. ಈಗಾಗಲೇ ಹಲವು ಸಾಹಿತ್ಯ ಸಮಾರಂಭಗಳಲ್ಲಿ ಅತಿಥಿಯಾಗಿ ಓದುಗರ, ಬರಹಗಾರರ ಮನ ಗೆದ್ದಿರುವ ಇವರು ಈಗ ಇನ್ನೊಂದು ಹೊಸತಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ.

ಮೈಸೂರಿನ ಒಳರಸ್ತೆಯಲ್ಲಿ ಮರಗಳ ಮಧ್ಯೆ ಸೂರ್ಯನ ಕಿರಣಗಳು ಗೆರೆ ಎಳೆದಂತೆ ನುಸುಳಿದ್ದವು. ಪ್ರತಿಮಾ ಮನೆ ಮುಂದೆ ಕಸ ಗುಡಿಸುತ್ತಿರುವಾಗ ಎದುರು ಮನೆಯ ಕೆಲ್ಸದಾಕೆ ಪೊರಕೆ ತಗೊಂಡು ಹೊರಗೆ ಬಂದಳು. ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವವರು ನನ್ನ ಅವತಾರ ನೋಡಿ ನನ್ನನ್ನೂ ಕೆಲ್ಸದವಳು ಅಂದುಕೊಂಡುಬಿಡುತ್ತಾರೆ ಅನ್ನಿಸಿ ಪ್ರತಿಮಾ ಕೆದರಿದ ಕೂದಲನ್ನು ಸರಿ ಮಾಡಿಕೊಳ್ಳುತ್ತಾ ಒಳ ಹೋದಳು.

ಗಂಡ ಇನ್ನೂ ಗೊರಕೆ ಶಬ್ದ ಮಾಡುತ್ತಿದ್ದ. ಮಕ್ಕಳಿಬ್ಬರೂ ಅಡ್ಡಾದಿಡ್ಡಿ ಮಲಗಿದ್ದರು. ಭಾನುವಾರವಾದ್ದರಿಂದ ಗಂಡ ಮಕ್ಕಳು ಇಡೀ  ವಾರದ ನಿದ್ರೆಯೆಲ್ಲಾ ಖಾಲಿಮಾಡುತ್ತಿದ್ದರು. ಯಾಂತ್ರಿಕವಾಗಿ ತನ್ನ ಕೆಲ್ಸಗಳನ್ನು ಮುಂದುವರೆಸಿದಳು. ಮಹಡಿ ಮೇಲೆ ಗಿಡಕ್ಕೆ ನೀರು ಹಾಕೋಕೆ ಹೋದಾಗ ಎದುರು ಮನೆಯ ಶ್ರೀನಿವಾಸ್ ಬಟ್ಟೆ ಒಣಗಿ ಹಾಕುತ್ತಿದ್ದವರು ಕಂಡು ಸ್ಮೈಲ್ ಮಾಡಿದರು, ಎಲ್ಲ ಬಟ್ಟೆಗಳ ಜೊತೆ ಅವರ ಹೆಂಡತಿಯ ಸೀರೆಯನ್ನು ಒಣಗಿಹಾಕಿದ್ದನ್ನು ಪ್ರತಿಮಾ ವಿಶೇಷವಾಗಿ ಗಮನಿಸಿದಳು.

ಕಾಫ಼ಿ ಪುಡಿಗೆ ಬಿಸಿನೀರನ್ನು ಬಗ್ಗಿಸಿ ಪ್ರತಿಮಾ ಅಡುಗೆ ಮನೆ ತುಂಬಾ ಕಾಫಿ ಘಮ ಹರಡಿಸಿದಳು. ಕಿಟಕಿಯಿಂದ ಶ್ರೀನಿವಾಸ್ ಹೆಂಡತಿ ಪದ್ಮಿನಿ, ಬಾಲ್ಕನಿಯಲ್ಲಿ ಪೇಪರ್ ಓದುತ್ತಾ ಕೂತಿರೋದು ಕಾಣಿಸಿ ಇಬ್ಬರೂ ಗುಡ್ ಮಾರ್ನಿಂಗ್ ಬದಲಾಯಿಸಿಕೊಂಡರು. ‘ಆಯ್ತಾ ತಿಂಡಿಯೆಲ್ಲಾ?’ ಅವರು ಕೇಳಿದ್ದಕ್ಕೆ ‘ಇಲ್ಲಾರೀ ಸ್ವಲ್ಪ ನಿಧಾನ..’ ಪ್ರತಿಮಾ ಬಲವಂತವಾಗಿ ನಗುತ್ತಾ ಪ್ರತಿಕ್ರಿಯಿಸಿದಳು. ಪಟ್ಟಣದಲ್ಲಿ ನೆರೆಹೊರೆಯವರ ಜೊತೆ ಇಷ್ಟೇ ಪರಿಚಯ. ಪ್ರತಿಮಾ ಮನೆಯಿಂದ ಎದುರು ಮನೆಯ ಹಾಲು, ವರಂಡಾ ಮತ್ತು ಮಹಡಿ ಕಾಣುತ್ತಿದ್ದರಿಂದ ಅವರ ಮನೆಯಲ್ಲಿ ನಡೆಯೋ ವಿಷಯಗಳು ಗೊತ್ತಾಗುತ್ತಿತ್ತು.

ಕಾಫಿ ಮಾಡಿ ಡೈನಿಂಗ್ ಟೇಬಲ್ ಮೇಲಿಡುತ್ತಾ ‘ಏಳಿ ಇನ್ನು ಎಷ್ಟು ಹೊತ್ತು? ಕಾಫಿ ತಣ್ಣಗಾಗುತ್ತೆ’ ಕೂಗಿದಳು. ಗಂಡನ ‘ಹ್ಮ್’ ಅಂತ ರಾಗ ಬಿಟ್ಟರೆ ಮತ್ತೇನೂ ಉತ್ತರ ಬರಲಿಲ್ಲ. ಮಾವನನ್ನ ಎಬ್ಬಿಸಿ ಅವರಿಗಾಗಿ ಮಾಡಿದ್ದ ಶುಗರ್ ಲೆಸ್ ಕಾಫಿ ಕೊಟ್ಟು ಬಂದಳು. ತಿಂಡಿಗೇನು ಮಾಡ್ಲಿ? ತರಕಾರಿ ತರಬೇಕು, ಸಿಂಕ್ ಭರ್ತಿ ಮುಸುರೆ ಪಾತ್ರೆ ತುಂಬಿಕೊಂಡಿದೆ.

ಟಾಸ್ಕ್ ಗಳ ಪಟ್ಟಿ ವರ್ಚುವಲ್ ಆಗಿ ಕಾಣಿಸತೊಡಗಿತು. ‘ಆಚೆ ಹೋಗೋರಿಗೆ ರಜಾ ದಿನ ಅಂತಿರುತ್ತೆ, ಮನೇಲೇ ಚಾಕರಿ ಮಾಡೋರಿಗೆ ರಜವೆಲ್ಲಿ? ಅವರಿಗೆ ರಜವಿರೋ ದಿನವಂತೂ ನಮಗೆ ಓವರ್ ಟೈಮ್. ಎದುರು ಮನೆಯವರು ಅವರವರ ಕೆಲ್ಸ ಅವ್ರು ಮಾಡ್ಕೋತಾರೆ, ಅವ್ರ ಗಂಡ ಎಷ್ಟು ಚೆನ್ನಾಗಿ ಕೈಗೇ ಕಾಫಿ ತಂದುಕೊಟ್ಟರು. ‘ನಂದೂ ಒಂದು ಬದುಕು, ಮಾಡೋ ಕೆಲ್ಸಕ್ಕೆ ಒಂದು ಚೂರು ಬೆಲೆ ಇಲ್ಲ’ ಅವಳ ಗೊಣಗಾಟವನ್ನು ಕೇಳೋ ಕಿವಿಯೂ ಸುತ್ತ ಇರಲಿಲ್ಲ. 

‘ಪ್ರತೀ.. ಇವತ್ತು ನನ್ನ ಕಾಲೇಜ್ ಫ಼್ರೆಂಡ್ಸ್ ಇಬ್ಬರು ಅವರ ಕುಟುಂಬದ ಜೊತೆ ಮನೇಗ್ ಬರ್ತಾರೆ ಕಣೇ’ ಫೋನ್ ಕಟ್ ಮಾಡುತ್ತಾ ಆನಂದ್ ಖುಷಿಯಾಗಿ ಹೇಳಿದ. ಆ ಮಾತಿಂದ ಅಡುಗೆ ಮನೆಯೆಂಬ ಕಾರ್ಖಾನೆಯಲ್ಲಿ ಅವತ್ತಿನ ಪ್ರೊಡಕ್ಶನ್ ಎಂದಿಗಿಂತ ಹೆಚ್ಚಾಗಿ ಶುರುವಾಗಬೇಕಾಯಿತು. ಅಲ್ಲಿ ನೌಕರ, ಮ್ಯಾನೇಜರ್ ಎಲ್ಲರೂ ಒಬ್ಬರೇ. ತರಕಾರಿ ಹಚ್ಚಿ ಕೊಡ್ತೀನಿ ಅಂತ ಸಹಾಯ ಮಾಡೋಕೆ ಬಂದ ಆನಂದ್ ಆಫೀಸ್ ನಲ್ಲಿ ಏನೋ ತುರ್ತು ಕೆಲ್ಸ ಅಂತ ಲ್ಯಾಪ್ಟಾಪ್ ಆನ್ ಮಾಡಿ ಕೂತ. ಮಾವ ದಿನಕ್ಕೊಂದು ಸಲ ರೂಮಿನಿಂದ ಹೊರ ಬಂದು ಪೂಜೆ ಮಾಡಿ ರೂಮಿಗೆ ಸೇರಿಕೊಂಡರೇ ಮತ್ತೆ ಬರುವುದು ನಾಳೆಯೇ. ಟಿವಿ, ಪುಸ್ತಕದಲ್ಲಿ ದಿನ ಕಳೆಯುತ್ತಾರೆ.

ಸಾಯಂಕಾಲ ಮನೆಗೆ ಬಂದ ಅತಿಥಿಗಳು ಕಾಫಿ, ಬಾಳೇಕಾಯಿ ಬಜ್ಜೆ, ರಾತ್ತಿ ಊಟಕ್ಕೆ ಬಿರಿಯಾನಿ, ಶಾವಿಗೆ ಪಾಯಸ ಎಲ್ಲವನ್ನು ಸವಿದು ಶಬ್ಭಾಷ್ಗಿರಿ ಅನ್ನೋ ರಿಟರ್ನ್ ಗಿಫ಼್ಟ್ ಕೊಟ್ಟರು, ಒಂದಿಬ್ಬರು ತಾವು ಕುಕರಿ ಶೋ ಗೆ ಬಂದಿರೋ ತೀರ್ಪುಗಾರರೇನೋ ಅನ್ನುವಂತೆ ಒಂದೊಂದರಲ್ಲೂ ಏನು ಹೆಚ್ಚಾಗಿದೆ? ಏನು ಕಮ್ಮಿಯಾಗಿದೆ? ಬೇರೆ ಏನಾಗಬೇಕಿತ್ತು ಅಂತ ಚಾಚೂತಪ್ಪದೆ ರಿಪೋರ್ಟ್ ಕೊಟ್ಟರು.

‘ಸ್ವಲ್ಪ ಅಜೀರ್ಣ ಆಗಿದೆ ಜೀರಿಗೆ ಕಷಾಯ ಮಾಡಿಕೊಡಮ್ಮ’ ಮಾವ ತಮಗಾದ ತೊಂದರೆ ಜೊತೆಗೆ ಅದರ ಮದ್ದನ್ನೂ ಒಂದೇ ಸಾಲಿನಲ್ಲಿ ಹೇಳಿದಾಗ ಕಷಾಯವೂ ತಯಾರಾಗಿ ಬಂತು. ಬಂದವರಲ್ಲೊಬ್ಬಳು ತನ್ನ ಉದ್ದ ಕೂದಲಿಗೆ ರಬ್ಬರ್ ಸೇರಿಸಿಕೊಳ್ಳುತ್ತಾ ‘ಜೀರಿಗೆ ಕಷಾಯಕ್ಕೆ ಸಕ್ಕರೆಗಿಂತ ಬೆಲ್ಲ ಹಾಕಿದರೆ ಹೆಚ್ಚು ಒಳ್ಳೇದು’ ಅನ್ನೋ ಉಚಿತ ಸಲಹೆ ಕೊಟ್ಟಾಗ ಪ್ರತಿಮಾಗೆ ಎಲ್ಲಿತ್ತೋ ಸಿಟ್ಟು ‘ನೀವೇ ಮಾಡಿಕೊಟ್ಟಿದ್ದರೆ ಇನ್ನೂ ಒಳ್ಳೆದಾಗಿರುತ್ತಿತ್ತು’ ಅಂದುಬಿಟ್ಟಳು ಪ್ರತಿಮಾ. ಜೋರಾಗಿ ಬರುತ್ತಿದ್ದ ಮಳೆ ಇದ್ದಕ್ಕಿದ್ದಂತೆ ನಿಂತುಹೋದಂತೆ ಸದ್ದುಗದ್ದಲದ ಮನೆ ಒಂದೇ ಕ್ಷಣದಲ್ಲಿ ಮೌನವಾಯಿತು. ಮನೆಗೆ ಬಂದಾಗ ಸಾಧ್ವೀಮಣಿಯಂತಿದ್ದವಳು ಈಗ ದುರ್ಗಿಯ ರೂಪ ತಾಳ್ತಿದ್ದಾಳೆ ಅಂತನಿಸಿ ಒಬ್ಬಬ್ಬರೇ ಕಾಲು ಕಿತ್ತರು.

ಮನೆಹೊರಗೆ ಬೀದಿ ದೀಪವನ್ನು ನೋಡ್ತಾ ಪ್ರತಿಮಾ ಆರಾಮ್ ಚೇರಿನಲ್ಲಿ ಒರಗಿ ಕೂತಿದ್ದಳು, ಮುಖ ತೊಳೆದ ಮೇಲೆ ಒರೆಸಿಕೊಳ್ಳದಿದ್ದರಿಂದ ಹಣೆ ಮೇಲಿಂದ ನೀರು ಕುತ್ತಿಗೆ ತನಕ ಇಳಿಯುತ್ತಿತ್ತು. ‘ಬೇಕಂತಲೇ ಹೀಗೆ ಸ್ನೇಹಿತರ ಮುಂದೆ ಅವಮಾನ ಆಗೋ ಹಾಗೆ ಮಾಡ್ದೆ ಅಲ್ವ’ ಆನಂದ್ ಸಣ್ಣದಾಗಿ ದನಿ ಏರಿಸಿ ಕೇಳಿದ. ಪ್ರತಿಮಾ ‘ಎಲ್ಲಾ ಕೆಲ್ಸ ಮಾಡೋದ್ ಅಲ್ದೇ ನಿಮ್ ಸ್ನೇಹಿತ್ರು ಹತ್ರ ಅಡುಗೆ ಪಾಠ ಬೇರೆ ಕೇಳ್ಬೇಕಾ? ನನ್ ಕಷ್ಟ ಯಾರು ಕೇಳ್ತಾರೆ? ಮನೇಲ್ ಎಲ್ಲಾರನ್ನೂ ನಾನೇ ಗಮನಿಸ್ಬೇಕು, ಹೊಗಳಿಕೆ ಬೇಡ.. ಅದನ್ನ ಗಮನಿಸ್ತೀರಾ ಹೋಗ್ಲಿ? ಅವಳೂ ದೂರಿದಳು.

ಒಬ್ಬರಿಗೊಬ್ಬರ ಮೇಲೆ ಆಪಾದನೆ ಹೊರೆಸುತ್ತಿರುವಾಗ ಎದುರು ಮನೆಯವರ ಕಾರ್ ಬಂದು ನಿಂತಿತು. ಒಳಗಿಂದ ಖುಷಿಯಾಗಿ ಶ್ರೀನಿವಾಸ್ ಅವರ ಕುಟುಂಬ ಇಳಿಯಿತು. ಅವರ ಕೈಲಿರೋ ಬ್ಯಾಗುಗಳನ್ನು ನೋಡಿದರೆ ಗೊತ್ತಾಗುತ್ತಿತ್ತು ಅವರೆಲ್ಲರೂ ಭರ್ಜರೀ ಶಾಪಿಂಗ್ ಮಾಡಿ ಬಂದಿದ್ದಾರೆ ಎಂದು.

ಪ್ರತಿಮಾ ‘ಒಂದು ದಿನವಾದರು ಆಚೆ ಹೋಗೋಣ ಅಂತ ನಿಮ್ಮ ಬಾಯಲ್ಲಿ ಬಂದಿದ್ದೀಯ? ಅವ್ರನ್ನ ನೋಡಿ’. ಆನಂದ್ ‘ಇವತ್ತೊಂದಿನಕ್ಕೆ ಹೀಗ್ ಹೇಳ್ತೀಯಲ್ಲಾ .. ಎರ್ಡ್ ವಾರದ್ ಹಿಂದೇ ತಾನೆ ಸಿನೆಮಾಗೆ ಹೋಗಿದ್ವಲ್ಲೇ’ ‘ನಿಮ್ಮ ಆಫೀಸ್ ನಲ್ಲಿ ಫ಼್ರೀ ಟಿಕೆಟ್ ಕೊಟ್ಟಿದ್ರು ಅದಕ್ಕೆ, ಇವತ್ತಿನ್ ಬಗ್ಗೆ ಮಾತ್ರ ಅಲ್ಲ.. ನೋಡ್ತೀನಲ್ಲ? ಅವ್ರ್ ಮನೇಲಿ ದಿನಾ ಖುಷಿಯಾಗಿರ್ತಾರೆ, ನಮ್ಮನೆ ತರ ಅಲ್ಲ’ ಅವಳ ಕಂಪ್ಲೇಂಟ್ ಗಳ ಬಾಲ ಬೆಳಿತಾ ಹೋದಂತೆ ಆನಂದ್ ತಾಳ್ಮೆ ಒಡೆದು ಮನೆಯೊಳಗೆ ಹೋಗಿಬಿಟ್ಟ. ರಾತ್ರಿ ಮೌನದಲ್ಲೇ ಕಳೀತು.

ಆನಂದ್ ಎಂದಿಗಿಂತ ಬೇಗ ಎದ್ದು ತಾನೇ ಡಿಕಾಕ್ಶನ್ ಹಾಕೋಕೆ ಬಂದ. ಹಿಂದೆಯೇ ಬಂದ ಪ್ರತಿಮಾ ‘ಒಂದು ದಿನ ಮಾಡಿದ್ರೆ ಎಲ್ಲಾ ಆಗಲ್ಲ, ನೆನ್ನೆ ಆಗಿದ್ದಕ್ಕೆ ಇವತ್ತು ಒಳ್ಳೇವ್ರು ಅನ್ನಿಸ್ಕೊಳ್ಳೋಕ್ ಬರ್ಬೇಡಿ’ ಜಗಳ ಮುಂದುವರೀತು. ‘ಪ್ರತಿದಿನ ಮಾಡೋಕೆ ನಿನ್ ತರ ನಾನು ಮನೇಲೇ ಕೂತಿರ್ತೀನಾ? ಕೆಲ್ಸ ಇರುತ್ತಲ್ವಾ’ ಆತ ಅಂದ. ಪ್ರತಿಮಾಗೆ ತಾನು ಸಂಪಾದನೆ ಮಾಡ್ತಿಲ್ಲ ಅಂತ ಹಂಗಿಸುತ್ತಿದ್ದಾನೆ ಅಂತ ಸಿಟ್ಟು ಬಂದಿತು.

ಆನಂದ್ ತನ್ನ ವಾದ ಶುರುಮಾಡಿದ ‘ಕೆಲ್ಸದವಳು ಒಳ್ಳೇ ರಂಗೋಲಿ ಹಾಕಲ್ಲ, ತೊಳೆದ ಪಾತ್ರೆಯಲ್ಲಿ ಜಿಡ್ಡು ಹಾಗೇ ಇರುತ್ತೆ ಅಂತ ನೀನೇ ಬೇಡ ಅಂದೆ, ಈಗ ಆ ಕೆಲ್ಸಾನ ನಾನ್ ಮಾಡೋಕ್ ಆಗುತ್ತಾ? ಎದುರು ಮನೆಯವರನ್ನ ತರ್ತೀಯಲ್ಲ ಅವರು ಕೆಲ್ಸಕ್ಕೆ ಹೋಗೊ ಮುಂಚೇನೇ ಎಲ್ಲಾ ಮುಗ್ಸಿ ಹೋಗ್ತಾರೆ. ಮನೇಲಿರೋರೇ ಹೀಗೆ! ಇಡೀ ದಿನ ಕೆಲಸವನ್ನ ಎಳೆದಾಡಿಕೊಂಡು ಮಾಡ್ತಿರ್ತೀರಾ!’ ಗಂಡ ಹೆಂಡಿರ ಮಧ್ಯೆ ಸಗಣಿ ಎರಚಾಟ ಮುಂದುವರೀತು. ಯಾಕ್ ಬೇಕಿತ್ತು ಈ ಮದುವೆ? ಸಂಸಾರ? ನನಗೇ ಯಾಕೆ ಎಲ್ಲಾ ಕಷ್ಟಗಳೂ ಬಂದು ಸೇರಿಕೊಳ್ಳುತ್ತವೆ? ಇಬ್ಬರಿಗೂ ಅದೇ ಪ್ರಶ್ನೆ. ಇಬ್ಬರಿಗೂ ಉತ್ತರ ಸಿಗಲಿಲ್ಲ. ಇಬ್ಬರಿಗೂ ಎದುರು ಮನೆಯವರೇ ಉತ್ತಮ ಅನ್ನಿಸಿಹೋಯ್ತು.

ಅಂದು ಬೆಳಗ್ಗೆ ಪ್ರತಿಮಾ ಎಷ್ಟು ಕರೆದರೂ ಮಂಚ ಬಿಟ್ಟು ಎದ್ದು ಬರಲಿಲ್ಲ. ಆನಂದ್ ಫ಼್ರಿಜ್ ಲಿದ್ದ ದೋಸೆ ಹಿಟ್ಟನ್ನು ಹೆಂಚಿಗೆ ಹುಯ್ದು ಡಬ್ಬಿಗೆ ತಿಂಡಿ ತುಂಬಿ ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕರೆದುಕೊಂಡು ಹೋದ. ಗಂಡನೇ ಎಲ್ಲ ಕೆಲ್ಸ ಮಾಡಿದ ಅಂತ ಒಂದು ಮಟ್ಟದಲ್ಲಿ ಸಮಾಧಾನವಾದರೂ ನನ್ನ ಮುನಿಸಿಗೆ ಕ್ಷಮೆ ಕೇಳಲಿಲ್ಲ ಅನ್ನೋ ಅಸಮಧಾನ ಎದ್ದುನಿಂತಿತು.

ಸುಮ್ಮನೆ ಕೂತು ಬೋರಾಗಿ ಫೋನ್ ನ ಹೋಮ್ ಸ್ಕ್ರೀನ್ ನಲ್ಲಿದ್ದ ಸೋಶಿಯಲ್ ಮೀಡಿಯಾ ಆಪ್ ಒತ್ತಿದಾಗ ಹೊಸಾ ಪ್ರಪಂಚವೇ ತೆರೆದುಕೊಂಡಿತು. ಅದರ ತುಂಬಾ ಪ್ರತಿಮಾಳ ಸ್ನೇಹಿತೆಯರೆಲ್ಲಾ ತಮ್ಮವರ ಜೊತೆ ರೆಸಾರ್ಟ್ ಗೆ ಹೋದ ಫೋಟೋಗಳು, ಬೆಟ್ಟ, ಸಮುದ್ರ ಅಂತ ಟ್ರಿಪ್ ಗೆ ಹೋಗಿದ್ದು, ವಿಧವಿಧವಾದ ತಿಂಡಿ ತಿನಿಸುಗಳ ಫೋಟೋ ಹಾಕಿಕೊಂಡಿದ್ದು ಕಣ್ಣುಕುಕ್ಕಿತು.

‘ರೀಲ್ಸ್’ ನಲ್ಲಿ ತಮ್ಮ ಗಂಡಂದರ ಜೊತೆ ಕುಣೀತಿದ್ದರು, ಸಣ್ಣ ಮಕ್ಕಳು ಮುದ್ದಾಗಿ ಮಾತನಾಡುತ್ತಿದ್ದರು. ಪ್ರತಿಮಾ ತಲೇಲಿ ಹೊಸದೊಂದು ಕೊರತೆ ಶುರುವಾಯಿತು. ಹೋದಸಲ, ನಾವೂ ವಿಡಿಯೋ ಮಾಡೋಣ ಅಂತ ಕರೆದಾಗ ‘ಇದೇನು ಹುಚ್ಚರ ಸಂತೆ! ಈ ತರ ನಾವು ಕುಣಿದ್ರೆ ಚೆನ್ನಾಗಿರಲ್ಲ’ ಆನಂದ್ ಒಂದೇ ಮಾತಿಗೆ ಅವಳ ಆಸೆಗೆ ತಣ್ಣೀರೆರೆಚಿದ್ದ. ಇನ್ನು ಆರು ವರ್ಷದ ಮಗಳ ಜೊತೆ ವಿಡಿಯೋ ಮಾಡೋಕೆ ಹೋದಾಗ, ಮೂರು ವರ್ಷದ ಮಗ ಅತ್ತು ಕಿರುಚಿ ರಂಪಾಟ ಮಾಡಿದ್ದ. ಮಗಳೊಂದಿಗೆ ಸಿನಿಮಾ ಡೈಲಾಗ್ ವಿಡಿಯೋ ಮಾಡೋಕೆ ಹೋಗಿ ಮಗನ ಗೊಣ್ಣೆ ಒರೆಸೋ ವಿಡಿಯೋ ತಯಾರಾಗಿತ್ತು! 

ಒಂದು ಸಲ ಒಳನುಗ್ಗಿದರೆ ಹೊರಬರಲಾಗದ ಹಾಗೆ ಹಿಡಿದುಕೊಳ್ಳೋ ಆಯಸ್ಕಾಂತ ಈ ಸಾಮಾಜಿಕತಾಣಗಳು. ಅದರ ಪ್ರಭಾವದಿಂದ ಹೊರಬರಬೇಕಾದರೆ ದೊಡ್ಡ ಸಂಕಲ್ಪಶಕ್ತಿಯೇ ಬೇಕು! ಇನ್ನು ಪ್ರತಿಮಾ ಫೋನಿನ ಸ್ಕ್ರೀನಿಗೇ ಅಂಟಿಕೊಂಡಿದ್ದಳು. ಅವಳ ವಯಸ್ಸಿನ ಆಸುಪಾಸಿನವರೆಲ್ಲರೂ ತೆಳ್ಳಗೆ , ಒಳ್ಳೊಳ್ಳೆ ಬಟ್ಟೆಗಳನ್ನು ಹಾಕಿಕೊಂಡು ಮಾಡೆಲ್ ಗಳ ತರ ಕಾಣಿಸುತ್ತಿದ್ದರು. ಕನ್ನಡಿಯಲ್ಲಿ ತನ್ನನ್ನ ನೋಡಿಕೊಂಡಳು.. ‘ನಾನು ಮಾತ್ರ ಇಬ್ಬರು ಮಕ್ಕಳನ್ನು ಹೆತ್ತು ಮನೆ ಕೆಲಸ ಮಾಡಿಕೊಂಡು ಯಾರಿಗೂ ಬೇಡದವಳಾಗಿದ್ದೇನೆ’ ಅನ್ನೋ ಯೋಚನೆ ತಲೆಯಲ್ಲಿ ಜೋರಾಗಿ ಪ್ರತಿಧ್ವನಿಸುತ್ತಾ ಹೋಯಿತು.

ಆನಂದ್ ಹೆಂಡತಿಯನ್ನು ಓಲೈಸಲು ತಂದೆಯನ್ನು ತಂಗಿಯ ಮನೆಗೆ ಬಿಟ್ಟು ಬಂದಿದ್ದ. ಎಲ್ಲಿಗಾದರೂ ಹೋಗಿ ಬರೋಣ ಅಂತ ಕರೆದಾಗ ಪ್ರತಿಮಾ ತನಗಲ್ಲ ಅನ್ನುವಂತೆ ಕೂತಿದ್ದಳು. ಕೇಳಿ ಪಡೆದುಕೊಳ್ಳೋದು ಬೇಕಾಗಿಲ್ಲ ಅಂತ ಮನಸ್ಸು ಹಟ ಹಿಡಿದು ಸತ್ಯಾಗ್ರಹಕ್ಕೆ ಕೂತಿತ್ತು. ಗಂಡ ಆಫೀಸಿಗೆ ರಜೆ ಹಾಕಿ ಎಲ್ಲ ಕೆಲ್ಸವನ್ನು ತಾನೇ ಮಾಡಿ ‘ಈಗ ಸಮಾಧಾನಾನಾ?’ ಅಂತ ವ್ಯಂಗ್ಯಮಾಡಿದ. ಮನೆಯಲ್ಲಿ ಮಾತು ಕಮ್ಮಿಯಾದಂತೆ ಟಿವಿಯಲ್ಲಿ ವಾಲ್ಯೂಮ್ ಜಾಸ್ತಿ ಆಯಿತು. ಪ್ರತಿಮಾ ಟಿವಿ ಸೀರಿಯಲ್  ನಲ್ಲಿ ನಡೀತಿದ್ದ ದೃಶ್ಯವನ್ನು ನೋಡಿ ಇನ್ನೂ ಮಂಕಾದಳು.

ಹೀರೋಯಿನ್ ಬೆಟ್ಟ ಹತ್ತಿದರೆ ಕಾಲು ನೋವಾಗುತ್ತದೆಯೆಂದು ಹೀರೋ ಅವಳನ್ನು ತೋಳಲ್ಲಿ ಎತ್ತಿಕೊಂಡು ನೂರಾರು ಮೆಟ್ಟಿಲು ಹತ್ತುತ್ತಿದ್ದ. ‘ನಿನ್ನ ಜೊತೆ ನನ್ನ ಕಥೆ ಬೇರೊಂದು ಲೋಕ ಸೃಷ್ಟಿಸಿದೆ’ ಹಿನ್ನಲೆಯಲ್ಲಿ ಬರ್ತಿದ್ದ ಇಂಪಾದ ಹಾಡು ಅವಳ ಮನಸಿನ ಬೆಂಕಿಗೆ ಪೆಟ್ರ‍ೋಲ್ ಸುರೀತಿತ್ತು. ಒಂದು ಸಂಚಿಕೆಯನ್ನೂ ಬಿಡದೆ ನೋಡೋ ಸೀರಿಯಲ್ ನಲ್ಲಿ ಹೀರೋ ತನ್ನ ಹೆಂಡತಿಯನ್ನು ಅಷ್ಟು ಚೆನ್ನಾಗಿ ನೋಡಿಕೊಳ್ತಾನೆ, ಕಣ್ಣಲ್ಲಿ ಕಣ್ಣಿಟ್ಟು ರೊಮಾಂಟಿಕ್ ಆಗಿ ನೋಡುತ್ತಾನೆ, ಅವಳ ಕಣ್ಣು ಮುಚ್ಚಿ ಸುಂದರವಾದ  ಜಾಗಕ್ಕೆ ಕರೆದುಕೊಂಡು ಹೋಗಿ ಸರ್ಪ್ರೈಸ್ ಮಾಡುತ್ತಾನೆ, ಅವಳ ಕಣ್ಣಲ್ಲಿ ನೀರು ಬಂದ್ರೆ ತಾನೂ ಮರೆಯಲ್ಲಿ ಕಣ್ಣೀರು ಹಾಕ್ತಾನೆ!’ ಆದ್ರೆ ಇಲ್ಲಿ? ನನ್ನ ಗಂಡ, ನಾನು ಜಗಳವಾಡಿದ್ದಕ್ಕೆ ಕಾಟಾಚಾರಕ್ಕೆ ಏನೋ ಮಾಡಿ ಮುಗಿಸಿ ನನ್ನ ಬಾಯಿಮುಚ್ಚಲು ಕಾತರಿಸುತ್ತಿದ್ದಾನೆ. ಜೀವನದಲ್ಲಿ ನನ್ನ ಬಿಟ್ಟು ಬೇರೆ ಎಲ್ರೂ ಸಂತೋಷವಾಗಿದ್ದಾರೆ’. ಒಂದು ತಪ್ಪಿದರೆ ಇನ್ನೊಂದು ಯೋಚನೆ ಕಾಡಿ ಮನಸ್ಸು ವ್ಯಾಕುಲಗೊಂಡಿತು.

ಹೆಂಡತಿಯ ಜೊತೆಗಿದ್ದ ಮನಸ್ತಾಪದಿಂದ ಆನಂದ್ ಗೆ ಕೆಲ್ಸದಲ್ಲಿ ಗಮನ ಕೊಡೋದಕ್ಕೆ ಕಷ್ಟವಾಯಿತು. ಸಮಸ್ಯೆಯನ್ನು ದೊಡ್ಡದು ಮಾಡ್ಬಾರ್ದು ಅಂದುಕೊಂಡಷ್ಟೂ ಸಂಕೀರ್ಣವಾಗುತ್ತಿತ್ತು. ಏನಾದರಾಗಲೀ ಸರಿಮಾಡ್ಬೇಕು ಅಂದುಕೊಂಡ.

‘ಪ್ರತೀ ಹತ್ರ, ಮಾತೆತ್ತಿದರೆ ಜಗಳ, ಮುನಿಸು ಇಲ್ಲ ಅಳು. ಏನ್ ಮಾಡ್ಬೇಕು ಅಂತಾನೇ ಗೊತ್ತಾಗ್ಲಿಲ್ಲ. ಈಗೀಗ ಮನೆ ಕೆಲ್ಸ ಮಾಡಿಕೊಡ್ತಿದ್ದೀನಿ, ಆಚೆ ಹೋಗೋಣ ಅಂದ್ರೆ ಅವ್ಳೇ ಎಲ್ಲಿಗೂ ಬರ್ತಿಲ್ಲ. ಮೊದ್ಲಿನ್ ಹಾಗೆ ಕೆಲ್ಸಕ್ಕೆ ಹೋಗು ಅಂತ ಹೇಳೋಣ ಅಂದುಕೊಂಡ್ರೆ ಮಕ್ಕಳಾದ ಮೇಲೇ ಹೊರಗೆ ಕೆಲ್ಸ ಮಾಡೋ ಹುಮ್ಮಸ್ಸು ಈಗಿಲ್ಲ ಅದರ ಟಚ್ ಬಿಟ್ಟು ಹೋಗಿದೆ ಅಂತಾಳೆ’. ಹಾಗಾಗಿ ಬಲವಂತ ಮಾಡೋಕೆ ಹೋಗ್ಲಿಲ್ಲ. ಆದ್ರೆ ಅವ್ಳು ಖಿನ್ನತೆಗೆ ಒಳಗಾಗಿದ್ದಾಳೆ ಅಂತ ಆನಂದ್ ತನ್ನ ತಂಗಿಯ ಹತ್ರ ಹೇಳಿಕೊಂಡಾಗ ಅಣ್ಣನ ಕಣ್ಣಲ್ಲಿದ್ದ ನೋವನ್ನ ಅರ್ಥಮಾಡಿಕೊಂಡ ಅವಳು ಫೋನ್ ನಂಬರ್ ಕೊಟ್ಟು ಅವರ ಹತ್ತಿರ ಮಾತನಾಡು ಏನಾದರೂ ಪರಿಹಾರ ಸಿಗುತ್ತದೆ ಎಂದಳು.

‘ನನಗೇನಾದ್ರು ಹುಚ್ಚು ಹಿಡಿದಿದ್ದೀಯಾ? ಮನೋವೈದ್ಯರನ್ನ ಯಾಕೆ ಕರೆಸಿದ್ದೀರ?’ ‘ನಿನಗಲ್ಲ ಪ್ರತೀ, ನಮ್ಮಿಬ್ಬರ ಮನಸ್ತಾಪಕ್ಕೆ ಸರಿಯಾದ ಕಾರಣ ತಿಳಿದುಕೊಳ್ಳೋಣ, ಎಷ್ಟ್ ಸಂತೋಷವಾಗಿದ್ವಿ? ಯಾಕೆ ಹೀಗೆ ಆಗಿದ್ದೀವಿ. ಒಂದು ಸಲ ಮಾತಾಡೋಣ’ ಪ್ರತಿಮಾಳ ಗಲಾಟೆಗೆ ಆನಂದ್ ಸಮಾಧಾನದಿಂದ ಉತ್ತರಿಸಿ ಕರೆದುಕೊಂಡು ಬಂದನು.

ಡಾಕ್ಟರ್ ಇಬ್ಬರನ್ನೂ ಕೂರಿಸಿಕೊಂಡು ಆದ ಘಟನೆಗಳನ್ನು ಕೂಲಂಕಷವಾಗಿ ಕೇಳಿಸಿಕೊಂಡರು. ‘ನೀವು ಶ್ರೀನಿವಾಸ್ ಮನೆಯ ಎದುರು ಇರೋರು ಅಂತ ಗೊತ್ತಾಗಿ ಆಶ್ಚರ್ಯವಾಯ್ತು!  ಅವರು ನನ್ನ ಪೇಶಂಟ್’ ಡಾಕ್ಟರ್ ಬೃಂದಾ ಅಂದರು. ಎದುರು ಮನೆಯವರನ್ನು ತಮಗೆ ಹೋಲಿಸಿಕೊಂಡ ಪ್ರತಿಮಾ ಮತ್ತು ಆನಂದ್ ಗೆ ಅವರ ಮನೆಯ ನಿಜವಾದ ಕತೆ ತಿಳಿದು ಶಾಕ್ ಆಯಿತು. ‘ಅವರ ಮಗಳು ಸ್ನೇಹಾಗೆ ಶ್ವಾಸಕೋಶದ ಕ್ಯಾನ್ಸರ್ ಇದೆ!. ಶ್ರೀನಿವಾಸ್ ನ ಮೊದಲ ಹೆಂಡತಿ ಅವರಿಗೆ ಡೈವರ್ಸ್ ಕೊಟ್ಟು ತಮ್ಮ ಮಗಳನ್ನು ನೋಡಲೂ ಸಹ ಬಿಡದಂತೆ ಕೋರ್ಟ್ ನಿಂದ ಒಪ್ಪಿಗೆ ಪಡೆದಿದ್ದಳು. ಆ ನೋವಿನಿಂದ ಹೊರಬರಲು ಅವ್ರು ತಮ್ಮ ಎರಡನೇ ಹೆಂಡತಿ ಪದ್ಮಿನಿಯ ಮಗಳನ್ನ ತುಂಬಾ ಕಾಳಜಿ ಪ್ರೀತಿಯಿಂದ ನೋಡಿಕೊಳ್ತಾರೆ.

ಪದ್ಮಿನಿಯ ಗಂಡ ತೀರಿಹೋಗಿದ್ದಾರೆ. ಸ್ನೇಹ ಸಣ್ಣ ವಯಸ್ಸಿನಲ್ಲಿ ಅಪ್ಪನನ್ನು ಕಳೆದುಕೊಂಡು ಅಂಕಲ್ ನೇ ಅಪ್ಪನಂತೆ ಹಚ್ಚಿಕೊಂಡುಬಿಟ್ಟಿದ್ದಾಳೆ. ಹಿಂದಿನ ಜೀವನದ ಕಷ್ಟಗಳನ್ನು ಮರೆತು ಇಬ್ಬರೂ ಹೊಸ ಜೀವನ ಕಟ್ಟಿಕೊಂಡು ಆದರಲ್ಲಿ ಸಂತೋಷ ಹುಡುಕುತ್ತಿದ್ದಾರೆ’ ಅವರ ಕಷ್ಟ ಕೇಳಿ ಆನಂದ್-ಪ್ರತಿಮಾಗೆ ತಮ್ಮ ಮಧ್ಯೆ ಇಲ್ಲದ ಕಷ್ಟ ತಂದುಕೊಂಡು ಒದ್ದಾಡುತ್ತಿದ್ದೇವೆ ಅನ್ನಿಸಿತು.

ಡಾಕ್ಟರ್ ಮುಂದುವರೆಸಿದರು. ‘ನಿಮ್ಮನ್ನು ನೋಡಿ ಅವರು ಮುದ್ದಾದ ಕುಟುಂಬ, ಇಬ್ರು ಪುಟ್ಟ ಮಕ್ಕಳು, ಮಾವ ಎಲ್ರೂ ಎಷ್ಟು ಚೆನ್ನಾಗಿದ್ದಾರೆ. ಬಂಧು ಮಿತ್ರರು ಮನೆಗೆ ಬಂದುಹೋಗ್ತಿರ್ತಾರೆ. ನಮ್ಮ ಜೀವನ ಹೀಗಾಗಿದ್ದಕ್ಕೆ ಯಾರೂ ಹತ್ರ ಬರೋದಿಲ್ಲ ಅಂತ ನಿಮ್ಮನ್ನ ಹೋಲಿಸಿಕೊಂಡು ನನ್ನ ಹತ್ರ ಹೇಳ್ತಿರ್ತಾರೆ. ನಿಮ್ಮನ್ನು ನೋಡಿ ಅವರಿಗೆ ಪರ್ಫ಼ೆಕ್ಟ್ ಸಂಸಾರ ಅನ್ನಿಸಿದೆ. ನಿಮ್ಮಿಂದ ಅವರು ಸ್ಪೂರ್ತಿ ತೆಗೆದುಕೊಂಡಿದ್ದರು, ಆದ್ರೆ ಯಾವತ್ತೂ ಕೊರಗಿರಲಿಲ್ಲ’.

ಭಗವಂತ, ಎಲ್ಲರ ಕಷ್ಟಗಳನ್ನುಒಂದು ಮೇಜಿನ ಮೇಲೆ ಹಾಕಿ ಕಷ್ಟಗಳನ್ನು ಬದಲಾಯಿಸಿಕೊಳ್ಳಬಹುದೆಂಬ ಆಯ್ಕೆಯನ್ನೇನಾದರೂ ಕೊಟ್ಟರೇ, ಎಲ್ಲರೂ ತಮ್ಮ ತಮ್ಮ ಕಷ್ಟಗಳನ್ನೇ ಮರಳಿ ಪಡೀತಾರಂತೆ. ಯಾಕೆಂದರೆ ಬೇರೆಯವರ ಕಷ್ಟ ಇನ್ನೂ ದೊಡ್ಡದಾಗಿ ಕಾಣುತ್ತಿರುತ್ತದೆ. ಒಂದು ಕೆಟ್ಟ ದಿನದಿಂದ ನಮ್ಮ ಜೀವನವೇ ಕೆಟ್ಟದಾಗಿದೆ ಅಂದುಕೊಳ್ಳೋದು ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಯಾರು ತಮ್ಮ ಕಷ್ಟಗಳನ್ನು, ಬೇಸರಗಳನ್ನು ಹಂಚಿಕೊಳ್ಳುತ್ತಾರೆ? ಅದು ಒಬ್ಬ ವ್ಯಕ್ತಿಯ ಜೀವನದ ಒಂದು ಸಣ್ಣ ಭಾಗವಷ್ಟೇ. ತಾನು ಎಲ್ಲರಿಗಿಂತಾ ಸುಖವಾಗಿದ್ದೇನೆ.

ನನ್ನ ಜೀವನ ಕೂಲ್ ಅಂತ ತೋರಿಸಿಕೊಳ್ಳೋದಕ್ಕಷ್ಟೇ ಇರೋ ಜಾಗ. ಅದನ್ನು ನೋಡಿ ನಮ್ಮ ಜೀವನವನ್ನು ಅಳೆಯೋದಕ್ಕೆ ಹೋದರೆ ತಪ್ಪಾಗುತ್ತೆ. ಹಾಗಂತ ಜೀವನದಲ್ಲಿ ಸಂತೋಷವೇ ಇರೋದಿಲ್ಲ ಅಂತಲ್ಲ ಪ್ರತಿದಿನ ಹೇಗೆ ಹಬ್ಬದೂಟ ಮಾಡೋಕಾಗಲ್ವೋ ಹಾಗೆ ಪ್ರತಿದಿನವೂ ವಿಶೇಷವಾಗಿರೋದಕ್ಕೆ ಸಾಧ್ಯವಿಲ್ಲ. ವಾಸ್ತವವಾಗಿ ಇರೋ ಸಣ್ಣ ಪುಟ್ಟ ಸಮಸ್ಯೆಯನ್ನು ಕೂತು ಬಗೆಹರಿಸಿಕೊಳ್ಳಿ. ಗುಡ್ ಲಕ್’ ಡಾಕ್ಟರ್ ಮಾತು ಅಕ್ಷರಶಃ ಸತ್ಯ ಅನ್ನಿಸಿತು.

ಆನಂದ್ ಮತ್ತು ಪ್ರತಿಮಾಗೆ ತಮ್ಮ ಜೀವನ ಎಷ್ಟು ಸುಗಮವಾಗಿದೆ ಅನ್ನೋದು ಅರಿವಾಯಿತು. ‘ಸಾರಿ ನಿನ್ನ ಬೇಜಾರು ಮಾಡಿಸ್ಬಿಟ್ಟೆ’ ಆನಂದ್ ಕೈ ಹಿಡಿದು ಕೇಳಿಕೊಂಡ. ‘ನಾನ್ ಇದನ್ನೆಲ್ಲಾ ಶುರು ಮಾಡಿದ್ದು.. ಕ್ಷಮಿಸಿ’ ಪ್ರತಿಮಾ ಹೇಳಿದಳು. ಸಂಸಾರದಲ್ಲಿ ತಮ್ಮ ಜವಾಬ್ದಾರಿ ಏನು ಎಂಬುದನ್ನು ಸ್ಪಷ್ಟಮಾಡಿಕೊಂಡು ಅದರಂತೆ ನಡೆಯಬೇಕೆಂದು ನಿರ್ಧರಿಸಿಕೊಂಡರು.

‘ನಿನ್ ಫ಼ೆವರೇಟ್ ಹೀರೋನ ನೋಡಿ ನನ್ನ ಬೈಕೊಳ್ಳಲ್ಲ ತಾನೆ? ಟಿವಿ ಸೀರಿಯಲ್ ಗಳಲ್ಲಿ, ಸಿನೆಮಾದಲ್ಲಿ ನಟರು ಅವರಿಗೆ ಕೊಟ್ಟ ಡೈಲಾಗ್ ಗಳನ್ನು ಹೇಳುತ್ತಾರೆ, ಶೂಟಿಂಗ್ ನವರು ಅಣಿ ಮಾಡಿದ ಜಾಗಕ್ಕೆ ಹೀರೋ ಹೀರೋಯಿನ್ ನ ಕರೆದುಕೊಂಡು ಹೋದ ಹಾಗೆ ತೋರಿಸುತ್ತಾರೆ. ಅದನ್ನೆಲ್ಲಾ ನಾನ್ ಮಾಡ್ಬೇಕು ಅಂದ್ರೆ ಇರೋ ಕೆಲ್ಸ ಬಿಡಬೇಕಾಗುತ್ತೆ’ ಅಂತ ತಮಾಷೆ ಮಾಡಿದಾಗ ಪ್ರತಿಮಾ ತನ್ನ ದಡ್ಡತನವನ್ನು ಮರೆಮಾಚಲು ಬಾಯಿತುಂಬಾ ನಕ್ಕಳು. ಅಂದು ಪ್ರತಿಮಾ ಆನಂದ್ ತನ್ನ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿ ತನ್ನ ಫ಼್ಯಾಮಿಲಿ ಫೋಟೋ ಅಪ್ಲೋಡ್ ಮಾಡಿ ‘ಸಂತೋಷ ಕಂಡುಕೊಳ್ಳೋದ್ರಲ್ಲಿರುತ್ತೆ’ ಅಂತ  ಕಾಪ್ಶನ್ ಬರೆದಳು.

‍ಲೇಖಕರು Admin

June 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. ರೂಪಾಲಿ. ಆರ್.ಎಸ್

    ತುಂಬಾ ಇಷ್ಟ ಆಯ್ತು ರಂಜನಿ ನೀವು ಬರೆದ ಕಥೆ ನಾನು ನಿಮ್ಮ ದೊಡ್ಡ ಅಭಿಮಾನಿ… ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲ್ಲಿ.. ಒಳ್ಳೆಯದಾಗಲಿ.

    ಪ್ರತಿಕ್ರಿಯೆ
    • Anitha Rao

      Assumptions, expectation ಮತ್ತೆ ಹೋಲಿಕೆಗಳನ್ನು ಬಿಡಬೇಕು. ಕೂತು ಮಾತನಾಡಿ ತೊಂದರೆಗಳನ್ನು ಬಗೆಹರಿಸಿಕೊಳ್ಳಬೇಕು. ಸ್ವಲ್ಪ ತಾಳ್ಮೆ ಬೇಕು.

      ಜೀವನದ ಪ್ರತಿ phases especially for girls, ladies are challenging.

      ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕತೆ. Stay blessed Ranjini…

      Love to read more…

      ಪ್ರತಿಕ್ರಿಯೆ
  2. Bhargavi BV

    Thumbha sogasada kathe . ಸುಖಮಯ ಜೀವನಕ್ಕೆ ಇರುವುದರಲ್ಲೇ ತೃಪ್ತಿ ಪಡಬೇಕು ಎಂದು ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ .

    ಪ್ರತಿಕ್ರಿಯೆ
    • ಸೀಮಾ ಬುರ್ಡೆ

      ಅರ್ಥಪೂರ್ಣ ಬರಹ.

      ಒಂದು ಕ್ಷಣ ಹೋಲಿಕೆ ಅಂತ ಬಂದರೆ ನಮ್ಮಲ್ಲಿರದ ಗುಣಗಳೇ ನೆನಪಾಗುತ್ತವೆ. ಹಾಗಾಗಿ ಖಿನ್ನತೆಯೂ ಶುರುವಾಗುತ್ತದೆ. ಡಾಕ್ಟರ್ ಬೃಂದಾ ಮಾತುಗಳು ತುಂಬಾ ಚೆನ್ನಾಗಿವೆ.

      ಸುಖಾಂತ್ಯವನ್ನು ಬಯಸುವ ನನಗೆ ನಿಮ್ಮೆಲ್ಲ ಕಥೆಗಳಲ್ಲಿ ಒಂದೆರಡನ್ನು ಬಿಟ್ಟು ಉಳಿದವು ಅದೇ ಹಾದಿ ಹಿಡಿದಿದ್ದು ಇಷ್ಟವಾಯಿತು.

      ಕೆಲಸಕ್ಕೆ ಹೋಗಲಿಲ್ಲವೆನ್ನುವುದು , ಮನೆ ಕೆಲಸದಲ್ಲೇ ಖುಷಿ ಕಾಣೋರ ಮಧ್ಯೆ ನಿಜವಾದ ಖುಷಿ ಏನೇಂಬುದೇ ಮರೆತು ಹೋಗುತ್ತದೆ.

      ಚಂದದ ಓದು.

      ಪ್ರತಿಕ್ರಿಯೆ
      • Asha H.S

        Real life story madam. Meaningful ending.. Nanu nim all stories nu read madiddene tumba eshta aytu. Yavaglu hige barita eri. Thank u madam

        ಪ್ರತಿಕ್ರಿಯೆ
  3. ಲಕ್ಷ್ಮೀ ಯದುರಾಜ್

    ಕಳೆದ ವಾರಗಳಂತೆ ಈ ವಾರವು ನಿಮ್ಮ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಭುವಿಯಾಗಿ ಮತ್ತು ಲೇಖಕಿ ,ಕಥೆಗಾರ್ತಿ ರಂಜನಿ ಯಾಗಿ ತುಂಬ ಇಷ್ಟವಾಗುತ್ತಿದ್ದೀರಾ ,ಇನ್ನೂ ಈ ಕಥೆಯ ಬಗ್ಗೆ ಹೇಳಬೇಕೆಂದರೆ ಡಿ ವಿ ಜಿ ಯವರು ಹೇಳಿದಂತೆ “ಇರುವ ಭಾಗ್ಯವ ನೆನೆದು ಬಾರದೆಂಬುದನ್ನು ಬಿಡು ಹರುಷಕ್ಕಿದೆ ದಾರಿ ” ಎಂಬುದು ಚೆನ್ನಾಗಿ ನಿರೂಪಿತವಾಗಿದೆ. ಜನಗಳೇ ಹಾಗೆ ಇದ್ದುದರಲ್ಲಿ ಚೆನ್ನಾಗಿ ಇರುವುದನ್ನು ಬಿಟ್ಟು ಬೇರೇನನ್ನೂ ಪಡೆಯಬೇಕೆನ್ನುವ ಆಸೆಯಲ್ಲಿ ತಮ್ಮ ಜೀವನವನ್ನು ಕಷ್ಟಕ್ಕೆ ತಳ್ಳಿಕೊಳ್ಳುತ್ತಾರೆ. ಅವರಿಗೆ ಅರಿವಾಗುವುದು ಅಲ್ಲಿ ಬಿಡಿಸಿಕೊಳ್ಳಲಾರದ ಪರಿಸ್ಥಿತಿ ಬಂದಾಗ ಮಾತ್ರ .ನಿಮ್ಮ ಮುಂದಿನ ಕಥೆಗೆ ಶುಭವಾಗಲಿ ರಂಜನಿ ಮೇಡಂ ..

    ಪ್ರತಿಕ್ರಿಯೆ
    • ಕೀರ್ತಿ

      ಒಂದು ಉತ್ತಮ ಸಂದೇಶ ಕಥೆ ಮೂಲಕ ವ್ಯಕ್ತಪಡಿಸಿದ್ದೀರಿ, ಚನ್ನಾಗಿದೆ..

      ಪ್ರತಿಕ್ರಿಯೆ
  4. Anu

    ರಂಜನಿ ಅವ್ರೆ ನಿಮ್ಮ ಕಥೆ ಓದುತ್ತಾ ಇದ್ದರೆ , ಈ ಕಥೆಯ ಅಕ್ಕ ಪಕ್ಕ ನಾವೂ ಕೂಡ ಇದೀವೋ ಏನೋ ಅನ್ಸುತ್ತೆ , ಮನಸ್ಸಿಗೆ ತುಂಬಾ ಹತ್ರ ಆಗುತ್ತೆ ಬರುವ ಪಾತ್ರಗಳು ಹಾಗೇನೆ ಅರ್ಥಪೂರ್ಣವಾಗಿದೆ.

    ಪ್ರತಿಕ್ರಿಯೆ
  5. Akshatha

    ಬಹಳ ಚೆನ್ನಾಗಿದೆ! ನಿಮ್ಮ ಕನ್ನಡ ಕೂಡ ತುಂಬ ಶುದ್ಧವಾಗಿದೆ. ಈ ಕಥೆಯ ನೀತಿ ಎಲ್ಲರಿಗೂ ಅನ್ವಯಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಸಾಕಷ್ಟು ಸಮಸ್ಯೆಗಳು ಇರುತ್ತದೆ. ಅದನ್ನು ಹೇಗೆ ಬಗೆಹರಿಸಬಹುದು ಎಂದು ಯೋಚಿಸಬೇಕೇ ಹೊರತು ಅನ್ಯರ ಬದುಕನ್ನು ಕಂಡು ಶೋಧಿಸಬಾರದು. ಬಹುಷಃ ಆ ಮತ್ತೋರ್ವ ತನಗಿದ್ದ ಕಷ್ಟಗಳನ್ನು ದಿಟ್ಟತನದಿಂದ ಎದುರಿಸಿ ಈಗ ಖುಷಿಯಾಗಿರಬಹುದು. ಅದಲ್ಲದೇ ಇದ್ದಲ್ಲಿ, ಅವನ ಬನ್ನಗಳನ್ನು ಅವನ ಹಸನ್ಮುಖದ ಹಿಂದೆ ಮುಚ್ಚಿಟ್ಟಿರಬಹುದು. ನಾವು, ನಮ್ಮ ಬದುಕೇ ಅತಿ ಸುಂದರ ಎಂಬ ಮನೋಭಾವದಿಂದ ಬಂದ ಕ್ಲೇಶಗಳನ್ನು ಎದುರಿಸಿ ಸಣ್ಣ ಪುಟ್ಟ ಸಂಗತಿಗಳಲ್ಲೂ ಸಂತೋಷ ಕಂಡರೆ ನಾವೇ ಸುಖಿಯಾಗುತ್ತೇವೆ.
    ಇಂತಹ ಒಂದು ಒಳ್ಳೆಯ ಕಥೆಯನ್ನು, ಅದರಲ್ಲೂ ಕನ್ನಡಲ್ಲಿ ಪ್ರಸ್ತಾಪಿಸಿದಕ್ಕೆ ಧನ್ಯವಾದಗಳು. ಹೀಗೆಯೇ ಬರೆಯುತ್ತಿರಿ.

    ಪ್ರತಿಕ್ರಿಯೆ
  6. Ashwini

    Vary beautifully narrated again related to present affairs, u r touching the heart vary deeply. All the best.

    ಪ್ರತಿಕ್ರಿಯೆ
  7. Ashwini

    ಕಥೆ ತುಂಬಾ ಚನ್ನಾಗಿದೆ, ನೈಜತೆ ಸ್ಪಷ್ಟವಾಗಿ ಕಾಣಿಸುತ್ತದೆ ಏಕೆಂದರೆ ನಿಜ ಜೀವನದಲ್ಲಿ ಕೂಡ ಇಂತಹ ಘಟನೆಗಳು ನೋಡಲು ಸಿಗುತ್ತವೆ. ಕಥೆಯ ಮೂಲಕ ತಿಳಿಸಿರುವ ತಾತ್ಪರ್ಯ ಕೂಡ ಸ್ಪಷ್ಟವಾಗಿದೆ. ನಾನು ನಿಮ್ಮ ಅಭಿಮಾನಿ, ಇನ್ನೂ ಒಳ್ಳೆಯ ಕಥೆಗಳಿಗೋಸ್ಕರ ಕಾಯುತ್ತಿರುತ್ತೇನೆ. ಧನ್ಯವಾದಗಳು.

    ಪ್ರತಿಕ್ರಿಯೆ
  8. ಶೈಲಜಾ ಹಾಸನ

    ಬದುಕೆಂದರೆ ಸಹಜ ಯಾನ, ಅದು ಭ್ರಮೆಗಳ ತಾಣವಾದರೆ ಬದುಕು ದಡಸೇರದ ನೌಕೆಯಾದಿತು ಎಂಬುದನ್ನು ಆಕರ್ಷಕ ವಾಗಿ ಕಟ್ಟಿ ಕೊಟ್ಟಿದ್ದಾರೆ ಕತೆಗಾರ್ತಿ.

    ಪ್ರತಿಕ್ರಿಯೆ
  9. Nikhil B

    ನಮಸ್ಕಾರ ರಂಜಿನಿ ಅಕ್ಕಾ ಹೇಗಿದ್ದೀರಿ,
    ಮೊನ್ನೆ ವ್ಯಾಕ್ಸಿನ ಹಾಕಿಸಿದ ಚಿತ್ರ ನೋಡಿದೆ.
    ಆರೋಗ್ಯವಾಗಿ ಇದ್ದೀರಿಯಂದು ಭಾವಿಸಿದ್ದೇನೆ.

    ಈ ವಾರದ ಕಥೆ ತುಂಬಾ ಸ್ಪಷ್ಟವಾಗಿದೆ ಹಾಗೂ ತುಂಬಾ ಸಂಸಾರಿಗಳಿಗೆ ಒಂದು ಕಿವಿಮಾತಾಗಿದೆ.
    ಈ ಕಥೆಯಲ್ಲಿ ಎಲ್ಲರೂ ಮನೆಯಲ್ಲೂ ನಡೆಯುವ ಸಹಜ ಪರಿಸ್ಥಿತಿಯನ್ನ ಬಿಡಿಸಿ ಹೇಳಿದ್ದೀರ.

    ದೂರದ ಬೆಟ್ಟ ನುಣ್ಣಗೆ ಅನ್ನೊ ಹಾಗೆ ನಮಗೆ ಬೇರೆಯವರ ಜೀವನ ನೋಡಿದಾಗ ಎಷ್ಟು ಚಂದ ಅವರ ಬದುಕು, ನಮ್ಮ ಬಾಳು ಹಾಗಿದ್ದರೆ ಚನ್ನಾಗಿರ್ತಿತ್ತು ಅನ್ನಿಸುತ್ತೆ. ಆದರೆ ಅವರು ವಾಸ್ತವದಲ್ಲಿ ಅವರ ಸಮಸ್ಯೆಯನ್ನ ನೋಡಿ,ಅವರು ಇನ್ನೊಬ್ಬರ ಜೀವನಕ್ಕೆ ಹೋಲಿಸಿಕೊಳ್ಳುತ್ತಾರೆ. ಹೀಗೆ ಇದರ ಸರಣಿ ಮುಂದುವರಿಯುತ್ತೆ.

    ಸಹಜವಾಗಿ ಹುಡುಗರು ಕೆಲಸ ಕಛೇರಿ ಬಿಟ್ಟರೆ ವೀಕೆಂಡಲ್ಲಿ ತಮ್ಮ ಸಂಸಾರದಕಡೆ ನೋಡುತ್ತಾರೆ. ಅದರಲ್ಲೂ ಅರ್ದದಿನ ತಮ್ಮ ಮೊಬೈಲ್ ಸುಳಿಯಲ್ಲಿ ಸಿಕ್ಕರೆ ಮುಗಿದುಹೋಯಿತು.

    ಆದರೆ ಈ ಅಂಕಣದಲ್ಲಿ ಹೇಳಿದಹಾಗೆ, ನಾವು ನಮ್ಮ ಮನೆಯವರಿಗೂ ಕೆಲಸದಲ್ಲಿ ಸಹಾಯ ಮಾಡಬೇಕು. ಎರಡು ಚಕ್ರ ಸೇರಿದರೆ ಮಾತ್ರ ಬಂಡಿ ಮುಂದೆ ಹೋಗಲು ಸಾಧ್ಯ ಅನ್ನೊದು ನಾವು ಮರೆಯಬಾರದು.

    ಈ ವಿಷಯವನ್ನ ತುಂಬಾ ವಿಸ್ತಾರವಾಗಿ ಬಿಡಿಸಿ ಹೇಳಿದ್ದೀರ. ನಿಮ್ಮ ಅಂಕಣದ ವಿಶೇಷತೆ ಏನೆಂದರೆ, ನೀವು ಬರೆಯುವ ಪ್ರತಿ ಸಂಗತಿಯು ತುಂಬಾ ಹೋಲಿಕೆಯಾಗಿರತ್ತೆ, ಅಂಕಣದ ಪ್ರತಿ ಸನ್ನಿವೇಶವು ತಿಳಿನೀರಿನಂತೆ ಸ್ಪಷ್ಟವಾಗಿ ಉಲ್ಲೇಖಿಸಿದ್ದೆರ.

    ಈ ವಾರದ ಕಥೆಗಾಗಿ ಧನ್ಯವಾದ ಅಕ್ಕಾ. ನಿಮ್ಮ ಈ ಕಥೆಯ ಸಂದೇಶ ನಮಗೆ ಬೇಕು, 5ಜಿ ವೇಗದಲ್ಲಿ ಓಡುತ್ತಿರುವ ಆ ಕಾಲದಲ್ಲಿ ಬ್ರಕೆ ಹಾಕಿ, ನಮನ್ನ ಬಡಿದೆಬ್ಬಿಸಿ, ಸುಖಸಂಸಾರದ ಮೂಲವು ನಾವೇ, ಅದರ ಕೆಡುಕಿನ ಮೂಲವು ನಾವೇ ಅದಕ್ಕೆ ಪರಿಹಾರವೂ ನಾವೆಯಂದು ತಿಳಿಸಿದಕ್ಕೆ ಧನ್ಯವಾದ ಅಕ್ಕಾ.

    ಮುಂದಿನ ಅಂಕಣಕ್ಕಾಗಿ ಕಾಯುತ್ತಿರುವೆ.

    ಜೈ ಕನ್ನಡಾಂಬೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: