ಪಿ ಚಂದ್ರಿಕಾ ಅಂಕಣ- ಕತೆಯಿಂದ ಸಿನಿಮಾ ಕತೆಗೆ ಪಯಣ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

3

ನಾವು ಹೀಗೆ ಮನೆಯನ್ನು ಹುಡುಕುತ್ತಾ ಬಂದದ್ದಕ್ಕೆ ಒಂದು ಮುಖ್ಯ ಕಾರಣವೂ ಇತ್ತು. ಸಿನಿಮಾ ಮಾಡಲಿಕ್ಕೆ ಯು. ಆರ್. ಅನಂತಮೂರ್ತಿಯವರ ‘ಸೂರ್ಯನ ಕುದುರೆ’ ಸೇರಿದಂತೆ ನಮ್ಮ ಕೈಲಿ ಮೂರು ಕತೆಗಳಿದ್ದಾಗಲೂ ಈ ಸಲ ‘ಒಂದು ತುಂಡುಗೋಡೆ’ಯನ್ನೇ ಮಾಡಬೇಕು ಎಂದು ನಿರ್ಧರಿಸಿದ್ದು ಎರಡು ಕಾರಣಕ್ಕೆ. ಒಂದು ಭಾರತದ ರಾಜಕೀಯ ಸನ್ನಿವೇಶದಲ್ಲಿ ಆಗುತ್ತಿದ್ದ ಬದಲಾವಣೆ. ಎರಡನೆಯದು ಸಾಂಸ್ಕೃತಿಕ ವಾತಾವರಣದಲ್ಲಾಗುತ್ತಿದ್ದ ತಲ್ಲಣ. ಒಂದು ಕಡೆ ರಾಮಜನ್ಮಭೂಮಿ ಮತ್ತೊಂದು ಕಡೆ ತ್ರಿವಳಿ ತಲ್ಲಾಖ್‌ಗೆ ಸಂಬಂಧಪಟ್ಟ ಸಂಗತಿಗಳು ದೇಶಾದ್ಯಂತ ಸದ್ದು ಮಾಡುತ್ತಿದ್ದವು.

ನಮ್ಮ ಚರ್ಚೆ ವಾದಗಳ ನಡುವೆ ತುಂಬಾ ಸಮಕಾಲೀನವಾದ ಸಂಗತಿಗಳನ್ನು ಹೇಳಲಿಕ್ಕೆ ಇಲ್ಲಿ ಅವಕಾಶವಿರುವುದರಿಂದ ಈ ಕತೆಯನ್ನೇ ತೆಗೆದುಕೊಳ್ಳಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದೆವು. ಒಳ್ಳೆಯ ಕತೆ ಎಂದರೆ ಯಾರಾದರೂ ಪರ್ಮೀಷನ್ ತೆಗೆದುಕೊಂಡುಬಿಟ್ಟಿರಬಹುದು ಎನ್ನುವ ಅನುಮಾನ, ಆತಂಕ ಕಾಡತೊಡಗಿತು. ನನಗೆ ಬೋಳುವಾರು ಮಹಮದ್ ಕುಂಯಿ ಅವರು ಪರಿಚಯವಿದ್ದ ವಿಚಾರ ಗೊತ್ತಿದ್ದ ಪಂಚಾಕ್ಷರಿ ಫೋನ್ ಮಾಡಿ ಮಾತನಾಡುವಂತೆ ಹೇಳಿದ್ದರು.

ಫೋನ್ ಮಾತುಕತೆಯಲ್ಲಿ ನಾನು ‘ನಿಮ್ಮ ಕಥೆಯನ್ನು ಸಿನಿಮಾಗಾಗಿ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇವೆ’ ಎಂದು ಹೇಳಿದೆ. ‘ಅದರ ಪರ್ಮೀಷನ್ ಯಾರಿಗೂ ಕೊಟ್ಟಿಲ್ಲ. ಬನ್ನಿ ಮಾತಾಡುವ’ ಎಂದರು. ನಮಗೆ ನಿಜಕ್ಕೂ ತುಂಬಾ ಸಂತೋಷವಾಯಿತು. ಅವರನ್ನು ಭೇಟಿಯಾಗಲು ಹೊರಟಾಗ ಒಂದಿಷ್ಟು ಸ್ವೀಟ್ಸ್ ಹಾಗೂ ಬೊಕೆಯನ್ನು ತೆಗೆದುಕೊಂಡೆವು- ದೊಡ್ಡವರನ್ನು ನೋಡಲು ಹೋಗುವಾಗ ಬರಿಕೈಲಿ ಹೋಗಬಾರದಲ್ಲ.

ತಮ್ಮ ಕತೆ ಸಿನಿಮಾ ಆಗುವುದು ಬೋಳುವಾರರಿಗೆ ಸಂತೋಷದ ವಿಷಯವಾಗಿತ್ತು. ಅವರು ನಮ್ಮೊಂದಿಗೆ ಕಥೆಯ ಬಗ್ಗೆ ಅದನ್ನು ಬರೆದ ಸಂದರ್ಭವನ್ನು ವಿವರಿಸುತ್ತಾ ಹೋದರು. ‘ಕಥೆಯ ಕೊನೆಯಲ್ಲಿ ನಾನು ಅದೊಂದು ಭಾಗವನ್ನು ಸೇರಿಸದೇ ಹೋಗಿದ್ದರೆ ಕತೆ ಸಾಧಾರಣ ಅನ್ನಿಸಿಬಿಡುತ್ತಿತ್ತು ಮತ್ತು ಇಡೀ ಕತೆ ಹಿಂದೂ ಮತ್ತು ಮುಸಲ್ಮಾನ ಎನ್ನುವ ಎರಡು ಧ್ರುವಗಳಲ್ಲೆ ಉಳಿದುಬಿಡುತ್ತಿತ್ತು. ಕ್ರಿಯೇಟಿವಿಟಿ ತುಂಬಾ ವಿಚಿತ್ರವಾದ ಕ್ರಿಯೆ. ಯಾವುದು ಯಾಕೆ ಹೇಗೆ ಹೊಳೆಯುತ್ತದೆ ಎಂದು ಅರ್ಥವಾಗುವುದಿಲ್ಲ. ಹಾಗೆ ಹೊಳೆದದ್ದು ತುಂಬಾ ಅಪರೂಪದಲ್ಲಿ ಅಪರೂಪ ಎನ್ನುವ ಹಾಗೆ ಎಲ್ಲರ ಮನಸ್ಸಿನಲ್ಲೂ ಉಳಿದು ಬಿಡುವ ಸಂಗತಿಯಾಗುತ್ತದೆ’ ಎಂದಿದ್ದರು. ಅವರ ಮಾತು ನಿಜ.

ಮಾತುಕತೆಯ ನಡುವೆ ಅವರ ಮನೆಯವರು ಇಲ್ಲದಿದ್ದ ಕಾರಣ ತಾವೇ ಟೀ ಮಾಡಿಕೊಟ್ಟರು. ‘ನೀವು ನಾನ್ವೆಜ್‌ನವರಾದರೆ ಚಿಕನ್ ಇದೆ, ಊಟ ಮಾಡಿಕೊಂಡೆ ಹೋಗಿ’ ಎಂದೂ ಆಗ್ರಹಿಸಿದರು. ‘ಇಲ್ಲ ಸಾರ್ ನಾವಿಬ್ಬರೂ ತಿನ್ನುವುದಿಲ್ಲ’ ಎಂದೆವು. ‘ನಿಮ್ಮ ತರಕಾರಿಗಿಂತಲೂ ನಮ್ಮ ಚಿಕನ್ ತುಂಬಾ ಅಗ್ಗ. ರೇಟು ಬಹಳೇ ಇರಬಹುದು ಬಳಸುವ ಪ್ರಮಾಣ ಕಡಿಮೆ’ ಎಂದು ತಮಾಷಿ ಮಾಡಿಕೊಂದು ನಕ್ಕರು. ಗೌರವ ಸಂಭಾವನೆಯ ವಿಷಯವೂ ಪ್ರಸ್ತಾಪವಾಗಿ ಮತ್ತೆ ಒಪ್ಪಂದ ಪತ್ರದ ಜೊತೆ ಬರುವುದಾಗಿ ತಿಳಿಸಿದೆವು.

ಇರುವ ಕತೆಯನ್ನೇ ಹೇಳುವುದಾದರೆ ಸಿನಿಮಾ ಮಾಡುವುದಾದರೂ ಯಾಕಲ್ಲವೇ? ಘಟನೆ ಎಂದೋ ನಡೆದಿರಬಹುದು ಅದನ್ನ ಇವತ್ತಿಗೆ ಹೇಳಲು ಸಾಧ್ಯವಾಗದಿದ್ದರೆ ಸಾರ್ಥಕ್ಯವೇನು? ಆ ಕಥೆ ಯಾಕೆ ನಮ್ಮನ್ನು ಸೆಳೆಯಿತು? ಅದರಲ್ಲಿ ನಮಗೆ ಕಂಡ ಅವಕಾಶಗಳು ಏನೆಂದು ಹುಡುಕುತ್ತಾ ಹೋದೆವು. ಇಡೀ ಕತೆ ಸಾಮಾಜಿಕವಾಗಿ ಬೆಳೆಯುತ್ತಾ ಹೋಗುತ್ತದೆಯೇ ಹೊರತು ಪಾತುಮ್ಮಳ ವೈಯಕ್ತಿಕ ಜೀವನದ ವಿವರಗಳು ಇಲ್ಲ. ಈ ವಿವರಗಳನ್ನು ಕತೆ ಬಯಸುವುದೂ ಇಲ್ಲ. ಆದರೆ ಸಿನಿಮಾ ಹಾಗಲ್ಲವಲ್ಲ! ದೃಶ್ಯವನ್ನು ಕಟ್ಟುವಾಗ ವಿವರಗಳೇ ಮುಖ್ಯವಾದ್ದರಿಂದ ನಮ್ಮೆದುರಿನ ಸವಾಲೇ ಇದಾಗಿತ್ತು. ಅದ್ಭುತವಾದ ಎಳೆಯೇ ಆದರೂ ಸಿನಿಮಾ ಆಗಲಿಕ್ಕೆ ಸಾಕಾಗುವಷ್ಟು ಸಂಗತಿಗಳು ಅದರಲ್ಲಿ ಸೇರಬೇಕಿತ್ತು.

ಕಥೆಯ ಮೈ ಕೆಡದಂತೆ ಮತ್ತೊಂದು ಕಥೆಯನ್ನು ಹೆಣೆಯುವ ಜರೂರು ಎಲ್ಲ ಕಾಲದಲ್ಲೂ ಎಲ್ಲ ಮಾಧ್ಯಮಗಳಲ್ಲೂ ಇದ್ದೇ ಇರುತ್ತದೆ. ಕತೆಯಿಂದ ಸಿನಿಮಾ ಕತೆಗೆ ಪಯಣ ಬೆಳೆಸುವಾಗ ಎಷ್ಟೊಂದು ಹರ್ಡಲ್ಸ್ ಇರುತ್ತದೆ. ನಮ್ಮೆದುರೂ ಇಂಥಾ ಸಮಸ್ಯೆಗಳು ಸಾಲು ಸಾಲಾಗಿ ನಿಂತಿದ್ದವು. ಕಥೆಯಲ್ಲಿ ಅವಳು ಒಂಟಿ. ಹಾಗಿದ್ದೂ ಅವಳಿಗೆ ಮನೆಯನ್ನು ಕಟ್ಟಿಕೊಳ್ಳುವ ಆಸೆ. ಮನುಷ್ಯ ಎಂದ ಮೇಲೆ ಆಸೆಗಳಿದ್ದೇ ಇರುತ್ತವೆ. ಆದರೆ ಆ ಆಸೆಗಳಿಗೆ ಇನ್ನಷ್ಟು ಬಲವಾದ ಕಾರಣ ಕೊಡದಿದ್ದರೆ ಅವಳ ಮನೆ ಕಟ್ಟಿಕೊಳ್ಳುವ ಕನಸಿಗೆ ಬಲ ಸಿಗದಂತಾಗುತ್ತದೆ. ಈ ಕಥೆಗೆ ನಮ್ಮ ಮನಸ್ಸಿನಲ್ಲಿ ಸಮಕಾಲೀನ ಎನ್ನಿಸುವ ಕಥೆಗಳನ್ನು ಸೇರಿಸಿದೆವು.

ನಾವು ವಿಸ್ತಾರ ಮಾಡಿಕೊಂಡ ಕಥೆಯಲ್ಲಿ ಕಡಲ್ಕೊರೆತದ ಎದುರು ಮನುಷ್ಯ ಬದುಕಿನ ಪ್ರಯತ್ನ, ಮನೆಯನ್ನು ಕಟ್ಟಿಕೊಳ್ಳಲಿಕ್ಕಾಗದ ಅಸಹಾಯಕ ಜೀವಗಳ ಸಮಸ್ಯೆ, ಬಾಬರಿ ಮಸೀದಿ ಬಿದ್ದು ದೇಶವನ್ನು ಮಾನಸಿಕವಾಗಿ ಇಬ್ಭಾಗ ಮಾಡಿದಾಗಲೂ ಮನವೀಯ ಸಂಬಂಧಗಳು ತಮ್ಮ ಮೂಲಗಳಲ್ಲಿ ಬದಲಾಗದೇ ಉಳಿದಿರುವುದು. ಮುಸ್ಲೀಂ ಹೆಣ್ಣುಮಕ್ಕಳ ಸಮಸ್ಯೆಯಾದ ತ್ರಿವಳಿತಲ್ಲಾಖಿನ ಪ್ರಶ್ನೆಯನ್ನು ಹೇಗೆ ಬಗೆ ಹರಿಸಿಕೊಳ್ಳಬಹುದು ಎನ್ನುವುದನ್ನು ಹೇಳುವ ಜರೂರನ್ನು ಎತ್ತಿಹಿಡಿಯುವ ಉದ್ದೇಶವಿತ್ತು. ಹೀಗಾಗಿ ಪುತ್ತೂರಿನ ಸುತ್ತಾ ನಡೆವ ಕತೆ ಮಂಗಳೂರಿಗೆ ಬದಲಾಯಿತು. ಹೀಗಾಗಿ ಕಡಲಕೊರೆತದ ಕತೆ ಎಕ್ಸ್ಟಾ ಸೇರಿತು. ಜೊತೆಗೆ ಸಲ್ಮಾಳ ಕತೆ ಕೂಡ. ಈಗ ಮೂರು ಎಳೆಗಳಲ್ಲಿ ಕತೆ ಬೆಳೆಯಿತು. ಬಾಬರಿ ಮಸೀದಿಬಿದ್ದ ಬೆನ್ನಲ್ಲೆ ದೇಶದ ನಂಬುಗೆಯ ಗೋಡೆಯೇ ಕುಸಿದ ಕತೆಯ ಜೊತೆ, ಸಾಮಾನ್ಯ ಹಿಂದೂ ಮತ್ತು ಮುಸಲ್ಮಾನರ ಸಂಬಂಧಗಳು ಹೇಗಾಗಿವೆ ಎನ್ನುವುದನ್ನು ಹೇಳಲು ಅವಕಾಶಗಳು ತೆರೆದುಕೊಂದವು.  

ಮೂಲಕತೆಯಲ್ಲಿರುವಂತೆ ರೊಟ್ಟಿ ಪಾತುಮ್ಮಾ ವಿಧವೆ, ತನಗೆ ಸರಕಾರ ಕೊಟ್ಟ ಜಾಗದಲ್ಲಿ ಮನೆ ಕಟ್ಟಿಕೊಳ್ಳುವ ಕನಸನ್ನು ಕಾಣುತ್ತಿದ್ದಾಳೆ. ರೊಟ್ಟಿಯನ್ನು ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿರುವುದೇ ಅಲ್ಲದೆ ಅದರಲ್ಲಿ ಉಳಿದದ್ದನ್ನು ಶ್ರೀನಿವಾಸಾಚಾರಿಯ ಚಿನ್ನದ ಅಂಗಡಿಯಲ್ಲಿ ಇಡುತ್ತಾ ಬಂದಿದ್ದಾಳೆ. ಸಮುದ್ರದ ತೀರದಲ್ಲಿರುವ ಅವಳು ಬಾಡಿಗೆಗೆ ಇರುವ ಗುಡಿಸಲು ಮಳೆಗಾಲದಲ್ಲಿ ಕಡಲ್ಕೊರೆತದಿಂದ ಬೀಳುವ ಆತಂಕದಲ್ಲಿದ್ದಾಳೆ.

ಪಾತುಮ್ಮಾಳ ಮಗಳು ಸಲ್ಮಾಗೆ ನಾಲ್ಕನೆ ಬಾರಿಯೂ ಹೆಣ್ಣು ಮಗುವೇ ಹುಟ್ಟುತ್ತದೆ. ಹೆರಿಗೆಯ ಹೊತ್ತಿನಲ್ಲಿ ಮೊಹಮದ್ ಮೀನು ಹಿಡಿಯಲು ಸಮುದ್ರಕ್ಕೆ ಹೋಗಿರುತ್ತಾನೆ. ಸಲ್ಮಾಳ ಅನಾರೋಗ್ಯದ ಕಾರಣಕ್ಕೆ ಅದಾಗಲೇ ಮೂರು ಮಕ್ಕಳಿದ್ದು ನಾಲ್ಕನೆಯ ಮಗುವಿನ ನಂತರವಾದರೂ ಆಪರೇಷನ್ ಮಾಡಿಸಿಕೊಳ್ಳುವಂತೆ ಸಲಹೆ ಮಾಡುತ್ತಾರೆ. ಡಾಕ್ಟರ್ ಸಲಹೆಯ ಪ್ರಕಾರ ಮೊಹಮದ್‌ನ ಅನುಪಸ್ಥಿತಿಯಲ್ಲಿ ಸಲ್ಮ ಸಂತಾನ ನಿಯಂತ್ರಣ ಆಪರೇಷನ್ ಮಾಡಿಸಿಕೊಳ್ಳುತ್ತಾಳೆ. ಇದರಿಂದ ಕೋಪಗೊಂಡ ಮೊಹಮದ್ ಸಲ್ಮಾಗೆ ಒಂದೇ ಉಸಿರಿಗೆ ಮೂರು ತಲ್ಲಾಖ್ ಹೇಳುತ್ತಾನೆ. ಸಲ್ಮಾ ಹೆರಿಗೆಗೆಂದು ಪಾತುಮ್ಮಾಳ ಮನೆಗೆ ಹೋದವಳು ಅಲ್ಲಿಯೇ ಉಳಿಯಬೇಕಾಗುತ್ತದೆ.

ಕೆಲ ತಿಂಗಳುಗಳ ನಂತರ ಮೊಹಮದ್‌ಗೆ ಹೆಂಡತಿ ಮಕ್ಕಳ ಅನುಪಸ್ಥಿತಿಯಿಂದ ಏಕಾಂಗಿತನ ಕಾಡುತ್ತದೆ. ಮೊಹಮದ್ ತನ್ನ ತಾಯಿಯ ಜೊತೆ ಸಂಕಟವನ್ನು ಹೇಳಿಕೊಳ್ಳುತ್ತಾನೆ. ಪಾತುಮ್ಮನ ಬಳಿ ಬಂದ ಮೊಹಮದ್‌ನ ತಾಯಿ ಮತ್ತೆ ಸಲ್ಮಾಳನ್ನು ವಾಪಾಸು ತನ್ನ ಮನೆಗೆ ಕರೆದೊಯ್ಯುವ ಇಂಗಿತವನ್ನು ವ್ಯಕ್ತಪಡಿಸುತ್ತಾಳೆ. ಜೊತೆಗೆ ಈ ಪ್ರಕ್ರಿಯೆಗೆ ಅಡ್ಡಿಯಾಗುತ್ತಿರುವ ಧಾರ್ಮಿಕ ನಿರ್ಬಂಧದ ಬಗ್ಗೆಯೂ ಹೇಳುತ್ತಾಳೆ. ಆದರೆ ಸಲ್ಮಾ ಇನ್ನೊಂದು ಮದುವೆಯಾಗಿ  ತಲ್ಲಾಖ್ ಪಡೆದು ಬರಲು ಒಪುö್ಪವುದಿಲ್ಲ.

ಈ ಸಮಸ್ಯೆಯನ್ನು ಬಿಡಿಸಿಕೊಳ್ಳುವುದು ಹೇಗೆಂದು ತಿಳಿಯದೆ ಪಾತುಮ್ಮಾ ಜಮಾತಿನ ಅಧ್ಯಕ್ಷರ ನೆರವನ್ನು ಬೇಡುತ್ತಾಳೆ. ಅವರು ಜಮಾತಿನಲ್ಲಿ ಈ ಸಮಸ್ಯೆಯನ್ನು ಇಟ್ಟು ಪರಿಹಾರವನ್ನು ಕೇಳುತ್ತಾರೆ. ಆಗ ಈ ಸಮಸ್ಯೆ ಬಿಡಿಸಲು ಬಂದಿದ್ದ ಖ್ವಾಜಿಗಳು ಕುರಾನಿನ ಆಧಾರದ ಮೇಲೆ ‘ಸಲ್ಮಾಳಿಗೆ ಮೊಹಮದ್ ಒಂದೇ ಉಸಿರಿಗೆ ಕೊಟ್ಟ ತ್ರಿತಲ್ಲಾಖ್ ಮಾನ್ಯವಲ್ಲ, ಮತ್ತು ಹೆಣ್ಣುಮಕ್ಕಳೇ ಹುಟ್ಟಿವೆ ಎನ್ನುವ ಕಾರಣಕ್ಕೆ ತಲ್ಲಾಖ್‌ನ್ನು ಕೊಡುವುದು ಧರ್ಮಕ್ಕೆ ವಿರುದ್ಧವಾದದ್ದು, ಸಲ್ಮಾಳನ್ನು ವಾಪಾಸು ಮನೆಗೆ ಕರೆದೊಯ್ಯಲು ಯಾವುದೆ ತೊಡಕುಗಳಿಲ್ಲ’ ಎಂದು ಸೂಚಿಸುತ್ತಾರೆ. ಇದರಿಂದ ಸಂತಸಗೊಂಡ ಮೊಹಮದ್ ಸಲ್ಮಾಳನ್ನು ಮನೆಗೆ ಕರೆದೊಯ್ಯುತ್ತಾನೆ.  

ಚಿನ್ನದ ಅಂಗಡಿಯ ಶ್ರೀನಿವಾಸಾಚಾರಿಯ ಮಗ ಚಂದ್ರಣ್ಣ ರಾಮದಾಸ ಕಿಣ ಯ ಒತ್ತಾಯದ ಮೇರೆಗೆ ಅಯೋಧ್ಯೆಯ ಕರಸೇವೆಗೆ ಹೋಗಿ ಬರುತ್ತಾನೆ. ಅವನು ಅಯೋಧ್ಯೆಯವರೆಗೆ ಹೋಗಲಾಗದ ಪರಿಸ್ಥಿತಿ ಇದ್ದದ್ದರಿಂದ ಕಾಶಿಯಲ್ಲಿಯೇ ಉಳಿಯಬೇಕಾಗುತ್ತದೆ. ಆ ಸಂದರ್ಭದಲ್ಲಿ ಅಯೋಧ್ಯೆಗೆ ಹೋಗಲಾಗದ ಅಸಮಾಧಾನವನ್ನು ಮತ್ತು ಕಾಶಿಯಲ್ಲೇ ಉಳಿದು ಕಾಲ ಕಳೆಯಬೇಕಾದ ಅನಿವಾರ್ಯತೆಗೆ ತನ್ನ ಸಹ ಕರಸೇವಕರಲ್ಲಿ ಬೇಸರ ವ್ಯಕ್ತಪಡಿಸುತ್ತಾನೆ. ಈ ಹೊತ್ತಿನಲ್ಲೇ ಬಾಬರಿ ಮಸೀದಿ ಬಿದ್ದ ಘಟನೆ ನಡೆಯುತ್ತದೆ.

ಆ ಗೋಡೆಯ ತುಂಡನ್ನು ತಂದಿದ್ದ ಕರಸೇವಕನೊಬ್ಬ ಅಯೋಧ್ಯೆಗೆ ಹೋಗಲು ಸಾಧ್ಯವಾಗದೇ ಇದ್ದದ್ದಕ್ಕೆ ‘ಬೇಸರ ಬೇಡ’ ಎಂದು ಹೇಳಿ ತನ್ನ ಬಳಿ ಇದ್ದ ಗೋಡೆಯ ತುಂಡನ್ನು ಕೊಡುತ್ತಾನೆ. ಆ ತುಂಡನ್ನು ಚಂದ್ರಣ್ಣ ಊರಿಗೆ ಬರುವಾಗ ತನ್ನೊಂದಿಗೆ ತಂದಿರುತ್ತಾನೆ. ಇದೇ ಅವನನ್ನು ಪ್ರತಿಕ್ಷಣವೂ ಆತಂಕಕ್ಕೆ ಒಳಗು ಮಾಡುತ್ತದೆ. ಕರಸೇವೆಗೆ ಕಳಿಸಿದ್ದ ರಾಮದಾಸ ಕಿಣ ಯೂ ಕೂಡಾ ಆ ಗೋಡೆಯ ತುಂಡನ್ನು ಪಡೆಯದೆ, ಸ್ವಲ್ಪ ದಿನ ಯಾರಿಗೂ ಕಾಣದಂತೆ ಅವನಿಗೆ ಬಚ್ಚಿಡಲು ಹೇಳುತ್ತಾನೆ. ನಂತರ ಚಂದ್ರಣ್ಣನ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಾನೆ.

ಇದೇ ಹೊತ್ತಿನಲ್ಲಿ ತಮ್ಮ ಅಂಗಡಿಯ ಮೇಲೆ ನಂಬಿಕೆ ಇಟ್ಟ ರೊಟ್ಟಿ ಪಾತುಮ್ಮಾ ಮನೆ ಕಟ್ಟಿಕೊಳ್ಳಬೇಕು ಎಂದು ಹಣ ವಾಪಾಸು ಕೇಳುತ್ತಾಳೆ. ಈ ಸಂದರ್ಭದಲ್ಲಿ ಅಹಮದ್ ಬ್ಯಾರಿಯು ಬೆಹರಿನ್‌ನಿಂದ ಊರಿಗೆ ಬಂದರೂ ತಮ್ಮ ಅಂಗಡಿಗೆ  ಬರದೇ ಹೋಗುತ್ತಾನೆ. ಈ ಎರಡೂ ಪ್ರಸಂಗಗಳು ಚಂದ್ರಣ್ಣನಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ ಮತ್ತು ಪಾತುಮ್ಮಾಳಿಗೆ ತಮ್ಮಲ್ಲಿ ವಿಶ್ವಾಸ ಹೋಗಿರಬಹುದೆ? ಎನ್ನುವ ಜಿಜ್ಞಾಸೆ ಉಂಟುಮಾಡುತ್ತದೆ.

। ಇನ್ನು ಮುಂದಿನ ವಾರಕ್ಕೆ ।  

‍ಲೇಖಕರು Admin

June 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: