ಮಲೆಯಾಳಂ ಸಿನೆಮಾ ಜಗತ್ತಿನ ಏಕಮೇವ ‘ಜಗತಿ’

ಸಂತೋಷ್ ಅನಂತಪುರ

ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದ. ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮೊಳಗಿನ ಕಲಾವಿದ ಅಭಿವ್ಯಕ್ತಿಗೊಳ್ಳುತ್ತಲೇ ಇರುತ್ತಾನೆ. ಅದು ಕಲಾ ನಿಯಮ. ಹಾಗೆ ಅಭಿವ್ಯಕ್ತಿಗೊಂಡ ಕಲೆಯು ಕೆಲವರನ್ನು ಹಿಡಿದು ನಡೆಸಿದರೆ, ಇನ್ನು ಕೆಲವರನ್ನು ಮೇಲಕ್ಕೆತ್ತಿ ಮಿನುಗಿಸಿ ಬಿಡುತ್ತದೆ. ಆದರೆ ಕಲಾದೇವಿ ಎಲ್ಲರಿಗೂ ಒಲಿಯುವವಳಲ್ಲ. ಒಲಿದರಂತೂ ತಲೆಯ ಮೇಲೆ ಹೊತ್ತು ಪೊರೆಯುವವಳು. ಹಾಗೆ ಕಲಾದೇವಿಯು ಪೊರೆದು ಪೋಷಿಸಿದ ಒಬ್ಬ ಮೇರು ಕಲಾವಿದ ‘ಶ್ರೀಕುಮಾರ್ ಆಚಾರಿ’.

ಅರೇ ಯಾರಿದು!?-ಅಚ್ಚರಿಯ ಪ್ರಶ್ನೆ.

ಹೀಗೆಂದು ಹೆಸರು ಕೂಗಿ ಕರೆದರೆ ಯಾರಿಗೂ ಅರ್ಥವಾಗದು. ಆದರೆ ಅದೇ ರಂಗದ ಹೆಸರು ‘ಜಗತಿ ಶ್ರೀಕುಮಾರ್’ ಅಂದರೆ ಥಟ್ಟನೆ ಕಣ್ಣಲ್ಲಿ ಮಿಂಚೊ೦ದು ಮಿನುಗಿ, ಮುಖದ ಮಾಂಸ ಖಂಡಗಳೆಲ್ಲಾ ಕುಣಿಯಲಾರಂಭಿಸುತ್ತವೆ. ಕೇವಲ ಹೆಸರೊಂದು ಹೀಗೆ ನಮ್ಮನ್ನು ಹಗುರಗೊಳಿಸಿ ಮುದಗೊಳಿಸುತ್ತದೆ ಎಂದರೆ ಅದು ಕಲೆಯ ಸಾರ್ಥಕ್ಯವೂ ಮತ್ತು ಕಲಾವಿದನ ಹಿರಿಮೆಯೂ ಹೌದು. ಮಲೆಯಾಳಂ ಚಿತ್ರರಂಗದಲ್ಲಿ ಒಬ್ಬ ನಾಯಕನಿಗೆ ಸರಿ ಸಮಾನವಾಗಿ ಬೆಳೆದು ನಿಂತ ಪ್ರತಿಭಾನ್ವಿತ ಕಲಾವಿದನೊಬ್ಬನಿದ್ದರೆ ಅದು ‘ಜಗತಿ ಶ್ರೀಕುಮಾರ್’. ಅವರೊಬ್ಬ ಜೀನಿಯಸ್ ಆಕ್ಟರ್ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ನಾಲ್ಕು ದಶಕಗಳಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚಿನ   ಚಿತ್ರಗಳಲ್ಲಿ ನಟಿಸಿದ ಗರಿಮೆ ಇವರದ್ದು. ಮುಖ್ಯವಾಗಿ ಹಾಸ್ಯ ಮತ್ತು ಕ್ಯಾರೆಕ್ಟರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಜಗತಿ ಐದು ಬಾರಿ ಕೇರಳ ರಾಜ್ಯ ಸಿನೆಮಾ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಅಲ್ಲದೆ ತಾವೇ ಖುದ್ದು ಎರಡು ಸಿನೆಮಾಗಳನ್ನೂ ನಿರ್ದೇಶಿಸಿ, ಕೆಲವು ಸಿನೆಮಾಗಳಿಗೆ ಕಥೆಯನ್ನೂ ಬರೆದು, ಹತ್ತಕ್ಕೂ ಹೆಚ್ಚಿನ ಸಿನೆಮಾದಲ್ಲಿ ಹಿನ್ನಲೆ ಗಾಯಕನಾಗಿಯೂ ತನ್ನದೇ ಅಸ್ತಿತ್ವವನ್ನು ಪ್ರತಿಷ್ಠಾಪಿಸಿಕೊಂಡವರು ಜಗತಿ ಶ್ರೀಕುಮಾರ್.

‘ಆಡುಂಕೂತ್’ ಎಂಬ ಒಂದೇ ಒಂದು ತಮಿಳು ಸಿನೆಮಾದಲ್ಲಿ ಅಭಿನಯಿಸಿದ್ದರು. ಅದೂ ಮಲಯಾಳಂ ಸಿನೆಮಾ ನಿರ್ದೇಶಕ ಟಿ.ವಿ.ಚಂದ್ರನ್ ನಿರ್ದೇಶಿಸಿದ ಸಿನೆಮಾ ಎಂಬ ಒಂದೇ ಕಾರಣಕ್ಕೆ. ಅಷ್ಟರಮಟ್ಟಿಗೆ ಅವರ ಭಾಷಾ ಪ್ರೇಮ ಪ್ರಶ್ನಾತೀತ. ಮೋಹನ್‌ಲಾಲ್ ಅಭಿನಯದ ಸೂಪರ್‌ಹಿಟ್ ಚಿತ್ರ ‘ನರಸಿಂಹಮ್’ ನಲ್ಲಿ ಅಭಿನಯಿಸಿ ಸಾವಿರ ಚಿತ್ರದ ಮೈಲುಗಲ್ಲನ್ನು ಸ್ಥಾಪಿಸಿ, ಅತಿ ಹೆಚ್ಚು ಸಿನೆಮಾದಲ್ಲಿ ಅಭಿನಯಿಸಿದ ಗಿನ್ನಸ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಹೆಗ್ಗಳಿಕೆ ಇವರದ್ದು.

ರಂಗಕರ್ಮಿ, ಬರಹಗಾರ ಹಾಗೂ ಆಲ್ ಇಂಡಿಯಾ ರೇಡಿಯೋ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ‘ಜಗತಿ ಎಂ.ಕೆ. ಆಚಾರಿ ಹಾಗೂ ಮಾವೆಲಿಕ್ಕೆರ ಎಡವನ್‌ಕ್ಕಾಡ್ ಕುಟುಂಬದಿಂದ ಬಂದ ಶ್ರೀಮತಿ ಪ್ರಸನ್ನ’ ಅವರ ಮಗನಾಗಿ ಜನಿಸಿದ ‘ಶ್ರೀಕುಮಾರ್ ಆಚಾರಿ’ ತನ್ನ ಎಳೆ ವಯಸ್ಸಿನಿಂದಲೇ ನಟನಾಗುವ ಕನಸನ್ನು ಕಂಡವರು. ತಿರುವನಂತಪುರದ ಮಾಡೆಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ನಂತರ ‘ಮಾರ್ ಇವನೀಸ್’ ಕಾಲೇಜಿನಲ್ಲಿ ಬಾಟನಿಯಲ್ಲಿ ಪದವಿಯನ್ನು ಪಡೆದ  ಜಗತಿ ಶ್ರೀಕುಮಾರ್ ರಿಗೆ ಸಸ್ಯರಾಶಿಯ ಮೇಲೆ ಪ್ರಕೃತಿಯ ಕುರಿತಂತೆ ವಿಶೇಷವಾದ ಆಸ್ಥೆ.

ಮೆಡಿಕಲ್ ರೆಪ್ ಆಗಿ ಕಾಯಕವನ್ನು ಆರಂಭಿಸಿದ ‘ಜಗತಿ’ ಜನರ ನಡುವೆ ಘಟಿಸುವ ಸಾಮಾನ್ಯ ವಿಷಯಗಳ ಗ್ರಹಿಕೆ, ಹಾಸ್ಯಪ್ರಜ್ಞೆ, ವ್ಯತ್ಯಸ್ತ ಜನಗಳ ಹಾವ-ಭಾವ-ಭಂಗಿಗಳನ್ನು ಸೂಕ್ಶ್ಮವಾಗಿ ಗಮನಿಸಿದರು. ಅಲ್ಲದೆ ಬಾಲ್ಯದಲ್ಲಿ ತಾವು ಕಂಡ ವಿಭಿನ್ನ ವ್ಯಕ್ತಿತ್ವದವರನ್ನು ಕೂಡಾ  ಮನಸ್ಸಲ್ಲಿಟ್ಟುಕೊಂಡು, ಸುತ್ತಮುತ್ತಲಿನ ಆಗುಹೋಗುಗಳನ್ನು, ವ್ಯಕ್ತಿ ಸಮುದಾಯವನ್ನು ಗಮನಿಸುತ್ತಾ ನಡೆದ ಜಗತಿ ತಮ್ಮ ಸಿನಿಯಾನದಲ್ಲಿ ಒಂದೊಂದಾಗಿ ಅವುಗಳನ್ನು ಮೂಡಿಸಿದರು. ಕಲಾವಿದನೊಬ್ಬನಿಗೆ ಬೇಕಿರುವ ಆಬ್ಸರ್ವೇಷನ್ ಕ್ವಾಲಿಟಿ ಈ ಕಲಾವಿದನಲ್ಲಿ ಹಾಸುಹೊಕ್ಕಿದೆ.

ಐದನೇ ತರಗತಿಯಲ್ಲಿ ಇದ್ದಾಗ ದೊರೆತ ಮೊದಲ ಅವಕಾಶದಲ್ಲೇ ಶ್ರೀಕುಮಾರ್ ರಂಗದಲ್ಲಿ ಮಿಂಚಿದ್ದರು. ಪದವಿ ಕಾಲೇಜಿಗೆ ತಲುಪುವಷ್ಟರಲ್ಲಿ ಅದಾಗಲೇ ಅವರು ಸಾಕಷ್ಟು ಪಳಗಿದ ರಂಗಕರ್ಮಿಯಾಗಿಬಿಟ್ಟಿದ್ದರು. ‘ಚಟ್ಟಂಬಿ ಕಲ್ಯಾಣಿ’ ಎಂಬ ತನ್ನ ಮೊದಲ ಸಿನೆಮಾದಲ್ಲಿ ದೊರಕಿದ ಪಾತ್ರದ ಮೂಲಕ ಸಾಕಷ್ಟು ಮನೆ ಮಾತಾದರು. ಬೇರೊಬ್ಬ ಕಲಾವಿದ ಮಾಡಬೇಕಿದ್ದ ಪಾತ್ರವನ್ನು ಆತ ಮಾಡಲಾರದೆ ಹೋದಾಗ ‘ಸಾಹಿತಿ ಶ್ರೀಕುಮಾರನ್ ತಂಬಿ’ ಅವರು ಶ್ರೀಕುಮಾರ್ ಅವರಿಗೆ ಅವಕಾಶವನ್ನು ನೀಡುತ್ತಾರೆ. ಜೊತೆಗೆ ಶ್ರೀಕುಮಾರ್ ಹೆಸರಿನ ಮುಂದೆ ‘ಜಗತಿ’ ಎಂದೂ ಸೇರಿಸಿದ ಹೆಮ್ಮೆ ಗೌರವ ಅವರದ್ದಾಗುತ್ತದೆ.

ಅವಕಾಶ ಒದಗಿಸಿದಕ್ಕೆ ಇಂದಿಗೂ ಋಣಿ ಎಂದು ಜಗತಿ ವಿನಯದಿಂದ ‘ತಂಬಿ ಚೇಟ’ನನ್ನು ಸ್ಮರಿಸಿಕೊಳ್ಳುತ್ತಾರೆ. ೧೯೭೬ ರಲ್ಲಿ ‘ಮಲ್ಲಿಕಾ’ರನ್ನು ಕೈ  ಹಿಡಿದ ಶ್ರೀಕುಮಾರ್ ಅವರಿಗೆ ಮೂರು ವರ್ಷಕ್ಕಿಂತ ಹೆಚ್ಚು ತಮ್ಮ ದಾಂಪತ್ಯವನ್ನು ಸಾಗಿಸಲು ಸಾಧ್ಯವಾಗಲಿಲ್ಲ (ಮಲ್ಲಿಕಾ ಸುಕುಮಾರನ್-ನಂತರ ಖ್ಯಾತ ನಟ ಸುಕುಮಾರನ್ ಅವರ ಸಂಗಾತಿಯಾದರು). ೧೯೭೯ರಲ್ಲಿ ವಿಚ್ಛೇದನ ಪಡೆದು ೧೯೮೪ರಲ್ಲಿ ‘ಶೋಭಾ’ರನ್ನು ಮದುವೆಯಾದ ಜಗತಿಗೆ ‘ರಾಜ್‌ಕುಮಾರ್ ಮತ್ತು ಪಾರ್ವತಿ’ ಎಂಬ ಇಬ್ಬರು ಮಕ್ಕಳಿದ್ದು, ಮೂರನೇ ಬಂಧದಲ್ಲಿ ‘ಕಲಾ’ ಎಂಬವರಿಂದ ‘ಶ್ರೀಲಕ್ಷ್ಮಿ’ ಎಂಬ ಇನ್ನೊಬ್ಬ ಮಗಳಿಗೆ ತಂದೆಯೂ ಆಗಿದ್ದಾರೆ.

*

ಮಲೆಯಾಳಂ ಸಿನೆಮಾ ಲೋಕದ ಮೇರು ಕಲಾ ತಿಲಕ ಜಗತಿ ಶ್ರೀಕುಮಾರ್- ಮಾರ್ಚ್ ೧೦, ೨೦೧೨ ರಂದು ಕಲ್ಲಿಕೋಟೆ ವಿಶ್ವವಿದ್ಯಾಲಯದ ಬಳಿಯ ‘ಪಣಂಬರ’ ಎಂಬ ಸ್ಥಳದಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತುತ್ತಾದರು. ಅಂದೇ ಮಲಯಾಳಂ ಸಿನೆಮಾ ರಂಗ ತನ್ನ ಅದ್ಭುತ ನಟನನ್ನು  ನಿಜಾರ್ಥದಲ್ಲಿ ಕಳೆದುಕೊಂಡಿತು ಎನ್ನಬಹುದು. ಮುಂದೆ ಸಾಕಷ್ಟು ಚಿಕಿತ್ಸೆಗಳಿಗೆ ಒಳಗಾದರೂ, ಚೇತರಿಸಿದರೇ ವಿನಹ: ಮತ್ತೆ ಪ್ರೇಕ್ಷಕರನ್ನು ರಂಜಿಸಲು, ತನ್ನೊಳಗಿನ ನವ ರಸಗಳನ್ನು ಹರಿಸಲು, ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಲು ಅವರಿಂದ ಸಾಧ್ಯವಾಗಲಿಲ್ಲ. ಜಗತಿಯ ಕಲಾ ಬದುಕಲ್ಲಿ ಶಾಶ್ವತವಾದ ಕಲೆಯೊಂದನ್ನು ಕಲಾದೇವಿ ಮೂಡಿಸಿದಳೆನೋ ಎಂಬ ಸಂಶಯ ಜಗತಿ ಶ್ರೀಕುಮಾರ್ ಅಭಿಮಾನಿಗಳನ್ನು ಇಂದಿಗೂ ಕಾಡುತ್ತಿರುವ ವ್ಯಥೆ. 

ಒಂದು ಪ್ರದೇಶದ ಹೆಸರು ಅಜರಾಮರವಾಗುವುದು ಎಂದರೆ ಹೀಗೆಯೇ ಇರಬೇಕು. ತಿರುವನಂತಪುರದ ಪಕ್ಕದಲ್ಲಿ ಇರುವ ಪ್ರದೇಶದ ಹೆಸರು ‘ಜಗತಿ’. ಅಲ್ಲಿ ಹುಟ್ಟಿ ಬೆಳೆದ ಶ್ರೀಕುಮಾರ್ ಆಚಾರಿಯು ವಿಶ್ವಕರ್ಮ ಕುಟುಂಬಕ್ಕೆ ಸೇರಿದವರು. ಹಾಗಾಗಿ ಇವರು ರಂಗಕ್ಕೆ ಬಂದ ಮೇಲೆ ತಮ್ಮ ರಂಗ ಕರ್ಮದ ಮೂಲಕ ಶ್ರೀಕುಮಾರನ ಮುಂದೆ ‘ಜಗತಿ’ ಎಂದು ಸೇರ್ಪಡೆಗೊಂಡು ಶ್ರೀಕುಮಾರನ ನಂತರದಲ್ಲಿದ್ದ ‘ಆಚಾರಿ’ ಎಂಬುದು ತಾನಾಗಿಯೇ ಕಳಚಿಕೊಂಡಿತು. ಕಳಚಿದ್ದು ಕಳಚಿಯೇ ಹೋಯಿತು. ಸೇರ್ಪಡೆಗೊಂಡದ್ದು ಹೆಮ್ಮರವಾಗಿ ಬೆಳೆದು ಶ್ರೀಕುಮಾರ್ ಎಂಬ ಹೆಸರೇ ಅಸಂಗತವಾಗಿ ಮಲಯಾಳಂ ಸಿನೆಮಾ ‘ಜಗತ್ತಿ’ಗೆ ‘ಜಗತಿ’ಯೇ ಸರ್ವಸ್ವವಾಯಿತು.

ಒಬ್ಬ ಕಲಾವಿದನ ರಂಗ ಯಾತ್ರೆಯಲ್ಲಿ ಕಲೆಯನ್ನು ದುಡಿಸಿಕೊಳ್ಳುವುದು ಅತ್ಯಂತ ಪ್ರಮುಖ ಘಟ್ಟ. ಅದೇ ರೀತಿ ಕಲಾವಿದನ ಸಾಧ್ಯತೆಗಳನ್ನು ಕಲೆ ಗುರುತಿಸಿ ಅವಕಾಶ ಕಲ್ಪಿಸುವುದೂ ಅಷ್ಟೇ ಮುಖ್ಯವಾದದ್ದು. ಅಂತಹ ಪರಸ್ಪರ ಕೊಡು-ಕೊಳ್ಳುವಿಕೆಯು ಜಗತಿ ಮತ್ತು ಮಲೆಯಾಳಂ ಸಿನೆಮಾ ರಂಗದ ನಡುವೆ ಏರ್ಪಟ್ಟಿತ್ತು. ನೂರು ಜನ ಕಲಾವಿದರಿಗೆ ಒಬ್ಬ ಜಗತಿ ಸಮ-ಅವರ ದೈತ್ಯ ಪ್ರತಿಭೆಯನ್ನು ಅಂದಾಜಿಸಿಕೊಳ್ಳಿ. ಅವರಿಗೆ ಪರ್ಯಾಯವೊ ಎಂಬಂತೆ ಒಂದಷ್ಟು ಮಂದಿ ಪ್ರಯತ್ನಿಸಿ ವಿಫಲರಾದದ್ದಿದೆ. ಅವರಂತಹ ನಟನೊಬ್ಬ ಭೂತದಲ್ಲೂ ಇರಲಿಲ್ಲ.

ವರ್ತಮಾನದಲ್ಲಿ ಅವರನ್ನು ಬಿಟ್ಟರೆ  ಯಾರೂ ಇಲ್ಲ. ಭವಿಷ್ಯದಲ್ಲಿ ಗೊತ್ತಿಲ್ಲ. ಏನೇ ಹೇಳಿ ಜಗತಿ ಶ್ರೀಕುಮಾರ್ ಗೆ ಜಗತಿ ಶ್ರೀಕುಮಾರ್ ಅವರೇ ಸಾಟಿ. ‘ಜಗತಿ’ ಹೆಸರುವಾಸಿಯಾದದ್ದೇ ತಮ್ಮ ಹಾಸ್ಯ ಪಾತ್ರಗಳಿಂದ. ಅವರ ತಂದೆಯೂ ಉತ್ತಮ ಹಾಸ್ಯ ಕಲಾವಿದರಾಗಿ ಹೆಸರುವಾಸಿಯಾದವರು. ಪಾರಂಪರ್ಯ ಇರಬೇಕು ಮಗನಿಗೂ ಅದೇ ವರ್ಗಾಯಿಸಲ್ಪಟ್ಟಿತು. ತಮ್ಮ ವಿಶಿಷ್ಟ  ಮ್ಯಾನರಿಸಂ ಮೂಲಕ ಜಗತಿ ನಟನೆಯ ಜ್ಞಾನ  ಭಂಡಾರವಾಗಿದ್ದರು.

ಸಿನೆಮಾವೊಂದು ಥಟ್.. ಎಂದು ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಮಲೆಯಾಳಂ ಸಿನೆಮಾ ರಂಗದಲ್ಲಿ ಹಾಸ್ಯವು ಹಾಸು ಹೊಕ್ಕಿದೆ. ತಮ್ಮದೇ ವಿಶಿಷ್ಟ ಶೈಲಿಯಲ್ಲಿ  ಸಾದಾ-ಸೀದನಾಗಿ ತೆರೆಯ ಮೇಲೆ ಬರುವ ಜಗತಿಗೆ ನಟನೆ ಎನ್ನುವುದು ನೀರು ಕುಡಿದಷ್ಟು ಸಲೀಸು. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ತಾವೇ ಆ ಪಾತ್ರವಾಗಿ, ನಂತರ ಅದೇ ಗುಂಗಿನಲ್ಲಿ ಉಳಿದ ಅವಧಿಯನ್ನು ಸರಿದೂಗುವಷ್ಟರ ಮಟ್ಟಿಗೆ ಪಾತ್ರಕ್ಕವರು  ನ್ಯಾಯವನ್ನು  ಒದಗಿಸುತ್ತಾರೆ. ಯಾವುದೇ ಪಾತ್ರದ ನಿರ್ವಹಣೆಗೂ ಟೈಮಿಂಗ್ಸ್ ತುಂಬಾ ಮುಖ್ಯ.

ಹಾಸ್ಯ ಪಾತ್ರಕ್ಕಂತೂ ಒಂದು ಹಿಡಿಯಷ್ಟು ಹೆಚ್ಚೇ ಇರಬೇಕು. ಒಂದಿನಿತು ತಡವಾದರೂ ಸಿಗಬೇಕಾದ ಪಂಚ್ ಸಿಗದೇ ಹೋಗಿ ಅನರ್ಥವಾಗುವುದುಂಟು. ಹಾಸ್ಯ ಎಂದ ಮಾತ್ರಕ್ಕೆ ಮುಖ ವಿಕಾರ ಮಾಡಿಕೊಂಡು, ಕಿರುಚಾಡಿ, ಅಗ್ಗದ ವೇಷ ಭೂಷಣಗಳ ಮೂಲಕ ಬಲವಂತದ ನಗು ತರಿಸುವ ಪ್ರಯತ್ನವಲ್ಲ. ಅದು ಚೌಕಟ್ಟಿಗೆ ಅನುಗುಣವಾಗಿ ಸನ್ನಿವೇಶದೊಳಗೆ ತಾನಾಗಿಯೇ ಹೊಮ್ಮಬೇಕಾದಷ್ಟು ರಸ ಸೃಷ್ಟಿ.

ಅಂತಹ ಹಲವು ಪಾತ್ರಗಳಿಗೆ ಜೀವ ತುಂಬಿದ್ದು ಮಾತ್ರವಲ್ಲ, ಹಾಸ್ಯ ಎನ್ನುವುದು ಕೇವಲ ಸಿನೆಮಾದಲ್ಲಿ ನಗಿಸಲು ಇರುವ ಪ್ರತ್ಯೇಕ ಪಾತ್ರವಲ್ಲ ಎನ್ನುವುದನ್ನೂ ನಿರೂಪಿಸಿದವರು. ಸಿನೆಮಾದ ಮೈನ್ ಸ್ಟ್ರೀಮ್ ನಲ್ಲಿ ಬರುವ ಮುಖ್ಯ ಪಾತ್ರ, ಸನ್ನಿವೇಶಗಳಷ್ಟೇ ಹಾಸ್ಯವೂ ಪ್ರಮುಖವಾದದ್ದು ಎನ್ನುವುದನ್ನು ತೋರಿಸಿಕೊಟ್ಟ ಅಪ್ಪಟ ಪ್ರತಿಭೆ-ಜಗತಿ.  ಹಾಸ್ಯ ಪಾತ್ರಕ್ಕೆ ಹೊಸ ಆಯಾಮವನ್ನು ಕೊಟ್ಟ ಹೆಗ್ಗಳಿಕೆಯೂ  ಜಗತಿ ಶ್ರೀಕುಮಾರರದ್ದು. ಅಂತಹ ಜಗತಿ ತಾನು ಕೇವಲ ಹಾಸ್ಯ ಪಾತ್ರಕ್ಕೆ ಮಾತ್ರವಲ್ಲ ಇತರ ಕ್ಯಾರೆಕ್ಟರ್ ಪಾತ್ರಗಳಿಗೂ ‘ಸೈ’ ಎಂದು ನಿರೂಪಿಸಿದ ಅದೆಷ್ಟೋ ಚಿತ್ರಗಳಿವೆ. ಅದರಲ್ಲಿ ನಾನು ಕಂಡ ಒಂದು ಪಾತ್ರ ‘ಮುನಾಂಪಕ್ಕ೦’ ಚಿತ್ರದ ‘ಕಾವಲ’ ಪಾತ್ರ.

ನಾಲ್ಕು ರಸ್ತೆ ಕೂಡುವಲ್ಲಿ ಜೀವಿಸುವ ಒಬ್ಬ ವ್ಯಕ್ತಿಯ ಪಾತ್ರ. ಮಲೆಯಾಳಂನಲ್ಲಿ ‘ಕಾವಲ’ ಅಂದ್ರೆ ‘ಜಂಕ್ಷನ್’ ಎಂದರ್ಥ. ಅದೇ ಹೆಸರಿನಿಂದ ಊರ ಮಂದಿ ಆ ಪಾತ್ರವನ್ನು ಕೂಗಿ ಕರೆದಾಗ ಕಿರಿಕಿರಿ ಅನುಭವಿಸಿ ತಾನುಟ್ಟ ಲುಂಗಿಯನ್ನು ಎತ್ತೆತ್ತಿ ತೋರಿಸುವ ವಿಕ್ಷಿಪ್ತ ಪಾತ್ರವದು. ಅಷ್ಟೊಂದು ಪ್ರಮುಖವಲ್ಲವೆಂದು ತೋರುವ ಆ ಪಾತ್ರದಲ್ಲಿ ಜಗತಿ ಅಲ್ಲಿಲ್ಲಿ ಒಂದೆರಡು ಬಾರಿ ಬಂದು ಹೋಗುವುದಿದೆ. ಅದೂ ಹಾಸ್ಯಕ್ಕೆ ವಿರುದ್ಧವಾದ ಪಾತ್ರವೆಂದು ಯೋಚಿಸುತ್ತಿರುವಾಗಲೇ ಧಡಕ್ಕನೆದ್ದು ಬಂದು ಕೊನೆಯ ಐದು ನಿಮಿಷ ಪ್ರೇಕ್ಷಕರನ್ನು ಹಿಡಿದಿಡುವ ನಟನಾಪರಿ ಇದೆಯಲ್ಲಾ- ಅದು ನಿಜವಾದ ಕಲಾವಿದನೊಬ್ಬನ  ಶಕ್ತಿ ಮತ್ತು ತಾಕತ್ತಿನ ಪ್ರದರ್ಶನ. ಅವರ ಮುಖದ ಮಾಂಸ ಖಂಡಗಳಲ್ಲಿ ಅಭಿವ್ಯಕ್ತಗೊಂಡ ಭಾವನೆಗಳನ್ನು ಚಿತ್ರ ರಸಿಕರು ನೋಡಿಯೇ ಅನುಭವಿಸಬೇಕು. ಅಷ್ಟರ ಮಟ್ಟಿಗೆ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಜಗತಿ ಶ್ರೀಕುಮಾರ್. ಸರ್ವ ರೀತಿಯಲ್ಲೂ ರಾಜ್ಯ, ರಾಷ್ಟೀಯ ಪುರಸ್ಕಾರ ಪಡೆಯಲು ಅರ್ಹವಾದ ಪರ್ಫಾರ್ಮೆನ್ಸ್ ಅದಾಗಿತ್ತು.

ಅವರಿಗೆ ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಮುದ್ದಾಂ ನ್ಯಾಯ ಒದಗಿಸುತ್ತಾರೆ ಎನ್ನುವಂತಹ ನಂಬಿಕೆ ಮಲೆಯಾಳಂ ಸಿನಿಲೋಕದ್ದು. ಜನರು ಆಡಿಕೊಳ್ಳುವಂತೆ- ಜಗತಿಗೆ ಸಂಭಾಷಣೆಗಳು ಬೇಕಾಗಿಲ್ಲವಂತೆ, ಸನ್ನಿವೇಶಗಳಿಗೆ ಅನುಗುಣವಾಗಿ ಬಹಳಷ್ಟು ಬಾರಿ ಕ್ಷಣದಲ್ಲೇ ಸಂದರ್ಭೋಚಿತ ಸಂಭಾಷಣೆಗಳನ್ನು ಸ್ವತಃ ತಾವೇ ಹೇಳಿ ನಿರ್ದೇಶಕರಿಗೆ ಅಚ್ಚರಿ ಮೂಡಿಸಿದ ಪ್ರಸಂಗಗಳು  ಬಹಳಷ್ಟಿವೆ. ಅಷ್ಟೇ ಯಾಕೆ ಆಕ್ಷನ್-ರಿಯಾಕ್ಷನ್ ಗಳಲ್ಲಿ ಮೂಡಿ ಬರುವ ಎಕ್ಸ್ಪ್ರೆಶನ್ಸ್ ಕೂಡಾ ಅಷ್ಟೇ ಶಕ್ತಿಯುತವಾದದ್ದು. ರಿಹರ್ಸಲ್ ನಲ್ಲಿ ಮೂಡುವುದೇ ಒಂದು ಟೇಕ್ ನಲ್ಲಿ ಬರುವುದೇ ಇನ್ನೊಂದು. ಅದೆಷ್ಟೋ ಬಾರಿ ಜಗತಿಯವರ ದೃಶ್ಯಗಳು ನಿರ್ಧರಿಸಿದ್ದಕ್ಕಿಂತ ಹೆಚ್ಚಿನ ಹೊತ್ತು ಮುಂದುವರಿಯುತ್ತಿದ್ದರೆ- ನಿರ್ದೇಶಕರಾಗಲಿ, ಕ್ಯಾಮೆರಾಮೆನ್ ಆಗಲಿ ‘ಕಟ್’ ಎನ್ನುತ್ತಿರಲಿಲ್ಲ. ಆ ಹೊತ್ತಿಗೆ ಮೂಡಿ ಬರುವ ಜಗತಿಯವರ ಮನೋಧರ್ಮವನ್ನು ಅಲ್ಲಿ ಸಂಪೂರ್ಣವಾಗಿ ಸೆರೆ ಹಿಡಿದು ಬಿಟ್ಟಿರುತ್ತಿದ್ದರು.

ಕಲಾವಿದನ ನೈಪುಣ್ಯತೆ ಅಂದರೆ ಅದು. ನಿರ್ದೇಶಕ ಹೇಳಿದ್ದಷ್ಟನ್ನು ಮಾತ್ರ ನಟಿಸದೆ, ತನ್ನ ಸ್ವಪ್ರಯತ್ನದಿಂದ ಆ ಕ್ಷಣದ ಮನೋಧರ್ಮವು ಒದಗಿಸುವ ಯೋಚನೆಗಳನ್ನು ಜತೆಯಾಗಿಟ್ಟುಕೊಂಡು ದೃಶ್ಯಗಳನ್ನು ಇಂಪ್ರುವೈಸೇಶನ್ ಮಾಡುವ ಅದ್ಭುತ ಕಲೆಗಾರಿಕೆ ಕಲಾವಿದನಿಗೆ ಇರಬೇಕು. ಅದು ಜಗತಿಯಲ್ಲಿದೆ. ದೃಶ್ಯಕ್ಕೆ ಹರಿವಿನ ಚಲನೆಯನ್ನು ನೀಡಿ ಮುಂದಕ್ಕೆ ಹೊರಳಿಸುವ ಅವರ ಅದ್ಭುತ ನೈಪುಣ್ಯಕ್ಕೆ ದಿಲ್ ಸೆ ಸಲಾಂ. ಇದನ್ನು ನಾಟಕವು ಅವರಿಗೆ ಕಲ್ಪಿಸಿದೆ ಎಂದರೆ ತಪ್ಪಾಗಲಾರದು. ಕೇವಲ ಭುಜ ಕುಣಿಸಿ, ಹುಬ್ಬು ಗಂಟಿಕ್ಕಿ, ಬಾಯಿಯನ್ನು ಮೇಲಕ್ಕೇರಿಸಿ, ತುಟಿಗಳನ್ನು ಅಡ್ಡಕ್ಕೆ ತಳ್ಳಿ, ಕಣ್ಣನ್ನು ಕಿರಿದಾಗಿಸಿ ತಾನೇನು ಮಾಡೇ ಇಲ್ಲವೇನೋ ಎಂದು ಸೂಚಿಸುವ ಭಂಗಿಯು ಸೃಜಿಸುವ ಹಾಸ್ಯರಸವನ್ನು ಪ್ರಾಯಶಃ ‘ಜಗತಿ’ಗಲ್ಲದೆ ಇನ್ಯಾರಿಂದಲೂ ಸೃಜಿಸಲು ಸಾಧ್ಯವಿಲ್ಲ. ನಗುವಿಗೆ ನಿಜವಾದ ಅರ್ಥ ಬರೆದವರು ಜಗತಿ ಶ್ರೀಕುಮಾರ್.

*

ಅದೆಂತಹದ್ದೇ ಅವಕಾಶ ಭಾಗ್ಯ ಬಂದರೂ ಕೊಟ್ಟ ಮಾತಿಗೆ ಚ್ಯುತಿ ತಂದವರಲ್ಲ. ಉದಾಹರಣೆಗೆ ‘ಮಣಿ ಚಿತ್ರತ್ತಾಳ್’ ಸಿನೆಮಾಗೆ ಜಗತಿಯ ಡೇಟ್ಸ್ ಕೇಳಿದ ನಿರ್ದೇಶಕ  ‘ಫಾಝಿಲ್’ ಗೆ ತಾವಿಗಾಗಲೇ ಇನ್ನೊಂದು ಚಿತ್ರಕ್ಕೆ ಡೇಟ್ಸ್ ಕೊಟ್ಟಿರುವುದಾಗಿಯೂ ತನ್ನಿಂದ ಆ ಸಿನೆಮಾದಲ್ಲಿ ನಟಿಸಲು ಸಾಧ್ಯವಿಲ್ಲವೆಂದೂ ಬೇರೆ ಡೇಟ್ಸ್ ಆದರೆ ನೋಡಬಹುದು ಎಂದು ಹೇಳುವಷ್ಟು ವೃತ್ತಿ ಬದ್ಧತೆ ಅವರದ್ದು. ಹೀಗೆ ರಾಜಿ ಮಾಡಿಕೊಳ್ಳದ ಸ್ವಭಾವದಿಂದ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿ, ನೋವನ್ನು ಸಹಿಸಿಕೊಂಡಿದ್ದಾರೆ. ಕಲೆಯ ಬಗ್ಗೆ ತೋರಿದ ನಿಷ್ಠೆ ಮತ್ತು ಬದ್ಧತೆಯು ಅವರನ್ನು ವಿನಯಶೀಲ ಕಲಾವಿದನನ್ನಾಗಿಸಿದೆ. ಹೇಳುವುದನ್ನು ಮುಲಾಜಿಲ್ಲದೆ ಹೇಳುವುದು, ನೇರಾನೇರವಾಗಿ ಮಾತನಾಡುವುದು ಅವರ ಜಾಯಮಾನ. 

ಪರದೆಯ ಮೇಲೆ ಎಷ್ಟು ಹಾಸ್ಯರಸವನ್ನು ಹರಿಸಬಲ್ಲರೋ, ತೆರೆಯ ಹೊರಗೆ ಅವರದ್ದು ಅಷ್ಟೇ ಗಂಭೀರ ಗೌರವದ  ಸ್ವಭಾವ. ಸಮೂಹದ ಮಂದಿಯ ನಡುವೆ ನಗಿಸಬೇಕೆಂದೇ  ನಗಿಸಲು ಹೊರಡುವ ಮನುಷ್ಯನಲ್ಲ. ಜವಾಬ್ದಾರಿಗಳನ್ನು ಅರಿತು ಅದಕ್ಕೆ ತಕ್ಕಂತೆ ನಡೆದವರು. ಸಾಮಾನ್ಯವಾಗಿ ಮಲೆಯಾಳಿಗಳು ಅನ್ಯ ಭಾಷೆ ಮಾತನಾಡಿದರೆ ಥಟ್ ಎಂದು ಗುರುತಿಸುವಷ್ಟು ಮಲಯಾಳಿತನವು ಅಲ್ಲಿ ಹುದುಗಿರುತ್ತದೆ. ಅದರಲ್ಲೂ ಇಂಗ್ಲಿಷ್ ಭಾಷೆ ಎಂದರೆ ಕೇಳುವುದೇ ಬೇಡ. ಹಾಗಿರಲು ಅನ್ಯ ಕಲಾವಿದರಿಗಿಂತ ಚೆನ್ನಾಗಿಯೂ, ಸ್ಪಷ್ಟ ಸ್ಪುಟವಾಗಿಯೂ ಇಂಗ್ಲಿಷ್ ಭಾಷೆಯಲ್ಲಿ ವ್ಯವಹರಿಸ ಬಲ್ಲರು. 

ಬಹಳಷ್ಟು ಸ್ವಕಾರ್ಯ ದುಃಖಗಳನ್ನು ಜೀವನದಲ್ಲಿ ಅನುಭವಿಸಿದ ಜಗತಿ ಅದೆಷ್ಟೋ ಬಾರಿ ಒಬ್ಬಂಟಿಯಾಗಿ ಆಗಸದತ್ತ ಶೂನ್ಯ ದೃಷ್ಟಿಯನ್ನು ಹಾಯಿಸಿದ್ದಿದೆ. ಸಂಕಷ್ಟಗಳು ಮುತ್ತಿಕೊಂಡಾಗ ಸಿನಿ ಗಣ್ಯರೆನಿಸಿಕೊಂಡವರು ವೈಯಕ್ತಿಕವಾಗಿ ಸ್ಪಂದಿಸಲಿಲ್ಲ ಎನ್ನುವ ವ್ಯಥೆಯೂ ಅವರಿಗಿದೆ. ಹೀಗಿರಲು ತೆರೆಯ ಮೇಲೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಜಗತಿ ಚಿತ್ರೀಕರಣದ ಸೆಟ್ ನಲ್ಲಿ ಬಾಯಿ ಹೊಲಿದು ಕುಳಿತ ಧ್ಯಾನಸ್ಥ ಸಂತರಾಗುತ್ತಾರೆ. 

ತಮ್ಮ ಅಸ್ಕಲಿತ ಮಾತುಗಾರಿಕೆಯ ಮೂಲಕ ಸಾರ್ವಜನಿಕ ವೇದಿಕೆಯಲ್ಲಿ ನಿಷ್ಠುರದ ಮಾತುಗಳನ್ನಾಡುವ, ಅಪ್ರಿಯವಾದ ಸತ್ಯವನ್ನು ಹೇಳುವ ಕಲಾವಿದ. ಮೆಚ್ಚಿಸಬೇಕೆಂದು ಮೆಚ್ಚಿಸಲು ಹೊರಡುವ ವ್ಯಕ್ತಿ ಖಂಡಿತಾ ಅವರಲ್ಲ. ವೇದಿಕೆಯ ಮೇಲೂ ತಮ್ಮ ಹಾಸ್ಯಭರಿತ ಹಾವಭಾವಗಳನ್ನು ಹರಿಸಿ, ಅಭಿವ್ಯಕ್ತಿಸಿ ಮಾತನಾಡುವ ಕಲೆಗಾರಿಕೆ ಅವರದ್ದು. ಯಾವ ಕಲಾವಿದನೂ ಪ್ರತಿಕ್ರಿಯಿಸದ ರೀತಿಯಲ್ಲಿ ಪ್ರತಿಕ್ರಿಯಿಸುವ ಧೈರ್ಯ ಜಗತಿಗಿದೆ. ಅವರ ಈ ತೆರನಾದ ನೇರಾಭಿವ್ಯಕ್ತಿಯು ಎಷ್ಟೋ ಬಾರಿ ಚಿತ್ರರಂಗಕ್ಕೆ ಇರುಸು ಮುರುಸುಂಟು ಮಾಡಿದ್ದೂ.. ಪರಿಣಾಮ  ಕೆಲವೊಂದಿಷ್ಟು ಸಿನಿ ಕಲಾವಿದರು ಅವರನ್ನು ದೂರ ಇಡಲು ಯತ್ನಿಸಿದ್ದೂ ನಡೆದಿದೆ. ಆದರೆ ತಮ್ಮ ನಟನೆಯಿಂದ ಮನೆ-ಮನವನ್ನು ಗೆದ್ದಿರುವ  ಅವರನ್ನು ದೂರವಿರಿಸಲು ಸಿನಿರಂಗಕ್ಕೆ ಮತ್ತು  ಹಾಗೆಂದು ಯೋಚಿಸಿದ ಕಲಾವಿದರಿಗೆ ಸಾಧ್ಯವಾಗಲಿಲ್ಲವಷ್ಟೆ.

ಜಾತಿಯಲ್ಲಿ ತಾವು ‘ಆಚಾರಿ-ವಿಶ್ವಕರ್ಮ’ನಾಗಿ ಮೇಲ್ ಜಾತಿಯವರಿಂದ ಅನುಭವಿಸಿದ ನೋವು-ಅವಮಾನಗಳನ್ನು ಕೂಡಾ ಮುಚ್ಚು ಮರೆಯಿಲ್ಲದೆ ಹೇಳುವ, ಪ್ರತಿಭಟಿಸುವ ಛಾತಿಯ ಜಗತಿ ಮನುಷ್ಯತ್ವವುಳ್ಳ ಕಲಾವಿದ. ಆಧುನಿಕತೆಯನ್ನು ಒಪ್ಪಿಕೊಳ್ಳುತ್ತಲೇ ನಮ್ಮತನವನ್ನೂ ಇರಿಸಿ ಬೆಳೆಸುವ ನಿಷ್ಠೆಗೆ ಬದ್ಧರಾದವರು. ಅವಮಾನ ಸಂಕಟಗಳನ್ನು ನುಂಗಿಯೂ ನಗಿಸಿದವರು-ಒಳ್ಳೆಯದ್ದನ್ನು ಒಳ್ಳೆಯದ್ದೆಂದೂ, ಕೆಟ್ಟದ್ದನ್ನು ಕೆಟ್ಟದ್ದೆಂದೂ ಹೇಳುವ ಇವರು- ಕೆಲವು ವಿಷಯ, ವಿಚಾರ, ಪುರಸ್ಕಾರ, ಪ್ರಶಸ್ತಿ, ವ್ಯಕ್ತಿಗಳೆಲ್ಲಾ ತನಗೆ ‘ಪುಚ್ಯಂ’ ಎಂದು ಹೇಳಿದ, ಹೇಳುವ ಎದೆಗಾರಿಕೆ ಇವರದ್ದು. ‘ಹಲವು ದುರಂತಗಳನ್ನು ಅನುಭವಿಸಿದವನಿಗೆ ಮಾತ್ರ ಚೆನ್ನಾಗಿ ನಗಿಸಲು ಸಾಧ್ಯ’ ಎನ್ನುವುದು ‘ಚಾರ್ಲಿ ಚಾಪ್ಲಿನ್ ‘ನ ಮಾತು. ಅದಕ್ಕೆ ಜಗತಿ ಶ್ರೀಕುಮಾರ್ ಕೂಡಾ ಹೊರತಲ್ಲ.          

‘ಮಮ್ಮುಟ್ಟಿ-ಮೋಹನ್‌ಲಾಲ್’ ಎಂಬೆರಡು ತಾರೆಗಳು ಮಲೆಯಾಳಂ ಸಿನೆಮಾ ಜಗತ್ತನ್ನು ಆಳುತ್ತಿದ್ದ ಕಾಲವದು. ‘ಪ್ರಿಯದರ್ಶನ್’ ನಿರ್ದೇಶನದ ‘ಕಿಳುಕ್ಕಂ’ ಸಿನೆಮಾದಲ್ಲಿ ನಾಯಕ ನಟ ‘ಮೋಹನ್‌ಲಾಲ್‌’ಗೆ ಸರಿ ಸಮಾನವಾಗಿ ಸಂಭಾವನೆಯನ್ನು ಪಡೆದ ಮಲೆಯಾಳಂ ಸಿನಿಲೋಕದ ಏಕೈಕ ಮೊದಲ ನಟ ‘ಜಗತಿ ಶ್ರೀಕುಮಾರ್’. ಯಾವುದೇ ನಾಯಕನ ಎದುರು ಒಬ್ಬ ಸಹ ಕಲಾವಿದ ನಾಯಕನಷ್ಟೇ ಸರಿ ಸಮಾನವಾದ ಸಂಭಾವನೆ ಪಡೆದ ಮೊದಲ ಕಲಾವಿದ ಎಂಬ ಅಚ್ಚರಿಯನ್ನು ಚರಿತ್ರೆಯಲ್ಲಿ ದಾಖಲಿಸಿದರು. 

ಒಂದು ಸಿನೆಮಾವು ತಾರಾಗಣಗಳ ಜೊತೆ ಜೊತೆಗೆ ಒಬ್ಬ ಸಹನಟನ ಅಸ್ತಿತ್ವದ ಮೂಲಕವೂ ನಾಯಕ ನಟನಿಗೆ ಸರಿ ಸಮಾನವಾಗಿ ನಟಿಸಿ ವಿಜ್ರಂಭಿಸಬಹುದು ಎನ್ನುವದಕ್ಕೆ ‘ಕಿಳುಕ್ಕಂ’ ಚಿತ್ರ ಉದಾಹರಣೆ. ಇಂತಹ ಅದೆಷ್ಟೋ ವಿಸ್ಮಯಗಳು ಜಗತಿ ಶ್ರೀಕುಮಾರ್ ಅವರ ಅನುಭವ ಪೆಟ್ಟಿಗೆಯಲ್ಲಿವೆ. ಸಮಯ, ಸಂದರ್ಭಕ್ಕೆ ಅನುಗುಣವಾಗಿ ಥಟ್ಟನೆ ಪ್ರತಿಕ್ರಿಯಿಸುವ ಕಲೆ, ಅಷ್ಟೇ ಮೊನಚಾದ ಸಂಭಾಷಣೆಯನ್ನು ಪಾತ್ರಕ್ಕೆ ತಕ್ಕಂತೆ ಸ್ವರದ ಏರಿಳಿತಗಳ ಮೂಲಕ ಹೇಳಿ ಎದುರಿಗಿರುವ ಕಲಾವಿದನನ್ನೇ ತಬ್ಬಿಬ್ಬಾಗಿಸುವ, ಸ್ಫೂರ್ತಿಯಾಗುವ ಅವರ ನಟನೆಗೆ ಬೇರ್ಯಾರೂ  ಸಾಟಿಯೇ ಅಲ್ಲ.

ಎಲ್ಲಾ ನಟರಿಗೆ ನವರಸಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೂ ಕೆಲವರಿಗದು ಒಗ್ಗಿ ಬರುವುದಿಲ್ಲ. ಅಂತಹದ್ದನ್ನು ಪ್ರೇಕ್ಷಕರು ಸ್ವೀಕರಿಸುವುದೂ ಇಲ್ಲ ಬಿಡಿ. ಕೆಲವರಿಗೆ ಒಂದೆರಡು ಮುಖ್ಯವಾದ ರಸಗಳನ್ನಷ್ಟೇ ಅಭಿವ್ಯಕ್ತಿಸಲು ಸಾಧ್ಯವಿರುತ್ತದೆ. ಅಂತಹದ್ದರಲ್ಲಿ ಜಗತಿ ಶ್ರೀಕುಮಾರ್ ಎಂಬ ಅಪ್ಪಟ ಚಿನ್ನದ ಪ್ರತಿಭೆಗೆ ಅಷ್ಟೂ ನವರಸಗಳನ್ನು ಸ್ಫುರಿಸುವುದು ಉಸಿರಾಡಿದಷ್ಟೇ ಸಲೀಸು ಎಂದರೆ ಅವರ ಪ್ರತಿಭೆಯ ಎತ್ತರವನ್ನೊಮ್ಮೆ ಊಹಿಸಿಕೊಳ್ಳಿ. ಅವರು ಅಭಿನಯಿಸಿದ ಯಾವುದೇ ಪಾತ್ರವನ್ನು ಮರೆಯುವುದು ಅಸಾಧ್ಯ ಎಂದು ಹೇಳಬೇಕಾದರೆ ಅವರ ದೈತ್ಯ ಪ್ರತಿಭೆಯ ವಿಶ್ವ ರೂಪವನ್ನು ನೀವೇ ಒಮ್ಮೆ ಗ್ರಹಿಸಿಕೊಳ್ಳಿ. ‘ಬೆಲೂನ್, ಮುನಾಂಪಕ್ಕಂ, ನೋಟಂ, ಕಿಳುಕ್ಕಂ, ತಾಳವಟ್ಟಂ, ಯೋಧ, ಅರಂ+ಅರಂ = ಕಿನ್ನರಂ, ಕಾಬೂಲಿವಾಲ’ ಸಿನೆಮಾಗಳು ಥಟ್ಟನೆ ನನ್ನ ನೆನಪಿಗೆ ಬರುವಂತಹವುಗಳು.       

ಜಗತಿ ಶ್ರೀಕುಮಾರ್ ಅವರ ಅಕಾಲ ಅನುಪಸ್ಥಿತಿಯು ಇತರ ಹಲವರಿಗೆ ಚಿತ್ರರಂಗದಲ್ಲಿ ಅವಕಾಶದ ಬಾಗಿಲನ್ನು ತೆರೆಯಿತೆನ್ನುವುದೇನೋ ನಿಜ. ಆದರೆ ಅವರ ಸ್ಥಾನವನ್ನು ತುಂಬಲು ಮಾತ್ರ ಅವರ್ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಯತ್ನಗಳು ನಡೆಯುತ್ತಲೇ ಇವೆ. ಫಲಿತಾಂಶ ಮಾತ್ರ ಶೂನ್ಯ. ನವಿಲನ್ನು ಕಂಡು ಕೆಂಭೂತ ಕುಣಿದಂತೆ ಎನ್ನುವ ಸನ್ನಿವೇಶ. ಮಲೆಯಾಳಂ ಸಿನೆಮಾ ರಂಗದಲ್ಲಿ ಜಗತಿಗೆ ಬದಲಾಗಿ ಯಾರು? ಎಂಬ ಪ್ರಶ್ನೆಗೆ ಉತ್ತರದ ಹುಡುಕಾಟ ಇನ್ನೂ ನಡೆಯುತ್ತಿದೆ.

ಒಬ್ಬ ನಟನಿಗೆ ಪರ್ಯಾಯವಾಗಿ ಇನ್ನೊಬ್ಬ ಬೆಳೆಯಬೇಕಿದ್ದರೆ ಆ ನಟನಿಗೆ ನಟನಾ ಕೌಶಲ್ಯದ ಪರಿಣಿತಿ ಮತ್ತು ತಾಕತ್ತಿರಬೇಕು. ಅವರಂತಹ ಒಬ್ಬನೇ ಒಬ್ಬ ಕಲಾವಿದ ಮಲೆಯಾಳಂ ಸಿನಿರಂಗದಲ್ಲಿ ಇಲ್ಲವೇ ಇಲ್ಲ ಎನ್ನುವುದು ಸುಸ್ಪಷ್ಟ. ಬದುಕಿನಲ್ಲಿ ಎಲ್ಲವೂ ಸರಿಯಿದ್ದು, ಸಿನೆಮಾ ರಂಗದ ತುತ್ತ ತುದಿಯಲ್ಲಿರುವಾಗ ನಟನ ಮತ್ತವನ ನಟನೆಯ ಬಗ್ಗೆ ಅಭಿಮಾನಿಗಳು ಹಾಡಿ, ಹೊಗಳುತ್ತಾ ಇರುವಾಗಲೇ ಧಸಕ್ಕೆಂದು ವಿಧಿಯೆದುರು ಮಂಡಿ ಊರುವುದಿದೆಯಲ್ಲಾ ಅದು ಯಾವುದೇ ಕಲಾವಿದನಿಗೂ ಬರಬಾರದ ಪಾಡು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಂದು ಜಗತಿ ಶ್ರೀಕುಮಾರ್ ಇದ್ದಾರೆ. ಅವರ ಅನಾರೋಗ್ಯವು ಸೃಷ್ಟಿಸಿದ ಶೂನ್ಯ ಅದು ಮಲೆಯಾಳಂ ಸಿನೆಮಾ ರಂಗದಿಂದ ಕಣ್ಮರೆಯಾದ ಇತರ ಕಲಾವಿದರಿಗಿಂತಲೂ ತುಸು ಹೆಚ್ಚೇ. ಜೀವಂತವಿದ್ದೂ ನಟಿಸಲಾಗದಿರುವ ಪರಿಸ್ಥಿತಿ ಕಲಾವಿದನ ಪಾಲಿನ ಅತೀ ನೋವುಳ್ಳ ದುಃಖದ ಸಂಗತಿ.  

‘ಜೀವಿತವನ್ನು ಮಾತ್ರ ತೆಗೆದುಕೊಂಡರೆ ಮಲೆಯಾಳಂ ಸಿನಿಲೋಕದ ದುರಂತ ಪಾತ್ರ ಜಗತಿ ಎಂದು ಹೇಳಿದರೆ ತಾವು ಒಪ್ಪಿಕೊಳ್ಳುತ್ತೀರಾ?’ ಎಂದು ಪತ್ರಕರ್ತನೊಬ್ಬ ಕೇಳಿದ ಪಶ್ನೆಗೆ- ವ್ಯಕ್ತಿಗತ ನೆಲೆಯಲ್ಲಿ ಹಾಗೆ ಹೇಳಬಹುದು ಎಂದು ಗಂಭೀರವಾಗಿಯೇ ಜಗತಿಯವರು ಉತ್ತರಿಸುತ್ತಾರೆ. ಮಲೆಯಾಳಂ ಸಿನೆಮಾವನ್ನು ಅರ್ಥ ಮಾಡಿಕೊಳ್ಳಲು ಶುರು ಮಾಡಿದ ದಿನಗಳಿಂದಲೂ ‘ಜಗತಿ’ಯ ಪ್ರತಿಯೊಂದು ನಟನೆಯ ರಸವನ್ನೂ ಕಂಡುಂಡು ಅನುಭವಿಸಿದ್ದೇನೆ. ಅಷ್ಟೇ ಯಾಕೆ, ಮನೋರಂಜನಾ ಚ್ಯಾನೆಲ್‌ಗಳು ಬೆರಳೆಣಿಕೆಯಷ್ಟಿದ್ದ ಕಾಲದಲ್ಲಿ ನಿದ್ದೆಗೆಟ್ಟು ಜಗತಿಯ ಕಾಮಿಡಿಗಳನ್ನು ಮತ್ತೆ ಮತ್ತೆ ನೋಡಿ ಆನಂದಿಸಿ ಅದೆಷ್ಟೋ ನೋವುಗಳನ್ನು ಮರೆತಿದ್ದೇನೆ. ನನ್ನಂತೆ ಬಹಳಷ್ಟು ಮಂದಿಯೂ.

ಮಲಯಾಳಂ ಸಿನೆಮಾ ರಂಗದ ಮತ್ತು ಎಲ್ಲಾ ಮಾಲಯಾಳಿಗಳ ‘ನಮ್ಮೆಲ್ಲಾರುಡೆ ಅಭಿಮಾನಮಾಯ.. ನಮ್ಮುಡೆ ಅಹಂಗಾರಂ’ ಎಂದೇ ಕರೆಯಲ್ಪಡುವ ‘ಅಂಬಿಳಿ ಚೇಟನ್’ ಅಲಿಯಾಸ್ ‘ಜಗತಿ ಶ್ರೀಕುಮಾರ್’ ಎಂಬ ಮಲೆಯಾಳಂ ಸಿನೆಮಾ ರಂಗದ ಹಾಸ್ಯ ಚಕ್ರವರ್ತಿಯ ಇದ್ದೂ ಇಲ್ಲದ ಅನುಪಸ್ಥಿತಿಯು-ನಗಲರಿತರೂ ನಗಲಾಗದಂತೆ.. ನಗುವಿಲ್ಲದ ಬದುಕಿನಂತೆ.. ಬಣ್ಣ ಮಾಸಿದ ಪೋಸ್ಟರಿನಂತೆ.

ನಿಂತು ನೀರಾಗಿರುವ ರಂಗದೊಳಗೆ ‘ಜಗತಿ’ ಎಂಬ ಹಾಸ್ಯರಸ ಬುಗ್ಗೆಯು ಮತ್ತೆ ಚಿಮ್ಮಲಿ ಎನ್ನುವುದೇ ಕಲಾಭಿಮಾನಿಗಳ ಆಶಯ ಮತ್ತು ಹಾರೈಕೆ. ‘ಮತ್ತೆ ತೆರೆಗೆ ಮರಳಿದ ಜಗತಿ ಶ್ರೀಕುಮಾರ್’- ಕೇಳಲು ಅದೆಷ್ಟು ಹಿತ ಅಲ್ವೇ? ‘ಎಡವೇಳಕ್ಕ್ ಶೇಷಮ್.. ಆಫ್ಟರ್ ಆ ಸ್ಮಾಲ್ ಕಮರ್ಷಿಯಲ್ ಬ್ರೇಕ್ ‘- ನಂತರ ತೆರೆಯ ಮೇಲೆ ಮತ್ತೆ ಜಗತಿ ಎಂಬ ಅದ್ಭುತ ನಟನೆಯು ಮೂಡಿ ಬರಲಿ ಎಂಬ ಆಶಯ ಹಾರೈಕೆ ಅಭಿಮಾನಿಗಳದ್ದು. ಕಾಲ ನಿಂತಲ್ಲೇ ನಿಲ್ಲುವುದಿಲ್ಲವಲ್ಲ. ನಿಂತರೆ ಅದು ಕಾಲವಂತೂ ಖಂಡಿತಾ ಅಲ್ಲ. ಕಾಯುವಿಕೆ ದೀರ್ಘವಾಗುತ್ತಿದೆ ಎಂದೆನಿಸುತ್ತಿದೆ. ಆದರೂ ವಿಶ್ವಾಸ ಕುಂದಿಲ್ಲ.

‍ಲೇಖಕರು Admin

June 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: