ಕ್ಷಣ ಚಿತ್ತ ಕ್ಷಣ ಪಿತ್ಥ ಈ ಮಂಜುನಾಥನಿಗೆ!!

ಜಿ.ಪಿ.ಎಸ್. ಮತ್ತು ಮಂಜುನಾಥ
(ರಾಕಿ ಪರ್ವತ ಶೇಣಿಗಳ ಪ್ರವಾಸದ ಒಂದು ಅನುಭವ)

ಗಿರಿಜಾ ಶಾಸ್ತ್ರಿ 

“Guru is like a GPS in an unknown terrain” ಎಂದು ಸದ್ಗುರು ಹೇಳುತ್ತಾರೆ. ನನಗೆ ಇದರ ಗಾಢವಾದ ಅನುಭವಾದದ್ದು, ನಾವು ರಾಕಿ ಪರ್ವತ ರಾಷ್ಟ್ರೀಯ ಉದ್ಯಾನವನ್ನು ಹೊಕ್ಕಾಗ.

ಅಮೇರಿಕೆಯ ಡೆನ್ವರ್ ನಗರಕ್ಕೆ ಸು. ೨೦೦ ಮೈಲಿ ದೂರವಿರುವ ರಾಕಿ ಪರ್ವತ ಸುಮಾರು ೧೨ ಸಾವಿರ ಅಡಿಗಳಷ್ಟು ಎತ್ತರದ ಮುನ್ನೂರು ಮೈಲಿಗಳ ವ್ಯಾಪ್ತಿಯ ಮಂಜಿನ ಪರ್ವತಗಳ ಸಾಲು. ಒಂದು ಬೆಟ್ಟ ಮುಗಿದರೆ ಇನ್ನೊಂದು, ಮತ್ತೊಂದು ಧುತ್ತೆಂದು ಎದುರಾಗುವ ಪರ್ವತ ಪಂಕ್ತಿ!! ಒಂದು ಕಡೆ ಪೈನ್ ಮರಗಳ ಕಾಡು ಗುಡ್ಡ ಸರಿಯುತ್ತಿದ್ದರೆ, ಇನ್ನೊಂದು ಕಡೆ ಘನವಾಗಿ ಹೊಳೆಯುವ ದೈತ್ಯ ಬೆಳ್ಳಿ ಬೆಟ್ಟ ಎದುರಾಗುತ್ತಿತ್ತು.

ಕಠೋರ ಪರ್ವತದ ಮಂಜು ಹತ್ತಿಗಿಂತ ಮೃದು! ಕೈಯೊಳಗೆ ಹಿಡಿದರೆ ಕರಗಿ ನೀರಾಗಿ ಬಿಡುವ ಆರ್ದ್ರತೆ. ರಾಕಿ ಪರ್ವತ ಶ್ರೇಣಿಯ ನಡುವೆ ಚಲಿಸುವುದೆಂದರೆ ಮಂಜು ಬೆಟ್ಟಗಳು ಹತ್ತಿರ ಬಂದು ದೂರ ಸರಿಯುವ, ದೂರಾಗಿ ಹತ್ತಿರ ಸುಳಿಯುವ ಕಣ್ಣಾ ಮುಚ್ಚಾಲೆಯ ಆಟ. ಅಕ್ಕನಿಗೆ ಚೆನ್ನಮಲ್ಲಿಕಾರ್ಜುನ ಆಟವಾಡಿಸುವುದೂ ಹೀಗೆ. ‘ಭವದ ಮಗಳೆ’ ಎಂದು ಬಳಿಸಾರುತ್ತಾನೆ, ಸನಿಹಕ್ಕೆ ಹೋಗಿ ಕೈ ಹಿಡಿದರೆ ಕನಸಾಗುತ್ತಾನೆ.

ಒಂದು ಎತ್ತರಕ್ಕೆ ಹೋದ ಮೇಲೆ ನೆಟ್ ವರ್ಕ್ ಬಂದಾಯಿತು. ಇನ್ನು ಜಿ.ಪಿ.ಎಸ್. ಎಲ್ಲಿ ? ಆದರೂ ಅಲ್ಲಲ್ಲಿ ಮಾರ್ಗ ಸೂಚಿ, ನಾಮ ಫಲಕಗಳು ಇದ್ದವು. ರಾಕಿ ಪರ್ವತ ಶ್ರೇಣಿಯ ಭೂಪಟವನ್ನೂ ವ್ಯವಸ್ಥಾಪಕರು ಒದಗಿಸಿದ್ದರು. ಅತಿ ಎತ್ತರದ ಆಲ್ಪೈನ್ ಶಿಖರ ತಲಪಿ, ಕಾಫಿ ಕುಡಿದು, ದೇಹ ಬಾಧೆಗಳನ್ನು ತೀರಿಸಿಕೊಂಡಾಯಿತು. ಇನ್ನು ಮರಳಲು ಬೆಟ್ಟ ಇಳಿಯಬೇಕು ! ಸಂಜೆಯೂ ಬೆಟ್ಟದ ಮೇಲೆ ಇಳಿಯುತ್ತಿದೆ. ಒಮ್ಮೆ ಮಳೆ ಇನ್ನೊಮ್ಮೆ, ಆಲಿಕಲ್ಲು ಮತ್ತೊಮ್ಮೆ ಬಿಸಿಲು, ಮೋಡ.. ಕ್ಷಣ ಚಿತ್ತ ಕ್ಷಣ ಪಿತ್ಥ ಈ ಮಂಜುನಾಥನಿಗೆ!!!!!.

ಅದ್ಭುತ, ಭೂಮಾನುಭೂತಿ, ಶಿವಾನುಭವ ಎಂದೆಲ್ಲಾ ಮುಂಬಯಿಯಲ್ಲಿರುವ ಮಗನಿಗೆ ಮನೆಗೆ ಬಂದ ಮೇಲೆ ಮೆಸೇಜ್ ಮಾಡಿದೆ. ಆದರೆ ಪ್ರವಾಸದ ಏರಿಳಿತದ ಹೊತ್ತಿನಲ್ಲಿ, ಏನಾದರೂ ಜೀಪು ಕೆಟ್ಟು ಹೋದರೆ? ಅದನ್ನು ಚಲಾಯಿಸುತ್ತಿರುವ ಮಗನಿಗೆ ಏನಾದರೂ ಆಗಿಬಿಟ್ಟರೆ, ಪ್ರಪಾತದ ಅಂಚಿನಲ್ಲಿ ಸರಿಯುವಾಗ ಆಯ ತಪ್ಪಿದರೆ? ಎನ್ನುವ ಭಯವೂ ಒಳಗೇ ಅವ್ಯಕ್ತವಾಗಿ ಅವಿತು ಕೂತು ಹೆದರಿಸುತ್ತಿತ್ತು. ವಾಹನ ಚಲಾಯಿಸಲು ಸ್ವಲ್ಪವೂ ಆಯಾಸವಾಗದ ಹಾಗೆ ಅದ್ಭುತ ರಸ್ತೆಗಳು!!!! ಮತ್ತು ಅಷ್ಟೇ ಶಿಸ್ತಿನಿಂದ ಸಂಚಾರ ನಿಯಮಗಳನ್ನು ಪಾಲಿಸುವ ಚಾಲಕರು!!! ನಾವು ಕಲಿಯಬೇಕು. ತುಂಬಾ ಕಲಿಯಬೇಕು.

ಇಳಿಯುತ್ತಾ ಇಳಿಯುತ್ತಾ ಮಂಜಿನ ಬೆಟ್ಟಗಳು ದೂರವಾಗತೊಡಗಿದವು. ಶಿವಾನುಭವವೊಂದು ಮಂಜಿನಂತೆ ಮೆಲ್ಲಗೆ ಕರಗತೊಡಗಿತು. ಮುಖ್ಯ ರಸ್ತೆ, ವಾಹನಗಳು ಕಾಣಿಸಿಕೊಂಡು ಒಂದು ರೀತಿಯಲ್ಲಿ ನಿರಾಳವಾಯಿತು. ಆದರೆ ಗಾಡಿ ಒಂದು ತಿರುವಿನಲ್ಲಿ ತಿರುಗಿದಾಗ ಮತ್ತೆ ಬೆಟ್ಟಗಳು, ಪೈನ್ ಮರಗಳ ಕಾಡು ಹತ್ತಿರ ಹತ್ತಿರ ಬರತೊಡಗಿದವು. ಬೆಟ್ಟಗಳ ಸಾಲನ್ನು ನಾವು ಸುತ್ತುತ್ತಿದ್ದೇವೆಯೋ? ಅಥವಾ ಬೆಟ್ಟಗಳೇ ನಮ್ಮನ್ನು ಗಿರಗಿಟ್ಟಲೆ ಆಡಿಸುತ್ತಿವೆಯೋ ಎನ್ನುವಂತೆ!

ಮತ್ತೆ ಮತ್ತೆ ಮಂಜುನಾಥ ಹತ್ತಿರ ಬರತೊಡಗಿದ. ಆದರೆ ಈಗ ಮಂಜುನಾಥ ದೈವಿಕ ಎನಿಸಲಿಲ್ಲ ಭಯಂಕರ ಎನಿಸಿದ. ಮೋಡಗಳು ನಮ್ಮ ಮುಖದ ಮೇಲೆ ಹಾದು ಹೋಗುತ್ತಿದ್ದವು. ಗಾಡಿಯನ್ನು ಆವರಿಸತೊಡಗಿದವು. ಮಂಜು ಮತ್ತೆ ಕೈಗೆ ಹತ್ತಿಗಿಂತ ಮೃದುವಾಗಿ ಹತ್ತಿತು. ಆದರೆ ಅದು ಈಗ ರೋಮಾಂಚನಗೊಳಿಸಲಿಲ್ಲ. ಊರು ಹತ್ತಿರವಾಗಿ ಕಾಡು ಬೆಟ್ಟ ದೂರಾಯಿತು ಎಂದು ನಿರಾಳವಾದ ನಮಗೆ ಅವು ಮತ್ತೆ ಮತ್ತೆ ಎದುರಾಗುತ್ತಿದ್ದವು ಏಕೆ? ಎಲ್ಲಿಯಾದರೂ ನಾವು ದಾರಿ ತಪ್ಪಿರಬಹುದೇ? ಕಾರುಗಳ ಓಡಾಟವೂ ಕಡಿಮೆಯಾಗಹತ್ತಿತ್ತು.

ಅಲ್ಲಿ ಯಾರನ್ನೂ ಯಾರು ರಸ್ತೆ ಕೇಳುವ ಅಭ್ಯಾಸವೇ ಇಲ್ಲ. ಮುಂಬಯಿಯಲ್ಲಾದರೆ ಹೆಜ್ಜೆ ಹೆಜ್ಜೆಗೂ ರಸ್ತೆ ಕೇಳಿ ಅವರು “ಪಾಂಚ್ ಮಿನಿಟ್ ಕಾ ರಸ್ತಾ” ಎಂದು ಅರ್ಧ ಗಂಟೆ ನಡೆಸುತ್ತಿದ್ದರು. ಹೇಳುವುದು ಬಲಗಡೆಯೆಂದು ಆದರೆ ಕೈ ತೋರಿಸುವುದು ಮಾತ್ರ ಎಡಗಡೆಗೆ. ಈ ತಮಾಷೆಯ ಅಭ್ಯಾಸವಿದ್ದ ನಮಗೆ ʼಪಾಂಚ್ ಮಿನಿಟ್ ಕಾ ರಸ್ತಾʼ ತೋರಿಸುವವರೂ ಅಲ್ಲಿ ಯಾರಿಲ್ಲ. ನನಗೆ ಭಯವಾಗತೊಡಗಿತು.

ಜೀಪನ್ನು ನಡೆಸುತ್ತಿದ್ದ ಮಗ ʼನಾವು ದಾರಿ ತಪ್ಪಿರಬಹುದೇʼ ಎಂದು ಬೇರೆ ಹೇಳಿ ನನ್ನ ಹೆದರಿಕೆಯನ್ನು ಹೆಚ್ಚಿಸಿದ. ಅದು ಕೀಟಲೆ ಎನ್ನುವುದನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಇನ್ನು ಪರಿಚಯವಿಲ್ಲದ ಜಾಗಕ್ಕೆ ಬರಬಾರದೆಂದು ಮನಸ್ಸಿನಲ್ಲೇ ನಿಶ್ಚಯಿಸಿಕೊಂಡೆ. ಸುತ್ತಿ ಸುತ್ತಿ ಸುಳಿದು ಆವರಿಸುತ್ತಿದ್ದ ಮಂಜಿನ ಮಾಲೆ ಮುಗಿಯುತ್ತಲೇ ಇಲ್ಲ! ಒಂದು ಗಂಟೆ ಹಾಗೆ “ಬೆಟ್ಟ ಸಾಲು ಮಳೆಗಳ” ಮಧ್ಯೆ ತೊಯ್ದು, ಥರ ಥರ ನಡುಗುವಾಗ ಮುಖ್ಯ ದಾರಿಗೆ “ಎಕ್ಸಿಟ್ʼ ಆಯಿತು ಗಾಡಿ. ಅದು ಹತ್ತಿರದ ದಾರಿಯೆಂದು ಆಮೇಲೆ ಗೊತ್ತಾಯಿತು. ಬದುಕಿದೆಯಾ ಬಡ ಜೀವವೇ ಎಂದು ಕೊಂಡೆ. ಮಗ, ಹೇಗೆ? ಎಂದು ಸೊಟ್ಟಗೆ ನಕ್ಕ. “ಹಿಡಿದ ಮಂಜು ಬೀಳುತ್ತಿತ್ತು” ಭಯ ಕರಗುತ್ತಿತ್ತು.

ಚೆನ್ನಮಲ್ಲಿಕಾರ್ಜುನನ ಶೋಕಿಯೂ ಕರಗಿ ಹೋಯಿತು. ಯಾವ ಜಿ.ಪಿ.ಎಸ್ ಇಲ್ಲದೇ ಸಾಹಸದಿಂದ ಧುಮುಕುವ Man vs Wild ಖ್ಯಾತಿಯ ಬೇರ್ಗ್ರಿಲ್ ನಿಗೆ ಮಾತ್ರ ಚೆನ್ನಮಲ್ಲಿಕಾರ್ಜುನನ ಕನಸು ಕಾಣುವ ಹಕ್ಕಿದೆ. ಪ್ರೇಮ ಎನ್ನುವುದು ಧೀರರ ಸ್ವತ್ತು!

ದುರ್ಗಮ್ಯದೆಡೆಗೆ ಚಲಿಸಬೇಕೆಂದರೆ, ನೆಟ್ ವರ್ಕ್ ನ ಯಾವುದೇ ಹಂಗಿಲ್ಲದೇ, ಹೆಲಿಕಾಪ್ಟರ್ ನಿಂದ ಪೆಸಿಫಿಕ್, ಅಟ್ಲಾಂಟಿಕ್ ಒಳಗೆ ನೇರ ಧುಮುಕುವ, ಆಫ್ರಿಕಾ, ಅಮೆಜಾನ್ ಕಾಡುಗಳಲ್ಲಿ ಒಂಟಿಯಾಗಿ ಓಡಾಡುವ ಸಾಹಸ ಕೈಗೊಳ್ಳುವ ಬೇರ್ ಗ್ರಿಲ್ನ ಎಂಟೆದೆ ಇರಬೇಕು. ನೆಟ್ ವರ್ಕ್ ಎಂದಿದ್ದರೂ ಕೈಕೊಡುವಂತಹುದೇ. ಇನ್ನು ಜಿ.ಪಿ.ಎಸ್. ಯಾವ ಖಾತರಿ? ಜಿ.ಪಿ.ಎಸ್. ಇದ್ದರೂ ಒಂದು ಪಕ್ಷ ಏನು ಮಾಡೀತು? ಅದು ಕೇವಲ ರಸ್ತೆ ತೋರಿಸುತ್ತದೆ ಅಷ್ಟೇ. ಚಲಿಸಬೇಕಾದವರು ನಾವು ತಾನೇ?! ಮೊದಲು ವಾಹನ ಚಲಾಯಿಸುವುದನ್ನು ಕಲಿಯ ಬೇಕು ಅಮೇಲೆ ಜಿ.ಪಿ.ಎಸ್. ಅನ್ನು ಗ್ರಹಿಸುವುದನ್ನು ಆತ್ಮಗತ ಮಾಡಬೇಕು. ಆಮೇಲೆ ಅದನ್ನು ಮರೆತು ಬಿಡಬೇಕು. ಕಲಿಯುವುದೇ ಮರೆಯುವುದಕ್ಕಾಗಿ. ಇಲ್ಲದಿದ್ದರೆ ಹೊಸದಾಗಿ ಕಲಿಯುವುದು ಹೇಗೆ?

ಒಮ್ಮೆ ರಸ್ತೆ ಪರಿಚಯವಾಯಿತೆಂದರೆ ಯಾವ ಜಿ.ಪಿ.ಎಸ್ ಕೂಡ ಬೇಡ. ರಸ್ತೆ ಗುರುತು ಹತ್ತುವವರೆಗೆ ಮಾತ್ರ ಜಿ.ಪಿ.ಎಸ್. ಆಮೇಲೆ ಅದನ್ನು ಒಗೆಯಬೇಕಾದುದೇ ಸರಿ. ಆಗಸಕ್ಕೆ ಒಯ್ಯುವ ಕಾಡ ಪಥಗಳಲ್ಲಿ ಜಿ.ಪಿ.ಎಸ್ ಕೆಲಸ ಮಾಡಲಾರದು. “ಗುರು ಎಂದರೆ ಹೆಗಲ ಮೇಲಿನ ಹೆಣ” ಎಂದು ಸತ್ಯಕಾಮರು ಹೇಳುತ್ತಾರೆ. ಯಾವುದೇ ಒತ್ತಡ ನಿರ್ಬಂಧಗಳಿಲ್ಲದೇ ಹಗುರಾಗಿ ಸ್ವತಂತ್ರವಾಗಿ ನಡೆಯಬೇಕೆಂದರೆ ಅದನ್ನು ಕೆಳಗೆ ಇಳಿಸಲೇಬೇಕು. ೧೨ ಸಾವಿರ ಅಡಿ ಏರಬೇಕೆಂದರೆ ಹೆಣಭಾರವನ್ನು ಹೊತ್ತು ಸಾಗುವುದಾದರೂ ಹೇಗೆ? ಹೆಣದ ಮೇಲೆ ನಿಗಾ ಇಡುವ ಭರದಲ್ಲಿ ದಾರಿಯೇ ತಪ್ಪಿಬಿಡಬಹುದು.

‍ಲೇಖಕರು avadhi

June 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: