ಮನೆಯ ಹೊರಗಡೆ ಬೆಕ್ಕು

ಅವಳು ಮತ್ತು ಮಗಳು

ಟಿ ಎಸ್ ಶ್ರವಣಕುಮಾರಿ

ಮನೆಯ ತಿರುವಿಗೆ ತಿರುಗುವಾಗಲೇ ಮಾಲಿನಿಗರ್ಥವಾಗಿಹೋಯಿತು ʻಜ್ಯೋತ್ಸ್ನಾ ಇನ್ನೂ ಮನೆಗೆ ಬಂದಿಲ್ಲ ಅಂತʼ. ಮನೆಯೊಳಗಿನ ದೀಪ ಉರಿಯುತ್ತಿಲ್ಲ. ಆಗಲೇ ಏಳು ಗಂಟೆ. ಎಷ್ಟು ಸಲ ಹೇಳಿದರೂ ಈ ಹುಡುಗಿಗೆ ಅರ್ಥವಾಗುವುದೇ ಇಲ್ಲವಲ್ಲ. ಕತ್ತಲಾಗೋ ಮುಂಚೇನೇ ಮನೆ ಸೇರ್ಕೋ. ಒಬ್ಬೊಬ್ಬರೇ ಹುಡುಗಿಯರು ರಾತ್ರಿಯ ಹೊತ್ತು ತಿರುಗಾಡೋದು ಒಳ್ಳೇದಲ್ಲʼ ಅಂತ ಇದುವರೆಗೆ ಒಂದು ಸಾವಿರ ಸಲವಾದರೂ ಹೇಳಿರಬಹುದೇನೋ.

ಮೊದಮೊದಲು ಬಾಯಿಮಾತಿಗಾದರೂ ʻಸರಿʼ ಎನ್ನುತ್ತಿದ್ದವಳು ಇತ್ತೀಚೆಗೆ ಅದು ತನಗೆ ಹೇಳಿದ್ದೇ ಅಲ್ಲವೇನೋ ಅನ್ನುವಂತೆ ಎದುರಿನಿಂದ ಹೊರಟೇಹೋಗುತ್ತಾಳೆ. ಹಿಡಿದು ನಿಲ್ಲಿಸಿ ಕೇಳಿದರೆ ಉದ್ಧಟತನದಿಂದ ಕೇಳುತ್ತಾಳೆ “ನೀನು ಎಷ್ಟು ಹೊತ್ತಿಗೆ ಬರ್ತೀಯ ದಿನಾನೂ? ನಿನಗೊಂದು ನನಗೊಂದು ರೂಲ್ಸ್‌ ಯಾಕೆ” ಅಂತ. ಏನುತ್ತರ ಹೇಳಬೇಕು ಇಂತ ಪ್ರಶ್ನೆಗೆ? ಅವಳು ನಾನೂ ಒಂದೇನೇ….! ನನ್ನ ವಯಸ್ಸೇನು, ಜವಾಬ್ದಾರಿಯೇನು, ಕೆಲಸವೇನು; ಅವಳದೇನು?! ಆದ್ರೂ ಅವಳು ಹಾಗೆ ತಿರುಗಿ ಕೇಳುವಾಗ ತನಗ್ಯಾಕೆ ಏನೂ ಮಾತಾಡಕ್ಕೆ ತೋಚಲ್ಲ?? ಮನೆಯ ಗೇಟನ್ನು ತೆರೆಯುತ್ತಾ ಯೋಚಿಸತೊಡಗಿದಳು.

ಕೆಳಗಿನ ಮನೆಯ ಶೀಲಾ ದೀಕ್ಷಿತ್‌ ಬಾಗಿಲಲ್ಲೇ ನಿಂತಿದ್ದವಳು “ಇನ್ನೂ ಮಗಳು ಬಂದ ಹಾಗಿಲ್ಲ” ಅನ್ನುತ್ತಾ ಮಾತಿಗೆಳೆದಳು. ಆ ಮಾತಲ್ಲಿ ಇರುವುದು ವ್ಯಂಗ್ಯವೋ ಇಲ್ಲವೇ ಸಹಜವಾಗೇ ಕೇಳಿದಳೋ… ಯೋಚಿಸಲೂ ಮನಸ್ಸಾಗಲಿಲ್ಲ. ಬರೀ ಹ್ಞೂಗುಡುತ್ತಾ ಮೆಟ್ಟಿಲ ಕಡೆಗೆ ಸಾಗಿದಳು. “ಯಾವುದೋ ಪೋಸ್ಟ್‌ ಬಂದಿತ್ತು; ಮಧ್ಯಾಹ್ನದಿಂದ ಕಾಯ್ತಿದೀನಿ. ನೀವಿಬ್ರೂ ಬರಲಿಲ್ಲ; ತೆಗೆದುಕೊಂಡು ಬಂದೆ ಇರಿ” ಎನ್ನುತ್ತಾ ಒಳಹೋದಳು. ಸೌಜನ್ಯಕ್ಕಾಗಿ ಮಾಲಿನಿ ಅವರ ಮನೆಬಾಗಿಲಿಗೆ ಹೋದಳು.

ಕವರುಗಳನ್ನು ಕೈಗಿಡುತ್ತಾ “ಆದ್ರೂ ನೀವು ಹೇಳ್ಬೇಕು ನೋಡಿ… ನಿಮಗೇನೋ ಕೆಲಸ, ಅನಿವಾರ್ಯ. ಹೆಣ್ಣುಮಕ್ಕಳು ಇಷ್ಟು ಹೊತ್ತಾದ್ರೂ ಬರ್ದೇ ಹೋದ್ರೆ ಆತಂಕ ಆಗಲ್ವೆ? ನಾನಂತೂ ನಮ್ಮ ದೀಪೂಗೆ ಸ್ಟ್ರಿಕ್ಟ್‌ ಆಗಿ ಹೇಳಿಬಿಟ್ಟಿದೀನಿ. ಏನು ಓಡಾಟ ಇದ್ರೂ ಸಂಜೆ ಕತ್ತಲಾಗಕ್ಮುಂಚೇನೆ ಅಂತ. ಕಾಲ ಕೆಟ್ಟು ಹೋಗಿದೆ. ನಮ್ಮ ಏರಿಯಾದಲ್ಲೋ ಏಳು ಗಂಟೆ ಆದ್ಮೇಲೆ ಮನುಷ್ಯರು ಓಡಾಡೋದೇ ಇಲ್ಲ; ಏನಿದ್ರೂ ಅಲ್ಲೊಂದು ಇಲ್ಲೊಂದು ವೆಹಿಕಲ್‌ ಅಷ್ಟೇ.. ನಾಳೆ ಏನಾದ್ರೂ ಆದ್ರೆ…” ಇನ್ನೂ ಮುಂದುವರೆಸುತ್ತಾ ಇದ್ದಳೇನೋ, ಇನ್ನೊಂದು ನಿಮಿಷ ಅಲ್ಲೇ ನಿಂತಿದ್ದರೆ ಸಹನೆಯ ಕಟ್ಟೆಯೊಡೆದು ಏನಾದರೂ ಮಾತು ಬಂದೇ ಬಿಡುತ್ತೆ ಅನ್ನೋ ಭಯದಿಂದ ಮಾಲಿನಿ “ಪೋಸ್ಟ್‌ ತೆಗೆದುಕೊಂಡಿದ್ದಕ್ಕೆ ಥ್ಯಾಂಕ್ಸ್.‌ ತುಂಬಾ ತಲೆ ನೋಯ್ತಾ ಇದೆ; ಬರ್ತೀನಿ” ಎನ್ನುತ್ತಾ, ಹೆಚ್ಚು ಕಡಿಮೆ ಲೆಟರುಗಳನ್ನು ಅವಳ ಕೈಯಿಂದ ಕಿತ್ತುಕೊಂಡು ಸರಸರನೆ ಮೆಟ್ಟಿಲೇರತೊಡಗಿದಳು. ಪರ್ಸಿನಿಂದ ಕೀಲಿಕೈ ತೆಗೆದು ಬಾಗಿಲು ತೆರೆಯ ಹೊರಟರೆ ಕಣ್ಣು ಮಬ್ಬುಮಬ್ಬಾಗಿ ಕೀಲಿಯ ರಂದ್ರಕ್ಕೆ ತಡಕಾಡುವಂತಾಯಿತು. ʻಹ್ಞೂಂ! ಆಗ್ಲೇ ನಲವತ್ತೈದು ವರ್ಷ ದಾಟ್ತು; ಆದಷ್ಟು ಬೇಗ ಕನ್ನಡಕ ತೊಗೋಬೇಕುʼ ಅಂದುಕೊಳ್ಳುತ್ತಾ ಅಂತೂ ಬಾಗಿಲು ತೆರೆದಳು…

ನಿಶ್ಯಬ್ದವಾಗಿದ್ದ ಮನೆ. ಬೆಳಗ್ಗೆ ತಾನು ಹೋಗುವಾಗ ಎಲ್ಲೆಲ್ಲಿ ಏನೇನೋ ಬಿಸಾಡಿತ್ತೋ ಈಗ್ಲೂ ಹಾಗೇ ಇದೆ. ಅಂದರೆ ತನಗಿಂತ ಮುಂಚೆ ʻಪ್ರಾಕ್ಟಿಕಲ್ಸ್‌ ಇದೆʼ ಅಂತ ಹೊರಟಿದ್ದವಳು ಮನೆಗೆ ಬಂದೇ ಇಲ್ಲ. ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟವಳು. ಇವತ್ತು ಬುಧವಾರ; ಮಧ್ಯಾಹ್ನ ಎರಡು ಗಂಟೆ ತಂಕ ಮಾತ್ರ ಕಾಲೇಜಿರೋದು. ಹಾಗಾದ್ರೆ ಎಲ್ಲಿ ಹೋದ್ಳು? ಫ್ರೆಂಡ್ಸ್‌ ಜೊತೆ ಸಿನಿಮಾ?? ಇರ್ಬೇಕು ಅದಕ್ಕೇ ಇಷ್ಟೊತ್ತು. ಅವಳ ಪ್ರೆಂಡ್ಸ್‌ ಯಾರೊಬ್ರೂ ಸರಿಯಿಲ್ಲ… ಯಾರ್ಗೂ ಓದಿನ ಬಗ್ಗೆ ಸೀರಿಯಸ್‌ನೆಸ್‌ ಇಲ್ಲ. ಕಾಲೇಜೂಂದ್ರೆ ಮನೆಯಿಂದ ಆಚೆಗೆ ಹೋಗಿ ಮೆರೆಯೋಕೆ ಸಿಕ್ಕಿರೋ ಪಾಸ್‌ಪೋರ್ಟ್‌ ಅಂತ ತಿಳ್ಕೊಂಡಿದಾರೆ. ಅವ್ರ ಮಾತಿನ್ಮದ್ಯೆ ಒಂದು ದಿನವಾದ್ರೂ ಪಾಠದ ವಿಷ್ಯ ಬಂದ್ರೆ ನನ್ನಾಣೆ. ಸದಾ ಲೆಕ್ಚರರ್ಸ್‌ ಬಗ್ಗೆ ಏಕವಚನದಲ್ಲಿ ಏನಾದರೂ ಕಾಮೆಂಟ್ಸ್…‌ ಕ್ಲಾಸ್‌ ಬಂಕ್‌ ಮಾಡಿ ಸಿನಿಮಾಗೋ, ಪಾರ್ಟಿಗೋ ಸುತ್ತೋ ಐಡಿಯಾಗಳು. ಕಾಲೇಜು ಶುರುವಾದಾಗ್ನಿಂದ ಒಂದೇ ಒಂದು ಟೆಸ್ಟಿಗಾದ್ರೂ ಅಟೆಂಡಾಗಿದ್ರೆ!! ಇವ್ಳು ತಾನೇ ಇನ್ನೇನು? ಇವ್ಳ ಬಗ್ಗೆ… ಅವ್ರ ಅಮ್ಮಂದ್ರೂ… ನನ್ನ ಹಾಗೇ ಯೋಚಿಸ್ತಾರೇನೋ… ಅನ್ನಿಸಿ ಒಂದು ತರಾ ಪೆಚ್ಚಾಯಿತು…

ಬಟ್ಟೆ ಬದಲಿಸಿ ಮುಖ ತೊಳೆಯುವಾಗ ಶೀಲಳೊಂದಿಗೆ ಮಾತಾಡುವಾಗ ಕರೆದಿದ್ದ ತಲೆನೋವು ಶುರುವಾಗೇಬಿಟ್ಟಿತೇನೋ ಅನ್ನಿಸಿತು. ತಕ್ಷಣ ಒಂದು ಲೋಟ ಕಾಫಿ ಕುಡಿಯಲೇ ಬೇಕು ಅನ್ನಿಸಿ ಅಡುಗೆಮನೆಗೆ ಹೋಗಿ ಒಲೆಯ ಮೇಲೆ ನೀರಿಟ್ಟವಳು ಫ್ರಿಜ್ನಿಂದ ಹಾಲಿನ ಪಾತ್ರೆ ತೆಗೆಯಲು ಹೋದರೆ ಅಲ್ಲಿಲ್ಲ. ʻಅರೆ, ಇವಳಿಗೆ ಬೆಳಗ್ಗೆ ಒಳಗಿಡು ಅಂತ ಹೇಳಿ ಸ್ನಾನಕ್ಕೆ ಹೋಗಿದ್ದು. ಎಲ್ಲಿಟ್ಟಳು? ಸ್ವಲ್ಪವೂ ಜವಾಬ್ದಾರಿ ಇಲ್ಲದ ಹುಡುಗಿʼ ಮತ್ತೊಮ್ಮೆ ಬೈದುಕೊಳ್ಳುತ್ತಾ ಅಡುಗೆ ಕಟ್ಟೆಯ ಕಡೆ ಕಣ್ಣು ಹಾಯಿಸಿದದರೆ ಅಣಕಿಸುತ್ತಾ ಅಲ್ಲೇ ಕುಳಿತಿತ್ತು ಖಾಲಿಯಾದ ಹಾಲಿನ ಪಾತ್ರೆ. ತಲೆಯೆತ್ತಿ ನೋಡಿದಳು. ಮೇಲಿನ ಕಿಟಕಿ ಪೂರಾ ತೆರೆದುಕೊಂಡಿದೆ. ಹಾಲೆಲ್ಲಾ ಬೆಕ್ಕಿಗೆ ನೈವೇದ್ಯ! ಅಸಹನೆಯಿಂದ ಮೈಯೆಲ್ಲಾ ಪರಚಿಕೊಳ್ಳುವಂತಾಯಿತು. ಕುದಿಯುತ್ತಿದ್ದ ನೀರಿಗೆ ಕಾಫಿಪುಡಿ ಬೆರೆಸಿ ಡಿಕಾಕ್ಷನ್‌ ತಯಾರಿಸಿ ಬ್ಲಾಕ್ ಕಾಫಿಯನ್ನೇ ಮಾಡಿಕೊಂಡಳು. ಸಕ್ಕರೆಯಿಲ್ಲದೆ ಇದನ್ನು ಕುಡಿಯೋದಾದರೂ ಹೇಗೆ? ಹಾಲಿದ್ದರೆ ಸಕ್ಕರೆ ಬೇಕು ಅನ್ನಿಸೋದಿಲ್ಲ. ಶುಗರ್‌ ಶುರುವಾಗಿ ಎರಡು ವರ್ಷವಾಗಿದೆ. ಹೆಚ್ಚೇನೂ ಇಲ್ಲ. ಆದಷ್ಟೂ ಡಯಟ್‌ನಲ್ಲೇ ಸರಿಮಾಡಿಕೊಳ್ತಿದಾಳೆ. ʻಚೆಕ್‌ ಮಾಡಿಸಿ ಮೂರು ತಿಂಗಳೇ ಆಯಿತು. ಈ ಭಾನುವಾರ ಹೋಗಿ ಬರಬೇಕುʼ ಎಂದುಕೊಳ್ಳುತ್ತಾ ʻಹಾಳಾಗಿ ಹೋಗಲಿʼ ಎಂದು ಒಂದು ಚಮಚೆ ಸಕ್ಕರೆಯನ್ನೇ ಡಿಕಾಕ್ಷನ್ನಿಗೆ ಕಲಕಿ ಲೋಟವನ್ನೆತ್ತಿಕೊಂಡು ಹಾಲಿಗೆ ಹೋಗಿ ಆರಾಮಾಗಿ ಕೂತು ಕುಡಿಯತೊಡಗಿದಳು.

ಬೆಳಗ್ಗೆ ಮಾಡಿದ ಅಡುಗೆಯೆಲ್ಲಾ ಹಾಗೇ ಇರಬೇಕು. ಇವಳು ಮಧ್ಯಾಹ್ನ ಊಟ ಮಾಡಿಲ್ಲವಲ್ಲ. ಇವತ್ತೇನು! ಕಾಲೇಜು ಮೆಟ್ಟಿಲು ಹತ್ತಿದಾಗಿನಿಂದ ಪ್ರತಿದಿನವೂ ಇದೇ ಕತೆ. ಏನೋ ಒಂದು ನೆಪ ದಿನವೂ ಹೊರಗೆ ತಿನ್ನೋದು… ಯಾವುದೋ ಫ್ರೆಂಡ್ ಹುಟ್ಟುಹಬ್ಬ,.. ಯಾರೋ ಫ್ರೆಂಡು ಹೊಸ ಮೊಬೈಲ್‌ ಕೊಂಡಳು,.. ಡ್ರೆಸ್‌ ಕೊಂಡಳು… ಯಾವುದೋ ಹುಡುಗನ ಹತ್ತಿರ ಬೆಟ್ಸ್‌ ಕಟ್ಟಿ ಗೆದ್ದಿದ್ದಕ್ಕೆ ಅವನು ಎಲ್ಲರಿಗೂ ಪಾರ್ಟಿ ಕೊಡಿಸಿದ…. ಈ ಹುಡುಗರೂ ಬೆಟ್ಸ್‌ ಸೋಲೋದಕ್ಕೇ ಕಾಯ್ತಿರ್ತಾವೇನೇ ಅನ್ನಿಸಿದೆ ಎಷ್ಟೋ ಸಲ. ವಾರದಲ್ಲೆರಡು ದಿನ ಮಧ್ಯಾಹ್ನ ಎರಡು ಗಂಟೆಗೇ ಕಾಲೇಜು ಮುಗಿಯತ್ತೆ. ಅವತ್ತಾದರೂ ಮನೆಗೆ ಬಂದು ತಿನ್ನೋದಕ್ಕೇನು. ʻಬೆಂಗ್ಳೂರಲ್ಲಿ ಬೀದಿಗೆ ನಾಲ್ಕು ಹೋಟೆಲ್ಲಿದೆ. ಮನೆಗೆ ಬಂದು ಆರಿ ತಂಗಳಾಗಿರೋದನ್ನ ತಿನ್ನೋಕೆ ಯಾರಿಗೆ ತಾನೆ ಮನಸ್ಸು ಬರತ್ತೆʼ ಅನ್ನೋ ಉಡಾಫೆ ಮಾತು ಬೇರೆ. ಆಫೀಸಲ್ಲಿ ಕ್ಯಾಂಟೀನಿದ್ದರೂ ತಾನು ದಿನವೂ ಮನೆಯಿಂದ ಡಬ್ಬಿ ತೆಗೆದುಕೊಂಡು ಹೋಗಲ್ಲವೇ… ಪ್ರಾಯಶಃ ನಂಗೆ ಮಧ್ಯಾಹ್ನ ಬಿಸಿಯಾಗಿ ಊಟಮಾಡಿ ಗೊತ್ತೇ ಇಲ್ಲವೇನೋ. ಶಾಲೆ, ಕಾಲೇಜು, ಹಿಂದೆಯೇ ಕೆಲಸ ಸಿಕ್ಕಿದ್ದು… ಮನೆಯಲ್ಲಿದ್ದೇ ಗೊತ್ತಿಲ್ಲ. ರಜಾ ದಿನದಲ್ಲೂ ಅಡುಗೆ ಒಂದು ಕೆಲಸ ಎನ್ನುವ ಹಾಗೆ ಬೆಳಗ್ಗೆಯೇ ಮಾಡಿ ರೂಢಿಯಾಗಿದೆ. ಮನೆಯ ಡಸ್ಟಿಂಗ್‌, ಬಟ್ಟೆ ಒಗೆಯುವುದು, ಇಸ್ತ್ರಿ ಮಾಡಿಟ್ಟುಕೊಳ್ಳೋದು…..ಹೀಗೇ ಬೇಕಾದಷ್ಟು ಕೆಲಸ ಕಾದು ಕುಳಿತಿರುತ್ತಲ್ಲ ಆ ದಿನಕ್ಕೆ.

ಗಡಿಯಾರದ ಕಡೆ ಕಣ್ಣು ಹೊರಳಿತು. ಆಗಲೇ ಎಂಟು ಗಂಟೆ. ಏನಾಗಿದೆ ಈ ಹುಡುಗಿಗೆ? ಇನ್ನೂ ಪತ್ತೆಯಿಲ್ಲವಲ್ಲ… ಕಾಫಿಗೆ ತಲೆನೋವು ಕಡಿಮೆಯಾಗುತ್ತಿಲ್ಲ. ಊಟವಾದ ಮೇಲೆ ಒಂದು ಪೈನ್‌ ಕಿಲ್ಲರ್‌ ತೊಗೋಬೇಕು. ಹಾಲಿನ ದೊಡ್ಡ ದೀಪ ಕಣ್ಣಿಗೆ ಚುಚ್ಚುತ್ತಿದೆಯೆನ್ನಿಸಿ ಆರಿಸಿ ಬಂದು ಕಿಟಕಿಯ ಬಳಿ ನಿಂತಳು… ದೂರದಲ್ಲೆಲ್ಲಾದರೂ ಬರುವುದು ಕಾಣುತ್ತೇನೋ ಅನ್ನುವ ಆಸೆ… ಹೊಸ ಎಕ್‌ಸ್ಟೆನ್ಷನ್, ಹೆಚ್ಚು ಜನಸಂಚಾರವಿಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಸ್ಕೂಟರಿನಲ್ಲೋ ಕಾರಿನಲ್ಲೋ ಹೋಗುತ್ತಿದ್ದಾರೆ. ನಡೆದು ಓಡಾಡುವವರೇ ಕಡಿಮೆ…. ಕಣ್ಣು ಸೋಲತೊಡಗಿತು. ಬೆಳಗ್ಗೆ ಒಂಭತ್ತು ಗಂಟೆಯಿಂದ ಸಂಜೆ ಆರರವರೆಗೆ ಒಂದೇ ಸಮನೆ ಕತ್ತೆ ದುಡಿತ… ಕಣ್ಣು ಮುಚ್ಚಿಕೊಂಡು ಹೋಗುತ್ತಿದೆ. ಆಫೀಸಿನಿಂದ ಬರುವಾಗಲೇ ಇವತ್ತು ಬೇಗ ನಿದ್ದೆ ಮಾಡಿಬಿಡಬೇಕು ಎಂದುಕೊಂಡಿದ್ದಳು. ಆದರೆ…. ಈ ಹುಡುಗಿ ಬರದೇ ನಿದ್ದೆ ಮಾಡುವುದಾದರೂ ಹೇಗೆ??

ಅಡುಗೆಮನೆಯಲ್ಲಿ ಪಾತ್ರೆಯುರುಳಿದ ಸದ್ದು… ಆ ಕಳ್ಳ ಬೆಕ್ಕು ಮತ್ತೆ ಬಂತೇನೋ… ಅಡುಗೆ ಮನೆಗೆ ಹೋಗಿ ಲೈಟ್‌ ಹಾಕಿದರೆ ಕಿಟಕಿಯಿಂದ ನುಸುಳಿಕೊಂಡು ಹೊರಗೆ ಹಾರುತ್ತಿತ್ತು ಆ ಕರಿಬೆಕ್ಕು. ಏನಾದರೂ ಮಾಡಬೇಕು. ಆಗಾಗ ಬಂದು ಹೀಗೆ ಕದ್ದು ಹಾಲು, ಮೊಸರು ಕುಡಿದು ಓಡಿ ಹೋಗತ್ತೆ.. ಗ್ಯಾಸ್‌ ಒಲೆ ಇರೋದ್ರಿಂದ ಗಾಳಿಯಾಡಲಿ ಅಂತ ಕಿಟಕಿ ತೆರೆದಿಡೋದೇ ತಪ್ಪಾಗಿದೆ. ಅದಕ್ಕೇ ಹಾಲು ಮೊಸರು ಎಲ್ಲಾನೂ ಸದಾ ಪ್ರಿಜ್‌ನಲ್ಲೇ ಇಡೋದು. ಒಂದು ಸಲ ಮರೆತರೂ ಈ ಶಿಕ್ಷೆ ತಪ್ಪಿದ್ದಲ್ಲ. ಈ ಭಾನುವಾರ ಯಾರಾದ್ರೂ ಕಾರ್ಪೆಂಟರನ್ನ ಕರೆಸಿ ಕಿಟಕಿಗೆ ಒಂದು ಮೆಷ್‌ ಹೊಡೆಸಿಬಿಡಬೇಕು ಎಂದುಕೊಳ್ಳುತ್ತಾ ಅಡುಗೆಮನೆಯ ಬಾಗಿಲನ್ನು ಎಳೆದುಕೊಂಡು ಬಂದಳು.

ಆಗಲೇ ಎಂಟೂವರೆ… ಮತ್ತೆ ಕಿಟಕಿಗೆ ಬಂದು ನಿಂತಳು… ಹೊಟ್ಟೆಯಲ್ಲಿ ಏನೋ ಅರಿವಾಗದ ಸಂಕಟ… ಈಗ ಮೋನಿಯಾದರೂ ಇದ್ದಿದ್ದರೆ! ಅವಳ ಕಣ್ಣುಗಳು ಹನಿಗೂಡಿದವು. ಛೇ! ನಾನೆಷ್ಟು ಮೋಸ ಹೋಗಿಬಿಟ್ಟೆ… ಎಲ್ಲ ಜವಾಬ್ದಾರಿಯನ್ನೂ ನನ್ನ ತಲೆಮೇಲೆ ಹಾಕಿ ತಾನು ಹೇಗೆ ಜಾರಿಕೊಂಡುಬಿಟ್ಟ… ನಾನೇಕೆ ಅವನಿಗೆ ಮರುಳಾಗಿದ್ದಿದ್ದು?! ಅವನ ವಿದ್ಯೆಗೆ? ಬುದ್ದಿಮತ್ತೆಗೆ? ವ್ಯಕ್ತಿತ್ವಕ್ಕೆ?…. ಅಥವಾ… ಅಥವಾ… ಸ್ವಲ್ಪ ಕುಳ್ಳಗೆ, ದಪ್ಪಗೆ, ಮಾಸಲು ಬಣ್ಣದ, ಯಾರೂ ಗುರುತಿಸದ ನನ್ನನ್ನೂ, ನನ್ನ ವ್ಯಕ್ತಿತ್ವವನ್ನೂ, ಬುದ್ಧಿವಂತಿಕೆಯನ್ನೂ ಅವನು ಗುರುತಿಸಿದನೆಂದೇ?! ಸಾವಿರ ಜನರಲ್ಲಿ ಸಲೀಸಾಗಿ ಬೆರೆತು ಹೋಗಬಹುದಾಗಿದ್ದ ನನ್ನನ್ನು ಬೇರೆಯವರು ಗಮನಿಸುತ್ತಿದ್ದದ್ದು ಚರ್ಚಾ ಸ್ಪರ್ಧೆಗಳಲ್ಲಿ, ವಿಚಾರ ಸಂಕಿರಣಗಳಲ್ಲಿ, ಸಂವಾದಗಳಲ್ಲಿ….ಪರೀಕ್ಷೆಯ ಫಲಿತಾಂಶಗಳಲ್ಲಿ… ಸ್ವಭಾವತಃ ನಾನು ಅಷ್ಟೊಂದು ಸ್ನೇಹಪರಳೂ ಅಲ್ಲ.. ಅದ್ಯಾಕೋ ಫ್ಲರ್ಟ್‌ ಮಾಡೋ ಹುಡುಗೀರನ್ನ ಕಂಡರೆ ಆಗ್ತಿರಲಿಲ್ಲ… ಅಥವಾ.. ಅಥವಾ.. ಹುಡುಗರನ್ನು ಆಕರ್ಷಿಸುವಂತ ಏನೋ ಒಂದು ನನ್ನಲ್ಲಿಲ್ಲವೆಂದು ನನಗನ್ನಿಸಿತ್ತೇ?? ಆ ಕೀಳರಿಮೆಯನ್ನು ಮುಚ್ಚಲು ನನ್ನ ಸರಿಸಮಾನರಾರೂ ಇಲ್ಲ ಅನ್ನುವಂತೆ ತೋರಿಸಿಕೊಳ್ಳುತ್ತಿದ್ದೆನೆ?? ಓದುತ್ತಲೇ ಹೋದೆ…….. ಡಿಗ್ರಿಯಾದ ಮೇಲೆ ಮಾಸ್ಟರ್ಸ್‌, ಅದಾದ ಮೇಲೆ ಪಿ.ಹೆಚ್.ಡಿ ಅಲ್ಲಿಂದ ಸೀದಾ ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ. ವರ್ಷಗಳು ಕಳೆಯುತ್ತಾ ಹೋದವು. ಅಪ್ಪ ಅಮ್ಮ ಮದುವೆಗೆ ಎಷ್ಟೋ ಪ್ರಯತ್ನ ಪಟ್ಟರೂ… ಕೆಲವರಿಗೆ ನನ್ನ ರೂಪ ಸಾಲದು, ಕೆಲವರಿಗೆ ನನ್ನ ವಿದ್ಯೆ ಹೆಚ್ಚು, ಹಾಗೂ ಮೆಚ್ಚಿಕೊಂಡವರು ನನ್ನ ಸಂಬಳವನ್ನು ಹೊರತು ನನ್ನನ್ನಲ್ಲ. ನೋಡುನೋಡುತ್ತಾ ಮೂವತ್ತು ವರ್ಷ ಹೀಗೇ ದಾಟಿಹೋಯಿತು.

***

ಆಗ ಸಹೋದ್ಯೋಗಿಯಾಗಿ ಬಂದವನು ಮೋಹನ್‌ – ಈ ಮೋನಿ… ನನ್ನ ಬುದ್ಧಿವಂತಿಕೆಯನ್ನು ನಿಜವಾಗಿ ಮೆಚ್ಚಿಕೊಂಡವನು.. ನನ್ನ ಸಾಮರ್ಥ್ಯವನ್ನು ಗುರುತಿಸಿದವನು.. ಮನಸ್ಸನ್ನು ಅರ್ಥಮಾಡಿಕೊಂಡು ಸ್ನೇಹಿತೆಯಾಗಿ ಕಂಡವನು. ನಮ್ಮ ನಡುವಿನ ಮೆಚ್ಚುಗೆ, ಸ್ನೇಹ ಪ್ರೇಮವಾಗಲು ಇನ್ನೆರಡು ವರ್ಷಗಳೇ ಆದವೇನೋ. ಕಡೆಗೊಂದು ದಿನ ಮದುವೆಯ ನಿರ್ಧಾರ ಮಾಡಿದ್ದಾಯಿತು. ಅಮ್ಮ ಜಾತಿ ಯಾವುದೆಂದು ಕೇಳಿದಳು ʻಗೊತ್ತಿಲ್ಲ; ಆದರೆ ನಮ್ಮ ಜಾತಿಯಂತೂ ಅಲ್ಲʼ ಎಂದೆ. ಅಪ್ಪ ಅವನ ಹಿನ್ನಲೆಯನ್ನು ಕೇಳಿದರೆ ಅದೂ ಗೊತ್ತಿಲ್ಲವೆಂದೆ. ʻಏನೂ ಗೊತ್ತಿಲ್ಲದೆ ಹೇಗೆ ಮದುವೆಯಾಗ್ತೀಯಾ?ʼ ಅಂದರು. ಆದರ್ಶದ ಹುಚ್ಚು! ʻನನಗೆ ಭೂತಕಾಲದಲ್ಲಿ ಆಸಕ್ತಿಯಿಲ್ಲ. ಎರಡು ವರ್ಷದಿಂದಲ್ಲೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದೀವಿ. ಭವಿಷ್ಯದಲ್ಲಿ ಚೆನ್ನಾಗಿ ಬಾಳ್ತೀವಿ ಅನ್ನೋ ಭರವಸೆ ಇದೆʼ ಎಂದೆ. ʻಆದರೂ…ʼ ಅಪ್ಪನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ʻಸರಿ, ಎಲ್ಲಾದರೂ ಸುಖವಾಗಿರುʼ ಅಪ್ಪ ಹರಸಿದರು. ರಿಜಿಸ್ಟ್ರಾರ್‌ ಆಫೀಸಿನಲ್ಲಿ ಮದುವೆ. ಬಂದವರು ಆಫೀಸಿನ ಕೆಲ ಸ್ನೇಹಿತರು.. ಅಮ್ಮ ಬರಲಿಲ್ಲ; ಅಪ್ಪ ಹೊರಗಿನವರಂತೆ ಬಂದು ಹೋದರು…..

ಕೆಲವು ವರ್ಷ ಚೆನ್ನಾಗೇ ಕಳೆಯಿತು… ಮಗಳ ಹೆಸರೂ ಅಪ್ಪನದೇ ಆಯ್ಕೆ ʻಅವಳು ಬೆಳದಿಂಗಳು ನಮ್ಮ ಜೀವನದಲ್ಲಿ… ಜ್ಯೋತ್ಸ್ನಾʼ ಎಂದ. ಮಗಳು ಅಪ್ಪನ ಮುದ್ದಿನ ಮಗಳಾಗೇ ಬೆಳೆದಳು.. ನೋಡುವುದಕ್ಕೆ ನಬ್ಬಿಬ್ಬರ ಹಾಗೂ ಅಲ್ಲ. ಯಾರಿಂದ ಬಂತೋ ಅವಳಿಗೆ ಅಂತ ರೂಪ! ನಮ್ಮಿಬ್ಬರದೂ ಸಾಧಾರಣ ರೂಪ.. ಅವಳು ನೂರು ಜನರಲ್ಲೂ ಎದ್ದು ಕಾಣುವ ಸುಂದರಿ! ಜೊತೆಗೆ ಈಗಿನ ಫ್ಯಾಷನ್‌ ಬೇರೆ. ಮೊನ್ನೆ ಅವಳ ಫ್ರೆಂಡ್‌ ಬರ್ತ್‌ಡೇ ಪಾರ್ಟಿ ಮುಗಿಸಿಕೊಂಡು ಬಂದಾಗ ನನ್ನ ದೃಷ್ಟೀನೇ ತಾಕತ್ತೇನೋ ಅನ್ನಿಸ್ತು.. ಎಲ್ಲ ಸರಿ.. ಆದ್ರೆ ಈ ಹುಡುಗಿ ಎಲ್ಲಿ ಹೋದ್ಳು?‌ ಯಾವತ್ತೂ ಇಷ್ಟು ಹೊತ್ತಾಗಿರ್ಲಿಲ್ಲ. ಸಿನಿಮಾಗೆ ಹೋಗಿದ್ರೂ ಇಷ್ಟು ಹೊತ್ಗೆ ಬಂದಿರ್ಬೇಕಿತ್ತು. ಹೋಗ್ಲಿ ಒಂದು ಫೋನಾದರೂ ಮಾಡ್ಬಹುದಿತ್ತಲ್ಲ. ನನ್ನ ಮೊಬೈಲ್‌ ಕೆಟ್ಟು ಎರಡು ದಿನವಾಗಿದೆ. ಒಂದು ವಾರ ಬೇಕು. ಹೋಗಿರೋ ಪಾರ್ಟ್ಸ್‌ ತರಿಸ್ಬೇಕು ಅಂದಿದಾನೆ ಅಂಗಡಿಯೋನು. ಫೋನ್‌ ಮಾಡಿದ್ರೆ ಅವ್ಳಿಗೆ ಇಷ್ಟವಾಗಲ್ಲ ಬೇರೆ.. ʻಮೊಬೈಲ್‌ ಕೊಡ್ಸಿರೋದ್ಯಾಕೆ? ನಾನು ನಿಮ್ಮಮ್ಮ. ನೀನೆಲ್ಲಿದೀಯಾಂತ ತಿಳ್ಕೋಬಾರ್ದʼ ಅಂದಿದ್ದಕ್ಕೆ  ʻಅದೇನು ಫ್ರೆಂಡ್ಸ್‌ ಜೊತೆಗಿದ್ದಾಗ ನೀನು ಟ್ರ್ಯಾಕ್‌ ಮಾಡೋದು. ಎಲ್ರೂ ನಗ್ತಾರೆ. ನಂಗಿಷ್ಟವಾಗಲ್ಲʼ. ಅವತ್ತು ಹೀಗೇ ಲೇಟ್‌ ಆಗಿದ್ದಾಗ ಫೋನ್‌ ಮಾಡಿದ್ದಕ್ಕೆ ಮನೆಗೆ ಬಂದ ಮೇಲೆ ʻಉರಾಉರಾʼ ರೇಗಿ ರೂಮಿಗೆ ಹೋಗಿ ಧಡಾರನೇ ಬಾಗಿಲು ಹಾಕಿಕೊಂಡವಳು ಎಷ್ಟು ಕರೆದರೂ ಊಟಕ್ಕೂ ಬಂದಿರಲಿಲ್ಲ. ʻಇವತ್ತು ಅವ್ಳು ಊಟ ಮಾಡ್ದಿದ್ರೆ ಸಾಯ್ಲಿ. ಅವ್ಳೆಲ್ಲಿದಾಳೆ ಅಂತ ಗೊತ್ತಾಗ್ಬೇಕಲ್ವಾʼ ಅಂದುಕೊಂಡು ಲ್ಯಾಂಡ್‌ಲೈನ್‌ನಿಂದಾನಾದ್ರೂ ಫೋನ್‌ ಮಾಡಿ ನೋಡೋಣ ಎಂದು ರಿಸೀವರ್‌ ಎತ್ತಿಕೊಂಡರೆ ಡಯಲ್‌ ಟೋನ್‌ ಇಲ್ಲ. ಹತಾಶೆಯಿಂದ ಕುಕ್ಕಿದಳು. ಕಾಲೇಜಿರೋದು ಸಿಟಿಯಲ್ಲಿ; ನಾವಿರೋದು ಈ ಮೂಲೆಯಲ್ಲಿ ಹುಡುಕೋದಾದ್ರೂ ಹೇಗೆ? ಯಾಕೋ ತನಗಾರೂ ಇಲ್ಲವೆನಿಸಿ ಕಣ್ಣಲ್ಲಿ ನೀರು ತುಂಬತೊಡಗಿತು….

***

ಎಂಥ ಸ್ವಾರ್ಥಿ…! ಅಥವಾ ಎಲ್ಲ ಗಂಡಸರೂ ಹೀಗೇನೇ?? ಯಾವಾಗ ಅಪಶೃತಿ ಕೇಳಕ್ಕೆ ಶುರುವಾಗಿದ್ದು? ಮಗಳು ಸ್ಕೂಲ್‌ ಸೇರಿದಾಗ, ಅವನು ಬೇರೆ ಕಂಪನಿಗೆ ಬದಲಾಯಿಸಿದ್ದ. ನಾನೂ ಕೆಲಸದಲ್ಲಿ ಇನ್ನೊಂದೆರಡು ಮೆಟ್ಟಲೇರಿದ್ದೆ. ಇಬ್ಬರ ಅಭಿಲಾಷೇನೂ ಒಂದೇ… ʻಮಗಳನ್ನ ಚೆನ್ನಾಗಿ ಓದಿಸಬೇಕು; ಮುಂದೆ ತರಬೇಕು… ಅವಳು ನಮಗಿಂತ ಇನ್ನೂ ಹೆಚ್ಚು ಸಾಧನೆ ಮಾಡಬೇಕು…ʼ ಪ್ರತಿಷ್ಠಿತ ಕಾನ್ವೆಂಟಿನ ಡೊನೇಷನ್ನಿಗೇ ಲಕ್ಷ ಸುರಿದಾಗಿತ್ತು. ಮನೆಯಲ್ಲೂ ಟ್ಯೂಷನ್ನಿಗೆ ಸಾವಿರಾರು ರೂಪಾಯಿ ಸುರೀತಿದ್ದಿದ್ದು. ಆದರೂ ಪ್ರೋಗ್ರೆಸ್‌ ರಿಪೋರ್ಟಿನಲ್ಲಿ ಎಲ್ಲದರಲ್ಲೂ ಬರೀ ಆವರೇಜ್.‌ ʻಇನ್ನೂ ಚಿಕ್ಕವಳು, ಸೀರಿಯಸ್‌ನೆಸ್‌ ಇಲ್ಲ… ಸರಿಹೋಗ್ತಾಳೆ ಬಿಡಿʼ ಅನ್ನೋ ಟ್ಯೂಷನ್‌ ಮಾಸ್ಟರ್‌ ಸಮಾಧಾನ… ಇಲ್ಲ… ಪರಿಸ್ಥಿತಿ ಬದಲಾಗಲೇ ಇಲ್ಲ. ಇನ್ನೂ ಇನ್ನೂ ಹಿಂದೆ ಹೋದಳು… ಸದಾ ಆಟ, ಫ್ರೆಂಡ್ಸ್‌, ಟೀವಿ, ಮೆರೆತ… ನಮಗಿಬ್ಬರಿಗೂ ಬಿಡುವಿಲ್ಲದ ಕೆಲಸ. ಮಾರ್ಕ್ಸ್‌ ಕಾರ್ಡ್‌ ಕೈಗೆ ಬಂದಾಗಷ್ಟೆ ಅದರ ಕಡೆ ಗಮನ… ಸ್ಕೂಲಿನ ಟೀಚರಿಂದ ಇಬ್ಬರಿಗೂ ಕೌನ್ಸೆಲಿಂಗ್…‌ ಇವನಂತೂ ತುಂಬಾ ಅಪ್ಸೆಟ್‌ ಆಗಿದ್ದ. ಮನೆಗೆ ಬಂದವನೇ ʻನೀನು ಕೆಲ್ಸ ಬಿಟ್ಬಿಡು, ಇನ್ಮೇಲೆ ಅವ್ಳನ್ನ ಸರಿಯಾಗಿ ನೋಡ್ಕೋ, ಗಂಡಸು, ನಾನು ದುಡಿಯೋದು ಮನೆಗೆ ಸಾಕು. ನೀನು ಒಬ್ಬ ಗೃಹಿಣಿಯಾಗಿ, ತಾಯಿಯಾಗಿ ಮನೆ ಜವಾಬ್ದಾರಿಯನ್ನು ನೋಡ್ಕೋʼ ಅಂದ. ನಂಗೆ ಮೈಯೆಲ್ಲಾ ಉರಿದುಹೋಯ್ತು. ʻನಾನೇ ಯಾಕೆ ಕೆಲ್ಸ ಬಿಡ್ಬೇಕು. ನೀನೇ ಬಿಟ್ಟು ಅವ್ಳನ್ನ ನೋಡ್ಕೋ. ಸದಾಕಾಲ ಅವ್ಳನ್ನ ತಲೆಮೇಲೆ ಹೊತ್ತು ಮೆರೆಸ್ತೀಯಲ್ಲ; ಇವತ್ಯಾಕೆ ನಿನ್ನಲ್ಲಿ ಈ ಬೇಧ ಕಾಣಿಸ್ತಾ ಇದೆ? ನಾನು ಹೆಂಗ್ಸು, ನೀನು ಗಂಡ್ಸೂಂತ. ನಂಗೂ ನನ್ನ ಕೆಲ್ಸದಲ್ಲಿ ಮೇಲೆ ಬರ್ಬೇಕೂಂತ ಆಸೆ ಇದೆ. ಆ ತಾಕತ್ತೂ ಇದೆ…ʼ ನಾನೂ ಕೂಗಾಡಿದೆ. ಮಾತಿಗೆ ಮಾತು ಬೆಳೀತು. ಸಮಸ್ಯೆಗೆ ಪರಿಹಾರವಿಲ್ಲ… ಕೋಪ ಮಾಡ್ಕೊಂಡು ರೂಮಿಗೆ ಹೋಗಿ ಮಲಗಿದ. ನಾನೂ ಸಿಟ್ಟಿಂದ ಉರಿಯುತ್ತ ವರಾಂಡದಲ್ಲಿ ಕೂತಿದ್ದೆ… ಎಷ್ಟೋ ಹೊತ್ತಿನ ಮೇಲೆ ಒಳಗೆ ಬಂದರೆ ಜ್ಯೋತ್ಸ್ನಾ ಅಲ್ಲೇ ಕಾರ್ಪೆಟ್ಟಿನ ಮೇಲೆ ಮಲಗಿದ್ದಳು… ʻಛೇ! ಎಷ್ಟು ಅವಿದ್ಯಾವಂತರ ಹಾಗೆ ಮಗಳ ಎದುರು ಜಗ್ಳ ಆಡಿದ್ವಲ್ಲʼ ಅಂತ ಖೇದವಾಗಿ ಅವಳನ್ನು ಎತ್ತಿಕೊಂಡು ಹೋಗಿ ರೂಮಲ್ಲಿ ಮಲಗಿಸಿ ಅವಳ ಪಕ್ಕವೇ ಉರುಳಿಕೊಂಡೆ…

ಆದಿನ ಅವನ ಮನಸ್ಸಲ್ಲಿ ಹೊಕ್ಕ ಹುಳ ಅವನ ತಲೆಕೊರೆಯಕ್ಕೆ ಶುರು ಮಾಡ್ತು. ಮನೆ ಪಾಠದ ಮೇಷ್ಟ್ರನ್ನು ಬದಲಾಯ್ಸಿದ್ದಾಯ್ತು… ಪರಿಸ್ಥಿತಿ ಬದ್ಲಾಗಲಿಲ್ಲ. ನಮ್ಮಿಬ್ಬರ ಜಗಳ ತಪ್ಪಲಿಲ್ಲ.. ಪ್ರತಿ ಟೆಸ್ಟಿನ ಮಾರ್ಕ್ಸ್‌ ಬಂದಾಗ್ಲೂ ಮನೆ ಒಂದು ನರಕ… ʻಬೋರ್ಡಿಂಗ್‌ಗೆ ಬಿಡೋಣ್ವಾʼ ಅಂದೆ. ʻಅಪ್ಪ ಅಮ್ಮ ನಮ್ಮ ಕೈಲಾಗದ್ದು ಯಾರೋ ಮೂರ್ನೇವ್ರು ಮಾಡ್ತಾರಾ, ಇನ್ನಷ್ಟು ಹಾಳಾಗ್ತಾಳೆ ಅಷ್ಟೆʼ ಅಂದ. ʻಕೆಲ್ಸ ಬಿಡೋಕೆ ನಿಂಗೇನು ಕಷ್ಟ? ನನ್ಮೇಲೆ ನಂಬಿಕೆ ಇಲ್ವಾʼ ಇದೇ ಪಲ್ಲವಿ. ಪ್ರತಿಸಲ ಅವ್ನು ಈ ಮಾತು ಹೇಳಿದಾಗ್ಲೂ ʻಬಿಡ್ಬಾರ್ದುʼ ಅನ್ನೋ ನನ್ನ ಛಲ ಜಾಸ್ತಿಯಾಗ್ತಾ ಹೋಯ್ತು. ಒಂದಿನ ನಂಗೂ ರೇಗಿ ಕೂಗಾಡಿಬಿಟ್ಟೆ. ʻನಿಂಗೆ ನಿನ್ನ ಕೆಲ್ಸದ ಬಗ್ಗೆ ಎಷ್ಟು ಆಸಕ್ತಿ, ಶ್ರದ್ಧೆ ಇದ್ಯೋ, ನಂಗೂ ಅಷ್ಟೇ ಇದೆ. ನಾನು ನಿನ್ನನ್ನಾದ್ರೂ ಬಿಟ್ಟೇನು; ಕೆಲ್ಸ ಬಿಡಲ್ಲ. ಆ ಮಾತೊಂದು ಬಿಟ್ಟು ಬೇರೆ ಯಾವ ಮಾತು ಬೇಕಾದ್ರೂ ಆಡುʼ. ಅವನ ಅಹಂಗೆ ಬಿದ್ದ ಪೆಟ್ಟು ಅದು! ʻಇದೇ ಮಾತಾ ಇದೇ ಮಾತಾʼ ಮುಖದ ಹತ್ತಿರ ಮುಖ ತಂದು ಕಣ್ಣೊಳಗೆ ಕಣ್ಣಿಟ್ಟು ಕೇಳ್ದ. ʻಹೌದು; ಹೌದೇ ಹೌದುʼ ನಾನೂ ಜಿದ್ದಿಗೆ ನಿಂತೆ. ʻಸರಿ ಹಾಗಾದ್ರೇʼ ಅನ್ನುತ್ತಾ ರೂಮಿಗೆ ಹೋಗಿ ತನ್ನ ಸೂಟ್ಕೇಸನ್ನು ತೆಗೆದುಕೊಂಡು ಹೊರಟೇಬಿಟ್ಟ. ʻಎಲ್ಲೊ ಹೋಗ್ತಾನೆ. ಮಗ್ಳನ್ನ ಬಿಟ್ಟಿರಕ್ಕೆ ಆಗ್ಬೇಕಲ್ಲ. ಕೋಪ ಇಳಿದ್ರೆ ತಾನೇ ಬರ್ತಾನೆʼ ಅಂದ್ಕೊಂಡು ಸುಮ್ನಾದೆ…

ಅಷ್ಟೇ… ಮತ್ತೆ ಅವ್ನು ಬರ್ಲೇ ಇಲ್ಲ. ವಾರವಾಯ್ತು.. ಕೋಪದ ಜಾಗದಲ್ಲಿ ಆತಂಕ ಶುರುವಾಯ್ತು. ಅವನ ಕಂಪನಿಗೆ ಫೋನ್‌ ಮಾಡ್ದೆ. ಒಂದು ತಿಂಗಳು ರಜೆಯ ಮೇಲಿದಾನೆ ಅಂದ್ರು. ಎಲ್ಲಿಗೆ ಹೋಗಿರ್ಬೋದು? ಅವ್ನ ಹೊಸ ಕಂಪನಿಯವರ್ಯಾರೂ ನಂಗೆ ಗೊತ್ತಿಲ್ಲ. ಅಲ್ಲದೆ ಅವ್ರ ಹತ್ರ ಏನೂಂತ ಕೇಳೋದು. ಮಗಳಿಗೋಸ್ಕರಾನಾದ್ರೂ ಬಂದೇ ಬರ್ತಾನೆ ಅನ್ನುವ ನಂಬಿಕೆ… ಬಂದದ್ದು ಡೈವೋರ್ಸ್‌ ನೋಟೀಸು. ನನಗೂ ಹಟವೇ, ಮ್ಯೂಚುಯಲ್‌ ಕನ್ಸೆಂಟ್..‌ ಬೇಗನೇ ಸೆಟಲ್‌ ಆಯ್ತು. ಇನ್ನೂ ಹದಿನಾಲ್ಕು ವರ್ಷ ಆಗಿದ್ರಿಂದ ಜ್ಯೋತ್ಸ್ನಾ ನಂಗೇ ಉಳಕೊಂಡ್ಳು. ಅವ್ಳಿಗೆ ಹದಿನೆಂಟು ವರ್ಷವಾದ್ಮೇಲೆ ಇಚ್ಛೆ ಪಟ್ರೆ ಅಪ್ಪನ ಹತ್ರ ಹೋಗ್ಬಹುದು. ವರ್ಷ ಕಳೆಯೋದ್ರಲ್ಲೇ ವನಿತಾ ಮಂಡಲಿಯ ಒಂದು ಮಗು ಇರೋ ವಿಧವೆಯೊಬ್ಬಳನ್ನ ಮದುವೆಯಾದ ಸುದ್ದೀನೂ ಬಂತು… ಅಲ್ಲಿಗೆ ಒಂದು ದಾರಿ ಸಂಪೂರ್ಣವಾಗಿ ನನ್ನ ಪಾಲಿಗೆ ಮುಚ್ಚಿಕೊಂಡಿತು…

***

ಮತ್ತೆ ಅಡುಗೆ ಮನೆಯಲ್ಲಿ ಸದ್ದು. ಈ ಬೆಕ್ಕು ಹೀಗೇನೇ… ಒಂದು ದಿನ ಅದಕ್ಕೇನಾದರೂ ಸಿಕ್ಕಿಬಿಟ್ರೆ ಸಾಕು; ಮತ್ತೆ ಮತ್ತೆ ಹೊಂಚು ಹಾಕಿಕೊಂಡು ಬರತ್ತೆ. ಬಾಗಿಲು ತೆಗೆದು ಲೈಟ್‌ ಹಾಕಿದಳು. ಕಟ್ಟೆ ಮೇಲೆ ಹುಡುಕುತ್ತಿದ್ದ ಬೆಕ್ಕು ಕಿಟಕಿ ಹಾರಿ ಓಡಿ ಹೋಯ್ತು. ಗಂಟೆಯಾಗಲೇ ಒಂಭತ್ತೂವರೆ. ಇನ್ನೂ ಅವಳು ಬಂದಿಲ್ಲ. ತಲೆನೋವು ಈಗ ಸಿಡಿತಕ್ಕೆ ತಿರುಗಿದೆ. ಸ್ವಲ್ಪ ಏನಾದ್ರೂ ತಿಂದ್ರೆ ಮಾತ್ರೇನಾದ್ರೂ ನುಂಗಬಹುದು ಅಂದುಕೊಳ್ಳುತ್ತಾ ತಟ್ಟೆಯನ್ನು ಕೈಗೆ ತೆಗೆದುಕೊಂಡಳು. ಅರೆ! ಪಾತ್ರೆಯ ಮುಚ್ಚಳ ಕೆಳಕ್ಕೆ ಬಿದ್ದಿದೆ. ಬೆಕ್ಕೇನಾದರೂ ಅನ್ನಕ್ಕೆ ಬಾಯಿ ಹಾಕಿತ್ತೆ? ಮೈ ಹೊತ್ತಿ ಉರಿಯುವಷ್ಟು ಕೋಪ ಬಂತು. ಅನ್ನವನ್ನು ಡಸ್ಟ್‌ಬಿನ್ನಿಗೆ ಸುರಿದು ಪಾತ್ರೆಯನ್ನು ಸಿಂಕಿನಲ್ಲಿ ಕುಕ್ಕಿ ನೀರು ಸುರಿದಳು. ಮತ್ತೆ ಒಲೆ ಹೊತ್ತಿಸಿ ಅಡುಗೆ ಮಾಡಿಕೊಳ್ಳುವ ಮನಸ್ಸಾಗಲಿಲ್ಲ. ಹೊಟ್ಟೆ ಹಸಿಯುತ್ತಿದೆ… ಇವಳು ಬರದ ಆತಂಕ ಒಂದು ಕಡೆ.. ಎಲ್ಲವನ್ನೂ ಮೀರಿಸುವ ತಲೆಸಿಡಿತ.. ಫ್ರಿಜ್ಜಿನ ಬಾಗಿಲನ್ನು ತೆಗೆದಳು.. ಎಂದೋ ತಂದಿಟ್ಟಿದ್ದ ಎರಡು ಪೀಸು ಒಣಕಲು ಬೆಡ್ಡು. ಅದನ್ನೇ ತಿಂದು ಬಾಟಲಿಯಿಂದ ನೀರನ್ನೆತ್ತಿ ಮಾತ್ರೆಯೊಂದಿಗೆ ಗಟಗಟನೆ ಕುಡಿದಳು. ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಕಿಟಕಿಯ ಬಾಗಿಲನ್ನು ಹಾಕಿಕೊಂಡು ಅಡುಗೆ ಮನೆಯ ಬಾಗಿಲು ತೆರೆದಿಟ್ಟು ಹಾಲಿಗೆ ಬಂದಳು. ಗಡಿಯಾರದ ಗಂಟೆಯ ಮುಳ್ಳು ಹತ್ತನ್ನು ದಾಟಿ ನಿಮಿಷದ ಮುಳ್ಳು ಆರರ ಕಡೆ ಓಡುತ್ತಿತ್ತು.

ಅಷ್ಟರಲ್ಲಿ ಫೋನ್‌ ರಿಂಗಾಯಿತು… ಸಧ್ಯ! ಏನಾದರೂ ತಿಳಿಯಬಹುದು… ಓಡಿ ಹೋಗಿ ರಿಸೀವರನ್ನು ಎತ್ತಿಕೊಂಡು ʻಹಲೋʼ ಎಂದು ಹೆಚ್ಚು ಕಡಿಮೆ ಕಿರುಚಿಕೊಂಡಳು. ಆ ಬದಿಯಲ್ಲಿ ಅವಳು ನಿರೀಕ್ಷಿಸಿರದ ದನಿ. ಮೋನಿ ಮಾತಾಡುತ್ತಿದ್ದ. “ಫೋನ್‌ ಇಟ್ಬಿಡ್ಬೇಡ. ನಾನು ಹೇಳೋದನ್ನ ಪೂರ್ತಿ ಕೇಳುಸ್ಕೋ. ಇವತ್ತು ಸಂಜೆ ʻಗುಲ್‌ ಮೊಹರ್‌ʼನಲ್ಲಿ ಕಂಪನಿ ಮೀಟಿಂಗ್‌ ಇತ್ತು. ಮಧ್ಯದಲ್ಲಿ ಬಂದ ಮೊಬೈಲ್‌ ಕಾಲ್‌ ಅಟೆಂಡ್‌ ಮಾಡಕ್ಕೇಂತ ಮೀಟಿಂಗ್‌ ಹಾಲ್ನಿಂದ ಹೊರಗೆ ಬಂದೆ.  ಅಲ್ಲಿ ರೆಸ್ಟೋರೆಂಟ್ನಲ್ಲಿ ಜ್ಯೋತ್ಸ್ನಾನ ಯಾವುದೋ ಹುಡುಗನ ಜೊತೆ ನೋಡ್ದೆ. ಅವರಿಬ್ರೂ ಒಬ್ಬರೊಳಗೆ ಒಬ್ರು ಎಷ್ಟು ಮುಳುಗಿ ಹೋಗಿದ್ರೂಂದ್ರೆ ಅವ್ಳು ನನ್ನನ್ನ ಗಮನಿಸ್ಲೇ ಇಲ್ಲ. ಅಷ್ಟರೊಳ್ಗೆ ಒಳಗಿನಿಂದ ಕರದ್ರು. ಹತ್ತು ಗಂಟೆಯ ತನಕ ಮೀಟಿಂಗ್‌ ನಡೀತಿತ್ತು. ಹೊರಗೆ ಬರುವಾಗ ಅವರಿಬ್ರೂ ಇಲ್ಲ. ಈಗ ಅಲ್ಲಿಂದ ಮನೆಗೆ ಬಂದವ್ನೇ ನಿಂಗೆ ಹೇಳ್ತಿದೀನಿ. ಇದು ಮೊದಲ ಸಲ ಅಲ್ಲ. ಲೇಕ್‌ವ್ಯೂ ಐಸ್‌ಕ್ರೀಂ ಪಾರ್ಲರಿನಿಂದ ಮೊನ್ನೆ ಸಂಜೆ ಹೊರಗೆ ಬರ್ತಾ ಇದ್ದದ್ದನ್ನ ನೋಡ್ದೆ. ನಾನು ಟ್ರಾಫಿಕ್‌ ಮಧ್ಯೆ ಇದ್ದೆ. ಹೋದ್ವಾರ ಇಬ್ರೂ ಗ್ಯಾಲಕ್ಸಿಯಿಂದ ಮಾರ್ನಿಂಗ್‌ ಶೋ ಮುಗಿಸಿಕೊಂಡು ಬರ್ತಾ ಇದ್ರು. ನಾನು ಕಂಪನಿಯ ವೆಹಿಕಲ್‌ನಲ್ಲಿ ಕೂತಿದ್ದೆ. ಅವ್ಳಿಗಿನ್ನೂ ಹದಿನೆಂಟೂ ತುಂಬಿಲ್ಲ. ಅವ್ನು ಯಾರೋ ಗೊತ್ತಿಲ್ಲ. ಒಳ್ಳೆಯವನ ಥರಾ ಅನ್ಸಲ್ಲ. ಯಾಕೋ ಇದೆಲ್ಲಾ ಸರಿಯಿಲ್ಲ ಅನ್ನಿಸ್ತಿದೆ. ಅವಳೀಗ ನಿನ್ನ ಜವಾಬ್ದಾರಿಯಲ್ಲಿ ಇರೋಳು. ನಾನೇನು ಹೇಳಿದ್ರೂ ತಪ್ಪಾಗತ್ತೇನೋ. ಆದ್ರೂ ಹೇಳದಿದ್ರೂ ತಪ್ಪಾಗತ್ತೆ ಅನ್ಸಿದ್ರಿಂದ ಹೇಳ್ತಾ ಇದೀನಿ…”. ಇನ್ನೂ ಏನು ಹೇಳುತ್ತಾ ಇದ್ದನೋ, ಅಷ್ಟರಲ್ಲಿ ಮಾಲಿನಿಗೆ ತಡೆದುಕೊಳ್ಳಲಾಗದೆ “ವಿಷಯ ನಂಗೆ ತಿಳ್ಸಿದ್ದಕ್ಕೆ ತುಂಬಾ ಥ್ಯಾಂಕ್ಸ್.‌ ಅವಳು ನನ್ನ ಮಗಳಾಗಿರೋದಕ್ಕೆ ನಾನು ಎಷ್ಟು ಕಾರಣಾನೋ ನೀನೂ ಅಷ್ಟೇ ಕಾರಣ. ಸದಾ ಅವಳ ಪ್ರತಿಯೊಂದು ಅವನತಿಗೂ ನಾನೇ ಕಾರಣ, ಜವಾಬ್ದಾರಿ ಅನ್ನೋ ಹಾಗೆ ಯಾಕೆ ಮಾತಾಡ್ತೀಯ? ನೀನು ತಂದೆಯಾಗಿ ಎಷ್ಟು ಮಟ್ಟಿಗೆ ಅವಳ ಜವಾಬ್ದಾರಿ ಹೊತ್ತಿದೀಯ? ಕಾನೂನಿನ ಪ್ರಕಾರ ನಿಂಗೆ ಈಗ ಅವಳ ಭಾರ ಇಲ್ದೇ ಇರ್ಬಹುದು. ನೈತಿಕವಾಗಿ ನೀನು ಓಡಿ ಹೋಗಕ್ಕೆ ಸಾಧ್ಯಾನಾ? ನೀನು ಈಗ ನನ್ನ ಗಂಡನಲ್ಲದೇ ಇರ್ಬಹುದು; ಆದ್ರೆ ಅವಳ ತಂದೇನೂ ಅಲ್ಲ ಅನ್ನಕ್ಕೆ ಸಾಧ್ಯ ಇಲ್ವಲ್ಲ? ಈ ಮಾತನ್ನ ನನ್ನ ಹತ್ರ ಹೇಳಕ್ಮುಂಚೆ ಅವ್ಳ ಹತ್ರ ಹೋಗಿ ಘಟ್ಟಿಸಿ ಕೇಳ್ಬಹುದಿತ್ತಲ್ವ?! ನಿನ್ನ, ಅವಳ ಮಧ್ಯೆ ಯಾವ್ದೇ ಕಲಹ ಇಲ್ವಲ್ಲ. ಹಾಗೆ ನೋಡಿದ್ರೆ ನಮ್ಮಿಬ್ರ ಮಧ್ಯಾನೂ ಬೇರೆ ಯಾವ ವಿಷಯಕ್ಕೂ ಭಿನ್ನಾಭಿಪ್ರಾಯ ಇರ್ಲಿಲ್ವಲ್ಲ; ಅವ್ಳ ವಿಷ್ಯ ಒಂದು ಬಿಟ್ರೆ. ಅವ್ಳು ನಿನ್ನ ಮಗಳು ಅನ್ನೋ ಒಂದು ವಾಂಛಲ್ಯ ಬಿಟ್ರೆ, ನಿಂಗೆ ಅವಳ ಬಗ್ಗೆ ಯಾವ ಕಮಿಟ್ಮೆಂಟೂ ಇಲ್ವಾ??” ಇನ್ನೂ ಏನೇನು ಹೇಳ್ತಾ ಇದ್ದಳೋ, ಅವನ ಕಡೆಯಿಂದ ಯಾವುದೇ ಪ್ರತಿಕ್ರಿಯೇನೂ ಬರದಿದ್ದರಿಂದ “ಕೇಳಿಸ್ತಾ ಇದೆಯಾ?” ಮತ್ತೆ ಕೇಳಿದಳು.. ಆ ಕಡೆ ಫೋನ್‌ ಯಾವಾಗಲೋ ಇಟ್ಟಾಗಿತ್ತು….. ಕೈಯಲ್ಲಿದ್ದ ರಿಸೀವರನ್ನು ತಣ್ಣಗೆ ಕೆಳಗೆ ಕುಕ್ಕಿ ಕುಸಿದಳು… ಅಳುವಿಗೂ, ಮೌನಕ್ಕೂ ಮೀರಿದ ಒಂದು ಶೂನ್ಯ ಭಾವ ಮನವನ್ನಾವರಿಸಿತು……

***

ಅಡುಗೆಮನೆಯ ಕಿಟಕಿಯ ಹೊರಭಾಗದಲ್ಲಿ ಬೆಕ್ಕಿನ ʻಮಿಯಾವ್‌ ಮಿಯಾವ್‌ʼ ಕೇಳಿಸುತ್ತಲೇ ಇತ್ತು. ʻದರಿದ್ರದ್ದು ಇನ್ನೂ ಹೊಡಕೊಳ್ಳುತ್ತಲೇ ಇದೆ… ಕೆಳಗಡೆ ಬೈಕ್‌ ಬಂದು ನಿಂತ ಸದ್ದು… ಹಾಲಿನ ಕಿಟಕಿಯಿಂದ ಇಣುಕಿದಳು. ಮಗಳು ಬೈಕಿನಿಂದ ಕೆಳಗಿಳಿಯುತ್ತಿದ್ದಳು… ಗೇಟನ್ನು ತೆರೆಯುವ ಮುಂಚೆ ಮತ್ತೊಮ್ಮೆ ಅವನೆಡೆಗೆ ತಿರುಗಿ ಕೈ ಬೀಸಿದಳು… ಕೈಯೊಮ್ಮೆ ತುಟಿಯ ಮೇಲೆ ಬಂದು ಗಾಳಿಯಲ್ಲಿ ಹಾರಾಡಿತು… ಆ ಬದಿಯಿಂದಲೂ ಇವಳೆಡೆಗೆ ತೇಲಿಬಂತು… ಅವನೆಡೆಗೆ ಮತ್ತೊಮ್ಮೆ ಕೈ ಬೀಸಿದವಳು ಎರೆಡೆರೆಡು ಮೆಟ್ಟಿಲು ಹಾರುತ್ತಾ ಮನೆಬಾಗಿಲಿಗೆ ಬಂದಳು. ಹನ್ನೊಂದು ಗಂಟೆಯ ರಾತ್ರಿಯಲ್ಲಿ ಬೈಕ್‌ ಗುಡುಗುಡು ಸದ್ದು ಮಾಡುತ್ತಾ ಹೊರಟುಹೋಯಿತು…

ಮಾಲಿನಿ ಮನೆ ಬಾಗಿಲನ್ನು ತೆರೆದ ತಕ್ಷಣ ಅವಳನ್ನು ದೂಡಿಕೊಂಡಂತೇ ಒಳಬಂದವಳು ಚಪ್ಪಲಿಯನ್ನೂ ಬಿಚ್ಚದೆ, ಅವಳ ಮಾತಿಗೂ ಸಿಕ್ಕದೆ, ತನ್ನ ರೂಮಿಗೆ ಓಡಿಹೋಗಿ ಬಾಗಿಲನ್ನು ಹಾಕಿಕೊಂಡಳು. ದಿಗ್ಭ್ರಾಂತಳಾಗಿ ನಿಂತಿದ್ದ ಮಾಲಿನಿ ʻಅವಳೇಕೆ ನನಗೆ ಮಾತಾಡಲೂ ಕೊಡದೆ ಹಾಗೆ ಓಡಿಹೋದ್ಳು…? ಕತ್ತಲಿನಲ್ಲೂ ಅವಳ ಕಣ್ಣುಗಳೇಕೆ ಹೊಳೀತಿತ್ತು….? ಪ್ರೀತಿಯ ಅಮಲೇ…? ಪಕ್ಕದಿಂದ ಓಡಿಹೋಗುವಾಗ ಬಂದ ಘಾಟು ವಾಸನೆ…….?! ಏನೂ ಅರ್ಥವಾಗದೆ ಕೋಣೆಯ ಮುಚ್ಚಿದ ಬಾಗಿಲತ್ತ ನೋಡಿದಳು. ಒಳಗೆ ಹಚ್ಚಿದ್ದ ದೀಪ ಆರಿತು. ಇನ್ನು ಅವಳು ಬಾಗಿಲು ತೆಗೆಯೋದಿಲ್ಲ…. ಮುಂಬಾಗಿಲನ್ನು ಹಾಕಿಕೊಂಡು ಬಂದು ಸೋಫಾದಲ್ಲಿ ಕುಸಿದವಳು ಒಡ್ಡು ಹರಿದಂತೆ ಬಿಕ್ಕಿ ಬಿಕ್ಕಿ ಅಳತೊಡಗಿದಳು… ಮನೆಯ ಹೊರಗಡೆ ಬೆಕ್ಕು ಇನ್ನೂ ಕರ್ಕಶವಾಗಿ ಕೂಗುತ್ತಲೇ ಇತ್ತು…

‍ಲೇಖಕರು avadhi

June 19, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: