ಕೊರೋನಾ ಎಂಬ ಚಿತ್ರಗುಪ್ತನ ಸನ್ನಿಧಿಯಲ್ಲಿ…

ಗಿರಿಜಾ ಶಾಸ್ತ್ರೀ

ಜಯಶ್ರೀ ಕಾಸರವಳ್ಳಿಯವರ ‘ಚಿತ್ರಗುಪ್ತನ ಸನ್ನಿಧಿಯಲ್ಲಿ’ ಹತ್ತು ಕತೆಗಳ ಒಂದು ಸಂಕಲನ. ಅದರಲ್ಲಿನ ಶೀರ್ಷಿಕೆ ಕತೆ ಇಂದಿನ ದುರಿತ ಕಾಲಕ್ಕೆ ಹೊಂದಿಕೆಯಾಗುವಷ್ಟು ಬೆರಗು ಹುಟ್ಟಿಸುತ್ತದೆ. ‘ಚಿತ್ರಗುಪ್ತನ ಸನ್ನಿಧಿಯಲ್ಲಿ’ ಕತೆಯನ್ನು ಓದುತ್ತಿರುವಾಗ ಡಿವೈನ್ ಕಾಮಿಡಿ (Hell) ನೆನಪಾದದ್ದು ಆಕಸ್ಮಿಕ. ಅದಕ್ಕೆ‌ಇಂದಿನ ಕೊರೋನಾ ಸಂದರ್ಭವೂ ಕಾರಣವಿರಬೇಕು. ಹಾಗೆ ನೋಡಿದರೆ ಜೀವನವೆನ್ನುವುದೇ ಒಂದು ರೀತಿಯ ಟ್ರ್ಯಾಜೀಕಾಮೆಡಿಯಿದ್ದಂತೆ.

ಕಾಮಿಡಿಯ ಮೂಲಕವೇ ಟ್ರ್ಯಾಜಿಡಿಯನ್ನು ಹಿಡಿಯುವ ಒಂದು ‘ಸಾಯೋಆಟ’. ಈ ಕತೆಯಲ್ಲಿರುವುದೂ ಸಾಯೋ ಆಟವೇ. ಇಲ್ಲಿ ನಾನು ಯಾರು? ನಾನು ಏನು? ನನ್ನ ಜೀವನದ ಸಾರ್ಥಕತೆಯೇನು ಎಂಬೆಲ್ಲಾ ಪ್ರಶ್ನೆಗಳು ವಿಡಂಬನೆಯ ನೆಲೆಯಲ್ಲಿ ಉದ್ಭವವಾಗುತ್ತವೆ. ಇವು ಯಾರಿಗೆ ಯಾರೋ ಕೇಳುವ ಪ್ರಶ್ನೆಯಲ್ಲ. ದೇಹ ತ್ಯಜಿಸಿದ ಆತ್ಮ ಅಥವಾ ಪ್ರೇತವು ತನ್ನನ್ನು ತಾನೇ ಕೇಳಿಕೊಳ್ಳುವ ಪ್ರಶ್ನೆಗಳು. ಹಾಗೆ ನೋಡಿದರೆ ಇವು ನಮಗೆ ನಾವೇ ಕೇಳಿಕೊಳ್ಳುವ ಪ್ರಶ್ನೆಗಳೇ! ಮತ್ತು ನಮಗೆ ನಾವೇ ಕಂಡುಕೊಳ್ಳಬೇಕಾದ ಉತ್ತರಗಳು. ಹೊರಗಿನಿಂದ ಉತ್ರರ ದೊರೆಯುವುದಿಲ್ಲ. ಉತ್ತರ ಬಯಸುವವರು ಹೊರಗಿನಿಂದ ಒಳಕ್ಕೆ ಚಲಿಸಬೇಕಾಗುತ್ತದೆ.

ಒಂದು ಫ್ಯಾಂಟಸಿಯ ಲೋಕವನ್ನು ಸೃಷ್ಟಿಸುವುದರ ಮೂಲಕ ಇಡೀ ಕತೆ ಕೊನೆಯವರೆಗೆ ತನ್ನ ಹಾಸ್ಯಪ್ರಜ್ಞೆ ಯನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಕತೆಯ ತುಂಬಾ ಇಕ್ಕಟ್ಟಾದ ಓಣಿಗಳು, ತಿರುಗಿದಲ್ಲೆಲ್ಲಾ ಎದುರಾಗುವ ಗೋಡೆಗಳು, ಹೆಣಗಳ ರಾಶಿ, ಅವುಗಳ ವಿಲೇವಾರಿ, ಮಮಕಾರದ ಸ್ಪರ್ಶವೇ ಇಲ್ಲದ ಒರಟಾದ ಮಾತುಕತೆ, ವಿಕಾರವಾದ ಆಕ್ರಂದನಗಳು. ಇವು ಎಲ್ಲವೂ ಒಂದು ರೀತಿಯ ಉಸಿರುಕಟ್ಟುವ ಅನುಭವವನ್ನು ಓದುಗರಲ್ಲಿ ಉಂಟುಮಾಡುತ್ತದೆ. ಹೊರಗೆ ಹೋಗಿಬಿಡಬೇಕೆಂದು, ಆ ಆತ್ಮಕ್ಕೆ ಮಾತ್ರವಲ್ಲ, ಓದುಗರಿಗೂ ಎನಿಸಿಬಿಡುತ್ತದೆ.

ಕತೆಯ ಸನ್ನಿವೇಶ ಪ್ರೇತದ ಅತಂತ್ರ ಸ್ಥಿತಿಯನ್ನೂ ನಿರ್ಮಾಣ ಮಾಡುವುದರಲ್ಲಿ ಸಫಲವಾಗುತ್ತದೆ. ಕತೆಯ ಕೊನೆಗೆ, ಹಾಗೆ ಎದುರಾಗುವ ಗೋಡೆಗಳು ಕೇವಲ ಗೋಡೆಗಳಲ್ಲ, ಬದಲಾಗಿ ಮನುಷ್ಯರ ತಲೆಗಳನ್ನು ಒತ್ತೊತ್ತಾಗಿ ಜೋಡಿಸಲ್ಪಟ್ಟ ಬೃಹದಾಕಾರದ ಮಾನವ ಸರಪಣಿಯಾಗಿ ಕಾಣುವುದು ಮತ್ತು ಆ ಗೋಡೆ ಸಣ್ಣದಾಗಿ ಚಲಿಸಲು ಪ್ರಾರಂಭಿಸುವುದು ಕತೆಯ ಮುಖ್ಯ ತಿರುವು.

ಮನುಷ್ಯ ಬದುಕಿನ ದಾರುಣ ಸತ್ಯವನ್ನು ಇದು ಬಯಲಾಗಿಸುತ್ತದೆ. ಇವು ಸಾವಿನ ವಿಹ್ವಲತೆಯನ್ನು, ಹೃದಯವಿದ್ರಾವವನ್ನು ಬಯಲುಗೊಳಿಸುವುದಿಲ್ಲ. ಬದಲಾಗಿ ಸಾವಿನ ಸನ್ನಿಧಿಯಲ್ಲಿ ಜನರ ಸ್ವಭಾವ ವೈಚಿತ್ರ್ಯಗಳನ್ನೂ, ತೋರುಗಾಣಿಕೆಯನ್ನೂ, ವ್ಯಾವಹಾರಿಕ ವರ್ತನೆಗಳನ್ನೂ ಬಯಲಾಗಿಸುತ್ತದೆ. (ಕೆ. ಸತ್ಯನಾರಾಯಣ ಅವರ ‘ಸಾವಿನ ದಶಾವತಾರ’ದಲ್ಲಿ ಇದರ ಸಮರ್ಥ ನಿರ್ವಹಣೆ ಇದೆ) ಸಾವೆಂದರೆ ಒಂದು ವ್ಯಾಪಾರ, ಯಾಂತ್ರಿಕ ವ್ಯವಹಾರ. ಭಾವವಲಯವೊಂದು ಛಿದ್ರಗೊಂಡ, ಆಘಾತಗೊಂಡ ಸ್ಥಿತಿಯಲ್ಲ ಎನ್ನುವ ಕ್ರೌರ್ಯವನ್ನು ಇದು ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.

ಜಯಶ್ರೀಯವರು ಈ ಕತೆಯನ್ನು ೨೦೧೭ರಲ್ಲೇ ಬರೆದಿದ್ದರೂ, ಇದು ಇಂದಿನ ಕೊರೋನಾ ದುರಿತಕಾಲದ, ಮಾನವ ಕುಲ ದಿಕ್ಕೆಟ್ಟ ಸ್ಥಿತಿಯನ್ನು ಬಹಳ ಪರಣಾಮಕಾರಿಯಾಗಿ ವ್ಯಕ್ತಪಡಿಸುತ್ತದೆ. ಕಾಮೆಡಿಯ ಮೂಲಕವೇ ಬದುಕಿನ ಟ್ರ್ಯಾಜಿಡಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ. ಫ್ಯಾಂಟಸಿ ಯಾಕೆ ಬೇಕು? ವಾಸ್ತವತೆಯ ನೆಲದ ಮೇಲೆ ಕತೆಗಳನ್ನು ರಚಿಸಬೇಕು ಎನ್ನುವ ಚರ್ಚೆಯೂ ಇನ್ನೊಂದು ಕತೆಯಲ್ಲಿ ಬರುತ್ತದೆ. (ಅಂತರದ ನಡುವೆ) ವಾಸ್ತವವನ್ನು ದಕ್ಕಿಸಿಕೊಳ್ಳಲು, ಎದುರಿಸಲು ನಾವು ಅಸಮರ್ಥರಾದಾಗ ಫ್ಯಾಂಟಸಿ ಬಂದು ಹೀಗೆ ಕೈ ಹಿಡಿಯುತ್ತದೆ.

ಕೊರೋನಾದ ವಾಸ್ತವವನ್ನು ನಾವು ಅರಗಿಸಿಕೊಳ್ಳಲಾರದಾಗಿದ್ದೇವೆ. ಅದೊಂದು ಮನುಷ್ಯನ ತಲೆಗಳು ಒತ್ತೊತ್ತಾಗಿ ಕಟ್ಟಿ ನಿರ್ಮಾಣ ಮಾಡಿರುವ ಕ್ರೌರ್ಯದ ಬೃಹದಾಕಾರದ ಗೋಡೆ. ತೀರ ಹತ್ತಿರದಿಂದ ನೋಡಿದರೆ ತಲೆಗಳು ಲೆಕ್ಕಕ್ಕೆ ಸಿಗುವುದಿಲ್ಲ. ತೀರಾ ದೂರ ನಿಂತರೆ ತಲೆಗಳೇ ಕಾಣುವುದಿಲ್ಲ. ಫ್ಯಾಂಟಸಿ ಎನ್ನುವುದು ಒಂದು ಮಸೂರವಿದ್ದಂತೆ. ಅದು ಬದುಕಿನ ಒಂದೊಂದು ಪಿಕ್ಸೆಲ್ ಗಳನ್ನೂ ಸಮದೂರದಲ್ಲಿಟ್ಟು ತೋರಿಸುತ್ತದೆ. ಕೊರೋನಾ ಪರಿಣಾಮಗಳ ದೈತ್ಯ ಪೈಶಾಚಿಕ ರೂಪವನ್ನು ಕಟ್ಟಿಕೊಡುವ ರೂಪಕವಾಗಿ, ಕಾಣಿಸುವ ಮಸೂರವಾಗಿ ಚಿತ್ರಗುಪ್ತನ ಸನ್ನಿಧಿಯಲ್ಲಿ ಕತೆ ಕಾಣಿಸುತ್ತದೆ ಎಂದೇ ನನಗೆ ಎನಿಸುತ್ತದೆ.

ಈ ಸಂಕಲನದಲ್ಲಿ ‘ಮುತ್ತಿನಡ್ಡಿಗೆ, ಸುಮ್ಮನೆ ಇರುವೆ ಬಿಟ್ಟುಕೊಳ್ಳುವುದೆಂದರೆ, ಅಂತರದ ನಡುವೆ, ಸ್ಪರ್ಶಸುಖ, ಸಹಿಷ್ಣುತೆ ಮತ್ತು ಅಸಹಿಷ್ಣುತೆಗಳ ಮಡುವೆ’ ಮುಂತಾದ ಬಹಳ ಒಳ್ಳೆಯ ಕತೆಗಳಿವೆ. ಕತೆಯ ಸೃಜನಶೀಲ ವ್ಯಾಪಾರದ ಕುರಿತಾದ ಕತೆಗಳಿವೆ ಅವು ಬೇರೆಯದೇ ಆದ ತಾತ್ವಿಕ ಚರ್ಚೆಯನ್ನು ಬೇಡುತ್ತವೆ. ಸಮಕಾಲೀನ ಸಂದರ್ಭಕ್ಕೆ ಚಿತ್ರಗುಪ್ತನ ಸನ್ನಿಧಿಯಲ್ಲಿ ಕತೆ ಬಹಳ ಪ್ರಸ್ತುತವೆನಿಸಿದ್ದರಿಂದ ಆ ಕತೆಯ ಓದಿನ ಸುಖವನ್ನೂ, ಇಂದಿನ ಕೊರೋನಾ ಕಾಲಕ್ಕೆ ಹೊಂದಿಕೆಯಾಗುವ ಅದರ ಭಾವ ಸ್ಥಿತಿಯನ್ನು ಹಂಚಿಕೊಳ್ಳಬೇಕೆನಿಸಿತು. ಜಯಶ್ರೀ ಅವರಿಗೆ ಅಭಿನಂದನೆಗಳು. ಪುಸ್ತಕ ಕಳುಹಿಸಿ ಬಹಳ ದಿನಗಳ ಆನಂತರ ಓದಲು ಸಾಧ್ಯವಾಯಿತು. ಕ್ಷಮೆ ಇರಲಿ. ಧನ್ಯವಾದಗಳು.

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: