ಶ್ರೀನಿವಾಸ ಪ್ರಭು ಅಂಕಣ- ಸಾವಿನೊಡನೆ ಆದ ಪ್ರಥಮ ಮುಖಾಮುಖಿ ಎನ್ನಲೇ?

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

2

ಕೊಣನೂರು ಮಸುಕು ಚಿತ್ರಗಳು

ಕೊಣನೂರು ಚಿಕ್ಕಜ್ಜ ಶಾಮರಾಯರು ಅಲ್ಲಿನ ಪ್ರಭಾವೀ ವ್ಯಕ್ತಿಗಳಲ್ಲೊಬ್ಬರು. ನಾನು ಸೀದಾ ಹೋಗಿ ಸೇರಿದ್ದು ಕೊಣನೂರಿನ ಪ್ರಾಥಮಿಕ ಶಾಲೆಗೆ. ಅದಕ್ಕೆ ಮೊದಲು ಬಸವಾಪಟ್ಟಣದಲ್ಲಿ ಶಾಲೆಗೆ ಹೋಗುತ್ತಿದ್ದೆನೋ ಇಲ್ಲವೋ ನೆನಪಿಲ್ಲ. ಚಿಕ್ಕಜ್ಜ ನನ್ನನ್ನು ಶಾಲೆಗೆ ಕರೆದುಕೊಂಡು ಹೋದವರೇ ಶ್ರೀನಿವಾಸ ಪ್ರಭು ಎಂದು ನನ್ನ ಹೆಸರನ್ನು ದಾಖಲಿಸಿ ಯಾವುದೋ ಒಂದು ಜನ್ಮದಿನಾಂಕವನ್ನು ಹೇಳಿ- ಬಹುಶಃ ನಾಲ್ಕನೆಯ ತರಗತಿಯಲ್ಲಿ ಎಂದು ಕಾಣುತ್ತದೆ – ಕೂರಿಸಿ ಬಿಟ್ಟರು!

ಹೀಗೆ ಪ್ರಭಾವೀ ಚಿಕ್ಕಜ್ಜನ ಶಿಫಾರಸ್ಸಿನಿಂದಾಗಿ ಡಬ್ಬಲ್‌ ಪ್ರಮೋಶನ್‌ ಗಿಟ್ಟಿಸಿಕೊಂಡು ವಯಸ್ಸಿಗೆ ಮೀರಿದ ತರಗತಿಗೆ ನಾನು ದಾಖಲಾಗಿಬಿಟ್ಟೆ! ಗ್ರಹಿಕೆಗೆ ಮೀರಿದ ತರಗತಿಗೆ ನಾನು ದಾಖಲಾಗಿಬಿಟ್ಟೆ! ಗ್ರಹಿಕೆಗೆ ಮೀರಿದ ವಿಷಯಗಳನ್ನು ಅರಗಿಸಿಕೊಳ್ಳುವುದಾದರೂ ಹೇಗೆ? ಅದರಲ್ಲೂ ಕಬ್ಬಿಣದ ಕಡಲೆಯನ್ನೂ ಮೀರಿಸುವಷ್ಟು ಕಠಿಣವಾದ ಗಣಿತ… ಇಂಗ್ಲೀಷ್!‌ ಅಯ್ಶಪ್ಪಾ! ಎಂದೂ ಸ್ಕೂಲ್ ನಲ್ಲಿ ನಾನು ಚುರುಕು ಹುಡುಗ ಅನ್ನಿಸಿಕೊಳ್ಳಲೇ ಇಲ್ಲ. ಓದಿನಲ್ಲಿ ಮೊದಲೇ ಆಸಕ್ತಿ ಇಲ್ಲದ ಶುದ್ಧ ಆಟಗುಳಿ ನಾನು. ಸದಾ ಸರ್ವಕಾಲ ಮ್ಯಾಚಸ್..ಗೋಲಿ..ಲಗೋರಿ..ಸೂರ್‌ ಚೆಂಡು.. ಇವುಗಳದ್ದೇ ಧ್ಯಾನ. ಇದರ ಜತೆಗೆ ಒಂದಲ್ಲ ಒಂದು ಬಗೆಯಲ್ಲಿ ಕಾಡುತ್ತಿದ್ದ ಅನಾರೋಗ್ಯ ತುಂಬಾ ಹಿಂಸೆ ಕೊಡುತ್ತಿತ್ತು. ಕುತ್ತಿಗೆ ಹಿಂಬದಿಯಲ್ಲಿ ಸದಾ ಏಳುತ್ತಿದ್ದ ಹುಳುಕಡ್ಡಿ… ಜೀರ್ಣಶಕ್ತಿಯ ಕೊರತೆ… ವರ್ಷಾವಧಿ ಕಾಡುತ್ತಿದ್ದ ನೆಗಡಿ…

ಎಲ್ಲಕ್ಕಿಂತ ಕಾಡಿದ್ದು ಜೀರ್ಣಶಕ್ತಿಯ ಕೊರತೆ… ಆ ಕಾರಣಕ್ಕಾಗಿ ಸ್ಕೂಲ್‌ ಗೆ ಚಕ್ಕರ್‌ ಹೊಡೆದು ಮನೆಯಲ್ಲಿ ಉಳಿದದ್ದುಂಟು. ಜತೆಯಲ್ಲಿ ಓದುತ್ತಿದ್ದ ರಾಂಭಿ (ನಿಜನಾಮ ಮರೆತಿದೆ) ಹೇಳಿದ್ದ: ‘ಜೇಬಿನಲ್ಲಿ ಮೂರು ಕಲ್ಲಿಟ್ಟುಕೊಂಡರೆ ಅವಸರವಾಗೊಲ್ಲ.’ ನನ್ನ ಜೇಬಿನಲ್ಲಿ ಸದಾ ಕಾಲ ಮೂರು ಕಲ್ಲು! ಸಹಪಾಠಿಗಳು ‘ಹುಳುಕಡ್ಡಿ ಬಡ್ಡಿ’ ಎಂದು ಸದಾ ರೇಗಿಸುತ್ತಿದ್ದರು. ‘ಹಾಗೆಲ್ಲ ಅನ್ನಬೇಡ್ರೋ.. ದಮಯ್ಯ ಅಂತೀನಿ’ ಅಂತ ಅಂಗಲಾಚುತ್ತಿದ್ದೆ. ಅಂಗಲಾಚಿದಷ್ಟೂ ಛೇಡಿಸುವುದು ಹೆಚ್ಚಾಗುತ್ತಿತ್ತು.

ಬಣ್ಣಬಣ್ಣದ ತರಹೇವಾರಿ ಮ್ಯಾಚ್‌ ಬಾಕ್ಸ್‌ ಮುಖ ಚಿತ್ರಗಳನ್ನು ಕಲೆಹಾಕುವುದು ಆ ದಿನಗಳ ಒಂದು ಪ್ರಮುಖ ಹವ್ಯಾಸವಾಗಿತ್ತು. ನನಗೆ ಅತಿ ಪ್ರಿಯವಾಗಿದ್ದ ಹವ್ಯಾಸ ಇದು. ಐದು ಪೈಸೆಗೆ ಹತ್ತರಂತೆ ಈ ಚಿತ್ರಗಳು ಅಂಗಡಿಗಳಲ್ಲಿ ಸಿಗುತ್ತಿದ್ದವು. ಮೇಲಿನ ಚಿತ್ರ ಮಾತ್ರ ಬದಲಾಯಿಸಿ ಹತ್ತಾರು ಕಟ್ಟುಗಳನ್ನು ಇಟ್ಟಿರುತ್ತಿದ್ದರು. ಎಲ್ಲವೂ ಹೊಸವೆಂದು ತಂದರೆ ಒಳಗೆಲ್ಲಾ ಮತ್ತೆ ಅವವೇ ಚಿತ್ರಗಳು! ಅಡಿಗೆ ಮನೆಯಲ್ಲಿದ್ದ ಮರದ ಬೀರುವಿನಲ್ಲಿ ಚಿಕ್ಕುವಿನ (ಚಿಕ್ಕಜ್ಜಿಯನ್ನು ನಾವು ಕರೆಯುತ್ತಿದ್ದುದು ಹಾಗೆ) ಒಂದು ಡಬ್ಬಿಗಡಿಗೆ ಇತ್ತು.

ಬಹುಶಃ ಚಿಕ್ಕಜ್ಜನಿಗೆ ಗೊತ್ತಾಗದಂತೆ ಚಿಕ್ಕು ಶೇಖರಿಸಿಟ್ಟಿದ್ದ ಒಂದಷ್ಟು ಚಿಲ್ಲರೆ ಕಾಸು ಅದರಲ್ಲಿ ತುಂಬಿರುತ್ತಿತ್ತು! ಅವರಿಗೆ ಗೊತ್ತಾಗದಂತೆ ನಾನು ನಾಲ್ಕಾರು ಕಾಸು ಕದಿಯುತ್ತಿದ್ದೆ! ಗೋಲಿ-ಮ್ಯಾಚಸ್‌ ಗೆ ಎಂದು ಹೇಳಿದರೆ ಚಿಕ್ಕು ಎಲ್ಲಿ ಕೊಡುತ್ತಿದ್ದರು?! ಹೊರಗಡೆ ಗೂಟಕ್ಕೆ ತಗಲು ಹಾಕಿರುತ್ತದ್ದ ಚಿಕ್ಕಜ್ಜನ ಜುಬ್ಬಾ ಜೇಬಿನಿಂದಲೂ ಒಂದಷ್ಟು ಚಿಲ್ಲರೆ ಕಾಸು ಎಗರಿಸಿದ್ದುಂಟು; ಸಿಕ್ಕಿಹಾಕಿಕೊಂಡು ಬೆತ್ತದ ರುಚಿ ನೋಡಿದ್ದೂ ಉಂಟು! ಹಾಗೊಮ್ಮೆ ಸಿಕ್ಕಿಹಾಕಿಕೊಂಡಾಗಲೇ ನನ್ನ ಚಿಕ್ಕಜ್ಜ ತೊಡೆ ಮೇಲೆ ಕೂರಿಸಿಕೊಂಡು ಸತ್ಯ ಹರಿಶ್ಚಂದ್ರನ ಕಥೆ ಹೇಳಿದ್ದು. ಕಥೆ ಬಹಳವೇ ಇಷ್ಟವಾಗಿದ್ದರೂ, ಸ್ವಲ್ಪ ಮಟ್ಟಿಗೆ ಪರಿಣಾಮವನ್ನು ಬೀರಿದ್ದರೂ ಗೋಲಿ-ಮ್ಯಾಚಸ್‌ ಗಳ ಸೆಳೆತ ತೀವ್ರವಾದ ವೇಳೆಯಲ್ಲಿ ಅದೆಲ್ಲಾ ಮರೆತು ಹೋಗಿ ಚಿಕ್ಕಜ್ಜನ ಜೇಬು ತಡವುತ್ತಿದ್ದೆ!

ಆಟದ ಹುಚ್ಚು ಎಷ್ಟಿತ್ತೆಂದರೆ ಸ್ಕೂಲ್‌ ಗೆ ಹೋಗುತ್ತೇನೆಂದು ಹೊರಟು ( ಆಗ middle school ನಲ್ಲಿದ್ದೆ) ಸೀದಾ ೩ಕಿ.ಮಿ ದೂರದಲ್ಲಿದ್ದ ಸರಗೂರಿಗೆ ನಡೆದುಕೊಂಡು ಹೋಗಿ ಅಲ್ಲಿನ ಗೆಳೆಯರೊಂದಿಗೆ ಆಟ ಆಡಿಕೊಂಡು ಸಂಜೆಗೆ ಮರಳುತ್ತಿದ್ದುದುಂಟು.

ಒಂದು ಸಂಜೆ ಮರಳು ಗುಡ್ಡೆಯಲ್ಲಿ ಆಟವಾಡುತ್ತಿದ್ದಾಗ ಲೈಟ್‌ ನಾಗಪ್ಪನವರ ಮಗ ಶ್ರೀಧರ ನನ್ನ ಮೇಲೆ ಹಠಾತ್ತಾನೆ ಎರಗಿ ನನ್ನ ಕುತ್ತಿಗೆಯನ್ನು ಬಲವಾಗಿ ಹಿಸುಕತೊಡಗಿದ್ದಾಗ ಹಿಂಸೆ ತಡೆಯಲಾರದೆ ಬಲವಾಗಿ ಅವನ ತೋಳು ಕಚ್ಚಿಬಿಟ್ಟಿದ್ದೆ. ಲಬೋಲಬೋ ಎಂದು ಬಡಿದುಕೊಳ್ಳುತ್ತಾ ಹಿಡಿತ ಸಡಿಲಿಸಿದ್ದ ಶ್ರೀಧರ ತೋಳ ಮೇಲೆ ನಾಲ್ಕು ಹಲ್ಲುಗಳ ಗುರುತು ಢಾಳಾಗಿ ಮೂಡಿತ್ತು! ಕೇಳಬೇಕೇ! ಚಿಕ್ಕಜ್ಜನಿಂದಲೂ ಏಟು ನಾಗಪ್ಪನವರಿಂದಲೂ ಬಡಿತ! ‘ಅವನೇ ನನ್ನ ಮೆಟ್ರೆ ಹಿಚುಕ್ತಿದ್ದ.. ಪ್ರಾಣ ಹೋಗಿದ್ರೆ ನೀವು ಕೊಡ್ತಿದ್ರಾ’ ಎಂದು ನಾನು ಕಿರುಚುತ್ತಿದ್ದರೂ ಯಾರಿಗೂ ಅದು ಕೇಳಲೇ ಇಲ್ಲ…

ಇದರ ಮಧ್ಯೆ ಜೀರುಂಡೆ ಹಿಡಿಯುವ ಹುಚ್ಚು ಹಿಡಿದುಬಿಟ್ಟಿತ್ತು. ಜೀರುಂಡೆಯೋ..ಮಿಣುಕು ಹುಳುವೋ.. ಎಂಥದೋ ಒಂದು ಹುಳ.. ಅದನ್ನ ಹಿಡಿದು ಮ್ಯಾಚ್‌ ಬಾಕ್ಸ್‌ ನಲ್ಲಿಟ್ಟು ಮೇಲೆ ಒಂದು ತೂತು ಕೊರೆದು (ಹುಳು ಉಸಿರಾಡಲು!) ಇಡುವುದು… ಅದು ಏಕಾಗಿ ಮಾಡುತ್ತಿದ್ದೆನೆಂಬುದು ಈಗ ಬೋಧವಿಲ್ಲ.

ಈ ಜೀರುಂಡೆ ಕಾವೇರಿ ನದಿಯ ಬದಿಗಿರುವ ಹೊಲ-ಗದ್ದೆಗಳಲ್ಲಿ ಧಂಡಿಯಾಗಿ ಸಿಗುತ್ತದೆ ಎಂದು ಯಾರೋ ಗೆಳೆಯರು ಉಸುರಿದ್ದರು. ನಾನು ಸುಮ್ಮನಿರುವುದುಂಟೇ? ಹೊರಟೇಬಿಟ್ಟೆ ಏಕಾಂಗಿಯಾಗಿ ಹುಳುವಿನ ಬೇಟೆಗೆ! ಮುಖ್ಯ ರಸ್ತೆಯಲ್ಲಿ ಹೋದರೆ ದೂರವಾಗುತ್ತದೆ. ಮನೆಯ ಹಿಂಬದಿಯಲ್ಲೇ ಇದ್ದ ದೊಡ್ಡ ನಾಲೆಯನ್ನು ದಾಟಿಕೊಂಡು ಹೋದರೆ ತುಂಬಾ ಹತ್ತಿರ. ೨೦-೨೫ ಅಡಿಗಳಷ್ಟು ದೊಡ್ಡದಿದ್ದ ಆ ನಾಲೆಗೆ ಒಂದು ಮರದ ಒಡ್ಡನ್ನು ಹಾಕಿದ್ದರು.

ಓಡಾಡುವ ಸಲುವಾಗಿ ಅದರ ಮೇಲೆ ದೊಡ್ಡವರು ನಡೆದುಕೊಂಡು ಹೋಗುವುದೇ ಸಾಹಸದ ಕೆಲಸ. ನನ್ನದೂ ಭಂಡ ಧೈರ್ಯ.. ಜೀರುಂಡೆಯ ಸೆಳೆತ.. ಒಡ್ಡುದಾಟಿಕೊಂಡು ಹೋಗಿಯೇಬಿಟ್ಟೆ. ಮಟಮಟ ಮಧ್ಯಾಹ್ನ, ಬಟಾಬಯಲು, ಸುತ್ತ ಒಂದು ನರಪಿಳ್ಳೆಯಿಲ್ಲ. ಹೋದವನೇ ಜೀರುಂಡೆಗಳನ್ನು ಹಿಡಿದುಕೊಂಡು ಡಬ್ಬಿಗಳಿಗೆ ಸೇರಿಸಿ ವಿಜಯೋತ್ಸಾಹದಿಂದ ಮನೆಗೆ ಮರಳಲು ಅನುವಾದೆ. ಒಡ್ಡಿನ ಬಳಿ ಬಂದಾಗ ನೋಡುತ್ತೇನೆ- ಕೆಳಗೆ ನಾಲೆಯಲ್ಲಿ ನೀರು ಭಯಂಕರ ರಭಸದಿಂದ ಹರಿಯುತ್ತಿದೆ. ಒಂದು ಕ್ಷಣ ಅಳುಕಿದರೂ ಭಂಡ ಧೈರ್ಯದಿಂದ ಒಡ್ಡು ದಾಟಲು ಶುರುವಿಟ್ಟುಕೊಂಡೆ. ಕಾಲು ಭಾಗ ಹಾದಿ ಸವೆದಿತ್ತೇನೋ.. ಕಾಲು ನಡುಗಲು ಪ್ರಾರಂಭವಾಯಿತು. ಸಾವರಿಸಿಕೊಂಡು ಹಾಗೇ ಕುಳಿತುಬಿಟ್ಟೆ… ಮೆಲ್ಲಗೆ ಚತುಷ್ಪಾದಿಯಾಗಿ ಮುಂದೆ ಹೋಗತೊಡಗಿದೆ.

ಈ ವೇಳೆಗೆ ಅಕಸ್ಮಾತ್‌ ನನ್ನ ಈ ಸಾಹಸವನ್ನು ನೋಡಿದವರು ಯಾರೋ ಚಿಕ್ಕಜ್ಜನಿಗೆ ಸುದ್ದಿ ಮುಟ್ಟಿಸಿಬಿಟ್ಟರು. ಗಾಬರಿಯಿಂದ ಕಂಗಾಲಾಗಿ ಹೋದ ಚಿಕ್ಕಜ್ಜ ಬೆತ್ತವನ್ನೂ ತೆಗೆದುಕೊಂಡು ದುಡುದುಡು ಬಯಲಿನಲ್ಲಿ ಬರುತ್ತಿರುವುದು ದೂರದಿಂದಲೇ ಕಾಣಿಸಿತು… ನಡುಕು ಜಾಸ್ತಿಯಾಯಿತು.. ಚಿಕ್ಕಜ್ಜನಿಗೆ ಏನನ್ನಿಸಿತೋ, ಬೆತ್ತವನ್ನು ಬೆನ್ನ ಹಿಂದೆ ಮರೆ ಮಾಡಿಕೊಂಡು ಒಡ್ಡಿನ ಬಳಿಗೆ ಬಂದು ನಿಧಾನವಾಗಿ ಬಾ.. ಹೆದರಿಕೋಬೇಡ.. ಏನೂ ಆಗಲ್ಲ ಎಂದು ಸಮಾಧಾನವಾಗಿಯೇ ರಮಿಸಿದರು.

ಬಹಳ ಕಷ್ಟಪಟ್ಟುಕೊಂಡು ನಿಧಾನವಾಗಿ ಕೊನೆಗೂ ಆ ಬದಿಗೆ ಬಂದು ಮುಟ್ಟಿದೆ. ನಾನು ಮುಟ್ಟುತ್ತಿದ್ದಂತೆ ಚಿಕ್ಕಜ್ಜನ ಬೆತ್ತ ನನ್ನ ಬೆನ್ನು ಮುಟ್ಟಿತು! ‘ಪೆದ್ದು ಮುಂಡೇದೇ.. ಏನಾದ್ರೂ ಹೆಚ್ಚು ಕಮ್ಮಿ ಆಗಿದ್ರೆ ನಾನು ರುಕ್ಕೂಗೆ (ನನ್ನಮ್ಮ) ಏನು ಹೇಳಬೇಕಿತ್ತು? ಮುಖ ತೋರಿಸೊಕ್ಕಾದ್ರೂ ಆಗ್ತಿತ್ತಾ ನಂಗೆ? ಹುಚ್ಚು ಮಂಡೇದೇ’ ಎಂದು ಸಂಕಟ-ಸಿಟ್ಟಿನ ಪರಾಕಾಷ್ಠೆಯಲ್ಲಿ ನಾಲ್ಕು ಬಾರಿಸಿದರು.

‘ಮತ್ತೆಂದೂ ಹೀಗೆ ಮಾಡೊಲ್ಲ ಅಂತ ಪ್ರಮಾಣ ಮಾಡುʼ ಅಂದರು. ನಾನು ಹಿಂದೆ  ‘ಅʼ ಸೇರಿಸಿಕೊಂಡು ‘ಅಪ್ರಮಾಣವಾಗಿ ಹೀಗೆಲ್ಲಾ ಮಾಡೋಲ್ಲ’ ಎಂದು ಭೀಷ್ಮ ಪ್ರತಿಜ್ಞೆಯನ್ನೇ ಮಾಡಿದೆ. ತುಂಬಾ ದಿನಗಳ ಕಾಲ ಈ ಘಟನೆ ಕಾಡಿದ್ದು ಸುಳಲ್ಲ. ಸಾವನ್ನೇ ಕಂಡು ಬಂದಂತಾಗಿದ್ದ ಅನುಭವ ನನ್ನನ್ನು ತಲ್ಲಣಗೊಳಿಸಿಬಿಟ್ಟಿತ್ತು. ಸಾವಿನೊಡನೆ ಆದ ಪ್ರಥಮ ಮುಖಾಮುಖಿ ಎನ್ನಲೇ?

| ಮುಂದಿನ ಸಂಚಿಕೆಯಲ್ಲಿ |

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: