ಅಗಲಿದ ರಂಗ ಕುಡಿಗೆ..

ಹುಲುಗಪ್ಪ ಕಟ್ಟೀಮನಿ

ಏ ಕತ್ತೆ ಲೌಡಿ
ನಿನಗ್ಯಾರೆ ಈ ಹಕ್ಕು ಕೊಟ್ಟೋರು ?
ಭೂಮಿಗೆ ಭಾರಾದವರು ಬೇಕಾದಷ್ಟಿದ್ದಾರ ನನ್ನಂತವರು.
ನಿನ್ನ ಭಾರ ಹಗುರ ಮಾಡಿಕೋಬೇಕೆಂದರ ಕರೆದುಕೊಂಡು ಹೋಗು
ನನ್ನಂತವರನ್ನ

ಈ ಹುಡುಗs
ಬರೇ ಬಂಗಾರದಂತವ ಅಲ್ಲ
ಬಂಗಾರದ ಹುಡುಗನಾs ಆಗಿದ್ದ.

ಮಾಡಬಾರದ್ದನ್ನೆಲ್ಲ ಮಾಡಿದೋರು
ಪಾಪದ ಹೊರಿ ದೊಡ್ಡದು ಮಾಡಿದೋರು
ಬ್ಯಾರೇನ ಅದಾರ
ಇನ್ನೇನು ನೀ ಮೈ ಕೊಡುವ್ ತಿ ಅನ್ನುವಾಗ
ಈ ಒಂದೂs ಮಕ್ಕಳೆಲ್ಲ
ಜಿಗಣಿ ಜಿಗಣಿಗಳಾಗಿ ನಿನ್ನ ಮೈಗೆ ಅಡ್ರಿರ್ತಾರ

ಆದ್ರ ನಿನಗ?.. ನಿನವೇನು ಕಣ್ಣಾ ?
ಏನು ಪಡ್ಡೀ ತೂತs ?
ಏ…ಕತ್ತರಂಡೆ?
ನೋಡs… ನೋಡು, ನೋಡು…
ಇವ…
ಕಣ್ಣು ತುಂಬ ಕನಸ ಕಾಣೋ ಹುಡುಗ
ಮುಖದಾಗ ನಗೂನಾs ನಗು
ಬೀಸಾಳು, ಎತ್ತರದ ಮೈಕಟ್ಟು

ಮಗಾs…
ಇಕಾ ನೂರ್ ರೂಪಾಯಿ
ಸಂತಿಗೋಗಿ ಜೀವಕ್ಕ ಏನೇನು ಬೇಕೋ ಅದನ್ನೆಲ್ಲ ತಗಂಬಾ ನನ ಕಂದ ಅಂತ ಅವರವ್ವ ಹೇಳಿದ್ರ ಸಾಕು
ಸಂತ್ಯಾಗಿರೋರ್ನೆಲ್ಲ ಮಾತಾಡಿಸಿ
ಅವರ ಊರಾಗ ಮಳೆ ಬೆಳೆ ವಿಚಾರ್ಸಿ
ಯಾರ್ಯಾರ ಮನ್ಯಾಗ ಹೆಣ್ಣುಅದಾವ
ಯಾರ್ಯಾರ ಮನ್ಯಾಗ ಗಂಡದಾವ
ಎಲ್ಲ ಜಪ್ತಿ ಮಾಡಿ, ಪಟ್ಟಿ ಮಾಡಿ
ದಿನಸಿ ಒಂದು್ರುಪಾಯಿ ಇದ್ದದ್ದನ್ನ
ಎಂಟಾಣೆಗೆ ಇಳಿಸಿ ,ಜೀವಕ್ಕ ಬೇಕುಬೇಕಾದ್ದನ್ನ ಕೊಂಡು ಕೊಂಡು ಮತ್ತೆ ಮುಂದಿನ ಸಂತಿಗೆ ಆಗುವಷ್ಟು ರೊಕ್ಕ ಉಳಿಸಿಗೊಂಡು
ಅಲ್ಲೆ ಟೆಂಟಿನಾಗ ಸಿನಿಮಾನಾರ ಆಗಲಿ
ರಂಗಾಯಣದಾಗ ನಾಟಕನಾರ ಆಗ್ಲಿ
ನೋಡಿಕೊಂಡು ಅವರು ಹಿಂಗ್ ಮಾಡಬೇಕಿತ್ತು,
ಇವರು ಹಂಗ್ ಮಾಡಬೇಕಿತ್ತು ಅನುಕೋತ ಮನಿ ಸೇರತಿದ್ದ ಹುಡುಗ

ಏ ಸುಟ್ಟು ಮಾರಿಯವಳs…ಕರಕೊಂಡು ಹೋಗುವಾಗ ಕಣ್ಣುಬಿಟ್ಟು ನೋಡಬೇಕಾ
ನಿನ್ನವೇನು ಕಣ್ಣ? ಏನು ಪಡ್ಡೀತೂತ?

ಅವ ಏನಂತ ಅವನಿಗ ಗೊತ್ತಿರಲಿಲ್ಲ
ಅವ ಮುಟ್ಟಿ ನೋಡಿಕೊಂಡಾಗಷ್ಟ ತಾನು ಜನಿವಾರದಾವ ಅಂತ ಗೊತ್ತಾಗ್ತಿತ್ತು.
ಅವ ಒಂದು ನಮೂನಿ
ಸಂಸ್ಕಾರದ ನಾರಣಪ್ಪನಾs ಇದ್ದ.
ವಿಚಾರವಂತ ಇದ್ದ.
ಮರುಗೋದು, ಕರಗೋದು
ಅಂಟಿಗೊಂಡ ಗುಣ ಆಗಿತ್ತು.

ಆಟ ಕಟ್ಟೋರ ಜೊತೆ ಆಟ ಕಟ್ಟಿದ
ಅವರಿಗೆ ಜೀವಕ್ಕ ಜೀವಾದ
ಗೆಣೆಕಾರರಿಗೆ ಆಪತ್ಕಾಲ ಬಂದಾಗ
‘ಯವ್ವಾ’ ಹಿಂಗಾತು
‘ಯವ್ವಾ’ ಹಂಗಾತು ಅಂತ ನಮ್ಮಾಕಿ ಹತ್ರ ತನಗಾs ಆತೇನೋ ಅನ್ನುವಂಗ ಹಲಬತಿದ್ದ.

ನನ್ನಾಟ ಅಂದ್ರ
ಎಲ್ಲರಗಿಂತ ಮೊದಲು ಚಾಪಿ ಹಾಸಿಗೆಂಡು
ನಮ್ಮಜ್ಜ ಈಗ ಬರ್ತಾನ..
ನಮ್ಮಜ್ಜ ಈಗ ಬರ್ತಾನ ಅನುಕೋತ ಕುಂಡ್ರಾವ.

ನಿನವೇನು ಕಣ್ಣಾs ಏನು ಪಡ್ಡೀ ತೂತs ಭೋಸುಡಿ
ವಜ್ಜಿಯಾಗಿದ್ರ ಕರಕೊಂಡು ಹೋಗಾ ನನ್ನಂಥವ್ರನ್ನ

ಇವ ಯಾರಿಗು ಕೇಡ ಬಯಸಲಿಲ್ಲ
ಕುಟಕಿ ಆಡಲಿಲ್ಲ, ಇನ್ನೊಬ್ಬರ ತುತ್ತು ಕಸಿಲಿಲ್ಲ.
ಬಂಗಾರದಂಗಿದ್ನ. ಬೀಸಾಳು, ಎತ್ತರದ ಮೈಕಟ್ಟು.

ಈ ನಮ್ಮ ಹುಡುಗನಿಗೆ ಆ ಕುಳ್ಡುಕುಂಬಾರ್ತಿ
ಒಂದು ಹೆಣ್ಣ ಹುಟ್ಟಸಬಾರದಾಗಿತ್ತ.?
ಅವನ ಕನಸಾs ಕನಸು…
ಚೆಂದ ಚೆಂದ ಕನಸು ಕಾಣಾವ
ಕಂಡದ್ದನ್ನ ಬೆನ್ನು ಹತ್ತಾವ
ಮತ್ತ ನಮ್ಮಾಕಿ ಹತ್ರ
ಯವ್ವಾ ಹಂಗಿದ್ಲು,,, ಹಿಂಗಿದ್ಲು ಅಂತ
ತನ್ನ ಕಣ್ಣಾಗಿನ ಗೊಂಬಿ ಕತಿ ಹೇಳಾವ.
ಒಮ್ಮೆ ಆಟದವರ ಜೊತೆ ಆಟ ಕಟ್ಟುವಾಗ ತನ್ನ ಕಣ್ಣಾಗಿನ ಗೊಂಬಿ ಕಂಡಂಗಾಯ್ತಂತೆ
ಕಾಣ ಕಾಣಾದ್ರಾಗ ಕರಗಿ ಹೋದ್ಲಂತ
ಇದನ್ನ ಕೇಳಿಕೋತ
ನಮ್ಮಾಕಿ ಕೈ ಅವನ ಬೆನ್ನು ಸವರಿದ್ದಾ ಸವರಿದ್ದು..

ಇವ ಮೊದ್ಲಾs…. ದನ ಕಾಯಾವ
ಸಣ್ಣ ಸಣ್ಣ ದನ ಕಾಯೋ ಹುಡುಗರನ್ನ
ಕಟ್ಟಿಗೊಂಡು ರಂಗಾಯಣದಾಗ ಕಂಡ ಆಟಗಳನ್ನ ಅವರಿಗೆ ಕಲಿಸೋದೇನು,ಕುಣಿಸೋದೇನು
ನಮ್ಮ ಗುರು ಕಾರಂತರನ್ನ ನಮ್ಮಿಂದ ಎರವಲು ಅಂತ ಕಿತ್ಗೊಂಡೋಗಿ ಹುಡುಗರತ್ರ ಈತ ನಮ್ಮಜ್ಜಾರಜ್ಜ ಈತ ಈಗ ಬರ್ರಿ ನಾಂದಿ ಪಧ್ಯ ಆಡೋಣ ಅಂತಿದ್ದ.

ಅಯ್ಯ ಸೊಟ್ಟ ಮಾರಿಯವಳ
ಹೊಟ್ಟಿಗೇನು ತಿಂತಿ?
ನಿನವೇನು ಕಣ್ಣಾ? ಏನು…

ವಜ್ಜಿಯಾಗಿದ್ರ ಮೈ ಕೊಡವಿಕೊ
ಆದರೆ ನೋಡು ಅಮಾಯಕರ ಉದರುತಾರ.
ನಿನ್ನ ಉದರ ಬಗದೋರು
ನಿನ್ನ ಮೈಮ್ಯಾಲೆ ಮಣ್ಣು ಗೆಬುರೋ ಹುಳಗಳನ್ನ ಬಿಟ್ಟೋರು, ಗಿಳಿವಿಂಡಿನ ಕುಡಿಯೋ ನೀರು ಕದ್ದೋರು
ಗುಬ್ಬಚ್ಚಿಗಳ ಕತ್ತು ಹಿಸುಕಿದವರು
ಪಸುಪಕ್ಸಿ ಪ್ರಾಣಿಯಾದಾಗಿ ಅವುಗಳನ್ನ ಒಕ್ಕಲು ಎಬ್ಬಿಸಿದವರು ಬ್ಯಾರೇನ ಅದಾರ

ಅವರಿಗೆ ನಮ್ಮ ಹುಡುಗೂನ
ಕಣ್ಣಿಗೆ ಬಿದ್ದಂತ ಕನಸು ಬೀಳೋದಿಲ್ಲ
ಕಣ್ಣಾಗ ಬಣ್ಣsನ ಇರೋದಿಲ್ಲ
ಒಳ್ಳೆ ಆಟ ಕಟ್ಟೋರಲ್ಲ
ಆದರಆಟದವರು ಬೆರಗಾಗಬೇಕು
ಅಂತ ಆಟ ಕಟ್ಟುತ್ತಾರ
ಇವನೌನು
ಈ ಭರತಮುನಿ
ಇವರಿಗೆ ಕದ್ದು ಕದ್ದು ಹೇಳಿಕೊಟ್ಟಾನೇನೋ

ಯವ್ವ ಹೊಟ್ಟ್ಯಾಗ ಉರಿಯಾಗಿ, ಎದಿ ಭಾರಾಗಿ
ನಾಲಗಿ ಬಂಧಾಂಗ ಆಡತೈತಿ.
ಈ ಸಾವಿಗೆ ಯಾರು ಹೊಣಿ

ಅಂತೂ ಈ ಹುಡುಗ ಕೈ ಬಿಟ್ಟೋದ
ಈ ಸಾವು ಕಾಡಿದಷ್ಟು ಯಾರದ್ದೂ ಕಾಡಲಿಲ್ಲ.
ಹೋಗಿ ಬಾ ವಿಕ್ರಮ…

‍ಲೇಖಕರು Avadhi

June 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಬಹುಬಹುಕಾಲ ನೆನಪಲ್ಲುಳಿಯುವ ಕವನ. ಕಣ್ಣ ಮುಂದೆ ಕಿರಿಯರು ಹೋಗಬಾರದು. ಆ ಸಂಕಟವನ್ನು ಕವನದ ಪದಪದವೂ ಹೊತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: