ಜಿ ಎನ್ ರಂಗನಾಥ ರಾವ್ ಲಹರಿ- ಸಂವೇದನೆಯೂ ಕೋವಿಡ್‌ನ ಒಂದು ಮುಂಜಾನೆಯೂ…

ಜಿ ಎನ್ ರಂಗನಾಥ ರಾವ್

ಕರಾಗ್ರೆ ವಸತೇ ಲಕ್ಷ್ಮಿ ಕರಮಧ್ಯೆ ಸರಸ್ವತೀ/
ಕರ ಮೂಲೆ ಸ್ಥಿತಾ ಗೌರೀ ಪ್ರಭಾತೇಕರದರ್ಶನಂ
-ಎಂದು ಕೈಗಳನ್ನು ಕಣ್ಣಿಗೊತ್ತಿಕೊಂಡು ನಾನು ಹಾಸಿಗೆ ಬಿಟ್ಟೇಳುವ ಹವಣಿಕೆಯಲ್ಲಿದ್ದಾಗಲೇ-
‘ಹೊತ್ತುಮೀರ್ತ ಬಂದರೂ ಏನು ಹಳವಂಡ ನಿಮ್ಮದು. ಏಳಿ ಹೊತ್ತಾಯ್ತು’
-‘ಸರಳ ರಗಳೆ’ ಬೆಳಗಿನ ಕುಳರ‍್ಗಾಳಿಯಂತೆ ನನ್ನ ಕಿವಿಗಳಿಗೆ ಅಪ್ಪಳಿಸಿತು.

ಸರಳಾ ನನ್ನ ಧರ್ಮ ಪತ್ನಿ (ಧಪ). (ನನಗೆ ಅಧರ್ಮ ಪತ್ನಿಯರು ಯಾರೂ ಇಲ್ಲವಾದರೂ ಸಾಮಾಜಿಕ ರೂಢಿಯಿಂದ ಹಾಗೆ ಕರೆಯವಯುದು ಅಭ್ಯಾಸವಾಗಿಬಿಟ್ಟಿದೆ.) ಸರಳಾಳ ಮಾತು ಸಂಗೀತದಂತೆ ಸುಮಧುರವೇ ಎಂದೇ ನಾನು ಅವಳು ಸೊಲ್ಲೆತ್ತಿದರೆ ಸರಳ ರಗಳೆಂದು ಕರೆಯುತ್ತಿದ್ದೆ. ಒಮೊಮ್ಮೆ ಅದು ವ್ಯಂಗ್ಯವೆಂದು ಅವಳ ಮುನಿಸಿಕೊಳ್ಳುತ್ತಿದ್ದುದೂ ಉಂಟು.

‘ಏಳಿ, ಆರೂವರೆ ಆಯ್ತು. ಕರ್ಫ್ಯೂ, ಲಾಗೌಟ್ ದಿನಗಳಲ್ಲಿ ಹೀಗೆ ದಿಮ್‌ರಂಗ ದಿಪಾಲ ಪಂಡಗ’ ಅಂತ ಮಲಗಿದ್ರೆ ಸಂಸಾರ ನಡೆದ ಹಾಗೇ ಆಯ್ತು. ಮನೇಲಿ ಏನೂ ಅಂದ್ರ ಏನೂ ಇಲ್ಲ. ಈಗಾಗಲೇ ಅಂಗಡಿ ಮುಂದೆ ಹನುಮಂತನ ಬಾಲದ ಥರಾ ಕ್ಯೂ ಬೆಳದಿರುತ್ತೆ’ ಎದ್ದವನೇ ನಾಲ್ಕು ಹನಿ ನೀರು ಚಿಮುಕಿಸಿಕೊಂಡು ಮುಖ ಪ್ರಕ್ಷಾಳನ ಮುಗಿಸಿ- ‘ಕಾಫಿ ಕೊಡು, ಬ್ಯಾಗುಗಳನ್ನ ಕೊಡು’ -ಎಂದು ಅವಸರಿಸಿದೆ. ‘ಕಾಫೀನೂ ಇಲ್ಲ ಎಂತಾದ್ದೂ ಇಲ್ಲ. ನಿಮ್ಮ ತಂಗಳು ಪೆಟ್ಟಿಗೆ ಹಳಸಿ ಕೂತಿದೆ. ನಿನ್ನಿನ ಹಾಲು ಬಿ.ಜೆ.ಪಿ ಥರಾ ಒಡದು ಕೂತಿದೆ’ ಎಂದು ಸರಳ ರಗಳೆ ಉಲಿಯಿತು.

ಈ ರಗಳೆಯ ಒಗಟನ್ನು ನಾನು ಸ್ವಲ್ಪ ಬಿಡಿಸಿ ಹೇಳಬೇಕು. ಫ್ರಿಜ್ ಯಾನೆ ರೆಫ್ರಿಜರೇಟರ್‌ನ ಜಾನಪದ ರೂಪ ತಂಗಳು ಪೆಟ್ಟಿಗೆ. ಈ ಪದವನ್ನು ಟಂಕಿಸಿದವರು ನನ್ನ ಓರಿಗೆಯ ಆ ಕಾಲದ ಪ್ರಸಿದ್ಧ ವಿಡಂಬನಕಾರ ಸಿ.ಕೆ.ಎನ್.ರಾಜಾ ಅವರು. ರಾತ್ರಿ ತಿಂದುಂಡು ಮಿಗುವ ಗೊಜ್ಜು, ಚಟ್ನಿ, ಹುಳಿ, ಅನ್ನ ಇವುಗಳನ್ನು ನಾವು ಫ್ರಿಜ್ ನಲ್ಲಿಟ್ಟು ಮರುದಿನ ಬಳಸುವುದಿಲ್ಲವೇ. ನಮ್ಮ ಹಳ್ಳಿಯ ಜನ ಅದನ್ನು ತಂಗಳೂಟ ಎನ್ನುತ್ತಿದ್ದರು. ತಂಗಳು ಆಹಾರ ಪದಾರ್ಥಗಳು ಇರುವ ಪೆಟ್ಟಿಗೆ ತಂಗಳು ಪೆಟ್ಟಿಗೆ ಎಂದೇ ಗ್ರಾಮ್ಯದ ಸೊಗಡು ಇನ್ನೂ ಉಳಿಸಿಕೊಂಡಿದ್ದ ರಾಜಾ ಅವರಿಗೆ ಫ್ರಿಜ್ ಎಂಬ ಆಧುನಿಕ ಆವಿಷ್ಕಾರ ತಂಗಳು ಪೆಟ್ಟಿಗೆಯಾಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಇದನ್ನು ನಾನು ಪ್ರ.ವಾ.ದೀಪಾವಳಿ ಸಂಚಿಕೆಯಲ್ಲಿ ಪ್ರಕಟಿಸಿದ್ದೆ. ಈ ಪ್ರಯೋಗ ನನ್ನ ‘ಧಪ’ಗೆ ತೌರುಮನೆಯಷ್ಟೇ ಆಪ್ತವೆನಿಸಿ ಅವಳು ಫ್ರಿಜ್ಜನ್ನು ‘ತಂಗಳು ಪೆಟ್ಟಿಗೆ’ ಎಂದೇ ಕರೆಯುತ್ತಿದ್ದಳು. ಹಾಲು ಒಡೆದು ಬಿ.ಜೆ.ಪಿ. ಆಗಿದೆ ಎಂದರೆ ಸಂತೋಷ್-ಯಡ್ಡೀ ಬಣದಂತೆ ಎಂಬುದು ‘ಸರಳ ರಗಳೆ’ಯ ರೂಪಕವಗಿತ್ತು. ದಿನಸಿಗೊಂದು, ತರ್ಕಾರಿಗೊಂದು, ಹಣ್ಣಿಗೊಂದು ಎಂದು ನಾನು ಮೂರು ನಾಲ್ಕು ಬ್ಯಾಗುಗಳನ್ನು ಹಿಡಿದು ಮೊದಲು ದಿನಸಿ ಅಂಗಡಿಯತ್ತ ದೌಡಾಯಿಸಿದೆ.

ಮೊದಲೆಲ್ಲ ದಿನಸಿ ವ್ಯಾಪಾರ ಬೆಂಗಳೂರಿನಂಥ ನಗರದಿಂದ ಸಣ್ಣಪುಟ್ಟ ಹಳ್ಳಿಯವರೆಗೆ ಶೆಟ್ಟರ ಏಕಸ್ವಾಮ್ಯವಾಗಿತ್ತು. ಈಗ ಅದರಲ್ಲೂ ಸಂಕರವಾಗಿ ಬಿಟ್ಟಿದೆ. ಮಾರ‍್ವಾಡಿಗಳೂ ಇತ್ಯಾದಿಯಾಗಿ ಯಾರುಯಾರೋ ಇದರಲ್ಲಿ ನುಸುಳಿ ಕೊಂಡು ಬಿಟ್ಟಿದ್ದಾರೆ. ಇರಲಿ, ಸದ್ಯಕ್ಕೆ ನಮ್ಮ ಮನೆಯ ಹತ್ತಿರ ಶೆಟ್ಟರ ಅಂಗಡಿ ಇದೆ. ನಾನು ಪರಂಪರಾನುಗತ ಗ್ರಾಹಕನಂತೆ ಹೆಮ್ಮೆಯಿಂದ ಅಲ್ಲಿಗೆ ಹೋಗುತ್ತೇನೆ. ಶೆಟ್ಟರೂ ನನಗೆ ಮರ್ಯಾದೆಯಿಂದ ಆದ್ಯತೆ ಮೇಲೆ ನಾಮಾಂಕಿತ ಏರಿಸುತ್ತಾರೆ- ‘ನೀವು ಪತ್ರಿಕೆಯವರು ಬನ್ನಿ, ಬನ್ನಿ’ ಎಂದು.

ಶೆಟ್ಟರ ಅಂಗಡಿಯ ಮುಂದೆ ಹನುಮಂತನ ಬಾಲದಂಥ ದೊಡ್ಡ ಕ್ಯೂ ಇತ್ತು. ಇದು ತಿರುಪತಿಯ ಆಂಜನೇಯನ ಬಾಲದ್ದೋ ಅಥವಾ ನಮ್ಮ ಹೊಸಪೇಟೆಯ ಹನುಮಂತನದೋ ಎಂದು ನಾನು ಒಂದು ಕ್ಷಣ ಗಲಿಬಿಲಿಗೊಂಡೆ. ದೂರ…ದೂರ…ಡಿಸ್ಸಟೆನ್ಸ್…ಡಿಸ್ಟೆನ್ಸೆ ಎಂದು ಮೋದಿಯವರಿಂದ ದದಾದಿಯರ ವರೆಗೆ ಎಲ್ಲ ಬೊಬ್ಬೆ ಇಟ್ಟರೂ ಜನರಿಗೆ ಅರ್ಥವಾದಂತಿರಲಿಲ್ಲ.

ಬೆದೆಗೆ ಬಂದ ಕಡಸುಗಳು ಒಂದನ್ನೊಂದು ಮುತ್ತಿಕ್ಕುವಂತೆ ಒತ್ತೊತ್ತಾಗಿ ಒಬ್ಬರ ತಲೆ ಸಂದಿಯಲ್ಲಿ ತಮ್ಮ ಮುಖವನ್ನು ತೂರಿಸುತ್ತಾ ಆಪ್ಯಾಯಮಾನವಾಗಿ ‘ದೂರ’ವನ್ನು ಸಾಧಿಸಿದ್ದರು. ಇದನ್ನು ಕಂಡು ನಮ್ಮ ನಾಯಕನಿಗೆ ರೇಗಿ ಹೋಯಿತು. ‘ಶೆಟ್ಟರೇ, ಏನಿದು? ಜೇನು ನೊಣದ ಥರಾ ಮುತ್ಕೊಂಡಿದಾರೆ, ಅಂಗಡಿ ಮುಚ್ಚಿಸ ಬೇಕಾ?’ ಶೆಟ್ರು ಗಲ್ಲಾ ಬಿಟ್ಟು ಓಡೋಡಿ ಬಂದರು; ‘ಪತ್ರಕರ್ತರ ಮುಂದೆ ನನ್ನ ಮಾನ ತೆಗೀತೀರೇನಪ, ದೂರ, ದೂರ, ನಿಂತಕ್ಕೊಳ್ಳಿ’ ಎಂದು ತಾಕೀತು ಮಾಡಿದರು.

‘ಏನ್ ಕೊಡ್ಲೀ ಸಾರ್. ನಿವ್ಯಾಕ್ ಬರ್ಲಿಕ್ ಹೋದ್ರೀ, ಒಂದು ಫೋನ್ ಮಾಡಿದ್ರೆ ಮನೇಗೇ ಕಳಿಸ್ತಿದ್ದೆ’ ಎಂದರು. ಅಷ್ಟರಲ್ಲಿ ನಾನು ಅರಸುತ್ತಿದ್ದ ಶಂಭುವೂ ಕಣ್ಣಿಗೆ ಬಿದ್ದ. ಹಿಂದಿನ ಬೀದಿಯ ಶಂಭೂ ನಾನು ಗಳಸ್ಯ ಕಂಠಸ್ಯ ಮಿತ್ರರಾದರೂ ಹಲವೊಮ್ಮೆ ಅವನು ಕುತ್ತಿಗೆಗೇ ತರುತ್ತಿದ್ದುದು ಬೇರೆ ಮಾತು. ಈಗ ಅದು ಬೇಡ. ಕ್ಯೂನ ಮುಂಚೂಣಿಯಲ್ಲೇ ಶಂಬೂ ನಿಂತಿರುವುದು ಕಾಣಿಸಿತು. ಎಷ್ಟೇ ‘ದೂರ’ ಸಾಧಿಸಬೇಕು ಎಂದರೂ ನಮ್ಮವರು ಹತ್ತಿರ ಇರುವಾಗ ‘ದೂರ’ ಹೇಗೆ ಸಾಧ್ಯ? ನಾನು ತಾಯಿ ಹಸುವನ್ನು ಕಂಡ ಎಳೆಗರುವಿನಂತೆ ಅವನ ಬಳಿಗೆ ಚುಟುಚುಟು ಓಡಿದೆ-
‘ಏನೋ ಶಂಭು ನನಗಿಂತ ಮುಂಚೆ ಬಂದ್ಬಿಟ್ಟಿದೀಯ?’
‘ದೂರ, ದೂರ ನಿಂತ್ಕೋ’ ಎಂದ ಶಂಭು.
‘ನಂಗೂ ನಿಂಗೂ ಎಂಥಾ ‘ದೂರಾ’ನೋ ನಮ್ಮಿಬ್ಬರಿಗೂ ಕೊರೊನಾ ಇಲ್ಲಾಂತ ಮೊನ್ನೆ ತಾನೆ ನೆಗೆಟಿವ್ ಬಂದಿದೆ’ ‘ಆದರೂ ದೂರ ಕಾಪಾಡಿಕೊಳ್ಳೋದು ಬಹಳ ಮುಖ್ಯ…ಮೈಂಟೈನ್ ಡಿಸ್ಟೆನ್ಸ್’ ಎಂದು ತಾತ್ವಿಕವಾಗಿ ನುಡಿದ. ಅವನ ದೌನಿ ಗದ್ಗದಿತವಾಗಿತ್ತು. ಇವನು ಎಂಂದಿನಂತಿಲ್ಲ ಎಂದು ನಾನು ತಲೆ ಎತ್ತಿ ಅವನ ಮುಖಾವಲೋಕನ ಮಾಡಿದೆ. ಅಲ್ಲೇನೋ ಒಂದು ಚೂರು ವಕ್ರತೆ ಕಾಣಿಸಿತು. ಮುಖ ಸ್ವಲ್ಪ ಊದಿದಂತೆಯೋ, ಹಲ್ಲಿಗೆ ಸ್ವಲ್ಪ ಜಖಂ ಆದಂತೆಯೋ ಪ್ರಾಣದೇವರಿಗೆ ಹತ್ತಿರಹತ್ತಿರವಾಗಿ ಕಾಣಿಸುತ್ತಿತ್ತು.

‘ಏನಾಯಿತೋ?’ ಶಂಭೂ ವಯಸ್ಸಿನಲ್ಲಿ ನನಗಿಂತ ಎರಡು ದಶಕ ಚಿಕ್ಕವನು. ‘ರಾತ್ರಿ ದೂರ’ ಕಾಪಾಡಲಿಲ್ಲವೇನೋ?’ ಅವನು ಮಾತನಾಡಲಿಲ್ಲ. ಇರಲಿ ಬಾ ಎಂದೆ. ಶೆಟ್ಟರು ವಿಶೇಷ ಮುತುವರ್ಜಿ ವಹಿಸಿ ನಮ್ಮಿಬ್ಬರ ಅಕ್ಕಿ, ಬೇಳೆ, ಮೆಣಸಿಕಾಯಿ, ಎಣ್ಣೆ, ಬೆಲ್ಲ ಇತ್ಯಾದಿಗಳನ್ನು ತೂಗಿತೂಗಿ ನಮ್ಮ ಬ್ಯಾಗುಗಳಿಗೆ ತುಂಬಿಸಿದರು.

ಮುಂದೆ ತರಕಾರಿ ಅಂಗಡಿಗೆ ನಮ್ಮ ಪಯಣ. ಅಲ್ಲೊಂದು ಜನಜಾತ್ರೆ. ಈರುಳ್ಳಿ, ಆಲೂಗಡ್ಡೆ, ಟೊಮೋಟೋಗಳಿಗೆ ಜನ ಮುಗಿ ಬಿದ್ದಿದ್ದರು. ಮಾಸ್ಕ್ ಎನ್ನುವುದು ಮುಖ ಬಿಟ್ಟು ಮೂರು ಮೈಲಿ ದೂರ ಹೋಗಿತ್ತು. ತರಕಾರಿ ಆ ‘ವಾಸನಾ ಪ್ರಪಂಚ’ದಲ್ಲಿ ಹೆಂಗಸರು ಗಂಡಸರು ಎಲ್ಲ ‘ದೂರ’ ತೊರೆದು ಹತ್ತಿರವಾಗಿದ್ದರು. ಶಂಭು ಅವರಲ್ಲಿ ತಾನೂ ಒಬ್ಬ ಹತ್ತಿರದವನಾಗಿ ತರಕಾರಿ ಖರೀದಿಸಿದ. ನೀನು ಮಾಧ್ವ, ಈರುಳ್ಳಿ-ಬೆಳ್ಳುಳ್ಳಿ ತಿನ್ನುವುದಿಲ್ಲ ಎಂದು ಅದು ಬಿಟ್ಟು ಬೇರೆಲ್ಲವನ್ನೂ ನನಗೂ ಖರೀದಿಸಿದ. ಬಿಲ್ ಪಾವತಿಸಿ, ನಿನ್ನ ಬಿಲ್ ಇಷ್ಟು ಎಂದ. ಆಯಿತು ಎಂದು ಎಣಿಸಿಕೊಟ್ಟೆ.

ಅಂತೂ ಆ ಜಾತ್ರೆಯಿಂದ ಹೊರಬಂದಾಗ, ಬೆಳಗಿನ ತಿಂಡಿಯ ಬೆಳ್ಳುಳ್ಳಿಯಿಂದ ನಿನ್ನಿನ ಹ್ಯಾಂಗೋವರಿನ ಬ್ರಾಂಡಿಯವರೆಗೆ ರಖಂವಾರು ವಾಸನೆಗಳ ನೂರಾರು ಉಸಿರುಗಳು, ಬೆವರುಗಳು ಮತ್ತು ಅಪಾನವಾಯುಗಳ ವಿಶೇಷ ರಸಾಯನವನ್ನು ಸವಿದಂತಾಗಿತ್ತು ನಮ್ಮ ಪರಿಸ್ಥಿತಿ.

ಮುಂದೆ ಸ್ವಲ್ಪ ದೂರದಲ್ಲಿದ್ದ ಮಳಿಗೆಯಿಂದ ಬೆಳಗಿನ ಪೂಜೆ ನೈವೇದ್ಯಗಳಿಗೆ ಒಂದಷ್ಟು ಹೂವುಹಣ್ಣು ಹಾಲು- ಮೊಸರುಗಳನ್ನು ಖರೀದಿಸಿ-
‘ಇನ್ನು ಹೊರಡೋಣ ಶಂಭು’ ಎಂದೆ ಹೊರಬಂದಾಗ.
‘ಸ್ವಲ್ಪ ನಿಲ್ಲು ಮಾರಾಯ’
‘ಏಕೋ ಹಾಲು ಮೊಸರನ್ನೂ ತೆಗೆದುಕೊಂಡಾಯ್ತಲ್ಲ’
‘ಆದರೆ ಆಲ್ಕೋಹಾಲು’
ಹೊಸ ‘ಲಾಕ್ ಡೌನ್’ ವ್ಯವಸ್ಥೆಯಲ್ಲಿ ಹಾಲಿನ ಜೊತೆಯೇ ಆಲ್ಕೋಹಾಲನ್ನು ಬೆಳ್ಳಂಬೆಳಿಗ್ಗೆಯೇ ತೆಗೆದುಕೊಳ್ಳಬೇಕಾಗಿತ್ತು. ಹತ್ತರ ಮೇಲೇ ಅದೂ ಬಂದ್. ಶಂಬೂ ತನ್ನ ಬ್ಯಾಗುಗಳನ್ನು ರಸ್ತೆಬದಿಯಲ್ಲಿಟ್ಟು, ‘ಸ್ವಲ್ಪ ನೋಡಿಕೊಳ್ಳೋ ಬಂದೆ’ ಎಂದು ವೈನ್ ಶಾಪಿನತ್ತ ಓಡಿದ.

ನನಗೆ ಬೆಳಗಿನ ವಾಕಿಂಗ್ ಮತ್ತು ಸಂಜೆಯ ಪಾಟಿ೯ ಕುರಿತ ವೈಎನ್ಕೆ ಮಾತು ನೆನಪಾಯಿತು: ‘ಬೆಳಿಗ್ಗೆ ‘ರನ್’ ಫಾರ್ ಲೈಫ್, ಸಂಜೆ ‘ರಮ್’ ಫಾರ್ ಲೈಫ್’ ಶಂಭು ‘ರಮ್’ಗಾಗಿ ರನ್ ಮಾಡುತ್ತಿದ್ದುದನ್ನು ನೋಡುತ್ತಾ ನಿಂತೆ. ಶಂಭೂ ಬರ್ಮುಡಾದ ಎರಡು ಜೇಬುಗಳಲ್ಲೂ ಒಂದೊಂದು ಕ್ವಾರ್ಟರನ್ನು ಇಳಿ ಬಿಟ್ಟು ಓಡೋಡುತ್ತಲೇ ಬಂದು ಬ್ಯಾಗುಗಳನ್ನು ಕೈಗೆತ್ತಿಕೊಂಡು ‘ನಡೀ ಇನ್ನು ದಿನದ ರೇಷನ್ ಕಥಿ ಮುಗೀತು’ ಎಂದ. ನಾನು ಅವನನ್ನು ಮನೆಗೆ ಸಾಗಹಾಕಿ ಭಾರದ ಬ್ಯಾಗುಗಳನ್ನು ಕೈಯ್ಯಿಂದ ಕೈಗೆ ಬದಲಾಯಿಸುವ ಸಕ೯ಸ್ ಮಾಡುತ್ತಾ ಹೈರಾಣಾಗಿ ಮನೆ ತಲುಪಿದೆ.

ಸರಳಾ ಬ್ಯಾಗುಗಳಿಗೆ ಕೈಹಾಕುತ್ತಿದ್ದನ್ನು ಕಂಡು ‘ಮೊದಲು ಹಾಲು ಕಾಯಿಸಿ ಕಾಫೀ ಬೆರಸು. ಆಮೇಲೆ ಸಾಮಾನುಗಳನ್ನು ತೆಗೆದಿಟ್ಟುಕೊಳ್ಳುವಂತೆ’ ಎಂದೆ. ಕಾಫಿ ಕುಡಿದಾದ ಮೇಲೆ ಪೇಪರ್ ಓದಬೇಕೆನಿಸದರೂ ಕೋವಿಡ್ ಮಯವಾದ ಪೇಪರನ್ನು ಕೈಗೆತ್ತಿಕೊಳ್ಳುವ ಉತ್ಸಾಹ ಗರಿಗೆದರಲಿಲ್ಲ. ಅಧಾ೯ಂಗಿ ದಿನಸಿ ಸಾಮಾನುಗಳನ್ನೆಲ್ಲ ಒಪ್ಪಮಾಡುತ್ತಿದ್ದಳು.

ನೆಲಕ್ಕೆ ಬಿದ್ದಿದ್ದ ಸಾಮಾನುಗಳ ಮಧ್ಯೆ ನಾಲ್ಕು ‘ಸೆನ್‌ಸೊಡೈನ್’ ಟೂತ್ ಪೇಸ್ಟುಗಳು ಎದ್ದು ಕಂಡವು. ‘ಇದೇನೆ ಶೆಟ್ಟರು ಕಾಲ್ಗೇಟ್ ಬದಲು ಸೆನ್ಸೊಡೈನ್’ ಕೊಟ್ಟಿದ್ದಾರಲ್ಲ?’ ಎಂದು ಚಕಿತನಾದೆ. ‘ಇಲ್ಲ ನಾನು ಬರೆದದ್ದೇ ಸೆನ್‌ಸೊಡೈನ್’ -ಸರಳ ರಗಳೆ’
‘ಏಕೆ?’
‘ಸೆನ್‌ಸೊಡೈನ್‌ನಿಂದ ಸಂವೇದನಾಶೀಲತೆ ಹೋಗುತ್ತೆ, ಅಂದರೆ ಸಂವೇದನೆ ‘ಡೈ’ ಆಗುತ್ತೆ ಅಂತ ದೂರ ದರ್ಶನದಲ್ಲಿ ವೈದ್ಯರು ದಿನಾ ಹೇಳೋದನ್ನ ಕೇಳಿಲ್ಲವೆ? ಆ ರೋಗ ನಿವಾರಣೇಗಂತ ತರಿಸಿದೀನಿ’
‘ನಮ ಮನೇಲಿ ನಮಗ್ಯಾರಿಗೂ ಅಂಥ ರೋಗ ಇಲ್ಲವಲ್ಲೆ. ಎಲ್ಲರ ಹಲ್ಲುಗಳೂ ಗಟ್ಟಿಮುಟ್ಟಾಗಿವೆಯಲ್ಲ’
‘ಯಾಕಿಲ್ಲ? ಸಂವೇದನಾಶೀಲತೆ ಹಲ್ಲುಗಳಿಗಷ್ಟೇ ಸೀಮಿತವೆ? ಮೊದಲಿಗೆ ನಿಮಗೆ ಸಾಹಿತ್ಯ ಕಲೆಗಳಲ್ಲಿ ಹೊಸ ಸಂವೇದನೆ ಕಾಣುವ ಸಂವೇದನಾಶೀಲತೆ ರೋಗ’ ಬಡಿದುಕೊಂಡಿದೆ.

ಇನ್ನು ನಿಮ್ಮ ಕುಮಾರ ಕಂಠೀರವನಿಗೆ ಪ್ರಜಾಪ್ರಭುತ್ವದಲ್ಲಿ ಹಿಂದುತ್ವದಂಥ ಹೊಸ ರಾಜಕೀಯ ಪ್ರಯೋಗಗಳು ಎನ್ನುವ ಸಂವೇದನಾ ವ್ಯಾಧಿ ಅಂಟಿಕೊಂಡಿದೆ. ಲಿಬ್ಬು-ಪಬ್ಬು ಎನ್ನುವ ನಿಮ್ಮ ಮಗಳಿಗೆ ಆಧುನಿಕ ನಾರಿ ಸಂವೇದನೆ. ಈ ಸಂವೇದನೆಗಳನ್ನ ಕೇಳೀಕೇಳಿ ನನ್ನ ತಲೆ ಮೊಸರು ಗಡಿಗೆ ಆಗಿದೆ. ಈ ಸಂವೇದನಾಶೀಲತೆ ಪೀಡನೆಗಳಿಂದ ಪಾರಾಗಲು ನೀವು ಮೂವರಿಗೂ ಒಂದೊಂದು ಸೆನ್‌ಸೊಡೈನ್. ಇನ್ನೊಂದು ನನಗೆ, ಮೈಸೂರ್ ಪಾಕ್ ಬಾಯಿಗೆ ಹಾಕ್ಕೊಂಡ್ರೆ ‘ಚುಳ್’ ಎನ್ನುವ ಹಲ್ಲನ್ನು ದಾರಿಗೆ ತರಲು. ಇನ್ನು ಮುಂದೆ ಮನೆಯಲ್ಲಿ ಸಂವೇದನೆಗಳ ಲೆಕ್ಚರ್ ಕಾಟ ಬಂದ್.

-‘ಸರಳ ರಗಳೆ’ ಯಾವುದೋ ಒಂದು ಜುಜಬಿ ಜಾಹಿರಾತಿನ ರೂಪಕವನ್ನು ಹಿಡಿದುಕೊಂಡು, ಕಾವ್ಯದ ಮಾಧುರ್ಯ ಕಳೆದುಕೊಂಡು ವಾಚ್ಯವಾಗಿ ದೊಡ್ಡ ಆಲಾಪವೂ ಪ್ರಲಾಪವೂ ಆದುದಷ್ಟೇ ಅಲ್ಲದೆ ಸ್ವಲ್ಪ ಐಲುಪೈಲಿನಂತೆಯೂ ತೋರಿತು. ಹಲ್ಲಿನ ಸಂವೇದನೆಯನ್ನು ಹತ್ತಿಕ್ಕುವ ಟೂತ್ ಪೇಸ್ಟನ್ನು ಬಣ್ಣಿಸಲು ಆ ಜಾಹಿರಾತಿನ ಬರಹಗಾರ ಕಾವ್ಯದ ಪರಿಭಾಷೆಯನ್ನು ಬಳಸಿದ್ದನ್ನೇ ಹಿಡಿದುಕೊಂಡು ಕೊಂಡು ಆ ಟೂತ್ ಪೇಸ್ಟ್ ಬೇರೆಲ್ಲ ಸಂವೇದನೆಗಳಿಗೂ ಮದ್ದು ಎಂದರೆ ಅದು ಐಲುಪೈಲಲ್ಲದೆ ಮತ್ತೇನು?

ನಾನು ಮಾತಾಡಲಿಲ್ಲ. ಮಾತಾಡಿದರೆ ‘ಸರಳ ರಗಳೆ’ ಕೊನೆಗೆ ರಗಳೆಯಲ್ಲಿ ಪರ್ಯವಸಾನ ಹೊಂದುವ ಅಪಾಯವಿತ್ತು. ಹಿಂದಿನ ದಿನವಷ್ಟೇ ಓದಿ ಮುಗಿಸಿದ್ದ ಶ್ರೀಮತಿ ಭಾಮಿನಿಯವರ ‘ಕೆಲವು ಅಸಂವೇದಿ ಪದ್ಯಗಳು’ ಸಂಕಲನದ ಕವಿತೆಗಳು ನೆನಪಾಗಿ ನನ್ನ ಸಂವೇದನೆ ಕನಲಿತು. ಅಭಾಮಿನಿ ಷಟ್ಪದಿಯ ಆ ಕವಿತೆಗಳಲ್ಲಿ ಪ್ಯಾಷನ್ನೇ ಇರಲಿಲ್ಲ. ಅಡಿಗರು ಹೇಳುವ ಹಾಗೆ ಪ್ಯಾಷನ್ನಿಲ್ಲದ ಸಾಹಿತ್ಯ ಒಂದು ಸಾಹಿತ್ಯವೆ? ಪ್ಯಾಷನ್ ಅನ್ನೋದೊಂದು ಇದ್ದರೆ, ಅದು, ಅದರ ಹಿಂದಿನ ಕವಿ ಮನಸ್ಸಿನದು ನವ್ಯದ ಹೊಸ ಸಂವೇದನೆಯೇ ಅಥವಾ ನವೋದಯದ ಹಳೆಯ ಸಂವೇದನೆಯೆ? ಎಂದು ಮೌಲ್ಯಮಾಪನ ಮಾಡಬಹುದು ಎಂದಿತು ವಿಮರ್ಶನ ಪ್ರಜ್ಞೆ.

ಅಸಲಿಗೆ ಈ ಸಂವೇದನೆ ಎಂದರೇನು? ಎನ್ನುವುದು ನನ್ನ ಗೆಳೆಯ ಶಂಭುವಿನ ಪ್ರಶ್ನೆ. ‘ನೋಡಪ್ಪ ಶಂಭು ನೀನು ಒಂದೆರಡು ಕವಿತೆಗಳನ್ನು ರಚಿಸಿರಬಹುದು. ಲೇಖನಗಳನ್ನು ಬರೆದಿರಬಹುದು. ಆದರೆ ಕನ್ನಡ ಸಾಹಿತ್ಯದೊಳಗ ನೀನಿನ್ನೂ ಅಂಬೆಗಾಲಿಡುತ್ತಿರುವ ಕೂಸು ಎಂಬುದನ್ನ ಮರೆಯಬೇಡ. ಕಾವ್ಯ ಮೀಮಾಂಸೆಯಲ್ಲಿ ಕವಿ ಸಂವೇದನೆಗೆ ಮಹತ್ವದ ಸ್ಥಾನವಿದೆ.’

‘ಆಯ್ತಪ, ನಾನು ಅಂಬೆಗಾಲಿಡುವ ಕೂಸು. ನೀನು ದಾಪುಗಾಲು ಹಾಕುತ್ತಿರುವ ದೈತ್ಯ ವಿಮರ್ಶಕ ಲೇಖಕ, ಒಪ್ತೀನಿ. ಈ ಸಂವೇದನಾ ಅನ್ನೋದರ ಬರೋಬ್ರಿ ಅರ್ಥವಾದರೂ ತಿಳಿಸು’

‘ಹೇಳ್ತೀನಿ ಕೇಳು. ಇಂಗ್ಲಿಷ್‌ನ ಸೆನ್ಸಿಬಿಲಿಟಿ ಪದ ಇದೆಯಲ್ಲ ಅದರ ಕನ್ನಡ ಸಮಾನಾರ್ಥಕ ಪದವಾಗಿ ಸಂವೇದನೆ ಪದವನ್ನು ಟಂಕಿಸಲಾಗಿದೆ, ಸಂವೇದನಾ ಅಂದರೆ ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ಲಭಿಸುವ ಜ್ಞಾನ ಅಥವಾ ಅನುಭವ. ನಮ್ಮ ಪಂಚೇಂದ್ರಿಯಗಳೂ ಬುಧ್ಧಿಯೂ ಜಾಗೃತವಾಗಿದ್ದಾಗ ಮನುಷ್ಯ ಅರ‍್ಜಿಸುವ ಜ್ಞಾನ, ಅನುಭವ. ಸಂವೇದನಾಶೀಲ ಎಂದರೆ ಸುತ್ತಲ ಪ್ರಪಂಚವನ್ನು ತನ್ನ ಇಂದ್ರಿಯಗಳ ಮುಖೇನ, ಬುದ್ಧಿಯ ಮುಖೇನ ಗ್ರಹಿಸುವ ಸಾಮರ್ಥ್ಯ ಉಳ್ಳವನು ಎಂದರ್ಥ.ʼ

‘ಅದೆಲ್ಲ ಮಣ್ಣಂಗಟ್ಟಿ. ನಾನು ಹೇಳ್ತೀನಿ ಕೇಳು. ಇಂಗ್ಲಿಷಿನ ‘ಸಮ್’ ಹಾಗೂ ಕನ್ನಡದ ‘ವೇದನೆ’ಗಳ ಸಂಲಗ್ನವಾಗಿ ಈ ಸಂವೇದನೆ ಹುಟ್ಟಿಕೊಂಡಿದೆ. ಸುವರ್ಣ ಸಂಧಿಯ ಮೂಹೂರ್ತದಲ್ಲಿ.

ಭಾಷಾ ಪಂಡಿತ ಶಂಭುವಿನ ಈ ಸಂಶೋಧನೆಯ ಮುಂದೆ ನನ್ನ ಬಾಯಿ ಕಟ್ಟಿಹೋಯಿತು. ಸಂವೇದನೆಯನ್ನು ಮನುಷ್ಯ ತನ್ನ ಜ್ಞಾನ ಮತ್ತು ಅನುಭವಗಳಿಗೆ ಸ್ಪಂದಿಸುವ ಪರಿ ಎಂದೂ ಹೇಳಬಹುದು.ಈ ಸ್ಪಂದನ ಇತ್ಯಾತ್ಮಕವಾಗಿಯೂ ಇರಬಹುದು, ನೇತ್ಯಾತ್ಮಕವಾಗಿಯೂ ಇರಬಹುದು. ಸಂವೇದನೆಯನ್ನು ಕೋಮಲ ಭಾವನೆಗಳಿಗೆ ಪರವಶವಾಗುವ ಒಂದು ಮನಃಸ್ಥಿತಿ ಎಂದೂ ಪರಿಗಣಿಸಲಾಗುತ್ತದೆ. ಮುಖ್ಯವಾಗಿ ಜ್ಞಾನ (ಓದು, ಅಧ್ಯಯನ) ಮತ್ತು ಲೋಕಾನುಭವಗಳಿಂದ ಚುರುಕಾಗುವ ಸಂವೇದನೆಗಳಿಗೆ ಹೊರಪ್ರಪಂಚದ ಪ್ರಚೋದನೆಗಳೇ ಕಾರಣ ಎನ್ನುತ್ತಾರೆ ಮನೋವಿಜ್ಞಾನಿಗಳು.

ಸಂವೇದನೆಗಳಿಂದ ವರ್ತನೆಗಳು ಹುಟ್ಟುತ್ತವೆ. ಈ ವರ‍್ತನೆಗಳು ಮುಂದೆ ಕೋಲಾಹಲಕಾರಿಯಾದಂಥ ವಿಚಾರಸರಣಿಗೆ, ಪ್ರತಿಕ್ರಿಯೆಗಳಿಗೆ, ಪರಿಣಾಮಗಳಿಗೆ ಕಾರಣವಾಗಬಹುದು. ವ್ಯಷ್ಟಿ ಮತ್ತು ಸಮಷ್ಟಿಗಳಲ್ಲಿ ಪರಿವರ್ತನೆಗೆ ಸನ್ನೆಗೋಲಾಗಬಹುದು. ಆಧುನಿಕ ಸಂವೇದನೆಯಿಂದ ಕಾವ್ಯ ಮತ್ತು ಕಲೆಗಳ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಮರ್ಶಕರು ಹೇಳುವುದನ್ನು ಇದಕ್ಕೆ ನಿದರ್ಶನವಾಗಿ ಗಮನಿಸಬಹುದು.

ಖ್ಯಾತ ಸರೋದ್ ವಾದಕ ಪಂಡಿತ ರಾಜೀವ ತಾರಾನಾಥರು ಸಂಗೀತ, ಸಾಹಿತ್ಯ ಎರಡರಲ್ಲೂ ಪ್ರಖರ ಸಂವೇದನೆಯುಳ್ಳ ಕಲಾವಿದರು, ಚಿಂತಕರು. ಅವರು ನಮ್ಮ ನವ್ಯ ಸಾಹಿತ್ಯದ ಅಗ್ರ ಲೇಖಕ ಯು.ಆರ್. ಅನಂತ ಮೂರ್ತಿಯವರನ್ನು ಯುರೇಕ ‘ಸೆನ್ಸಿಬಲಿಟಿ’ಯ ಲೇಖಕ ಎಂದು ಬಣ್ಣಿಸಿದ್ದಾರೆ. ಯುರೇಕ ಎಂದರೆ ಹೊಸ ಆವಿಷ್ಕಾರದ ಹಂಬಲ, ಹೊಸದನ್ನು ಸೃಷ್ಟಿಸಿದಾಗಿನ ವಿಜಯೋತ್ಸಾಹ ಎಂಬೆಲ್ಲ ಅರ್ಥಗಳಿವೆ.

ರಾಜೀವ ತಾರಾನಾಥರು ಅನಂತ ಮೂರ್ತಿಯವರ ಸೃಜನಶೀಲ ಮನಸ್ಸು, ಪ್ರತಿಭೆ ಮತ್ತು ಶಕ್ತಿಗಳ ಹಿಂದಿನ ಆಧುನಿಕ ಸಂವೇದನೆಯ ತುಡಿತವನ್ನು, ಸಾಧನೆಗಳನ್ನು ಯುರೇಕ ಸೆನ್ಸಿಬಲಿಟಿ ಎಂದು ರೂಪಕ ಭಾಷೆಯಲ್ಲಿ ಎಷ್ಟು ಸೊಗಸಾಗಿ ಹೇಳಿದ್ದಾರೆ ನೋಡಿ. ಅಂತೆಯೇ ನಮ್ಮ ಮುದೇನೂರ ಸಂಗಣ್ಣ, ಚಂದ್ರಶೇಖರ ಕಂಬಾರ ಅವರುಗಳನ್ನು ಅಗದೀ ಅಸಲೀ ಜಾನಪದ ಸಂವೇದನೆ ಎಂದು ಕೊಂಡಾಡಬಹುದಲ್ಲವೆ? ಮನುಷ್ಯನ ಸಂವೇದನೆ ಬದುಕಿನ ಅರ್ಥದ, ಸತ್ಯವನ್ನು ಶೋಧಿಸುವ ವಿವಿಧ ಆಯಾಮಗಳಿಗೆ ಚಾಚಿಕೊಳ್ಳುತ್ತಿರುವಂತೆಯೇ ಅದನ್ನು ಹತ್ತಿಕ್ಕುವ, ಮರಗಟ್ಟಿಸುವ ಪ್ರಯತ್ನಗಳೂ ಸಮಾಜದಲ್ಲಿ ಮೊದಲಿನಿಂದ ನಡೆದು ಬಂದಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುವುದು, ಪ್ರಶ್ನಿಸುವ ಮನಸ್ಸುಗಳನ್ನು ದಮನಿಸುವುದು, ಸೆನ್ಸಾರ್, ಸಾಕ್ಷರತೆ ನಿರಾಕರಣೆ, ಉನ್ನತ ವ್ಯಾಸಂಗಕ್ಕೆ ಅಡಚಣೆ, ಸರ್ವಾಧಿಕಾರಿ ಪ್ರವೃತ್ತಿ ಇವೆಲ್ಲವೂ ಸಂವೇದನಾಶೀಲ ಮನಸ್ಸನ್ನು ಮರಗಟ್ಟಿಸುವ, ಅಸಂವೇದಿಯಾಗಿಸುವ ಕುಟಿಲೋಪಾಯಗಳೇ ಆಗಿವೆ. ಇಂಥ ಕುಟಿಲೋಪಾಯದ ಕೆಲಸಗಳನ್ನು ನಮ್ಮ ಮಠಗಳು, ಸರ್ಕಾರಗಳು ಮಾಡಿಕೊಂಡೇ ಬಂದಿವೆ. ಈಚಿನ ದಿನಗಳಲ್ಲಿ ಉನ್ನತ ಅಧ್ಯಯನ ಕೇಂದ್ರಗಳಲ್ಲೂ ಇದು ಕಂಡು ಬರುತ್ತಿದೆ.

ಇಂಥ ಪ್ರವೃತ್ತಿಯ ವಿರುದ್ಧ ನಮ್ಮ ನ್ಯಾಯಾಂಗ ಈಗೀಗ ಸಂವೇದನಾಶೀಲವಾಗುತ್ತಿರುವುದು ಒಂದು ಚೇತೋಹಾರಿ ಬೆಳವಣಿಗೆ. ಸರ್ಕಾರದ ವಿರುದ್ಧ ಮಾಧ್ಯಮಗಳ ಟೀಕೆಯನ್ನು ‘ದೇಶದ್ರೋಹ’ ಎಂದು ಹೇಗೆ ಹೇಳುತ್ತೀರಿ? ‘ದೇಶದ್ರೋಹ’ ಪದದ ಅರ್ಥವನ್ನು ಮರು ವ್ಯಾಖ್ಯಾನಿಸಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಸವೋಚ್ಚ ನ್ಯಾಯಾಲಯ (ಸುಪ್ರೀಂ ಕೋರ್ಟ್) ಇತ್ತೀಚೆಗೆ ಹೇಳಿರುವುದರಿಂದ ನನ್ನಂಥವರ ಪೆನ್ನಿಗೆ ಗನ್ನಿನ ಬಲ ಬಂದಂತಾಗಿದೆ.‌ ಹೀಗಾಗಿ ಸಂವೇದನಾಶೀಲ ಮನಸ್ಸುಗಳು ತಮ್ಮ ಸಂವೇದನೆಯನ್ನು ಕಾಪಾಡಿಕೊಳ್ಳಬೇಕಾದ ಈ ಅಗತ್ಯ ಇಂದು ಎಂದಿಗಿಂತ ಹೆಚ್ಚಾಗಿದೆ.

‍ಲೇಖಕರು Avadhi

June 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: