ಕೆ ಆರ್‌ ಸಂಧ್ಯಾರೆಡ್ಡಿ ಕರೋನಾಮುಕ್ತೆಯಾದ ಕಥನ – 6

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದ ಕೆ ಆರ್ ಸಂಧ್ಯಾರೆಡ್ಡಿ ಅವರು ಕನ್ನಡ ಜಾನಪದಕ್ಕೆ ಕೊಟ್ಟ ಕೊಡುಗೆ ಅಪಾರ.

‘ಮೂವತ್ತೈದರ ಹೊಸ್ತಿಲು’ ಇವರ ಮೊದಲ ಕವನ ಸಂಕಲನ. ಅಲ್ಲಿಂದ ಅವರು ಹಿಂದಿರುಗಿ ನೋಡಲಿಲ್ಲ. ಕವಿತೆ, ಕಥೆ, ಅನುವಾದ, ಜಾನಪದ ಇವರ ಪ್ರೀತಿಯ ಕ್ಷೇತ್ರಗಳಾದವು.

ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಸಂಧ್ಯಾರೆಡ್ಡಿ ನಂತರ ಎನ್ ಜಿ ಇ ಎಫ್ ಸಂಸ್ಥೆಯಲ್ಲಿ ಧೀರ್ಘ ಕಾಲ ಅನುವಾದಕರಾಗಿದ್ದರು. ತಾಯಿ ಅನಸೂಯ ರಾಮರೆಡ್ಡಿ ಸಹಾ ಲೇಖಕಿ. ಬರವಣಿಗೆ ಹಾಗೂ ಸಂಗೀತ ಇವರಿಗೆ ಚಿಕ್ಕಂದಿನಿಂದಲೇ ಬಂದ ಒಲವು.

ತಮ್ಮೊಳಗೆ ಕೊರೋನಾ ನೆಲೆಸಿದ್ದನ್ನೂ ಅದನ್ನು ಅವರು ಮುಲಾಜಿಲ್ಲದೆ ಹೊರಗೆ ಹಾಕಿದ್ದರ ಕಥನ ಇಂದಿನಿಂದ ಪ್ರತೀ ದಿನ ನಿಮ್ಮ ಮುಂದೆ

‘ಬರ್ಕ್ ವೈಟ್ ಕಂಡ ಭಾರತ’ದ ಅನುವಾದ, ‘ಲೇಖ ಲೋಕ’ ಸಂಪಾದನೆ ಇವರ ಹೆಮ್ಮೆಯ ಗರಿಗಳು.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಐದನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

6

ಆಕೆಯನ್ನು ಆತ ಅಮ್ಮನಂತೆಯೇ ನೋಡಿಕೊಂಡ..

ನಾನು ಹೊಸ ವಾರ್ಡಿಗೆ ಬಂದಾಗ ಕರ್ಟನ್ನಿನ ಆ ಕಡೆ ಇದ್ದ ಬೆಡ್‌ನ ಪೇಶಂಟ್ ಕಾಲನ್ನು ಕೆಳಗೆ ಇಳಿಬಿಟ್ಟು, ಮಂಚದ ಒಂದು ತುದಿಗೆ ಕುಳಿತಿದ್ದರು. ನೋಡಿದ ಕೂಡಲೇ ಮೊದಲು ಕಂಡಿದ್ದು ಆಕೆಯ ಕೈಗಳು. ಕಪ್ಪನೆಯ ಮಸಿ ಬಳಿದಂತಿದ್ದ ಆ ಕೈಗಳ ಬೆರಳುಗಳು ಕಪ್ಪು ಕಡ್ಡಿಗಳಂತಿದ್ದು ಅವು ಮನುಷ್ಯರವೆಂದೇ ಅನಿಸುತ್ತಿರಲಿಲ್ಲ. ತೀರಾ ನಿತ್ರಾಣಳಾಗಿದ್ದ ಆಕೆ ನನ್ನನ್ನು ನೋಡಿದಾಗಲೂ ಆಕೆಯ ಮುಖದಲ್ಲಿ ಯಾವ ಭಾವನೆಯೂ ವ್ಯಕ್ತವಾಗಲಿಲ್ಲ.

ಬಹುಶಃ ಮುಂದಿನ ಮೂರು ದಿನವೂ ಆಕೆ ಹೀಗೇ ಇದ್ದರು. ಮಾತಾಡುವುದಿರಲಿ ಹಗಲೂ ರಾತ್ರಿ ಹಾಗೆಯೇ ಕುಳಿತಿರುತ್ತಿದ್ದರು. ಇಲ್ಲವೇ ಮಲಗಿರುತ್ತಿದ್ದರು. ಯಾವುದಕ್ಕೂ ಎದ್ದು ಹೋಗುತ್ತಿರಲಿಲ್ಲ. ಆಕೆಗೆ ತಂದಿಟ್ಟ ಊಟ ತಿಂಡಿ ಗಂಜಿ ಯಾವುದನ್ನು ಆಕೆ ಮುಟ್ಟುತ್ತಿರಲಿಲ್ಲ. ಆದರೆ ಕ್ರಮೇಣ ಆಕೆಯ ಸ್ವರ ಹೊರಡತೊಡಗಿತು. ಆಕೆ ಸಿಸ್ಟರ್‌ಗಳನ್ನು ಟೀಚರ್, ಟೀಚರಮ್ಮ ಎಂದು ಕರೆಯುತ್ತಿದ್ದರು. ಮೊದ ಮೊದಲು ಮೆಲು ದನಿಯಲ್ಲಿರುತ್ತಿದ್ದ ಈ ಸ್ವರ ಬರಬರುತ್ತಾ ಇಡೀ ಕಾರಿಡಾರಿಗೇ ಕೇಳುವಷ್ಟು ಜೋರಾಗಿರುತ್ತಿತ್ತು. ಹೊತ್ತಲ್ಲದ ಹೊತ್ತಲ್ಲಿ ಈ ರೀತಿ ಟೀಚರಮ್ಮ ಎಂದು ಕೂಗು ಹಾಕುತ್ತಿದ್ದರು. ಒಮ್ಮೊಮ್ಮೆ ತಾವೇ ಎದ್ದು ಕರ್ಟನನ್ನು ನನ್ನ ಮಂಚದ ಫ್ರೇಮನ್ನು ಆಧಾರವಾಗಿಟ್ಟುಕೊಂಡು ನಂತರ ಗೋಡೆಗೆ ಕೈ ಆನಿಸಿ ನಿಧಾನವಾಗಿ ಕಾಲೆಳೆದುಕೊಂಡು ಬಾತ್‌ರೂಮಿಗೆ ಹೋಗಿ ಬರುತ್ತಿದ್ದರು.

ರಕ್ತ ಪರೀಕ್ಷೆಗಾಗಿ ರಕ್ತ ತೆಗೆಯಲು ಬಂದ ನರ್ಸ್ ಗಳ ಮೇಲೆ, ಏನು ಮೈಯೆಲ್ಲಾ ಚುಚ್ಚಿಚುಚ್ಚಿ ತೂತು ಮಾಡ್ತೀರಿ ಬೇಡ ನನಗೆ ಎಂದು ಕೂಗಾಡಿ ಹಾರಾಡಿ ನರ್ಸುಗಳನ್ನು ವಾಪಸು ಕಳಿಸಿಬಿಡುತ್ತಿದ್ದರು. ಹೀಗಿದ್ದಾಗ ಆಕೆ ಡ್ರಿಪ್ಸ್ ಹಾಕಿಸಿಕೊಳ್ಳುವುದು ದೂರದ ಮಾತು. ಆಕ್ಸಿಜನ್ ಮಾಸ್ಕನ್ನು ಹಾಕಿಕೊಳ್ಳುತ್ತಿರಲಿಲ್ಲ. ತಂದಿಟ್ಟ ಮಾತ್ರೆಗಳೂ, ಊಟ ತಿಂಡಿಗಳೆಲ್ಲವೂ ಹಾಗೇ ವಾಪಸ್ ಹೋಗುತ್ತಿದ್ದವು. ಹೀಗೆ ಊಟ ತಿಂಡಿಗಳನ್ನು ಚೆಲ್ಲಲು ತೆಗೆದುಕೊಂಡು ಹೋಗುತ್ತಿದ್ದ ಸಾದಿಯಾ ನೋಡಿ ಮೇಡಂ ತಿನ್ನೋ ಅನ್ನ ಹೀಗೆ ಚೆಲ್ಲಬಹುದಾ ಎಂದು ಗೊಣಗಿಕೊಂಡು ಹೋಗುತ್ತಿದ್ದಳು.

ಹೀಗೆ ಔಷದ, ಊಟ, ಏನನ್ನು ಸೇವಿಸದ ಆಕೆ ಕ್ರಮೇಣ ಹಾಗೆಯೇ ಚೇತರಿಸಿಕೊಳ್ಳುತ್ತಿದ್ದನ್ನು ಕಂಡು ನಿಜಕ್ಕೂ ವಿಸ್ಮಯವೆನ್ನಿಸುತ್ತಿತ್ತು. ಹೀಗೆಯೇ ದಿನವೂ ನಡೆಯುತ್ತಿತ್ತು. ರೌಂಡ್ಸ್ ಬಂದ ಸೀನಿಯರ್ ಡಾಕ್ಟರ್, ರೀ ಕೋವಿಡ್ ಟೆಸ್ಟ್ ಮಾಡಿಸಿ ಡಿಸ್ ಚಾರ್ಜ್ ಮಾಡಿ ಎಂದು ಒಂದೇ ಮಾತಿನಲ್ಲಿ ಆಜ್ಞಾಪಿಸಿದರು. ಅದರಂತೆ ಮಾರನೆ ದಿನ ನರ್ಸಿಂಗ್ ಸೂಪರ್ ವೈಸರ್ ಸುದೀಪ್ ಆಕೆಯ ಗಂಟಲಿನ ದ್ರವ ತೆಗೆದುಕೊಳ್ಳಲು ಶಸ್ತ್ರಸಜ್ಜಿತ ಸೈನಿಕನಂತೆ ಬಂದ.

ಆತ ಇಂಜಕ್ಷನ್ ಕೊಡಲು ಬಂದಿದ್ದಾನೆ ಎಂದು ತಿಳಿದು ಬೇಡ ನನ್ನನ್ನು ಚುಚ್ಚಿಚುಚ್ಚಿ ಸಾಯಿಸ್ತೀರಿ ಅಂತ ಆಕೆ ಜೋರಾಗಿ ಅಕ್ಷರಶಃ ಕೈಕಾಲು ಬಡಿದು ರಚ್ಚೆ ಹಿಡಿದಾಗ, ಇದು ಇಂಜಕ್ಷನ್ ಅಲ್ಲ ಸುಮ್ಮನೆ ಬಾಯಿ ತೆಗೆಯಿರಿ ಅಂತ ಆತನು ಹೇಳಿದ್ದೇ ಈಕೆಯ ಕಿರುಚಾಟ ಇನ್ನೂ ಜೋರಾಯಿತು. ಆಗ ಸುದೀಪ್ ಬಾಮ್ಮ ಸಾದಿಯಾ ಸ್ವಲ್ಪ ಗಟ್ಟಿಯಾಗಿ ಹಿಡಿದುಕೊಂಡಿರು ಎಂದು ಕರೆದಾಗಲಂತೂ ಈತ ತನ್ನನ್ನು ರೇಪ್ ಮಾಡಲು ಬಂದಿದ್ದಾನೆ ಎಂಬಂತೆಯೇ ಜೋರಾಗಿ ಬೈಯತೊಡಗಿದರು. ಸುದೀಪ್ ಗಟ್ಟಿಯಾದ ಆಳು. ಯಾವ ಕಿರುಚಾಟಕ್ಕೂ ಬಗ್ಗದೆ ಆಕೆಯ ಗಂಟಲಿನ ದ್ರವ ತೆಗೆದು ಅಷ್ಟೇ ಆಯ್ತು ಎಂದಾಗ ಅವನ ಮೇಲೆ ಹಾಗೂ ಸಾದಿಯಾ ಮೇಲೆ ಥೂಥೂ ಎಂದು ಉಗಿದದ್ದಲ್ಲದೆ ಅವರು ಹೋದ ಮೇಲೂ ಗಂಟಲಿನ ದ್ರವ ಆರುವವರೆಗೂ ಉಗಿಯುತ್ತಲೇ ಇದ್ದರು.

ನೋಡಿ ಮೇಡಂ ಹೇಗೆ ಉಗಿದಿದ್ದಾರೆ ಎಂದು ಸುದೀಪ್ ಸಾದಿಯಾ ಇಬ್ಬರೂ ತಮ್ಮ ಪಿ.ಪಿ.ಇ. ಮೇಲೆ ಉಗಿದದ್ದನ್ನು ತೋರಿಸಿದರು. ಸೀನಿದರೆ ಕೆಮ್ಮಿದರೆ ಅದರ ಒಂದು ಹನಿ ತಾಗಿದರೂ ಕೋವಿಡ್ ಬರುತ್ತೆ ಎಂದಿರುವಾಗ ಅವರ ಸ್ಥಿತಿ ನೋಡಿ ಭಯವಾಯಿತು. ಇದಾದ ಮೇಲೆ ಅವರು ಪಿ.ಪಿ.ಇ. ಬದಲಾಯಿಸಿ ಏನೇನು ಕ್ರಮ ಅನುಸರಿಸಬೇಕೋ ಅದೆಲ್ಲವನ್ನು ಅನುಸರಿಸಬೇಕಾಯಿತು. ನೋಡಿ ಮೇಡಂ ನಾನು ಮಕ್ಕಳಿರೋಳು ಈಗ ದಿನಾ ಇಂಜಕ್ಷನ್ ತಗೋಬೇಕು. ಇಲ್ಲೇ ಕೊಡ್ತಾರೆ ಎಂದು ಸಾದಿಯಾ ತನ್ನ ಅವಸ್ಥೆ ಹೇಳಿಕೊಂಡಳು. ಆದರೆ ಪಕ್ಕದ ಬೆಡ್‌ನಾಕೆಯ ವರಾತ ನಿಂತಿರಲಿಲ್ಲ.

ಕಾರಿಡಾರ್‌ನಲ್ಲಿ ಸುದೀಪ್ ದನಿ ಕೇಳಿಸಿದರೆ ಸಾಕು, ಹೆಂಗಿದ್ದಾನೆ ನೋಡಿ ಅವನು ಕುಡ್ಕೊಂಡು ಮೈಮೇಲೆ ಬೀಳಾಕೆ ಬರ‍್ತಾನೆ. ಅವಳಿಗೇನು ಗಂಡ ಮಕ್ಕಳಿಲ್ವ ಅವಳು ಇವನ ಜೊತೆ ಸರ‍್ಕೋತಾಳಲ್ಲ ಅಂದು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದರು. ಆಕೆ ಯಾವಾಗ ಏನು ಮಾತಾಡ್ತಾರೆ ಹೇಗೆ ವರ್ತಿಸುತ್ತಾರೆ ಎಂದು ಹೇಳುವುದೇ ಕಷ್ಟ. ಆಕೆಯ ಅರಳು ಮರಳು ಮಾತುಗಳನ್ನು ಕೇಳಿಕೊಂಡೆ ನಾನು ಹಗಲೂ ರಾತ್ರಿ ಕಳೆಯಬೇಕಿತ್ತು. ಅದೊಂದು ದಿನ ನಮ್ಮ ರಾಜಣ್ಣಂಗೆ ಫೋನ್ ಮಾಡಿಕೊಡಿ ಅಂದ್ರು. ನಂಬರ್ ಇದೆಯಾ ಅಂದೆ, ಯಾಕೆ ನಿಮ್ಹತ್ರ ಇಲ್ವ. ರಾಜಣ್ಣ ಅಂತ ಕೇಳಿ ಕೊಡ್ತಾರೆ ಅಂದ್ರು. ಆಕೆಯದು ನಿಜಕ್ಕೂ ಚಿಂತಾಜನಕ ಸ್ಥಿತಿ. ಬಿ.ಬಿ.ಎಂ.ಪಿ. ವತಿಯಿಂದ ಈ ಆಸ್ಪತ್ರೆಗೆ ಸೇರಿಸಿದ ಮನೆಯವರು ಅನಂತರ ಆಕೆಯ ಬಗ್ಗೆ ವಿಚಾರಿಸಿದ್ದೇ ಇಲ್ಲ.

ಅರುಣಾಚಲ ಪ್ರದೇಶದಿಂದ ಬಂದಿದ್ದ ರಾಹುಲ ಮಾತ್ರ ಈ ಪಕ್ಕದ ಬೆಡ್‌ನವರ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದ. ಅವನು ಇಲ್ಲಿನ ಖಾಯಂ ಉದ್ಯೋಗಿಯಲ್ಲ. ಬೆಂಗಳೂರಿನಲ್ಲಿ ನರ್ಸಿಂಗ್ ಮುಗಿಸಿ ಬಹುಶಃ ತರಬೇತಿ ಪಡೆಯುತ್ತಿದ್ದ ಮತ್ತು ಈ ಕೋವಿಡ್ ಕಾರಣದಿಂದಾಗಿ ಇಂತಹವರೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದರು ಅನ್ನಿಸುತ್ತದೆ. ಅವನಿಗೆ ಈ ಪಕ್ಕದ ಬೆಡ್‌ನಾಕೆಯನ್ನು ನೋಡಿದಾಗ ತಾನು ಬಿಟ್ಟು ಬಂದ ತನ್ನ ತಾಯಿ, ಅಜ್ಜಿ, ಬಂಧು ಬಳಗದವರ ನೆನಪಾಗುತ್ತಿರಬಹುದು. ಅವನು ಅಂತಹುದೇ ಪ್ರೀತಿ ವಾತ್ಸಲ್ಯದ ಮಾತುಗಳಿಗಾಗಿ ಹಂಬಲಿಸುತ್ತಿದ್ದನೇನೋ. ಅವನಿಗೆ ಭಾಷೆಯ ತೊಡಕು ಇತ್ತು. ಆಕೆ ಏನಾದರೂ ಹೇಳಿದಾಗ ವಾಟ್ ಈಸ್ ಶಿ ಸೇಯಿಂಗ್, ವಾಟ್ ಈಸ್ ಶಿ ಆಸ್ಕಿಂಗ್ ಎಂದು ನನ್ನನ್ನು ಕೇಳಿ ತಿಳಿದುಕೊಳ್ಳುತ್ತಿದ್ದ.

ಆಕೆಗೂ ತನ್ನ ಬಗ್ಗೆ ಇಷ್ಟೊಂದು ವಿಚಾರಿಸಿಕೊಳ್ಳುವ ಅವನ ಬಗ್ಗೆ ಭಾರೀ ಪ್ರೀತಿ. ನಿನಗೆ ಮೂರು ಜೊತೆ ಪ್ಯಾಂಟ್ ಶರ್ಟ್ ಕೊಡುತ್ತೇನೆ. ನಿಮ್ಮ ಅಮ್ಮನಿಗೆ ಎರಡು ಸೀರೆ ಕೊಡುತ್ತೇನೆ ಎಂದು ಆಕೆ ಅರಳು ಮರಳಾಗಿ ಹೇಳಿದಾಗ ಅವನು ನನಗೆ ಈಗ ತಾಯಿಯಿಲ್ಲ. ನಾನು ಮತ್ತು ನನ್ನ ತಂದೆ ಮಾತ್ರ. ಅಜ್ಜಿ ಇದ್ದರು. ನೂರಾ ಇಪ್ಪತ್ತೈದು ವರ್ಷ ಬದುಕಿದ್ದರು. ಹೋದ ವರ್ಷ ತೀರಿಕೊಂಡರು ಎಂದು ಹಿಂದಿಯಲ್ಲಿ ಹೇಳಿದ.

ಆಸ್ಪತ್ರೆಯಲ್ಲಿ ಯಾವಾಗೆಂದರೆ ಆಗ ನಮಗೆ ಬೇಕಾದ ತಿಂಡಿ ಪಾನೀಯಗಳು ಸಿಗುತ್ತಿರಲಿಲ್ಲ. ಆದರೆ ಇವನು ಮಾತ್ರ ಆಕೆಗಾಗಿ ಸ್ವತಃ ತಾನೇ ಹೋಗಿ ಹಣ್ಣು, ಹಣ್ಣಿನ ರಸ ಇತ್ಯಾದಿಗಳನ್ನು ತಂದುಕೊಟ್ಟು ಉಪಚರಿಸುತ್ತಿದ್ದ. ಹೀಗೆ ತಮ್ಮವರನ್ನು ತಮ್ಮ ಊರನ್ನು ಬಿಟ್ಟು ಜೀವನೋಪಾಯಕ್ಕಾಗಿ ಇಷ್ಟು ದೂರದ ನಾಡಿಗೆ ಬಂದಿರುವ ಇಂಥ ತರುಣರು ಯಾವಾಗಲೂ ಆತಂತ್ರ ಸ್ಥಿತಿಯಲ್ಲಿ, ಪರಕೀಯರಾಗೇ ಬದುಕಬೇಕಾಗುತ್ತದೆ.

ಹೀಗೆ ಒಂದುಸಾರಿ ಸುಳ್ಳು ಸುದ್ದಿ ಹಬ್ಬಿಸಿದ ಕಾರಣ ಸಾವಿರಾರು ಸಂಖ್ಯೆಯ ನೇಪಾಳಿಗಳು ಬೆಂಗಳೂರನ್ನು ಬಿಟ್ಟು ರಾತ್ರೋ ರಾತ್ರಿ ತೆರಳಬೇಕಾಗಿದ್ದ ಸಂದರ್ಭ ನೆನಪಿಗೆ ಬಂತು. ಈ ಕರೋನಾ ಸಮಯವು ಅಂತಹುದೇ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಕಾಲೇಜುಗಳು, ಹೋಟೆಲ್‌ಗಳು ಅನೇಕ ಖಾಸಗಿ ಸಂಸ್ಥೆಗಳು ಮುಚ್ಚಿದ್ದರಿಂದ ಹೀಗೆ ಹೊರಗಿನಿಂದ ಬಂದವರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಆದರೆ ಲಾಕ್‌ಡೌನ್‌ನಲ್ಲಿ ಹೀಗೆ ಹೋಗುವುದು ಸಾಧ್ಯವಾಗದೆ ಅನೇಕರು ಅನೇಕ ವಿಧದ ಸಂಕಟಗಳನ್ನು ಅನುಭವಿಸಬೇಕಾಯಿತು.

ವಿದೇಶಗಳಿಗೆ ತೆರಳಿದ್ದ ಭಾರತೀಯರು ಮತ್ತು ಅಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳೂ ಸಹ ಇಂತಹ ಕಷ್ಟಕ್ಕೆ ಸಿಲುಕಿದ್ದರು. ಸುಮಾರು ೨೦-೩೦ ವರ್ಷಗಳ ಹಿಂದೆ ಈ ರೀತಿ ಅನಿರೀಕ್ಷಿತವಾಗಿ ಬಂದೆರಗುವ ಸಂದರ್ಭಗಳು ಇರಲಿಲ್ಲ. ಯಾವುದೋ ಕಂಡರಿಯದ ದಿಕ್ಕಿನೆಡೆ ಇಡೀ ಜಗತ್ತು ಕಣ್ಣು ಮುಚ್ಚಿ ಓಡುತ್ತಿದೆ ಅನ್ನಿಸುತ್ತಿತ್ತು.

। ಇನ್ನು ನಾಳೆಗೆ ।

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: