ಇಲಿ ಮತ್ತು ವಡಾಪಾವ್…

ಮಾಲಾ ಮ ಅಕ್ಕಿಶೆಟ್ಟಿ

ಕೊರೊನಾ ಅಟ್ಟಹಾಸದ ಪರಿಣಾಮದಲ್ಲಿ ಹೋದ ವರ್ಷ ಜೂನ್ ತಿಂಗಳಲ್ಲಿ ಕಡ್ಡಾಯವಾಗಿ ದ್ವಿತೀಯ ಪಿಯುಸಿ ಇವ್ಯಾಲುವೇಶನ್ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಎದುರಿಸಿದಾಗ, ಮೂರು ತಿಂಗಳು ಮನೆಯಲ್ಲಿ ಇದ್ದವಳು ಹೊರಗೆ ಬಂದಿದ್ದೆ. ಈ ಮಧ್ಯೆ ಬ್ಯಾಂಕ್, ಪೋಸ್ಟ್ ಆಫೀಸ್, ಮತ್ತು ದಿನಸಿ ತರಲು ಹೋದ್ರೂ ಎರಡು ಬಾರಿ ಹೋಗಿರಬೇಕು. ಆ ಹೊತ್ತು ಇಷ್ಟೊಂದು ಕೊರೊನಾ ಕೇಸುಗಳು ಇದ್ದಿಲ್ಲ.

ಇಲಾಖೆಯ ಆದೇಶ ಎಂದಾಗ ಬಿಡೋಕಾಗಲ್ಲ ಹೋಗುವ ತಯಾರಿಯಾಯಿತು. ಮುಖಕ್ಕೆ ಮಾಸ್ಕ್ ಮತ್ತು ಕೈಗೆ ಹಚ್ಚಲು ಪುಟ್ಟ ಸ್ಯಾನಿಟೈಜರ್ ವ್ಯಾನಿಟಿ ಬ್ಯಾಗ್ ನ ಹೊಕ್ಕಿತ್ತು.ಇವ್ಯಾಲುವೇಶನ್ ೧೦ರಿಂದ ೧೪ ದಿನಗಳವರೆಗೆ ನಡೆಯುತ್ತದೆಂದು ಮೊದಲ ದಿನವೇ ಗೊತ್ತಾಯಿತು. ಸೆಂಟರ್ ನ ಒಳ ಪ್ರವೇಶಕ್ಕೆ ಮುಂಚೆ ಥರ್ಮಲ್ ಚೆಕ್, ಕೈಗೆ ಸ್ಯಾನಿಟೈಸರ್ ಕೊಟ್ಟು ಕಳಿಸುತ್ತಿದ್ದರು. ಹೇಗೋ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕೆಲಸ ಮುಂದುವರಿದಿತ್ತು. 

ಇವ್ಯಾಲುವೇಶನ್ ಸೆಂಟರ್ ಅಥವಾ ಕಾಲೇಜಿನ ಮುಂದೆಯೇ ಮಸ್ತ್ ಮಸ್ತ್ ಬಾಯಿ ರುಚಿಸೋ ಚಾಟ್ ಅಂಗಡಿ ಇದೆ. ಅದು ತಳ್ಳು ಗಾಡಿಯಲ್ಲ. ಪರ್ಮನೆಂಟ್ ಇರುವ ಚಿಕ್ಕ ಹೋಟೆಲ್. ಅಲ್ಲಿಯ ಚಾಟ್ ಗಳ ಸವಿಯೇ ಬೇರೆ. ಹಂಗೆ ಚಪ್ಪರಿಸುತ್ತಾನೇ ಇರೋದು. ಅಲ್ಲಿಯ ವಡಾಪಾವ್ ಅಂತೂ ಎಲ್ಲರಿಗೂ ಪ್ರಿಯ. ಸೋಂಕಿನ ಭಯದ ಹಿನ್ನೆಲೆಯಲ್ಲಿ ಮೂರು ತಿಂಗಳು ಎಲ್ಲೂ ಹೋಗಿರಲಿಲ್ಲ, ಯಾವ ಚಾಟ್ ಗಳನ್ನು ಸವಿದಿರಲ್ಲಿಲ್ಲ, ಹೋಟೆಲ್ ಗಳ ಭೇಟಿಯಂತೂ ಇಲ್ಲವೇ ಇಲ್ಲ.

ಪ್ರತಿ ದಿನ ಸಂಜೆ ಅಂಗಡಿ ನೋಡಿ ಯಪ್ಪಾ ಕೊರೊನಾ ಎಂದು ಸುಮ್ಮನಾಗುತ್ತಿದ್ದೆ. ಯಾಕೋ ವಡಾ ಪಾವ್ ತಿನ್ನಬೇಕೆಂಬ ಆಸೆ ನನ್ನ ಬೆನ್ನ ಬಿಡಲೇ ಇಲ್ಲ. ಮನಸ್ಸನ್ನು ಗಟ್ಟಿ ಮಾಡಿ ಇವ್ಯಾಲ್ಯುವೆಷನ್ನ ಕೊನೆ ದಿನ ಪಾರ್ಸಲ್ ತೆಗೆದುಕೊಂಡು ಮನೆಯವರೆಲ್ಲರ ಜೊತೆ ತಿಂದರಾಯಿತೆಂದುಕೊಂಡೆ. ಯಾಕಂದ್ರೆ ಮನೆಯಲ್ಲೂ ವಡಾಪಾವ್ ನೆನಪಿಸುತ್ತಿದ್ದರು. ‘ಹೋದ ವರ್ಷ ಈ ಇವ್ಯಾಲುವೆಷನ್ ಮುಗಿದ ನಂತರ ವಡಾಪಾವ್ ತರತಿದ್ದಿ, ಮಸ್ತ ಇರತಿತ್ತ. ಈಗೆಲ್ಲಿ ವಡಾಪಾವ್ ಹಾಳಾದ ಕೊರೊನಾ’ ಎಂದು ಸಂಭಾಷಣೆ ಮನೆಯಲ್ಲಿ ಆಗಲೇ ಆಗಿತ್ತು. ಅದಕ್ಕೆ ಕೊನೆ ದಿನ ಅಂಗಡಿಗೆ ಹೋಗಿ ಬೇಕಾದಷ್ಟು ಪಾರ್ಸೆಲ್ ಆರ್ಡರ್ ಮಾಡಿಕೊಂಡು ತೆಗೆದುಕೊಂಡು ಹೋದರಾಯಿತೆಂದು ಅಂಗಡಿಗೆ ಹೋದೆ. ಆರ್ಡರ್ ಕೊಟ್ಟು ಅಲ್ಲೇ ನಿಂತಿದ್ದೆ. ಕೈಯಲ್ಲಿದ್ದ ಕೈಚೀಲ ಭಾರವೆಂದು ಹಾಗೆಯೇ ಕೆಳಗಿಳಿಸಿದ್ದೆ. ಪಾರ್ಸೆಲ್ ತಯಾರಾದ ನಂತರ ಚೀಲದಲ್ಲಿ ಹಾಕಿಕೊಂಡು ಆಟೊ ಹತ್ತಿದೆ. 

ಅಷ್ಟರಲ್ಲಿ ತಮ್ಮನ ಫೋನ್ ರಿಂಗಣಿಸಿತು. ಆತನು ಮನೆಗೆ ಬರುವ ಮಾರ್ಗದಲ್ಲಿದ್ದನೆಂದು ಹಾಗೆಯೇ ಕರೆದುಕೊಂಡು ಹೋಗುವುದಾಗಿ, ದಿನವೂ ನಿಲ್ಲುವ ನಿರ್ದಿಷ್ಟ ಸ್ಥಳದಲ್ಲಿ ಕಾಯುವಂತೆ ಹೇಳಿದ. ಆಯ್ತೆಂದು ಆಟೊದಿಂದ ಇಳಿದು ಕಾಯತೊಡಗಿದೆ. ಚೀಲದಲ್ಲಿ ಮೊದಲೇ ನನ್ನ ನೀರಿನ ಬಾಟಲ್, ಊಟದ ಡಬ್ಬಿ, ಮಳೆಗಾಲಕ್ಕೆ ಬೇಕಾದ ಅವಶ್ಯಕ ಛತ್ರಿ, ಜೊತೆಗೆ ಈಗ ತೆಗೆದುಕೊಂಡ ವಡಾಪಾವ್ ಪಾರ್ಸಲ್ ಎಲ್ಲವೂ ಭಾರವಾಗಿ ಅಲ್ಲೇ ಇದ್ದ ಚಿಕ್ಕ ಗೋಡೆಗೊರಗಿಸಿ ಚೀಲವನ್ನು ಇಟ್ಟೆ. ನಾನು ನಿಂತ ಸ್ಥಳ ನಮ್ಮ ನಗರದ ಒಂದು ಗಾರ್ಡನ್ನಿನ ಚಿಕ್ಕದಾದ ಕಂಪೌಂಡ್ ಗೋಡೆ.

ನನ್ನ ಪಾದಗಳಿಂದ ಕೇವಲ ಹದಿನೈದು ಇಂಚು ಗೋಡೆ ಅದರ ಮೇಲೆ ತಂತಿ ಬೇಲಿಗಳು. ಹೀಗಾಗಿ ಇಡೀ ಗಾರ್ಡನ್ ಹೊರಗಿನಿಂದಲೇ ಕಾಣುತ್ತದೆ. ಮುಂಜಾನೆ ಸಂಜೆ ವಾಯು ವಿಹಾರಿಗಳು, ಯುವಕರು, ದಂಪತಿಗಳು ಮಕ್ಕಳ ಸಮೇತ ಬಂದು ಗಾರ್ಡನ್ ಗೆ ಭೇಟಿ ಕೊಡುತ್ತಿರುತ್ತಾರೆ. ಕೊರೊನಾದಿಂದ ಈಗ ಜನರ ಓಡಾಟ ಕಡಿಮೆಯಾಗಿದೆ. ವೀಕೆಂಡ್ ಗೆಂದು ಮಕ್ಕಳೊಂದಿಗೆ ಬಂದು ಕುರುಕುಲು ತಿಂಡಿಗಳನ್ನು ತಿನ್ನುವುದು ಬಹಳ ಸಾಮಾನ್ಯ ಅಲ್ಲಿ. 

ತಮ್ಮ ಹತ್ತು ನಿಮಿಷದಲ್ಲಿ ಬರುತ್ತೇನೆಂದು ಹೇಳಿದವ ಅರ್ಧ ಗಂಟೆಯಾದರೂ ಬರಲಿಲ್ಲ. ನಾನು ಹಾಗೆ ಟೈಮ್ ಪಾಸ್ಗೆಂದು ಮೊಬೈಲ್ ನೆಟ್ ಆನ್ ಮಾಡಿ ವಾಟ್ಸಪ್, ಫೇಸ್ಬುಕ್ ಚೆಕ್ ಮಾಡಲಾರಂಭಿಸಿದೆ. ಪೂರ್ತಿ ದಿನ ಇವ್ಯಾಲುವೇಶನ್ ನಲ್ಲಿ ಬಿಝಿ ಇದ್ದರಿಂದ ಮೊಬೈಲ್ ಬ್ಯಾಗ್ ನಿಂದ ಹೊರಗೆ ಬಂದೇ ಇರಲಿಲ್ಲ. ಆಗಾಗ ಗೋಡೆಗೊರಗಿದ ಕೈಚೀಲವನ್ನು ಗಮನಿಸುತ್ತಿದ್ದೆ. ಭಾರ ಜಾಸ್ತಿಯಾಗಿ ಕೆಳಗೆ ಉರುಳಿದರೆ ಎಂದು ಕಣ್ಣಿಟ್ಟಿದ್ದೆ. ವಡಾ ಪಾವ್ನ ಪರಿಮಳ ಆಟೋದಲ್ಲಿ ಈಗ ನಿಂತಲ್ಲಿ ಹಾಗೆ ಮೂಗನ್ನು ಮುಕ್ಕತ್ತಾನೇ ಇತ್ತು. ಕೇವಲ ಏಳು ನಿಮಿಷದ ದಾರಿಗೆ ಕಾಯಬೇಕಾಗಿತ್ತು.

ಹಾಗೆ ನೋಡಿದರೆ ಆ ಕಾಯುವಿಕೆಯನ್ನು ಬಿಟ್ಟು, ಬಸ್ಸೋ ಆಟೋನೊ ಹಿಡಿದಿದ್ದರೆ, ಮನೆ ತಲುಪಿ ಇಪ್ಪತ್ತು ನಿಮಿಷ ಆಗುತ್ತಿದ್ದೇನೋ ಎಂದು ಅಂದುಕೊಳ್ಳುತ್ತಿರುವಾಗಲೇ ತಮ್ಮ ಬಂದ. ಶಿವ ಅನ್ಕೊಂಡು ಟೂ ವೀಲರ್ ನ ಹತ್ತಿದೆ. ಮಾರ್ಗ ಮಧ್ಯದಲ್ಲಿ ಮನೆಗೆ ಬೇಕಾದ ಹಾಲು ತೆಗೆದುಕೊಳ್ಳಲು ನನಗೆ ಹೇಳಿದ. ತೊಡೆಯ ಮೇಲೆ ಕುಳಿತ ಚೀಲವನ್ನು ಮತ್ತೆ ಕೈಯಲ್ಲಿ ಹಿಡಿದು ಹಾಲು ತೆಗೆದುಕೊಂಡು ಬೈಕ್ ಹತ್ತಿದೆ. ಚೀಲ ತೊಡೆಯ ಮೇಲೆ ಕುಳಿತು ಮನೆಯನ್ನು ತಲುಪಿತ್ತು.

ಮೊದಲೇ ಪಾರ್ಸೆಲ್ ತರುವುದಾಗಿ ಹೇಳಿದ್ದರಿಂದ ಎಲ್ಲರೂ ಕಾಯುತ್ತಿದ್ದರು. ಕೊರೊನಾ ಭಯದಿಂದ ಯಾರನ್ನೂ ಮುಟ್ಟದೇ ಬೇಗ ಬೇಗನೆ ಫ್ರೇಶ್ ಆಗಿ ಮೊದಲು ಪಾರ್ಸೆಲ್ ತೆಗೆದರಾಯಿತು ಎಂದು ಪಾರ್ಸಲ್ ತೆಗೆಯಲು ಕೈಹಾಕಿದಾಗ ಚೀಲದಲ್ಲಿ ಸಣ್ಣ ಇಲಿ ಮರಿ!!!. ಹಾ ಹೂಂ ಹಾ ಹೂಂ ಎಂದು ಚೀಟಾರನೇ ಚೀರಿ ಶಬ್ದಶಃ ಕುಣಿಯುತ್ತಿದ್ದೆ. ಯಾರಿಗೂ ಏನಾಗ್ತಿದೆ ಎಂದು ಆ ಕ್ಷಣ ತಿಳಿಯಲೇ ಇಲ್ಲ. ಏನಾಯ್ತು ಎಂದು ಕೇಳಿದರು. ನನ್ನ ಬಾಯಿಂದ ಮಾತೇ ಬರಲಿಲ್ಲ. ಹಾ ಹೂಂ ಹಾ ಹೂಂ ಮುಂದುವರಿದೇ ಇತ್ತು. ವೈನಿ (ತಮ್ಮನ ಹೆಂಡತಿ) ಬಂದು ಕೈಚೀಲ ನೋಡಿ ಅವರು ಹೌಹಾರಿ ಚೀಲವನ್ನು ಸಮಾಧಾನದಿಂದ ಹೊರಗೆ ತೆಗೆದುಕೊಂಡು ಪಾರ್ಸೆಲ್ ಮೇಲೆತ್ತಿ ಚೀಲವನ್ನು ಉಲ್ಟಾ ಮಾಡಿ ಜಾಡಿಸಿದರು. ಸಣ್ಣ ಇಲಿ ಮರಿ ಹೊರಗೆ ಬಂದು ಪುಟಪುಟನೆ ಓಡಿ ಹೋಯ್ತು. ಮನೆಯಲ್ಲಿಯ ಮೂರು ಚಿಕ್ಕ ಮಕ್ಕಳು ಚಪ್ಪಾಳೆ ತಟ್ಟುತ್ತಾ ಇಲಿ ನೋಡಿ ಕುಣಿತಿದ್ದರು. ಎಲ್ಲರೂ ನನ್ನ ಮುಖವನ್ನು ಹಾಗೆ ನೋಡಿ ಏನಿದು ಎಂದು ಕೇಳಿದರು ನನ್ನ ಹತ್ತಿರವೂ ಉತ್ತರವಿರಲಿಲ್ಲ.

ಅಂಗಡಿಯಿಂದ ಆಟೋದಲ್ಲಿ ಕೂತು ಗಾರ್ಡನ್ನ ಹತ್ತಿರ ಕಾಯುತ್ತಿದ್ದ ಪ್ರಯಾಣದಲ್ಲಿ ಇಲಿ ಹೇಗೆ ನನ್ನ ಕೈಚೀಲ ಹೊಕ್ಕಿತ್ತು, ಗೊತ್ತಿಲ್ಲ. ಅಂಗಡಿಯಲ್ಲಿ ತುಸು ನಿಮಿಷ ಚೀಲ ಕೆಳಗಿಳಿಸಿದ್ದೆ. ಪಾರ್ಸೆಲ್ ಹಾಕಿ ಆಟೋ ಹತ್ತಿದಾಗ, ಆಟೋದಲ್ಲಿ ಹೇಗೆ ಇಲಿ ಇರುತ್ತೆ.? ನಂತರ ಕಾಯ್ದದ್ದು ಗಾರ್ಡನ್ನಲ್ಲಿ. ಮೇಲಿಂದ ಮೇಲೆ ಚೀಲದ ಕಡೆ ನೋಡ್ತಾನೆ ಇದ್ದೆ. ಎಲ್ಲಿಂದ ಬಂದಿರಬಹುದು? ಗಾರ್ಡನ್ನ ಇದ್ದುದರಿಂದ ಕುರುಕುಲು ತಿಂಡಿಗಳ ಅಂಗಡಿಗಳು ಬಹಳವೇ ಇವೆ. ಅಲ್ಲಿ ಇಲಿಗಳು ತಮ್ಮ ಸಂಸಾರ ಮಾಡುತ್ತಿರಬಹುದಾ, ಗೊತ್ತಿಲ್ಲ. ವಡಾಪಾವ್ ವಾಸನೆ ಎಷ್ಟರ ಮಟ್ಟಿಗೆ ಸೂಸುತ್ತಿತ್ತೆಂದರೆ ಆ ಪುಟ್ಟ ಇಲಿಮರಿಯನ್ನೂ ಆಕರ್ಷಿಸಿತ್ತು ಅನಿಸುತ್ತದೆ.

ಒಟ್ಟಿನಲ್ಲಿ ಕೈಚೀಲದಲ್ಲಿ ಇಲಿ ಹೇಗೆ ಬಂತು ಎಂಬುದೇ ಚಿದಂಬರ ರಹಸ್ಯವಾಗಿ ಈಗಲೂ ಉಳಿದಿದೆ. ನನ್ನ ಪೇಚಾಟವನ್ನು ಕಂಡು ಎಲ್ಲರೂ ನಕ್ಕು ಅಣಕಿಸಿದರು. ಅವ್ವಳಂತೂ ‘ಪುಣ್ಯಕ್ಕ ಅದು ಇಲಿ ಅದ, ಹಾವು ಕೈ ಚೀಲದಾಗ ಕುಂತಿದ್ರೂ, ಅದನ್ನೂ ನೀ ಮನಿಗಿ ತರತಿದ್ದಿ’ ಅಂದಳು. ‘ಕೊರೊನಾ ರೋಗದಾಗ ಕೆಲಸ ಇಲ್ಲ ಅಂತ ಇಲಿ ಸಾಕಬೇಕಂತ ವಿಚಾರ ಇತ್ತೇನ  ನಿಂದ’ ಅಂತ ಅವ್ವ ಮತ್ತೊಮ್ಮೆ ಅಣಕಿಸಿದಳು. ಶಿವನೇ! ಗಾರ್ಡನ್ ನಿಂದಲೇ ಇಲಿ ಚೀಲದಲ್ಲಿದ್ದರೆ, ಅದನ್ನು ಮಗುವಿನ ತರಹ ಹಿಡಿದು ತೊಡೆಯ ಮೇಲೆ ಕೂರಿಸಿಕೊಂಡು ಬಂದಿದ್ದು ಭಯದ ಜೊತೆ ನಗು ತರಿಸಿತ್ತು.

ಇಲಿ ಇದೇ ಅಂತ ಗೊತ್ತಿದ್ದರೆ ಅಷ್ಟು ಚೆನ್ನಾಗಿ ಚೀಲ ಹಿಡಿಯುತ್ತಿದ್ದನಾ? ಒಟ್ಟಿನಲ್ಲಿ ಮೂಷಕನನ್ನು ಹೊತ್ತು ತಂದಿದ್ದೆ. ಮೂಷಿಕ ಗಣಪತಿಯ ವಾಹನ. ಇಲ್ಲಿ ಪುಟ್ಟ ಮೂಷಕನೇ  ನಮ್ಮ ವಾಹನದ ಮೇಲೆ ಸವಾರಿ ಮಾಡಿ ೭ ನಿಮಿಷದ ಸೂಪರ್ ರೈಡನ್ನು ಚೀಲದಲ್ಲಿ ಕುಳಿತು, ನನ್ನ ತೊಡೆಯ ಮೇಲೆ ರಾರಾಜಿಸಿ ಆನಂದಿಸಿತ್ತು. ಗಣಪತಿ ಹಬ್ಬದಲ್ಲಿ ಗಣಪತಿಯೊಂದಿಗೆ ತರುವ ಮೂಷಕನಂತೆ, ನಾನು ಈ ಜೀವಂತ ಮೂಷಕನನ್ನು ತಂದು ರಿಕಾರ್ಡ್ ಮಾಡಿದೆ. 

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: