ಕಲ್ಲು ‘ಕನಕ’

ಎ ಎಮ್‌ ಪ್ರಕಾಶ

ಹಾಡನ್ನು ಗುನುಗುತ್ತಾ, ಸಗಣಿ ಸಾರಿಸಿದ ನೆಲದ ಮೇಲೆ ಡಬ್ಬಯೊಳಗಿನಿಂದ ಬಿಳಿ ರಂಗೋಲಿಯ ಪುಡಿಯನ್ನು ಹೊರತೆಗೆದು ಮೃದುವಾದ ಬೆರಳುಗಳಿಂದ ಜಾರಿಸಿ, ಚಿತ್ತಾರದ ರಂಗವಲ್ಲಿ ಮೂಡಿಸುವಾಗ ಏನೋ ಆನಂದ. ಮನದೊಳಗಿನ ಭಾವನೆಗಳು ಅರಳುತ್ತಿರುವ ಅನುಭವ.

ಈ ಮೋಹಕ ರಂಗವಲ್ಲಿಯನ್ನ ಕಂಡವರು ಕ್ಷಣ ಕಾಲನಿಂತು ಅದರ ಸೊಬಗನ್ನು ಕಣ್ತುಂಬಿಕೊಂಡು ‘ಅರೆ, ಎಷ್ಟು ಸುಂದರವಾಗಿದೆ ಕನಕಾ’ ಎಂದಾಗ ಏನೋ ಪುಳಕ. ತಾನೂ ಕಲಾವಿದೆಯಾಗಬೇಕೆಂಬ ಹಂಬಲ ಕನಕಾಳಿಗೆ. ಬಾಲ್ಯದಲ್ಲಿ ಸಂಗೀತದ ಪರಿಸರ, ಖ್ಯಾತ ಸಂಗೀತಗಾರರ ಒಡನಾಟ, ಒಂದಷ್ಟು ವರ್ಷ ಶಾಸ್ತ್ರೀಯ ಸಂಗೀತ ಕಲಿಕೆ ಹಾಗೂ ಮೊದಲಿನಿಂದಲೂ ಸಂಗೀತದ ಬಗೆಗಿನ ಆಸಕ್ತಿ ಇವೆಲ್ಲದರ ಪರಿಣಾಮ ಅತ್ಯುತ್ತಮ ಹಾಡುಗಾರ್ತಿಯೆಂಬ ಪಟ್ಟ.

ಕನಕಾ ಕಣ್ಮುಚ್ಚಿ, ತನ್ಮಯತೆಯಿಂದ ಸುಶ್ರ್ಯಾವ್ಯವಾಗಿ ಹಾಡುತ್ತಿದ್ದರೆ ಮನೆಯಲ್ಲೂ ಹಾಗೂ ಓದುತ್ತಿದ್ದ ಶಾಲೆ, ಕಾಲೇಜಿನಲ್ಲೂ ಮೆಚ್ಚುಗೆಯ ಸುರಿಮಳೆ. ತನ್ನೊಳಗಿನ ಹಾಡುಗಾರ್ತಿಯ ಬಗ್ಗೆ ಹೆಮ್ಮೆ ಕನಕಾಳಿಗೆ. ಮನೆಯಲ್ಲಿ ತಂದೆಯ ಅತಿಯಾದ ಶಿಸ್ತು, ಗಂಡು ಮಕ್ಕಳಿಗೆ ಮಾತ್ರ ನೀಡುವ ಪ್ರಾಶಸ್ತ್ಯ, ಹೆಣ್ಣುಮಕ್ಕಳಿಗೆ ಇಲ್ಲದ ಸ್ವಾತಂತ್ರ್ಯ, ತಾನು ಕಪ್ಪು ಎನ್ನುವ ಕೀಳರಿಮೆ, ಪುರುಷ ದಬ್ಬಾಳಿಕೆಯ ಬಗೆಗಿನ ಸಿಟ್ಟು, ಹೆಣ್ಣುಮಕ್ಕಳು ಹೊರಗೆ ಹೋಗಿ ಕೆಲಸ ಮಾಡಬಾರದೆನ್ನುವ ಮಾತುಗಳು, ಹೆಣ್ಣು ಅಡುಗೆ ರಂಗೋಲಿಗಷ್ಟೇ ಸೀಮಿತವೆನ್ನುವ ಸಮಾಜದ ಧೋರಣೆಗಳು ಇವೆಲ್ಲವನ್ನು ಚಿಕ್ಕಂದಿನಿಂದಲೂ ಸಹಿಸಿಕೊಂಡು ವಿರೋಧಿಸಲಾಗದೆ ಇದ್ದ ಸ್ಥಿತಿಯಲ್ಲಿ ಕನಕಾ ಅವರಿಗೆ ಆಶಾಕಿರಣದ ಬೆಳಕು ಕಂಡಿದ್ದು ಚಿತ್ರಕಲೆಯಲ್ಲಿ.

ಅ.ನ. ಸುಬ್ಬರಾವ್ ಅವರನ್ನು ಭೇಟಿಯಾಗಿ ಬೆಂಗಳೂರಿನ ಕಲಾಮಂದಿರದಲ್ಲಿ ಚಿತ್ರಕಲೆ ಡಿಪ್ಲೋಮಾ ಮಾಡಿ, ರೇಖಾಚಿತ್ರಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿ ಅದರಲ್ಲಿ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದು, ಈ ರೇಖಾಚಿತ್ರಗಳನ್ನು ನೋಡಿದ ಶಿಲ್ಪಿ ವಾದಿರಾಜ್ ಅವರು ಮೆಚ್ಚಿ ಆಡಿದ ಮಾತುಗಳಿಂದ ಪ್ರೇರಿತರಾಗಿ ಶಿಲ್ಪಗಳ ಬಗ್ಗೆ ಒಲವು ಮೂಡಿ ಗುರುಕುಲ ಪದ್ಧತಿಯಲ್ಲಿ ಅವರ ಬಳಿ ಸಾಂಪ್ರದಾಯಿಕ ಶಿಲ್ಪರಚನೆಗಳನ್ನು ಕಲಿತಿದ್ದು, ಇವೆಲ್ಲದರ ಮೂಲಕ ಪೂರ್ಣಪ್ರಮಾಣದ ಶಿಲ್ಪಿಯಾಗಿ ರೂಪುಗೊಂಡ ಕನಕ ಅವರು ನಮ್ಮ ದೇಶದ, ನಾಡಿನ ಹೆಸರಾಂತ ಶಿಲ್ಪಿಯಾಗಿ ಬೆಳಗಿದವರು.

ಕನಕಾರವರು ಮೂರ್ತಿಯವರನ್ನು ಮದುವೆಯಾಗಿ ಕನಕಾಮೂರ್ತಿಯಾದರು. ಅ.ನ.ಸು, ಶಿಲ್ಪಿ ವಾದಿರಾಜ್ ಹಾಗೂ ಪತಿ ಮೂರ್ತಿಯವರ ಬೆಂಬಲದಿಂದ ಕಲ್ಲು ಕನಕ ಎಂದು ಹೆಸರಾದರು.

ಕಲ್ಲು ಕುಟ್ಟಿ ನುಣ್ಣಗೆ ಪುಡಿ ಮಾಡಿದ ರಂಗೋಲಿಯ ಚಿತ್ತಾರದ ಮೂಲಕ ಕಲಾಸಕ್ತಿ ಬೆಳಸಿಕೊಂಡ ಕನಕಾರವರು ‘ಶಿಲ್ಪಕಲೆ ಸ್ತ್ರೀಯರಿಗಲ್ಲ, ಇದು ಗಂಡು ಮಾಧ್ಯಮ’ ಎಂಬ ಸಮಾಜದ ಕುಹಕದ ನುಡಿಗಳಿಗೆ ಬರಿಯ ಮಾತಿನಿಂದ ಉತ್ತರಿಸದೆ ಗಟ್ಟಿಯಾದ ಕಲ್ಲುಗಳನ್ನೇ ತಮ್ಮ ಮಾಧ್ಯಮವಾಗಿಸಿಕೊಂಡು ಸುತ್ತಿಗೆ ಹಾಗು ಉಳಿ ಏಟುಗಳ ಮೂಲಕ ಶಿಲ್ಪಗಳನ್ನು ರೂಪಿಸಿ ಸ್ತ್ರೀ ವಾದಕ್ಕೆ ಹೊಸ ರೂಪ ನೀಡಿದವರು. ಈ ಮೂಲಕ ಕಲ್ಲನ್ನೇ ಕನಕ (ಬಂಗಾರ)ವಾಗಿಸಿದವರು.

ಕರ್ನಾಟಕವಲ್ಲದೆ ಭಾರತದ ಮೊಟ್ಟಮೊದಲ ( ಕಲ್ಲುಮಾಧ್ಯಮವನ್ನು ಆಯ್ದುಕೊಂಡ) ಮಹಿಳಾ ಶಿಲ್ಪಿ ಎಂದು ಹೆಸರಾದರು. ಇವರ ರಚನೆಯ ಅನೇಕ ರೂಪ ಶಿಲ್ಪಗಳು, ಸಾಂಪ್ರದಾಯಿಕ ಶಿಲ್ಪಗಳು, ಸೃಜನಶೀಲ ಶಿಲ್ಪಗಳು ದೇಶ ವಿದೇಶಗಳಲ್ಲಿ ಸಂಗ್ರಹವಾಗಿವೆ. ಕಲ್ಲಿನ ಮಾಧ್ಯಮವಲ್ಲದೆ, ಪ್ಲಾಸ್ಟರ್ ಆಫ್ ಪ್ಯಾರಿಸ್, ಕಂಚು, ಫೈಬರ್ ಮಾಧ್ಯಮಗಳಲ್ಲಿ ಶಿಲ್ಪ ರಚಿಸಿದ್ದಾರೆ. ಇವರು ಈಗ ನಮ್ಮೊಂದಿಗಿಲ್ಲದಿರಬಹುದು ಆದರೆ ಇವರ ಶಿಲ್ಪ ಕಲಾಕೃತಿಯ ರೂಪಗಳು ನಮ್ಮೊಳಗೆ ಚಿರಸ್ಥಾಯಿಯಾಗಿ ಉಳಿದಿದೆ.

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: