ಕೊರೊನಾ ಕಾಲದಲ್ಲಿ 'ಕಥಾಸಂಗಮ'

ಗೊರೂರು ಶಿವೇಶ್ 
ಮಯೂರ, ತುಷಾರ, ಮಲ್ಲಿಗೆ, ಉತ್ತಾನ ಉತ್ತಾನ ರಾಗಸಂಗಮ… ಕಥೆ, ಕಿರುಕಾದಂಬರಿಗಳಿಗಾಗಿ ಮೀಸಲಾಗಿದ್ದ ಮಾಸಪತ್ರಿಕೆಗಳು. ಈ ಕಥೆಗಳಾದರೂ ಎಷ್ಟೊಂದು ವೈವಿಧ್ಯ, ಹನಿಕಥೆ, ಕಿರುಗತೆ, ಸಣ್ಣಕಥೆ, ನೀಳ್ಗತೆ… ಹೀಗೆ ನಾಲ್ಕು ಸಾಲುಗಳಿಂದ ಹಿಡಿದು 40 ಪುಟಗಳವರೆಗೆ ವಿಸ್ತೃತವಾಗಿ ಇರುತ್ತಿದ್ದ ಕಥೆಗಳು. ಕಥೆಗಳಿಗಾಗಿ ಮುಗಿ ಬೀಳುತ್ತಿದ್ದ ನಾವು ಮೆಚ್ಚಿನ ಕಥೆಗಾರರ ಕಥೆಗಳನ್ನು ಮೊದಲು ಓದಿ ನಂತರ ಉಳಿದ ಕಥೆಗಳ ಕಡೆಗೆ ಕಣ್ಣು ಹಾಯಿಸುತ್ತಿದ್ದೆವು. ಕೆಲವರಿಗೆ ಮೊದಲಿನಿಂದ ಕೊನೆಯವರೆಗೆ ಅನುಕ್ರಮವಾಗಿ ಓದುವ ಅಭ್ಯಾಸ. ಕಥೆಗಳಲ್ಲಿ ಪ್ರೇಮಕಥೆಗಳು ಹೆಚ್ಚು.
ಕ್ರೌರ್ಯ ಶೋಷಣೆ, ಪ್ರತಿಕಾರ, ದಂಗೆ, ಹೋರಾಟ, ಅನುಭವ, ಪತ್ತೇದಾರಿ, ಹಾಸ್ಯ, ವಿಷಾದ, ಕೌತುಕ… ಹೀಗೆ ಹಲವು ರೀತಿಯ ಕಥೆಗಳು. ಎಲ್ಲರಿಗೂ ಎಲ್ಲ ರೀತಿಯ ಕಥೆಗಳು ಇಷ್ಟವಾಗುತ್ತದೆ ಎಂಬುದು ಇದರ ಅರ್ಥವಲ್ಲ. ಒಬ್ಬೊಬ್ಬರ ಆಸಕ್ತಿ, ಅಭಿರುಚಿ, ಅನುಭವ, ಮನೋಭಾವಕ್ಕೆ ತಕ್ಕಂತೆ ಕಥೆಗಳು ಇಷ್ಟವಾಗುತ್ತಿದ್ದವು.
1976ರಲ್ಲಿ ಮೂರು ವಿಭಿನ್ನ ಕಥೆಗಳನ್ನು ಆಧರಿಸಿದ ಕಥಾಸಂಗಮ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಹಂಗು, ಅತಿಥಿ .ಮುನಿತಾಯಿ ಮೂರು ಕಿರು ಕಥೆಗಳನ್ನು ಆಧರಿಸಿದ ಚಿತ್ರ ಆ ಕಾಲಕ್ಕೆ ಸಾಕಷ್ಟು ಹೆಸರು ಮಾಡಿತ್ತು. ಸುಮಾರು 45 ವರ್ಷಗಳ ನಂತರ ಖ್ಯಾತ ನಿರ್ದೇಶಕ, ನಿರ್ಮಾಪಕ, ನಟ, ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಕಥಾಸಂಗಮ ಮತ್ತೆ ಅದೇ ಹೆಸರಿನಲ್ಲಿ ಮೂಡಿ ಬಂದಿದೆ.

ಚಿತ್ರ ನಿರ್ಮಾಣದ ಹಂತದಲ್ಲಿಯೇ ಕುತೂಹಲವನ್ನು ಮೂಡಿಸಿತಾದರೂ ಚಿತ್ರ ಬಿಡುಗಡೆಯಾದ ಒಂದೆರಡು ದಿನಗಳಲ್ಲಿ ಬಂದ ವಿಮರ್ಶೆ ಕಥೆಗಳ ನಡುವೆ ಯಾವುದೇ ಬಂಧ ಇಲ್ಲದಿರುವುದು, ಕೆಲವು ಕಥೆಗಳು ಎಳೆದಂತೆ ಭಾಸವಾಗುವುದು… ಮುಂತಾದ ವಿಮರ್ಶೆಗಳನ್ನು ಓದಿ ಚಿತ್ರ ನೋಡಲು ಮನಸ್ಸಾಗಲಿಲ್ಲ. ಮುಂದೆ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಂದಾಗಲೂ ಬಹಳಷ್ಟು ದಿನ ನೋಡಿರಲಿಲ್ಲ. ಕಳೆದ ವಾರ ಕೊರೋನದ ಕಾರಣದಿಂದಾಗಿ ಮನೆಯಲ್ಲಿ ಉಳಿಯಬೇಕಾದ ಪ್ರಸಂಗ ಬಂದಾಗ ಆ ಚಿತ್ರ ನೋಡಿದೆ.
ನೋಡಿದ ನಂತರ ಪೂರ್ವಾಗ್ರಹ ಮನಸ್ಸಿನಿಂದ ಚಿತ್ರವನ್ನು ಮೊದಲೇ ನೋಡದಿದ್ದದಕ್ಕೆ ಪರಿತಪಿಸಿದೆ ಕಥಾಸಂಗಮ ಚಿತ್ರವನ್ನು ನೋಡಿದರೆ ಮಾಸಪತ್ರಿಕೆ ಒಂದನ್ನು ಮೊದಲಿನಿಂದ ಕಡೆಯವರೆಗೆ ಓದಿದ ಭಾವ ಮೂಡುತ್ತದೆ. ಇದು ಕಿರುಚಿತ್ರಗಳ ಪ್ರಭಾವ ಹೆಚ್ಚಿರುವ ಕಾಲ. ಕಿರು ಚಿತ್ರಗಳ ಮೂಲಕವೇ ವಿಶಾಲ ತೆರೆಗೆ ಬಂದವರಿದ್ದಾರೆ. ಇಲ್ಲಿರುವ 7 ಕಿರುಚಿತ್ರಗಳು ವಿಭಿನ್ನ ರೀತಿಯ ಕಥೆಗಳನ್ನು ಓದಿದಂತೆಯೇ ಭಾಸವಾಗುತ್ತದೆ. ತಂದೆ ಮಗುವಿನ ಬಾಂಧವ್ಯದ ಕಥೆ ಒಂದಾದರೆ ಮ್ಯಾಜಿಕ್ ರಿಯಲಿಸಂ ಶೈಲಿಯ ಎರಡು ಕಥೆಗಳು, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಒಂದು ಕಥೆ, ಜ್ಞಾನ ಮತ್ತು ತಿಳಿವಳಿಕೆ ನಡುವಿನ ವ್ಯತ್ಯಾಸದ ಕಥೆ, ಪ್ರಚಾರ ಹಾಗೂ ಪ್ರಸಾರದ ಹಂಬಲದ ಒಂದು ಕಥೆ, ಎಲ್ಲ ಕತೆಗಳಿಗೆ ಕಿರೀಟವಿಟ್ಟಂತೆ ಅಮೃತವಾಹಿನಿಯೊಂದು ಮಾನವನ ಎದೆಯಿಂದ ಎದೆಗೆ ಹರಿಯುವ ಕಥೆ ಪಾರವ್ವ ನೋಡುಗರಿಗೆ ಫೀಲ್ ಗುಡ್ ಮನೋಭಾವವನ್ನು ಮೂಡಿಸುತ್ತದೆ.
ಸಾಂಪ್ರದಾಯಿಕ ಶೈಲಿಯ ಹೀರೋ ಹೀರೋಯಿನ್ ವಿಧಾನಗಳನ್ನು ಹೊಂದಿರದ ಈ ಕಿರು ಚಿತ್ರಗಳು ಆ ಕಾರಣಕ್ಕಾಗಿ ಕುತೂಹಲವನ್ನು ಮೂಡಿಸುತ್ತವೆ. ವಿದೇಶಿ ಕಥೆ ಹಾಗೂ ಸಿನಿಮಾಗಳಿಂದ ಪ್ರೇರಿತವಾದ 2 ಚಿತ್ರಗಳು ಇಲ್ಲಿವೆ. ನಿರ್ಮಾಪಕ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಮೂಕಿ ಕಿರುಚಿತ್ರ ಸಾಗರ ಸಂಗಮ ವಿಶೇಷ ಅನುಭವವನ್ನು ನೀಡುತ್ತದೆ. ತನ್ನ ಸಂಶೋಧನೆಯ ಪ್ರಬಂಧವನ್ನು ಸಲ್ಲಿಸಲು ಇಂದು ಕಡೆಯ ದಿನ. ನಿರ್ಜನ ಸಮುದ್ರ ದಂಡೆಯ ಬಳಿ ಅವಳ ಕಾರಿನ ಮುಂದಿನ ಚಕ್ರದ ನಟ್ಟು ಬೋಲ್ಟುಗಳು ಬಿದ್ದು ಹೋಗುತ್ತವೆ. ಮುಂದೇನು ಮಾಡಲು ತೋಚದೆ ಗಾಬರಿಯಾಗಿ ಪರಿತಪಿಸುತ್ತಿರುವ ಹರಿಪ್ರಿಯಾ ದಾರಿಯಲ್ಲಿ ಬರುತ್ತಿರುವ ಹುಚ್ಚನೊಬ್ಬನನ್ನು ಕಾಣುತ್ತಾಳೆ.
ಅವನ ಕೊಳಕು ವಸ್ತ್ರ ಅವನಿಗಿಂತಲೂ ಭೀತಿ ಹುಟ್ಟಿಸುವ ನಾಯಿ, ಅವನಿಂದ ತನಗೇನು ಅಪಾಯ ಸಂಭವಿಸಬಹುದು ಎಂದು ಹೆದರುವ ನಾಯಕಿಗೆ ಕೊನೆಗೆ ಹುಚ್ಚನಿಂದ ಒದಗಿ ಬರುವ ವಿಲಕ್ಷಣ ರೀತಿಯ ಸಹಾಯ ಕುತೂಹಲಕಾರಿಯಾಗಿ ಮೂಡಿ ಬರುವುದರ ಜೊತೆಗೆ ಪುಸ್ತಕದ ಜ್ಞಾನ ಹಾಗೂ ಅದರ ಅಳವಡಿಕೆಯ ನಡುವಿನ ಅಗಾಧ ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ.

ನಿವೃತ್ತಿಯ ಹಿಂದಿನ ದಿನ ತನ್ನ ಕಾಲದಲ್ಲಿ ಕಾಲಯಾನದಲ್ಲಿ ಹಿಂದಕ್ಕೆ ಚಲಿಸಿ ಪರರ ಮಾತು ಕೇಳದೆ ತಮ್ಮ ಇಷ್ಟಕ್ಕೆ ತಕ್ಕಂತೆ ಬದುಕು ರೂಪಿಸಿಕೊಂಡಿದ್ದರೆ ಎಂದು ಕನಸುವ ಅದ್ಭುತರಮ್ಯ ಶೈಲಿಯ ಕಥೆ ಮತ್ತೊಂದು ರೀತಿಯಲ್ಲಿ ಇಷ್ಟವಾಗುತ್ತದೆ. ಆದರೆ ಚಿತ್ರದಲ್ಲಿ ಅಬಾಲವೃದ್ಧರಾಗಿ ಪಂಡಿತ ಪಾಮರರಿಗೆ ಎಲ್ಲರಿಗೂ ಇಷ್ಟವಾಗುವ ಚಿತ್ರವೊಂದಿದೆ. ಅದುವೇ ಜೈಶಂಕರ್ ನಿರ್ದೇಶನದ ಪಾರವ್ವ. ಉತ್ತರ ಕರ್ನಾಟಕದ ಹಳ್ಳಿಯೊಂದರ ಹೆಂಗಸು ಪಾರವ್ವ ಗಂಡನನ್ನು ಕಳೆದುಕೊಂಡ ನಂತರ ಮಗನ ಜೊತೆ ಬೆಂಗಳೂರಿಗೆ ಬರುತ್ತಾಳೆ. ಆತನ ಇತರ ಗೆಳೆಯರ ಜೊತೆಗೆ ಸಣ್ಣ ಕೊಠಡಿಯೊಂದರಲ್ಲಿ ವಾಸ. ಆ ಗೆಳೆಯರ ಪೈಕಿ ಹರೀಶ ಕೊಂಚ ಕಾಳಜಿಯನ್ನು ತೋರಿಸುತ್ತಾನೆ.
ಆತನಿಗೆ ಧಾರವಾಡದ ಪೇಡೆ ಇಷ್ಟ. ಆತನ ಹುಟ್ಟುಹಬ್ಬದಂದು ಅದನ್ನು ತರಲು ಹೋಗುವ ಆಕೆ ನಾನಿರುವ ಜಾಗ ಬಾಣಸವಾಡಿ ಎಂದು ಹೇಳಲು ತಿಳಿಯದೆ ಬಸವನಗುಡಿಗೆ ಹೋಗಿ ಹಿಂದಿರುಗಿ ಬರಲು ತಿಳಿಯದೇ ಕಳೆದು ಹೋಗಿ ಪರಿತಪಿಸುವ ಸರಳ ಕಥೆ. ಆದರೆ ಹೇಳಿರುವ ಶೈಲಿಯಿಂದಾಗಿ ಮನಸ್ಸನ್ನು ಮುಟ್ಟಿ ತಟ್ಟುವ ಕಥೆ. ರಾಷ್ಟ್ರಪ್ರಶಸ್ತಿ ವಿಜೇತ ತಿಥಿ ಸಿನಿಮಾದ ಶೈಲಿಯಲ್ಲಿ ಈ ಕಿರು ಚಿತ್ರವಿದೆ. ಲೋಕ ಕೆಟ್ಟಿದೆ. ಇಲ್ಲಿನ ಜನ  ಸ್ವಾರ್ಥಿಗಳು, ಮೋಸಗಾರರು ಎಂದು ನಂಬಿರುವ ನಮಗೆ ಪಾರವ್ವನ ಪಯಣದುದ್ದಕ್ಕೂ ಕಾಣ ಸಿಗುವ ಒಳ್ಳೆಯ ಮನಸ್ಸುಗಳನ್ನು ಕಂಡು ಮನಸ್ಸು ತುಂಬಿ ಬರುತ್ತದೆ. ಕಂಡವರ ಮಾರಿಯಾಗ ನಮ್ಮವರ ಹುಡುಕ್ಯಾನಾ ಗೀತೆ ಬಿಡದೆ ಕಾಡುತ್ತದೆ. ಸಂಪೂರ್ಣವಾಗಿ ಹೊಸಬರು ನಟಿಸಿರುವ ಈ ಕಿರುಚಿತ್ರಕಾದರೂ ಆ ಸಿನಿಮಾ ನೋಡಲೇಬೇಕು. ಸದ್ಯ ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಸ್ಟ್ರೀಮ್ ಆಗುತ್ತಿದೆ.

‍ಲೇಖಕರು nalike

May 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: