‘ಫೋಟೋ’ ತೆಗೆಸಿಕೊಳ್ಳುವುದೇ ಒಂದು ಕನಸು! 

ಪ್ರದೀಪ್ ಕೊಲ್ಪೆದಬೈಲ್, ಬೆಳ್ತಂಗಡಿ

ಉತ್ತರ ಕರ್ನಾಟಕ ಭಾಷೆಯ ಸೊಗಡು, ರೊಟ್ಟಿಯ ಘಮಲು, ಕೊರೊನಾದ ದಾಳಿ! ಎಲ್ಲವನ್ನೂ ತೋರಿಸುವುದು ಫೋಟೋ ಸಿನೆಮಾ. ಸ್ಯಾಂಡಲ್‌ವುಡ್ ಸಿನೆಮಾ ಅಂದ ಕ್ಷಣ ಆ್ಯಕ್ಷನ್, ರೋಮ್ಯಾನ್ಸ್‌ ಅನ್ನು ಒಳಗೊಂಡ ಸಿನಿಮಾಗಳೇ ಇರುವಾಗ ಇತ್ತೀಚಿಗೆ ಹಲವು ಸಿನೆಮಾಗಳು ರೋಮ್ಯಾನ್ಸ್, ಫೈಟು ಇಲ್ಲದೇ ತನ್ನ ಕಥೆಯಿಂದಾಗಿಯೇ ಜನರ ಮನಗೆದ್ದಿರುವ ನಿದರ್ಶನಗಳಿವೆ. ಅಂತಹ ಸಿನೆಮಾಗಳ ಸಾಲಿಗೆ ಸೇರುವುದು ಈ ʻಫೋಟೋʼ ಸಿನೆಮಾ. 

ಕಥೆಯೊಳಗೆ ಹೊಕ್ಕರೆ: ಪುಟ್ಟ ಬಾಲಕ ತನ್ನ ತಂದೆ ತಾಯಿಯೊಟ್ಟಿಗೆ ಬಡತನದೊಂದಿಗೆ ಜೀವನ ಕಳೆಯುತ್ತಾನೆ. ಅವನಿಗೋ ಬೆಂಗಳೂರಿಗೆ ಹೋಗೋದೆಂದರೆ ಬಹಳ ಇಷ್ಟ. ಬೆಂಗಳೂರಿಗೆ ಹೋಗುವುದೇನೋ ಓಕೆ, ಆದರೆ ಅಲ್ಲಿಗೆ ಹೋದೆನೆಂದು ತನ್ನ ಫ್ರೆಂಡ್ಸ್ಗಳಿಗೆ ತೋರಿಸಲು ಸಾಕ್ಷಿ ಬೇಕಲ್ವ? ಅದಕ್ಕಾಗಿ ಬೆಂಗಳೂರಿನ ವಿಧಾನಸೌಧ ಬಳಿ ಫೋಟೋ ತೆಗೆಸಿಕೊಳ್ಳುವುದು ಅವನ ಕನಸು.

ಕನಸು ಕಾಣವುದು ಸುಲಭ, ಆದರೆ ಅದನ್ನು ನನಸಾಗಿಸಿಕೊಳ್ಳುವುದು ಹೇಳಿದಷ್ಟು ಸುಲಭವಲ್ಲ. ಆ ಪುಟ್ಟ ಬಾಲಕ ತನ್ನ ತಾಯಿಯರ ಎದುರು ಬೆಂಗಳೂರಿಗೆ ಕರೆದಕೊಂಡು ಹೋಗುವಂತೆ ಪ್ರಸ್ತಾಪ ಇಡುತ್ತಾನೆ. ಆದರೆ ತಾಯಿಗೆ ಕರೆದುಕೊಂಡು ಹೋಗಲು ಮನಸ್ಸಿದ್ದರೂ ಮನೆಯ ಪರಿಸ್ಥಿತಿ, ಬಡತನ ಎದುರು ಬಂದು ಅಷ್ಟು ದೂರ ಹೋಗುವುದು ಬೇಡ ಎಂಬ ಉತ್ತರವನ್ನು ತರಿಸುತ್ತದೆ. ಮಗ ಊಟ ಮಾಡಲು ನಿರಾಕರಿಸುತ್ತಾನೆ, ತಂದೆಯನ್ನು ಬಲವಂತ ಮಾಡುತ್ತಾನೆ. ಕೊನೆಗೆ ತಂದೆಯ ಮನಸ್ಸನ್ನು ಒಪ್ಪಿಸುವಲ್ಲಿ ಗೆಲ್ಲುತ್ತಾನೆ.

ಬೆಂಗಳೂರಿಗೆ ಹೋದರೂ ತನ್ನ ಕನಸಿನಂತೆ ವಿಧಾನಸೌಧ ಬಳಿ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ಸಮಯಕ್ಕೆ ಕೊರೊನಾ ಸಾಂಕ್ರಾಮಿಕ ರೋಗದಿಂದ ಲಾಕ್‌ಡೌನ್ ಘೋಷಣೆ ಆಗುತ್ತದೆ. ಇದು ಅವನ ಕನಸಿಗೆ ಇನ್ನಷ್ಟು ಹೊಡೆತ ನೀಡುತ್ತದೆ. ಲಾಕ್ಡೌನ್‌ನಿಂದಾಗಿ ತನ್ನ ಊರಿಗೆ ವಾಪಾಸ್ಸಾಗಬೇಕಾದ ಪರಿಸ್ಥಿತಿ ಎದುರಾದರೂ, ಅದು ಅವನ ಅರಿವಿಗೆ ಬಂದಿರುವುದಿಲ್ಲ. ತಂದೆಗೆ ಮಗನ ಕನಸನ್ನು ಪೂರೈಸಲಾಗಿಲ್ಲ ಎಂಬ ಬೇಸರ ಉಂಟಾಗುವುದನ್ನು ಸಿನೆಮಾದಲ್ಲಿ ಕಾಣಬಹುದು. ಹೀಗೆ ಕಥೆ ಮುಂದುವರೆದು ಮುಂದಕ್ಕೆ ಕೊರೊನಾ ಲಾಕ್‌ಡೌನ್‌ನಿಂದ ಯಾವ ರೀತಿಯ ಸಮಸ್ಯೆ ಉಂಟಾಯಿತು ಎಂಬ ಚಿತ್ರಣವನ್ನು ನಿರ್ದೇಶಕರು ಸಿನಿಪ್ರಿಯರ ಮುಂದೆ ತಂದಿದ್ದಾರೆ. ಚಿತ್ರ ಅಂತು ಭಾವುಕತೆಯಿಂದ ಕೂಡಿದ್ದು, ವಿವಿಧ ಶೈಲಿಯ ಕನ್ನಡ ಮಾತನ್ನಾಡುವ ಜನರಲ್ಲೂ ಕಣ್ಣೀರು ತರಿಸುತ್ತದೆ. ನಿರ್ದೇಶಕರು ಕೋವಿಡ್ ಸಂದರ್ಭದಲ್ಲಿ ಜನ ಅನುಭವಿಸಿದ ತೊಂದರೆಯನ್ನು ಸೂಕ್ಷ್ಮವಾಗಿ ಜನರೆದುರು ತಂದಿದ್ದಾರೆ. ಇಂತಹ ಸಿನೆಮಾವನ್ನು ನಮ್ಮ ಮುಂದೆ ತಂದಿದ್ದಕ್ಕಾಗಿ ನಿರ್ದೇಶಕರಿಗೆ ವಂದನೆಗಳು.

ಕೋವಿಡ್-19 ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವನವು ಕೂಡ ಒಂದೊಂದು ರೀತಿಯ ಸಮಸ್ಯೆಗಳನ್ನು ಎದುರಿಸಿದೆ. ಲಾಕ್‌ಡೌನ್ ಘೋಷಿಸಿದಾಗಿನಿಂದ ಹಳ್ಳಿಯಲ್ಲಿರುವವರು ಪಟ್ಟಣಕ್ಕೆ ಹೋಗಿದ್ದರೆ, ವಾಪಾಸ್ಸು ಬರುವುದೇ ಕಷ್ಟವಾಗಿತ್ತು. ಇನ್ನು ನಾವಂತು ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ಬಾಲ್ಯದಲ್ಲಾಡುತ್ತಿದ್ದ ಆಟಗಳನ್ನು ಆಡುತ್ತಿದ್ದೆವು. ಸಂಜೆ ಆದರೆ ಮನೆಯ ಪಕ್ಕದಲ್ಲಿರುವ ಸಣ್ಣ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಸಮಯ ಕಳೆದೆವು. ಒಂದು ರೀತಿಯಲ್ಲಿ ದಿನಲೂ ಮುಖಾಮುಖಿ ಭೇಟಿಯಾಗುತ್ತಿದ್ದೆವು. ರಾಜಕಾರಣಿಗಳು ಹಲವು ಯೋಜನೆ, ಕಿಟ್‌ಗಳನ್ನು ಘೋಷಿಸಿದರೂ, ಅವು ಪ್ರತಿಯೊಬ್ಬರ ಮನೆಗೂ ತಲುಪಿರಲಿಲ್ಲ ಎನ್ನುವುದಂತು ವಾಸ್ತವ! ಆರ್ಥಿಕವಾಗಿ ಹೊಡೆತ ಬಿದ್ದಿದ್ದು ಅದೇ ಸಮಯದಲ್ಲಿ!

ನ್ಯೂಸ್ ಮಾಧ್ಯಮಗಳಲ್ಲಿ ತೋರಿಸುತ್ತಿದ್ದಂತೆ ಕೋವಿಡ್‌ನಿಂದಾಗಿ ಆದ ಸಾವುಗಳು ಭಯಭೀತಗೊಳಿಸುವಂತಿತ್ತು. ಸತ್ತರೆ ಮೃತದೇಹವನ್ನೂ ನೀಡುತ್ತಿರಲಿಲ್ಲ. ಕುಟುಂಬದವರಿಗೆ ಅಂತಿಮ ದರ್ಶನಕ್ಕೆ ಅವಕಾಶವಿಲ್ಲದ ರೀತಿಯಲ್ಲಿ, ಶವವನ್ನು ಮಾನವೀಯತೆ ಮರೆತು ಬಿಸಾಕುತ್ತಿದ್ದರು. ಇದನ್ನು ನೋಡಿದಾಗ ಕಣ್ಣಂಚಲ್ಲಿ ನೀರು ಒಸರುತ್ತಿತ್ತು. ಆ ಸಮಯದಲ್ಲಿ ಈ ರೀತಿಯ ಹಲವು ನೋವುಗಳನ್ನು ಅನುಭವಿಸಿದೆವು‌. 

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಆದ ಕಷ್ಟ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಭಾರಿ ಪೆಟ್ಟು ನೀಡಿತು. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ತರಗತಿ ಆರಂಭಿಸಿದಾಗ, ನೆಟ್ವರ್ಕ್ ಸಮಸ್ಯೆಯೇ ಹೆಚ್ಚಿತ್ತು. ಆರ್ಥಿಕವಾಗಿ ಹಿಂದುಳಿದವರ ಬಳಿ ಮೊಬೈಲ್ ಖರೀದಿಸೋದೇ ಕಷ್ವವಾಯಿತು. ಖರೀದಿಸಿದರೂ ನೆಟ್ವರ್ಕ್ ಸಮಸ್ಯೆ, ಸರಿಯಾಗಿ ವಿದ್ಯಾರ್ಥಿಗಳಿಗೆ ತರಗತಿ ಅರ್ಥ ಆಗದ್ದು ಎಲ್ಲವೂ ಅವರ ರಿಸಲ್ಟ್ ಮೇಲೆ ಗಂಭೀರ ಪರಿಣಾಮ ಬೀರಿತು. ಶಿಕ್ಷಣ ಸಂಸ್ಥೆಗಳು ಪಾಸ್ ಮಾಡಿದ್ದರೂ, ಪುಸ್ತಕದಲ್ಲಿರುವ ವಿಷಯಗಳು ವಿದ್ಯಾರ್ಥಿಗಳಿಗೆ ತಲುಪದಾಯಿತು. ಮುಖತಃ ಭೇಟಿ ಆಗದೇ ಇರುವ ಕಾರಣ ಆನ್‌ಲೈನ್‌ ಮುಖಾಂತರ ಪಾಠ ಮಾಡಲು ಶಿಕ್ಷಕರಿಗೂ ಕಷ್ಟವಾಯಿತು. ಇನ್ನು ಶಾಲಾ ಮಕ್ಕಳಿಗೆ ಆನ್‌ಲೈನ್‌ ತರಗತಿಗಾಗಿ ಹೆತ್ತವರು ಕಷ್ಟಪಟ್ಟು ಮೊಬೈಲ್ ತೆಗೆದುಕೊಟ್ಟರೆ ಅವರು ಫ್ರೀಫೈರ್‌ನಂತಹ ಆನ್‌ಲೈನ್‌ ಗೇಮ್ಸ್‌ಗಳ ಗೀಳಿಗೆ ಬಿದ್ದು, ತಮ್ಮ ಪಾಠದ ಕಡೆ ಹೆಚ್ಚು ಗಮನ ಹರಿಸದಿದ್ದುದು ಬೇಸರದ ಸಂಗತಿ. ಆನ್‌ಲೈನ್‌ ತರಗತಿ ಮುಗಿದ ಮೇಲೆ ತರಗತಿಗೆ ಹೋಗಿ ಪಾಠ ಕೇಳುವಾಗ, ಪಾಠದ ಮುಂದುವರಿದ ಭಾಗವನ್ನು ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟವಾಯಿತು. ಜತೆಗೆ ಬೇಡದ ಅನೇಕ ಘಟನೆಗಳಿಂದಾಗಿ, ವಿದ್ಯಾರ್ಥಿ ಜೀವನದ ಸಂತೋಷವನ್ನು ಆಸ್ವಾದಿಸಲು ಅವರಿಗೆ ಸಾಧ್ಯವಾಗದೇ ಹೋಯಿತು.

ಇನ್ನು ಸಾಮಾಜಿಕವಾಗಿ ನೋಡುವುದಾದರೆ, ದಿನಲೂ ಭೇಟಿಯಾಗುತ್ತಿದ್ದ ಪರಸ್ಪರರು ಪರಸ್ಪರ ಉಗ್ರಗಾಮಿಗಳಂತೆ ವರ್ತಿಸುತ್ತಿದ್ದರು. ದಿನಬಳಕೆ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿದಾಗ 2-3 ಮೀಟರ್ ಅಂತರ ಕ್ಯೂ ನಿಂತು ಸಾಮಗ್ರಿಗಳನ್ನು ಖರೀದಿಸಬೇಕಾಗಿತ್ತು. ಇನ್ನು ದೂರದ ಊರಿನಿಂದ ಬಂಧುಗಳು ಬಂದರಂತೂ, ಇವರು ಯಾಕಾದರೂ ಬಂದ್ರಪ್ಪ ಎಂದು ಆತಂಕದ ನೋಟ ಬೀರಿದ್ದು ಕೂಡ ಇದೆ. ಏನೇ ಆದರೂ ಸರ್ಕಾರ ಕೆಲವು ಅಚ್ಚುಕಟ್ಟಾದ ಕ್ರಮ ನಿರ್ವಹಿಸದಿರುವುದು ಸಹ ಜನಜೀವನ ಅಸ್ತವ್ಯಸ್ತ ಆಗಲು ಕಾರಣವಾಯಿತು. ದೇಶದ ಪ್ರಧಾನಿಯವರು ಸಂಜೆ ಆದಾಗ ನಿಮ್ಮ ಮನೆಯ ಬಾಲ್ಕನಿಗೆ ಬಂದು ದೀಪ ಹಚ್ಚಿ, ಬಟ್ಟಲು, ಪ್ಲೇಟು ಬಾರಿಸಿ, ಕೊರೊನಾ ಹೋಗಲಾಡಿಸಲು ಒಟ್ಟಾಗಿ ಪ್ರಯತ್ನಿಸಿ ಎಂದಿದ್ದು ಹಾಸ್ಯಾಸ್ಪದವಾಗಿದೆ. ಪ್ರಧಾನಿಯಾದವರು ಈ ರೀತಿಯ ಮೌಢ್ಯ ತುಂಬಿದ ಮಾತನ್ನಾಡಿದ್ದು ಸಮಂಜಸವಲ್ಲ.

ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಮ್ಮೆದುರಿಗೆ ಫೋಟೋ ಎಂಬ ಚಿತ್ರದ ಮೂಲಕ ಅನೇಕ ಸೂಕ್ಷ್ಮ ವಿಷಯಗಳನ್ನು ಪ್ರಸ್ತುತಪಡಿಸಿದ ನಿರ್ದೇಶಕರಿಗೆ ವಂದನೆಗಳು.

‍ಲೇಖಕರು admin j

June 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: