ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಳೆ ಎನ್ನ ಮನದರಸಿ…

-ಕುಸುಮ ಪಟೇಲ್

1. ಸೂರ್ಯತೇಜನಿಗೊಂದು ನಮನ

ಹೊನ್ನ ಬಾಂದಳದಲ್ಲಿ
ರನ್ನ ಚಪ್ಪರವಿಕ್ಕಿ
ಬೆಳ್ಳಿ ರಥವನು ಏರಿ
ಹೊರಟನೋ ನೇಸರನು
ಈ ಇಳೆಯ ಕಡೆಗೆ

ಸೂರ್ಯನಾ ಪ್ರಖರತೆಗೆ
ಅಗ್ನಿಯಾ ಪರಿತಾಪ
ಆರದದೊ ಇಂತಿಷ್ಟು
ತಂಗಾಳಿ ಬೀಸೆ

ಬೇಸರಕೆ ಜೊತೆಗಾತಿ
ಇಲ್ಲವೇ ನೇಸರಗೆ
ಕೋಪವವಗೇಕಿಷ್ಟು
ಸೂರ್ಯತೇಜನಿಗೆ

ಎಡೆಬಿಡದ ಪರ್ಯಟನೆ
ಬೇಸರವೆ ನೇಸರನೆ
ಆದರೂ ನಿಂತಿಹೆಯ
ಈ ಜಗದ ಆಸರೆಗೆ

ಆಸರೆಯೊ, ಬೇಸರವೊ
ನಮಗೇಕೊ ಆ ಮಾತು
ಇರುವೆಯಾ ನೀನ್ ಇಳೆಗೆ
ಅವಳ ಕೊನೆವರೆಗೆ

ನಿನ್ನ ಆಸರೆಯಲ್ಲೆ
ಇಹುದೊ ಅವಳ ವಿಧಿಲಿಖಿತ
ಇರಲೊ ನಿನ ಅನುಕಂಪ
ಸದಾ ಅವಳ ಮೇಲೆ…

2. ಎಲ್ಲೂ ಹೂಳಲಾರದ
ಯಾವ ಚಿತೆಯಲ್ಲೂ ಸುಡಲಾರದ
ಸದ್ದಿಲ್ಲದೆ ಗದ್ದಲ ಮಾಡುವ
ಸಶರೀರ ಸಗ್ಗದ ಸೋಪಾನ ಏರುವ
ಹುನ್ನಾರ ನಡೆಸಿರುವ – ಶಬ್ದಗಳನ್ನು
ಹಿಡಿಯೆ ಕುಳಿತಿದ್ದೇನೆ
ಸದ್ದಿಲ್ಲದೆ ಗಾಳ ಹಾಕಿ….

ಹುಡುಕುತ್ತಿದ್ದೇನೆ
ಸಬಲಾಕ್ಷರಗಳ
ಪ್ರಬಲ ಪದಗಳನು

ತಿಳಿದವರೇ ಹೇಳಿ
ಬಿಚ್ಚಿ ಹರಡಲೇ
ಸಿಕ್ಕ ಶಬ್ದದ
ಅಂತರಾಳವನು

ಇಲ್ಲ
ಕಟ್ಟಲೇ
ಮೊಲ್ಲೆ ಕಟ್ಟಿದ ಹಾಗೆ
ಹೀಗೊಂದು ಕವನವನು….

3.ಕೇಳೆ ಎನ್ನ ಮನದರಸಿ….

ನೀ ತಾರೆಯಾದರೆ ನಾ ಆಗಸವಾಗಿ
ಕಡಲಾದರೆ ದಡವಾಗಿ
ತುಟಿಯಂಚಿನ ನಗುವಾಗಿ
ಉಸಿರಲ್ಲಿ ಉಸಿರಾಗಿ
ಧಮನಿಗಳಲ್ಲಿ ಹರಿದು
ನಿನ್ನೊಡನೆ ಮೇಳೈಸುವೆ..

2.ಪ್ರೀತಿಯಾ ಆಳವನು
ಅಳೆಯಲಿಕೆ ಕುಳಿತಿದ್ದೆ
ಸಾಲಲಿಲ್ಲವೋ ಇನಿಯ
ಅಳತೆಯಾ ಕೋಲು
ಮಾಡಾಲಿಲ್ಲವೊ ಬೊಮ್ಮ
ಭಾವಗಲನಳೆಯಲಿಕೆ
ಸರಿ ಅಳತೆಯಾ ಮಾರುಗೋಲು!!

‍ಲೇಖಕರು Admin

23 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading