ಕೆ. ಸತ್ಯನಾರಾಯಣ ಅವರ ‘ಅವರವರ ಭವಕ್ಕೆ ಓದುಗರ ಭಕುತಿಗೆ’

ಆತ್ಮಚರಿತ್ರೆಯೆಂಬ ಸ್ವಸ್ವರೂಪ ಜ್ಞಾನಯಾನ…‌

ರಘುನಾಥ್‌ ಕೃಷ್ಣಮಾಚಾರ್

ಕೆ. ಸತ್ಯನಾರಾಯಣ ಅವರ ‘ಅವರವರ ಭವಕ್ಕೆ ಓದುಗರ ಭಕುತಿಗೆ’ ಕೃತಿಯ ವೈಶಿಷ್ಟ್ಯಗಳು. ಮೊದಲ ಬಾರಿಗೆ ಆತ್ಮಚರಿತ್ರೆಯ ಉಗಮ ಮತ್ತು ವಿಕಾಸ ಮತ್ತು ಲಕ್ಷಣಗಳನ್ನು, ಓದುಗರ ಪಾತ್ರವನ್ನು ಕೆಳಗಿನಂತೆ ಗುರುತಿಸಲಾಗಿದೆ.

೧. ಆತ್ಮಚರಿತ್ರೆಯ ಲಕ್ಷಣಗಳು: ನಿವೇದನಾ ಪ್ರಧಾನವಾಗಿ ಇರಬೇಕು. ಅಧಿಕೃತ ನೆನಪುಗಳ ಆಧಾರದ ಮೇಲೆ ರಚಿಸಲ್ಪಟ್ಟಿರಬೇಕು.

೨. ಆತ್ಮಚರಿತ್ರೆಯ ಉಗಮ ಮತ್ತು ವಿಕಾಸ. ಮೊದಲ ಬಾರಿಗೆ ನಾಲ್ಕನೇ ಶತಮಾನದ ಆಗಸ್ಟಿನ್ನ. ಕನ್ಪಫೆಷನ್ ಬರೆದ ಆಟೋಭಯೋಗ್ರಫಿ ಮೊದಲ ಬಳಕೆ ೧೮೦೯ ರಲ್ಲಿ. (ರಾಬರ್ಟ್ ಸೌತಿ) ಭಾರತದಲ್ಲಿ ಆತ್ಮ ಚರಿತ್ರೆ:ರೋಸಿ ಸಿಂಗ್ ಅವರು ೬೦ ರ ನಂತರ ದಲಿತ ಆತ್ಮ ಚರಿತ್ರೆಗಳ ಕುರಿತು ಬರೆದದ್ದರಲ್ಲಿ ಅಂಬೇಡ್ಕರ್ ಪರವಾದ ನಿಲುವು ಎದ್ದು ಕಾಣುತ್ತದೆ.

೩. ಆತ್ಮಚರಿತ್ರೆಯ ಉದ್ದೇಶವೇ ವ್ಯಕ್ತಿತ್ವ ಅಥವಾ ದೃಷ್ಟಿಕೋನವನ್ನು ಸ್ಥಾಪಿಸಿವುದು. ದಲಿತ ಆತ್ಮ ಚರಿತ್ರೆಗಳು ನಾನು, ನಾವು ಆಗಿ ಅದು ಸಮುದಾಯವನ್ನು ಪ್ರತಿನಿಧಿಸುತ್ತದೆ. ಉಳಿದವರ ಆತ್ಮಚರಿತ್ರೆಗೆ ಕೂಡ ಇದು ಅನ್ವಯಿಸುತ್ತದೆಯೆ? ಭಾರತದ ಶ್ರೇಣೀಕೃತ ಸಮಾಜದಲ್ಲಿ ಅಸ್ಮಿತೆಯ ಅರಿವು ಮೂಡಿದ ತಕ್ಷಣ ಜಾಗೃತಿ ಉಂಟಾಗಿ ಆತ್ಮಚರಿತ್ರೆಗೆ ಕಾರಣವಾಯಿತು. ಆತ್ಮ ಚರಿತ್ರೆ ಎನ್ನುವುದು ಕೂಡ ಒಂದು ಕಟ್ಟುವ ಪ್ರಕಾರ.

೪. ಆತ್ಮ ಚರಿತ್ರೆಗಳಿಗೆ ಓದುಗರು ಭಿನ್ನ. ಅಲ್ಲಿ ನೇರವಾಗಿ ಲೇಖಕನ ವ್ಯಕ್ತಿತ್ವಕ್ಕೆ ಮುಖಾಮುಖಿಯಾಗ ಬೇಕಾಗುತ್ತದೆ. ಹೆಚ್ಚಿನ ಓದುಗರು ಶೋಧನೆಯ ಬರವಣಿಗೆಯನ್ನು ಇಷ್ಟಪಡುತ್ತಾರೆ.

೫. ಆತ್ಮಚರಿತ್ರೆಯ ಸವಾಲು: ಲೇಖಕ ತನ್ನನ್ನು ತನ್ನ ಮೂಲಕವೆ ನೋಡಿಕೊಳ್ಳಬೇಕು. ಇದನ್ನು ಅವನು ಹೇಗೆ ನಿರ್ವಹಿಸುತ್ತಾನೆ ಎಂಬುದು ಕುತೂಹಲಕಾರಿ. ‘ಸಿದ್ದಲಿಂಗಯ್ಯ ಬಾಲ್ಯದ ಮೇಲೆ ತಮ್ಮ ಬೆಳೆದ ವ್ಯಕ್ತಿತ್ವವನ್ನು ಹೇರುವುದಿಲ್ಲ. ಆವತ್ತಿನ ಅನುಭವವನ್ನು ಆವತ್ತಿನ ದೃಷ್ಟಿಕೋನದಿಂದಲೇ ಬರೆಯುತ್ತಾರೆ. ಅಪ್ಪ ನೊಗ ಹೊತ್ತ, ಅದನ್ನು ನೋಡಿದಾಗ ಆದ ಸಂಕಟ, ಇತ್ಯಾದಿ. ಅವರ ಮೂರು ಸಂಪುಟಗಳ ಮೊದಲ ಭಾಗವನ್ನು ಒಟ್ಟಿಗೆ ನೋಡಿದಾಗ ನೋವಿನ, ಅವಮಾನದ, ಬೆರಗಿನ, ಸಂತೋಷದ ಯಾವುದೇ ಅನುಭವವಾದರೂ ಸರಿ,ಅದನ್ನು ವ್ಯಾಖ್ಯಾನಿಸುವುದಕ್ಕಿಂತ ವಿಶ್ಲೇಷಿಸುವುದಕ್ಕಿಂತ, ಆ ಅನುಭವ ಒದಗಿ ಬಂದ ರೀತಿಯಲ್ಲೆ ಮಂಡಿಸುವುದು, ಮತ್ತು ಘಟನೆ ನಡೆಯುವಾಗ ವ್ಯಕ್ತಿತ್ವದ ಮೇಲೆ ಆದ ಪರಿಣಾಮವನ್ನು ಸಂಕ್ಷಿಪ್ತವಾಗಿ ಹೇಳುವುದರ ಕಡೆಗೆ ಗಮನ ಇದೆ.

೬. ಆತ್ಮಚರಿತ್ರೆಯ ಇನ್ನೊಂದು ಅಂಶವೆಂದರೆ ಪ್ರಕೃತಿಯ ಪಲ್ಲಟಗಳನ್ನು (ಕ್ಷಣ ಕ್ಷಣದ) ಗಮನಿಸದೆ ಇರುವುದು.

೭. ಆತ್ಮ ಚರಿತ್ರೆ ಬರೆಯುವ ಒತ್ತಡವೆ ನಿಜವಾದದ್ದು (ಭೈರಪ್ಪನವರ ಭಿತ್ತಿ). ಅವರ ಬಾಲಕನ ದೃಷ್ಟಿಯಿಂದ ಬರೆದರು ಅದರಲ್ಲಿ ಭರ್ತ್ಸನೆ ಇದೆ. ವಾಸ್ತವವನ್ನು ವಾಸ್ತವ ಸ್ತರದಲ್ಲಿ ನೋಡಬೇಕು ಎಂಬ ದೃಷ್ಟಿಯಿಂದ ಭೈರಪ್ಪನವರಿಗೆ ಬೇರೆ ಯಾವ ಲೇಖಕರಿಂದಲೂ ನೋಡಲು ಸಾಧ್ಯವಾಗದ ಗ್ರಾಮೀಣ ಸಾಮಾಜಿಕ ವ್ಯವಸ್ಥೆಯನ್ನು, ಜಾತಿಕ್ರಮ ಆಚರಣೆಗಳನ್ನು ನೋಡಲು ಸಾಧ್ಯವಾಗಿದೆ. ಲಂಕೇಶ ಬಾಲ್ಯದ ಅನುಭವವನ್ನು ನೈತಿಕತೆಯ, ವೈಚಾರಿಕತೆಯ ನೆಲೆಯಿಂದ ನೋಡದೆ ಸಂದಿಗ್ಧತೆಯ ಸ್ತರದಲ್ಲೆ ನೋಡುತ್ತೇನೆ ಎನ್ನುತ್ತಾರೆ. ಇವುಗಳಲ್ಲಿ ಅನಂತ ಮೂರ್ತಿಯವರ’ ಸುರಗಿ ಸಂಪಾದನೆ ಮಾತ್ರ ಪರಿಷ್ಕೃತ ಗೊಂಡ ಮೊದಲ ಆತ್ಮಚರಿತ್ರೆ.

೮. ಪ್ರತಿಯೊಂದು ಲೇಖಕನಿಗೂ ಹಲವಾರು ಆತ್ಮಚರಿತ್ರೆಗಳು ಇರುತ್ತವೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿ ಲೇಖಕ ಬರೆಯುತ್ತಾನೆ.

೯.ಇಂದಿನ ನಮ್ಮ ‘ ಬೇಕು’ಗೆ ಅನುಗುಣವಾಗಿ ಹಿಂದಿನ ಲೋಕದ, ಕಿಟಕಿ, ಬಾಗಿಲುಗಳೆಲ್ಲಾ ತೆರೆದುಕೊಳ್ಳುತ್ತವೆ. ತೇಜಸ್ವಿ ಬಾಲ್ಯದಲ್ಲಿ ಕುವೆಂಪು ಮಕ್ಕಳ ಪ್ರಶ್ನೆಗಳಿಗೆ ತುಂಟತನಗಳಿಗೆ ಅವಕಾಶ ಕೊಡುತ್ತಾರೆ. ಅವರು ಕೂಡ ಎಲ್ಲಾ ತಂದೆಯರ ಹಾಗೆ ಪಿರಿಪಿರಿಗೊಳ್ಳುತ್ತಾರೆ, ಕೋಲಿನಿಂದ ಬಾರಿಸುತ್ತಾರೆ, ಮಾತು ಬಿಡುತ್ತಾರೆ. ಇದು ಮಕ್ಕಳನ್ನು ಕುರಿತು ಪ್ರೀತಿಸುವ, ಗೌರವಿಸುವ ವಿಧಾನ.

ತೇಜಸ್ವಿ ಅಣ್ಣನ ನೆನಪು ‘ಮೇಲು ನೋಟಕ್ಕೆ ವಿರೋಧಾಭಾಸ ಎಂದು ಕಾಣುವಂತಹ ಸಂಗತಿಗಳು ಕುವೆಂಪು ಅವರ ವ್ಯಕ್ತಿತ್ವದಲ್ಲಿ, ಬರವಣಿಗೆಯಲ್ಲಿ ಇವೆ. ಆದರೆ ಕುವೆಂಪು ಅವರನ್ನು ಸಂಶ್ಲೇಷಣಾತ್ಮಕವಾಗಿ ಸಮಗ್ರವಾಗಿ ಓದಲು, ಗ್ರಹಿಸಲು ಪ್ರಯತ್ನ ಪಟ್ಟರೆ ಈ ವಿರೋಧಾಭಾಸಗಳು ಅಷ್ಟೇನು ಮುಖ್ಯವಲ್ಲ ಅಥವಾ ಸರಿಯಾಗಿ ಅರ್ಥವಾಗುತ್ತದೆ’ ಲೇಖಕನ ಉದ್ದೇಶವನ್ನು ಮೀರಿ ಕೂಡ ಬರವಣಿಗೆ ಬದಲಾಗುತ್ತಿರುತ್ತದೆ ಎನ್ನುತ್ತಾರೆ. ಹಾಗಾದರೆ ಲೇಖಕನ ಆಯ್ಕೆಯ ಸ್ಥಾನವೇನು?

ಭಾಗ -೨
ಆತ್ಮಚರಿತ್ರೆಯೆಂಬ ಜ್ಞಾನಯಾನದ ನಾಲ್ಕು ಚಕ್ರಗಳು:
ಕೆ.ಸತ್ಯನಾರಾಯಣ. ಅವರ ಪ್ರಕಾರ ಅವು, ಬಾಲ್ಯ, ಯೌವನ, (ಗಂಡು ಹೆಣ್ಣಿನ ಸಂಬಂಧ, ದಾಂಪತ್ಯ, ಸಾಹಿತ್ಯ ಮತ್ತು ಸಾಮಾಜಿಕ ಘಟನೆಗಳು ಮತ್ತು ಮುಪ್ಪು (ಸಾವಿನ ಹೊಸ್ತಿಲಲ್ಲಿ). ಅದರಲ್ಲಿ ಮೊದಲ ಬಾಲ್ಯಕ್ಕೂ ನಾಲ್ಕು ಆಯಾಮಗಳು ಇವೆ. ಅವು: ಅವಮಾನ, ನೋವು. ಬೆರಗು ಮತ್ತು ಸಂತೋಷಗಳು. ಇಲ್ಲಿ ಆರಿಸಿಕೊಂಡ ಆತ್ಮಚರಿತ್ರೆಗಳಲ್ಲಿ ಸಿದ್ದಲಿಂಗಯ್ಯ ಮತ್ತು ಭೈರಪ್ಪನವರು ಬೇರೆ ಬೇರೆ ಸ್ತರದ ಅವಮಾನ ಮತ್ತು ನೋವುಗಳನ್ನು ಅನುಭವಿಸುತ್ತಾರೆ. ಸಿದ್ದಲಿಂಗಯ್ಯ ಅವುಗಳಿಂದ ವ್ಯಗ್ರರಾಗದೆ ಜೀವನಮುಖಿಗಳಾಗತ್ತಾರೆ. ಉದಾಹರಣೆಗೆ ಅವರು ಬಾಲ್ಯದ ಅವರಪ್ಪ ನೊಗಹೊತ್ತ ಚಿತ್ರ ಅವರಿಗೆ ಸಂಕಟವನ್ನು ಉಂಟುಮಾಡಿದರೂ ಅವರು ಅದರಿಂದ ವ್ಯಗ್ರರಾಗುವುದಿಲ್ಲ. ಅದೆ ಭೈರಪ್ಪನವರು ತಮಗಾದ ಅವಮಾನವನ್ನು(ಅವುಗಳ ಉಲ್ಲೇಖ ಇಲ್ಲ) ಬೇರೆಯವರ ಕುರಿತು ಭರ್ತ್ಸನೆಯನ್ನು ತಳೆಯಲು, ಜೀವನದ ಉದ್ದಕ್ಕೂ ಅದನ್ನು ಉಳಿಸಿಕೊಂಡ ಜೀವವಿರೋಧಿ ನಿಲುವು ತಳೆಯುತ್ತಾರೆ. ಇಲ್ಲಿ ಲೇಖಕರು ಇಬ್ಬರಿಗೂ ನಡುವೆ ಇರುವ ಅಂತರವನ್ನು ಗುರುತಿಸುವುದಿಲ್ಲ.
ಗಿರೀಶ್ ಕಾರ್ನಾಡ್ ತಮ್ಮ ‘ಬಾಲ್ಯದ ಹುಟ್ಟಿನ ಸಂದಿಗ್ಧತೆಯನ್ನು ಅರ್ಪಣೆಯ ಭಾಗದಲ್ಲಿ ರೂಪಕದ ರೀತಿಯಲ್ಲಿ ಮಂಡಿಸಿದರು ಅದನ್ನು ವಿಸ್ತರಿಸುವುದಿಲ್ಲ’ ಎಂದು ವ್ಯಾಖ್ಯಾನಿಸಲಾಗಿದೆ. ಅದರ ಅನುಭವ ಕೂಡ ಅವರನ್ನು ಜೀವನ ವಿಮುಖರನ್ನಾಗಿಸುವುದಿಲ್ಲ ಅದರ ಬದಲಿಗೆ ಹೊಸ ಅನ್ವೇಷಣೆಗಳಿಗೆ ದಾರಿ ಮಾಡಿಕೊಡುತ್ತದೆ ಎಂಬುದು ಮುಖ್ಯ.

ಅಡಿಗರು ತಮ್ಮ ಬಾಲ್ಯದಲ್ಲಿ ‘ಇನ್ನೊಬ್ಬರು ದಬ್ಬಾಳಿಕೆ ಹಿಂಸೆ ಮಾಡಿದಾಗ ನೋವಾದರೂ, ಬೇಸರವಾದರೂ ಸಹಿಸಿಕೊಳ್ಳುವ ಅನುಭವವನ್ನು ಮತ್ತೆ ಮತೆ ಹೇಳುತ್ತಾರೆ. ಅವರ ಮೇಲೆ ಆದ ನಿಸರ್ಗದ ಪ್ರಭಾವ: ನಮ್ಮ ಮನೆಯ ಸುತ್ತಲಿನ ಪ್ರಾಣಿ ಲೋಕ, ವನಸ್ಪತಿ ಲೋಕಗಳಿಂದ ದಿನದಿನವು ಹೊಸ ಪಾಠಗಳು ನಡೆಯುತ್ತಲೇ ಇದ್ದವು (ಪುಟ:೧೨) ಕುಂದಾಪುರಕ್ಕೆ ಓದಲು ಹೋಗುವಾಗ ಸುತ್ತಲೂ ನೋಡಿದಾಗ ಆಶ್ಚರ್ಯ, ಸಂತೋಷ; ಎಂದು ಕಾಣದ ವಿಚಿತ್ರ ದೃಶ್ಯವನ್ನು ಕಂಡವರ ದಿಗ್ಭ್ರಮೆ ನನ್ನ ಆವರಿಸಿದವು.ಪೂರ್ವಕ್ಕೆ ನೋಡಿದರೆ ದಕ್ಷಿಣಕ್ಕೆ ಹರಿಯುವ ನದಿ, ರಸ್ತೆಯ ಪಕ್ಕದಲ್ಲೇ. ಆಚೆ ಕಡೆ ಪಶ್ಚಿಮ ಪಕ್ಕದಲ್ಲೇ ಭೋರ್ಗರೆಯುತ್ತಿರುವ ವಿಶಾಲವಾದ ಅಲೆ ಅಲೆಯೆದ್ದು ಬಂದು ದಡಕ್ಕೆ ಬಡಿಯುತ್ತಿದ್ದ ಅರಬ್ಬೀ ಸಮುದ್ರದ ಅತ್ಯಂತ ಮನೋಜ್ಞವಾದ ನೋಟ. ಒಂದು ಫರ್ಲಾಂಗ್ ದೂರ ಇದೆ ದೃಶ್ಯ ನೋಡಿ ಮನಸ್ಸು ಹಿಗ್ಗಿತು ‘ಲಂಕೇಶ್ ಅವರ ಹುಳಿ ಮಾವಿನ ಮರದಲ್ಲಿ ಬಾಲ್ಯದ ನೆನಪು: ಬಾಲ್ಯವನ್ನು ಭಯ ಆತಂಕ ದಿಗ್ಭ್ರಮೆಗಳ ಸ್ತರದಲ್ಲಿ ಗ್ರಹಿಸಲಾಗಿದೆ.’ ಆ ಸಮಯದಲ್ಲಿ ನನಗೆ ತುಂಬಾ ಅಪರಿಚಿತ ಮತ್ತು ರೋಮಾಂಚಕ ಅನುಭವ ವೆಂದರೆ ನದಿಯದು.ಬೇಸಿಗೆಯಲ್ಲಿ ಹೊಳೆ ಮೂರು ನಾಲ್ಕು ತೊರೆಗಳಾಗಿ ಹರಿಯುತ್ತಿತ್ತು. ಬಿಸಿಲಿನಲ್ಲಿ ತಂಪು ನೀರಿನ ಖುಷಿ ಎಷ್ಟು ಇರುತ್ತಿತ್ತು ಎಂದರೆ ನಾನು ಒಂದೇ ಕಡೆ ನಿಂತು ಈಜು ಕಲಿಯಲಿಲ್ಲ’.

ಹೀಗೆ ಇದ್ದೂ ಪೀಠಿಕೆಯಲ್ಲಿ ಲೇಖಕರು ಯಾವ ಲೇಖಕರಿಗೂ ಬದಲಾಗುತ್ತಿರುವ ಪ್ರಕೃತಿ ಗಮನಕ್ಕೆ ಬಂದಿಲ್ಲ ಎಂದಿರುವುದು ಮಾತ್ರ ವಿಚಿತ್ರ.
ಅನಂತಮೂರ್ತಿಯವರ ‘ಸುರಗಿ’ ಬ್ರಾಹ್ಮಣ ಸಮುದಾಯದ ಬಾಲವಿಧವೆಯರ ಅಮಾನುಷ ಜೀವನ, ಅಸ್ಪೃಶ್ಯತೆ, ನಾವು ಇತರರಿಗೆ ಮಾಡುವ ಹಿಂಸೆಯನ್ನು ನಮ್ಮಲ್ಲೆ ನಮ್ಮ ಹೆಂಗಸರಿಗೂ ಮಾಡುತ್ತೇವೆ ಎಂಬುದು ನಮ್ಮ ಧರ್ಮದ ಮೇಲೆ ಅಪಾರ ಪ್ರೀತಿ ಇದ್ದ ನನ್ನ ತಂದೆಗೆ ಒಂದು ಸಮಸ್ಯೆಯಾಗಿತ್ತು’ (ಪು.೧೧). ಬಾಲ್ಯದಲ್ಲಿಯೇ ಅವರಲ್ಲಿ ಬೆಳೆಯುತ್ತಿದ್ದ ಸಮುದಾಯದ ಬಗೆಗಿನ ಆತ್ಮವಿಮರ್ಶೆಯ ದ್ಯೋತಕವಾಗಿರುವುದನ್ನು ಲೇಖಕರು ಗುರುತಿಸಬಹುದಾಗಿತ್ತು.

೨. ಗಂಡು ಹೆಣ್ಣು ದಾಂಪತ್ಯ: ಸಿದ್ದಲಿಂಗಯ್ಯ ‘ಮನುಷ್ಯನ ವ್ಯಕ್ತಿತ್ವ ನಿರ್ಧರಿಸುವ ಒಂದು ಮುಖ್ಯ ಅಂಶವಾದ ಗಂಡು ಹೆಣ್ಣಿನ ಸಂಬಂಧ, ದಾಂಪತ್ಯ, ಪ್ರೀತಿ, ಪ್ರೇಮಗಳು ಇವರ ಬರವಣಿಗೆಯಲ್ಲಿ ಗೈರುಹಾಜರಿ. ವೈಯಕ್ತಿಕ ಬದುಕಿನ ಆತ್ಮೀಯ ಸ್ತರದ ಬಗ್ಗೆ ಬರೆದು ಕೊಳ್ಳುವುದು ಅವರಿಗೆ ಮುಖ್ಯ ಅನಿಸದೆ ಇರಬಹುದು’. (ಪುಟ: ೭೬) ಅಡಿಗರು: ಒಂದು ಹೊಸ ಅನುಭವ ಆಯಿತು ಬಂದಿರುವ ಹುಡುಗಿ ಲೀಲಾವತಿ, ಉತ್ತರ ಕನ್ನಡದವಳು. ಹದಿನೈದು ವರ್ಷ. ಮೃದು ಸ್ವಭಾವದ ಸುಂದರಿ. ನನ್ನ ಮನಸ್ಸು ಮಾರುಹೋಯಿತು. ದೇವಸ್ಥಾನಕ್ಕೆ ನಾವಿಬ್ಬರೂ ಹೋಗಿ ದೇವರಿಗೆ ಪ್ರದಕ್ಷಿಣೆ ಹಾಕಿ ಬಂದೆವು. ಒಂದೇ ದಿನದಲ್ಲಿ ಭಾ ರೀ ಹತ್ತಿರ ಬಂದ ಅನುಭವ. ಪ್ರೇಮದ ಪಂಚಾಂಗವಾಗಿ ನನ್ನ ಜೀವನದಲ್ಲಿ ಈ ಅನುಭವ ಸ್ಥಾಯಿಯಾಗಿ ಉಳಿಯಿತು.’ (ಪುಟ: ೭೮) ತೇಜಸ್ವಿಯವರ ಅಣ್ಣನ ನೆನಪುಗಳಲ್ಲಿ ಇದಕ್ಕೆ ಸಂಬಂಧ ಪಟ್ಟ ಯಾವ ಆಲೋಚನೆಗಳು ಸಿಗುವುದಿಲ್ಲ ಎಂದಿದ್ದಾರೆ. ಆದರೆ ತಾವು ಪ್ರೀತಿಸಿದ ಅನ್ಯಜಾತಿಯ ಹುಡುಗಿ ರಾಜೇಶ್ವರಿಯವರನ್ನು ಮದುವೆಯಾಗುವ ತಮ್ಮ ಅಪೇಕ್ಷೆಯನ್ನು ತಮ್ಮ ಗೆಳೆಯರ ಮೂಲಕ ಕುವೆಂಪು ಅವರಿಗೆ ತಲುಪಿಸಿದ್ದು ಅದಕ್ಕೆ ಅವರು ಸರಳ ವಿವಾಹದ ಷರತ್ತುಗಳನ್ನು ಹಾಕಿ ಮದುವೆ ಮಾಡಿದ ವಿವರಗಳನ್ನು ನಮೂದಿಸಿದ್ದಾರೆ. ಅದನ್ನು ಲೇಖಕರು ಇಲ್ಲಿ ಉಲ್ಲೇಖ ಮಾಡಿಲ್ಲ.

ಲಂಕೇಶ್ ಲೈಂಗಿಕ ಸಂಬಂಧವನ್ನು ವರ್ಣಿಸುವ ಬಗೆ: ರಂಗಿ ಮನಸ್ಸಿನಲ್ಲಿ ನಿಂತಳು, ಕನಸಿನಲ್ಲಿ ಬಂದಳು, ರಂಗಿಯ ಇಡೀ ದೇಹ ನನ್ನ ಹತ್ತಿರ ಬಂದದ್ದು, ಅವಳು ನಕ್ಕಿದ್ದು, ಅಪ್ಪಿಕೊಂಡದ್ದು, ಗದ್ದೆ ಬದುವಿನಲ್ಲಿ ಎಳೆದುಕೊಂಡದ್ದು ‘(೧೦೨) ಅದರಂತೆ ಸಲಿಂಗಕಾಮಿ ಅನುಭವ’ ಮೂರ್ತಿ ಎಂಬ ನಸುಗಪ್ಪು ಬಣ್ಣದ, ಸುಂದರ ಕೆನ್ನೆಗಳ, ಮೋಹಕ ಕಣ್ಣುಗಳ ಹುಡುಗ ಇದ್ದ. ಇವನನ್ನು ಇಲ್ಲಿಯವರೆಗೆ ಯಾವುದೇ ಹುಡುಗಿಯನ್ನು ಇಷ್ಟ ಪಡದಷ್ಟು ಇಷ್ಟ ಪಟ್ಟೆ'(೧೦೪) ಮದುವೆಯಾಗುವ ಹುಡುಗಿಯನ್ನು ಸಾಂಪ್ರದಾಯಿಕವಾಗಿ ನೋಡಿದ್ದು. ‘ಅವಳಿಗೂ ನನಗೂ ತುಂಬಾ ವ್ಯತ್ಯಾಸವಿದೆ. ಅವಳ ಮುಗ್ಧತೆ ಮನಕರಗಿಸುವಂತಿದೆ. ನಾನು ಇನ್ನೂ ಯಾವ ರೀತಿಯಲ್ಲೂ ಪ್ರಬುದ್ಧೆಯಾಗದ ಹುಡುಗಿಯನ್ನು ಮದುವೆಯಾಗಿ ತಪ್ಪು ಮಾಡುತ್ತಿರಬಹದೆ ಎನಿಸತೊಡಗಿತು’… ಮದುವೆಯ ನಂತರ ಮೂಡಿದ ಬಿಕ್ಕಟ್ಟು, ಅದರ ಮೇಲೆ ಮಕ್ಕಳ ಮೇಲೆ ಆದ ಪರಿಣಾಮ ವಸ್ತುನಿಷ್ಠವಾಗಿ ಸೂಚಿಸುವದರೊಂದಿಗೆ ರೇವತಿ ಎಂಬ ಹೆಂಗಸಿನೊಡನೆ ಸಂಬಂಧ ಉಂಟಾದಾಗ ಆಕೆ ಮದುವೆಗೆ ಒತ್ತಾಯಿಸಿದಾಗ ‘ನಾನು ನನ್ನ ಹೆಂಡತಿಯನ್ನು ಬಿಡುವದಾಗಲಿ, ಇನ್ನೊಬ್ಬಳ ಜತೆಗೆ ಮದುವೆಯಾಗುವುದಾಗಲಿ ಸಾಧ್ಯವಿಲ್ಲ’ ಎಂದು ಬರೆದಿದ್ದಾರೆ (೩೭೪) ನಾವು ಎಷ್ಟೇ ತೆರೆದುಕೊಂಡು ಬರೆದರು ಕತೆ ಮತ್ತು ಚರಿತ್ರೆ ಎರಡೂ ಈ ಕಾರಣಕ್ಕೆ ಅಪೂರ್ಣವೆ ಎಂಬುದು ಲೇಖಕರ ಅಭಿಪ್ರಾಯ.

ಗಿರೀಶ್ ಕಾರ್ನಾಡ್: ‘ನಾನು ಆಕೆಯಿಂದ ಏನನ್ನೂ ಬಚ್ಚಿಡಲಿಲ್ಲ. ಆಕೆಗಾಗಲಿ ಅ ವಿಷಯದಲ್ಲಿ ವಂಚನೆ, ಡಾಂಭಿಕತೆ ಬೇಕಾಗಿರಲಿಲ್ಲ. ಇವೆಲ್ಲ ಬ್ರಹ್ಮಚರ್ಯದ ಅಪರಿಹಾರ್ಯ ಅಡ್ಡದಾರಿಗಳು. ವಿವಾಹದ ಬಳಿಕ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸಿದರೂ ವಿವಾಹ ಪೂರ್ವದ ಸ್ನೇಹ ಸಂಬಂಧಗಳನ್ನು ಮತ್ತೆ ಹರಿದು ಹಾಕಿಲ್ಲ’. ಸರಸ್ವತಿಯ ದೀರ್ಘ ಕಾಲದ ಒಡನಾಟವನ್ನು ಕಾರ್ನಾಡರೇ ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತಾರೆ. (ಪು.೮೩) ಅನಂತಮೂರ್ತಿ ಅವರ ಸುರಗಿ: ಹೆಂಡತಿಯ ಸ್ವಭಾವ ಮತ್ತು ವ್ಯಕ್ತಿ ಚಿತ್ರ ಕಟ್ಟಿ ಕೊಡುವ ಪ್ರಯತ್ನ ಇದೆ. ‘ಪರಸ್ಪರ ಸಹಿಸಿಕೊಂಡು ಬದುಕಿದೆವು ಎಂದು ಹೇಳಿಕೊಳ್ಳುವಾಗ’ ಎಲ್ಲಾ ವಿವಾಹ ಸಂಬಂಧದಲ್ಲಿ ಸಂಸಾರದ ಚೌಕಟ್ಟಿನಲ್ಲಿ ಒಂದು ಹಂತದಲ್ಲಿ ಪರಸ್ಪರ ಹೊಂದಿಕೊಳ್ಳುವದಷ್ಟೆ ಉಳಿದಿರುತ್ತದೆ, ಪ್ರೀತಿಯ ನೆನಪು ಇರುತ್ತದೆ ಅಷ್ಟೇ ಎಂಬ ನೋಟವಿದೆ.

೬೦ರ ದಶಕದ ಆಸುಪಾಸಿನಲ್ಲಿ ಅಂತರ್ಜಾತಿಯ, ಅಂತರಧರ್ಮೀಯ ವಿವಾಹವಾಗುವಾಗ ಉದ್ಬವಿಸಿದ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಚಿತ್ರಿಸಲಾಗಿದೆ. ಪರಸ್ಪರರಲ್ಲಿ ಇದ್ದ‌ ಪ್ರೇಮವನ್ನು ಸಂಸಾರದ ಬಿಕ್ಕಟ್ಟು, ಸಮಸ್ಯೆ, ವಿರೋಧದ ನಡುವೆಯೂ ಉಳಿಸಿಕೊಂಡದ್ದನ್ನು ಹೇಳುವಲ್ಲಿ ಸಕಾರಣವಾದ ಹೆಮ್ಮೆ ಇದೆ. ಹೆಣ್ಣಿನ ಸ್ವಾರ್ಥದಿಂದ ಗಂಡ ಲಾಭ ಪಡೆದು ನಂತರ ಆ ಸ್ವಭಾವವನ್ನು ದೂರುವುದು ಎಷ್ಟು ಸರಿ ಎಂದು ಪ್ರಶ್ನಿಸುವಾಗ ತೆರದ ಮನಸ್ಸಿನ ಜಿಜ್ಞಾಸೆ ಇದೆ. ಉದಾತ್ತವಾಗಿ ಕಾಣಿಸಿಕೊಳ್ಳುವ ಪ್ರಯತ್ನ ಇದೆ, ಎಂದಿದ್ದಾರೆ ಲೇಖಕರು.

ಭಿತ್ತಿ: ವಿವಿಧ ಹೆಣ್ಣುಗಳ ಒಡನಾಟ ದೊರೆತರೂ – ವಿವಾಹ ಪೂರ್ವ ಒಂದಲ್ಲ ಒಂದು ಕಾರಣದಿಂದ ಮುರಿದು ಬೀಳುತ್ತವೆ. ಮದುವೆಗೆ ಹೆಣ್ಣು ದೊರಕಿದ್ದು, ಮದುವೆ ಆದದ್ದು ಎಲ್ಲಾ ಹತ್ತು ಹನ್ನೊಂದು ಸಾಲುಗಳಲ್ಲಿ ಮುಗಿದು ಹೋಗುತ್ತದೆ. ದಾಂಪತ್ಯ ಜೀವನದ ಮುಂದಿನ ವಿವರಗಳು ಸಿಗುವುದಿಲ್ಲ, ಎಂದು ಲೇಖಕರು ನಮೂದಿಸಿದ್ದಾರೆ.

೩: ಒಂದೇ ಕಾಲ ಹಲವು ಜಿಗಿತ: ಅಡಿಗರು, ಸಾಹಿತ್ಯ ಮತ್ತು ಸಂಗೀತಗಳು ತಮ್ಮ ಮೇಲೆ ಪ್ರಭಾವ ಬೀರಿದ ಬಗೆ. ಹೊಸ ಕಾವ್ಯ ರಚನೆ ಮಾಡಿದರೂ ಅದಕ್ಕೆ ತಕ್ಕ ಪ್ರೋತ್ಸಾಹ ಮತ್ತು ಕೆಲಸ ಬೆಂಗಳೂರಿನಲ್ಲಿ ಸಿಗದೆ ಹೋದುದರ ಹಿಂದಿನ ರಾಜಕೀಯವನ್ನು ಪ್ರಸ್ತಾಪಿಸುತ್ತಾರೆ.
ಅನಂತಮೂರ್ತಿ: ಕಾಮನ್ ವೆಲ್ತ್ ಸಮ್ಮೇಳನಕ್ಕೆ ಬರೆದ ಪತ್ರದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬರೆದದ್ದು ಮಾತ್ರ ಸಾಹಿತ್ಯವಲ್ಲ. ಅದನ್ನು ನಾವು ಈಚೆಗೆ ಕಲಿತದ್ದು ಭಾರತೀಯ ಭಾಷೆಗಳಲ್ಲಿ ಬರೆದ ಸಾಹಿತ್ಯವೆ (ಸಾವಿರಾರು ವರ್ಷಗಳಿಂದ ಬಂದ) ನಿಜವಾದ ಸಾಹಿತ್ಯ ಎಂಬ ಅವರು ಅರವತ್ತರ ದಶಕದಲ್ಲಿ ತಳೆದ ನಿಲುವು ಸ್ವಾಗತಾರ್ಹ. ತಮ್ಮ ಬರಹದ ಹೊರಳು ದಾರಿಯನ್ನು ಕುರಿತು ಬರೆದದ್ದು ನಮಗೆ ಆತ್ಮ ಸಮರ್ಥನೆಯಾಗಿ ಕಂಡರೆ ಅದರಲ್ಲಿ ತಪ್ಪೇನು (೯೬), ಎಂದಿದ್ದಾರೆ ಲೇಖಕರು.

ಲಂಕೇಶ್ ರ ಹುಳಿ ಮಾವಿನ ಮರ: ‘ನನ್ನಂತೆ ಸಾಹಿತ್ಯದ ವಿದ್ಯಾರ್ಥಿಗಳಾಗಿದ್ದ ಹಲವರಿಗೆ ನವ್ಯ ಸಾಹಿತ್ಯ ಎನ್ನುವುದು ನಮ್ಮ ಅನುಭವದ, ಅಸಹಾಯಕತೆಯಿಂದ ಬರಬೇಕು ಎನಿಸುತ್ತಿತ್ತು.’ ( ಪುಟ ೯೭) ಅಡಿಗ ಎಲ್ಲರಿಗೂ ಕಲಿಸಿದ್ದು ನಿಷ್ಠುರವಾಗಿ ಸ್ಪಂದಿಸುವುದನ್ನು (ಪುಟ: ೧೫೪) ಆ ಮಹಾಸೂಕ್ಷ್ಮ ಮನಸ್ಸಿನ ಹುಚ್ಚು ದಿನಗಳೆ ನನ್ನ ಆಗಿನ ‘ಟಿ.ಪ್ರಸನ್ನನ ಗೃಹಸ್ಥಾಶ್ರಮ’ ಹಲವಾರು ಕತೆಗಳು ‘ಬದುಕು’ (‘ಬಿರುಕು’ ಆಗಬೇಕು) ಕಾದಂಬರಿಯ ವಸ್ತು ನನ್ನಲ್ಲಿ ಬೆಳೆಯುತ್ತಾ ಹೋಗಿದ್ದು (ಪುಟ: ೨೨೨).

ಗಿರೀಶ್ ಕಾರ್ನಾಡ್: ಆಡಾಡತಾ ಆಯುಷ್ಯ: ಒಟ್ಟು ಘಟಕಗಳಲ್ಲಿ ಸಂಬಂಧ ಜಾಲದ ವಿನ್ಯಾಸವೆ ಹೇಗೆ ಬದಲಾಗುವಂತಿದೆ ಎಂಬ ಬಗ್ಗೆ ನಿರಂತರ ಜಾಗರೂಕತೆ ವಹಿಸುವುದನ್ನು ಗಣಿತ ಕಲಿಸುತ್ತದೆ. ನಾಟಕಕಾರನಿಗೆ ಅತ್ಯವಶ್ಯವಾದ ತಾಂತ್ರಿಕ ತರಬೇತಿ ಇದು (೭೨)ಅವರು ಗಣಿತದಿಂದ ಕಲಿತ ಹಾಗೆ ನಾಟಕ, ಸಿನೆಮಾಗಳಿಂದಲೂ ಕಲಿತರು, ಪ್ರೇರಣೆ ಪಡೆದರು (ಪುಟ ೯೯)ಇವರಲ್ಲದೆ ಶ್ರೀರಂಗ ಮತ್ತು ಕುರ್ತಕೋಟಿ ಅವರಿಂದಲೂ‌ ಪ್ರೇರಣೆ ಪಡೆದರು. ಶ್ರೀರಂಗರ ಕತ್ತಲೆ ಬೆಳಕು ನಾಟಕ ಕನ್ನಡದಲ್ಲಿ ಆ ಮೊದಲು ಎಂದೂ ಕಂಡಿರದ ಆಧುನಿಕ ಸಂವೇದನೆಯಿಂದ ಚಕಿತಗೊಳಿಸಿತ್ತು’ ಈ ನಾಟಕಗಳು ನೀಡಿದ ಪ್ರಚೋದನೆಯೆ ತುಘಲಕ್ ಬರವಣಿಗೆಗೆ ಕಾರಣವಾಯಿತು (ಪುಟ ೮೯) ತಂದೆ ತಾಯಿಗಳು (ವಿದೇಶೀ ಹೆಣ್ಣನ್ನು ಮದುವೆ ಆಗಿಬಿಟ್ಟರೆ) ಹೇರಿದ ಒತ್ತಡ ಅವರ ‘ಯಯಾತಿ’ ನಾಟಕದ ಪುರು ಪಾತ್ರದ ಹಿಂದಿನ ಪ್ರೇರಣೆ. ಕಾರ್ನಾಡ್ ರದು ವೈಯಕ್ತಿಕ ಸ್ತರದಲ್ಲಿ ರೂಢಿಸಿಕೊಂಡದ್ದು ನವ್ಯದಿಂದ ಪ್ರೇರಣೆ ಪಡೆದದ್ದಲ್ಲ ಎಂದು ಲೇಖಕ ಅವರ ಸಾಹಿತ್ಯದ ವೈಶಿಷ್ಟ್ಯಗಳನ್ನು ಸೂಚಿಸುತ್ತಾರೆ.

ಭೈರಪ್ಪನವರ ಭಿತ್ತಿ: ಅವರದು ಬಡತನದ ಹಿನ್ನೆಲೆ. ಜತೆಗೇ ತಿರಸ್ಕಾರ, ಅವಮಾನ, ಸಣ್ಣತನ ಕೂಡ ಇವರ ಬಾಲ್ಯದಲ್ಲಿ ಸೇರಿಕೊಂಡಿದೆ. ಈ ಹಿನ್ನೆಲೆಯಿಂದ ಬಂದವರಿಗೆ ಮನುಷ್ಯ ಸ್ವಭಾವದ ಸಕಾರಾತ್ಮಕ ಅಂಶಗಳ ಬಗ್ಗೆ ನಂಬಿಕೆ ಹುಟ್ಟುವುದು ಕಷ್ಟ. (ಪುಟ: ೧೦೨) ಎಂದು ಲೇಖಕರು ಸಾಮಾನ್ಯೀಕರಿಸುತ್ತಾರೆ. ಇದಕ್ಕಿಂತ ಹೀನವಾದ ಸ್ಥಿತಿಯಿಂದ ಬಂದ ಸಿದ್ದಲಿಂಗಯ್ಯ ಹೇಗೆ ಸಕಾರಾತ್ಮಕ ನಿಲುವು ತಳೆದರು ಎಂಬ ಪ್ರಶ್ನೆ ಮೂಡುತ್ತದೆ. ಅವರ ಸಮಕಾಲೀನರಾದ ನವ್ಯ ಲೇಖಕರ ಚಟುವಟಿಕೆಗಳ ಪ್ರಭಾವದಿಂದ ಹೇಗೆ ತಪ್ಪಿಸಿಕೊಂಡರು ಎಂದು ಲೇಖಕ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಆ ಕಾಲದ ಶೈಕ್ಷಣಿಕ ಸಂಸ್ಥೆಗಳ ಜಾತಿ ರಾಜಕೀಯ ಕುರಿತು ಬೆಳಕು ಚೆಲ್ಲುತ್ತದೆ.

ಲಂಕೇಶ್ ಅವರ ‘ಹುಳಿ ಮಾವಿನ ಮರ’ದಲ್ಲಿ ಈ ಹಿಂದುಳಿದವರು, ಮುಂದುವರಿದವರು ಎಂಬ ಬಗ್ಗೆ ಯುನಿವರ್ಸಿಟಿಯಲ್ಲಾದರೂ ಹೊಸ ಪ್ರಜ್ಞೆ, ಉದಾರ ನೀತಿ, ವ್ಯವಹಾರಜ್ಞಾನ, ಇವನ್ನು ಇಟ್ಟುಕೊಂಡು ಆರಿಸಿದರೆ ಒಳ್ಳೆಯದಿರಬಹುದು. ಆದರೆ ಅದೆಲ್ಲ ಅಸ್ಪಷ್ಟವಾಗುತ್ತದೆ (ಪುಟ ೧೭೨) ಎಂದು ತಮ್ಮ ಗೊಂದಲವನ್ನು ಲೇಖಕರು ವ್ಯಕ್ತಪಡಿಸುತ್ತಾರೆ.

ತೇಜಸ್ವಿ: ಮಕ್ಕಳ ಸ್ತರಕ್ಕೆ ಇಳಿದು ಕಲಿಸುವ ರೀತಿ, ಮಗನೇ ತಾನು ಕುಲಪತಿಯಾಗಿರುವ ವಿ.ವಿ.ದಲ್ಲಿ ಫೇಲಾಗುತ್ತಿದ್ದರೂ ಮಧ್ಯ ಪ್ರವೇಶಿಸದ, ಮಗನ ಮೇಲೆ ಮಾನಸಿಕ ಒತ್ತಡವನ್ನು ಹಾಕದೆ, ಅವನೇ ಹೇಗೆ ಬದುಕಬೇಕು ಎನ್ನುವುದರ ಬಗ್ಗೆಯೇ ಹೊರತು ಹೇಗೆ ಬರೆಯಬೇಕು ಎನ್ನುವುದರ ಬಗ್ಗೆ ಚಕಾರವೆತ್ತಿಲ್ಲ. ಮಕ್ಕಳ ಬಗ್ಗೆ ಯಾವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಳ್ಳದೆ ನಾವು ಮಾನ ಮರ್ಯಾದೆಗಳಿಂದ ಬದುಕಿದರೆ ಸಾಕು ಎಂಬುದು ಅಣ್ಣನ ಧೋರಣೆಯಾಗಿತ್ತು. (ಪುಟ ೪೭).

ಅವರ ಮಿಡಲ್ ಸ್ಕೂಲ್ ನಲ್ಲಿ ‘ಕೂಸಿನ ಕನಸು’ ಪದ್ಯವನ್ನು ಅಣ್ಣ ಅವತ್ತು ವಿವರಿಸಿದ ರೀತಿಯಿಂದ ವಿಜ್ಞಾನ ಶುಷ್ಕ ಮಾತ್ರವಲ್ಲ, ದೇವ, ಗಂಧರ್ವ, ಕಿನ್ನರ ಕಥೆಗಳಂತೆಯೆ ಹೊಳೆಯುವ ಅರ್ಥವುಳ್ಳದ್ದು ಎನಿಸಿತು. ವಿಜ್ಞಾನ ಬಿಡಿಸಿಟ್ಟಿದ್ದನ್ನು ಸಂಶ್ಲೇಷಿಸಿ ಸಜೀವಗೊಳಿಸುತ್ತ ಅರ್ಥಮಾಡಿಕೊಳ್ಳುವ ಅಣ್ಣನ ಅಸಾಧಾರಣ ರೀತಿಯ ಗ್ರಹಣಶಕ್ತಿಯನ್ನು ತೋರಿಸಿಕೊಟ್ಟಿತು’ (ಪುಟ..). ಇದರ ಜತೆಗೇ ಉಲ್ಲೇಖ ಮಾಡಬೇಕಾಗಿದ್ದ ಇನ್ನೊಂದು ಮುಖ್ಯ ಸಂಗತಿಯೆಂದರೆ ‘ಗಿಡಗಳ ಸ್ಪಂದಿಸುವ ವಿಧಾನವನ್ನು ತೋರಿಸುತ್ತಾ ಅದ್ವೈತ ತತ್ತ್ವವನ್ನು ತಿಳಿಯಾದ ಭಾಷೆಯಲ್ಲಿ ತೇಜಸ್ವಿ ಅವರಿಗೆ ಮನವರಿಕೆ ಮಾಡಿದ ಪ್ರಸಂಗ. ಮುಂದೆ ಅವರ ಜೀವನದಲ್ಲಿ ವಿಜ್ಞಾನ ಮತ್ತು ಪರಿಸರಗಳು ಹಾಸುಹೊಕ್ಕಾಗಿ ಹೆಣೆದುಕೊಂಡು ಬೆಳೆದದ್ದರ ಮೂಲ ಸ್ಪೂರ್ತಿ ಇಲ್ಲಿದೆ. ಇದನ್ನು ಲೇಖಕರು ಗಮನಿಸಬಹುದಿತ್ತು. ೬೪ರಲ್ಲಿ ಅವರು ನಡೆಸಿದ ಸಂದರ್ಶನದಲ್ಲಿ ಅನೇಕ ಮಹತ್ವದ ಮಾತುಗಳನ್ನು ಕುವೆಂಪು ಅಂದಿನ ಸಮಕಾಲೀನ ಸಾಹಿತ್ಯದ ಕುರಿತು ಹೇಳಿದರು. ‘ಆಗಿನ ದ್ವೇಷ ಅಸೂಯೆಗಳ ವಾತಾವರಣದಲ್ಲೂ ಧೃಡವಾಗಿ ಸಾಹಿತ್ಯನಿಷ್ಠೆಯಿಂದ ತಾವು ನಂಬಿದ ಮೌಲ್ಯಗಳ ಆಧಾರದ ಮೇಲೆ ಗಟ್ಟಿಯಾಗಿ ನಿಂತು ಮಾತನಾಡುತ್ತಿದ್ದವರು ಅಣ್ಣ ಒಬ್ಬರೆ’ (ಪುಟ ೧೦೮) ಎಂಬುದು ತೇಜಸ್ವಿಯವರ ಅಭಿಪ್ರಾಯ.

ಸಿದ್ದಲಿಂಗಯ್ಯ: ಅವರ ಊರು ಕೇರಿ: ದೇವಾಲಯ ಪ್ರವೇಶದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೊದಲು ಪ್ರಗತಿಪರ ದಲಿತೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಬೆಂಬಲದಿಂದ ಈ ಕೆಲಸಕ್ಕೆ ಕೈಹಾಕಿದ್ದರೆ ಯಶಸ್ವಿಯಾಗುತ್ತಿತ್ತೇನೋ ಎಂಬ ಭಾವನೆ ಆ ಕ್ಷಣ ನನ್ನಲ್ಲಿ ಸುಳಿಯಿತು. ದಲಿತರ ದೇವಾಲಯ ಪ್ರವೇಶವನ್ನು ಸವರ್ಣೀಯರೆ ವಹಿಸುವುದು ಸೂಕ್ತ’ ಎಂಬ ಚಿಂತನೆ ಮನಸ್ಸಿನಲ್ಲಿ ಬಂದು ಹಾದು ಹೋಯಿತು. ಈ ದೀರ್ಘ ಉಲ್ಲೇಖ ಸೂಚಿಸುವ ಅನೇಕ ಮನೋನೆಲೆಗಳು- ಸಾಮರಸ್ಯದ ಆಸೆ, ಸಮಸ್ಯೆಯ ಎಲ್ಲಾ ಮುಖಗಳನ್ನು ಗ್ರಹಿಸುವ ಪ್ರಯತ್ನ, – ಲೇಖಕರ ಆತ್ಮಚರಿತ್ರೆಯ ವ್ಯಕ್ತಿತ್ವವನ್ನು ರೂಪಿಸಿದಂತಿದೆ’ ಎಂದು ಸರಿಯಾದ ವ್ಯಾಖ್ಯಾನ ಮಾಡಿದ್ದಾರೆ ಲೇಖಕ. ( ಪುಟ ೧೧೧)
ಬೂಸಾ ಪ್ರಕರಣ: ಸಿದ್ದಲಿಂಗಯ್ಯನವರು ಬಸವಲಿಂಗಪ್ಪನವರ ಜತೆ ಭಿನ್ನಾಭಿಪ್ರಾಯಗಳನ್ನು ಮಂಡಿಸಿದರು. ಪ್ರಕರಣವನ್ನು ಹತ್ತಿರದಿಂದ ನೋಡುವಾಗಲೆ ವಸ್ತುನಿಷ್ಠತೆಯನ್ನು ಉಳಿಸಿಕೊಂಡವರು. ‘ನಮ್ಮ ಉದ್ದೇಶ ನಿಮಗೆ ಬೆಂಬಲ ಸೂಚಿಸುವದೆ ಹೊರತು ಘರ್ಷಣೆಗೆ ಇಳಿಯುವುದಲ್ಲ’ ಎಂದು ನೇರವಾಗಿ ಅವರಿಗೆ ಹೇಳಿದರು (ಪುಟ ೧೧೨)

ಅನಂತಮೂರ್ತಿ: ‘ಬಸವಲಿಂಗಪ್ಪನವರು ನಮ್ಮ ನಡುವೆಯೆ ನಿಂತು ನಮ್ಮಲ್ಲಿ ಒಬ್ಬರಾಗಿ ನಮ್ಮ ಸಂಸ್ಕೃತಿಯನ್ನು ಟೀಕಿಸಿದರು. ನಾವು ಅವರ ವಿರುದ್ಧ ನಡೆಸುತ್ತಿರುವ ಚಳವಳಿಯ ರೀತಿ ಪಂಚಮರನ್ನು ಒಂದೋ ಉಗ್ರಗಾಮಿಗಳಾಗುವಂತೆ ಅಥವಾ ಸವರ್ಣೀಯರ ಹೊಗಳು ಭಟ್ಟರಾಗುವಂತೆ ಒತ್ತಾಯಿಸಬಹುದೆಂದು ನಾನು ಅವರನ್ನು ಬೆಂಬಲಿಸಿ ಕೆಲವು ಸಭೆಯಲ್ಲಿ ಮಾತನಾಡಿದೆ ಮತ್ತು ಪ್ರಜಾವಾಣಿಗೆ ಪತ್ರ ಬರೆದೆ . ಆದರೆ ಅದು ಪ್ರಕಟವಾಗಲಿಲ್ಲ’ ಅವರು ಬರೆದ ಪತ್ರವನ್ನು ಉಲ್ಲೇಖ ಮಾಡಿ ಇಂದಿಗೂ ಸಲ್ಲುವ ಅಂಶಗಳು ಅದರಲ್ಲಿ ಇವೆ (ಪುಟ ೧೧೩) ಎಂದು ಅದರ ಮಹತ್ವವನ್ನು ಲೇಖಕರು ಗುರುತಿಸಿದ್ದಾರೆ.

ಹುಳಿ ಮಾವಿನ ಮರ: ‘ತರಲೆ ಮಾಡಲು ಕಾದುಕೊಂಡಿದ್ದ ಬ್ರಾಹ್ಮಣರು, ಒಂದು ರೀತಿಯ ಆತಂಕದ ಸ್ಥಿತಿಯಲ್ಲಿದ್ದ ಹಿಂದುಳಿದವರು ಒಂದಾಗಿ ದಲಿತರ ವಿರುದ್ಧ ಸಮರ ಸಾರಿದರು. ಬಸವಲಿಂಗಪ್ಪನವರು ಸ್ಪಷ್ಟ ಟಾರ್ಗೆಟ್ ಆಗಿದ್ದರು ಅಷ್ಟೇ’ ಎಂದು ಲಂಕೇಶ್ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದಾರೆ. ಅವರಲ್ಲಿದ್ದ ಸಂಧಿಗ್ಧತೆಯನ್ನು ಲೇಖಕ ಗುರುತಿಸುತ್ತಾರೆ. (ಪುಟ ೧೧೪) ತೇಜಸ್ವಿ ‘ಕುವೆಂಪು ಅವರು, ಎಲ್ಲರ ಎಲ್ಲಾ ಸಾಹಿತ್ಯವು ಬದಲಾಗುತ್ತಿರುವ ಕಾಲದಲ್ಲಿ ಒಮ್ಮೊಮ್ಮೆ ಬೂಸಾ ಆಗುತ್ತದೆ. ಒಮ್ಮೊಮ್ಮೆ ಅರ್ಥವತ್ತಾಗುತ್ತದೆ.ಸಮಕಾಲೀನ ಸಂವೇದನೆಗಳಿಗೆ ಅನುಗುಣವಾದ ಸ್ಪಂದನಗಳನ್ನು ಹುಡುಕುತ್ತಾ ಬಸವಲಿಂಗಪ್ಪನವರು ಈ ಟೀಕೆ ಮಾಡಿದ್ದರಲ್ಲಿ ಅನೌಚಿತ್ಯ ಏನೂ ಕಾಣುತ್ತಿಲ್ಲ'(ಪುಟ ೨೩೮) ಎಂದು ಕುವೆಂಪು ಅವರು ಅಭಿಪ್ರಾಯಪಡುತ್ತಾರೆ.

ಒಕ್ಕೂಟ: ಲಂಕೇಶ್ ರದು ಒಕ್ಕೂಟದ ಕುರಿತು ಸ್ಪಷ್ಟ ಅಭಿಪ್ರಾಯವಿಲ್ಲ‌. ಶ್ರೀ ಕೃಷ್ಣ ಆಲನಹಳ್ಳಿ ಅವರ ಮಾತನ್ನು ಉದ್ದರಿಸಿ: ಒಕ್ಕೂಟದಿಂದ ಏನೂ ಕೆಲಸವಾಗದಿದ್ದರೂ ಗೆಳೆಯರನ್ನು ನೋಯಿಸಿದ್ದು ನಿಜ ” ಎಂದು ಸಮರ್ಥನೆ ಮಾಡಿದ್ದಾರೆ. ಅನಂತಮೂರ್ತಿ ಸುರಗಿಯಲ್ಲಿ: ಒಕ್ಕೂಟದಲ್ಲಿ ಪ್ರಮುಖರಾಗಿದ್ದ ಒಕ್ಕಲಿಗರು ಮತ್ತು ಲಿಂಗಾಯತರು ಕೂಡ ನಾವು ಬದುಕುತ್ತಿರುವ ಸಂದರ್ಭದಲ್ಲಿ ಬ್ರಾಹ್ಮಣರಷ್ಟೆ ತಪ್ಪಿತಸ್ಥರು, ತಮಗಿಂತ ಕೆಳಜಾತಿಯವರನ್ನು ನಡೆಸಿಕೊಳ್ಳುವ ಕ್ರಮದಲ್ಲಿ ಎಂಬ ಅರಿವು ಒಕ್ಕೂಟದ ನಾಯಕರಿಗೆ ಇದ್ದಿದ್ದರೆ ನಮ್ಮ ನಡುವೆ ಹೆಚ್ಚು ಆರೋಗ್ಯಕರವಾದ ಅರಿವನ್ನು ಉಂಟುಮಾಡಬಹುದಾಗಿತ್ತು (ಪುಟ ೧೧೭) ಎಂದು ವಸ್ತುನಿಷ್ಠವಾದ ನಿಲುವನ್ನು ತಳೆದಿದ್ದಾರೆ. ಅನಂತಮೂರ್ತಿ ಅವರು ತನ್ನನ್ನು ತಾನು ಒಳಗಿನ ವಿಮರ್ಶಕ ಎಂದು ಕರೆದುಕೊಳ್ಳುತ್ತಿದ್ದರು.ಅವರು ಒಕ್ಕೂಟದ ಕುರಿತು ತಳೆದ ನಿಲುವಿನಲ್ಲಿ ಇದನ್ನು ಗುರುತಿಸಬಹುದು. ಅಲ್ಲದೆ ಬೂಸಾ ಪ್ರಕರಣದಲ್ಲಿ ಬಸವಲಿಂಗಪ್ಪನವರ ಸಮರ್ಥನೆಯಲ್ಲೂ ಇದನ್ನು ಗುರುತಿಸಬಹುದು. ಭೈರಪ್ಪನವರ ಭಿತ್ತಿ: ‘ಸಂಘಟಿಸಿದ ಒಕ್ಕೂಟದ ರೂವಾರಿಗಳು ಲಿಂಗಾಯತ ಒಕ್ಕಲಿಗರೆ ಆಗಿದ್ದರು. ಕೆಲವೇ ದಿನಗಳಲ್ಲಿ ತನ್ನ ತರ್ಕದ ಕೊನೆಯನ್ನು ತಾನೇ ಮುಟ್ಟಿತು’ ಎಂದಿದ್ದಾರೆ.

ಸಿದ್ದಲಿಂಗಯ್ಯ ಒಕ್ಕೂಟದ ಕುರಿತು ಏನೂ ಬರೆದಿಲ್ಲ. ಬಂಡಾಯ ಸಾಹಿತ್ಯ ಸಂಘಟನೆಯ ಕುರಿತು ಬರೆದಿದ್ದಾರೆ. ತೇಜಸ್ವಿ ಅವರ ‘ಅಣ್ಣನ ನೆನಪು’ ಒಕ್ಕೂಟದ ಪ್ರಾರಂಭಕ್ಕಿದ್ದ ಸಾಹಿತ್ಯಕ ಸಾಮಾಜಿಕ ಬೆಳವಣಿಗೆಗಳನ್ನು ವಿವರವಾಗಿ ಚರ್ಚಿಸುತ್ತದೆ. ಒಕ್ಕೂಟದ ಸ್ಥಾಪನೆ ಅನಿವಾರ್ಯವಾಗಿತ್ತು ಎಂಬ ಭಾವನೆ ಮೂಡಿಸುತ್ತದೆ. ತೇಜಸ್ವಿಯವರ ನಿಲುವುಗಳು ಮತ್ತು ವಿಶ್ಲೇಷಣೆಯಲ್ಲಿ ಸಾಹಿತಿಯೊಬ್ಬನ ಸೂಕ್ಷ್ಮಜ್ಞತೆ ಮತ್ತು ಸ್ವೋಪಜ್ಞತೆಗಳಿಗಿಂತ ಹೆಚ್ಚಾಗಿ ಬೀಸುಮಾತಿನ ಮತ್ತು ಆತುರದ ಮಾತುಗಳೆ ಎದ್ದು ಕಾಣುತ್ತವೆ (ಪುಟ: ೧೨೦) ಎಂದು ಲೇಖಕರು ಗುರುತಿಸುತ್ತಾರೆ.

ಅನಂತಮೂರ್ತಿ ಅವರ ಸುರಗಿಯಲ್ಲಿ ತುರ್ತು ಪರಿಸ್ಥಿತಿ ಕುರಿತು: ‘ತುರ್ತು ಪರಿಸ್ಥಿತಿಗೆ ಮೊದಲು ಹಾರಾಡುತ್ತಿದ್ದು, ಆಮೇಲೆ ಬಾಯಿ ಮುಚ್ಚಿಕೊಂಡದ್ದರ ದಿಗಿಲನ್ನು ನನ್ನ ಒಳಗೆ ಗುರುತುಮಾಡಿಕೊಂಡಿದ್ದರಿಂದ ಸರ್ವಾಧಿಕಾರದ ಸ್ವರೂಪ ನನಗೆ ಅರ್ಥವಾಯಿತು. ಜೈಲಿಗೆ ಹೋಗುವುದು ನಿಷ್ಪ್ರಯೋಜಕ ಅನ್ನಿಸುವ ಸಂದರ್ಭದಲ್ಲಿ ನನ್ನನ್ನು ಸರ್ಕಾರ ಜೈಲಿಗೆ ಹಾಕಬಹುದಾದಂತೆ ವರ್ತಿಸಿದೆ ಎಂದಷ್ಟು ಮಾತ್ರ ನಾನು ಹೇಳಬಲ್ಲೆ’ ಎಂದಿದ್ದಾರೆ. ಸಾರ್ವಜನಿಕ ಜೀವನದ ಗೊಂದಲ, ಒಂದು ಬಹುಮುಖ್ಯವಾದ ವಿದ್ಯಮಾನ, ತನ್ನೊಳಗಿನ, ತನ್ನಂತವರ ಗೊಂದಲ, ತಳಮಳ ಎಲ್ಲವನ್ನೂ ಹೇಳಿಕೊಳ್ಳುವ ಕಷ್ಟದ ದಾಖಲೆಯಾಗಿ ಮೇಲಿನ ನೋಟವನ್ನು ಗ್ರಹಿಸಬೇಕು. ಎಂದು ಲೇಖಕರು ವ್ಯಾಖ್ಯಾನ ಬರೆದಿದ್ದಾರೆ (ಪುಟ ೧೨೧) ಇದೇ ಸಂದರ್ಭದಲ್ಲಿ ಅವರ ಸಮಕಾಲೀನ ಬರಹಗಾರರಾದ ಕಾರಂತರ, ಚಂಪಾರ ಕ್ರಿಯೆ/ ಪ್ರತಿಕ್ರಿಯೆಗಳನ್ನು ದಾಖಲಿಸಬಹುದಿತ್ತು. ಜತೆಗೆ ಸಿದ್ದಲಿಂಗಯ್ಯ ಅವರು ಮಂತ್ರಿ ರಾಚಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಮಾಡಿದ ಭಾಷಣದ ಉಲ್ಲೇಖ ಬಿಟ್ಟು ಹೋಗಿದೆ. (ಊರು ಕೇರಿ-೨)

೪: ಅನ್ಯರ ವ್ಯಕ್ತಿತ್ವಕ್ಕೆ ಘನತೆಗೆ ಧಕ್ಕೆ ತರುವುದಕ್ಕೆ ನಿದರ್ಶನವಾಗಿ ಅಡಿಗರು. ಗಿರೀಶ್ ಕಾರ್ನಾಡ್, ಲಂಕೇಶ್,ಅನಂತಮೂರ್ತಿ ಮತ್ತು ಭೈರಪ್ಪನವರ, (ಉಲ್ಲೇಖ ಇಲ್ಲದೆ) ನಿದರ್ಶನಗಳನ್ನು ಒದಗಿಸಿದ್ದಾರೆ. ಆದರೆ ಸಿದ್ದಲಿಂಗಯ್ಯನವರ ಕೃತಿಯಲ್ಲಿ ಅಂತಹದ್ದನ್ನು ಕಾಣಲು ಸಾಧ್ಯವಿಲ್ಲ ಎಂದು ಸರಿಯಾಗಿ ಗುರುತಿಸಿದ್ದಾರೆ. ಅವರು ಅನ್ಯರ ಘನತೆಯನ್ನು ಎತ್ತಿ ಹಿಡಿಯುವುದಕ್ಕೆ ನಿದರ್ಶನವಾಗಿ ಪ್ರಸನ್ನ ಅವರ ನಾಟಕ ಪ್ರಯೋಗ ಕುರಿತ ಅವರ ಬರಹವನ್ನು ಉಲ್ಲೇಖ ಮಾಡಬಹುದಿತ್ತು. (ರಾಜಕೀಯ ಬದಲಾವಣೆಗೆ ಅವರು ಪ್ರಯೋಗ ಮಾಡಿದ ನಾಟಕಗಳು ಕೂಡ ಕಾರಣ)

೫: ತಮ್ಮ ಸಾವಿನ ಮುನ್ಸೂಚನೆ ಕುರಿತ ಅವರ ಬರಹಗಳಲ್ಲಿ ಅಲ್ಲಿಯವರೆಗೆ ಕಾಣದ ಮಾರ್ದವತೆಯನ್ನು ಭೈರಪ್ಪನವರ- ಗೋವಿಂದಯ್ಯರ ಕೊನೆಯ ಭೇಟಿಯ ಸನ್ನಿವೇಶ ಆರ್ದ್ರವಾಗಿದೆ. ಅಡಿಗರ ಕವಿತೆಗಳನ್ನು ಆ ಕುರಿತ ಉಲ್ಲೇಖಗಳು ಇವೆ. ಇದೆ ರೀತಿಯಲ್ಲಿ ಲಂಕೇಶ್, ಅನಂತಮೂರ್ತಿ ಬರಹಗಳನ್ನು ಉಲ್ಲೇಖ ಮಾಡಿದ್ದಾರೆ. ಸಾವನ್ನು ಕುರಿತ ಸಿದ್ಧಲಿಂಗಯ್ಯನವರ ಅಭಿಪ್ರಾಯಗಳು – ಟಿ.ಎನ್. ನರಸಿಂಹನ್ ಉಲ್ಲೇಖಗಳ ಮೂಲಕ ತಿಳಿದು ಬರುತ್ತದೆ.

೬: ಓದುಗರ ಕುರಿತು ಅವರವರ ಅದೃಷ್ಟ, ಪ್ರಾಪ್ತಿಯನ್ನು ಅನುಸರಿಸಿ ಆತ್ಮಚರಿತ್ರೆಗಳು ತಮ್ಮನ್ನು ತೆರೆದುಕೊಳ್ಳುತ್ತವೆ. ಅವುಗಳ ಸಾಲುಗಳ ಮಧ್ಯದ ಓದು ಹೆಚ್ಚು ಪರಿಣಾಮಕಾರಿ ಎಂಬ ಸೂಚನೆ ಇದೆ. ಮತ್ತು ಎಲ್ಲಾ ಕೃತಿಗಳು ಅರ್ಧಕಥಾನಕಗಳು ಅದು ಪೂರ್ಣಗೊಳ್ಳುವುದು ಓದುಗರ ಮೂಲಕ. ಅದೇ ಅವುಗಳ ಭವಿಷ್ಯದ ಹಾದಿ ಎಂದು ಓದುಗರ ಮಹತ್ವವನ್ನು ಗುರುತಿಸಿದ್ದಾರೆ. ಮತ್ತು ಅವರನ್ನು ಕುರಿತು ಇತರರು ಬರೆದ ಬರಹಗಳು ಅವನ್ನು ವಿಭಿನ್ನ ರೀತಿಯಲ್ಲಿ ಮುಂದುವರಿಸುವ ದಾರಿ. ಅದಕ್ಕೆ ನಿದರ್ಶನವಾಗಿ ಇಂದಿರಾ ಲಂಕೇಶ್ ಅವರು ಬರೆದ ‘ಹುಳಿ ಮಾವಿನ ಮರದ ಜೊತೆ’ ಕೃತಿಯನ್ನು ಕುರಿತ ತಮ್ಮ ಬರಹವನ್ನು ಅನುಬಂಧದಲ್ಲಿ ಕೊಟ್ಟಿದ್ದಾರೆ. ಅದರಂತೆ ಅನಂತಮೂರ್ತಿಯವರ ಹೆಂಡತಿಯ ‘ನನ್ನ ಅನಂತು’ ಮತ್ತು ರಾಜೇಶ್ವರಿ ಅವರ ‘ ನನ್ನ ತೇಜಸ್ವಿ’ ಕೃತಿಗಳನ್ನು ಉಲ್ಲೇಖ ಮಾಡಿದ್ದಾರೆ. ಅವುಗಳನ್ನು ಪೂರಕ‌ ಓದುಗಳಾಗಿ ಬಳಸಿಕೊಳ್ಳಬಹುದು ಎಂದು ಓದುಗರಿಗೆ ಸೂಚಿಸಿದ್ದಾರೆ.

ಬಸವರಾಜ ಕಲ್ಗುಡಿಯವರು ಕನ್ನಡದ ಸಂದರ್ಭದಲ್ಲಿ ಈ ಬಗೆಯ ಕೃತಿ ರಚನೆಯ ಮಹತ್ವವನ್ನು ಅವರ ಮುನ್ನುಡಿಯಲ್ಲಿ ಗುರುತಿಸಿದ್ದಾರೆ. ಕೃತಿಯ ನಡುವಿನ ನಿಶ್ಯಬ್ದವನ್ನು ಗ್ರಹಿಸುವುದು ಕೂಡ ಪರಿಣಾಮಕಾರಿಯಾದ ಓದಿನ ಮಾರ್ಗ ಎಂದಿದ್ದಾರೆ. ಅದಕ್ಕೆ ನಿದರ್ಶನ ಎನ್ನುವಂತೆ ಅವರು ಭೈರಪ್ಪನವರ ಕುರಿತು ತಳೆದ ಮೌನ ಕೂಡ ಗಮನಾರ್ಹ. ಲೇಖಕರ ಹೆಂಡತಿ ಇವರು ಬರೆದ ಆತ್ಮಚರಿತ್ರೆಗಳನ್ನು ಓದಿ ‘ಅವುಗಳಲ್ಲಿ ಬರೆದಿರುವಷ್ಟು ನೀವು ಮುಗ್ಧರು, ನಿಸ್ಪೃಹರು ಮತ್ತು ಪ್ರಾಮಾಣಿಕರು ಅಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ಲೇಖಕ ಯಾವುದೇ ಮುಜುಗರವಿಲ್ಲದೆ ದಾಖಲಿಸಿರುವುದಲ್ಲದೆ ಇದು ಉಳಿದವರ ಆತ್ಮಚರಿತ್ರೆಗಳಿಗೂ ಅನ್ವಯಿಸುತ್ತದೆ (ಪುಟ: ೬) ಎಂದು ಬರೆದಿರುವುದು ಓದುಗರಿಗೆ ಆತ್ಮ ಚರಿತ್ರೆಗಳ ಮಿತಿಯನ್ನು ಗ್ರಹಿಸಲು ಸೂಚನೆಯಾಗಿದೆ.

‍ಲೇಖಕರು Admin

November 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: