‘ಕವಿತೆ ಬಂಚ್‌’ನಲ್ಲಿ ಗೋವಿಂದ ಹೆಗಡೆ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಗೋವಿಂದ ಹೆಗಡೆ
ಎಂ ಬಿ ಬಿ ಎಸ್, ಡಿ. ಎ. ಪದವೀಧರ. ವೃತ್ತಿಯಿಂದ ಅರಿವಳಿಕೆ ತಜ್ಞ. ಹುಬ್ಬಳ್ಳಿಯಲ್ಲಿ ಖಾಸಗಿಯಾಗಿ ವೃತ್ತಿ ನಿರ್ವಹಣೆ. ಕಾವ್ಯ, ಸಾಹಿತ್ಯಗಳಲ್ಲಿ ಒಲವು. ಕವಿತೆ, ಕಥೆ, ಲೇಖನ, ಅಂಕಣ ಬರಹ, ಅನುವಾದಗಳಲ್ಲಿ ವ್ಯವಸಾಯ. ಕವನ, ಹನಿಗವನಗಳು, ಶಿಶುಗೀತೆಗಳು, ಭಾವಗೀತೆಗಳು, ಗಜಲ್, ಹಾಯ್ಕು, ಫರ್ದ್, ರುಬಾಯಿ,ಲಿಮೆರಿಕ್ ಮೊದಲಾದ ಕಾವ್ಯಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ.   
 
ಪ್ರಕಟಿತ ಕವನ ಸಂಕಲನ ‘ *ಕನಸು ಕೋಳಿಯ ಕತ್ತು*’ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಪ್ರೋತ್ಸಾಹ ‘ ಯೋಜನೆಯಡಿಯಲ್ಲಿ ಪುರಸ್ಕೃತವಾಗಿದೆ. ಇತ್ತೀಚಿಗೆ ಎರಡನೇ ಕವನ ಸಂಕಲನ *ಪೇಟೆ ಬೀದಿಯ ತೇರು* ಲೋಕಾರ್ಪಣೆಗೊಂಡಿದೆ.

ಗಜಲ್-೧

ಶಂಕೆ ಬಿತ್ತಿ ಆರೋಪಗಳ ಬೆಳೆದರಾಗಲಿಲ್ಲ
ಮೊಸರಲ್ಲಿ ಕಲ್ಲುಗಳ ಹುಡುಕಿದರಾಗಲಿಲ್ಲ

ತೌಡು ಕುಟ್ಟುವುದೂ ಚಟುವಟಿಕೆಯೇನು
ಕಂಬ ಸುತ್ತಿ ಧನ್ಯನೆಂದು ಮೆರೆದರಾಗಲಿಲ್ಲ

ಬರಿಗೊಡಗಳಿಗೆ ತಿಳಿ ಹೇಳುವುದು ಹೇಗೆ
ತುಂಬುವುದನೇ ಮರೆತು ಕೂತರಾಗಲಿಲ್ಲ

ರೂಪಮದ ಅರ್ಥಮದ: ಪಟ್ಟಿ ದೊಡ್ಡದು
ತನ್ನ ಅಹಂ-ಮದಗಳಲ್ಲಿ ಬದುಕಿದರಾಗಲಿಲ್ಲ

ಬೆಳಕು ಕಣ್ಣುಚುಚ್ಚಿ ಎಬ್ಬಿಸುತ್ತದೆ ‘ಜಂಗಮ’
ಒಳಮನೆಯ ಕದ ಜಡಿದು ಹುಸಿದರಾಗಲಿಲ್ಲ

ಗಜಲ್-೨

ಮತ್ತೆ ಮತ್ತೆ ಕೇಳುತ್ತಾನೆ- ಈ ಪುಟವೇಕೆ ಖಾಲಿ
ದುಡಿದುಡಿದು ಒಟ್ಟಿಯು ಸಂಪುಟವೇಕೆ ಖಾಲಿ

ಅಟ್ಟಿ ಬಡಿಸುವವರು ಎಲ್ಲಿ ಮಾಯವಾದರೋ
ಒಡಲುಗಳು ಹಸಿದಿವೆ- ಈ ಪಂಕ್ತಿಯೇಕೆ ಖಾಲಿ

‘ದೇವರು ರುಜುಮಾಡಿದಂಥ’ ರಸಋಷಿ ಸಂಜೆ
ರೆಕ್ಕೆಬಿಚ್ಚಿ ಹಾರದೇ ಬಲಾಕಪಂಕ್ತಿಯೇಕೆ ಖಾಲಿ

ಏನೆಲ್ಲವ ಅರುಹಲು ತಾಲೀಮು ನಡೆಸಿದ್ದಿತ್ತು
ಈಗ ಸಮಯ ಬಂದಾಗ ಈ ಕೊರಳೇಕೆ ಖಾಲಿ

ದಿಕ್ಕು ದಿಕ್ಕಿಗೂ ತಿರುಗಿ ಒರಲುತ್ತಾನೆ ‘ಜಂಗಮ’
ಎರಡೂ ಕೊನೆಯ ಉರಿಸಿಯು ಈ ಬದುಕೇಕೆ ಖಾಲಿ

( ಬಲಾಕಪಂಕ್ತಿ- ಬೆಳ್ಳಕ್ಕಿಸಾಲು)

ಗಜಲ್-೩

ಮಳೆಯಲ್ಲಿ ಅದೇನೋ ಹೊಳೆಯುತ್ತದೆ
ಬಿತ್ತವೊಂದು ಸದ್ದಿಲ್ಲದೇ ಮೊಳೆಯುತ್ತದೆ

ಈ ಎದೆಯೋ ಸೊರಗಿದೆ ಒಣಮರದಂತೆ
ಅವಳ ನೆನಪಿನ ಸೋನೆಯಲ್ಲಿ ಚಿಗುರುತ್ತದೆ

ಬೇಸಿಗೆಯಲ್ಲಿ ಎಲ್ಲಿ ಮಾಯವೋ ಗರಿಕೆ
ಈಗ ಮಳೆಹನಿ ಮಣಿ ಧರಿಸಿ ಬೀಗುತ್ತದೆ

ಒಡಲೊಣಗಿ ಕ್ಷಯಿಸಿ ಮಿಡುಕುತ್ತದೆ ಹಳ್ಳ
ವರ್ಷಧಾರೆಯಲಿ ಮೈತುಂಬಿ ಮೆರೆಯುತ್ತದೆ

ಬೇಲಿ ಸಾಲಿನ ಬಳ್ಳಿಯಲಿ ಮೂಕ ತಲ್ಲಣ
ಮಳೆ ಮಂತ್ರ ಸೋಕಿ ಹೂಜಾತ್ರೆ ಜರುಗುತ್ತದೆ

ಈ ಮಣ್ಣು ನನ್ನ ನಿನ್ನಂತೆ ಅಲ್ಲ ‘ಜಂಗಮ’
ಸುರಿವ ಮಳೆಗೊಡ್ಡಿ ಮೈ,ಮತ್ತೆ ನೆರೆಯುತ್ತದೆ

ಗಜಲ್-೪

ಅವಳಲ್ಲಿ ಅಂದಿನ ಅದೇ ಚಪಲತೆ ಉಳಿದಿರಲಿ
ಕಂಗಳಲಿ ಅದೇ ಸೆಳೆತ ಚುಂಬಕತೆ ಉಳಿದಿರಲಿ

ಕಾಲಿಗೆ ಸೀಸದ ಗುಂಡೇನೂ ಕಟ್ಟಿಲ್ಲವಲ್ಲ
ನಡಿಗೆಯಲಿ ಅದೇ ಲಾಸ್ಯ ಚಟುಲತೆ ಉಳಿದಿರಲಿ

ಅಂದಿನ ಆ ಮಾತುಗಳಲ್ಲಿ ಏನೆಂಥ ಮುದವಿತ್ತು
ಮೈನವಿರೇಳಿಸುವ ಅದೇ ಚಕಿತತೆ ಉಳಿದಿರಲಿ

ಕಲ್ಲಿನಂಥ ಮುಖಭಾವ ಒಪ್ಪುವುದೇನು ನಲ್ಲೆಗೆ
ಓರೆನೋಟ ರೆಪ್ಪೆ ಪಟಪಟದ ಚಂಚಲತೆ ಉಳಿದಿರಲಿ

ಸಖಿಯರ ಕಣ್ತಪ್ಪಿಸುವ ಆ ಚಾಣಾಕ್ಷತೆಯೇನು!
ತೀರದ ಅಭಿಸಾರಕೆ ಅದೇ ಚತುರತೆ ಉಳಿದಿರಲಿ

ದಿನಗಳು ಸಾಯುತ್ತವೆ; ಅವಳ ನೆನಪಲ್ಲ, ‘ಜಂಗಮ’
ನಲಿವಿನ ಆ ಚಣಗಳಲಿ ಚಿರಂತನತೆ ಉಳಿದಿರಲಿ

ಗಜಲ್-೫

ಕಾಮನಬಿಲ್ಲು ಕಾಣದೇ ಬರೆಯಲಾಗುವುದಿಲ್ಲ
ಕನಸುಗಳಲ್ಲಿ ಮೀಯದೇ ಬರೆಯಲಾಗುವುದಿಲ್ಲ

ಬಣ್ಣಗಳಿಗೆ ಮುನಿಸನ್ನು ಕಲಿಸಿದ್ದು ಯಾರು
ವರ್ಣಗಳ ಒಲವಿಲ್ಲದೇ ಬರೆಯಲಾಗುವುದಿಲ್ಲ

ಮಲ್ಲಿಗೆಯ ಗಮವಾದರೂ ಕೈತುಂಬಬೇಕು
ಸದ್ಯವನ್ನು ಮೀರದೇ ಬರೆಯಲಾಗುವುದಿಲ್ಲ

ಅವಳ ಆ ನೋಟ ನಡೆ ಆ ಕಣ್ಣ ಹೊರಳು
ನೆನಪುಗಳು ಬೆಳಗದೇ ಬರೆಯಲಾಗುವುದಿಲ್ಲ

ಆ ಬೇಡ ಆ ಹಕ್ಕಿ ಆ ವಿರಹದ ಉಮ್ಮಳ
ಎದೆಯೆದೆಯ ಕಲಕದೇ ಬರೆಯಲಾಗುವುದಿಲ್ಲ

ಹಳೆಯ ಜಾಡುಗಳಲ್ಲಿ ಯಾವ ನಡೆ ‘ಜಂಗಮ’
ಹೊಸತನ್ನು ಉಸುರದೇ ಬರೆಯಲಾಗುವುದಿಲ್ಲ

‍ಲೇಖಕರು Admin

November 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: