ಕೆ ಪುಟ್ಟಸ್ವಾಮಿ ಇಷ್ಟಪಟ್ಟ ಪುಸ್ತಕ ’ಅಪೂರ್ವ ಜೀವ’

ಕೇಂದ್ರೀಕೃತ ಆಡಳಿತದ ಅನಾಹುತಗಳು. ಗೋವಿಂದರೆಡ್ಡಿ ಅವರ ಎಚ್ಚರಿಕೆಗಳು

– ಕೆ ಪುಟ್ಟಸ್ವಾಮಿ


ಸಾಮಾನ್ಯವಾಗಿ ಯಾವುದೇ ರಾಜ್ಯದ ಆಡಳಿತವು ಅತಿ ಜಾಣರೆನಿಸಿಕೊಂಡ ಐಎಎಸ್ ಅಧಿಕಾರಿಗಳು ರೂಪಿಸುವ ಮಾರ್ಗಸೂಚಿಯಂತೆ ನಡೆಯುತ್ತದೆ ಎಂಬ ಭಾವನೆ ಬಲವಾಗಿದೆ. ಅದು ಹಾಗೆ ನಡೆಯುತ್ತದೆ ಕೂಡ. ಇದು ಕೇವಲ ಸಾಮಾನ್ಯ ಆಡಳಿತ ಮಾತ್ರವಲ್ಲ ಪೊಲೀಸ್, ಅರಣ್ಯ, ಹಣಕಾಸು ಮುಂತಾದ ಎಲ್ಲ ಆಡಲಿಥ ಕ್ಷೇತ್ರಕ್ಕೂ ಹಬ್ಬಿದ ಕಬಂಧ ಬಾಹು. ವಸಾಹತು ಕಾಲದ ಐಸಿಎಸ್ ಸೇವೆಗಳು ಭಾರತ ವಿಮೋಚನೆಗೊಂಡ ನಂತರ ತಾಳಿದ ಹೊಸ ರೂಪಗಳಿವು. ಇವೆಲ್ಲ ಕೇಂದ್ರೀಕೃತ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ಆಳುವ ಪ್ರಭುಗಳು ಬಳಸಿಕೊಂಡ ಮಾರ್ಗ. ಫೆಡರಲ್ ಅಥವಾ ಒಕ್ಕೂಟ ವ್ಯವಸ್ಥೆಯಲ್ಲಿ ಹಣಕಾಸು, ರಕ್ಷಣೆ ಮೊದಲಾದ ಇಲಾಖೆಗಳು ಕೇಂದ್ರದ ಆಡಳಿತಕ್ಕೆ ಒಳಪಡುವುದು ವಿಹಿತ. ಆದರೆ ಸ್ವಾಯತ್ತೆಯುಳ್ಳ ರಾಜ್ಯಗಳ ಆಡಳಿತವನ್ನು ನಿರ್ಧರಿಸಲು ಕೇಂದ್ರವೇ ಸಿಬ್ಬಂದಿಯನ್ನು ನೇಮಕಮಾಡಿಕೊಡಬೇಕೆ? ಇದು ರಾಜ್ಯಗಳು ಬಯಸಿದ ವ್ಯವಸ್ಥೆಯೋ ಅಥವಾ ಕೇಂದ್ರ ಹೇರಿದ ವ್ಯವಸ್ಥೆಯೋ? ರಾಜ್ಯಗಳು ಇಂತಹ ವ್ಯವಸ್ಥೆಯನ್ನು ಬಯಸಿರಲಿಲ್ಲ ಎಂಬುದಕ್ಕೆ ಇತ್ತೀಚೆಗೆ ಪುರಾವೆ ದೊರೆಯಿತು. ಅಲ್ಲದೆ ಇಂತಹ ಕೇಂದ್ರೀಕೃತ ವ್ಯವಸ್ಥೆಯಿಂದ ಆಗುವ ಅನಾಹುತಗಳ ಬಗ್ಗೆ ನಮ್ಮ ಹಿಂದಿನ ರಾಜಕಾರಣಿಗಳು ಮತ್ತು ಚಿಂತಕರು ನಡೆಸಿದ ಜಿಜ್ಞಾಸೆ ಬಗ್ಗೆ ಇತ್ತೀಚೆಗೆ ಓದುವ ಅವಕಾಶ ಒದಗಿ ಬಂತು. ಹಾಗೆಯೇ ನಮ್ಮ ಈಗಿನ ಸಂಸದೀಯ ಕಲಾಪಗಳು, ವಿಧಾನ ಮಂಡಲದ ಕಲಾಪಗಳು ಹಿಡಿದಿರುವ ಅವನತಿಯ ಹಾದಿಯ ಬಗ್ಗೆ ಕೂಡ ವ್ಯಸನವಾಯಿತು.
ಕರ್ನಾಟಕದ ಅಪರೂಪದ ರಾಜಕಾರಣಿ, ಸ್ವಾತಂತ್ರ್ಯಹೋರಾಟಗಾರ, ದಿವಂಗತ ಎಂ. ಗೋವಿಂದರೆಡ್ಡಿ ಅವರು ರಾಜ್ಯ ಶಾಸನಸಭೆಯಲ್ಲಿ ಭಾರತೀಯಆಡಳಿತ ಸೇವಾ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಣಯ ಅಂಗಿಕರಿಸುವ ಮುನ್ನ ಈ ಬಗ್ಗೆ ಮಾಡಿರುವ ರಾಜ್ಯ ವಿಧಾನಸಭೆಯಲ್ಲಿ ಮಾಡಿರುವ ಭಾಷಣ ನಿಜವಾಗಿಯೂ ಅಪರೂಪದಲ್ಲಿ ಅಪರೂಪವಾದದ್ದು. ಅಂದಹಾಗೆ ದಿವಂಗತ ಎಂ ಗೋವಿಂದ ರೆಡ್ಡಿ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯ. ಆ ಕಾಲಕ್ಕೆ ಡಬಲ್ ಗ್ರಾಜುಯೇಟ್ ಆಗಿ, ವಕೀಲಿ ಪದವಿ ಪಡೆದು, ಯಶಸ್ವಿ ವಕೀಲಿಕೆ ವೃತ್ತಿಯನ್ನು ತೊರೆದು ಗಾಂಧಿಯ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವರು. ಸ್ವಾತಂತ್ರ್ಯಾನಂತರ ಸಂಸತ್ ಸದಸ್ಯರಾಗಿದ್ದವರು. ವಿಶ್ವಸಂಸ್ಥೆಯಲ್ಲಿ ಭಾರತೀಯ ನಿಯೋಗದ ಸದಸ್ಯರಾಗಿ ವಿದ್ವತ್ಪೂರ್ಣ ಭಾಷಣ ಮಾಡಿದವರು. ನೆಹರೂ ಅವರಿಗೆ ಹತ್ತಿರದವರಾದರೂ ಅಧಿಕಾರ ರಾಜಕಾರಣದಿಂದ ದೂರವುಳಿದವರು. ಬ್ರಹ್ಮಚಾರಿಯಾಗಿಯೇ ಉಳಿದು ಒಂದು ಮನೆ ನಿವೇಶನ ಮಾಡಿಕೊಳ್ಳದೇ ನಿಸ್ವಾರ್ಥವಾಗಿ ಬದುಕಿದವರು. ಕಲೆ ಸಾಹಿತ್ಯದ ಬಗ್ಗೆ ಒಲವಿದ್ದ ಅವರು ‘ ಧರಣಿ ಮಂಡಲ ಮಧ್ಯದೊಳಗೆ’ ಧಾಟಿಯಲ್ಲಿ ಕಥನ ಕವನಗಳನ್ನು, ಸಣ್ಣ ಕತೆಗಳನ್ನು ಅಪರೂಪದ ಪ್ರವಾಸಿ ಕಥನಗಳನ್ನು ರಚಿಸಿದವರು. ಚಿತ್ರದುರ್ಗದ ಮತ್ತೊಬ್ಬ ಸಜ್ಜನ ರಾಜಕಾರಣಿ ಮುಲ್ಕಾ ಗೋವಿಂದರೆಡ್ಡಿ ಅವರಿಗೆ ಮಾರ್ಗದರ್ಶಕರಾಗಿದ್ದವರು. ನಮಗೆ ಇದುವರೆಗೆ ಅಜ್ಞಾನತರಾಗಿ ಉಳಿದಿದ್ದ ಎಂ (ಮುಲ್ಲಂಗಿ). ಗೋವಿಂದರೆಡ್ಡಿ ಅವರ ಅಪೂರ್ಣಜೀವನಚರಿತ್ರೆ, ಅವರ ಬದುಕು ಸಾಧನೆಗಳ ಸೀಳುನೋಟವೊಂದನ್ನು ಲೇಖಕಿ ಕೆ. ಆರ್. ಸಂಧ್ಯಾರೆಡ್ಡಿ ಅವರು ‘ಅಪೂರ್ವಜೀವ’ ಎನ್ನುವ ಗ್ರಂಥದಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು ಈ ಕಾಶರ್ಯಕ್ಕೆ ನಿಜವಾಗಲೂ ಅಭಿನಂದನೆಗಳಿಗೆ ತಕ್ಕವರು.
ಗೋವಿಂದ ರೆಡ್ಡಿ ಅವರು ಭಾರತೀಯ ಆಡಳಿತ ಸೇವಾ ಯೋಜನೆಯನ್ನು ಜಾರಿಗೆ ತರುವುದಕ್ಕೆ ರಾಜ್ಯ ವಿದಾನ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸುವ ಮುನ್ನ ಅದರ ಸಾಧಕಬಾಧಕಗಳ ಮೇಲೆ ಮಾಡಿದ ಭಾಷಣದ ಸಂಕಲನ ರೂಪ ಮುಂದಿದೆ
ವಿಧಾನಸಭೆಯ ಅನುಮೋದನೆ ನೀಡಿದ ನಂತರ ಮೈಸೂರಿನಲ್ಲಿ ಭಾರತೀಯ ಆಡಳಿತ ಸೇವಾ ಯೋಜನೆಯನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದ ಠರಾವು ಸಂಖ್ಯೆ ೨೦, ದಿನಾಂಕ ೦೪.೦೯.೧೯೫೦.
ಅಖಿಲ ಭಾರತ ಸೇವೆಗಳನ್ನು ವಿಸ್ತರಿಸುವ ಈ ಯೋಜನೆಯನ್ನು ಕೂಲಂಕಷವಾಗಿ ಗಮನಿಸಬೇಕಾಗಿದೆ. ಸರ್ಕಾರವು ಈ ತತ್ವಕ್ಕೆ ಬದ್ಧವಾಗಿರಬೇಕಾಗಿದೆ ಎಂಬುದು ನನಗೆ ಗೊತ್ತು. ಈ ಯೋಜನೆಯಿಂದ ಉತ್ತಮ ಫಲಿತಾಂಶ ಸಿಗುವುದಾದರೆ ಸದನವೂ ಕೂಡ ಈ ತತ್ವವನ್ನು ಒಪ್ಪಿಕೊಳ್ಳುವ ಇಚ್ಛೆ ಹೊಂದಿದೆ. ಈ ಯೋಜನೆಯನ್ನು ಕೂಲಂಕುಷ ಪರಿಶೀಲನೆಗೆ ಒಳಪಡಿಸುವಲ್ಲಿ ನಾವು ನಮಗೆ ಸಂಬಂಧಿಸಿದಂತೆ ಹಾಗೂ ಕೇಂದ್ರಕ್ಕೆ ಸಂಬಂಧಿಸಿದಂತೆ ಕರ್ತವ್ಯವನ್ನು ನಿರ್ವಹಿಸಬೇಕಾದ ಬದ್ಧತೆ ಹೊಂದಿದ್ದೇವೆ. ದೆಹಲಿಯಲ್ಲಿ ರೂಪಿಸಲಾದ ಯೋಜನೆಗಳನ್ನು ಕೇವಲ ಅವು ಇಡೀ ಭಾರತದ ಹಿತಾಸಕ್ತಿಯಿಂದ ರೂಪಿಸಲ್ಪಟ್ಟಿವೆ ಎಂಬ ಕಾರಣಕ್ಕಾಗಿ ಅವುಗಳನ್ನು ಅವು ಇರುವಂತೆಯೇ ಒಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ ದೆಹಲಿಯಲ್ಲಿರುವ ಜನರು ಇನ್ಫಾಲಿಯಬಲ್ ಏನಲ್ಲ. ದೆಹಲಿಯಲ್ಲಿ ಒಂದು ಅಲೆಕ್ಸಾಂಡರ್ ಸ್ಪರ್ಶವಿದೆ. ಆರಂಭದ ಹಂತಗಳಲ್ಲಿ ಹಣಕಾಸಿನ ವಿಚಾರಗಳಿಮದ ಶುರುವಾದ ಕೇಂದ್ರೀಕರಣದ ವ್ಯವಹಾರವು ಸಂಪರ್ಕ ಮಾಧ್ಯಮಗಳಿಗೆ ವಿಸ್ತರಿಸಿತು. ಈಗ ಅದು ಸೇವಾ ವಿಷಯಗಳಿಗೆ ಬಂದಿದೆ. ನಮ್ಮ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಹೇರಬೇಕಾದ ಒಂದು ಒತ್ತಾಯವಿದೆ. ಅದನ್ನು ನಾನು ಇಲ್ಲಿ ಹೇಳುತ್ತಿದ್ದೇನೆ. ಭಾರತವು ಅತ್ಯಂತ ವಿಶಾಲವಾಗಿ ಹರಡಿಕೊಂಡಿರುವ ದೇಶ. ಇದು ಒಂದು ಉಪಖಂಡ. ಇಂತಹ ವಿಶಾಲವಾದ ದೇಶದಲ್ಲಿ ಕೇಂದ್ರೀಕರಣವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂಬುದು ರಾಜಕೀಯದ ಪ್ರತಿಯೊಬ್ಬ ವಿದ್ಯಾರ್ಥಿಗೂ ಗೊತ್ತು. ಅತಿಯಾದ ಕೇಂದ್ರೀಕರಣವು ಯಾವಾಗಲು ವಿಫಲವಾಗಿದೆ ಎಂಬುದನ್ನು ರುಜುವಾತು ಪಡಿಸುವಂಥ ನೂರಾರು ನಿದರ್ಶನಗಳು ಇತಿಹಾಸದಲ್ಲಿವೆ.
ನಮ್ಮ ಸರ್ಕಾರವು ವಿಶೇಷವಾಗಿ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಈ ಅಂಶವನ್ನು ಭಾರತ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ತಮಗಿರುವ ಅಧಿಕಾರವನ್ನು ಬಳಸಿಕೊಳ್ಳಬೇಕು. ಈ ಕೇಂದ್ರೀಕರಣದ ವ್ಯವಹಾರದಲ್ಲಿ ಸಂಪರ್ಕ ಮಾಧ್ಯಮಗಳನ್ನು ಕೇಂದ್ರೀಕರಿಸುವಾಗ ಇದನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಅವರು ಯೋಚಿಸಿದ್ದಾರೆಯೇ? ವಿಜ್ಞಾನಿಗಳ ಸಹಾಯದಿಂದ ರೇಡಾರ್ ಮೂಲಕ ನಿಯಂತ್ರಿಸಬೇಕೆಂದಿದ್ದಾರೆಯೇ? ಕೇಂದ್ರದಲ್ಲಿ ಕುಳಿತು ಸ್ವಿಚ್ಗಳನ್ನು ಆನ್ ಆಫ್ ಮಾಡಿದರೆ ಸಾಕು ಆಡಳಿತ ಯಂತ್ರದ ಕಾರ್ಯಾಚರಣೆಯನ್ನು ನಿಯಂತ್ರಿಸಬಹುದು ಎಂದು ಕೊಂಡಿದ್ದಾರೆಯೇ? ಈ ವಿಧಾನದಿಂದ ಅವರು ಖಂಡಿತವಾಗಿಯೂ ಪರಿಣಾಮಕಾರಿಯಾಗಿ ಆಡಳಿತಾತ್ಮಕ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇಂಥ ಅಂಶಗಳ ಕಡೆಗೆ ಕೇಂದ್ರದ ಗಮನವನ್ನು ನಾವು ಸೆಳೆಯಬೇಕಾಗಿರುವುದು ಕೇವಲ ಮೈಸೂರಿನ ದೃಷ್ಟಿಯಿಂದ ಮಾತ್ರವಲ್ಲ, ಕೇಂದ್ರದ ದೃಷ್ಟಿಯಿಂದಲೂ ಕೂಡ ಎಂಬುದನ್ನು ನಮ್ಮ ಸರ್ಕಾರ ತಿಳಿಯಬೇಕು.
ಮೈಸೂರು ರಾಜ್ಯವು ಸೇವೆಗಳ ನೇಮಕಾತಿಯ ವಿಷಯದಲ್ಲಿ ಅತ್ಯುತ್ತಮ ಮಾದರಿಯನ್ನು ಅನುಸರಿಸುತ್ತಿದೆ. ಈಗ ಬರಲಿರುವ ಯೋಜನೆಯ ಅಡಿಯಲ್ಲಿ ಆಲೋಚಿಸಲಾಗಿರುವ ನೇಮಕಾತಿಗಳ ಅಬ್ನಾಕ್ಷಿಯಸ್ ಸಿಸ್ಟಂ ಖಂಡಿತವಾಗಿಯೂ ಅಪೇಕ್ಷಣೀಯವಾದುದಲ್ಲ ಎಂಬುದನ್ನು ವ್ಯಕ್ತಪಡಿಸುವ ವಾದಗಳನ್ನು ಈ ಸದನದಲ್ಲಿ ಮಂಡಿಸಲಾಗಿದೆ. ಈ ರೀತಿಯ ನೇಮಕಾತಿಯಲ್ಲಿ ದಕ್ಷತೆ ಸಾಮರ್ಥ್ಯಗಳ ಅಂಶವನ್ನು ಮಾತ್ರವೇ ಗಮನಿಸಲಾಗುತ್ತಿದೆ. ಈ ಮಾನದಂಡವು ಹಳೆಯ ಬ್ರಿಟಿಷ್ ಪರಿಕಲ್ಪನೆಯ ಮಾನದಂಡ. ಅಧಿಕಾರಿಗಳ ಜಾಣತನ ಮತ್ತು quiಛಿಞ ಡಿeಠಿಚಿಡಿಣee ಯನ್ನು ಮಾತ್ರ ಇಲ್ಲಿ ಪರೀಕ್ಷಿಸಲಾಗುತ್ತದೆ. ಶ್ರೀ ಗುಂಡಪ್ಪ ಗೌಡರು ಈ ಸದನದಲ್ಲಿ ಜಾಣರಾದವರು ಕುಶಾಗ್ರಮತಿಗಳೂ ಆಗಿರುತ್ತಾರೆ ಎಂಬ ಅಂಶವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ನಮಗೆ ಈಗ ಜಾಣರಾದವರ ಅವಶ್ಯಕತೆಯಿಲ್ಲ. ಈಗ ರಾಜ್ಯವು ಪೊಲೀಸ್ ರಾಜ್ಯದಿಂದ ಸಾಮಾಜಿಕ ಸೇವೆಯ ರಾಜ್ಯವಾಗಿ ಪರಿವರ್ತನೆಗೊಂಡಿದೆ. ಯಾರು ಜನ ಸಾಮಾನ್ಯರ ಹಿತದೃಷ್ಟಿಯಿಂದ ಕೆಲಸಮಾಡುತ್ತಾರೋ ಅಂಥವರು ಈಗ ನಮಗೆ ಅಗತ್ಯ. ನಮಗೆ ಯಂತ್ರದ ನಿಖರತೆಯುಳ್ಳ ಕೆಲಸಬೇಕಾಗಿಲ್ಲ. ನಮಗೆ ಬೇಕಾಗಿರುವುದು ಹೃದಯವಂತಿಕೆ, ಅರ್ಥಮಾಡಿಕೊಳ್ಳುವ ಮಾನವ ಹೃದಯವಂತಿಕೆ. ಜನಸಾಮಾನ್ಯರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಸಹಾನುಭೂತಿಯಿಂದ ಹಾಗೂ ಉದಾರ ಮನಸ್ಸಿನಿಂದ ಕೆಲಸ ಮಾಡುವ ಅಧಿಕಾರಿಗಳು ನಮಗೆಬೇಕು.
ಹಳೆಯ ಐಸಿಎಸ್ ಪರಿಸರದಲ್ಲಿ ತರಬೇತಿ ಹೊಂದಿಲ್ಲದಂಥವರನ್ನು ನಾವು ಜನಸಾಮಾನ್ಯರ ನಡುವಿನಿಂದ ಆರಿಸಿಕೊಳ್ಳುತ್ತಿದ್ದೇವೆ. ಅವರು ಸಾಮಾನ್ಯ ವರ್ಗಗಳಿಂದ ಬಂದಂಥವರು. ಆದ್ದರಿಂದ ಅವರು ಬಾಂಬೆ, ದೆಹಲಿಗಳಂಥ ಪಟ್ಟಣಗಳಲ್ಲಿ ತರಬೇತಿ ಹೊಂದಿದ ಅಧಿಕಾರಿಗಳಲ್ಲಿರುವ ಜಾಣತನದ ಮಟ್ಟಕ್ಕೆ ಏರಲಾರರು. ಆದರೆ ಸಾಮಾನ್ಯವರ್ಗದಿಂದ ಬಂದಿರುವ ಕಾರಣ ಜನಸಾಮಾನ್ಯರನ್ನು ತಮ್ಮಂತೆಯೇ ಒಬ್ಬರೆಂಬಂತೆ ಕಾಣುತ್ತಾರೆ. ಇಂಥ ಜನರಿಗಾಗಿ ಏನು ಮಾಡಬೇಕು ಎಂಬ ಅರಿವು ಅವರಿಗಿರುತ್ತದೆ. ಆದ್ದರಿಂದ ಈಗ ಬರುತ್ತಿರುವ ಹೊಸ ಯೋಜನೆಯು ಮೈಸೂರು ರಾಜ್ಯಕ್ಕೆ ಹೊಂದುವುದೇ ಇಲ್ಲ. ಈ ಯೋಜನೆಯನ್ನು ಮೈಸೂರು ರಾಜ್ಯಕ್ಕೆ ಅನ್ವಯಿಸುವ ಅವಶ್ಯಕತೆಯಿಲ್ಲ.
ಇನ್ನೂ ಒಂದು ಅಂಶವನ್ನು ನಾನು ಇಲ್ಲಿ ಒತ್ತಿ ಹೇಳಬೇಕಿದೆ. ಕೇಂದ್ರವು ರಾಜ್ಯಗಳಿಗೆ ಕೆಲವು ಸ್ಥಾನಗಳನ್ನು ಕೊಡುವುದರ ಬಗ್ಗೆ ಅಷ್ಟು ಪಟ್ಟು ಹಿಡಿಯುವುದಾದರೆ ಕೇಂದ್ರದಲ್ಲಿ ನಮ್ಮ ರಾಜ್ಯಕ್ಕೆ ಹೆಚ್ಚಿನ ಪ್ರಮಾಣವನ್ನು ಯಾಕೆ ಕೊಡಬಾರದು ಎಂಬುದು ಪ್ರಶ್ನೆ, ಕೇಂದ್ರದಲ್ಲಿ ಪ್ರಾದೇಶಿಕ ಸಿಬ್ಬಂದಿ ಇರುವುದಿಲ್ಲ. ಆದರೆ ಅಲ್ಲಿ ಕೇಂದ್ರೀಯ ಅಧಿಕಾರಗಳಿರುತ್ತವೆ ಮತ್ತು ಅಲ್ಲಿ ಅತ್ಯಂತ ಮುಖ್ಯ ವಿಷಯಗಳ ವ್ಯವಹಾರ ನಡೆಯುತ್ತದೆ. ಆದ್ದರಿಂದ ಕೇಂದ್ರದಲ್ಲಿ ನಮ್ಮ ಸಾಕಷ್ಟು ಅಧಿಕಾರಿಗಳಿರುವಂತೆ ನಾವು ನೋಡಿಕೊಳ್ಳಬೇಕಲ್ಲವೇ? ಮೈಸೂರಿಗೆ ಅಲ್ಲಿ ಸಾಕಷ್ಟು ಸ್ಥಾನಗಳನ್ನು ನೀಡಿದರೆ ಅಥವಾ ಸಾಕಷ್ಟು ಪ್ರಾತಿನಿಧ್ಯವನ್ನಾದರೂ ಮೈಸೂರಿಗೆ ನೀಡಿದರೆ ನಮಗೆ ಬಹಳ ಅನುಕೂಲವಾಗುತ್ತದೆ ಎಂಬುದನ್ನು ತೋರಿಸುವುದಕ್ಕಾಗಿ ನಾನು ಇಲ್ಲಿ ಒಂದು ನಿದರ್ಶನವನ್ನು ನೀಡಬಯಸುತ್ತೇನೆ.
ಮೈಸೂರು ಸರ್ಕಾರವು ಬಹಳ ಉದಾರವಾಗಿ ಕೇಂದ್ರಕ್ಕೆ ಆನೆಗಳನ್ನು ಉಡುಗೊರೆಯಾಗಿ ನೀಡಿತು. ಕೇಂದ್ರವು ತನ್ನ ಖರ್ಚಿನಲ್ಲಿ ಅವುಗಳನ್ನು ಅಮೆರಿಕಾ ಹಾಗೂ ಜಪಾನ್ಗಳಿಗೆ ಸಾಗಾಣಿಕೆ ಮಾಡಿತು. ಈಗ ಭಾರತ ಸರ್ಕಾರಕ್ಕೆ ಇನ್ನಷ್ಟು ಆನೆಗಳಿಗಾಗಿ ಬೇಡಿಕೆ ಬಂದಂತೆ ಕಾಣುತ್ತದೆ. ಆದರೆ ಅದು ಉಡುಗೊರೆಗಳಿಗಾಗಿ ಯಾವುದೇ ಸರ್ಕಾರವನ್ನು ಕೇಳುತ್ತಿಲ್ಲ. ಮೈಸೂರು ರಾಜ್ಯವು ಅವರಿಗೆ ಸಾಕಷ್ಟು ಆನೆಗಳನ್ನು ಕೊಟ್ಟಿರುವುದರಿಂದ ಅದು ಆನೆಗಳನ್ನು ಖರೀದಿಸಿ ಇತರ ದೇಶಗಳಿಗೆ ಉಡುಗೊರೆಯಾಗಿ ಕಳಿಸಬಹುದೆಂದು ತೋರುತ್ತದೆ. ಈ ಸಂಬಂಧದಲ್ಲಿ ಅದು ಮೈಸೂರು ರಾಜ್ಯವನ್ನು ಮರೆತುಬಿಟ್ಟು ಆನೆಗಳನ್ನು ಪಶ್ಚಿಮ ಬಂಗಾಳದಿಂದ ಕೊಂಡುಕೊಳ್ಳಲು ಪ್ರಸ್ತಾಪಿಸಿದೆ. ಹೀಗೆ ಕೇಂದ್ರವು ಆನೆಗಳನ್ನು ಕೊಂಡುಕೊಳ್ಳುವುದೇ ಆದರೆ ಪಶ್ಚಿಮ ಬಂಗಾಳದ ಬದಲು ನಮ್ಮಿಂದಲೇ ಆನೆಗಳನ್ನು ಕೊಳ್ಳುವಂತೆ ನಾವೇಕೆ ಕೇಳಬಾರದು? ಈ ಮೊದಲು ಉಚಿತವಾಗಿ ನಾವು ಕೊಟ್ಟಿರುವ ಉಡುಗೊರೆಯನ್ನು ಅವರು ನೆನಪಿಸಿಕೊಳ್ಳಬೇಕಲ್ಲವೆ? ಈ ಸಂಗತಿಯಿಂದ ತಿಳಿದುಬರುವುದೇನೆಂದರೆ ಕೇಂದ್ರದ ಸೇವೆಗಳವರು ಯಾವುದೋ ಒಂದು ಕಡೆ ಒಲವನ್ನು ತೋರುವ ಪ್ರವೃತ್ತಿಹೊಂದಿದ್ದು ಇಡೀ ಭಾರತವನ್ನು ಅವರು ದೃಷ್ಟಿಯಲ್ಲಿಟ್ಟುಕೊಂಡಿರುವುದಿಲ್ಲ. ನಾವು ಸಾಕಷ್ಟು ಸಂಖ್ಯೆಯ ಸ್ಥಾನಗಳನ್ನು ರಕ್ಷಿಸಿಕೊಂಡರೆ ಮೈಸೂರಿನ ಹಿತಾಸಕ್ತಿಗಳು ರಕ್ಷಿಸಲ್ಪಡುತ್ತವೆ. ಇದೇನೇ ಇರಲಿ. ಒಟ್ಟಿನಲ್ಲಿ ಈ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಆದ್ದರಿಂದ, ಮೈಸೂರಿಗೆ ಸಾಕಷ್ಟು ಸ್ಥಾನಗಳನ್ನು ಕೊಡುವುದಾದರೆ ಮತ್ತು ಮೈಸೂರಿನಲ್ಲಿರುವ ಸೇವೆಗಳ ಬಗ್ಗೆ ಯಾವುದೇ ಅಗೌರವ ತೋರುವುದಿಲ್ಲವಾದರೆ, ಈಗ ಪ್ರಸ್ತಾಪಿಸಿರುವ ಯೋಜನೆಯನ್ನು ಒಪ್ಪಿಕೊಳ್ಳಬಹುದು.
 

‍ಲೇಖಕರು G

March 2, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: