ಕೆ ನಲ್ಲತಂಬಿ ಅನುವಾದ ಸರಣಿ- ಉಪ್ಪು ಬೇಲಿ

ಮೂಲ: ಎಸ್ ರಾಮಕೃಷ್ಣನ್  

1966 ರಲ್ಲಿ  ತಮಿಳುನಾಡಿನ ವಿರುದುನಗರ್ ಜಿಲ್ಲೆಯ ಮಲ್ಲಾಂಕಿಣರು ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಪೂರ್ಣಾವಧಿ ಬರಹಗಾರರಾಗಿ ಚೆನ್ನೈಯಲ್ಲಿ ವಾಸವಿದ್ದಾರೆ. ದೇಶಾಂತರಿ ಎಂಬ ಪ್ರಕಾಶನವನ್ನು ನಡೆಸುತ್ತಿದ್ದಾರೆ.

ಸಣ್ಣಕಥೆ, ಕಾದಂಬರಿ, ಅಂಕಣ, ಸಿನಿಮಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಇತಿಹಾಸ, ನಾಟಕ, ಅನುವಾದ ಹೀಗೆ ಅನೇಕ  ಪ್ರಕಾರಗಳ ಬರಹಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಗ್ಲೀಷಿನಲ್ಲೂ ಬರೆಯುತ್ತಾರೆ. 10 ಕಾದಂಬರಿ, 21 ಸಣ್ಣಕಥೆಗಳ ಸಂಕಲನ, ಮೂರು ನಾಟಕ, 22 ಮಕ್ಕಳ ಸಾಹಿತ್ಯ, ಅನೇಕ ಅಂಕಣ ಸಂಕಲನಗಳನ್ನು ಬರೆದಿದ್ದಾರೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಉತ್ತಮ ಕಾದಂಬರಿ ಪ್ರಶಸ್ತಿ, ಉತ್ತಮ ಪುಸ್ತಕ ಪ್ರಶಸ್ತಿ, ಠಾಗೂರ್ ಸಾಹಿತ್ಯ  ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಗಳಿಸಿದ್ದಾರೆ.

ತಮಿಳಿನ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು.

ಕೆ ನಲ್ಲತಂಬಿ

9

ಬರ್ಲಿನ್ ಗೋಡೆಗಿಂತಲೂ ಚೀನಾದ ಹೆಗ್ಗೊಡೆಗಿಂತಲೂ ಬಹಳ ದೊಡ್ಡ ಮುಳ್ಳಿನ ಬೇಲಿಯೊಂದು ಭಾರತದಲ್ಲಿ ನಿರ್ಮಾಣವಾದ ಕತೆಯನ್ನು ಕೇಳಿರುವಿರೇ? 4,000 ಕಿ. ಮೀ. ಉದ್ದವಾಗಿಯೂ 12 ಅಡಿ ಎತ್ತರವಾಗಿಯೂ ಇತ್ತು ಆ ಬೇಲಿ. ಇತಿಹಾಸದ ಕತ್ತಲಲ್ಲಿ ಹುದುಗಿಹೋದ ಭಾರತದ ಉದ್ದನೆಯ ಮುಳ್ಳು ಬೇಲಿಯೊಂದು ಸಮೀಪದಲ್ಲಿ ಜಗತ್ತಿನ ಗಮನಕ್ಕೆ ಬಂದಿದೆ. 

ಭಾರತವನ್ನು ಆಳಿದ ಬ್ರಿಟೀಷ್ ಕ್ರೌರ್ಯಕ್ಕೆ ಸಾಕ್ಷಿಯಾಗಿ ಈ ದೊಡ್ಡ ಸುಂಕದ ಬೇಲಿಯ ಬಗ್ಗೆ, 2001 ರಲ್ಲಿ ರಾಯ್ ಮಾಕ್ಸ್ಹಂ (Roy Moxham) ಅಧ್ಯಯನ ಮಾಡಿ ಬರೆಯುವವರೆಗೆ, ಭಾರತದ ಇತಿಹಾಸ ತಜ್ಞರಿಗೂ ಇದು ತಿಳಿದಿರಲಿಲ್ಲ. The Great Hedge of India ಎಂಬ, ರಾಯ್ ಅವರ ಮಹತ್ತರವಾದ ‘ಸುಂಕದ  ಬೇಲಿ’ ಎಂಬ ಪುಸ್ತಕ ಭಾರತದ ಇತಿಹಾಸದ ಅಧ್ಯಯನದಲ್ಲಿ ಬಹಳ ಮುಖ್ಯವಾದ ಕೃತಿ. 

ಗಾಂಧಿ ಯಾಕೆ ಉಪ್ಪಿನ ಸತ್ಯಾಗ್ರಹ ನಡೆಸಿದರು ಎಂಬುದಕ್ಕೆ ಇಂದಿನವರೆಗೆ ಹಲವಾರು ಕಾರಣಗಳನ್ನು ಹೇಳಲಾಗಿದೆ. ಆದರೆ ಈ ಒಂದು ಪುಸ್ತಕ ಗಾಂಧಿಯ ಕಾರ್ಯದ ಹಿಂದೆ ಇರುವ ಇತಿಹಾಸದ ಕಾರಣವನ್ನು ಸ್ಪಷ್ಟವಾಗಿ ಹೇಳುತ್ತದೆ. 

ಬ್ರಿಟೀಷರಿಂದ ಭಾರತ ಎಷ್ಟು ಶೋಷಣೆಗೆ ಒಳಗಾಗಿದೆ ಎಂಬುದಕ್ಕೆ ಈ ಕೃತಿ ನಿರಾಕರಿಸಲಾಗದ ಸಾಕ್ಷಿಯಾಗಿದೆ. ಒಡಿಸ್ಸಾದಿಂದ ಪ್ರಾರಂಭವಾಗಿ ಹಿಮಲಯದವರೆಗೆ ಉದ್ದಕ್ಕೆ ಹಾಕಿದ ಈ ಮುಳ್ಳಿನ ಬೇಲಿ ಯಾಕೆ ನಿರ್ಮಾಣ ಮಾಡಲಾಯಿತು ಗೊತ್ತೇ? 

ಭಾರತದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಉಪ್ಪನ್ನು ತೆಗೆದುಕೊಂಡು ಹೋಗಕೂಡದು ಎಂಬುದಕ್ಕಾಗಿ ನಿರ್ಮಾಣ ಮಾಡಲಾದ ತಡೆಬೇಲಿ ಇದು. ಹೀಗೆ ಬೇಲಿ ಹಾಕಿ ಉಪ್ಪು ವ್ಯಾಪಾರವನ್ನು ತಡೆಯಲು ಕಾರಣ, ಬ್ರಿಟಿಷ್ ಕಾಲೊನಿ ಆಡಳಿತ ಉಪ್ಪಿಗೆ ವಿಧಿಸಿದ್ದ ತೆರಿಗೆ. 

ಬಂಗಾಲವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಈಸ್ಟ್ ಇಂಡಿಯಾ ಕಂಪನಿ, ಉಪ್ಪಿಗೆ ತೆರಿಗೆಯನ್ನು ವಿಧಿಸಿದರೆ, ಅಪಾರವಾದ ಹಣ ಗಳಿಸಬಹುದೆಂಬ ಯೋಜನೆ ಹಾಕಿತು. 

ಚಂದ್ರಗುಪ್ತನ ಕಾಲದಲ್ಲೇ ಉಪ್ಪಿಗೆ ತೆರಿಗೆ ಹಾಕುವ ಪದ್ಧತಿ ಇತ್ತು. ಕೌಟಿಲ್ಯನ ಅರ್ಥ ಶಾಸ್ತ್ರ, ಉಪ್ಪಿಗೆ ಪ್ರತ್ಯೇಕ ತೆರಿಗೆ ವಿಧಿಸಬೇಕೆಂಬುದನ್ನು, ಉಪ್ಪು ವ್ಯಾಪಾರವನ್ನು ಮೇಲ್ವಿಚಾರಣೆ ಮಾಡಲು ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದೆ. 

ಅಧ್ಯಯನಕಾರರೂ ಪ್ರಾಧ್ಯಾಪಕರೂ ಆದ ತೋ.ಪರಮಶಿವನ್, ‘ಉಪ್ಪು ಮಾರುವವವರನ್ನು ಸಂಗಂ ಸಾಹಿತ್ಯದಲ್ಲಿ ‘ಉಮಣರ್’ ಎಂದು ಕರೆಯುತ್ತಾರೆ ಎಂದಿದ್ದಾರೆ. ಚೋಳರ ಕಾಲದಲ್ಲಿ ಉಪ್ಪು ಮತ್ತು ಭತ್ತದ ಬೆಲೆ ಸಮನಾಗಿದ್ದವು. ಹಳೆಯ ತಮಿಳು ನಾಡಿನ ಬಹಳ ದೊಡ್ಡ ಸಂತೆಯ ಉತ್ಪಾದನೆಯ ವಸ್ತುವಾಗಿ ಉಪ್ಪು ಇತ್ತು. ಉಪ್ಪು ಬೆಳೆಯುವ ಕಳಕ್ಕೆ ಉಪ್ಪಳ ಎಂದು ಹೆಸರು. ದೊಡ್ಡ ದೊಡ್ಡ ಉಪ್ಪಳಗಳಿಗೆ ರಾಜರ ಹೆಸರನ್ನು ಇಟ್ಟಿದ್ದರು. ಪೇರಳ, ಕೋವಳ ಎಂಬ ಹೆಸರುಗಳ ಉಲ್ಲೇಖವಿದೆ. ಚೋಳ, ಪಾಂಡ್ಯರು ಉಪ್ಪಿನ ಉದ್ಯೋಗವನ್ನು ಸರಕಾರದ ಆಡಳಿತದ ವ್ಯಾಪ್ತಿಯೊಳಗೆಯೇ ಇಟ್ಟುಕೊಂಡಿದ್ದರು ಎನ್ನಲಾಗುತ್ತದೆ. 

ಅದೇ ರೀತಿಯಲ್ಲಿ ಚೆನ್ನೈ ರಾಜಧಾನಿ ಉಪ್ಪು ಕಮಿಷನ್ ವಾರ್ಷಿಕ ವರದಿಯನ್ನು ನೀಡುವಾಗ, ಮೊಗಲರ ಕಾಲದಲ್ಲಿ ಉಪ್ಪಿಗೆ ತೆರಿಗೆ ವಿಧಿಸುವ ಪದ್ಧತಿ ಇದ್ದದ್ದು ತಿಳಿದುಬಂದಿದೆ. ಆದರೆ ಆ ತೆರಿಗೆ ಬಹಳ ಅಲ್ಪವಾಗಿತ್ತು. ಒಂದು ಮೂಟೆ ಉಪ್ಪಿಗೆ ಹಿಂದೂ ವ್ಯಾಪಾರಿಯಾಗಿದ್ದರೇ 3 ಪ್ರತಿಶತ ತೆರಿಗೆಯೂ, ಇಸ್ಲಾಂ ವ್ಯಾಪಾರಿಯಾಗಿದ್ದರೇ 2.5 ಪ್ರತಿಶತ ತೆರಿಗೆಯೂ ವಿಧಿಸಲಾಗುತ್ತಿತ್ತು. 

1756ರಲ್ಲಿ ನವಾಬನನ್ನು ತನ್ನ ಕೈಗೊಂಬೆಯಾಗಿಸಿಕೊಂಡ ಕಾಲೊನಿ ಸರಕಾರ, ಉಪ್ಪಿನ ಮೇಲೆ ತಮ್ಮ ಏಕಭೋಗ ಅಧಿಕಾರದೊಳಗೆ ಇಟ್ಟುಕೊಳ್ಳಲು ಪ್ರಯತ್ನಿಸಿತು. ಮುಖ್ಯವಾಗಿ ಪ್ಲಾಸಿ ಕದನದ ನಂತರ, ಬಂಗಾಳದಲ್ಲಿ ಇದ್ದ ಒಟ್ಟು ಮೊತ್ತ ಉಪ್ಪಿನ ವ್ಯಾಪಾರವನ್ನು ಈಸ್ಟ್ ಇಂಡಿಯಾ ಕಂಪನಿ ತನ್ನ ನೇರವಾದ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡಿತು. ಭಾರತದ ಕೇಂದ್ರ ಭಾಗವಾದ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಈಶಾನ್ಯ ಪ್ರದೇಶಗಳು, ಹಿಮಾಲಯಕ್ಕೆ ಸೇರಿದ ತಪ್ಪಲು ಪ್ರದೇಶಗಳು ತಮ್ಮ ಉಪ್ಪಿನ ಅಗತ್ಯಕ್ಕೆ ದಕ್ಷಿಣದ ಕಡಲ  ಪ್ರದೇಶಗಳನ್ನು ನಂಬಿದ್ದವು. 

ಭಾರತದಲ್ಲಿ ಉಪ್ಪು ಹೆಚ್ಚು ಉತ್ಪಾದನೆಯಾಗುವುದು  ಗುಜರಾತಿನಲ್ಲಿ. ಇಂದಿಗೂ ಅದೇ ಉಪ್ಪಿನ ಉತ್ಪಾದನೆಯಲ್ಲಿ ಮೊದಲ ಸ್ಥಾನವನ್ನು ವಹಿಸಸುತ್ತದೆ. ಉತ್ತರ ಭಾಗದ ಹೆಚ್ಚಿನ ಪ್ರದೇಶಗಳಿಗೆ ಗುಜರಾತಿನಿಂದಲೇ ಉಪ್ಪು ಸರಬರಾಜಾಗುತ್ತದೆ. ಉಪ್ಪಿನ ವ್ಯಾಪಾರ ಗುಜರಾತಿನಲ್ಲಿ ಪರಂಪರೆಯಾಗಿ ನಡೆದುಕೊಂಡು ಬರುತ್ತಿದೆ. ಉಪ್ಪು ಕಾಯಿಸುವ ಜಾಗಗಳಲ್ಲಿ ಒಂದು ಗಾಂಧಿ ಉಪ್ಪಿನ ಸತ್ಯಾಗ್ರಹ ನಡೆಸಿದ ದಂಡಿ. ದಂಡಿ ಎಂಬುದು ‘ಲೈಟ್ ಹೌಸ್’ ಅನ್ನು ಸೂಚಿಸುವ ಪದ. ಇದು ಒಂದು ಪಾರಂಪರಿಕ ಉಪ್ಪಳದ ಭಾಗ. ಇದರಂತೆ, ಗುಜರಾತಿನಲ್ಲಿ ಉಪ್ಪಳದ ಪ್ರದೇಶಗಳು ಬಹಳ ಇವೆ. ಗುಜರಾತಿನಂತೆಯೇ ಒಡಿಸ್ಸಾ, ಮಹಾರಾಷ್ಟ್ರ ರಾಜ್ಯಗಳಲ್ಲೂ ಉಪ್ಪಿನ ಉತ್ಪಾದನೆ ಹೆಚ್ಚು. ಬಂಗಾಲದಲ್ಲಿ ದೊರಕುವ ಉಪ್ಪು, ಬೆಂಕಿಯಲ್ಲಿ ಕಾಯಿಸಿ ತೆಗೆಯುವಂತದ್ದು. ಅದರ ಗುಣಮಟ್ಟ ಕಡಿಮೆ ಎಂದು ಆ ಉಪ್ಪಿಗೆ ಬದಲಾಗಿ ಬಂಗಾಲಿಗಳು ಸೂರ್ಯನ ಬೆಳಕಿನಲ್ಲಿ ತಯಾರಿಸುವ ಒಡಿಸ್ಸಾ ಉಪ್ಪನ್ನು ಖರೀದಿಸಿ ಬಳಸುತ್ತಾರೆ. 

ಬಂಗಾಲವನ್ನು ಆಡಳಿತ ಮಾಡುತ್ತಿದ್ದ ವಾರನ್ ಹೇಸ್ಟಿಂಗ್ಸ್ (Warren Hastings), ಒಡಿಸ್ಸಾದಿಂದ ಬಂಗಾಲಕ್ಕೆ ಸಾಗಿಸುವ ಉಪ್ಪಿಗೆ ಹೆಚ್ಚಿನ ತೆರಿಗೆ ವಿಧಿಸಿದ್ದೂ ಅಲ್ಲದೆ, ಸರಕಾರದ ಬಳಿ ಮಾತ್ರವೇ ಉಪ್ಪನ್ನು ಮಾರಬೇಕೆಂದು ಹೊಸ ನಿಬಂಧನೆಯನ್ನು ವಿಧಿಸುತ್ತಾನೆ. ಒಂದು ಮೂಟೆ ಉಪ್ಪಿಗೆ ಎರಡು ರೂಪಾಯಿ ನಿರ್ಣಯಿಸಲಾಗುತ್ತದೆ. ಅದರಲ್ಲಿ ಒಂದೂವರೆ ರೂಪಾಯಿಯನ್ನು ತೆರಿಗೆಯಾಗಿ ಈಸ್ಟ್ ಇಂಡಿಯಾ ಕಂಪನಿ ಕಸಿದುಕೊಂಡಿತು. ಇದರಿಂದ ಉಪ್ಪು ಕಾಯಿಸುವವರೂ ಉಪ್ಪು ಖರೀದಿಸುವವವರೂ ತೊಂದರೆಗೆ ಒಳಗಾದರು. 

ಉಪ್ಪಳಗಳನ್ನು ಮೇಲ್ವಿಚಾರಣೆ ಮಾಡಲು, ಸರಕಾರದ ಬಳಿ ಮಾತ್ರವೇ ಉಪ್ಪು ಮಾರಾಟ ಮಾಡಬೇಕೆಂಬುದನ್ನು ಆಚಾರಣೆಗ ತರಲು ಸಾಲ್ಟ್  ಇನ್ಸ್ಪೆಕ್ಟರ್-ಅನ್ನು  ನೇಮಕಮಾಡಲಾಯಿತು. ಹೆಚ್ಚಾಗಿ ಉಪ್ಪನ್ನು ಖರೀದಿಸಿ ತರುವ ಜಂಟಿ ಸಂಸ್ಥೆಗಳನ್ನೂ ನಿರ್ಮಿಣ ಮಾಡಲಾಯಿತು. ಇದರ ಮೂಲಕ ಕಂಪನಿ ಲಕ್ಷಗಟ್ಟಲೇ ಹಣವನ್ನು ಸಂಪಾದನೆ  ಮಾಡಿತು. 1784-85ರ ಇಸವಿಗಳಲ್ಲಿ ಉಪ್ಪಿನ ಮಾರಾಟದಿಂದ ದೊರತ ಆಧಾಯ 62,57,340 ರೂಪಾಯಿಗಳು. 

ಈ ಕೊಳ್ಳೆಯಿಂದ ಹೆಚ್ಚಿನ ವರಮಾನ ಗಳಿಸಿದ ಈಸ್ಟ್ ಇಂಡಿಯಾ ಕಂಪನಿ, ಭಾರತ ಪೂರ್ತಿ ಉಪ್ಪಿನ ವ್ಯಾಪಾರ ತಮ್ಮ ನಿಯಂತ್ರಣದೊಳಗೆ ಬರಬೇಕೆಂದು ತೀರ್ಮಾನಿಸಿತು. ಅದಕ್ಕಾಗಿ, ಉಪ್ಪನ್ನು ಸಾಗಾಣಿಕೆ ಮಾಡುವ ದಾರಿಗಳನ್ನು ಗುರುತಿಸಲಾಯಿತು. ಆ ದಾರಿಗಳಲ್ಲಿ ತಡೆಬೇಲಿಗಳನ್ನು ಹಾಕಿ, ಅಲ್ಲಲ್ಲಿ  ಸುಂಕದ ಕಟ್ಟೆಗಳನ್ನು ನಿರ್ಮಾಣಿಸಿ, ಉಪ್ಪು ಸಾಗಾಣಿಕೆಯನ್ನು ಉಸ್ತುವಾರಿ ಮಾಡಲಾಯಿತು. 

ಉಪ್ಪು ಅಗತ್ಯವಾದ ವಸ್ತುವಾದ್ದರಿಂದ ದುಡಿಯುವ ಜನಗಳು ಎಷ್ಟೇ ಬೆಲೆಯಾದರೂ ಉಪ್ಪನ್ನು  ಕೊಂಡುಕೊಳ್ಳುವರು ಎಂಬ ಈಸ್ಟ್ ಇಂಡಿಯಾ ಕಂಪನಿಯ ದುರಾಸೆ ಫಲ ನೀಡಿತು. ಒಬ್ಬ ಕಾರ್ಮಿಕ ಉಪ್ಪಿಗಾಗಿ ತಿಂಗಳಿಗೆ ಎರಡು ರೂಪಾಯಿ ಖರ್ಚು ಮಾಡುವ ನಿರ್ಬಂಧ ಉಂಟಾಯಿತು. ಆ ಹಣ ಅವನ ಒಂದು ತಿಂಗಳ ಸಂಬಳಕ್ಕಿಂತಲೂ ಹೆಚ್ಚು.  50 ಪೈಸೆ ಬೆಲೆಬಾಳುವ ಉಪ್ಪು, ಒಂದು ರೂಪಾಯಿ ತೆರಿಗೆಯೊಂದಿಗೆ ಸೇರಿಸಿ ಮಾರಾಟ ಮಾಡಿದ ಹೀನ ಕಾರ್ಯವನ್ನು  ಬ್ರಿಟೀಷ್ ಸರಕಾರ ಜಾರಿಗೆ ತಂದಿತು. 

ಉಪ್ಪು ತೆಗೆದುಕೊಂಡು ಹೋಗುವುದನ್ನು ತಡೆಯುವ ಚಟುವಟಿಕೆಗಳಿಗೆ ವಿರುದ್ಧವಾಗಿ ಬಂಜಾರ ಜನಾಂಗಕ್ಕೆ ಸೇರಿದ ಕೊರವರು, ತೆಲುಗು ಮಾತನಾಡುವ ಎರುಕುಲರು, ಕೊರಚರು ಉಪ್ಪನ್ನು ಕಳ್ಳಸಾಗಣಿಕೆ ಮಾಡಿ ಮಾರಲು ಪ್ರಯತ್ನಿಸಿದರು. ಅದನ್ನು ಕಳ್ಳಸಾಗಣಿಗೆ ಎಂದು ಹೇಳುವುದು ಸಹ ತಪ್ಪು. ತಮ್ಮ ಪರಂಪರೆ  ಉದ್ಯೋಗವನ್ನು ತಡೆಗಳನ್ನು ಮೀರಿ ಮಾಡಿದರು ಎಂಬುದೇ ಸರಿ. 

ಉಪ್ಪು ವ್ಯಾಪಾರ ಮಾಡುವುದು ತಮ್ಮ ಕಸಬು. ಅದನ್ನು ಯಾವ ಪಟಿಂಗನಿಂದಲೂ ತಡೆಯಲಾಗದು ಎಂದು ಸವಾಲು ಹಾಕಿದ ಬಂಜಾರ ಜನಾಂಗದ ಜನಗಳನ್ನು ಅಡಗಿಸಲು, ಆ ಜನಾಂಗವನ್ನೇ ಕಳ್ಳರ ಪರಂಪರೆ ಎಂದು ಗುರುತಿಸಿ, ಸೆರೆಹಿಡಿದು ಜೈಲಿನಲ್ಲಿ ಹಾಕಲು ಸರಕಾರ ಪ್ರಯತ್ನಿಸಿತು. 

ತಲೆ ಹೊರೆಯಷ್ಟು ಉಪ್ಪನ್ನು ಮಾರಿದ ಕೊರವರು ಒಂದು ಕಡೆಯಾದರೆ, ಉಪ್ಪಳದಿಂದ ನೇರವಾಗಿ ಉಪ್ಪನ್ನು ಖರೀದಿಸಿ, ಗಾಡಿಗಳಲ್ಲಿ, ಹೇಸರ ಕತ್ತೆಗಳ ಮೇಲೆ ಹೊರಿಸಿ, ಲಂಬಾಡಿಗಳೂ  ಬಂಜಾರಗಳೂ ಕಾಲೊನಿಯ ಕಟ್ಟುಪಾಡುಗಳನ್ನು ಮೀರಿ ಉಪ್ಪನ್ನು ಉಳಿದ ಪ್ರದೇಶಗಳಿಗೆ ಮಾರಾಟ ಮಾಡಿದರು. ವಸ್ತು ವಿನಿಮಯ ಮಾಡಿಕೊಂಡರು. ಅವರನ್ನು ತಡೆಯಲು ಹೋರಾಟವನ್ನು ಕೆರಳಿಸಿ ಅವರನ್ನು ಕಳ್ಳರೆಂದು ಅಪರಾಧ ಹೊರಿಸಿತು ಬ್ರಿಟೀಷ್ ಸರಕಾರ. 

ಉಪ್ಪು ವ್ಯಾಪಾರವನ್ನು ತಮ್ಮ ವಶಮಾಡಿಕೊಳ್ಳಬೇಕಾದರೆ, ಅತಿ ಉದ್ದನೆಯ ತಡೆಬೇಲಿ ಒಂದನ್ನು ನಿರ್ಮಾಣಿಸಬೇಕೆಂಬ  ಯೋಜನೆಯನ್ನು ಆಗ ಹಾಗಲಾಯಿತು. ಈ ಬೇಲಿ ಒಡಿಸ್ಸಾದಿಂದ ಪ್ರಾರಂಭವಾಗಿ ಹಿಮಾಲಯದ ನೇಪಾಳದ ಗಡಿಯವರೆಗೆ ಹಾಕಲು ನಕ್ಷೆಯನ್ನು ತಯಾರುಮಾಡಲಾಯಿತು. 1823ರಲ್ಲಿ ಆಗ್ರಾದ ತೆರಿಗೆ ಇಲಾಖೆಯ ನಿರ್ದೇಶಕ ಜಾರ್ಜ್ ಸೇಂಡರ್ಸ್ (George Sanders) ಇದಕ್ಕೆ ಬೇಕಾದ ಪ್ರಾರಂಭಿಕ ಕಾರ್ಯಗಳನ್ನು ತೊಡಗಿದನು.

ಒಡಿಸ್ಸಾದ ಸೋನಾಪೂರ್-ನಿಂದ ಪ್ರಾರಂಭಿಸಿ ಈ ತಡೆಬೇಲಿ, ಮುಂದುವರೆದು ಗಂಗಾ ಯಮುನಾ ನದಿಯ ತೀರಗಳನ್ನು ದಾಟಿ ಅಲಹಾಬಾದಿನವರೆಗೆ ಹಾಕಲಾಯಿತು. ಆ ದಿನಗಳಲ್ಲಿ ಈ ಬೇಲಿಯನ್ನು ಬಿದುರಿನಿಂದ ನಿರ್ಮಾಣಿಸಲಾಯಿತು. ಅದನ್ನು ದಾಟಿ ಹೋಗಲಾಗದಂತೆ ಒಂದು ದೊಡ್ಡ ಕಂದರವನ್ನು ತೋಡಲಾಯಿತು. 1834ರಲ್ಲಿ ಸುಂಕದ ಇಲಾಖೆಯ ನಿರ್ದೇಶಕರಾಗಿ ಬಂದ ಜಿ. ಹೆಚ್. ಸ್ಮಿತ್ (G.H. Smith) ಈ ತಡೆಬೇಲಿಯನ್ನು ಅಲಹಾಬಾದಿನಿಂದ ನೇಪಾಳದವರೆಗೆ ಮುಂದುವರೆಸುವ ಕಾರ್ಯವನ್ನು ಮಾಡಿದನು.

| ಇನ್ನು ನಾಳೆಗೆ |

‍ಲೇಖಕರು Admin

August 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: