ಈಗೊಂದು ವಾರದ ಹಿಂದಿನ ಮಾತಿದು…

ವೈದ್ಯ ವಿನಯ್ ರಾವ್ ಅವರ ವಾಲ್ ನಿಂದ…

ಆದರ್ಶ ಹುಂಚದಕಟ್ಟೆ ಮೂಲಕ

ಅಮ್ಮನಿಗೆ ಅನಾರೋಗ್ಯ ಕಾಡಿ ಮನೆಯವರೆಲ್ಲ ತಳಮಳಿಸಿಹೋಗಿದ್ದೆವು. ವಯಸ್ಸಾಗಿದೆ, ಕೊರೋನಾ ಕಾಲಘಟ್ಟ ಬೇರೆ. ಆಸ್ಪತ್ರೆ ಅಂದ ಕೂಡಲೇ ಕೈಕಾಲು ನಡುಗುವಂಥ ಸಂದರ್ಭ ಈಗಿನದ್ದು. ಆದರೆ ಹಾಗಂತ ಸುಮ್ಮನಿರಲಾದೀತೆ? ಅಮ್ಮ ಅಮ್ಮನೇ… ಹೆಬ್ಬಾಳದ ಆಸ್ಟ್ರ ಆಸ್ಪತ್ರೆಗೆ ದಾಖಲು ಮಾಡಿದೆವು. ಪರೀಕ್ಷೆಗಳೆಲ್ಲಾ ಆಗಿ ಶಸ್ತ್ರಚಿಕಿತ್ಸೆಯ ದಿನಾಂಕವೂ ನಿಗದಿಯಾಯ್ತು. ಅಮ್ಮನನ್ನು ಎರಡನೇ ಸ್ಟೋರ್‌ನಲ್ಲಿದ್ದ ಆಪರೇಷನ್ ಥಿಯೇಟರಿಗೆ ಕರೆದೊಯ್ದರು.

ನಾನು ಅಲ್ಲೇ ಎದುರಿಗಿದ್ದ ಕುರ್ಚಿಯ ಮೇಲೆ ಕೂತೆ. ಕಾರಿಡಾರಿನಲ್ಲಿ ಹೆಚ್ಚು ಜನರಿರಲಿಲ್ಲ. ಇದ್ದದ್ದು ಇಬ್ಬರೇ ಒಬ್ಬ ನಾನು, ಇನ್ನೊಬ್ಬರು ಬಿಳೀ ಉಡುಪು ಧರಿಸಿದ್ದ ಅರವತ್ತು ಅರವತ್ತೈದರ ಪ್ರಾಯವಿರಬಹುದಾದ ಹಿರಿಯರು. ಪರಿಚಿತ ಮುಖ ಅನ್ನಿಸಿತು. ಆದರೆ ಎಲ್ಲಿ ನೆನಪಾಗವಲ್ಲದು. ಮೌನವಾಗಿ ಗಂಭೀರವಾಗಿ ಕೂತಿದ್ದರು. ನನಗೆ ನನ್ನದೇ ಹೆಚ್ಚಾಗಿತ್ತಾದ್ದರಿಂದ ಅವರ ಬಗ್ಗೆ ಹೆಚ್ಚು ಹುಡುಕಹೋಗದೆ ಅಮ್ಮನ ಸುದ್ದಿಗಾಗಿ ಕಾಯುತ್ತಾ ಕೂತೆ.

ಸಂಜೆ ಹೊತ್ತಿಗೆ ವರ್ತಮಾನ ಬಂತು, ಅಮ್ಮ ಔಟಾಫ್ ಡೇಂಜರ್. ಆಪರೇಷನ್ ಸಕ್ಸಸ್ ಆಗಿತ್ತು! ಅಮ್ಮನಿಗೆ ಪ್ರಜ್ಞೆ ಬಂದು ಡಾಕ್ಟರು ನನಗೆ ಹೇಳಿಕಳಿಸುವ ತನಕ ನನಗೂ ಬೇರೆ ಕೆಲಸವಿರಲಿಲ್ಲ. ಮನೆಗೆ ಹೋಗಿ ತಾಸಿನ ನಂತರ ಮರಳಿ ಬಂದೆ. ಇನ್ನೂ ಸ್ವಲ್ಪ ಹೊತ್ತು ಕಾಯಿರಿ, ಆಮೇಲೆ ಹೋಗಿ ನೋಡಬಹುದು ಅಂದರು ಸಿಸ್ಟರ್, ಕೂತೆ. ಹಾಗೇ ಪಕ್ಕಕ್ಕೆ ತಿರುಗಿ ನೋಡಿದರೆ ಆ ಹಿರಿಯರು ಈಗಲೂ ಹಾಗೆ ಅದೇ ಜಾಗದಲ್ಲಿ ಸ್ಥಿರವಾಗಿ ಕುಳಿತೇ ಇದ್ದಾರೆ! ತುಂಬಾ ಹೊತ್ತಿನ ತಿಣುಕಾಟದ ನಂತರ ನನಗೆ ಅವನ್ಯಾರು ಎಂಬ ಸುಳಿವು ಸಿಕ್ಕಿಹೋಯ್ತು.

ಇವರು ಯಾವುದೋ ಸರ್ಕಾರವಿದ್ದಾಗ ಮಂತ್ರಿಯಾಗಿದ್ದವರಲ್ಲವೆ? ಟಿವಿಯಲ್ಲಿ ಪೇಪರಿನಲ್ಲಿ ನೋಡಿದ್ದೇನೆ… ಏನಿವರ ಹೆಸರು? ಗೂಗಲ್ಲಿನಲ್ಲಿ ಜಾಲಾಡಿದಾಗ ಗುರುತು ಸಿಕ್ಕಿತ್ತು- ಕಿಮ್ಮನೆ ರತ್ನಾಕರ್! ಮೈತ್ರಿ ಸರ್ಕಾರವೋ ಅದರ ಹಿಂದಿನ ಸರ್ಕಾರದಲ್ಲೋ ಶಿಕ್ಷಣಮಂತ್ರಿಯಾಗಿದ್ದವರು. ಎರಡು ಬಾರಿ ಶಾಸಕರೂ ಆಗಿದ್ದವರು. ಈಗಲೂ ಸಕ್ರಿಯ ರಾಜಕಾರಣಿ. ರಾಜಕಾರಣಿಗಳೆಂದರೆ ಪಟಾಲಮ್ಮು, ಅನುಯಾಯಿಗಳು, ಜೈಕಾರ, ದೌಲತ್ತು ಅನ್ನೋದು ನನ್ನೊಬ್ಬನದ್ದಲ್ಲ, ಬಹುತೇಕರ ಅಭಿಪ್ರಾಯ. ಅದು ಸತ್ಯವೂ ಕೂಡ. ಆದರೆ ಶಾಸ್ತ್ರಕ್ಕೂ ಅವತ್ತು ಅವರ ಜೊತೆ ಒಬ್ಬೇ ಒಬ್ಬ ಸಹಚರನಿರಲಿಲ್ಲ. ತಾನು ಮಾಜಿ ಮಂತ್ರಿ ಎಂಬ ಯಾವ ಡೌಲು ಅವರಲ್ಲಿ ಕಾಣಸಿಗಲಿಲ್ಲ.

ರಾಜಕಾರಣಿಗಳೆಂದರೆ ಹೀಗೂ ಇರ್ತಾರ?! ಎಂದು ಆಶ್ಚರ್ಯಪಡುತ್ತಲೇ ಮೆಲ್ಲಗೆ ಹೋಗಿ ಮಾತನಾಡಿಸುವ ಪ್ರಯತ್ನಮಾಡಿದೆ. ಗೊತ್ತಾದದ್ದೇನೆಂದರೆ, ಕಿಮ್ಮನೆ ರತ್ನಾಕರ್‌ರ ಪತ್ನಿಯವರಿಗೆ ಬೆನ್ನುಹುರಿ ಚಿಕಿತ್ಸೆ ನಡೆಯುತ್ತಿತ್ತು. ಬೆಳಿಗ್ಗೆ ಐದಕ್ಕೆ ಪತ್ನಿಯನ್ನು ಕರೆದುಕೊಂಡು ಬಂದು ಅಡ್ಮಿಟ್ ಮಾಡಿಸಿದ್ದಾರೆ. ಅಲ್ಲಿಂದ ಅದು ಮುಗಿಯುವ ತನಕವೂ ಇವರು ಆ ಜಾಗ ಬಿಟ್ಟು ಕದಲಿಲ್ಲ. ನಂಭೀರೋ ಬಿಡ್ತೀರೋ, ಆಪರೇಷನ್ನಿನ ಪ್ರೊಸೀಜರುಗಳೆಲ್ಲ ಮುಗಿದು ಅವರ ಪತ್ನಿ ಆರಾಮಾಗಿರುವ ವರ್ತಮಾನ ಬಂದಾಗ ಸಮಯ ರಾತ್ರಿ ಹತ್ತು ಗಂಟೆ! ಈ ಪುಣ್ಯಾತ್ಮ ಅಲ್ಲೇ ಕೂತಿದ್ದರು.

ಮಧ್ಯೆ ಮಧ್ಯೆ ಒಂದೆರಡು ಬಾರಿ ಫೋನ್ ಮಾಡಿರಬಹುದಷ್ಟೇ. ಯಾರೋ ಹತ್ತಿರದವರಿಗೆ ಕಾಲ್ ಮಾಡಿ ಸಂಕೋಚದಿಂದಲೇ ‘ಸ್ವಲ್ಪ ಹಣ ಅಡ್ಡೆಸ್ಟ್ ಮಾಡಿಕೊಡೋಕಾಗುತ್ತಾ? ಬೆಂಗಳೂರಲ್ಲಿದ್ದೀನಿ. ಊರಿಗೆ ಹೋದಮೇಲೆ ಕಳಿಸಿಕೊಡ್ತೀನಿ’ ಅಂತ ಕೇಳಿಕೊಳ್ಳುತ್ತಿದ್ದರು (ಸಾರಿ ಸರ್, ನಿಮ್ಮ ಖಾಸಗಿ ಮಾತುಗಳನ್ನು ಕದ್ದು ಕೇಳಿಸಿಕೊಂಡಿದ್ದಕ್ಕೆ ಮತ್ತು ಅದನ್ನು ಇಲ್ಲಿ ಬರೆದಿರುವುದಕ್ಕೆ) ಬರೀ ಗ್ರಾಮಪಂಚಾಯ್ತಿ ಮೆಂಬರ್ ಆದವನೇ ಲಕ್ಷಲಕ್ಷಗಳ ಲೆಕ್ಕದಲ್ಲಿ ಡೀಲ್ ಮಾತಾಡುವಾಗ, ಮಕ್ಕಳುಮರಿಗೆ ಆಸ್ತಿಮಾಡಿಕೊಂಡು ಕೂತಿರುವಾಗ… ಮಂತ್ರಿಯಾಗಿ ಅಧಿಕಾರ ಮಾಡಿದವರಿವರು, ರಾಜಕಾರಣದಲ್ಲಿದ್ದೂ ಹೀಗೆ ಸಂತನಂತೆ ಉಳಿದುಕೊಂಡಿರಲು ಸಾಧ್ಯವೇ? ನಿಜಕ್ಕೂ ಇವರು ಭ್ರಷ್ಟತೆಯ ಕಲೆ ಅಂಟಿಸಿಕೊಳ್ಳದ ಪ್ರಾಮಾಣಿಕರಾ? ನನ್ನ ಗೆಳೆಯನೊಬ್ಬ ಆರು ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ತಹಶೀಲ್ದಾರನಾಗಿದ್ದ. ಈಗವನು ಉತ್ತರ ಕರ್ನಾಟಕದಲ್ಲಿ ಪೋಸ್ಟಿಂಗ್‌ನಲ್ಲಿದ್ದಾನೆ.

ಕುತೂಹಲಕ್ಕೆ ಫೋನ್ ಮಾಡಿ ಕಿಮ್ಮನೆ ರತ್ನಾಕರ್ ಬಗ್ಗೆ ವಿಚಾರಿಸಿದೆ. ಅವನು ಹೇಳಿದ ಮಾತು ಕೇಳಿ ನನಗೆ ಮಾತೇ ಹೊರಡಲಿಲ್ಲ. ಯಾಕೆಂದರೆ, ಹತ್ತು ವರ್ಷ ಶಾಸಕರಾಗಿದ್ದರೂ, ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರೂ, ಅದರಿಂದ ವೈಯುಕ್ತಿಕವಾಗಿ ಇವರೇನು ಲಾಭ ಮಾಡಿಕೊಂಡಿಲ್ಲ. ಹಿಂದಿನ ಚುನಾವಣೆಗಾಗಿ ಮಾಡಿಕೊಂಡ ಸಾಲವನ್ನೇ ಇವತ್ತಿಗೂ ಕಂತಿನ ರೂಪದಲ್ಲಿ ಕಟ್ಟಿ ತೀರಿಸುತ್ತಿದ್ದಾರಂತೆ! ಅದು ಸಾಲದೆಂಬಂತೆ ವಿಧಾನಸಭಾ ಸದಸ್ಯರಿಗೆ ನೀಡುವ ನಿವೇಶನವನ್ನೂ ಅಗತ್ಯವಿಲ್ಲ, ಎಂದು ವಿನಯಪೂರ್ವಕವಾಗಿ ತಿರಸ್ಕರಿಸಿದ್ದಾರಂತೆ! ಗೆಳೆಯ ಹೇಳುತ್ತಿದ್ದ ಮಾತುಗಳನ್ನು ಕೇಳಿ ನನ್ನ ಕಿವಿ ನನಗೇ ನಂಬಲಾಗಲಿಲ್ಲ.

ಆಪರೇಷನ್ ಆದ ನಂತರ ಅಮ್ಮನನ್ನು ನೋಡಿಕೊಂಡು ನಾನೊಂದು ವಾರ್ಡಿನಲ್ಲಿ, ಹೆಂಡತಿಯನ್ನು ಆರೈಕೆ ಮಾಡುತ್ತಾ ಕಿಮ್ಮನೆಯವರೊಂದು ವಾರ್ಡಿನಲ್ಲಿ ಮೂರಾಲ್ಕು ದಿನ ಇದ್ದೆವು. ‘ಸರ್ ನೀವು ಕಿಮ್ಮನೆ ರತ್ನಾಕರ್ ಅಲ್ಲವಾ?’ ಅಂತ ಮೊದಲ ದಿನ ಕುತೂಹಲದಿಂದ ಕೇಳಿದ್ದ ಮಾತೆಷ್ಟೋ ಅಷ್ಟೇ… ಆಮೇಲೆ ಅವರ ಜೊತೆ ಹೆಚ್ಚು ಸಂಭಾಷಿಸಲಾಗಲಿಲ್ಲ. ಎದುರಾದಾಗ ಪರಿಚಯದ ಮುಗುಳ್ನಗು ಕಾಣಿಸುತ್ತಿತ್ತೇ ವಿನಃ, ಅವರು ಮಾತಿಗಿಂತ ಕೃತಿಯಲ್ಲೇ ಜಾಸ್ತಿ ನಂಬಿಕೆ ಇಟ್ಟವರು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಮೂರು ದಿನ ಅವರಿಗೇ ಗೊತ್ತಾಗದೆ ಅವರನ್ನು ಗಮನಿಸಿದ್ದೆನಲ್ಲ… ನಿಜಕ್ಕೂ ಕಿಮ್ಮನೆ ರತ್ನಾಕರ್ ಓರ್ವ ಅಪರೂಪದ ರಾಜಕಾರಣಿ ಅಂತ ಮನದಟ್ಟಾಯ್ತು, ರಾಸಲೀಲೆಗಳು, ಸಿಡಿ ತಂತ್ರಗಾರಿಕೆಗಳು, ಚಮಚಾಗಿರಿ, ಓಲೈಸುವಿಕೆ… ಇಂಥ ಹೊಲಸಿನಿಂದಲೇ ತುಂಬಿಹೋಗಿರುವ ರಾಜಕೀಯದಲ್ಲಿ ಕಿಮ್ಮನೆ ರತ್ನಾಕರ್‌ರಂಥ ನೇರ ನಿಷ್ಠುರಿ ಸಜ್ಜನ ರಾಜಕಾರಣಿ ಈಗಲೂ ಇದ್ದಾರೆ ಎಂಬುದೇ ಒಂದು ಪವಾಡದಂತೆ ನನಗೆ ಭಾಸವಾಗುತ್ತಿದೆ.

ಡಾಕ್ಟರ್ ಟ್ರೇಟ್‌ಮೆಂಟಿಗಿಂತ ಹೆಚ್ಚಾಗಿ, ಆಪರೇಷನ್ ಥಿಯೇಟರ್ ಮುಂದೆಯೇ ಕೂತು ಹೆಂಡತಿಯ ಜಪಮಾಡುತ್ತಿದ್ದ, ಮೂರು ದಿನವೂ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಂಡ ಕಿಮ್ಮನೆಯವರ ಪ್ರೀತಿಯೇ ಅವರ ಪತ್ನಿಯವರನ್ನು ಅಷ್ಟುಬೇಗ ಗುಣ ಮಾಡಿರಬೇಕು. ಇದು ನನ್ನ ಅಭಿಪ್ರಾಯ. ಕಿಮ್ಮನೆ ರತ್ನಾಕರ್ ಅದೇಕೋ ಮನಸ್ಸಿಗೆ ತುಂಬಾ ಹಿಡಿಸಿದರು. ಹಾಗಾಗಿ ಇಷ್ಟು ಬರೆದೆ. ಅವರು ಹೀಗೇ ನಿಷ್ಕಲ್ಮಷರಾಗಿ ಉಳಿದುಕೊಳ್ಳಲಿ. ಮತ್ತೆ ಚುನಾವಣೆ ಗೆದ್ದು ರಾಜಕಾರಣದಲ್ಲಿ ಸಕ್ರಿಯರಾಗಲಿ ಅನ್ನೋದು ಅಭಿಲಾಷೆ.

‍ಲೇಖಕರು Admin

August 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: