ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಆಯರಳ್ಳಿಗೂ ಬಂತು ಸುನಾಮಿ ಕಾಸು

ಭೂತಾಳೆ ನಾರು. ಮತ್ತು ಕಡ್ಡಿಗಳನ್ನ ಉಪಯೋಗಿಸಿಕೊಂಡು ಮಂದಲಿಗೆ ನೇಯುತ್ತಿದ್ದ ನಮ್ಮೂರ ನೇಕಾರರು. ಪ್ಲಾಸ್ಟಿಕ್ ಚಾಪೆಗಳು ಬಂದು ಹೇಗೆ ಧೂಳೀಪಟವಾದರೆಂದು ಕಳೆದವಾರ ಹೇಳಿದ್ದೆ. ಅದರ ಮುಂದುವರೆದ ಭಾಗವಿದು. ಈ ನೇಕಾರು ಕೃಷಿಕರೂ ಆಗಿದ್ದರು. ಮಳೆ ಆಶ್ರಿತ ಕೃಷಿ. ವರ್ಷಪೂರ್ತಿ ಏನೂ ಕೆಲಸವಿರುತ್ತಿರಲಿಲ್ಲ. ಹಾಗಾಗಿ, ಕೃಷಿ ಮತ್ತು ಮಂದಲಿಗೆ ವ್ಯಾಪಾರ ಎರಡೂ ಸೇರಿ ಬದುಕು ಸಾಗುತ್ತಿತ್ತು.
ಈಗ ಪ್ಲಾಸ್ಟಿಕ್ ಚಾಪೆಯೊಂದಿಗೆ ಸೆಣೆಸಲಾರದೇ ನಮ್ಮ ನೇಕಾರರು ತಮ್ಮ ಮಂದಲಿಗೆ ನೇಯ್ಗೆಯ ಚೌಕಟ್ಟುಗಳನ್ನು ಗೋಡೆಗೆ ಆನಿಸಿ, ತಲೆಮೇಲೆ ಕೈ ಹೊತ್ತು ಕೂತರು. ಎಷ್ಟು ದಿನ ಕೂತಾರು? ಬದುಕಬೇಕಲ್ಲ? ಹೇಗೋ ಕೃಷಿಯನ್ನೇ ಮುಂದುವರೆಸಿದರು. ಕುರಿ ಸಾಕಿದರು. ಕೂಲಿಗೆ ಹೋದರು. ದೊಡ್ಡ ದೊಡ್ಡ ಆಸೆಗಳು, ದೊಡ್ಡ ಮಟ್ಟದ ಖರ್ಚೂ ಇಲ್ಲದ್ದರಿಂದ “ಇಟ್ಟು ಬಟ್ಟೆಗೆ ನೇರ “ ಅನ್ನುವಂತ ಸರಳ “ಬಿಪಿಎಲ್ ಬದುಕು” ಸಾಗುತ್ತಲೇ ಇತ್ತು. ಆದರೆ ಮುಂದಿನ ಹತ್ತೇ ವರ್ಷಗಳಲ್ಲಿ ಇಷ್ಟೊಂದು ತಿರುಗಾಮುರಗಾ ಯಾಕಾಯಿತು? ಹೇಗಾಯಿತು? ಹೇಳ್ತೀನಿ ಕೇಳಿ.
ಆಗ ಬಿಜೆಪಿ, ಜೆಡಿಸ್ ಸಮ್ಮಿಶ್ರ ಸರಕಾರವಿತ್ತೆಂದು ನೆನಪು, ಅದೇ ಸಮಯವಿರಬಹುದು ಖಾತ್ರಿಯಿಲ್ಲ. ಒಟ್ಟಿನಲಿ ಒಂದಿಷ್ಟು ಸಮಯ ಬೆಂಗಳೂರಿನಲಿ ಹೊಸ ಭೂಮಿಗಳ ರಿಜಿಸ್ಟರೇಷನ್ ನಿಲ್ಲಿಸಲಾಗಿತ್ತು. ಆಗ ಬೆಂಗಳೂರಿನ ರಿಯಲ್ ಎಸ್ಟೇಟ್ ನ ದೊಡ್ಡ ದೊಡ್ಡ ಕಾರುಗಳು ಮೈಸೂರ ಕಡೆಗೆ ಚಲಿಸತೊಡಗಿದ್ದವು. ಒಂದೆಕರೆ ಜಮೀನಿಗೆ ಇಷ್ಟು ದಿನ ಇದ್ದ ಬೆಲೆಗಿಂತ ನಾಲ್ಕು ಪಟ್ಟು ಬೆಲೆ ಹೆಚ್ಚಿತ್ತು. ಈ ಪರಿ ಬೆಲೆಯ ಆಸೆಗೆ ಬಿದ್ದವರು ನೇಕಾರರು ಮಾತ್ರವಲ್ಲ ಇಡೀ ಊರೇ. ಆದರೆ ಬಹುತೇಕರು ನೇಕಾರರು. ಈಗ ನೆನಪಾಗುತ್ತಿದೆ. ಇತ್ತಲ ಬೀದಿಯವರ ರೇಷಿಮೆ ಕೃಷಿ, ಅತ್ತಲ ಬೀದಿಯವರು ನೇಕಾರಿಗೆ ಎರಡೂ ಹೆಚ್ಚು ಕಡಿಮೆ ಒಟ್ಟೊಟ್ಟಿಗೇ ನಶಿಸಿದ್ದವು. ಎಲ್ಲರಲ್ಲೂ ಯಾಕೋ ಒಂಥರ ಆಲಸ್ಯ ಆವರಿಸಿತ್ತು. ಯಾಕಿರಬಹುದು? ಒಂದೆಕರೆಗೆ ಲಕ್ಷಗಳು, ಒಟ್ಟಿಗೇ ಯಾವತ್ತೂ ನೋಡೇ ಇರದಷ್ಟು ಅಮೌಂಟು. ಅಂದರೆ ನಾವೀಗ ಲಕ್ಷಾಧೀಶ್ವರರು. ಈ ಭಾವನೆಯೇ ಎಷ್ಟೋ ಜನರ ದುಡಿವ ಕೈ ಕಟ್ಟಿ ಹಾಕಿತ್ತಾ? ಮತ್ತೆ ಇದೇ ರೇಟು ಸಿಗತ್ತೋ ಇಲ್ವೋ ಮಾರಿ ಜಾಣರಾಗಿಬಿಡುವ ಅನ್ನುವ ಯೋಚನೆ ಬಂದಿತ್ತಾ? ಸಾಕು ಸಾಕಾಗಿಹೋಗಿದೆ, ಇನ್ನಾದರೂ ಸುಖವಾಗಿರೋಣ, ಅಂತ ಆಸೆಯಾಗಿತ್ತಾ? ಅಥವಾ ಈ ಎಲ್ಲವೂ ಸೇರಿತ್ತೋ? ಒಟ್ಟಿನಲಿ 10 ಗುಂಟೆ, ಅರ್ಧ ಎಕರೆ, ಒಂದೆಕರೆ. ಎರಡು. ನಾಲ್ಕು. ಕೆಲವರು ಸತ್ತರೆ ಮಣ್ಣುಮಾಡಲು ಬೇಕಾದಷ್ಟನ್ನ ಉಳಿಸಿಕೊಂಡು ಉಳಿದದ್ದನ್ನೆಲ್ಲ ಮಾರಿಬಿಡಲು ಸಿಧ್ದರಾದರು.
ಮಾರುವ ಅಭಿಯಾನ ಆರಂಭವಾಗೇ ಬಿಟ್ಟಿತ್ತು. ನೇಕಾರಿಕೆ ಮಾಡುತ್ತಿದ್ದ ಮನೆ ಮುಂದಣ ಜಾಗ ಸುತ್ತ ಗೋಡೆ ಎಬ್ಬಿಸಿಕೊಂಡು, ಮೇಲೆ ಶೀಟೋ, ಥಾರಸಿಯೋ ಏರಿಸಿಕೊಂಡು “ಟಿ ವಿ ಹಾಲ್” ಆಗಿ ರೂಪಾಂತರವಾಯಿತು. ಒಬ್ಬರನ್ನ ನೋಡಿ ಒಬ್ಬರು. “ಕುರಿಗಳು ಸಾರ್ ಕುರಿಗಳು” ಕೇಸು. ಅದೇ ಟೈಮಲ್ಲಿ ಮನೆಗೊಂದು ಕಬ್ಬಿಣದ ಬೀರು ಕೊಳ್ಳಲು ಮೈಸೂರಿನ ಪದ್ಮ ಥಿಯೇಟರ್ ಬಳಿಯ ಅಂಗಡಿಗೆ ಅಪ್ಪ ನಾನು ಹೋಗಿದ್ದೆವು . ಕಬ್ಬಿಣದಂಗಡೀಲಿ ನೊಣಕ್ಕೆ ಕೆಲಸವೇನು? ಅನ್ನುವ ಮಾತನ್ನೇ ಸುಳ್ಳು ಮಾಡುವಂತಿತ್ತು ಆ ದೃಶ್ಯ. ಗಿಜಿಗಿಜಿ ಜನ. “ಅಣ್ಣ ಇದೇನಿಷ್ಟು ಜನ? ಬನ್ನಿ ಬೇರೆ ಅಂಗಡಿಗೋಗಣ” ಅಂದವಳನ್ನ ಮುಸ್ಲಿಂ ಮುದುಕನೊಬ್ಬ ತಡೆದ. “ಯಾವ್ ಅಂಗಡೀಕೆ ಹೋದ್ರೂ ಇಷ್ಟೇ ರಶ್ಸು ಇರ್ತೈತೆ. ಇಲ್ಲಿ ಇಷ್ಟಾರೂ ಐತೆ, ಬ್ಯಾರೆ ಕಡೆಗೆ ಕಾಲ್ ಮಡುಗಾಕೂ ಜಾಗಗೆ ಸಿಕ್ಕಲ್ಲ” ಪಕ್ಕಾ ಮೈಸೂರು ಮುಸ್ಲಿಮರು ಮಾತಾಡುವ ಸೊಗಡು, ಲಯ ಸೇರಿದ ಮಾತಲ್ಲಿ ಹೇಳಿದ. “ಹೋಗ್ಲಿ ಯಾವಾಗ್ ಜನ ಕಮ್ಮಿ ಇರ್ತಾರೆ?” ಕೇಳಿದೆ. “ಯಾವಾಗ್ಲೂ ಇರಾಕಿಲ್ಲ. ಭಾನುವಾರಾನು ಯಾಪಾರ ಮಾಡ್ತೀವಿ. ರಾತ್ರಿ ಹನ್ನೊಂದ್ ಗಂಟೇಗಂಟ ಜನ ಬತ್ತಾನೇ ಇರ್ತಾರೆ.” ಅಂದ. “ಬೀರು ಯಾವಾಗಲೋ ತಗೊಳೋ ವಸ್ತು ಅಲ್ಲವಾ? ಅದೇನ್ ತರಕಾರಿ ಅಂಗಡಿ ಕೆಟ್ಟೋಯ್ತಾ? ಜನ ದಿನಾ ದಿನಾ ಬಂದ್ ತಗೊಳೋಕೆ?” ಅಪ್ಪನೊಂದಿಗೆ ಗೊಣಗುತ್ತಿದ್ದೆ. “ ಈಗ ಎಲ್ಲರ್ ತಾವೂ ಸುನಾಮಿ ಕಾಸ್ ಓಡಾಡ್ತೈತೆ. ಸುತ್ತ ಮುತ್ತ ಹಳ್ಳಿ ಜನ ಎಲ್ಲ ಸೌಕಾರ್ ಆಗ್ ಬುಟ್ಟೌರೆ.ಎಲ್ಲ ಪರ್ನಿಚರ್ ಅಗಂಡಿ ಒಳಗೂ ಒಳ್ಳೆ ಬ್ಯುಸಿನೆಸ್ಸು ಈಗ” ಅಂದ. “ಅಯ್ಯಾ ಸಾಬಿ, ಸುನಾಮಿ ಅಂದ್ರೆ ಸಾವು, ನೋವು. ಅಲ್ಲಿ ಕಾಸೆಲ್ಲಿ ಸಿಗತ್ತೆ? ಅಲ್ದೆ ಅದೆಲ್ಲೋ ಆದದ್ದು. ಅದಕ್ಕೂ ಇದಕ್ಕೂ ಏನ್ ಸಂಬಂಧ” ಅಂತ ಹೊಳೆಯದೇ ವಾಪಸಾದೆ.
“ಸಿದ್ದೇಶನ ಮಗಳ ಮದ್ವಗ ಕುವೆಂಪುನಗರದ್ ಛತ್ರ ಮಾಡಿದ್ದರಂತಲ್ಲ. ಡೇಕೋರೇಷನ್ಗೆ ಎಷ್ಟೋ ಖರ್ಚು ಮಾಡೀನಿ ಕಣಕ್ಕ ಅಂತಿದ್ದ.” ಅಮ್ಮ ಬಸುರಾಜಣ್ಣನ್ನ ಕೇಳಿದ್ದರು. “ ಮಾಡದೇ ಏನ್ ಮಾಡಿನೂ ತಕ್ಕಳಿ, ಸುನಾಮಿ ಕಾಸ್ ಬಂತು ಮಾಡ್ತನ” ಅಂದರು ಬಸುರಾಜಣ್ಣ. ಅತ್ತೇರಿ…ಇವರ ಬಾಯಲ್ಲೂ ಬಂತಾ? ಅಂದುಕೊಳ್ಳುವ ವೇಳೆಗೆ ಅಕ್ಕ (ದೊಡ್ಡಪ್ಪನ ಮಗಳು) ಬಂದಳು. ಅವಳ ಮುಖದಲ್ಲಿ ಅಷ್ಟು ಸಂತೋಷ ಯಾವತ್ತೂ ನೋಡಿರಲಿಲ್ಲ ನಾನು. ಅವರ ಜಮೀನು ಲಕ್ಷಗಳಿಗೆ ಮಾರಾಟವಾಗಿತ್ತು. ಶ್ರೀರಾಂಪುರದ ಮುಂದೆಯೇ ಇರುವ ಎಡಹಳ್ಳಿಗೆ ಅವಳು ಮದುವೆಯಾಗಿದ್ದು. ಗಂಡನ್ನ ಕಳಕೊಂಡು ಮೂರು ಮಕ್ಕಳನ್ನ ಕಟ್ಟಿಕೊಂಡು. ಕುರಿ ಸಾಕಣೆ ಮಾಡಿಕೊಂಡು. ಊರಿಗೆ ಹೆಣ್ಣಾಗಿ, ಕಾಡಿಗೆ ಗಂಡಾಗಿ ಹೈರಾಣಾಗಿದ್ದಳು. ಈಗ ಅವಳ ಜಮೀನು ಲೇ ಔಟ್ ಮಾಡುವವರ ಕೈ ಸೇರಿತ್ತು. ಅವಳು ಮಾರಲೇಬೇಕಿತ್ತು. ಇಲ್ಲವೇ ಮೈಸೂರು ನಗರಾಭಿವೃಧ್ದಿ ಯೋಜನೆಯವರು (ಮುಡಾ) ತಾವೇ ಅಕ್ವೈರ್ ಮಾಡುತ್ತಿದ್ದರು. “ನಿಮ್ಮೂರ್ ಕಡೆ ಹೆಂಗೆ ಶಾಂತೀ” ಅಮ್ಮ ಕೇಳಿದರು. “ಅಯ್ಯೋ ಚಿಕ್ಕಿ, ಜಮೀನು ಮಾರಿ ಎಲ್ಲ ಹಟ್ಟಿಗಳ್ನೆಲ್ಲ ಕಿತ್ತಾಕ್ತಾ ಕೂತರ. ಬಂದ್ ನೋಡಿ, ನಮ್ಮೂರ ಈಗ ತಡಿಕಂಡ್ರೂ ಒಂದ್ ಹೆಂಚಿನ ಮನೆ ಸಿಕ್ಕಲ್ಲ. ಎಲ್ಲರ್ ತಾವೂ ಸುನಾಮಿ ಕಾಸು” ಅಂದಳು. ಹೀಗೆ ಇದ್ದಕ್ಕಿದ್ದಂತೆಯೇ ಜಮೀನುಗಳು ಏರಿಸಿಕೊಂಡ ಬೆಲೆಗೆ “ಸುನಾಮಿ” ಅಂತ ಹೆಸರಿಟ್ಟವರ್ಯಾರೋ? ಆ ಸಾಬಿಯೇ? ರಿಯಲ್ ಎಸ್ಟೇಟ್ನವರೇ? ಅಥವಾ ಯಾರಾದರೂ ತರಲೆಗಳೇ? ಪದನಿಷ್ಪತ್ತಿ ಹೇಗಾಯಿತೋ ಒಟ್ಟಿನಲಿ ಸುನಾಮಿಯಂತೂ ಬಂದಾಗಿತ್ತು.
ಎಲ್ಲವೂ ಬದಲಾಗತೊಡಗಿತು. ಲಕ್ಷಗಳು ಅಲಕ್ಷಗಳಾದವು. ಕೆಲ ಜಾಣರು ಇಲ್ಲಿ ಮಾರಿ ಇನ್ನೆಲ್ಲೋ ಜಮೀನು ಕೊಂಡರು. ಇನ್ನು ಕೆಲ ಜಾಣರು. ಮೈಸೂರು ನಂಜನಗೂಡಲ್ಲಿ ಮನೆ ಮಾಡಿ ಬಾಡಿಗೆಗೆ ಬಿಟ್ಟರು. ಊರುಗಳ ಚಿತ್ರಣವಂತೂ ಪೂರ್ಣ ಬದಲಾಯಿತು. “ತುಕಡಿಮಾದಯ್ಯನ ಹುಂಡಿ” ಅಂತೊಂದು ಊರು. ಮೈಸೂರಿನ ಲಲಿತ್ ಮಹಲ್ ಪಕ್ಕದ ಲಲಿತಾದ್ರಿಪುರದ ಹಿಂಬಾಗದಲ್ಲಿದೆ. ಬಸ್ಸಿಲ್ಲದ ಊರು. ಅಜ್ಞಾತವಾಗಿದ್ದ ಊರು. ಆರು ತಿಂಗಳ ಹಿಂದೆ ಅಪ್ಪನಿಗೆ ಹಾರ್ಟ್ ಸರ್ಜರಿ ಆದಾಗ ಬನ್ನೂರು ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಹೋಗಲು “ಕಟ್ ರೂಟ್” ಬಳಸಿ ಹೋಗುತ್ತಿದ್ದೆವು. ಅರೆ ಇಷ್ಟ್ ಬೇಗ ಬಂತಾ ಮೈಸೂರು?ಇದು ಯಾವ ಏರಿಯಾ?” ನಾನು ಕೇಳಿದೆ. ಕಾರ್ ಡ್ರೈವ್ ಮಾಡುತ್ತಿದ್ದ ರಾಶಿ ನಕ್ಕು ಹೇಳಿದ. “ಏರಿಯಾ ಅಲ್ಲ. ಇದು ತುಕಡಿಮಾದಯ್ಯನ ಹುಂಡಿ” . ಅಲ್ಲಿಂದ ಮುಂದೆ ಲಲಿತಾದ್ರಿಪುರದ ವರೆಗೂ ಎಲ್ಲಿ ನೋಡಿದರಲ್ಲಿ ಅಳತೆಕಲ್ಲುಗಳು. ಆ ಬಡಾವಣೆ. ಈ ಬಡಾವಣೆ ಅಂತ ಬೋರ್ಡುಗಳು. ಚಾಮುಂಡಿ ಬೆಟ್ಟದ ಮೇಲೆ ನಿಂತು ನೋಡಿದರೆ ಒಂದು ಬದಿಯಲ್ಲಿ ಮೈಸೂರು ಕಾಣುತ್ತದೆ. ಮತ್ತೊಂದು ಬದಿಯಲ್ಲಿ ಹಳ್ಳಿಗಳೂ, ಹೊಲಗಳೂ ಕಾಣುತ್ತದೆ. ಈಗ ನೋಡಿ. ಅಲ್ಲಿ ಕೆಂಪು ಮಣ್ಣೂ, ಸಾಲು ಸಾಲು ಜೆಸಿಬಿಗಳೂ ಕಾಣುತ್ತವೆ. ಇನ್ನು ಹತ್ತು ಹದಿನೈದು ವರ್ಷ ಬಿಟ್ಟು ನೋಡಿ. ಈ ಕಡೆಯೂ “ಅಭಿವೃಧ್ದಿಯಾದ(!)” ಮೈಸೂರು ನಗರ ಕಾಣುತ್ತದೆ.
ಹಾಗೆಂದು ಎಲ್ಲರೂ ಜಮೀನು ಮಾರಲಿಲ್ಲ. ಆದರೆ ಬದುಕಲು ಬೇರೆ ಬೇರೆ ಮಾರ್ಗ ಕಂಡುಕೊಂಡಿದ್ದಾರೆ. ನಮ್ಮೂರ ನೇಕಾರರ ಮಕ್ಕಳು ಚಾಮುಂಡಿ ಬೆಟ್ಟದಲಿ ನಿಂತು ಫೋಟೋ ತೆಗೆಯುತ್ತಾರೆ. ತೆಂಗಿನಕಾಯಿ ಹಣ್ಣು ಮಾರುತ್ತಾರೆ. ಹೊಸ ಏರಿಯಾಗಳ ಕಟ್ಟುವ ಕೆಲಸದಲ್ಲಿ ಭಾಗಿಯಾಗಿದ್ದಾರೆ. ಮತ್ತೇನೋ ಮಾಡುತ್ತಾರೆ , ಒಂದು ದೊಡ್ಡ ನಗರ ಹುಟ್ಟಿಕೊಳ್ಳುತ್ತಿದೆ ಅಂದರೆ ಅಲ್ಲಿ ಸುತ್ತಲ ಹಳ್ಳಿಯವರಿಗೆ ಕೆಲಸಕ್ಕೆ, ಕಸುಬಿಗೆ, ಹೊಸ ಹೊಸ ಬ್ಯುಸಿನೆಸ್ಸುಗಳಿಗೆ ಬರವೇ? ಬರ ಬಂದಿರುವುದು ನಮಗೆ , ಊರಲ್ಲಿ ಕೃಷಿಕರಾಗಿ ಉಳಿದವರಿಗೆ. ಇವರೆಲ್ಲ ಒಂದೊಂದು ಥರದಲ್ಲಿ ವಲಸೆ ಎದ್ದ ಮೇಲೆ ಆಳುಗಳೆಲ್ಲಿ? ಕೋಟಿ ಕೋಟಿ ಪ್ರಾಜೆಕ್ಟಿನವರು ಕೊಡುವ ಕಾಸಿನೊಂದಿಗೆ ಕೃಷಿಕ ಕೊಡುವ ಕೂಲಿಯನ್ನು ಮ್ಯಾಚ್ ಮಾಡಲಾಗುವುದಿಲ್ಲ. ಆಯ್ತು ಅಷ್ಟೇ ಕೊಡ್ತೀವಿ ಬನ್ರಪ್ಪ ಅಂದ್ರೂ ಬರಲ್ಲ. ಜೀನ್ಸ್ ಹಾಕೊಂಡು ಹೊಸ ಮನೆಗೆ, ಹೊಸ ರೋಡಿಗೆ ಟೈಲ್ಸ್ ಜೋಡಿಸುತ್ತೇವೆ. ಮಣ್ಣಲ್ಲಿ ಬದುಕು ಕಟ್ಟುವುದಿಲ್ಲ ಅನ್ನುತ್ತಾರೆ. ಅಪ್ಡೇಟ್ ಆಗಿದ್ದಾರೆ. ಆಗಬಾರದೇಕೆ?
ಹೇಗೋ ಏಗಿಕೊಂಡು ಕೃಷಿಕ ಬೆಳೆಯುವುದು ಒಂದೋ ಎರಡೋ ಬೆಳೆಯಷ್ಟೇ, ಉಳಿದಂತೆ ಕೊಳ್ಳುವ ಪ್ರತಿ ಸಾಮಾನಿಗೂ ನಗರದವರಷ್ಟೇ ಬೆಲೆ ಅವನೂ ತೆರಬೇಕು. ಮನೆಲಿ ಟಿವಿ ಇದೆ. ಕೈಯಲ್ಲಿ ಫೋನಿದೆ. ಅದರ ಬಿಲ್ಲಲ್ಲಿ ಕೃಷಿಕರಿಗೇನೂ ರಿಯಾಯಿತಿ ಇಲ್ಲ. ಸಿನೆಮಾ,ಬಟ್ಟೆಯಂಗಡಿ? ನಮಗೂ ನಿಮ್ಮಷ್ಟೇ ಬೆಲೆ. ಒಟ್ಟಿನಲಿ “ಕಾಸ್ಟ್ ಆಫ್ ಲಿವಿಂಗ್” ಜಾಸ್ತಿಯಾಗಿದೆ. ಆದರೆ ಬೆಳೆಗಳ ಬೆಲೆ ಏರಿತೇ? ಏರುವುದು ಹಾಳಾಗಲಿ ಬೆಲೆಯೇ ಇಲ್ಲವಲ್ಲ. ಈ ಪರಿಯ ಕೂಲಿ ಕೊಟ್ಟು , ಕರೆಂಟು ಕೈಕೊಟ್ಟು, ಏನೇನೋ ಸರ್ಕಸ್ ಮಾಡಿ ಬೆಳೆದು ತಂದರೆ “ಮೂರು ಕಾಸಿಗೆ ಕೊಡಿ” ಅಂತ ನೀವು ಕೇಳಿದರೆ. ರಸ್ತೆಗೆ ಸುರಿದುಹೋಗಬೇಕು ಅನಿಸುವಷ್ಟು ಸಿಟ್ಟು ಬರುವುದು ತಪ್ಪೇ? “ಮಾರಿಹಾಕಿಬಿಡಬೇಕು” ಅನ್ನುವ ಯೋಚನೆ ಸುಳಿದುಹೋದರೆ ತಪ್ಪೇ? ಕೃಷಿ, ನೇಕಾರಿಕೆ ಎರಡೂ ಬದುಕು ಕೊಡದಿದ್ದಾಗ ಆ ಹುಡುಗರು ಬಿಗ್ ಬಝಾರಿನಲ್ಲಿ ಸೇಲ್ಸ್ ಬಾಯ್ ಆಗಿದ್ದು ತಪ್ಪೇ?
“ದನಗಳಿದ್ವು ದನದ ಹಟ್ಟಿ ಬೇಕಾಗಿತ್ತು. ಈಗ ಹಸ್ಗಳೇ ಇಲ್ಲ, ಹಟ್ಟಿ ಯಾಕೆ? ಇದನ್ನ ಮಾರಿಬಿಡೋಣ” ಅಂದರೆ ಅಪ್ಪ ಒಪ್ಪುವುದಿಲ್ಲ. ನಮ್ಮಪ್ಪ ಶ್ರಧ್ದೆಯ ಕೃಷಿಕ ಪಾಪ ಅಂತೆಲ್ಲ ಮಿಸ್ಟೇಕು ಮಾಡಿಕೊಳ್ಳಬೇಡಿ ಮತ್ತೆ, ಅವರ ಕನಸು ಬೇರೆಯೇ ಇದೆ. ಕೇಳಿ, “ಇನ್ನೇನ್ ದ್ಯಾವಲಾಪುರದ್ ಗಂಟ ಸಿಟಿ ಬಂದೋಯ್ತು. ಇನ್ ಐದ್ ವರ್ಷ ತಡ್ಕಂಡ್ರ ನಮ್ಮೂರೇ ಸಿಟಿ ಆಯ್ತದ. ಐದಲ್ಲದೇ ಹೋದ್ರ ಹತ್ತಾಬುಡು . ಆಗ ಬಾಡಿಗೆಗ್ ಬತ್ತರ ಜನ. ಮನ ಕಟ್ಟಿಸಿ ಬಾಡಿಗೆಗ್ ಕೊಡಬೋದು. ಊರೊಳಗಿನ್ ಜಾಗ ಮಾರಕಾದ್ದ? ಸರ್ಕಲ್ಲು” ಅನ್ನುತ್ತಾರೆ. “ಓಹೋ ಕೆ ಆರ್ ಸರ್ಕಲ್ಲು” ಅಂತ ರೇಗಿಸುತ್ತೇನೆ. ಹಾಗಾದರೆ ಈಗ ಜಮೀನು ಉಳಿಸಿಕೊಂಡಿರೋರೆಲ್ಲ ಸಿಟಿ ಬರಲಿಕ್ಕೆ , ರೇಟು ಹೆಚ್ಚಲಿಕ್ಕೆ ಕಾಯ್ತಿರೋರಾ? ಅನುಮಾನವಾಗುತ್ತದೆ. “ಅದ್ಯಾವತ್ತೂ ಆಗಲ್ಲ ನಮ್ಮದು ಗ್ರೀನ್ ಬೆಲ್ಟ್ ಅಂತ ಘೋಷಣೆಯಾಗದೆ. ಯಾವನೂ ಸೈಟ್ ಗೀಯ್ಟ್ ಮಾಡಂಗಿಲ್ಲ” ಅನ್ನುತ್ತೇನೆ. ಆದರೆ ನನ್ನ ಮಾತಿನ ಮೇಲೆ ಪೂರ್ತಿ ನಂಬಿಕೆ ನನಗೇ ಇಲ್ಲ. ಯಾಕಂದರೆ ಜೆಪಿನಗರದ ಪಕ್ಕದ ನನ್ನ ಅತ್ತೆಯ ಊರು ಗೆಜ್ಜಗಳ್ಳೀಲಿ ಆಗಲೇ ಜನ ಬಾಡಿಗೆಗೆ ಬಂದಾಗಿದೆ. ಒಂದಲ್ಲ ಒಂದು ದಿನ ಊರ ನಡುಮಧ್ಯದ ನಮ್ಮ ದನದ ಹಟ್ಟಿ ಇರೋ ಜಾಗ ಆಟೋ ಸ್ಟಾಂಡ್ ಆಗಿಬಿಡಬಹುದಾ? ಅಲ್ಲೊಂದು ಕಾಂಪ್ಲೆಂಕ್ಸು. ಅಂಗಡಿ.. ಬೇಕರಿ .. ಮೆಡಿಕಲ್ ಶಾಪು….. ಈ ಕನಸು ನಮ್ಮೂರ ಜನರಿಗೆ ಸ್ವರ್ಗಸಮಾನವಾದ ಕನಸಾಗಿ ಹಿರಿ ಹಿರಿ ಹಿಗ್ಗಿಸುತ್ತಿದ್ದರೆ ನನಗೆ ಮಾತ್ರ ಕೊಚ್ಚಿಕೊಂಡು ಹೋಗುವ ಭಯ ಆವರಿಸುತ್ತದೆ. ನಿಜ, ಇದು ಸುನಾಮಿಯೇ ಸರಿ. ಹೇಗೆ ಬಚಾವಾಗುವುದು?
ಮೊನ್ನೆ ದುಬೈಯಿಂದ ಬಂದ ಮೈದುನ ತಾನು ಕೊಂಡ ಹೊಸ ಸೈಟು ತೋರಿಸಲು ಕರೆದುಕೊಂಡು ಹೋದ. ಬೆಂಗಳೂರಿನ ಉಲ್ಲಾಳದ ಬಳಿ. ಮತ್ತೀಕೆರೆ ಅಂತಿರಬೇಕು ಆ ಊರ ಹೆಸರು. ಬರೋಬ್ಬರಿ 60 ಲಕ್ಷ. ಬಾಪ್ರೇ..ಇಲ್ಲಿ ಮಣ್ಣೂ ಹೊನ್ನೂ ಬೇರೆ ಅಲ್ಲವೇ ಅಲ್ಲ. ಮತ್ತೀಕೆರೆ. ಅಲ್ಲೊಂದು ಕೆರೆಯಿದ್ದಿರಬಹುದಾ? ಊರಿದ್ದಿರಬಹುದಾ? ಒಂದು ಸಣ್ಣೇ ಸಣ್ಣ ಕುರುಹೂ ಸಿಗಲಿಲ್ಲ. ಗಾಂಧೀಬಝಾರಿನಲ್ಲಿ ಮೈಲಾರಿ ಹೊಟೆಲು ಶುರುವಾಗಿದೆಯಂತೆ. ಟೇಸ್ಟು ಮಾಡೋಣ ಅಂತ ಹೋದರೆ. ಅಲ್ಲಿ ಹೋಟೆಲಿನ ಮುಂದೆ ಸೈಕಲ್ಲಿನಲ್ಲಿ ಒಬ್ಬಾತ ಸೊಪ್ಪು ಮಾರುತ್ತಿದ್ದ . ಅಪ್ಪನದೇ ವಯಸ್ಸು. ಅವನು ಬಾಯಿ ಬಿಡುತ್ತಲೇ ಭಾಷೆ ಅವನ ಸೀಮೆ ಯಾವುದೆಂದು ಹೇಳಿತ್ತು . ವಿಚಾರಿಸಿದೆ “ತುಕಡಿಮಾದಯ್ಯನಹುಂಡಿ” . “ನಿಮ್ಮೂರಲ್ಲೆಲ್ಲ ಈಗ ಕೋಟಿ ಕೋಟಿ ಅಲ್ವಾ ಜಮೀನು? ನಿಮಗ್ ಜಮೀನಿರ್ಲಿಲ್ವಾ? ಕೇಳಿದೆ. “ಇತ್ತು ಅನ್ನಿ, ಎಂಟೆಕರೆ ಇತ್ತು.ತೆಂಗಿನ ತ್ವಾಟ. ಮಾರಿ ಆಗ್ಲೇ 9 ವರ್ಷ ಆಗೋಯ್ತು . ಕಮ್ಮಿ ಇದ್ದಾಗ್ಲೇ ಮಾರ್ಬುಟ್ಟಿ. ಕಾಸು ಎತ್ತೆತ್ತಗೋ ಹೊಂಟೋಯ್ತು.” ಅಂದ. “ಈಗ ಊರಲ್ಲಿಲ್ವ? ಕೇಳಿದೆ. “ಇಲ್ಲ ಅನ್ನಿ, ನನ್ ಮಗ ಒಬ್ಬ ಮೈಸೂರ್ ರೋಡ್ ಪೆಪ್ಸಿ ಕಂಪನೀಲಿ ಕೆಲ್ಸ ಮಾಡ್ತನ. ಇನ್ನೊಬ್ಬ ಆಟೋ ಓಡುಸ್ತನ. ನಾನು ಕೂತಿರದೇನ ಅಂತ ಸೊಪ್ ಮಾರ್ತೀನಿ.. ಕೆಂಗೇರಿಲಿ ಮನ ಮಾಡಿಂವಿ” ಅಂದ. ಮನೆಗೆ ಬಂದು ಅಮ್ಮನಿಗೆ ಫೋನು ಮಾಡಿದರೆ. “ಶಾಂತಿ ಬಂದಳ. ಪಾಪ ಏನೇನೋ ಕಷ್ಟ ಅವಳದು” ಅಂದರು. “ಅವಳಿಗೆಂತದ್ ಕಷ್ಟ.? ಕೋಟ್ಯಾಧೀಶ್ವರಿ. ಜಮೀನ್ ಮಾರಿದ್ ದುಡ್ಡಲ್ಲಿ ನಮ್ಮನ್ನೇ ಕೊಂಡ್ಕೋತಾಳೆ” ಅಂದೆ. “ಅಯ್ಯೋ ಅದೆಲ್ಲ ಆಗ, ಮಾರಿದ್ದೂ ಆಯ್ತು. ಅವಳ ಮಕ್ಕಳು ಕಳೆದಿದ್ದೂ ಆಯ್ತು. ಈಗ ಪ್ರಕಾಶ ಯಾವುದೋ ಟೈಲ್ಸ್ ಫ್ಯಾಕ್ಟರಿ ಕೆಲ್ಸಕ್ ಹೋಗ್ತಾ ಇದಾನಂತ.” ಅಂದರು.
ಅಲ್ಲೆಲ್ಲೋ ವಿಶ್ವಮಟ್ಟದಲ್ಲಿ ಮುಂದುವರೆದ ರಾಷ್ಟ್ರಗಳ ಆರ್ಥಿಕ ತಜ್ಞರು ಕೂತು ಚಿಂತಿಸುತ್ತಾರೆ. “ಭಾರತದ ಹಳ್ಳಿಗಳನ್ನ ಹೇಗೆ ಉಧ್ಧಾರ ಮಾಡಬೇಕು” “ನಗರಗಳನ್ನ ಹೇಗೆ ಸುಂದರಗೊಳಿಸಬೇಕು?” ನಮ್ಮ ಸರ್ಕಾರಗಳೂ ಯೋಜನೆ ಸಿದ್ದಪಡಿಸುತ್ತವೆ. “ನರ್ಮ್ ಯೋಜನೆ”. ಮೈಸೂರಂತ ನಗರಗಳನ್ನ ಅಭಿವೃಧ್ದಿಪಡಿಸಲು. ಸಾವಿರಾರು ಕೋಟಿಗಳ ಪ್ರಾಜೆಕ್ಟ್ ಜಾರಿಯಾಗಿದೆ. ಕಂಪನಿಗಳಲಿ ಹೊಸ ಬೀಜಗಳು ಸೀಲ್ ಒತ್ತಿಸಿಕೊಳ್ಳುತ್ತಿವೆ. ಬೆನ್ನುಗಳು ಯೂರಿಯಾ ಮೂಟೆಗಳ ಹೊರುತ್ತಲೇ ಇವೆ. ಇನ್ನೆಲ್ಲೋ ಸುತ್ತೋಲೆ ಹೊರಟಿದೆ. “ಹಳ್ಳಿಗಳ ಜಮೀನಿಲ್ಲದ ಅನುತ್ಪಾದಕ ವರ್ಗವನ್ನು ನಗರಗಳಿಗೆ ಕರೆತರಬೇಕು.” “ಸಾಫ್ಟ್ ವೇರ್ ಇಂಜಿನಿಯರ್ ಕೃಷಿಕನಾಗಲು ಕೆಲಸ ರಿಸೈನು ಮಾಡಿದ್ದಾನೆ. “ಕೃಷಿಯಲ್ಲಿ ಹೊಸ ತಂತ್ರಜ್ಞಾನದ ಅಳವಡಿಕೆ” ಬಗ್ಗೆ ಯೂನಿವರ್ಸಿಟಿಯಲ್ಲಿ ಕಾರ್ಯಾಗಾರ ನಡೆದಿದೆ. ಅಲ್ಲಿ ದೂರಾತಿದೂರದಲ್ಲಿ ಚರ್ಚೆ ನಡೆದಿದೆ. “ ಸಾವಿರಾರು ಎಕರೆ ಕೃಷಿ ಭೂಮಿಯನ್ನ ಕಂಪನಿಗಳಿಗೆ ಒಪ್ಪಿಸಿಬಿಡುವುದು. ಅವರೇ ಬೆಳೆಯುವುದು. ಮಾರುವುದು.ನಮ್ಮವರು ಅಲ್ಲಿ ಹೋಗಿ ಫ್ಯಾಕ್ಟರಿಯಲಿ ದುಡಿದ ಹಾಗೆ ದುಡಿಯುವುದು” ಯೋಜನೆಯನೀಲಿ ನಕ್ಷೆ ಆಗಲೇ ಸಿಧ್ದವಾಗಿದೆ. ತೋಟಗಾರಿಕಾ ಇಲಾಖೆಯಲಿ ಹೊಸ ಯೋಜನೆ ಜಾರಿಯಾಗುತ್ತಿದೆ. ಎರೆಹುಳುಗಳೂ ಅಲ್ಲಲ್ಲಿ ಕಾಲಾಡಿಸುತ್ತಿವೆ. ಆಕಾಶವಾಣಿ.. ಕೃಷಿರಂಗ ಕಾರ್ಯಕ್ರಮ ನಡೆಯುತ್ತಲೇ ಇದೆ. ತಾಲೋಕು ಕಛೇರಿಯಲಿ ಜಮೀನುಗಳ ಸರ್ವೆನಂಬರುಗಳ ಮೇಲೆ ಖಾತೆದಾರರ ಹೆಸರು ಮಾತ್ರ ಬದಲಾಗುತ್ತವೇ ಇದೆ.
ಸುನಾಮಿಯ ಸೂಚನೆ ಮೊದಲು ಪ್ರಾಣಿಗಳಿಗೆ ಗೊತ್ತಾಗುತ್ತದಂತೆ. ಚಾಮುಂಡಿಬೆಟ್ಟದ ತಪ್ಪಲಿನ ಕೋತಿಗಳು ಸುಮ್ಮನಿರುವುದ್ಯಾಕೆ ಮತ್ತೆ? ಈ ಸುನಾಮಿ ಪ್ರಕೃತಿದತ್ತವಲ್ಲ. ಯಾರೋ ಎಲ್ಲಿಂದಲೋ ಹರಿಯಬಿಟ್ಟದ್ದು ಅನ್ನುವ ನನ್ನ ಅನುಮಾನ ಮಾತ್ರ ದಿನೇ ದಿನೇ ಬಲಗೊಳ್ಳುತ್ತಲೇ ಇದೆ. ಆದರೆ ಯಾರು? ಎಲ್ಲಿ? ಹೇಗೆ? ಯಾಕೆ? ಹುಡುಕಲು ಹೋದರೆ ಎಲ್ಲೆಲ್ಲೂ “ನಿಗೂಢಮನುಷ್ಯರು”.. ತಡಕಾಡಿಷ್ಟೂ “ಚಿದಂಬರ ರಹಸ್ಯ” ಮತ್ತೆ ಮತ್ತೆ ಯಾಕೋ ಕಿವಿಯಲ್ಲಿ ಅದೇ ಸಾಲು ಗುಂಯ್ಗುಡುತ್ತದೆ. “ದೂರದಿಂದಲೇ ಜೀವ ಹಿಂಡುತಿದೆ ಕಾಣದೊಂದು ಹಸ್ತಾ… ಆದೇವೆ ಬಂಧಮುಕ್ತಾ???????
 

‍ಲೇಖಕರು G

September 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. narendra

    the destruction is not too far, we are sitting on the tsunami, thanks for a beautiful but painful article!

    ಪ್ರತಿಕ್ರಿಯೆ
  2. Gn Nagaraj

    ವಿವರಿಸಿರುವ ರೀತಿ ಚೆನ್ನಾಗಿದೆ . ಇಂತ ಸುನಾಮಿಗಳು ಹಲವನ್ನು ರಾಜ್ಯದ ತುಂಬೆಲ್ಲಾ ನೋಡಿರುವ , ಕೆಲವು ಕಡೆ ಅದನ್ನು ತಡೆಗಟ್ಟುವ ಪ್ರಯತ್ನ ಮಾಡಿ ಅಯಶಸ್ವಿ , ಯಶಸ್ವಿ ಎರಡೂ ಆಗಿರುವ ನಮಗೆ ಈ ವಸ್ತು ಹೊಸದಲ್ಲ. ವಿವರಣೆಯ ರೀತಿ ಹೊಸದು. ಿದನ್ನು ಬರೆಯುತ್ತಿರುವಾಗ ದೇವನಹಳ್ಳಿಯ ಬಸ್ ನಲ್ಲಿದ್ದೇನೆ . ಅಂದರೆ ಅರ್ಥವಾಗಿರಬೇಕು – ರಾಜ್ಯದಲ್ಲಿ ಻ತಿ ದೊಡ್ಡ ಸುನಾಮಿ ಎದುರಿಸಿದ ಜಾಗವದು. ಆದರೆ ಕೆಲ ಮುಖ್ಯ ತಕರಾರುಗಳಿವೆ . ಮುಂದಿನ ಲೇಖನಕ್ಕಾಗಿ ಕಾಯುತ್ತೇನೆ

    ಪ್ರತಿಕ್ರಿಯೆ
  3. naveen pawar

    ಚಿಂತನಾರ್ಹ ಬರಹ.ಈ ಬರಹವನ್ನ ಓದುತಿದ್ದಂತೆ ಎದುರುಗೊಂಡದ್ದು,ಬಿ. ಸುರೇಶ್ ಅವರ ಪುಟ್ಟಕ್ಕನ ಹೈವೆ ಚಲನಚಿತ್ರ.ನಿಜಕ್ಕೂ ಆ ಚಿತ್ರವನ್ನ ಕಣ್ಣೆದುರಿಗೆ ಕಂಡತಾಯಿತು.ಅಲ್ಲಿಯ ಪುಟ್ಟಕ್ಕನ ಪಾತ್ರಧಾರಿ ತನ್ನ ಜಮೀನನ್ನು ಕಳೆದು ಕೊಂಡು,ತನ್ನ ಗಂಡನ ಗೋರಿಯನ್ನು ತನ್ನ ಜಮೀನಲ್ಲಿ ದಫನ್ ಮಾಡಿದ್ದು.ಸರ್ಕಾರ ಅಲ್ಲಿ ಹೈವೆ ಬರುವ ಸಲುವಾಗಿ ಎಲ್ಲರ ಜಮೀನನ್ನು ವಶಪಡಿಸಿಕೊಳ್ಳುವುದು.ಅದಕ್ಕಾಗಿ ಪುಟ್ಟಕ್ಕನ ವಿರೋಧ.ಪುಟ್ಟಕ್ಕ ತನ್ನ ಜಮೀನಲ್ಲಿದ್ದ ತನ್ನ ಗಂಡನ ಸಮಾಧಿಯ ಮೇಲಿಟ್ಟಿದ್ದ ಭಾವನಾತ್ಮಕ ಸಂಭಂದ.ಪುಟ್ಟಕನ ಮೇಲಾಗುವ ಲೈಂಗಿಕ ಶೋಷಣೆ.ತನ್ನ ಮಗಳು ಹಸಿವಿನ ಬದುಕಿಗಾಗಿ ದೇಹವನ್ನ ಮಾರಿಕೊಳ್ಳುವುದು.ಅಲ್ಲಿಯ ಶೋಷಣೆಯನ್ನ ತೆರೆದಿಡುತ್ತದೆ.ಹೈವೆ ಬಂದ ನಂತರ ಇದು ನನ್ನೂರೇನಾ ಎನ್ನುವಸ್ಟೂ..ಬದಲಾದ ಪರಿಸ್ಥಿತಿ.ಇವೆಲ್ಲ ಇನ್ನೂ ಕೂಡ ಕಣ್ಣಿನಿಂದ ಮಾಸದಂತ ಘಟನೆಗಳು.ಅಂತೆಯೆ ನಾಗತಿಹಳ್ಳಿ ಚಂದ್ರಶೇಕರ್ ಅವರ ಪುಟ್ಟಕ್ಕನ ಮೆಡಿಕಲ್ ಕಾಲೇಜ್..ಕತೆ ಕೂಡ ಇದರ ಹೊರತೆನಲ್ಲ.ಈ ಕತೆಯ ಪುಟ್ಟಕ್ಕ ತನ್ನ ಜಮೀನೂ ಕಳೆದುಕೊಂಡು.ಅಲ್ಲೇ ಎದ್ದು ನಿಂತ.ಅಗಾಧ ಉದ್ದಗಲದ ಮೆಡಿಕಲ್ ಕಾಲೇಜಿನೆದುರು,ಟಿ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುವುದು ಶೋಷಣೆಯ ಪ್ರತಿಬಿಂಬವೇ..ಅಂತೆಯೇ ನಿಮ್ಮ ಕತೆಯೂ ಇದೆ ಎಳೆಯಿದ್ದರು ಕೂಡ.ಪಾತ್ರಗಳು ಬೇರೆ,ಭಾವಗಳು ಒಂದೇ ಎನ್ನುವ ಪರಿಕಲ್ಪನೆಯಲ್ಲಿ ಮೂಡಿಬಂದಿರುವುದು ಅಲ್ಲಿನ ಸಂಖೇತದಂತೆ ನಿಲ್ಲುತ್ತದೆ.ನಿಮ್ಮ ನಿರೂಪಣಾ ಶೈಲಿ ನಿಜಕ್ಕೂ ಬೇರೆಯದೆ.ಕತೆಗಳು ಒಂದೇ ಇರುತ್ತವೆ ಆದರೆ ಹೇಳುವ ಶೈಲಿಯ ಮೇಲೆ,ನಿರೂಪಣಾ ವಿಧಾನದ ಮೇಲೆ ಕತೆ ಓದಿಸಿಕೊಂಡು ಹೋಗುತ್ತದೆ.ಅದು ನಿಮ್ಮ ಬರಹವನ್ನ ಓದಿದ ನನ್ನ ಮಿತಿಗೆ ದಕ್ಕಿದ್ದು.
    7 mins · Like

    ಪ್ರತಿಕ್ರಿಯೆ
  4. Anonymous

    ABHIVRUDDI ENNUVUDU KEVALA ONDU MARICHIKE,MARALUGADINA OASIS IDDANTHE.THUMBA NIJAVAGI MOODIBANDIDE,ABHINANDANEGALU NIMAGE.NIMMA LEKHANAGALU NOORARLLA SAAVIRARU BARALI…..!!!!

    ಪ್ರತಿಕ್ರಿಯೆ
  5. Soory Hardalli

    Good article. I will give you one instance. Those days, at Kodagu district, rate of acre land was around one Rs. lakh. Once one big company came and purchased two acres of land for their resort by paying Rs. 50 lakh each. Then suddenly price of land increased to 50 lakh per acre. Rich people are killing the middle classes’ life. Very sad.

    ಪ್ರತಿಕ್ರಿಯೆ
  6. ನಾಗೇಂದ್ರ ಶಾನುಭೊಗ

    ಯೋಚನೆಗೆ ಹಚ್ಚಿತು. ನಿನ್ನ ಬದುಕು… ಬರಹ. ಇತಿಹಾಸ ದಾಖಲಾತಿಯಾಗಲಿ.

    ಪ್ರತಿಕ್ರಿಯೆ
  7. ಅಂಗಡಿ ಇಂದುಶೇಖರ

    ಎಂದಿನಂತೆ ವಾಸ್ತವ ಹಾಗೂ ಚಿಂತನಾರ್ಹ ಬರಹ. ಮೂರ್ನಾಲ್ಕು ವರ್ಷಗಳ ಹಿಂದೆ ಇದೇ ರೀತಿಯ ಸುನಾಮಿ ಗದಗ ಜಿಲ್ಲೆಯ ಹಳ್ಳಿಗುಡಿಯನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ ಹಳ್ಳಿಗಳಿಗೂ ಅಪ್ಪಳಿಸುವ ಹೆದರಿಕೆ ಒಡ್ಡಿತ್ತು. “ಪೋಸ್ಕೋ” ಎನ್ನುವ ಈ ಸುನಾಮಿ, ಆ ಏರಿಯಾದ ಹೊಲಗಳಿಗೆ ಎಕರೆಗೆ ಇಪ್ಪತ್ತೈದು ಲಕ್ಷದವರೆಗೂ ಬೆಲೆ ಕಟ್ಟಿತ್ತು. ಅಲ್ಲಿಯ ಕೆಲವು ರೈತರು ಹಣದಾಸೆಯಂಬ ಬಿಸಿಲುಗುದುರೆಯನ್ನು ಬೆನ್ನೂ ಹತ್ತಿದ್ದರು.
    ಆದರೆ ಗದುಗಿನ ತೋಂಟದಾರ್ಯ ಶ್ರೀಗಳು ಎನ್ನುವ ಮಹಾತಡೆಗೋಡೆಯ ನೆರವಿನಿಂದ ಈ ಸುನಾಮಿಯನ್ನು ಹಿಂದಕ್ಕೆ ಕಳುಹಿಸಲಾಯಿತು. ನಿರುದ್ಯೋಗ ನಿವಾರಣೆಗೆ ಹಾಗೂ ಅಭಿವೃದ್ಧಿಗಾಗಿ ದೊಡ್ಡ ಕೈಗಾರಿಕೆಗಳು ಬೇಕು ಅನ್ನುವದು ನಿಜ. ಆದರೆ ಫಲವತ್ತಾದ ಭೂಮಿಯನ್ನೇಕೆ ಇದಕ್ಕೆ ಬಲಿಕೊಡಬೇಕು ? ಸ್ವಲ್ಪ ಸಾಗಾಣಿಕೆ ಖರ್ಚನ್ನು ತೂಗಿಸಿಕೊಂಡು ಬರಡು ನೆಲದಲ್ಲಿ ಆ ಕಾರ್ಖಾನೆಗೆ ಜಾಗೆ ಕೊಡಬಹುದಿತ್ತಲ್ಲವೇ?

    ಪ್ರತಿಕ್ರಿಯೆ
    • ಕುಸುಮಬಾಲೆ

      ಅಂತಾ ಗೋಡೆಗಳು ಎಲ್ಲೆಡೆಯಲಿ ಏಳಲಿ ಇಂದುಶೇಖರ್ ಅವರೆ

      ಪ್ರತಿಕ್ರಿಯೆ
      • ಕುಸುಮಬಾಲೆ

        ನಿಮ್ಮೆಲ್ಲರ ಪ್ರತಿಕ್ರಿಯೆ ಇನ್ನೊಂದಷ್ಟು ಚಿಂತನೆಗೆ(ಚಿಂತೆಗೆ) ಹಚ್ಚಿದೆ. ಥ್ಯಾಂಕ್ಯು.

        ಪ್ರತಿಕ್ರಿಯೆ
  8. Kantha

    Exellent, realistic article and this is the condition of most of the villages around most of the cities of the state.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: