ಬರ್ತಿದೆ ಜೋಗಿ ಹೊಸ ಪುಸ್ತಕಗಳು

ಈ ಭಾನುವಾರ ಜೋಗಿಯವರ ಪುಸ್ತಕಗಳ ಬಿಡುಗಡೆ

ಕಥಾಸಂಕಲನದ ಒಂದು ಕತೆಯ ಹೆಸರು ಖಾಲಿ ಜೇಬು, ರಾಲಿ ಸೈಕಲ್. ಅದರ ಒಂದು ಭಾಗ ’ಅವಧಿ’ ಓದುಗರಿಗಾಗಿ :

ಕಾಮಾಕ್ಷಿ ಮೂಡಿಸಿದ ಕಂಪನ

ಇಡಿಯೂರು ಸೇರುವ ಹೊತ್ತಿಗೆ ಕುಂಡಿ ತರಚಿಕೊಂಡಿತ್ತು. ಅಣ್ಣನ ತೊಡೆಯ ಎರಡೂ ಬದಿಗಳು ಸೈಕಲಿನ ಸೀಟಿಗೆ ವರೆಸಿವರೆಸಿ ಕೆಂಪಾಗಿದ್ದವು. ನೆಟ್ಟಗೆ ನಡೆಯವುದಕ್ಕೂ ಆಗದೇ ಅವನು ಹೇತುಕೊಂಡು ಕುಂಡೆ ತೊಳೆಯದೇ ನಡೆಯುತ್ತಿರುವ ಹಾಗೆ ಕಾಣಿಸುತ್ತಿದ್ದ. ಹಿಂದಿನ ಸೀಟಿನ ಕ್ಲಿಪ್ಪಿಗೆ ಸಿಕ್ಕಿದ್ದ ನನ್ನ ಚಡ್ಡಿ ರಪ್ಪನೆ ಇಳಿಯುವ ಹೊತ್ತಿಗೆ ಹರಿದುಹೋಗಿತ್ತು. ಈ ಬಿಕನಾಸಿ ಸ್ಥಿತಿಯಲ್ಲಿ ನಾವು ಡಬಲ್ ಬೇವರ್ಸಿಗಳಂತೆ ಇಡಿಯೂರಿನ ಬಾಗಿಲಲ್ಲಿ ನಿಂತಿದ್ದೆವು.
ನಾನು ಅಣ್ಣನ ಮುಖ ನೋಡಿದೆ, ಅಣ್ಣನಿಗೆ ನೋವು ಬಿಟ್ಟರೆ ಬೇರೆ ಯಾವ ಗಾಬರಿಯೂ ಇದ್ದಂತಿರಲಿಲ್ಲ. ನನಗೂ ಯಾವ ಭಯವೂ ಇರಲಿಲ್ಲ. ಅರ್ಜೆಂಟಾಗಿ ಏನಾದರೂ ತಿನ್ನಬೇಕು ಅನ್ನಿಸುತ್ತಿತ್ತು. ದೊಡ್ಡಪ್ಪ ಶರ್ಟು ಎಳಕೊಳ್ಳದೇ ಇದ್ದರೆ ನೂರು ರುಪಾಯಿ ಕೈಯಲ್ಲಿರುತ್ತಿತ್ತು ಅಂದುಕೊಂಡೆ. ಅಣ್ಣನ ಜೋಬಲ್ಲಿ ದುಡ್ಡಿರಬಹುದು ಅನ್ನಿಸುತ್ತಿತ್ತು. ಆದರೆ ಅಣ್ಣ ಏನನ್ನೂ ತಿನ್ನುವ ಉಮೇದಿನಲ್ಲಿದ್ದಂತೆ ಕಾಣಲಿಲ್ಲ.
ಇಡಿಯೂರಿಗೂ ನಮ್ಮೂರಿಗೂ ನಲವತ್ತೈದು ಮೈಲಿ ದೂರ. ಅಷ್ಟೂ ದೂರವನ್ನು ಅಣ್ಣ ಒಂದೇ ರಭಸಕ್ಕೆ ಸೈಕಲ್ಲು ತುಳಿದುಕೊಂಡೇ ಕ್ರಮಿಸಿದ್ದ. ದೊಡ್ಡಪ್ಪ ಅಟ್ಟಿಸಿಕೊಂಡು ಬರುತ್ತಾರೆ ಅನ್ನುವ ಭಯದಲ್ಲಿ ದೊಡ್ಡ ದೊಡ್ಡ ಚಡಾವುಗಳಲ್ಲೂ ಅಣ್ಣ ಸೈಕಲ್ಲಿನಿಂದ ಇಳಿಯುವುದಕ್ಕೆ ಹೋಗಿರಲಿಲ್ಲ. ನಾನು ಮಾತ್ರ ಸೈಕಲ್ಲಿಂದ ಛಂಗನೆ ಜಿಗಿದು ಸೈಕಲ್ಲು ತಳ್ಳುತ್ತಿದ್ದೆ. ಸಪಾಟು ರಸ್ತೆ ಬರುತ್ತಿದ್ದಂತೆ ಮತ್ತೆ ಹಿಂದಿನ ಸೀಟಿಗೆ ಜಿಗಿದು ಕೂರುತ್ತಿದ್ದೆ.
ಇಡಿಯೂರು ಕತ್ತಲು ಬೆಳಕಲ್ಲಿ ಮುಳುಗಿ ನಮ್ಮ ಭವಿಷ್ಯದ ಸಂಕೇತದಂತೆ ಕಾಣುತ್ತಿತ್ತು. ಇಡಿಯೂರಲ್ಲಿ ಒಂದು ಹೆಸರಿಲ್ಲದ ಹೊಳೆ ಹರಿಯುತ್ತಿತ್ತು. ಅಲ್ಲಿಗೆ ಹೋಗಿ ಸ್ನಾನ ಮುಗಿಸಿ ಬರೋಣ ಅಂದ ಅಣ್ಣ. ನನಗೆ ಆ ಕತ್ತಲಲ್ಲಿ ಆ ತಣ್ಣೀರಿಗೆ ಬೀಳುವ ಮನಸ್ಸಿರಲಿಲ್ಲ. ನೀನು ಸ್ನಾನ ಮಾಡು, ನಾನು ಬಂದ್ ಕೂತ್ಕೋತೀನಿ ಅಂದೆ. ಅಣ್ಣ ಹೊಳೆಗಿಳಿದು ಮನಸೋ ಇಚ್ಛೆ ಈಜಿದ. ನಾನು ಹೊಯಿಗೆಯ ಮೇಲೆ ಮಲಗಿಕೊಂಡು ನಕ್ಷತ್ರ ಲೆಕ್ಕ ಮಾಡುತ್ತಿದ್ದೆ.
ಅಣ್ಣ ಇಡಿಯೂರಿಗೆ ಬರುತ್ತಾನೆ ಅಂತ ನಂಗೆ ಗೊತ್ತಿರಲಿಲ್ಲ. ಎಲ್ಲಿಗಾದರೂ ಓಡಿಹೋಗೋಣ ಅಂದುಕೊಂಡಿದ್ದೆ ನಾನು. ಇಡಿಯೂರಿಗೆ ಬಂದ ಮೇಲೇ ಅಣ್ಣ ಎಷ್ಟು ಬುದ್ಧಿವಂತ ಅನ್ನುವುದು ನನಗೆ ಅರ್ಥವಾದದ್ದು. ಅಲ್ಲಿಗೆ ಬರುವ ಮೂಲಕ ನಾವು ದೊಡ್ಡಪ್ಪನ ಕಾಟದಿಂದ ಪಾರಾಗಿದ್ದೆವು. ಯಾವ ಕಾರಣಕ್ಕೂ ದೊಡ್ಡಪ್ಪ ಇಡಿಯೂರಿಗೆ ಕಾಲಿಡುವ ಹಾಗಿರಲಿಲ್ಲ. ಇಡಿಯೂರು ಹೊಕ್ಕರೆ ಕೊಲೆಯಾಗುವುದರಲ್ಲಿ ಅನುಮಾನವೂ ಇರಲಿಲ್ಲ.
ಇಡಿಯೂರಿನ ಶಾನುಭೋಗರ ತಮ್ಮನನ್ನು ದೊಡ್ಡಪ್ಪ ಇಡಿಯೂರಿನ ಜಾತ್ರೆಯಲ್ಲೇ ಹಿಗ್ಗಾಮುಗ್ಗಾ ಬಾರಿಸಿದ್ದ. ಎಷ್ಟೋ ವರುಷಗಳ ಹಿಂದೆ ದೊಡ್ಡಪ್ಪ ಜಾತ್ರೆಗೆ ತೆಂಗಿನಕಾಯಿ ಮಾರೋದಕ್ಕೆ ಬಂದಿದ್ದನಂತೆ. ಬೇರೆ ಊರಿನವರು ತೆಂಗಿನಕಾಯಿ ಮಾರೋ ಹಾಗಿಲ್ಲ ಅಂತ ಶಾನುಭೋಗರ ತಮ್ಮ ತಕರಾರು ಮಾಡಿದನಂತೆ. ದೊಡ್ಡಪ್ಪನ ತೆಂಗಿನಕಾಯಿ ಅಂಗಡಿಯನ್ನು ಚೆಲ್ಲಾಪಿಲ್ಲಿ ಮಾಡುವುದಕ್ಕೆ ಹೋದನಂತೆ. ದೊಡ್ಡಪ್ಪ ಸಿಟ್ಟು ಬಂದು ಒಂದು ತೆಂಗಿನಕಾಯಿ ಎತ್ತಿಕೊಂಡು ಅದನ್ನು ಅವನ ತಲೆಯ ಮೇಲೆ ಒಡೆದರಂತೆ. ಆ ರಭಸಕ್ಕೆ ತೆಂಗಿನಕಾಯಿ ಒಳಗಿಂದ ಕೆಂಪಗಿನ ನೀರು ಬಂತಂತೆ. ಕೆಳಗೆ ಬಿದ್ದವನು ಶಾನುಭೋಗರ ತಮ್ಮ ಅಂತ ಗೊತ್ತಾಗುತ್ತಲೇ ಊರವರೆಲ್ಲ ಸೇರಿಕೊಂಡು ದೊಡ್ಡಪ್ಪನನ್ನು ಅಟ್ಟಿಸಿಕೊಂಡು ಬಂದರು. ದೊಡ್ಡಪ್ಪ ಮಾರಾಟಕ್ಕೆ ತೆಗೆದುಕೊಂಡು ಹೋದ ಒಂದೂವರೆ ಸಾವಿರ ತೆಂಗಿನಕಾಯಿಗಳನ್ನು ಅಲ್ಲೇ ಬಿಟ್ಟು ಅಡ್ಡಹಾದಿಯಲ್ಲಿ ಓಡಿಹೋಗಿ ಊರು ಸೇರಿಕೊಂಡರು.
ಶಾನುಭೋಗರ ತಮ್ಮ ಆಸ್ಪತ್ರೆಯಲ್ಲಿ ಚೇತರಿಸಿಕೊಂಡರೂ ಅವನಿಗೆ ಬುದ್ಧಿಭ್ರಮಣೆಯಾಯಿತಂತೆ. ಶಾನುಭೋಗರು ದ್ವೇಷ ಸಾಸಲಿಕ್ಕೆ ಹೊರಟು ದೊಡ್ಡಪ್ಪನನ್ನು ಹುಡುಕಿಕೊಂಡು ಅಲೆದಾಡಿದರು. ದೊಡ್ಡಪ್ಪ ಊರೂರು ತಿರುಗಿ ಒಂದಷ್ಟು ಕಾಲ ಅವರ ಕೈಗೆ ಸಿಕ್ಕಲಿಲ್ಲ. ಆಮೇಲೆ ಇಬ್ಬರೂ ಗುಂಪು ಕಟ್ಟಿಕೊಂಡು ಓಡಾಡಿ ರಕ್ತಪಾತವಾಗಿ, ಕೊನೆಗೆ ದೊಡ್ಡಪ್ಪ ಇಡಿಯೂರಿಗೆ ಕಾಲಿಟ್ಟರೆ ಮಾತ್ರ ಕೊಲ್ಲುವುದು ಎಂಬಲ್ಲಿಗೆ ದ್ವೇಷ ಬಂದು ನಿಂತಿತ್ತು.
ಅಣ್ಣ ಈಜಿ, ಅದೇ ಒದ್ದೆ ಬಟ್ಟೆ ಹಾಕಿಕೊಂಡು ಮೇಲೆ ಬಂದ. ನಾನು ಸೈಕಲ್ಲು ತಳ್ಳುತ್ತಾ ಅವನ ಹಿಂದೆಯೇ ಹೊರಟೆ. ಒದ್ದೆ ಶರಟನ್ನು ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಒದ್ದೆ ಪಂಚೆಯನ್ನು ಹಿಂಡಿ ಉಟ್ಟುಕೊಂಡು ಒದ್ದೆ ತಲೆಯಲ್ಲಿ ಅಣ್ಣ ನಡೆಯುತ್ತಿದ್ದಂತೆ, ನನಗೆ ಹಸಿವು ಹೆಚ್ಚತೊಡಗಿತು. ಅಣ್ಣನಿಗೂ ಹಸಿವಾಗಿತ್ತೆಂದು ಕಾಣುತ್ತದೆ.
ಇಡಿಯೂರಿನ ಹೊಟೇಲುಗಳೆಲ್ಲ ಬಾಗಿಲು ಮುಚ್ಚುವ ಹಂತದಲ್ಲಿದ್ದವು. ಮಾರಾಟವಾಗದ ಒಣಗಿದ ಚಪಾತಿ, ಕಲ್ಲುಕಟ್ಟಿದ ಉಪ್ಪಿಟ್ಟು, ಆಕಾರ ಕಳಕೊಂಡ ಪೂರಿ ಒಂದೆರಡು ಹೊಟೇಲುಗಳಲ್ಲಿ ಕಣ್ಣಿಗೆ ಬಿದ್ದವು. ಅಣ್ಣ ಅದ್ಯಾವ ಹೊಟೇಲಿಗೂ ಹೋಗದೇ ಸೀದಾ ನಡಕೊಂಡು ಹೋಗುತ್ತಿದ್ದ.
ಹಳೆ ಬಸ್‌ಸ್ಟಾಂಡಿನ ಹತ್ತಿರ ಹೊಟೇಲ್ ಗಣೇಶಾ ಕಾಣಿಸಿತು. ಆ ಹೊಟೇಲಿನವರು ಅಣ್ಣನಿಗೆ ಪರಿಚಯ ಅಂತ ಕಾಣುತ್ತದೆ. ಹೋದ ಕೂಡಲೇ ಮಾತಾಡಿಸಿದರು. ಅಣ್ಣ ನನ್ನ ಕಡೆ ನೋಡಿ ತಿಂಡಿ ತಿನ್ನು ಅಂದ. ದುಡ್ಡು ಎಂಬಂತೆ ಅಣ್ಣನ ಮುಖ ನೋಡಿದೆ. ತಿನ್ನು ಹೋಗೋ ಅಂತ ಕ್ಯಾಷ್ ಕೌಂಟರಿನಲ್ಲಿ ಕೂತಿದ್ದವರೂ ಹೇಳಿದರು. ನಾನು ತಿಂಡಿಯ ಕಪಾಟು ನೋಡುತ್ತಾ ದೋಸೆ ಕೊಡಿ ಅಂದೆ. ಹಳಸಿದ ಚಟ್ನಿ, ಒಣಗಿದ ದೋಸೆ ಬಂತು. ಅಣ್ಣನಿಗೂ ಅದನ್ನೇ ತಂದುಕೊಟ್ಟರು. ಅಣ್ಣ ಅದನ್ನು ತಿರುಗಿಯೂ ನೋಡದೇ, ಕ್ಯಾಷ್ ಕೌಂಟರಿನಲ್ಲಿ ಕೂತವರ ಹತ್ತಿರ ಮಾತಾಡುತ್ತಲೇ ಇದ್ದ.
ನಾವು ರಾತ್ರಿ ಅದೇ ಹೊಟೇಲಿನ ಬೆಂಚಿನಲ್ಲಿ ಮಲಗಿದೆವು. ನಾವು ಅಲ್ಲಿಯೇ ಕೆಲಸಕ್ಕೆ ಸೇರುವುದೆಂದೂ, ಅಣ್ಣ ತಿಂಡಿ ದೋಸೆ ಇಡ್ಲಿ ಮಾಡುವುದೆಂದೂ ನಾನು ಸಪ್ಲೈ ಮಾಡುವುದೆಂದೂ, ಅಣ್ಣನಿಗೆ ಇನ್ನೂರು ರುಪಾಯಿ, ನನಗೆ ಎಪ್ಪತ್ತೈದು ರುಪಾಯಿ ಸಂಬಳ ಗೊತ್ತು ಮಾಡಿದ್ದಾರೆಂದೂ ಅಣ್ಣ ಹೇಳಿದ. ಮಾರನೇ ದಿನದಿಂದ ನಮ್ಮ ಹೊಸ ಜೀವನ ಶುರುವಾಯಿತು.
ಹೊಟೇಲು ಕೆಲಸ ಚೆನ್ನಾಗಿಯೇ ಇತ್ತು. ದಿನಕ್ಕೆ ಐವತ್ತೋ ಅರವತ್ತೋ ಗಿರಾಕಿಗಳು ಬರುತ್ತಿದ್ದರು. ಯಾರೂ ತೀರಾ ಅವಸರದ ಗಿರಾಕಿಗಳು ಇರುತ್ತಿರಲಿಲ್ಲ. ಬಂದವರು ಅವಲಕ್ಕಿ ಉಪ್ಪಿಟ್ಟು, ಪೂರಿ, ಇಡ್ಲಿ ಸಾಂಬಾರು ಹೀಗೆ ಜೋಬಿಗೆ ಒಪ್ಪುವಂಥ ತಿಂಡಿ ತಿಂದು, ಕಾಫಿ ಕುಡಿದು, ಅಲ್ಲೇ ಬೀಡಿ ಸೇದಿ ಹೋಗುತ್ತಿದ್ದರು. ಸೋಮವಾರ ಸಂತೆಯಾದ್ದರಿಂದ ಸಿಕ್ಕಾಪಟ್ಟೆ ಮಂದಿ ಬರುತ್ತಿದ್ದರು. ಅವರಿಗೆಲ್ಲ ತಿಂಡಿ ಕೊಡುವುದು ಕಷ್ಟದ ಕೆಲಸವೇನೂ ಆಗಿರಲಿಲ್ಲ. ಆದರೆ ಯಜಮಾನ ಜವಾಬ್ದಾರಿಯ ಕೆಲಸವೊಂದನ್ನು ಹೊರಿಸಿಬಿಟ್ಟಿದ್ದ. ಹೊಟೇಲಿಗೆ ಬಂದ ಗಿರಾಕಿಗಳು ದಿನವೂ ಬರುವವರಾಗಿದ್ದರೆ ಅವರ ತಿಂಡಿ ಕಾಫಿಗೆ ಒಂದು ರೇಟು, ಅದೇ ಮೊದಲ ಸಲ ಬಂದು, ಮತ್ತೆಂದೂ ಬಾರದೇ ಇರುವವರಾಗಿದ್ದರೆ ಅವರಿಗೇ ಒಂದು ರೇಟು ನಿಗದಿ ಮಾಡಲಾಗಿತ್ತು. ದಿನಾ ಬರುವವರಿಗೆ ಎರಡು ಇಡ್ಲಿಗೆ ಒಂದು ರುಪಾಯಿ ಇದ್ದರೆ, ಒಂದೇ ಸಲ ಬಂದುಹೋಗುವ ಗಿರಾಕಿಗಳಿಗೆ ಒಂದೂವರೆ ರುಪಾಯಿ. ತಿಂಡಿ ಸಪ್ಲೈ ಮಾಡಿದವನೇ ಗಿರಾಕಿಗಳನ್ನು ಗಮನಿಸಿ ಬಿಲ್ಲು ಹೇಳಬೇಕಿತ್ತು. ಎಷ್ಟೋ ಸಲ ನಾನು ದಿನಾ ಬರುವ ಗಿರಾಕಿಗೆ ಜಾಸ್ತಿ ಬಿಲ್ಲು ಹೇಳಿ ಬೈಸಿಕೊಂಡಿದ್ದೆ. ಕ್ರಮೇಣ ಗಿರಾಕಿಗಳ ಪೈಕಿ ಯಾರು ಹೊಸಬರು, ಯಾರು ಮಾಮೂಲು ಅನ್ನುವುದನ್ನು ತಿಳಿದುಕೊಂಡು ಚುರುಕಾಗಿ ಕೆಲಸ ಮಾಡುತ್ತಿದ್ದೆ.
ಹೊಟೇಲ್ ಗಣೇಶದಲ್ಲಿ ಕೆಲಸ ಮಾಡುವವರ ಪೈಕಿ ನಾನೇ ಎಲ್ಲರಿಗಿಂತ ಚಿಕ್ಕವನೂ ಆಗಿದ್ದೆ. ಅದರಿಂದ ನನಗೆ ಅನುಕೂಲವೇ ಆಯ್ತು. ಹೊಟೇಲಿನ ಓನರ್ ಚಂದ್ರಣ್ಣ ನನ್ನನ್ನು ಕ್ರಮೇಣ ತುಂಬ ಮೆಚ್ಚಿಕೊಳ್ಳಲು ಶುರು ಮಾಡಿದರು. ಎಷ್ಟೋ ಸಾರಿ ಬೇರೆ ಊರಿಂದ ಬರುವ ಗಿರಾಕಿಗಳು ಟಿಪ್ಸ್ ಅಂತ ನನಗೆ ಒಂದೋ ಎರಡೋ ರುಪಾಯಿ ಕೊಟ್ಟು ಹೋಗುತ್ತಿದ್ದರು. ನಾನು ಅದನ್ನೂ ಕೊಂಡೊಯ್ದು ಚಂದ್ರಣ್ಣನವರಿಗೇ ಕೊಡುತ್ತಿದ್ದೆ. ಅವರು ಅದನ್ನು ನೀನೇ ಇಟ್ಕೊಳ್ಳೋ ಅನ್ನುತ್ತಿದ್ದರು. ನಾನು ಬೇಡ ಅಂತ ಅವರಿಗೇ ಕೊಟ್ಟು ಬರುತ್ತಿದ್ದೆ. ಈ ಧನವೈರಾಗ್ಯವನ್ನು ಅವರು ಪ್ರಾಮಾಣಿಕತೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡರು. ನನ್ನ ಉದ್ದೇಶವೂ ಅದೇ ಆಗಿತ್ತು. ನಾನು ಬಯಸಿದ ಭಾಗ್ಯ ಮೂರೇ ತಿಂಗಳಿಗೆ ಒದಗಿ ಬಂತು.
ಚಂದ್ರಣ್ಣನ ತಾಯಿ ಕಡೆಯವರು ಯಾರೋ ಪಕ್ಕದ ಹಳ್ಳಿಯಲ್ಲಿ ತೀರಿಕೊಂಡಿದ್ದರು. ಚಂದ್ರಣ್ಣ ಅಲ್ಲಿಗೆ ಹೋಗಬೇಕಾಗಿತ್ತು. ಅಂಥ ಸಂದರ್ಭದಲ್ಲಿ ಚಂದ್ರಣ್ಣ ಹೊಟೇಲು ಮುಚ್ಚಿಯೇ ಹೋಗುತ್ತಿದ್ದರಂತೆ. ಆದರೆ ಆವತ್ತು ಅವರು ನನ್ನನ್ನು ಕರೆದು ಕ್ಯಾಷ್ ನೋಡ್ಕೋ ಅಂತ ಹೇಳಿ, ಕೌಂಟರಿನಲ್ಲಿದ್ದ ಅಷ್ಟೂ ದುಡ್ಡನ್ನು ಬಾಚಿ ಜೋಬಿಗೆ ಹಾಕಿಕೊಂಡು ಹೊರಟು ಬಿಟ್ಟಿದ್ದರು.
ನಂತರ ಅಂಥ ಸಂದರ್ಭಗಳು ಮತ್ತೆ ಮತ್ತೆ ಒದಗಿ ಬರತೊಡಗಿದವು. ಚಂದ್ರಣ್ಣನ ಮನೆಗೆ ತಿಂಡಿ ಕೊಟ್ಟು ಬರುವ ಕೆಲಸವೂ ನನ್ನ ತಲೆಗೇ ಬಿತ್ತು. ಚಂದ್ರಣ್ಣನಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲನೇ ಹೆಂಡತಿ ಸುಮಿತ್ರಾ, ಎರಡನೇ ಹೆಂಡತಿ ಕಾಮಾಕ್ಷಿ. ಇಬ್ಬರೂ ಅದೇ ಊರಲ್ಲಿದ್ದರೂ ಪರಸ್ಪರ ಮಾತುಕತೆ ಮಾತ್ರ ಇರಲಿಲ್ಲ. ಕಾಮಾಕ್ಷಿಯನ್ನು ಚಂದ್ರಣ್ಣ ಕಟ್ಟಿಕೊಂಡಾಗ ದೊಡ್ಡ ಗಲಾಟೆ ನಡೆದು ಸುಮಿತ್ರಾ ಬಾವಿಗೆ ಹಾರಿ ರಾದ್ಧಾಂತವಾಗಿತ್ತಂತೆ. ಹಿರಿಯರೆಲ್ಲ ಸೇರಿ ಅವಳನ್ನೂ ಕಾಮಾಕ್ಷಿಯನ್ನೂ ಕೂರಿಸಿ ಮಾತಾಡಿಸಿ, ಚಂದ್ರಣ್ಣ ತಿಂಗಳಲ್ಲಿ ಇಂತಿಷ್ಟು ದಿನ ಕಾಮಾಕ್ಷಿ ಮನೆಗೂ ಒಂದಷ್ಟು ದಿನ ಸುಮಿತ್ರಾ ಮನೆಗೂ ಹೋಗುವಂತೆ ಹೇಳಿದ್ದರಂತೆ.
ಚಂದ್ರಣ್ಣನ ಹೊಟೇಲಿನ ಪೂರಿ-ಕ್ಷೀರ ಜಗತ್ಪ್ರಸಿದ್ಧ. ಸಂಜೆ ಐದು ಗಂಟೆಗೆ ಪೂರಿ-ಕ್ಷೀರ ರೆಡಿಯಾಗುತ್ತಿತ್ತು. ಅದು ರೆಡಿಯಾಗುತ್ತಿದ್ದಂತೆ ಚಂದ್ರಣ್ಣ ಎರಡು ಪ್ಲೇಟ್ ಪೂರಿ ಕ್ಷೀರ ಕಟ್ಟಿ ನನ್ನ ಕೈಗೆ ಕೊಟ್ಟು ಚಂದ್ರಣ್ಣ ಆವತ್ತು ಯಾರ ಮನೆಗೆ ಹೋಗುತ್ತಿದ್ದನೋ ಆ ಮನೆಗೆ ಕೊಟ್ಟು ಬರುವಂತೆ ಹೇಳುತ್ತಿದ್ದ. ಅದು ಪಂಚಾಯಿತಿ ನಡೆದಾಗಿನಿಂದ ನಡಕೊಂಡು ಬಂದ ಪದ್ಧತಿ. ನಾನು ಬರುವ ಮುಂಚೆ ಆ ಕೆಲಸವನ್ನು ಮತ್ತೊಬ್ಬ ಹುಡುಗ ಮಾಡುತ್ತಿದ್ದನಂತೆ. ನನ್ನ ಮೇಲೆ ವಿಶ್ವಾಸ ಬೆಳೆದದ್ದರಿಂದ ಆ ಕೆಲಸ ನನ್ನ ಪಾಲಿಗೆ ಬಂತು.
ಅದರಿಂದ ನನಗೆ ಲಾಭವೇ ಆಯ್ತು. ಚಂದ್ರಣ್ಣನ ಎರಡನೇ ಹೆಂಡತಿ ಕಾಮಾಕ್ಷಿಯ ಬಗ್ಗೆ ಸುಮಿತ್ರಾ ಹತ್ತಿರ, ಸುಮಿತ್ರಾ ಬಗ್ಗೆ ಕಾಮಾಕ್ಷಿ ಹತ್ರ ಅದೂ ಇದೂ ಚಾಡಿ ಹೇಳಿ ನಾನು ಇಬ್ಬರಿಗೂ ಹತ್ತಿರ ಆಗಿಬಿಟ್ಟೆ. ನನ್ನನ್ನು ಚಿಕ್ಕ ಹುಡುಗ ಅಂತ ತಿಳಿದು ಕಾಮಾಕ್ಷಿ ಪಕ್ಕ ಕೂರಿಸಿಕೊಂಡು ಮಾತಾಡಿಸುತ್ತಿದ್ದಳು. ನನಗೂ ಆಗ ಖುಷಿಯಾಗುತ್ತಿತ್ತು. ಎಷ್ಟೋ ಸಲ ಮನೆಯಲ್ಲಿ ಮಾಡಿದ ತಿಂಡಿ ಕೊಡುತ್ತಿದ್ದಳು. ಹಬ್ಬ ಬಂದಾಗ ಹೊಸ ಅಂಗಿ ಕೊಡಿಸುವಂತೆ ಚಂದ್ರಣ್ಣನಿಗೆ ಹೇಳುತ್ತಿದ್ದಳು. ಕ್ರಮೇಣ ನನಗೆ ಕಾಮಾಕ್ಷಿ ತುಂಬಾನೇ ಇಷ್ಟವಾಗಿಬಿಟ್ಟಳು. ಅವಳನ್ನು ನೋಡುವುದಕ್ಕೆ ಮತ್ತೆ ಮತ್ತೆ ಹೋಗಬೇಕು ಅನ್ನಿಸುತ್ತಿತ್ತು. ಅಲ್ಲಿಗೆ ಹೋದಾಗೆಲ್ಲ ಕಾಮಾಕ್ಷಿಯ ಹತ್ತಿರವೇ ಸುಳಿಯುವುದು, ಅವಳ ಸೊಂಟ ಮುಟ್ಟುವುದು, ಬೇಕಂತಲೇ ಅವಳ ಪಕ್ಕ ಕೂರುವುದು ಮುಂತಾದ ಚೇಷ್ಟೆಗಳನ್ನೆಲ್ಲ ಮಾಡುತ್ತಿದ್ದೆ. ಕಾಮಾಕ್ಷಿಯೂ ಎಷ್ಟೋ ಸಲ ಏನ್ ಗಲೀಜ್ ಮಾಡ್ಕೊಂಡಿದ್ದೀಯೋ ಅಂತ ತಲೆ ಬಾಚುವುದು, ಮುಖ ತೊಳೆಸುವುದು ಇತ್ಯಾದಿಗಳನ್ನೆಲ್ಲ ಮಾಡುತ್ತಿದ್ದಳು. ನನಗೆ ಎಷ್ಟೋ ಸಲ ಈ ಹೊಟೇಲ್ ಕೆಲಸ ಬಿಟ್ಟು ಕಾಮಾಕ್ಷಿಯ ಜೊತೆಗೇ ಇರಬೇಕು ಅನ್ನಿಸುತ್ತಿತ್ತು.
ನನ್ನ ಆಶೆ ಬಹುಬೇಗ ಈಡೇರಿತು ಕೂಡ.
 

‍ಲೇಖಕರು G

September 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: