ಓದು ಜನಮೇಜಯ : ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ..

(ಇಲ್ಲಿಯವರೆಗೆ…)

ಅಂದು ಹೆಬ್ಬಾಳದಲ್ಲಿದ್ದ ಕೃಷಿ ವಿಶ್ವ ವಿದ್ಯಾನಿಲಯದ ಕೃಷಿ ಕಾಲೇಜಿಗೆ ಸೇರಿದ್ದಾಯ್ತು. ನಮ್ಮ ಮನೆಯೂ ಕೂಡ ಹೆಬ್ಬಾಳಕ್ಕೆ ಸ್ಥಳಾಂತರವಾಯಿತು. ಇದು ನನ್ನ ಓದು ಪುರಾಣದಲ್ಲಿ ಒಂದು ಮುಖ್ಯ ತಿರುವು.ಮಾತ್ರವಲ್ಲ ನನ್ನ ಜೀವನದಲ್ಲಿಯೂ . ನನ್ನ ಇಚ್ಚೆಯಂತೆ ಕನ್ನಡ ಪದವಿಗೆ ಸೇರಿದ್ದರೆ ವಾತಾವರಣವೇ ಬೇರೆಯಾಗುತ್ತಿತ್ತು. ನನಗೆ ಸಾಹಿತ್ಯದ ಪುಸ್ತಕಗಳ ಲಭ್ಯತೆಯೂ ಹೆಚ್ಚುತ್ತಿತ್ತು. ಇಲ್ಲಿಯವರೆಗೆ ನಾನು ಮಾಡಿದ್ದ ಓದಿನಿಂದ ದಿನನಿತ್ಯವೂ ತಂತಾನೆ ಪ್ರಯೋಜನವೂ ದಕ್ಕುತ್ತಿತ್ತು . ಮುಂದಿನ ಓದಿಗೆ ಪ್ರಚೋದನೆಯೂ ದಕ್ಕುತ್ತಿತ್ತು.
1967-70 ರ ಆ ದಿನಗಳು ಕನ್ನಡ ಸಾಹಿತ್ಯದಲ್ಲಿ ಒಂದು ಸಂಧಿಕಾಲ .ಅಂದು ಬೆಂಗಳೂರು ವಿವಿ ಮತ್ತು ಸೆನೆಟ್ ಹಾಲ್ ಅನೇಕ ಕಾಳಗಗಳ ಕಣ . ಕನ್ನಡ ಸಾಹಿತ್ಯದ ಹಾಗೂ ಬೆಂಗಳೂರು ವಿ.ವಿ. ಯ ವಾತಾವರಣ ಹೇಗಿತ್ತು ಎಂಬುದನ್ನು ಊಹಿಸಿಕೊಂಡರೆ ಮತ್ತು ಆ ವಾತಾವರಣದ ಭಾಗವಾಗಿ ನನ್ನನ್ನಿರಿಸಿ ನೋಡಿಕೊಂಡರೆ ಆಗ ನನ್ನ ಬೌದ್ಧಿಕ , ಮಾನಸಿಕ ಬೆಳವಣಿಗೆ ಹಾಗೂ ಸಾಮಾಜಿಕ ತಿಳುವಳಿಕೆಯ ಮೇಲೆ ಈ ವಾತಾವರಣ ಎಷ್ಟೊಂದು ಪ್ರಭಾವವಾಗುತ್ತಿತ್ತು ಎಂಬುದನ್ನು ಈಗ ಕೇವಲ ಊಹಿಸಿಕೊಳ್ಳಬೇಕಷ್ಟೆ. ಈ ಕೊರತೆಯನ್ನು ತುಂಬಿಕೊಳ್ಳಲು ನಾನು ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಿದ್ದೆ. ಕಲಕಲವೆನ್ನುವ ಇಂತಹ ವಾತಾವರಣವನ್ನು ಕಳೆದುಕೊಂಡೆ ಎಂಬ ಭಾವ ನನ್ನನ್ನು ಈ ಕಾಲೇಜಿನಿಂದ ಹೊರಗೆ ಬಂದು ಅಂದು ಜಿ.ಎಸ್ಸೆಸ್ ರವರ ನೇತೃತ್ವದಲ್ಲಿದ್ದ ಕನ್ನಡ ಅಧ್ಯಯನ ಕೇಂದ್ರ ಏರ್ಪಡಿಸುತ್ತಿದ್ದ ಕುವೆಂಪು , ಬೇಂದ್ರೆ , ಆಧುನಿಕ ಕನ್ನಡ ಸಾಹಿತ್ಯದ ಎರಡು ಮಾರ್ಗಗಳು ಮೊದಲಾದವುಗಳಲ್ಲಿ ಭಾಗವಹಿಸಿದಾಗೆಲ್ಲ ಆ ವಿಚಾರ ಸಂಕಿರಣಗಳಲ್ಲಿ ನಡೆಯುತ್ತಿದ್ದ ಚರ್ಚೆ, ವಾಗ್ವಾದಗಳನ್ನು ಕೇಳಿದಾಗೆಲ್ಲ ಅನ್ನಿಸುತ್ತಿತ್ತು .
ಅಂದು ಎಷ್ಟೊಂದು ವಾಗ್ವಾದಗಳು . ಕೃಷಿ ಕಾಲೇಜಿನಲ್ಲೋ ಕನ್ನಡ ಒಂದು ವಿಷಯವಾಗಿ ಇರಲಿಲ್ಲ. ಸಾಹಿತ್ಯದ ಒಂದು ಎಳೆಯೂ ಇರುತ್ತಿರಲಿಲ್ಲ . ಈ ವಿವಿ ಮತ್ತು ಅದರ ಕಾಲೇಜುಗಳಲ್ಲಿ ಓದುತ್ತಿದ್ದವರಿಗೆ ದಿನನಿತ್ಯದ ಗಾಸಿಪ್ ಆಗಿ , ತರಗತಿಗಳ ಚರ್ಚೆಯ ವಿಷಯವಾಗಿ ತಿಳಿಯುತ್ತಿದ್ದ ಅಲ್ಲಿಯ ವಿದ್ಯಾರ್ಥಿಗಳಿಗೆ ತಿಳಿಯುತ್ತಿದ್ದ ಮಾಹಿತಿಯ ಅಭಾವದಿಂದ ನನಗೆ ಕೆಲವೊಮ್ಮೆ ಈ ಚರ್ಚೆಗಳ ಹಿಂದು ಮುಂದು ತಿಳಿಯುತ್ತಿರಲಿಲ್ಲ. ಒಂದು ರೀತಿ ಪರಕೀಯತೆಯ ಭಾವನೆ ಮುಸುಕುತ್ತಿತ್ತು . ಒಂದು ರೀತಿ “ ಅಲ್ಲಿರಲಾರೆ ಇಲ್ಲಿಗೆ ಹೋಗಲಾರೆ ಎನ್ನುವ ತೊಳಲಾಟ . ಪ್ರೀತಿಸಿದವಳೊ/ನೊಂದಿಗೆ ಮದುವೆಯಾಗಲಾರದೆ ಬೇರೊಬ್ಬರೊಂದಿಗೆ ಏಗಬೇಕಾದ ಸಂಕಟದ ಒಂದು ರೂಪದಂತಿತ್ತು . ಇಂತಹ ತೊಳಲಾಟ ಭಾರತೀಯ ಜೀವನ ಸಂದರ್ಭದಲ್ಲಿ ಹೇರಳವಲ್ಲವೇ ?
ಈ ವಿಚಾರ ಸಂಕಿರಣಗಳ ಚರ್ಚೆಗಳ ಮೂಲಕವೇ ನನಗೆ ಮೊದಲ ಬಾರಿಗೆ ನವ್ಯ ಸಾಹಿತ್ಯ ಎಂಬ ಮಾತು ನನ್ನ ಕಿವಿಗೆ ಬಿದ್ದದ್ದು . ಅಂದು ಆಗಲೇ ನವ್ಯ ಸಾಹಿತ್ಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತುತ್ತಿದ್ದ ಕಾಲ. ನವ್ಯದಿಂದ ದಲಿತ-ಬಂಡಾಯ ಸಾಹಿತ್ಯದ ಕಡೆಗೆ ಹೊರಳುತ್ತಿದ್ದ ಕಾಲ . ನವ್ಯ ಸಾಹಿತ್ಯದ ಈ ಇಳಿಗಾಲದಲ್ಲಿ ನನಗೆ ಈ ಸಾಹಿತ್ಯದ ಮೊದಲ ಪರಿಚಯವಾಯಿತು. ಈ ಸಾಹಿತ್ಯದ ಬೆಳವಣಿಗೆಯ ಕಾಲದಲ್ಲಿ ಅಂದರೆ ನನ್ನ ಹೈಸ್ಕೂಲು , ಪಿಯೂಸಿಗಳ ಕಾಲದಲ್ಲಿ ಈ ಸಾಹಿತ್ಯದ ಗಂಧ ಗಾಳಿಯೂ ಸೋಕಿರಲಿಲ್ಲ. ಎಂಬುದು ನಮ್ಮ ಶಿಕ್ಷಣ ಪದ್ಧತಿಯನ್ನು ಕಂಡವರಿಗೆ ಆಶ್ಚರ್ಯದ ಸಂಗತಿಯೇನಲ್ಲ. ಆ ಹಂತದಲ್ಲಿ ನವೋದಯ , ನವ್ಯ ಎಂಬ ಭಿನ್ನತೆಗಳ ಬಗ್ಗೆ ತಿಳಿಸಬೇಕಾಗಿತ್ತೆಂದು ನನ್ನ ವಾದವಲ್ಲ ಆದರೆ ಸಂದರ್ಭಕ್ಕೆ ತಕ್ಕಂತೆ ನವ್ಯದ ಕೆಲವು ಕವಿಗಳ , ಕೆಲವು ಕವಿತೆಗಳ ಅಥವಾ ಕಥೆ , ಕಾದಂಬರಿಗಳ ಹೆಸರು ಹೇಳಬಹುದಿತ್ತು. ಅಕ್ರೂರ ಚರಿತೆ ಯಾವ ದೃಷ್ಠಿಯಿಂದಲೂ ಪಠ್ಯವಾಗಲು ಅರ್ಹವಲ್ಲದ ಕಾವ್ಯ , ದಾನ ಚಿಂತಾಮಣಿ ಎಂಬ ಅಂತಹದೇ ಕಾದಂಬರಿಗಳನ್ನು ನಮಗೆ ಓದಿಸುವ ಬದಲು ಈ ಯಾವುದಾದರೊಂದು ಕೃತಿಯನ್ನು ಪಠ್ಯವಾಗಿಸಬಹುದಿತ್ತು. ಆದರೆ ಈಗ ಹಿಂತಿರುಗಿ ನೋಡಿದರೆ ನಮ್ಮ ಕನ್ನಡ ಮೇಷ್ಟರುಗಳಿಗೆ ಈ ಯಾಯ ಬೆಳವಣಿಗೆಗಳ ಪರಿಚಯವೂ ಇರಲಿಲ್ಲವೆಂದು ಕಾಣಿಸುತ್ತದೆ.
ನಮ್ಮ ಕಾಲೇಜುಗಳ ಪುಸ್ತಕ ಭಂಡಾರಗಳಲ್ಲೂ ಈ ಪುಸ್ತಕಗಳ ಸುಳಿವೇ ಇರಲಿಲ್ಲ. ಇನ್ನು ನನ್ನ ಪುಸ್ತಕ ಕೊಳ್ಳುವಿಕೆಯ ಏಕಮಾತ್ರ ತಾಣವಾಗಿದ್ದ ಹಿಂದಿನ ವರ್ಷಗಳ ಪಠ್ಯ ಪುಸ್ತಕಗಳಷ್ಟೇ ಮುಖ್ಯ ಸಂಗ್ರಹವಾಗಿದ್ದ ಹಳೆ ಪುಸ್ತದ ಅಂಗಡಿಗಳಲ್ಲಿ ನಾನು ಇವುಗಳನ್ನು ಕಾಣುವುದು ಕನಸಿನ ಮಾತೇ ಸರಿ. ಇದು ನಮ್ಮ ಶಿಕ್ಷಣ ವ್ಯವಸ್ಥೆಯ ಹಾಗೂ ಕಾಲೇಜುಗಳ ವಾತಾವರಣದ ವಿಮರ್ಶೆಯೇ ಆಗಿದೆ. ನಮ್ಮ ಗ್ರಂಥಾಲಯಗಳಲ್ಲಿ ಹೇಗೆ , ಯಾವ ಪುಸ್ತಕಗಳನ್ನು ಕೊಳ್ಳಲಾಗುತ್ತದೆ ಮತ್ತು ಇಡಲಾಗುತ್ತದೆ ಎಂಬುದರ ಟೀಕೆಯೂ ಆಗಿದೆ. ಮತ್ತು ನಮ್ಮ ಓದು ಈ ವಾತಾವರಣ ಹಾಗೂ ಲಭ್ಯತೆಯ ಮೇಲೆ ಹೇಗೆ ಅವಲಂಬಿತವಾಗಿದೆ , ಇಂತಹ ವಾತಾವರಣ ಮತ್ತು ಲಭ್ಯತೆಗಳೇ ನಮಗೇ ಗೊತ್ತಿಲ್ಲದಂತೆ ನಮ್ಮ ಅಭಿರುಚಿ ಹಾಗೂ ವ್ಯಕಿತ್ವದ ಬೆಳವಣಿಗೆಯನ್ನು ರೂಪಿಸುತ್ತದೆ ಎಂಬುದರ ವಿವರಣೆಯೂ ಆಗಿದೆ.

ಈ ವಿಚಾರ ಸಂಕಿರಣಗಳಲ್ಲಿ ನವ್ಯ ಸಾಹಿತ್ಯದ ಮತ್ತು ಸಾಹಿತಿಗಳ ಹೆಸರು ಕಿವಿಗೆ ಬಿದ್ದ ಮೇಲೆ ನಾನು ಅವರ ಪುಸ್ತಕಗಳಿಗಾಗಿ ಹುಡುಕಾಡ ತೊಡಗಿದೆ. ನನ್ನ ಕೈ ಚಾಚುವ ಯಾವ ಎಡೆಯಲ್ಲೂ ಅವು ದೊರಕಲಿಲ್ಲ. ಕೃಷಿ ವಿವಿಯಲ್ಲಿ ಒಳ್ಳೆಯ ಲೈಬ್ರರಿಯೇ ಇದ್ದರೂ ಕನ್ನಡ ಪುಸ್ತಕಗಳು ಕಣ್ಣಿಗೆ ಬೀಳುತ್ತಿರಲಿಲ್ಲ . ಆಗ ಮೊತ್ತ ಮೊದ ಬಾರಿಗೆ ನಾನು ಹೊಸ ಪುಸ್ತಕಗಳನ್ನು ಕೊಳ್ಳುವ ಯೋಚನೆ ಮಾಡಬೇಕಾಯಿತು. ಅದಕ್ಕೆ ಹಣ? ನಮ್ಮ ತಂದೆಯವರ ಬಳಿ ಕೇಳಿ ಪಡೆಯುವುದಂತೂ ಸಾಧ್ಯವಿರಲಿಲ್ಲ. ಅದಕ್ಕಾಗಿ ನಾನು ಬೇರೇ ಯೋಚನೆ ಮಾಡಬೇಕಾಯಿತು. ಆಗ ನನ್ನ ನೆರವಿಗೆ ಬಂದದ್ದು ಇದೇ ಕೃಷಿ ವಿವಿ. ಲೈಬ್ರರಿ . ಪುಸ್ತಕ ಒದಗಿಸುವ ಮೂಲಕ ಅಲ್ಲ . ಅಲ್ಪ ಸ್ವಲ್ಪ ಹಣ ಒದಗಿಸುವ ಮೂಲಕ.
ಒಂದು ದಿನ ನಮ್ಮ ಲೈಬ್ರರಿಗೆ ಹೋಗಿದ್ದಾಗ ನೋಟೀಸ್ ಬೋರ್ಡ್ ನಲ್ಲಿ ಕೆಲಸಕ್ಕಾಗಿ ವಿದ್ಯಾರ್ಥಿಗಳು ಬೇಕಾಗಿದ್ದಾರೆ. ವಿದ್ಯಾರ್ಥಿಗಳು ಸಹಾಯಕ ಗ್ರಂಥಪಾಲರನ್ನು ಭೇಟಿ ಮಾಡಬಹುದು ಎಂಬ ನೋಟೀಸ್ ಇತ್ತು. ಬಿಡುವಿನ ವೇಳೆಯಲ್ಲೆಲ್ಲಾ ಲೈಬ್ರರಿಯ ಒಳಗೇ ಕಾಲ ಕಳೆಯುತ್ತಿದ್ದ ನನಗೆ ಪುಸ್ತಕಾಲಯದ ಒಳಗೇ ಹೊಗಲು ಅವಕಾಶ ದೊರಕಿದಂತಾಯಿತು. ಬಹಳ ಸಂತೋಷವಾಯಿತು. ಅವರನ್ನು ಭೇಟಿ ಮಾಡಿದೆ. ಬಿಡುವಾದಾಗಲೆಲ್ಲ ಅಲ್ಲಿ ಕೆಲಸ ಮಾಡಲು ಆಹ್ವಾನ ದೊರಕಿತು. ಅಲ್ಲಿ ಗಂಟೆಗಳ ಲೆಕ್ಕದಲ್ಲಿ ಕೆಲಸವನ್ನು ಲೆಕ್ಕ ಮಾಡುತ್ತಿದ್ದರು ಮತ್ತು ಗಂಟೆಗೆ ಒಂದು ರೂ ನಂತೆ ವೇತನ ಕೊಡುತ್ತಿದ್ದರು. ನಾನು ಅಲ್ಲಿ ಸೇರಿ ಕೆಲಸ ಮಾಡಲು ಆರಂಭಿಸಿದೆ. ನನಗೆ ಮೊದಲ ತಿಂಗಳ ಸಂಬಳ ದೊರೆತದ್ದು 75 ರೂ. ಅದನ್ನು ನಾನು ತಂದೆಯವರ ಕೈಗೆ ಹಾಕಿದೆ. ಏಕೆಂದರೆ ಯಾವುದೇ ಹಣ ನಮ್ಮ ಕೇಗೆ ಬಂದರೂ ಅದರ ಪೂರ್ಣ ಅಧಿಕಾರ ತಂದೆಗೆ ಎಂಬ ಅಲಿಖಿತ ನಿಯಮ ಮಾತ್ರವಲ್ಲ ಸಂಸಾರ ಸರಿದೂಗಿಸಲು ಅವರು ಪಡುತ್ತಿದ್ದ ಕಷ್ಟವೂ ನಮ್ಮ ಕಣ್ಣಿಗೆ ಕಾಣುತ್ತಿತ್ತು. ಆ ಹಣದಲ್ಲಿ 25 ರೂ ನನಗೆ ವೆಚ್ಚಕ್ಕೆ ದೊರಕಿತು. ಅದರಲ್ಲಿ ನಾನು ಮಾಡಿದ ಮೊದಲ ಕೆಲಸವೇ ಅನಂತಮೂರ್ತಿಯವರ ಸಂಸ್ಕಾರ ಕೊಂಡದ್ದು .
ಈ ನನ್ನ ಲೈಬ್ರರಿಯ ಕೆಲಸ ನನಗೆ ಪುಸ್ತಕಗಳ ಸಾಮೀಪ್ಯವನ್ನು ಮತ್ತಷ್ಟು ದೊರಕಿಸಿದ್ದು ಮಾತ್ರವೇ ಅಲ್ಲದೆ ಗ್ರಂಥಾಲಯದ ಸಿಬ್ಬಂದಿಯ ಹತ್ತಿರದ ಪರಿಚಯವನ್ನೂ ಒದಗಿಸಿತು. ಆಗ ಲೈಬ್ರರಿಯಲ್ಲಿ ನಮ್ಮ ಕೆಲಸ ಪುಸ್ತಕಗಳ ಮೇಲೆ ಲೈಬ್ರರಿ ಸಿಬ್ಬಂದಿ ಹಾಕಿ , ಕಿತ್ತು ಹೋಗಿದ್ದ ಪುಸ್ತಕಗಳಿಗೆ ಸ್ಥಳ ನಿರ್ದೇಶನ ಮಾಡುವ ಕ್ಲಾಸಿಫಿಕೇಷನ್ ನಂಬರ್ ಅನ್ನು ಮತ್ತೆ ದುಂಡಗೆ ಬರೆದು ಹಾಕುವುದು ಮತ್ತು ವಿದ್ಯಾರ್ಥಿಗಳು ಓದಿ ಟೇಬಲ್ಲುಗಳ ಮೇಲೆ ಬಿಟ್ಟು ಹೋಗಿದ್ದ ಪುಸ್ತಕಗಳನ್ನು ಮತ್ತೆ ಅವುಗಳ ಜಾಗದಲ್ಲಿ ಇಡುವುದು. ಈ ಕೆಲಸ ನನಗೆ ಪ್ರಿಯವಾಯಿತು. ಏಕೆಂದರೆ ಒಂದು ಗ್ರಂಥಾಲಯದ ಹೃದಯವಾದ ಪುಸ್ತಕಗಳ ವಿಂಗಡಣೆಯ ವಿಜ್ಞಾನದ ಪರಿಚಯ ಮಾಡಿಸಿತು. ಇದು ನನ್ನ ಮುಂದಿನ ಎಲ್ಲ ಅಧ್ಯಯನಗಳಿಗೂ ಸಹಾಯಕವಾಯಿತು.
ಹೀಗೆ ನಾನು ಈ ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಯಾರಿಗೂ ಗೊತ್ತಿಲ್ಲದೆ ಒಂದು ದೊಡ್ಡ ಬದಲಾವಣೆ ಮಾಡಿ ಬಿಟ್ಟೆ. ಆಗ ಲೈಬ್ರರಿಯಲ್ಲಿ ಎಲ್ಲ ಕನ್ನಡ ಪುಸ್ತಕಗಳನ್ನೂ ಆಯಾ ವಿಷಯಗಳ ವಿಂಗಡಣೆ ಸಂಖ್ಯೆಗೆ ಅನುಗುಣವಾಗಿ ಆಯಾ ವಿಷಯಗಳ ಬೇರೆ ಪುಸ್ತಕಗಳ ಜೊತೆಗೇ ಇಡುತ್ತಿದ್ದರು . ಹೀಗಾಗಿ ನಮ್ಮ ಲೈಬ್ರರಿಯಲ್ಲಿದ್ದ ಇಂಗ್ಲಿಷ್ ಪುಸ್ತಕಗಳ ಸಾಗರದಲ್ಲಿ ಕನ್ನಡ ಕಳೆದು ಹೋಗಿತ್ತು. ಯಾವ ಪುಸ್ತಗಳು ಇದ್ದಾವೆ ಎಂಬುದೂ ತಿಳಿಯುತ್ತಿರಲಿಲ್ಲ. ಯಾವ ಪುಸ್ತಕ ಇಲ್ಲವೆಂಬುದರ ತಿಳುವಳಿಕೆಯೂ ಒಂದು ಲೈಬ್ರರಿಗೆ ಬಹಳ ಮುಖ್ಯ. ನನಗಂತೂ ಈ ಕೊರತೆ ಎದ್ದು ಕಾಣುತ್ತಿತ್ತು . ಸಾಹಿತ್ಯದ ಪುಸ್ತಕಗಳೇ ಬಹಳ ಕಡಿಮೆ . ಅವೂ ಕೂಡ ಇಂಗ್ಲಿಷ್ ಸಾಹಿತ್ಯದ ಪುಸ್ತಕಗಳ ನಡುವೆ ಮುಳುಗಿ ಹೋಗಿದ್ದವು.
ಇಂತಹ ಸಂದರ್ಭದಲ್ಲಿ ಒಂದು ದಿನ ನನಗೆ ವಿದ್ಯಾರ್ಥಿಗಳು ಓದಿದ ಪುಸ್ತಕಗಳನ್ನು ಮರು ಜೊಡಿಸಲು ಬಿಟ್ಟಾಗ ಒಂದು ಯೋಚನೆ ಮಾಡಿದೆ ಒಂದು ಕೊಠಡಿಯಲ್ಲಿ ಒಂದೆರಡು ರ‍್ಯಾಕುಗಳು ಖಾಲಿ ಇದ್ದವು. ಇದನ್ನು ಗಮನಿಸಿದ್ದ ನಾನು ಇಡೀ ಲೈಬ್ರರಿಯಲ್ಲಿ ಎಲ್ಲೆಲ್ಲಿ , ಯಾವ ವಿಭಾಗಗಳಲ್ಲಿ ಕನ್ನಡ ಪುಸ್ತಕಗಳಿದ್ದಾವೋ ಅವುಗಳನ್ನೆಲ್ಲಾ ಒಂದು ಕಡೆ ಜೋಡಿಸಿ ಬಿಟ್ಟೆ. ಯಾರಿಗೂ ಹೇಳದೆ , ಯಾರನ್ನೂ ಕೇಳದೇ. ಅದನ್ನು ಕೆಲ ದಿನಗಳ ನಂತರ ಗಮನಿಸಿದ ಲೈಬ್ರರಿ ಸಿಬ್ಬಂದಿ ಈ ಬಗ್ಗೆ ನನ್ನನ್ನು ಪ್ರಶ್ನೆ ಮಾಡಲು ಹೋಗಲಿಲ್ಲ . ಅವರು ಹೇಳಿರಬೇಕು ಎಂದು ಇವರು, ಇವರು ಹೇಳಿರಬೇಕು ಎಂದು ಅವರು ಸುಮ್ಮನಾದರು. ಅಂದಿನಿಂದ ಇದೇ ವ್ಯವಸ್ಥೆ ಮುಂದುವರೆಯಿತು. ಕೃಷಿಗೆ ಸಂಬಂಧ ಪಟ್ಟ ಪುಸ್ತಕಗಳು ಕೂಡ ಯಾವ್ಯಾವು ನಮ್ಮ ಲೈಬ್ರರಿಯಲ್ಲಿ ಇಲ್ಲವೆಂದು ಗೊತ್ತಾಯಿತು. ನಾನೆ ಕೆಲವು ಪುಸ್ತಕಗಳ ಗೈರು ಹಾಜರಿಯನ್ನು ಎತ್ತಿ ತೋರಿಸಿದೆ . ಕನ್ನಡ ವಿಭಾಗ ಹೆಚ್ಚು ಭರ್ತಿಯಾಗತೊಡಗಿತು.
 
(ಮುಂದುವರಿಯುತ್ತದೆ…)

‍ಲೇಖಕರು G

September 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. lalithasiddabasavaiah

    ಮನಸ್ಸಿದ್ದರೆ ಮಾರ್ಗ ಎನ್ನುವುದು ಇಂಥದ್ದಕ್ಕೆ ಇರಬೇಕು.

    ಪ್ರತಿಕ್ರಿಯೆ
  2. ಕುಸುಮಬಾಲೆ

    ನಾನು ಹುಟ್ಟೋಕೆ ಎಷ್ಟೋ ವರ್ಷಗಳ ಮುಂಚೆ ಇಷ್ಟಲ್ಲ ಮಾಡಿರೋ ನೀವು ಈಗ ನನಗೆ ಮಾತಿಗೆ, ಓದಿಗೆ ಸಿಕ್ಕಿರುವುದೇ ಮಹಾಭಾಗ್ಯ,
    ಆದ್ರೆ ಈ ಲೆಖನದ ಟೈಟಲ್ ನಾನು ನನ್ನ ಮುಂದಿನವಾರದ ಅಂಕಣಕ್ಕೆ ಯೋಚಿಸಿಟ್ಟಿದ್ದೆ. 🙁

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: