ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಬೇರು ಭದ್ರವಾಗಬೇಕು ಹೊಸ ಹಸಿರಿಗೆ…

ಬೆಳಗಾವಿಯಿಂದ ಕೊಲ್ಲೂರಿಗೆ ಹೋಗುವ ಮುಖ್ಯರಸ್ತೆಯಲ್ಲಿ ಗೋಕುಲಶಿಗ್ಗಾಂವ ಅಂತೊಂದು ಊರು ಸಿಗುತ್ತದೆ. ಅಲ್ಲಿಂದ ಐದೇ ಕಿಲೋಮೀಟರ್ ಒಳಗೆ ಹೋದರೆ “ಕಾಡಸಿದ್ದೇಶ್ವರ ಮಠ” ಅಂತೊಂದಿದೆ. ಆ ಊರು ಮಹಾರಾಷ್ಟ್ರಕ್ಕೆ ಸೇರಿದ್ದು. ಆದರೆ ಅಲ್ಲಿ ಕನ್ನಡದ ಸ್ವಾಮೀಜಿಯಿದ್ದಾರೆ.
ವಚನಗಳು, ಯೋಗ ಮುಂತಾದವುಗಳ ಪಾಠ ನಡೆಯುತ್ತದೆ. ಕೃಷಿ ಪ್ರಯೋಗಗಳೂ ಆಗುತ್ತವೆ.ನಮ್ಮ ಕರ್ನಾಟಕದ, ಬಿಜಾಪುರದ ಬಿಳಿಬಟ್ಟೆಯ ಸಂತ ಸಿದ್ದೇಶ್ವರ ಸ್ವಾಮೀಜಿಗೂ ಆ ಮಠಕ್ಕೂ ವಿಶೇಷ ನಂಟು. ಸುಮಾರು 8 ವರ್ಷಗಳ ಹಿಂದೆ ಅವರು ತಾವು ಕಂಡ ಅಚ್ಚರಿಯನ್ನ ನಮಗೂ ತೋರಿಸಬಯಸಿದ್ದರು. ಹಾಗಾಗಿ ಕರ್ನಾಟಕದ ಒಂದಷ್ಟು ಆಸಕ್ತ ಯುವಪಡೆ ಅಲ್ಲಿ ಹೋಗಿದ್ದೆವು. ಕಂಡದ್ದು ಮಾತ್ರ ನಿಜಕ್ಕೂ ಪವಾಡವೇ ಸರಿ.
ಮಠ, ಇಬ್ಬರು ಸ್ವಾಮ್ಗಳು, ಪವಾಡ, ಅಂತೆಲ್ಲ ಹೇಳಿದ ಕೂಡಲೆ ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ ಮತ್ತೆ, ಪೂರ್ಣಪಾಠ ಕೇಳಿ, ಶಿಳಕೆವಾಡಿ, ಕಂಬಳವಾಡಿ ಅಂತ ಆ ಮಠದ ಪಕ್ಕದಲ್ಲಿ ಎರಡು ಹಳ್ಳಿಗಳು. ತುಂಬಾನೇ ಚಿಕ್ಕ ಹಳ್ಳಿಗಳು. ಮಹಾರಾಷ್ಟ್ರಕ್ಕೆ ಸೇರಿದವು. ಗ್ಯಾಂಗ್ ವಾರ್, ಇಸ್ಪೀಟು, ರಾಜಕೀಯ ದ್ವೇಷ, ಹೀಗೆ ಒಂದು ಹಳ್ಳೀಲಿ ನಡೀಬಹುದಾದ ಸಕಲ ಕೆಡುಕುಗಳೂ ಅಲ್ಲಿ ನಡೆದಿತ್ತು. ಪಂಚಾಯಿತಿಯ ಪಾಡೋ ಹೇಳತೀರದು. ಒಂದು ಹಳ್ಳಿಯ ನೂರಕ್ಕೂ ಹೆಚ್ಚು ಕೇಸು ಪೋಲೀಸ್ ಸ್ಟೇಷನ್ನಲ್ಲಿತ್ತೆಂದರೆ ನೀವೇ ಕಲ್ಪಿಸಿಕೊಳ್ಳಿ.
ಇಂತಿದ್ದ ಹಳ್ಳಿಗೆ ಒಬ್ಬ ಹರೆಯದ ಹುಡುಗ ಗ್ರಾಮಪಂಚಾಯಿತಿ ಸೆಕ್ರೆಟರಿಯಾಗಿ ಬರ್ತಾನೆ. ಸ್ವಾಮೀಜಿಯ ಯೋಚನೆಗೂ ಅವನ ಯೋಚನೆಗಳಿಗೂ ತಾಳೆಯಾಗುತ್ತದೆ. ಕೂತು ಯೋಚನೆಯನ್ನ ಯೋಜನೆಯಾಗಿಸುತ್ತಾರೆ. ಜಾರಿಗೂ ತಂದುಬಿಡುತ್ತಾರೆ. ಅದರ ಪರಿಣಾಮವೇ ಬದಲಾದ ಶಿಳಕೆವಾಡಿ ಮತ್ತು ಕಂಬಳವಾಡಿಗಳು.
ಸರಕಾರದ ಸ್ವಚ್ಚತಾ ಆಂದೋಲನದ ಪುಸ್ತಕದಲ್ಲೋ, ಸಾಕ್ಷರತಾ ಕಾರ್ಯಕ್ರಮದ ಪುಸ್ತಕದಲ್ಲೋ, ಅಥವಾ ಮಕ್ಕಳ ಇನ್ಯಾವುದೋ ಪುಸ್ತಕದಲ್ಲೋ ಹಳ್ಳಿಯ ಚಿತ್ರ ಬಿಡಿಸಿರುತ್ತಾರೆ. ಸ್ವಚ್ಚಾತಿಸ್ವಚ್ಚ ಊರು, ಅಲ್ಲೆಲ್ಲೋ ಹರಿವ ಜರಿ, ಹಸುರು. ದೂರದಲ್ಲಿ ಕಾಣುವ ಶಾಲೆ. ಊರ ತುದಿಗೊಂದು ಶೌಚಾಲಯ.. ಊರ ಸ್ವಚ್ಚ ಅಂಗಳದಲ್ಲೇ ಕೂತು ಓದುವ ಮಕ್ಕಳು, ಛೆ..ನಿಜವಾಗಿಯೂ ಇಂತದೊಂದು ಊರಿದ್ದರೆ? ಕಲ್ಪನೆ ಎಷ್ಟು ಚೆಂದ ಅಂದುಕೊಳ್ಳುತ್ತಿದ್ದೆ. ರಾಜೀವ್ ದೀಕ್ಷಿತರ ಒಡನಾಟವಿದ್ದರೂ ಅವರು ಹೇಳುವಂತ ಗ್ರಾಮಗಳ ಸೃಷ್ಟಿ ಅಸಾಧ್ಯವೆಂದು ಬಲವಾಗಿ ನಂಬಿದ್ದೆ. ಗಾಂಧೀಜಿಯವರ “ಹಿಂದ್ ಸ್ವರಾಜ್” ಪುಸ್ತಕದ ಕೆಲವಿಚಾರಗಳು ಈಗ ಅಪ್ಡೇಟ್ ಆಗಬೇಕು ಅನ್ನುವ ವಾದ ನನ್ನದು. ಆದರೆ ಆ ಊರುಗಳ ಭೇಟಿ ಯಾಕೋ ನನ್ನ ಎಷ್ಟೋ ಆಲೋಚನೆಗಳನ್ನ ಅಪ್ಡೇಟ್ ಮಾಡಿದವು.
ಅಲ್ಲೇನಿತ್ತು ಅಂತದು ಹೇಳಿಬಿಡುತ್ತೇನೆ ಕೇಳಿ. ಆ ಇಡೀ ಊರಪ್ರತಿ ಬೀದಿಯನ್ನೂ ಸಗಣಿಯಿಂದ ಸಾರಿಸಲಾಗಿದೆ. ಮನೆಯಷ್ಟೇ ಬೀದಿ ಸ್ವಚ್ಚ. ವಾರಕ್ಕೊಮ್ಮೆ ಪ್ರತಿ ಮನೆಯಿಂದ ಒಬ್ಬರು ಬಂದು ಊರು ಸ್ವಚ್ಚಮಾಡುತ್ತಾರೆ. ಅಕಸ್ಮಾತ್ ಯಾರಾದರೂ ಬರದೇ ಉಳಿದರೆ, ಅವರ ಮನೆಗೆ ವಾಧ್ಯಸಮೇತ ಹೋಗಿ ಹಾರ ಹಾಕಿ ಕರೆತರುತ್ತಾರೆ. ಪ್ರತಿಮನೆಯ ಎರಡು ಬಲ್ಬ್ ಗಳಿಗಾಗುವಷ್ಟು ವಿದ್ಯುತ್ತನ್ನ ವಿಂಡ್ ಮಿಲ್ಗಳ ಮೂಲಕ ಅವರೇ ತಯಾರಿಸುತ್ತಾರೆ. ಇನ್ನು ಊರಲ್ಲಿ ಮನೆಗಳ ನಡುವಿನ ಖಾಲಿ ಜಾಗಗಳನ್ನ ಹಾಳುಗೆಡವದೆ ಅದನ್ನ ಸ್ವಚ್ಚ ಮಾಡಿ ತುಳಸಿ ಗಿಡ ನೆಟ್ಟು ಪಾರ್ಕ್ ಥರ ಮಾಡಿದ್ದಾರೆ. ಮನುಷ್ಯರ ಮಲದಿಂದ ಗೊಬ್ಬರ ತಯಾರಿಸುತ್ತಾರೆ. ಕಂಪನಿ ಗೊಬ್ಬರ ತ್ಯಜಿಸಿದ್ದಾರೆ.

ಊರೊಳಕ್ಕೆ ರಾಜಕಾರಣಿಗಳ ಬೋರ್ಡು, ಬ್ಯಾನರುಗಳಿಗೆ ಅವಕಾಶವಿಲ್ಲ. ಮತ ಹಾಕುತ್ತಾರೆ, ಆದರೆ ಊರ ಯಾರೂ, ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಒಂದು ಊರಲ್ಲಂತು ರಾಜಕಾರಣಿಗಳಿಗೆ ಪ್ರವೇಶವೇ ನಿಷಿಧ್ದ. ಊರ ಶಾಲೆಯಲ್ಲಿ ಗಾಂಧಿ ಮುಂತಾದವರ ಫೋಟೋಗಳ ಜತೆ ಆ ಹಳ್ಳಿಗಾಗಿ ದುಡಿದವರ ಫೋಟೋ ಹಾಕಲಾಗಿದೆ. (ನಮ್ಮೂರ ಇತಿಹಾಸ ತಿಳಿಯಬೇಕು ಮೊದಲು..ಆಮೇಲೆ ದೇಶದ್ದು) . “ಅಮ್ಚಿವಾಡಿ ಶಿಳಕೆವಾಡಿ, ಸ್ವಚ್ ಸುಂದರ್ ಅಂಗನವಾಡಿ” ಅಂತ ಬರೆದಿದ್ದು ಯಾಕೋ ನನ್ನ ತಲೆಯಲ್ಲಿ ಪ್ರಿಂಟಾಗಿದೆ. ಇನ್ನೊಂದು ಇಂಟರೆಸ್ಟಿಂಗ್ ವಿಷಯವೆಂದರೆ, ಆ ಊರ ಆಸ್ತಿ ಇರುವುದು ಹೆಣ್ಣುಮಕ್ಕಳ ಹೆಸರಲ್ಲಿ. ಹ್ಞಾ.. ನೂರಕ್ಕೂ ಹೆಚ್ಚು ಕೇಸುಗಳಿದ್ದವಲ್ಲ? ಅವನ್ನೆಲ್ಲ ಒಂದೇ ದಿನದಲ್ಲಿ ವಾಪಾಸು ಪಡೆಯಲಾಗಿದೆ ಮತ್ತು ಹೊಸ ಕೇಸು ದಾಖಲಾಗಿಲ್ಲ!!
ಈ ಊರನ್ನ ನೋಡುವ ಸಲುವಾಗಿ, ಕಲಿಯುವ ಸಲುವಾಗಿ ಭೇಟಿ ಕೊಡುವವರ ಸಂಖ್ಯೆ ಹೆಚ್ಚಿದ್ದರಿಂದ ಹಾಗೆ ಹೊರಗಿಂದ ಬರುವವರಿಗಾಗಿಯೇ ಶೌಚಾಲಯ ನಿರ್ಮಿಸಿದ್ದಾರೆ. ರಾಷ್ಟ್ರಪತಿಗಳಿಂದ “ಮಾದರಿ ಗ್ರಾಮ” ಪ್ರಶಸ್ತಿಯೂ ಸಿಕ್ಕಿ ಆಗಿದೆ! ಇಷ್ಟೆಲ್ಲವನ್ನೂ ಅವರು ಸಾಧ್ಯವಾಗಿಸಿದ್ದು ಕೇವಲ ಎರಡು ವರ್ಷಗಳಲ್ಲಿ. ಒಬ್ಬ ಧರ್ಮಗುರು, ಒಬ್ಬ ಅಧಿಕಾರಿ ಇಬ್ಬರೂ ಸೇರಿ, ಊರವರೂ ಮನಸ್ಸು ಮಾಡಿ ಈ ಕ್ರಾಂತಿ ಮಾಡಿದ್ದರು. ಈ ದೇಶದ ಪ್ರತಿಹಳ್ಳಿಯೂ ಹೀಗೇ ಆದರೆ ಅದೆಷ್ಟು ಚೆಂದ? ಆಹಾ, ಆ ಕನಸೇ ನನ್ನನ್ನ ರೋಮಾಂಚನಗೊಳಿಸುತ್ತದೆ. ಪವಾಡವೆಂದರೆ ಅದೆಲ್ಲಿಂದಲೋ ಏನನ್ನೋ ತೆಗೆವುದೆಂದು ಮಾತ್ರವೇ ಅರ್ಥವೇನು?
“ಗಂಗಾಕಲ್ಯಾಣ” ಅಂತೊಂದು ಯೋಜನೆ. ಕರ್ನಾಟಕ ಸರಕಾರದ್ದು. ಹಿಂದುಳಿದ ವರ್ಗದ ರೈತರಿಗೆ, ಸಣ್ಣ ಹಿಡುವಳಿದಾರರರಿಗೆ, ಜಮೀನಲ್ಲಿ ಬೋರು ಕೊರೆಸುವ, ನೀರು ತರಿಸುವ ಖರ್ಚನ್ನ ಸರಕಾರ ಕೊಡುವುದು ಈ ಯೋಜನೆಯ ಉದ್ದೇಶ. ನಮ್ಮ ಎಷ್ಟೋ ಬಡರೈತರ ಮೊದಲ ಸಮಸ್ಯೆ ನೀರಿಲ್ಲ, ಮಳೆ ಆಶ್ರಯಿಸಲಾಗುವುದಿಲ್ಲ. ಬೋರು ಕೊರೆಸಲು ದುಡ್ಡಿಲ್ಲ ಅನ್ನುವುದು. ಅಂತವರಿಗೆಲ್ಲ ಈ ಗಂಗಾಕಲ್ಯಾಣ ಒಳ್ಳೆ ಯೋಚನೆ ಮತ್ತು ಯೋಜನೆ. ಈ ಯೋಜನೆಯಡಿಯಲ್ಲಿ ಕೊರೆದ ಬೋರುಗಳೆಷ್ಟೋ, ಬರೆದ ಹೆಸರುಗಳೆಷ್ಟೋ, ಆದರೆ ನಿಜಲೆಕ್ಕದಲ್ಲಿ ನೀರು ಹರಿದದ್ದು ಭತ್ತ ತೊನೆದದ್ದು ಎಷ್ಟು?
ಛೆ ಛೆ ತಪ್ಪು ಸರಕಾರದ್ದಲ್ಲವೇ ಅಲ್ಲ. ಯೋಜನೆಗೆ ಎಲ್ಲ ರೀತಿಯಲ್ಲೂ ಅರ್ಹನಾದವನೆಂದು ಸಾಭೀತುಪಡಿಸಿ, ಬೋರು ಕೊರೆಸುವುದು. ನೀರು 60 ಅಡಿಗೇ ಬಂದರೂ ಲೆಕ್ಕದಲ್ಲಿ ಬರೆಸುವುದು ಅದರ ಡಬ್ಬಲ್ಲು ಆಳ. ಅಕಸ್ಮಾತ್ ನೀರು ಬರಲೇ ಇಲ್ಲ. ಆದರೂ ಬಂತೆಂದೇ ಬರೆಸುವುದು. ಕಾರಣ ನೀರು ಬರದಿದ್ದರೆ ಸರಕಾರ ಮೋಟರು, ಸ್ಟಾಟರು ಕೊಡುವುದಿಲ್ಲ. ಬರದ ನೀರನ್ನು ಬಂತೆಂದು ಬರೆಸಿ, ಮೋಟರು ಸ್ಟಾಟರು. ಕೇಸಿಂಗ್ ಪೈಪು ಪಡಕೊಂಡು ಸೈನು ಹಾಕಿ, ಆಮೇಲೆ ಅವನ್ನು ಮಾರಿಕೊಂಡು ನೋಟು ಎಣಿಸಿ ಜೇಬಿಗಿಳಿಸಿಕೊಂಡರೆ ಆಹಾ.. ಸರಕಾರಕ್ಕೇ ಉಂಡೆನಾಮ ತೀಡಿದ, ಜಯಿಸಿದ ಸಂತಸ. ಅದು ನಮ್ಮ ನಿಮ್ಮದೇ ಸರಕಾರ, ನಮ್ಮ ನಿಮದೇ ಹಣ ಅಂತ ಯಾವ ಭಾಷೇಲಿ ಹೇಳೋಣ?
ಅಂಗವಿಕಲರಿಗೆ ಅಂತ ತಿಂಗಳಿಗೆ ಸಾವಿರ ರೂಪಾಯಿ ಕೊಡುತ್ತಾರೆ. ಮಾನದಂಡವೇನು? ಅಂಗವಿಕಲ ಅನ್ನುವ ಡಾಕ್ಟರ್ ಸರ್ಟಿಫಿಕೇಟು. ಒಂದು ಫೋಟೋ, ಊರ ಸಾಕ್ಷಿಗಳು. ಇತ್ಯಾದಿ. ಒಟನಲ್ಲಿ ಯಾವುದೂ ಭರಿಸಲಾರದಷ್ಟು ದುಬಾರಿ ಐಟಮ್ಮುಗಳಲ್ಲ, ಕಳಲು ಹೋಗಿ ಕಾಲು ಪೆಟ್ಟುಮಾಡಿಕೊಂಡು ಕುಂಟುವವನಿಗೂ, ಜಾಂಡೀಸಾಗಿ ಒಂದು ಕಣ್ಣು ಮಂಜಾದ ಜಮೀನ್ದಾರರಿಗೂ ಸಾವಿರ ರೂಪಾಯಿಯ ಅಂಗವಿಕಲ ವೇತನ.
ಇನ್ನು ಹಸಿರು ಕಾರ್ಡುಗಳ ಕಥೆ ಕೇಳಲೇಬೇಡಿ. ಒಂದೇ ಮನೇಲಿ ನಾಲ್ಕು ನಾಲ್ಕು ಕಾರ್ಡುಗಳು. ಕಾರಣ ಕೇಳಿದರೆ “ನಾವುಬ್ಯಾರೆ ಬ್ಯಾರೆ ಇರದು” ಅನ್ನುವ ಸಿದ್ದ ಉತ್ತರ. ಅಪ್ಪ-ಅಮ್ಮ ಬ್ಯಾರೆ, ಮಗ ಸೊಸೆ ಬ್ಯಾರೆ. ಮದುವೆಯಾಗದ ಚಿಕ್ಕಪ್ಪ. ವಯಸ್ಸಾದ ತಾಯಿ , ಎಲ್ಲರೂ ಬ್ಯಾರೆಬ್ಯಾರೆ. ಸರಕಾರದ ಲೆಕ್ಕಕ್ಕೆ ಒಂದೇ ಒಂದು ಒಟ್ಟು ಕುಟುಂಬ ಸಿಕ್ಕುವುದಿಲ್ಲ ಪಾಪ! ಒಂದು ಕಾರ್ಡಿಗೆ ಮೂವತ್ತು ಕೆಜಿ. ನಾಲ್ಕಕ್ಕೆ ನೂರಿಪ್ಪತ್ತು. ಜೊತೆಗೆ ಮನೆಯಲ್ಲೆ ಸ್ವಂತದ ಭತ್ತ! ಇನ್ನು ಸರಕಾರದ ಅಕ್ಕಿ? ಉಣ್ಣಲಿಕ್ಕಲ್ಲ ಮಾರಲಿಕ್ಕೆ. ಕೆಜಿಗೆ 15 ರೂಪಾಯಿ. ಸಿಟಿ ಹೋಟೆಲಿನವರು ಕೊಂಡು ಹಿಟ್ಟುಮಾಡಿಸಿ ತಟ್ಟಿಕೊಡುವ ರೊಟ್ಟಿಗೆ ಒಂದಕ್ಕೆ ಮೂವತ್ತು ರೂಪಾಯಿ!
ಯಾವನು ಕೇಳುತ್ತಾನೆ? ಮನೆಮನೆಯಲ್ಲೂ ಕಳ್ಳರೇ. ಎಲೆಕ್ಷನ್ನಿನ ಹಣ ಹಂಚಲು ಬಂದಾಗ “ಹೇಸಿಗೆ ಅದು ಬೇಡ” ಅನ್ನುವ ಅಪ್ಪನಿಗೆ, “ನಿನಗ್ ಬ್ಯಾಡದೇ ಇದ್ರ ಮುಚ್ಕಂಡ್ ಕುಂತ್ಕ ಮಾರಾಯ. ನಮ್ ತಕ್ಕಬ್ಯಾಡಿ ಅನ್ನಕ್ ನೀ ಯಾವನ? ನಿಂಗ್ ಹೆಚ್ಚಾಗಿದ್ರ ಬುಡು ನಿಂದ್ನೂ ನಾವೇ ತಕ್ಕಂತೀವಿ” ಅನ್ನುವುದರ ಜೊತೆಗೆ,ನಮಗೆ ಹುಚ್ಚೆಂದೂ. ಕೊಬ್ಬೆಂದೂ ಜಗಲಿ ಗುಂಪುಗಳ ಮಾತು. ಇನ್ನೂ ಹೆಚ್ಚಿಗೆ ಹೇಳಿದರೆ ರಾತ್ರಿ ಮನೆಮೇಲೆ ಕಲ್ಲು. ಜಮೀನಿನ ಕಾಯಿಕಸಿಗಳು ರಾತ್ರೋರಾತ್ರಿ ಮಾಯ!
ಸರಕಾರ ಕೊಡುವ ಸೈಕಲ್ಲು, ಸುವರ್ಣಗ್ರಾಮ ಯೋಜನೆ, ಒಂದು ರೂಪಾಯಿಯ ಬಡ್ಡಿಸಾಲ. ಇನ್ನೂ ಎಷ್ಟೊಂದು ಯೋಚನೆಗಳು ಎಲ್ಲದರ ಫಲಾನುಭವಿಗಳಲ್ಲಿ ನಿಜದ ಅರ್ಹರೆಷ್ಟು ಜನ? ಲಕ್ಷಗಟ್ಟಲೇ ಬಡ್ಡಿಯನ್ನೇ ದುಡಿವ ಬೇಕಾದಷ್ಟು ಆಸ್ತಿಯುಳ್ಳ ದೊಡ್ಡ ಮನೆಯ ಮುದುಕ ಆಸ್ತೀನೆಲ್ಲ ಮಕ್ಕಳ ಹೆಸರಿಗೆ ಮಾಡಿ, “ನೋಡಪ್ಪ ನಾನು ನಿರ್ಗತಿಕ ಕೊಡು ಹಸಿರು ಕಾರ್ಡು. ಮತ್ತು ಅರವತ್ತು ವರ್ಷದ ವೃಧ್ದಾಪ್ಯವೇತನ” “. ಅನ್ನುತ್ತಾನೆ. ಸರಕಾರಕ್ಕೆ ಬೇಕಾದ್ದು ದಾಖಲೆ ಅಷ್ಟೆ. ಲಂಚ ಕೊಡುತ್ತೇವೆ. ಕಮಕ್ ಕಿಮಕ್ ಅಂದೆಯೋ ದಾಖಲೆಯನ್ನೂ ಕೊಡುತ್ತೇವೆ. ಇದೋ, ನಾವು ಫಲಾನುಭವಿಗಳು ಅಂದರೆ. ಅಧಿಕಾರಿ ಏನು ಮಾಡಿಯಾನು? ಕೆಲವರಿಗೆ ಲಂಚ. ಕೆಲವರಿಗೆ ಸುಳ್ಳುದಾಖಲೆ. ಒಟ್ಟಿನಲಿ ಯೋಜನೆ ಜಾರಿ.
ಮಹಾರಾಷ್ಟ್ರದಿಂದ ಬಂದು ಗ್ರಾಮದ ಅಧಿಕಾರಗಳನ್ನು ವಿಚಾರಿಸಿ ನೋಡಿದೆ. ಲಂಚಕೋರರು “ಅಯ್ಯೋ ಯಾರೋ ಎಲ್ಲೋ ಮಾಡಿರದ ನಾವ್ ಇಲ್ ಮಾಡಕಾದ್ದ? ಬುಟ್ಟಾಕಿ” ಅಂದುಬಿಟ್ಟರು. ಅಯ್ಯೋ ಪುಣ್ಯಾತ್ಮ ಅದು ನಮ್ಮದೇ ದೇಶ ಕಣಯ್ಯ ಅನ್ನುವ ಮುಂಚೆ ಕುರ್ಚಿ ಬಿಟ್ಟೆದ್ದಿದ್ದ. ಇನ್ನು ಒಳ್ಳೆ ಅಧಿಕಾರಿಗಳು, “ನಮ್ ಕೈಲಿ ಏನಿದೆ ಹೇಳಿ ? ನಾವೂ ಮಾಡೋ ಪ್ರಯತ್ನ ಎಲ್ಲ ಮಾಡ್ತೀವಿ. ಸರ್ಕಾರಕ್ ಬೇಕಾಗಿರೋದು ದಾಖಲೆ. ಕೊಡ್ತಾರೆ ಮಾಡಿಕೊಡಲೆಬೇಕು. ಹೆಚ್ಚಿಗೆ ಮಾತಾಡೋಕೋದ್ರೆ ಊರೆಲ್ಲ ಒಂದಾಗಿ ನಮಗೇ ತೊಂದ್ರೆ ಮಾಡ್ತಾರೆ” ಅಂತ ಅಸಹಾಯಕತೆಯಿಂದ ಕೈಚೆಲ್ಲಿದರು.
ಇನ್ನು ನಮ್ಮ ಹಳ್ಳಿಯ ಮಠಗಳು. ಬೀಡಿ ಸೇದಿಕೊಂಡು , ಮರದ ಕುರ್ಚಿ ಸವೆಸಿಕೊಂಡು, ಬಸವಣ್ಣನವರ ಒಂದೇ ಒಂದು ವಚನ ಹೇಳಲಿಕ್ಕೆ ಬಾರದ , ಕಾವಿಗಳನ್ನ ಬಿಟ್ಟು ಮುಂದೆ ನಡೆದೆ. ನಿಜಕ್ಕೂ ಕಾಳಜಿಯಿಂದ ಸಮಾಜದ ಒಳನಿರ್ಮಾಣದ ಕೆಲಸದಲ್ಲಿ ಆಸಕ್ತಿಯುಳ್ಳ, ಸಮಾಜಮುಖಿಯಾದ ಹಳ್ಳಿಯೊಂದರ ಮಠದಸ್ವಾಮಿಗಳ ಬಳಿ ಹೋದೆ.. ಶ್ರಾವಣಮಾಸಕ್ಕೆಂದು ಪ್ರತಿವಾರ ಒಬ್ಬೊಬ್ಬರು ಬೇರೆಬೇರೆ ಕ್ಷೇತ್ರದ ಜ್ಞಾನಿಗಳ ಭಾಷಣ ಇಟ್ಟಿದ್ದ ಬೋರ್ಡು ನೋಡಿದೆ. ಇನ್ವಿಟೇಷನ್ ನೋಡಿದೆ. ಖುಷಿಯಿಂದೆ ಪ್ರಸ್ತಾಪಿಸಿದೆ. ಸ್ವಾಮಿಗಳು ಯಾಕೋ ಎಕ್ಸೈಟ್ಮೆಂಟು ತೋರಲಿಲ್ಲ. ಮತ್ತೆ ಮತ್ತೆ ಹೇಳಿ ನೋಡಿದೆ. “ಅವ್ವ, ನಮ್ಮೊಬ್ಬರಿಂದ ಏನು ಸಾದ್ಯ? ಜನವೂ ಕೈ ಜೋಡಿಸಬೇಕಲ್ಲ. ವರ್ಷಕ್ಕೊಮ್ಮೆ ಈ ಶ್ರಾವಣದ ಕಾರ್ಯಕ್ರಮ ಮಾಡೋದೇ ಕಷ್ಟ. “ಆಮಂತ್ರಣ ಪತ್ರಿಕೇಲಿ ನನ್ನ ಹೆಸರಿಲ್ಲ”. “ಸ್ವಾಗತ ಸಮಿತೀಲಿ ಈ ಪಕ್ಷದವರ ಮೇಲುಗೈ” ಅಂತೆಲ್ಲ ತಗಾದೆಗಳು. ಒಂದು ಮಾತಾಡಿದರೆ ಹೆಚ್ಚು ಒಂದಾಡಿದರೆ ಕಡಿಮೆ. ಇನ್ನೂ ಹೇಳಲು ಹೋದರೆ ಇವರೇನೋ ದುಡ್ಡುಮಾಡಿಕೊಳ್ತಿದಾರೆ ಅನ್ನುವ ಆರೋಪವೂ ಬರುತ್ತದೆ. ಮೇಲಾಗಿ ನಮ್ಮದು ಸಣ್ಣ ಮಠ. ಹಳ್ಳಿ ಜನ ಕೊಡುವ ಧವಸ ಧಾನ್ಯ ಕಾಣಿಕೆಗಳೇ ಆಧಾರ. ನಾವು ನಮ್ಮ ಮಿತಿಯಲ್ಲಿಯೇ ಇರಬೇಕಾಗುತ್ತದೆ” ಅಂದರು. ಯಾಕೋ ಕರುಣೆ ಬಂತು.
ಉಳಿದವರು ಜನ. ನೇರ ಆಡಲಾಗದೇ ತಮಾಷೆಗೆ ಯಾರದೋ ಕಾಲೆಳೆದೆ. ಜಗಲಿ ಜನ ಮೇಲೆ ಬಿದ್ದರು. “ಐ ಬುಟ್ಟಾಕು ತಾಯೀ.. ಎಂಎಲ್ಎಗಳು ಮಂತ್ರಿಗಳು ಮೂಟ್ ಮೂಟಲೆ ಗುಡ್ಡ ಆಕಂಡರಲ್ಲ, ಅವರ್ ಕ್ಯೋಳಿ, ಆಪೀಸರ್ ಗಳ್ ಮನ ರೈಡ್ ಮಾಡ್ತರಲ್ಲ ಆಗ ಒಸಿ ದುಡ್ಡು , ಚಿನ್ನ ಸಿಕ್ಕಿದಾ? ಅವರ್ ಕ್ಯೋಳಿ. ಅದ್ ಬುಟ್ಟು ಬಡಪಾಯ್ಗಳು ಒಂದ್ ಸಾವ್ರಕ್ ಮೋಸ ಮಾಡ್ಬುಟ್ರ ಏನಾಗೋದ್ದು? ಗಂಡ ಬದ್ಕಿರೋವಾಗ್ಲೇ ಸತ್ತ ಅಂತ ತಿಥಿ ಪೋಟಾ ಪ್ರಿಂಟ್ ಮಾಡ್ಸಿ ದುಡ್ ತಕ್ಕಳ ಜನ ಅವ್ರ ಅಂದ್ರ, ಅಷ್ಟ್ ಕಷ್ಟ ಇರ್ತದ ಅವರಗ. ಓಟುಗ್ ಕೊಡಾ ದುಡ್ಡಾ ಅಲ್ಲೋಗ್ ಬೆವರ್ ಸುರ್ಸಿ ಕಳೆ ಕಿತ್ತು ಸಂಪಾದನ ಮಾಡಿದ್ರ ಆವರೆಲ್ಲ? ಯಾರ್ ತಲೆ ಒಡೆದದ್ದೋ, ಬುಷ್ಟ ಕಟ್ಕತ್ತದ ಹಂಚಲಿ ಬುಡು. ತಿನ್ನಲಿ ಬಡವರು. ನಿನಗೇನವ್ವ ಟಿವಿಲಿ ಕತ ಯೋಳ್ಬುಟ್ ಸಂಬಳ ಎಣಿಸ್ಕತ್ತಿದ್ದೈ ನಮ್ ಕತ ಕ್ಯೋಳು ವಸ್ಯಾ”. ಅಂದುಬಿಟ್ಟರು. ಇನ್ನು ಎಲ್ರನ್ನು ಊರು ಸ್ವಚ್ಚ ಮಾಡಲು ಕರೆದಿದ್ರಂತು ನಾನು ಹುಚ್ಚಿ ಅನ್ನುವ ಸರ್ಟಿಫಿಕೇಟು ಕಾಸಿಲ್ಲದೇ ಕುಂತ;ಲ್ಲೆ ಸಿಗುತ್ತಿತ್ತು.
ಸರಕಾರಕ್ಕೆ, ಅಧಿಕಾರಿಗಳಿಗೆ ಒಂದು ಇಛ್ಚಾಶಕ್ತಿಬೇಕು. ಜನರೊಳಗೆ ನೈತಿಕ ಪ್ರಜ್ಞೆ ಹರಿದಾಡಬೇಕು. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ವ್ಯವಸ್ಥೆ ಎಂಬುದು ಪಿರಮಿಡ್ಡಿನಾಕಾರದ ಬೆಟ್ಟ. ಮೇಲಿಂದ ಸುರಿವ ನೀರು ಹಳ್ಳವಿದ್ದ ಕಡೆಗೇ ಹೋಗುತ್ತದೆ, ಸಡಿಲ ಮಣ್ಣಿನತ್ತ ಸಾಗುತ್ತದೆ. ಸಿಕ್ಕಿದವರಿಗೆ, ದಕ್ಕಿದವರಿಗೆ, ದೋಚಿಕೊಂಡಷ್ಟು. ಬಾಚಿಕೊಂಡಷ್ಟು. ತಳದ ತುದಿಯ ಬೇರಿಗೆ ಸಿಕ್ಕಿದ್ದೆಷ್ಟು? ದಕ್ಕಿದ್ದೆಷ್ಟು? ವ್ಯವಸ್ಥೆಯ ಬುಡ ಗಟ್ಟಿಯಾಗಬೇಕು. ತುದಿಯಲ್ಲ. ಹಳ್ಳ ತುಂಬಿ ಫಲವಿಲ್ಲ. ವಾಸನೆಯೇಳುತ್ತದೆ. ಬೇರು ಭದ್ರವಾಗಬೇಕು ಹೊಸ ಹಸಿರಿಗೆ.ಬುಡವಿದ್ದರೆ ತುದಿ.. ತುದಿಯಿಂದ ಬುಡವಲ್ಲ. ಆದರೆ ಬೇರಿಗೆ, ಮಣ್ಣಿಗೇ ರೋಗಬರಬಾರದಷ್ಟೆ!
 

‍ಲೇಖಕರು G

August 26, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. shankar pujari

    Idu vaastav mattu satya. Badalavaneya bheru bhadra aagbekaadare janaralli aa arivu barbeku.

    ಪ್ರತಿಕ್ರಿಯೆ
  2. Anonymous

    ಗಾಂಧೀಜಿ ಕಂಡ ಕನ್ನಡಿ ಹೀಗಾಗಬಾರದಿತ್ತು, ಒಬ್ಬರಿಗೆ ಒಂದೊಂದು ಕಾನೂನು.. ವ್ಯವಸ್ಥೆ ಅಮೂಲಾಗ್ರ ಬದಲಾವಣೆಗೆ ಮುಂದಾಗಬೇಕು..ಈ ದೇಶಕ್ಕೆ ಭವಿಷ್ಯವಿಲ್ಲವೆಂದು ಓದಿದ್ದು ಈಗ ಮತ್ತೆ ನೆನಪಾಯಿತು..

    ಪ್ರತಿಕ್ರಿಯೆ
  3. sunil

    “Ella maayavo shivane naale naavu maayavo” anno haagagide bharatada bhavya bhavishyattina paristiti innu naavugalu echcharagadiddare nammantaha “jaana peddugalu” bere deshadalli hudukutta hodaroo sigodilla ……… enantira?

    ಪ್ರತಿಕ್ರಿಯೆ
  4. amardeep.p.s.

    ಎರಡೂ ಸತ್ಯಗಳನ್ನು ಒಪ್ಪಿಕೊಳ್ಳಲೇಬೇಕು… ಒಂದು ಸಾಧ್ಯವಾಗಿಸಿದ್ದು, ಇನ್ನೊಂದು ಸಾಧ್ಯವಾಗಲು ಇರುವ ಅಡಚಣೆಯದ್ದು.. ಚೆನ್ನಾಗಿದೆ ಮೇಡಂ, ನಿಮ್ ವಿಷಯ ಪ್ರಸ್ತಾಪ ಮತ್ತು ಬರಹ.

    ಪ್ರತಿಕ್ರಿಯೆ
  5. Anonymous

    ಬೇರು ಭದ್ರವಾಗಬೇಕು ಹೊಸ ಹಸುರಿಗೆ….. ನಿಜ. ಮುದಿ ಮರದ ಬೇರು ಭದ್ರವಾದಿತೆಲ್ಲಿ. ನೆಡಬೇಕಿದೆ ಹೊಸ ಸಸಿಯೊಂದನ್ನು, ಪೋಷಿಸಬೇಕಾಗಿದೆ ಉತ್ತಮ ಸಮಾಜದ ಹಸುರು ಕಾಣಲು.

    ಪ್ರತಿಕ್ರಿಯೆ
  6. ಡಾ.ಶಿವಾನಂದ ಕುಬಸದ

    ಆಪ್ತವೆನಿಸುವ,ಸುಂದರ ಬರೆಹ…

    ಪ್ರತಿಕ್ರಿಯೆ
  7. kantha

    Kusumakka,
    Nammorkade yella hinge knanko irodu and nadyodu ella same to same hingene.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: