ಕುಸುಮಬಾಲೆ ಕಾಲಂ : ಬೆಂಗಳೂರೆಂಬ ಸಮುದ್ರದೆಡೆಗೆ ಹರಿವ ನದಿಗಳು

“ಪರ್ವಾಗಿಲ್ಲ ನೀವೇ ಬರಬೇಕು ಅಂತಿಲ್ಲ. ಫೊನಲ್ ಹೇಳಿದ್ರೂ ಸಾಕು ನಾನ್ ಬರ್ತೀನಿ.” ನಮ್ಮೂರ ಕಡೆಗಳಿಂದ ಮದುವೆ ಆಮಂತ್ರಣ ಕೊಡಲು ಬರೋರಿಗೆ ನಾನು ಹೇಳೋ ಮೊದಲ ಮಾತಿದು. ಅವರ ಉತ್ತರವೂ ಹೆಚ್ಚು ಕಮ್ಮಿ ಒಂದೇ ಥರ ಇರುತ್ತದೆ. “ಹಂಗೂ ಉಂಟವ್ವ. ಪೋನ್ಲಿ ಯೋಳಕಾದ್ದ?ಅಲ್ಗೇ ಬತ್ತೀಂವಿ. ನಮ್ ಉಡುಗನ್ ಕೈಲಿ ಕೊಡ್ತೀನಿ ಒಸಿ ಅಡ್ರಸ್ ಯೋಳು” ಅನ್ನುತ್ತಾರೆ. “ನನ್ನೊಬ್ಬಳ ಸಲುವಾಗ್ ಅಷ್ಟ್ ಖರ್ಚ್ ಮಾಡ್ಕೊಂಡ್ಬರಬೇಡಿ.” ಅಂದ್ರೆ “ಇಲ್ಲ ಕಣ್ ಕೂಸು ಇನ್ನೂ ಏಡ್ ಮೂರ್ ಮನೆ ಅವ. ಬರಬೇಕು ಕಣ್ ಯೋಳವ್ವ ಅನ್ನುತ್ತಾರೆ” ನಮ್ಮ ಕಡೆಯೆಲ್ಲ ಮದುವೆ ಅಂದರೆ ಸಮಾವೇಶ ತಾನೇ? ಸಾವಿರಾರು ಜನಗಳು, ಸ್ವಾಮ್ಗಳೂ.. ರಾಜಕಾರಣಿಗಳೂ ಸೇರಲೇಬೇಕು. ಹಾಗಾಗಿ ಮನೆಯ ಎರಡು ಮೂರು ಸದಸ್ಯರು ಹಂಚಿಕೊಂಡು ಮದುವೆಗೆ ಹೇಳ್ತಿರ್ತಾರೆ. ಅದರಲ್ಲಿ ಬೆಂಗಳೂರ ಬಂಧುಗಳನ್ನ ಕರೆವುದಕೆ ಎಲ್ಲರಿಗೂ ಇಷ್ಟ. ಯಾವತ್ತೂ ನೋಡೇ ಇರದ ಬೆಂಗಳೂರನು ಈ ನೆಪದಲ್ಲಾದರೂ ನೋಡುವ ಒಂದಾಸೆಯೇ ಇದರ ಕಾರಣ.
ಮದುವೆಯಾದ ಮತ್ತು ಆಗದ ನನ್ನ ತಂಗಿಯ ವಯಸಿನ ಹುಡುಗಿಯರು “ಅಕ್ಕ ನಾನೂ ಒಂದ್ಸಲ ಬೆಂಗಳೂರ್ ನೋಡ್ಬೇಕು ಕಣಕ್ಕ ಅಂತ ಕಣ್ಣು ಮಿಟುಕಿಸುತ್ತಾರೆ. ವಯಸಾದವರೂ ಕಮ್ಮಿ ಇಲ್ಲ.ಏದುಸಿರು ಬಿಡೋ ನಮ್ಮಜ್ಜಿ “ಬರ್ತೀಯಾ ಬೆಂಗಳೂರ್ಗೆ? ಒಂದ್ ಹದಿನೈದ್ ದಿನ ಇದ್ ಬರೋವಂತೆ” ಅಂದ್ರೆ “ಕರ್ಕಂಡೋದ್ರ ಬತ್ತೀನಿ” ಅನ್ನುತ್ತಾಳೆ. ಮೊನ್ನೆ ದೂರದಿ ಸಂಬಂಧಿಯೊಬ್ಬರು “ಹಿಂಗಿಂಗೇ ನಮ್ ತಮ್ಮನ್ ಕೂಸು ಒಂದು ಬೆಂಗಳೂರ್ಲದ ಅಂದಿ. ನೀನು ಓಗ್ ನೋಡ್ಕಂಡ್ ಬರಬಾರ್ದ ಅಂತಿದ್ರು ನಮ್ಮೂರ್ ಜನ” ಅಂತ ಪರೋಕ್ಷವಾಗಿ ಅಪ್ಲಿಕೇಷನ್ ಹಾಕಿದ್ರು.
ಎಲ್ಲ ಕಡೆ ಸಿಗೋ ಸಾಮಾನ್ಯ ವಸ್ತುವಿಗೂ ಕೂಡ ಬೆಂಗಳೂರಿಂದ ತಂದದ್ದು ಅನ್ನುವ ಕಾರಣಕ್ಕೆ ವಿಶೇಷ ಬೆಲೆ ಮತ್ತು ಲುಕ್ಕು ಬಂದು ಬಿಡುತ್ತದೆ. ಒಂದು ಉದಾಹರಣೆ ಹೇಳ್ತೀನಿ, ಹೆಚ್ಚು ಕಡಿಮೆ ನನ್ನದೇ ವಾರಗೆಯ ಹುಡುಗಿಯವಳು. ನನಗೆ ನಾಲ್ಕು ವರ್ಷದ ಮಗ, ಅವಳಿಗೆ ಪಿಯುಸಿ ಓದೋ ಮಗ ಇದಾನೆ. ಒಬ್ಬತ್ತನೇ ಕ್ಲಾಸಿಗೇ ಮದುವೆಯಾಗಿತ್ತವಳಿಗೆ. ಹಾಸನದ ಹತ್ರ ಯಾವುದೋ ಹಳ್ಳಿ. ಹೊಟ್ಟೆಪಾಡಿಗೆ ಬೆಂಗಳೂರು ಸೇರಿದಾರೆ. ಅವಳಿಲ್ಲಿ ಗಾರ್ಮೆಂಟಿನಲಿ ಕೆಲಸ ಮಾಡ್ತಾಳೆ. ತುಂಬಾ ಸುಂದರಿ. ಅವತ್ತು ಊರಿಗೆ ಬಂದಾಗ ಎಲ್ರೂ ಅವಳ ಚಪ್ಪಲಿನೇ ನೋಡಿದರು. ಮರುದಿನ ಜಗಲಿ ಹೆಂಗಸರು “ಎಷ್ಟ್ ಕೊಟ್ಟೇ ಚಪ್ಪಲಿಗೇ? ಇನ್ನೊಂದ್ಸತಿ ಬೆಂಗಳೂರಿಂದ ಬರಬೇಕಾದ್ರ ನಂಗೂ ತಕಂಡ್ ಬಾ. ಅದೆಷ್ಟೋ ಕಾಸ್ ಈಸ್ಕೋ” ಅಂದ್ರು. ಅವಳು “ಅಯ್ಯೋ ಇಲ್ಲ ದೊಡ್ಡವ್ವಾ.. ಇದು ಇಲ್ಲೆ ಮೈಸೂರ್ ಬಸ್ಟಾಂಡಲೇ ತಕಂಡಿದ್ದು. ಚಪ್ಪಲಿ ಕಿತ್ತೋಯ್ತು ದಾರೀಲಿ, ಅರ್ಜೆಂಟಿಗ್ ನಂಜನಗೂಡಲ್ಲಿ ತಗಂಡ್ ಬಂದೆ”ಅಂದ್ಲು. “ ಓ..ನಂಜಲಗೂಡ್ಲಿ ತಗಂಡ್ಯಾ? ಅಂತ ರಾಗ ಎಳೆದರು. ಅದರ “ವ್ಯಾಲ್ಯೂ” ಸಡನ್ ಆಗಿ ಕಮ್ಮಿ ಆಗೋಯ್ತು.
“ಅಮ್ಮ ರಜಕ್ ಬೆಂಗಳೂರ್ಗೋಗಣ” ಅಂತ ಒಂದೇ ಸಮ ಹಠ ಹಿಡಿದಿದ್ದ ಆ ಆರರ ಹೈದ. ನನ್ನ ತಂಗಿಯೊಬ್ಬಳ ಮಗ. ಅವಳೂ ಊರಿಗ್ ಮುಂಚೆ ಮದುವೆಯಾದೋಳೇ.. ನಾನೂ ಕರ್ಕೊಂಡ್ ಬಾ ಅಂದಿದ್ದೆ. ಸರಿ,ಅಮ್ಮ ಮಗ ಬಂದ್ರು. ಒಂದು ವಾರ ದಿನಾ ಬೆಂಗಳೂರಿನ ಒಂದೊಂದು ಜಾಗಕ್ ಕರ್ಕೊಂಡ್ ಹೋದೆ. ಅಮ್ಮನ ಶಾಪಿಂಗ್ , ಮಗನ ಖುಷಿ ಎರಡೂ ಆಗಬೆಕಿತ್ತು. ಜಯನಗರ, ಗಾಂಧೀಬಜಾರು, ಬಾಲಭವನ. ಬಸವನಗುಡಿ. ಮಲ್ಲೇಶ್ವರಂ . ಫೋರಂ, ಸೆಂಟ್ರಲ್. ಮಂತ್ರಿ ಅಂತಾ ದೊಡ್ಡ ಮಾಲ್ ಗಳು..ಹೀಗೇ.. ಏನು ನೋಡಿದರೂ ಅವನಿಗೆ ಅದೇನೋ ಸಮಾಧಾನವೇ ಆಗಲಿಲ್ಲ. ಏನೋ ಒಂದು ಆಸೆ ಅತೃಪ್ತಿ ಉಳಿದೇ ಇದ್ದಂತೆ ಕಾಣುತ್ತಿದ್ದ. ಒಂದು ಭಾನುವಾರ ಎಂ,ಜಿ ರೋಡು.ಮತ್ತು ಮೆಟ್ರೋ ರೈಲು ನೋಡಹೋದೆವು. ಎಂ.ಜಿ ರೋಡಲಿ ಆ ಪುಟಾಣಿ ಒಂದು ಪ್ರಶ್ನೆ ಕೇಳ್ತು “ ದೊಡ್ಡಮ್ಮ, ಜಾಕಿ ಮನೆ ಎಲ್ಲಿ ? ಇಲ್ಲೇನಾ?” ನಂಗರ್ಥವಾಗಲಿಲ್ಲ. “ಯಾವ್ ಜಾಕೀ?” ಕೇಳಿದೆ. ಅವರಮ್ಮ ಹೇಳಿದಳು. ಜಾಕಿ ಅಂದ್ರೆ ಪುನೀತ್ ರಾಜ್ ಕುಮಾರ್. “ಏನೋ ಜಾಕಿ ಮನೆ ನೋಡ್ಬೇಕಾ ನೀನು?” ಕೇಳಿದೆ. “ಹ್ಞೂ. ಬೆಂಗಳೂರ್ಲೇ ತಾನೆ ಜಾಕಿ ಮನೆ ಇರದು? ಸೂಪರ್ ಸ್ಟಾರ್ ಜೆಕೆ ಮನೆನೂ ಇಲ್ಲೆ ಅಲ್ವ? ಎಲ್ಲ ಈರೋಗಳು ಇಲ್ಲೆ ಇರಾದು ಅಲ್ವ?” ಕೇಳಿತು ಮಗು. “ಹ್ಞೂ. ಎಲ್ರೂ ಬೆಂಗಳೂರಲ್ಲೆ ಇರೋದು” ಅಂದೆ. “ಮಂತ ಎಲ್ಯ ನೀವ್ ಯಾರ್ ಮನಾನೂ ತೋರಿಸ್ನೇ ಇಲ್ಲ?” ಅಂದ. ನಾನು ಕಕ್ಕಾಬಿಕ್ಕಿ. ಕಡೆಗೆ ಏನೋ ಕತೆ ಕಟ್ಟಿದ್ದಾಯ್ತು. ಪಿಚ್ಚರಿನವರು, ದಾರಾವಾಹಿಯವರು ಎಲ್ಲ ಬೆಂಗಳೂರಲ್ಲೆ ಇದಾರೆ. ನಮ್ಮ ಕಣ್ಣಿಗೆ ಸಿಕ್ತಾರೆ. ಬೆಂಗಳೂರಿಗ್ ಹೋದ್ರೆ ಅವರ ಮನೆಗಳನ್ನ ನೋಡಬಹುದು. ಅವರನ್ನ ಪ್ರತ್ಯಕ್ಷ ಕಾಣಬಹುದು ಅನ್ನುವ ಸುಂದರ ಕಲ್ಪನೆ ಕೂಡ ಬೆಂಗಳೂರಿನ ಬಗೆಗಿನ ಮೋಹದ ಒಂದು ಕಾರಣ ಅಂತ ಹೊಳೀತು ನನಗೆ. ಅವನು ಬೆಂಗಳೂರಿಗೆ ಬಂದದ್ದು “ಜಾಕಿ” ಮನೆ ನೋಡಲಿಕ್ಕೆ. ಪಾಪ ಹಳ್ಳಿಯ ಮಕ್ಕಳ ಮುಗ್ದ ಮನಸಲಿ ಕಾಣದ ಪಟ್ಟಣಗಳ ಬಿಂಬ ಹೇಗೆಲ್ಲಾ ಚಿತ್ರಿತವಾಗಿರುತ್ತದೆಯೋ. ನಾನೂ ಬೆಂಗಳೂರು ನೋಡಿದ್ಧೇ 23ನೇ ವಯಸಲ್ಲಿ. ಅಲ್ಲೀವರೆಗೂ ನನ್ ತಲೇಲೂ ಇಂತವೇ ವಿಚಿತ್ರ ಕಲ್ಪನೆಗಳಿದ್ವು. ಕೇಳಿದರೆ ನಗ್ತೀರಿ. ಈಗ ಬೆಂಗಳೂರಲ್ಲಿ ಕೂತು ನೋಡದ ಅಮೆರಿಕೆಯನ್ನೋ, ಜರ್ಮನಿಯನ್ನೋ ಕಲ್ಪಿಸಿಕೊಳ್ತೇನೆ.

ಯಾವತ್ತೋ ಯಾರ ಜತೆಗೋ ಕೂಲಿ ಮಾಡೋಕೆ ಅಂತ ಬಂದು ಒಂದು ಕಟ್ಟಡವನ್ನೋ, ಅಥವಾ ಒಂದು ನಿರ್ದಿಷ್ಟ ಅವಧಿಯ ಕೂಲಿಗಾರಿಕೆಯನ್ನೋ ಮಾಡಿ ಹೋಗೋ ಮಂದಿ ಕೂಡ, ವಾಪಾಸು ಹೋದ ಮೇಲೆ ಬೆಂಗಳೂರನ್ನ ಅತಿರಂಜಿತವಾಗಿ ವರ್ಣಿಸುತ್ತಾರೆ.ಅವರು ಕೆಲಸ ಮಾಡಿದ ಜಾಗದ ಸುತ್ತಮುತ್ತಲ ಬೆಂಗಳೂರ ಪ್ರದೇಶವನ್ನೂ. ಮತ್ತು ಯಾವುದೋ ಒಂದು ಅವರು ನೋಡಲು ಸಾಧ್ಯವಾಗುವ ವರ್ಗದ ಬದುಕನ್ನು ಮಾತ್ರ ನೋಡಿರುತ್ತಾರವರು. ಬೆಂಗಳೂರಲ್ಲೇ ಎಷ್ಟೋ ವರ್ಷಗಳಿಂದ ವಾಸಿಸುತ್ತಿರೋರಿಗೇ ಇಲ್ಲಿನ ಪೂರ್ಣ ನೋಟ ಸಿಕ್ಕಿರುವುದಿಲ್ಲ ಇನ್ನು ಒಂದು ನಿರ್ದಿಷ್ಟ ಅವಧಿಯ ಕೂಲಿಗಾರಿಕೆಗೆ ಬಂದವರಿಗೆಲ್ಲಿಂದ ಸಿಗಬೇಕು? ಮತ್ತು ನಮ್ಮಂತವರ ಮನೆಗಳನ್ನ ನೆಚ್ಚಿಕೊಂಡು ಬರೋರಿಗೂ ಅಷ್ಟೇ ನಾವು ಕರಕೊಂಡು ಹೋಗಿ ತೋರಿಸಿದ್ದೇ ಬೆಂಗಳೂರು. ಉಳಿದದ್ದು ಉಳಿದದ್ದಷ್ಟೇ..ಯಾವತ್ತಿಗೂ ಊರಿಂದ ಬಂದು ಹೋಗೋರ ಕಣ್ಣಿಗೆ ದಕ್ಕುವ ಬೆಂಗಳೂರು ಒಂಥರಾ ಕುರುಡರು ಆನೆ ನೋಡಿದ ಹಾಗೆ.
ನನಗನಿಸತ್ತೆ ಈ ಟಿವಿ ಚಾನೆಲ್ಗಳು ಬಂದಮೇಲೆ ಹಳ್ಳಿಗರ ಬೆಂಗಳೂರ ಮೋಹ ಹೆಚ್ಚಾಯಿತಾ ಅಂತ. ಮೇಲಿಂದ ಮೇಲೆ ಬೆಂಗಳೂರನ್ನೇ ಸುದ್ದಿ ಮಾಡೋ ನ್ಯೂಸ್ ಚಾನೆಲ್ಗಳು. ಬೆಂಗಳೂರಾಚೆ ಲೊಕೇಷನ್ನುಗಳಿಗೆ ಕಾಲೇ ಇಡದ ದಾರಾವಾಹಿಗಳು. ಮೆಟ್ರೋ ನ್ಯೂಸ್ ಹೆಸರಿನ ಹಿಂದಿನ ಮೆಜಸ್ಟಿಕ್ ಬ್ಯಾಕ್ ಡ್ರಾಪ್. ಮತ್ತು ನಮ್ಮ ಹಾಗೆ ಹೊಟ್ಟೆಪಾಡಿಗೆ ಬೆಂಗಳೂರು ಸೇರಿ ಆಗಾಗ ಊರಿಗೆ ಹೋಗಿ ಅವರ ಕಣ್ಣ ಆಸೆ ಹೆಚ್ಚಿಸುವವರು. ಅಥವಾ ರೋಗ ಹರಡುವವರು. ಮತ್ತು ಮಕ್ಕಳ ಬೆಂಗಳೂರ ವಾಸವನ್ನ ಬೆಂಗಳೂರ ಅರಮನೇಲೇ ಇದಾರೆ ಅನ್ನೋ ರೇಂಜಿಗೆ ಬಿಲ್ಡ್ ಅಪ್ ಕೊಟ್ಕೊಳೋ ನನ್ನಪ್ಪನಂತ ಹೆತ್ತವರು. ಊರ ಪಡ್ಡೆಹೈಕಳ ಪೈಕಿ ಬೆಂಗಳೂರಿಗೆ ಬಂದು ಇಲ್ಲಿ ಪಡಿಪಾಟಿಲು ಪಟ್ಟರೂ,ಊರ ಜಗಲೀಲಿ ಕೂತು ಉಳಿದ ಹುಡುಗರಿಗೆಲ್ಲ ಮೆಟ್ರೋರೈಲು ಹತ್ತಿಸೋ ಹುಡುಗರು. ಇದೆಲ್ಲ ಸೇರಿ “ಜೀವನದಲ್ಲಿ ಒಂದ್ಸಲ ಬೆಂಗಳೂರ ದರ್ಶನ ಮಾಡಬೇಕು ಅನಿಸೋ ಹಾಗೆ ಮಾಡಿಬಿಟ್ಟಿರತ್ತೋ ಏನೋ. ಜೊತೆಗೆ ಕೆಟ್ಟು ಪಟ್ಣ ಸೇರೋ ಗಾದೆ. ಉದ್ಯೋಗದ ದೃಷ್ಟಿಯಿಂದ “ಬೆಂಗಳೂರೊಂದು ಸಮುದ್ರ” ಅನ್ನೋ ನಂಬಿಕೆಯೂ
ಈಚೆಗೆ ಬೆಂಗಳೂರಿನ ಡಿಸ್ಟೆನ್ಸ್ ಕೂಡ ಕಮ್ಮಿಯಾಗೋಗಿದೆ ಜನರಿಗೆ ಯಾವುದೇ ಊರಿಂದ ರಿಂಗ್ ರೋಡ್ ಮಾಡ್ತಿದಾರೆ ಅಂದ್ರೆ ಸುತ್ತಿ ಬಳಸಿ ಅದು ಬೆಂಗಳೂರು ರಸ್ತೆ ಸೇರಿಕೊಳ್ತದೆ. ಹಿಂದೆ ಅದೆಷ್ಟು ದೂರದಲ್ಲಿ ಕಾಣ್ತಿತ್ತೆಂದರೆ.. ಒಂದು ಉದಾಹರಣೆ ಹೇಳ್ತೀನಿ ಕೇಳಿ, ನಮ್ಮಮ್ಮನ್ನ ನೋಡೋಕೆ ಬೆಂಗಳೂರ ಗಂಡೊಂದು ಬಂದಿತ್ತಂತೆ ಹೆಚ್ ಎ ಎಲ್ ನಲ್ಲಿ ಕೆಲಸ. ನನ್ನ ಮುತ್ತಾತ “ಐ ಹಂಗೂ ಉಂಟಾ? ಕಾಣ್ದೇ ಇರೋ ಊರ್ಗ ಎಣ್ ಕೊಡಕಾದ್ದಾ? ಬೆಂಗಳೂರು. ನಮಗ್ ದಾರಿ ಗೊತ್ತಾದ್ದಾ? ಅಷ್ಟ್ ದೂರಕ್ ಸುತರಾಂ ಕೊಡಲ್ಲ. ಆಮೇಲ ನಮ್ಮೆಣ್ಣ ಕರ್ಕಂಡೋಗ್ ಏನಾರ ಮಾಡುದ್ರ ತಾನೇ ನಮಗ್ ಗೊತ್ತಾದ್ದಾ? ಅವರ ಬದುಕು,ಬಾಳು, ನಮಗ್ ಕಾಣಂಗಿರಬೇಕು” ಅಂತ ಕಳಿಸಿಬಿಟ್ರಂತೆ. ಆ ಕಾಲಕ್ಕೇ ಸಿನೆಮಾ ಭಾರತಿ ಹಂಗ್ ಸ್ಟೈಲೊಡೀತಿದ್ ನಮ್ಮಮ್ಮ ಪಾಪ ಅವರ್ ತಾತಪ್ಪ ಬದುಕು ಬಾಳು ನೋಡೋ ಸಲುವಾಗಿ ನಮ್ಮಪ್ಪನಂತ ಕರಿಗಂಡನ್ನ ಮದುವೆಯಾಗಿ, ನಾಗರಿಕತೆ ಸೋಂಕೂ ಇರದ ಹಳ್ಳಿ ಸೇರಿದ್ದು. ಮುಂಗುರುಳಿಗೆ ಬ್ರೇಕು ಹಾಕಿ, ಜಮೀನು ಕೆಲಸಕ್ಕಿಳಿದದ್ದು ಈಗ ಇತಿಹಾಸ. (ಈಗ್ಲೂ ಜಗಳ ಆದಾಗೆಲ್ಲ ನಮ್ಮಮ್ಮ ಆ ಹೆಚ್ ಎ ಎಲ್ ಗಂಡನ್ನು ನೆನಸಿಕೊಳ್ತಾರೆ ಅನ್ನೋದು ಬೇರೆ ಮಾತು) ಆದರೆ ಇವತ್ತು? ಗಂಡು ಬೆಂಗಳೂರಲ್ಲಿದ್ದರೆ ಸಾಕು, ಸೆಕ್ಯೂರಿಟಿ ಗಾರ್ಡ್ ಕೆಲ್ಸ ಮಾಡಿದ್ರೂ ಚಿಂತಿಲ್ಲ ಹೆಣ್ ಕೊಡ್ತಾರೆ. ಕಾಲಪ್ಪನ ಮಹಿಮೆ ಹೆಂಗದೆ ನೋಡಿ.
ಬೆಂಗಳೂರಿನ ಮೋಹದ ಬಗೆಗಿನ ಕರಾಳ ಕಥೆ ಹೇಳ್ತೀನಿ ಕೇಳಿ, ಜೀ ಕನ್ನಡದ “ಕ್ರೈಂ ಫೈಲ್ “ ಅನ್ನೋ ಕಾಯಕ್ರಮಕ್ಕೆ ಕೆಲಕಾಲ ನಾನು ಸ್ಕ್ರಿಪ್ಟ್ ಮಾಡುತ್ತಿದ್ದೆ. ನಿಜದಲ್ಲಿ ನಡೆದ ಘಟನೆಗಳನೆತ್ತಿಕೊಂಡು ಸಾಮಾಜಿನ ದೃಷ್ಟಿಕೋನದಿಂದ ಕಥೆಯಾಗಿಸಿ, ಇಡೀ ಘಟನೆಯನ್ನ ಪಾತ್ರಗಳ ಮೂಲಕ ಮರುಸೃಷ್ಟಿ ಮಾಡಿ, ಘಟನೆಯ ನಂತರದ ನೋವುಗಳ ಅನಾವರಣ ಮಾಡುತ್ತಿದ್ದೆವು. ಆ ಕಾರ್ಯಕ್ರಮಕ್ಕಾಗಿ ಬಂದ ಈ ಕಥೆ, ಮತ್ತು ಆರೋಪಿಯ ಹೇಳಿಕೆ , ಎಫ್ ಐ ಆರ್ ಕಾಪಿ ಎಲ್ಲವನ್ನೂ ನೋಡಿ ನಾನು ದಂಗಾಗಿಹೋಗಿದ್ದೆ. ಘಟನೆ ಹೀಗಿದೆ; ಈಗ್ಗೆ ಒಂದೂವರೆ ಅಥವಾ ಎರಡು ವರ್ಷಗಳ ಹಿಂದೆ ಕೆ ಆರ್ ನಗರದ ಹತ್ತಿರದ ಒಂದು ಹಳ್ಳಿಯಲ್ಲಿ ( ನಂದಿಹಳ್ಳಿ ಅಂತಲೇನೋ ಹೆಸರು ಮರೆತೆ) ದಂಪತಿಗಳಿಗೆ ಮಕ್ಕಳಿರಲಿಲ್ಲ. ಊರ ಮುಖಂಡ ಆತ . ದೊಡ್ಡ ಆಸ್ತಿವಂತರು.ಮಗುವಿಗಾಗಿ ಅವರು ಹೊರದ ಹರಕೆಗಳಿಲ್ಲ. ಕಡೆಗೆ, 15 ವರ್ಷದ ನಂತರ ಅವರಿಗೊಂದು ಹೆಣ್ಣುಮಗುವಾಗುತ್ತದೆ. ಪ್ರೀತಿಯಿಂದ ಬೆಳೆಸುತ್ತಾರೆ. ಅವಳ ಓರಗೆಯ ಹುಡುಗಿ ಬೆಂಗಳೂರಿಗೆ ಮದುವೆಯಾಗಿರುತ್ತದೆ. ಅವಳು ಹೋಗಿ ಬಂದು ಬೆಂಗಳೂರನ್ನ ಬಣ್ಣ ಬಣ್ಣವಾಗಿ ವರ್ಣಿಸುತ್ತಿರುತ್ತಾಳೆ. ಹುಡುಗಿ ಹತ್ತನೇ ಕ್ಲಾಸಾದ ಮೇಲೆ ನಾನು ಬೆಂಗಳೂರಲ್ಲಿ ಕಾಲೇಜು ಕಲೀತೀನಿ ಅಂತಾಳೆ. ಅಪ್ಪ ಬೇಡ ಬೇಕಾದರೆ ಮೈಸೂರಿಗೆ ಹೋಗು ಅಂತಾರೆ. ಅವಳಿಗೆ ನಿರಾಸೆ. ಕಡೆಗೆ ಒಂದೆರಡು ವರ್ಷ ಓದು ಸಾಗಿ, ಮುಂದೆ ಮದುವೆ ಮಾಡುತ್ತಾರೆ. ಅಳಿಯನ ಮನೆಯವರೂ ಸ್ಥಿತಿವಂತರೇ ಆದರೆ ಮಗಳನ್ನ ಬಿಟ್ಟಿರಲಾರದ ಅಪ್ಪ, ಅವಳನ್ನ ಅದೇ ಊರಲ್ಲಿರಿಸಿಕೊಳ್ತಾರೆ. ಅಳಿಯ ಸಂಕೋಚ ತೋರಿಸಿದ್ದಕ್ಕೆ ಬೇರೆ ಮನೆಯನ್ನೇ ಮಾಡಿಕೊಡ್ತಾರೆ. ಹುಡುಗಿಗೆ ಮಗುವಾಗುತ್ತದೆ. ಒಂದೇ ಊರಲ್ಲಿರೋ ಮಗಳ ಮನೆಗೆ ದಿನಕ್ಕೆರಡು ಸಲ ಹೋಗಿ ಮಗಳ ಸಂಸಾರ ನೋಡದಿದ್ದರೆ ಅಪ್ಪನಿಗೆ ಸಮಾಧಾನವಿಲ್ಲ.
ಒಂದು ದಿನ ಊರ ಮುಂದೆ ಅಪ್ಪನ ಹೆಣ ಕಾಣುತ್ತದೆ. ಅಪ್ಪ ಕೊಲೆಯಾಗಿ ಬಿದ್ದಿರುತ್ತಾರೆ. ಊರಲ್ಲಿ ಶತ್ರುಗಳೇ ಇರದವರ ಕೊಂದವರ್ಯಾರು.? ಶುರುವಾಗತ್ತೆ ಪೋಲೀಸ್ ಎಂಕ್ವೈರಿ..ಅಪರಾಧಿ ಕಡೆಗೂ ಸಿಕ್ಕಿಬೀಳ್ತಾರೆ. ನಂಬಿ, ಆತನನ್ನ ಕೊಂದದ್ದು ಅವರ ಮಗಳು!! ಬಯಸೀ ಬಯಸೀ ಪಡೆದ ಮಗಳು! ಏನ್ ಬಂದಿತ್ತು ರೋಗ ಮುಂಡೇದಕ್ಕೆ? ಅಂದ್ರೆ, ಅದೇ ಹಾಳು ಬೆಂಗಳೂರು ಚಪಲ. ಇಡೀ ಆಸ್ತಿ ಮಾರಿ ಬೆಂಗಳೂರಲ್ಲಿ ಎರಡೋ ಮೂರೋ ಮನೆ ತಗೊಳೋಣ. ಗಂಡನೂ ಕೆಲಸಕ್ಕೆ ಹೋಗಲಿ, ಇಲ್ಲದಿದ್ರೆ ಬಾಡಿಗೆಯಂತೂ ಬರತ್ತೆ. ಒಟ್ನಲ್ಲಿ ಬೆಂಗಳೂರಿಗೆ ಹೋಗಬೇಕು ಅಂತ ಅವಳ ಹಠ. ಯಾವ ಕಾರಣಕ್ಕೂ ಊರ ಆಸ್ತಿ ಮಾರಿಹೋಗಲು ಒಪ್ಪದ ಅಪ್ಪ, ಹೀಗೇ ವಾದ ನಡೀತಾ.. ಒಂದಿನ ಮನೆಗೆ ಬಂದ ಅಪ್ಪನೊಡನೆ ಜಗಳಾಡಿ,ತಾರಕಕ್ಕೇರಿ “ನೀನು ಸತ್ರೆ ಆಸ್ತಿ ನಂದೇ ತಾನೆ ನೀನಿದ್ರೆ ತಾನೇ ಅಡ್ಡಿಮಾಡೋದು?” ಅಂತ ಅಪ್ಪನ ತಲೆಗೆ ಹೊಡೆದು ಕೊಂದುಬಿಡ್ತಾಳೆ ಮಗಳು. ಎಸ್….. 15 ವರ್ಷ ತಪಸ್ಸು ಮಾಡಿ ಪಡೆದ ಮಗಳು! ಕಣ್ಣ ರೆಪ್ಪೆಯಂತೆ ನೋಡಿಕೊಂಡ ಮಗಳು. ಜೀವಮಾನದ ಪ್ರೀತಿಯನ್ನೆಲ್ಲ ಕೊಟ್ಟ ಮಗಳು , ಬೆಂಗಳೂರ ರಂಗೀನ್ ದುನಿಯಾದಲ್ಲಿ ಬದುಕೋ ಕನಸಿಗೆ. ಜೀವ ಕೊಟ್ಟ ಅಪ್ಪನನ್ನೇ ಹೆಣವಾಗಿಸಿ ಬಿಸಾಕ್ತಾಳೆ.. ಎಫ್ ಐ ಆರ್ ಕಾಫಿ ನೋಡಿದೆ. ಘಟನೆಯಾಗಿ 15 ದಿನವಾಗಿತ್ತಷ್ಟೆ. ಮೈ ನಡುಗಿತು. ಎಂತೆಂತಾ ಕೊಲೆಯ ಘಟನೆಗಳನ್ನೇ ಮುಲಾಜಿಲ್ಲದೇ ಬರೆದಿದ್ದೆ. ಆದರೆ ಈ ಕಥೆ…ಯಪ್ಪಾ.. ಅದ್ಯಾವ ಪರಿ ಕಾಡಿಬಿಡ್ತು ಅಂದ್ರೆ. ಆ ಕಾರ್ಯಕ್ರಮಕ್ಕೆ ನಾನು ಬರೆದ ಕಟ್ಟ ಕಡೇ ಕಥೆ ಇದೇ.!! ಯಾವತ್ತಾದರೂ ಅವಳು ಸಿಕ್ಕಿದರೆ ಕಪಾಳಕ್ಕೆ ಬಾರಿಸುವ ಆಸೆ ಇನ್ನೂ ಜೀವಂತವಾಗಿದೆ.!
ಬೆಂಗಳೂರ ಬಗ್ಗೆ ಜನರಿಗೆ ಹಿಂದೆ ಇಷ್ಟು ಆಸಕ್ತಿ ಇರಲಿಲ್ಲ. ಬದುಕು ಸರಳವಿತ್ತು, ರೈತ ಮಗನಿಗಾಗಿ ಜಮೀನು ಕೊಳ್ಳುತ್ತಿದ್ದ. ಈಗ ರೈತ ಮಗನಿಗಾಗಿ ಜಮೀನು ಮಾರುತ್ತಾನೆ.. ಫೀಜು ತುಂಬುತ್ತಾನೆ. ರೈತರ ಮಕ್ಕಳು ರೈತರಾಗುತ್ತಿಲ್ಲ.ಆಗಬೇಕಾಗೂ ಇಲ್ಲ. ಮನ್ವಂತರದ ಕಾಲಘಟ್ಟವಿದು. ಈಗ ಫ್ಲೋ…ಏನಿದ್ದರೂ ಮನೆ ಹೊಸಿಲಿಂದ ಇತ್ತಿತ್ತಲೇ ಹೊರತು ಹಿಂದಲ ಹಿತ್ತಲ ಕಡೆಗಲ್ಲ. ಬೇಕಿದ್ದರೆ ಒಂದು ಪುಟ್ಟ ಸರ್ವೆ ಮಾಡಿ, ಹಿಂದೆ ಸುಮಾರು 50 ವರ್ಷಗಳ ಹಿಂದೆ ಒಂದು ಹಳ್ಳಿಯ ಎಷ್ಟು ಜನರ ಮಕ್ಕಳು ಬೆಂಗಳೂರಲ್ಲಿದ್ದರು ಕೇಳಿ. ಮಕ್ಕಳಲ್ಲ, ಬೆಂಗಳೂರಲ್ಲಿ ನೆಂಟರಿರೋರ ಮನೆ ಸಿಗೋದು ಅಪರೂಪವಿತ್ತು. ಬರಬರುತ್ತಾ ಈ ಸಂಖ್ಯೆ ಏರುವುದನ್ನ ಗಮನಿಸಿ. ಹಾಗೇ ದಾರವಾಡ, ಹುಬ್ಬಳ್ಳಿ, ಶಿವಮೊಗ್ಗೆ. ಮೈಸೂರುಗಳನೂ ಸರ್ವೆ ಮಾಡಿ. ಬೆಂಗಳೂರಿಗೆ ಬಂದ ಜನನದಿಯ ಹರಿವು ನಿರಂತರ. ಹಾಗೇ ಬೆಂಗಳೂರನ್ನೂ ಸರ್ವೆ ಮಾಡಿದರೆ ಬೆಂಗಳೂರಿಂದ (ಮತ್ತು ಇತರೆ ಅಂಥದೇ ನಗರಗಳಿಂದ) ವಿದೇಶಕ್ಕೆ ಹೋದವರ ಸಂಖ್ಯೆ ಕೂಡ ಹೀಗೇ ಏರಿಕೆ ಕಂಡಿದೆ. ಮತ್ತೆ ಪಿರಮಿಡ್ಡಿನ ಉದಾಹರಣೆ ಹೇಳ್ತೀನಿ. ದೇಶವೆಂಬ ಪಿರಮಿಡ್ಡಲಿ.ಅದರಲ್ಲೂ ಭಾರತದಂತ ದೇಶದ ಪಿರಮಿಡ್ಡಲಿ ತಳದ ಅಗಲ ಆಕಾರ ಹಳ್ಳಿಗಳು. ಮೇಲಕ್ಕೇರಿದಂತೆ ನಗರಗಳು. ಆದರೀಗ ಪಿರಮಿಡ್ ಉಲ್ಟಾ ತಿರುಗಿ ನಿಲ್ಲುವಂತ ಬೆಳವಣಿಗೆಗಳಾಗ್ತಿವೆ. ಬ್ಯಾಲೆನ್ಸ್ ಮಾಡಬಹುದು ಅಂತೀರಾ? ಎಷ್ಟು ದಿನ?

‍ಲೇಖಕರು G

October 21, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

13 ಪ್ರತಿಕ್ರಿಯೆಗಳು

  1. M S Krishna murthy

    ಬೆಂಗಳೂರು ನಗರದ ಚಿತ್ರಣ ಚೆನ್ನಾಗಿದೆ. ಹಾಗೆ ನೋಡಿದರೆ ಈಗ ಇದಕ್ಕೆ ತನ್ನದೇ ಆದ ಅಸ್ತಿತ್ವ ಇಲ್ಲ..

    ಪ್ರತಿಕ್ರಿಯೆ
  2. shammi

    abbaa…nagarada melina moha appanigintalu jaasti aytaa? karulu churr antu…maayaanagariya mohakke bidda patangagalu suttu halaago pari…nammur kade iglu bengluru andre ontharaa fairy tale….

    ಪ್ರತಿಕ್ರಿಯೆ
  3. ಡಾ.ಶಿವಾನಂದ ಕುಬಸದ

    ಎಂದಿನಂತೆ ಒಳ್ಳೆಯ ನಿರೂಪಣೆ…ಥಳುಕಿನೆಡೆಗಿನ ಆಕರ್ಷಣೆ ಮತ್ತೆ ಅದರೆಡೆಗಿನ ಚಲನೆ ತಡೆಗಟ್ಟಲಾಗದ್ದು.

    ಪ್ರತಿಕ್ರಿಯೆ
  4. Basavaraj

    ಅಕ್ಕವರ್ರೆ ಈ ಬರಹ ತಲೆಯೊಳಗೆ ಅಚ್ಚು ಹೊಡೆದಂತಾಗಿದೆ ೨೦೦೩ ರಲ್ಲಿ ಐಟಿಐ ಮುಗಿಸಿದ ನನಗೆ ಬೆಂಗಳೂರುನ ನೊಡಿತಿನೊ ಇಲ್ವೋ ಅನಿಸಿತ್ತು. ಜೊತೆಗೆ ಒದಿರೊರು ಹುಬ್ಬಳ್ಳಿಯಲ್ಲಿ ಎಂ ಆರ್ ಎ ಸಿ ಅಷ್ಟು ಬೇಡಿಕೆ ಇಲ್ಲ ಬೆಂಗಳೂರಿನ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಸಿಗತಾವೇ ಅಮನತಾ ಹೋಗಲು ಮಾತಾಗಿತ್ತು. ಆದರೆ ಹೊಗಕೆ ಆಗಲಿಲ್ಲ ಒಂದು ದಿನ ಆ ಗಳಿಗೆ ನನ್ನನ್ನು ಹುಡುಕಿಕೊಂಡು ದೂರದ ರಿಲೆಸನ್ನ ಸಂಜೀವ ಜಾಧವ ಅನ್ನೋ ನಮ್ಮ ಮಾವನ ರೂಪದಲ್ಲಿ.ಪುಟ್ನಂಜ ತರಾ ಜೊರಾಗಿ ಜಮೀನಿನ ಕೆಲಸಗಳನ್ನು ಮಾಡಿಕೊಂಡು ಇದ್ದೆ.ನಮ್ಮ ಐಟಿಐ ಸರ್ಟಿಫಿಕೇಟ್ ನೊಡಿದ್ದೆ ತಡ ನಮ್ಮಮನೆಲಿ ಇಟಕೊಂಡಿದಿರಾ ಕಳಿಸಿ ನನ್ನ ಜೊತೆ ಒಳ್ಳೆಯ ಕೆಲಸವನ್ನು ಕೊಡಸತಿನಿ ಅನ್ನೋದು ತಡಾ ನಮ್ಮ ಮನೆಯವರು ನನ್ನ ಕೇಳದೆ ಕಳಸಕೆ ತಯಾರ.ಯಾಕೆಂದರೆ ಬರಗಾಲಕ್ಕೆ ತತ್ತರಿಸಿದ್ದ ಮನೆತನದ ನೊಗಬಾರವನ್ನ ಹೊತ್ತಿದ್ದು ಕೇವಲ ಕೆ ಎಸ್ ಆರ್ ಟಿ ಸಿ ಡ್ರೈವರ್ ಚಿಕ್ಕಪ್ಪ ಅವರಿಲ್ಲ ಅಂದರೆ ಇವತ್ತು ನಾವಿಲ್ಲ ಆ ವಿಷಯ ಬೇರೆ ಇರಲಿ.ಹೆಂಗು ಬೆಂಗಳೂರು ನೊಡೊಆಸೆ ತೀರತ್ತಲ್ಲಪಾ ಒಳೊಳಗೆ ಆದ್ರೆ ತುಂಬಿದಮನೆ ಬಿಡೊಕಷ್ಟ ಬೆಡಪ್ಪ ಬೆಡಾ.ಹೆಗೊ ನಮ್ಮ ಅಜ್ಜಿ ಹೋಗು ನೀನು ಬೆಂಗಳೂರು ನೊಡಿದಂಗ ಆಗುತ್ತೆ ನಿನಗಿಷ್ಟ ಆದರೆ ಇರು ಇಲ್ಲಾಂದ್ರೆ ನಿನಗೆಂತಾನೆ ನಿಮ್ಮ ಚಿಕ್ಕಪ್ಪ ಟ್ರ್ಯಾಕ್ಟರ್ ತೊಗಂಡಿದಾರೆ.ಅಂತಾ ಧೈರ್ಯ ಕೊಟ್ರು. ೨೬ ಡಿಶಂಬರ್ ೨೦೦೬ಕ್ಕೆ ಮನೆ ಬಿಟ್ಟೊನಿಗೆ ಬದುಕಲಿಕ್ಕೆ ಕಲಿಸಿದ್ದೆ ಈ ಬೆಂದಕಾಳುರು . ಐಟಿಪಿಎಲ್ ಅನ್ನೊ ದೊಡ್ಡ ಕಂಪನಿಯಲ್ಲಿ ಜೆನರಲ್ಲ ಮೊಟರ್ಸ ಟೆಕ್ನಿಕಲ್ ಸೆಂಟರನಲ್ಲಿ ಕೆಲಸ.ನೀವೆ ಹೆಳಿದಂಗೆ ಎಷ್ಟೋ ಜನ ಅಲ್ಲಿಂದ ಪಾರಿನಿಗೆ ಹೊಗದಾರೆ ಅಂದರಲ್ಲ ಹಾಗೆ ಅದರಲ್ಲಿ ನಾನು ಒಬ್ಬ ಖತರ್ ನಲ್ಲಿ ತಾಯ್ನಾಡನ್ನು ನೆನಿಯುತ್ತಾ ದುಡಿತಾ ಇದಿನಿ.ಐ ಲವ್ ಬೆಂಗಳೂರು-ಧಾರವಾಡ…..,..
    ಬಸವರಾಜ. ಜೋ.ಜಗತಾಪ
    ಬಸಾಪೂರ
    ಕುಂದಗೋಳ

    ಪ್ರತಿಕ್ರಿಯೆ
  5. ಅಮರದೀಪ್ ಪಿ. ಎಸ್

    Bengaluru kathe chennaagu ide. bhayaanakavaagiyu ide… baraha ishtavaaytu.

    ಪ್ರತಿಕ್ರಿಯೆ
  6. ಅಕ್ಕಿಮಂಗಲ ಮಂಜುನಾಥ

    ನಂಗೂ ಮೊದ ಮೊದಲು ಹಂಗೇ ಅನಿಸ್ತಾ ಇತ್ತು, ನೋಡ ಬೇಕು ನಲೀಬೇಕು ಅಂತ.ಎಂತೆಂತವರೋ ಬೆಂಗಳೂರು ನೋಡಿ ಬಂದು ಏನೇನೋ ಹೇಳತಾ ಇದ್ದಾಗ ನಂಗೂ ಹೊಟ್ಟೆ ಉರೀತಾ ಇತ್ತು-ನೋಡಲಿಲ್ಲ ಮಾಡಲಿಲ್ಲ ಅಂತ.
    ಆ ಮ್ಯಾಲೆ ತಿಳೀತು ಮ್ಯಾಲೆ ಮಾತ್ರ ಅಂದ, ಸೆರಗೊಳಗೆ ಬರೀ ಕಸ ಕಡ್ಡಿ ಗಲೀಜು ಹುಣ್ಣು ತುಂಬಕಂಡೈತೆ ಅಂತ. ಒಬ್ಬರನ್ನ ತುಳದು ನಾಕು ಜನ ಬದಕುತಾ ಇರಂಗೆ ಕಾಣ್ತದೆ. ಇವಾಗ ನಮ್ಮೂರಿಂದಲೇ ನೋಡ್ತಾ ಇದೀನಿ , ಇದ್ದಲ್ಲೇ ಇರದೇನೆ ನಮ್ಮೂರಿನ ಕಡೆಗೂ ಬರ್ತಾ ಅದೆ -ನುಂಗಿ ನೀರು ಕುಡಿಯುತ್ತೋ ಏನೋ-.ಧಿಗಿಲಾಗತಾ ಅದೆ.
    —ಇನ್ನೇನದೆ ಏಳಕ್ಕೆ ನಾನ್ ಬದಕಿರಗಂಟಾ ನಮ್ಮೂರ ತನಕ ಬರದಿದ್ದ್ರೆ ಸಾಕು.ಪುಣ್ಯ ಬರ್ತದೆ.–ಅಕ್ಕಿಮಂಗಲ ಮಂಜುನಾಥ.

    ಪ್ರತಿಕ್ರಿಯೆ
  7. Anil Talikoti

    ಮನ್ವಂತರದ ಸದ್ಯದ ಮಜಲು ಬೆಂಗಳೂರಿನ ಹೊಸ್ತಿಲು ದಾಟಿ ಅಮೆರಿಕಾಕ್ಕೆ -ಮುಂದಿನ ಮಜಲು ಮೈ ನಹಿ ಜಾನತಾ!

    ಪ್ರತಿಕ್ರಿಯೆ
  8. Rajan

    It is a shuddering thought to imagine this mindless reverse pyramid kind of growth we are witnessing and part of.
    If you just extrapolate this situation, in another 30-40 years we could be caught in a self-destructing civil war, just for food & water.

    ಪ್ರತಿಕ್ರಿಯೆ
  9. girijashastry

    ಬೆಂಗಳೂರನ್ನು ಬಿಟ್ಟು ಮೂರು ದಶಕಗಳಾದರೂ ಬೆಂಗಳೂರೆ ಈಚಿನತನವರೆಗೆ ಹಳ್ಳಿಯಂತೆ ಕಾಣಿಸುತ್ತಿತ್ತು. ಈಚೆಗೆ ನಾನಿರುವ ಮುಂಬೈಯೊಂದಿಗೆ ಪೈಪೋಟಿಗೆ ನಿಂತಂತೆ ಕಾಣಿಸುತ್ತದೆ. ದೇವನೂರರ ಒಂದು ಕತೆಯಲ್ಲಿ ‘ರೋಡಾಗುವ ಅದ್ಭುತವನ್ನು ನೋಡಲು’ ಓಡಿ ಹೋದ ಮಕ್ಕಳ ಕೈಗೆ ಟಾರು ಅಂಟಿಕೊಳ್ಳುವುದನ್ನೂ, ಅವರನ್ನು ಕರೆಯಲು ಹೋದ ಮನೆಯ ದೊಡ್ಡವರ ಕೈಗೂ ಟಾರು ಮೆತ್ತಿ ಕೊಳ್ಳುತ್ತದೆ. ನಗರಗಳ ಬೆಳವಣಿಗೆಯನ್ನು ಈ ರೂಪಕದ ಮೂಲಕ ಅನನ್ಯವಾದ ರೀತಿಯಲ್ಲಿ ದೇವನೂರರು ಕಟ್ಟಿಕೊಡುತ್ತಾರೆ.-ರಘುನಾಥ್

    ಪ್ರತಿಕ್ರಿಯೆ
  10. samyuktha

    Malayalam nalli “Bangalore Days” anta ondu film ide. Nodu. Ee lekhanada maate helatte! (adre adu commercial movie, happy ending, annodu bere vishaya! :))

    ಪ್ರತಿಕ್ರಿಯೆ
  11. kusumabaale

    ಚಿಂತನೆಗಳು ಸಮಕಾಲೀನ ಅಲ್ವ ಸಂಯುಕ್ತ. ಗಿರಿಜಾ ಮೇಡಂ ನಿಮ್ ಮಾತು ನಿಜ ಬೆಂಗಳೂರೇ ಹಳ್ಳಿಯಾಗಿ ಕಾಣತ್ತೆ.ಇಲ್ಲಿಂದ ಮತ್ತೂ ದೂರ ಹೋದವರಿಗೆ.ಒಟ್ನಲ್ಲಿ..’ಮೋಹ ಅನ್ನೋದು ದೊಡ್ಡದು ಕನಾ’ ಅನ್ನದೇ ವಿಧಿಯಿಲ್ಲ.

    ಪ್ರತಿಕ್ರಿಯೆ
  12. vidyashankar

    ಓದಿ ಮೈ ಜುಂ ಅಂತು… ಬೆಂಗಳೂರು ಎಂಬ ಮಾಯಾಂಗನೆಯ ಸೆಳೆತ ತಪ್ಪಿಸಿಕೊಳ್ಳುವುದು ಕಷ್ಟ ಎಂದು ಕೊಳ್ಳುತ್ತಿದ್ದೆ, ಆದರೆ ಹೆತ್ತ ತಂದೆಯನ್ನೇ ಕೊಲೆ ಮಾಡಿಸುತ್ತೆ ಅಂದ್ರೆ.. ಅಬ್ಬಾ! 🙁

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: