ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಸುಮಬಾಲೆ ಕಾಲಂ : ನನ್ನಟ್ಟೀ, ನನ್ ಹಿತ್ತಲೂ, ನನ್ ಹೊಲ..


ಅವಧಿಯಲ್ಲಿ ಯಾವತ್ತಾದರೂ ಅವಳ ಬಗ್ಗೆ ಬರೆಯಬೇಕಂತ ಅಂದುಕೊಂಡಿದ್ದೆ. ಈಚೆಗೆ ಸುಶ್ರುತ ದೊಡ್ಡೇರಿ ಕಂಡ, ಅಜ್ಜ -ಅಜ್ಜಿಯ ದಾಂಪತ್ಯವೇ ಒಂದು ಸುಧೀರ್ಘ ಪದ್ಯವಾಗಿತ್ತು. ಗೆಳತಿ ಸಿಂಧುರಾವ್ ಅವರ ಅಜ್ಜನ ಬಗ್ಗೆ ಬರೆದಿದ್ದರು. ಅವರು ಸೊಗಸಾಗಿ ಕಥೆ ಹೇಳುವ ಪರಿಯನ್ನು ಅಷ್ಟೇ ಸೊಗಸಾಗಿ ವರ್ಣಿಸಿದ್ದರು.ಈ ಎರಡನ್ನೂ ಓದಿದ ನಂತರ ನನಗೂ ಅಜ್ಜಿ ಕಾಡತೊಡಗಿದಳು.ನೆರಳಿನಂತೆ ಅವಳ ಕಥೆಗಳು-ವ್ಯಥೆಗಳೆಲ್ಲ ಹಿಂಬಾಲಿಸತೊಡಗಿದವು. ಇಂತಹ ನೆರಳುಗಳಿಂದ ಬರೆಯದ ಬಿಡುಗಡೆಯಿಲ್ಲ. ಅವಳು ಓದಿಲ್ಲ, ಬರೆದುಇಲ್ಲ. ಯಾವ ರಾಮಾಯಣ ಮಹಾಭಾರತವಿರಲಿ, ಈ ರಾಜ್ಯದ , ದೇಶದ ಹೆಸರೇನೆಂದೂ ತಿಳಿದಿಲ್ಲ. ಆದರೆ ಅವಳ ಬದುಕೇ ಒಂದು “ಒಡಲಾಳ”ದಂತ ಮಹಾಕಾವ್ಯ. ಯೋಳ್ತೀನ್ ಕೇಳಿ.
ಅದೊಂದು ವಿಚಿತ್ರವಾದ ಊರು.ಒಂದೇ ಊರಾದರೂ, ಒಂದು ಮರದ ಆಚೆಗೆ ಬೇರೆ ಹೆಸರು.ಈಚೆಗೆ ಬೇರೆ ಹೆಸರು.ಆ ಊರಿನ ಹೆಸರು ಹೆಗ್ಗವಾಡಿಪುರ. ಈ ಊರಿನದು ದೇಶವಳ್ಳಿ.ನಮ್ಮಜ್ಜಿ ಆ ಹೆಗ್ಗವಾಡಿಪುರದ ದೊಡ್ಡ ಮನೆಯ ಮಗಳು.ಅವರಪ್ಪ ಲೇವಾದೇವಿ ನಡೆಸುತ್ತಿದ್ದ. ಆ ತಾತನ ಮೂರು ಹೆಣ್ಣುಮಕ್ಕಳಲ್ಲಿ ಇವಳು ನಡುಕಲವಳು.ತಾತ ಹಿರಿಯ ಮತ್ತು ಕಿರಿಯ ಮಗಳನ್ನು ಒಳ್ಳೆ ಕಡೆಗೇ ಮದುವೆ ಮಾಡಿದ.ಸುಂದರಿಯಾಗಿದ್ದ ಇವಳಿಗೂ ತಕ್ಕ ವರನನ್ನೇ ಹುಡುಕುತ್ತಿದ್ದ. ಆದರಿವಳು, ಬಯಸಿ ಬಯಸಿ ಚೆಲುವನಾದ ಸೋದರಮಾವನ್ನೇ ಮದುವೆಯಾದಳು.ಹೆಗ್ಗವಾಡಿಪುರದಿಂದ ದೇಶವಳ್ಳಿಗೆ.ಅಂದರೆ, ಅವಳ ಅಜ್ಜಿಯ ಮನೆಯ ಸೊಸೆಯಾದಳು.
ಗುರುರಾಜುಲುನಾಯ್ಡು ಹರೀಕತೇಲಿ ಹೇಳ್ತಾರಲ್ಲ, “ಒಂದೂ ಎರಡೂ, ಮೂರೂ ನಾಕೂ..ಮಹಾರಾಣಿಗೆ ಒಟ್ಟು ಏಳು ಮಕ್ಕಳಾದವು” ಅಂತ. ಹಂಗೇ ಆಯ್ತು ಇವಳಿಗೂ.ನಾಕು ಗಂಡು ಮೂರು ಹೆಣ್ಣು. 7, 10, 12, 15 ಅಂತ ಹಿಂದಿನವರು ಹೇಳುವಾಗೆಲ್ಲ , ಇವರ ಅರ್ಧ ಆಯಸ್ಸು ಬಸುರಿ-ಬಾಣಂತೀ ಆಗೋದ್ರಲ್ಲೇ ಮುಗೀತಲ್ಲಪ್ಪ ಅನಿಸುತ್ತೆ. ನಮ್ಮಜ್ಜಿ ಮೊದಲ ಮಗನನ್ನ ಹೆತ್ತಿದ್ದಾಗ ಅವರಮ್ಮ, ಕಡೆಯ ಕೂಸನ್ನು ಹಡೆದಿದ್ದಳು.ಅವಳ ಎದೇಲಿ ಹಾಲು ಬರಲಿಲ್ಲ ಅಂತ, ಇವಳು ಮಗನಿಗೂ, ತಮ್ಮನಿಗೂ ಒಟ್ಟಿಗೇ ಹಾಲೂಡಿಸಿದ್ದಳು.ಇನ್ನು ಇವಳು ಕಡೆಯ ಕೂಸು ಹೆತ್ತಾಗ, ಇವಳ ಮಗಳು, ಅಂದರೆ ನನ್ನ ದೊಡ್ಡಮ್ಮ ಮೊದಲ ಕೂಸು ಹೆತ್ತಿದ್ದಳು.ಮಗಳಿಗೆ ಬಾಣಂತನ ಮಾಡೋ ಹೊತ್ತಲ್ಲಿ ಇವಳೂ ಬಾಣಂತಿ. ಅಮ್ಮನೂ ಅಜ್ಜಿಯೂ ಒಟ್ಟೊಟ್ಟಿಗೇ.:-) ಥೋ..ಥೋ, ಹಿಂದಿನವರಿಗ್ ಮಾಡೋಕ್ ಬೇರೆ ಕೆಲಸವೇ ಇರ್ಲಿಲ್ವಾ ಅಂತೀನಿ. ಆಗೆಲ್ಲ ಅಳಿಯನ್ನ ಕಂಡ್ರೆ ಅತ್ತೇರು ನಾಚ್ಕೊಳೋರು.ಈ ನಮ್ಮಜ್ಜಿ ಈಗ್ಲೂ ಅಳಿಯಂದ್ರಿಗೆ ನಾಚಿ ಒಳಗೇ ಕೂತಾಗ, ನಾವು ರೇಗಿಸ್ತೀವಿ.“ಅಳಯನ್ ಮುಂದೇ ಬಸುರಿ, ಬಾಣಂತಿ ಆಗಿದ್ದೆ?ಆಗ ನಾಚಿಕೆ ಆಗಲಿಲ್ವಾ ನಿನಗೆ?’” ಅಂತ.
ಏಳು ಮಕ್ಕಳಲ್ಲಿ, ದೊಡ್ಡ ಮಗಳಿಗೆ ಮದುವೆ ಮಾಡಿ ಒಂದು ಬಾಣಂತನ ಮಾಡೋ ಹೊತ್ತಿಗೆ, ಅವಳ ಗಂಡನನ್ನ ಕ್ಯಾನ್ಸರು ಅಮರಿಕೊಂತು.ಅತ್ತೆಯೂ ಹೋದರು.ಮನೆ ತುಂಬ ಮಕ್ಕಳು ಮತ್ತು ಇವಳು.ಬರಿಯ ನಾಕೆಕರೆ ಮಳೆ ಆಶ್ರಿತ ಭೂಮಿ.ಒಟ್ಟು ಆರು ಜನ ಎಲ್ಲಾ ಏಜ್ ಗ್ರೂಪಿನ ಮಕ್ಕಳು.ನಾಕೆಕರೇಲಿ ಬೆಳೆದದ್ದು ಮನೆಯ ಹೊಟ್ಟೆಗಳೇ ತಿಂದು ಮುಗಿಸುತ್ತಿದ್ದವು.ಮಕ್ಕಳನು ಸಂಭಾಳಿಸುವುದು ಸಾದ್ಯವೇ ಆಗದೇ, ಕಡೆಗೆ, ಇಬ್ಬರು ಮಕ್ಕಳನು ಮಾದೇಶ್ವರನ ಬೆಟ್ಟದ ಮಠಕ್ಕೆ ಓದಲು ಸೇರಿಸಿದಳು.ಒಬ್ಬನಿಗೆ ಸದಾ ಅನಾರೋಗ್ಯ. ಉಳಿದ ಇಬ್ಬರು ಹೆಣ್ನುಮ್ಕಕಳನು ಮನೆಯಲಿ ಬಿಟ್ಟು ಬಿಸಿಲು, ಮಳೆಯಲಿ ಒಬ್ಬಳೇ ದುಡಿದಳು.ನನಗೆ ತಿಳುವಳಿಕೆ ಬಂದಾಗಲೂ ಅವಳು ದೊಡ್ಡ ದೊಡ್ಡ ಹೊರೆ ತಲೇಲಿ ಹೊತ್ತು ಬರುತ್ತಿದ್ದಳು.
ಮಾದೆಶ್ವರನ ಬೆಟ್ಟ್ಕಕೆ ಹೋದವರು, ವಿಧ್ಯೆ ತಲೆಗೆ ಹತ್ತದೇ ವಾಪಾಸಾದರು. ಅಷ್ಟೊತ್ತಿಗೆ ಅಜ್ಜಿ ,ಉಳಿದ ಇಬ್ಬರು ಹೆಣ್ಣುಮಕ್ಕಳ ಮದುವೆ, ಬಾಣಂತನ ಎಲ್ಲ ನೆರವೇರಿಸಿದ್ದಳು. ಪಕ್ಕದಲ್ಲೇ ಇದ್ದ ಇವಳ ಅಣ್ಣತಮ್ಮಂದಿರು, ಗಂಡಿನ ಮನೆಗೆ ಹೋಗಿ ಬಂದು ಮಾತಾಡಲು ಸಹಾಯ ಮಾಡುತ್ತಿದ್ದರಷ್ಟೆ.ಆರ್ಥಿಕ ಹೊರೆ ಏನಿದ್ದರೂ ಇವಳದೇ.ಇವಳ ಅಮ್ಮ, ಅಂದರೆ, ನನ್ನ ಮುತ್ತಜ್ಜಿಯನ್ನು ನಾನೂ ನೋಡಿದ್ದೇನೆ.ಮಗಳ ಮನೆಗೆ ಬಂದು ಕೂತು ಬೇಸರ ಕಳೆಯುತ್ತಿದ್ದಳು.ಬಂಡಿಗಟ್ಟಲೆ ಮಾತಾಡುತ್ತಿದ್ದಳು.ಎಲ್ಲ ಹೆಣ್ಣುಮೊಮ್ಮಕ್ಕಳನ್ನೂ ಕರಕೊಂಡು, ಗಾಡಿ ಕಟ್ಟಿಸಿಕೊಂಡು ಸಿನೆಮಾಕ್ಕೆ ಹೋಗುತ್ತಿದ್ದಳಂತೆ.ಆದರೆ ಮಗಳ ಕಷ್ಟದಲಿ ಪಾಲು ಯಾಕೆ ತಗೋತಿರಲಿಲ್ಲವೋ ಗೊತ್ತಿಲ್ಲ. ನನ್ನಮ್ಮನಂತ ಸುಂದರಿಯ ಹೊಟ್ಟೆಯಲ್ಲಿ ಅಪ್ಪನಂತೆ ಕರ್ರಗೆ ಹುಟ್ಟಿದ ನನ್ನ ಬಗ್ಗೆ ಅವಳಿಗೆ ಎಲ್ಲಿಲ್ಲದ ಕೋಪವಿತ್ತು.
ಎಲ್ಲ ಇದ್ದಾರೆ.ಆದರೆ ಯಾರೂ ಇಲ್ಲ ಅನ್ನುವ ಸ್ಥಿತಿ ನನ್ನಜ್ಜಿಯದು.ಆ ಕಾಲದಲಿ ಖರ್ಚು ಕಡಿಮೆ ಇರಬಹುದು.ಆದರೆ ಇವಳ ಆ ಕುಟುಂಬದ ಆದಾಯ ಅದಕಿಂತ ಕಡಿಮೆ ಇತ್ತಲ್ಲ? ಪ್ರತಿ ಮದುವೆಗೂ, ಪ್ರತಿ ಬಾಣಂತನಕ್ಕೂ, ಪ್ರತಿ ಕೂಸಿನ ಕಾಲ ಗೆಜ್ಜೆಗೂ ಅವಳು ಎಷ್ಟೊಂದು ಜೀವತೇಯ್ದಿದ್ದಾಳೆಂದರೆ,…ಎಲ್ಲಿತ್ತು ಕಾಸು? ಹೇಗೆ ಹೊಂದಿಸಿದಳು, ಆ ಬರಗಾಡಿನಲಿ , ಬಿರಿದು ನಿಂತ ಕಪ್ಪುಮಣ್ಣಿನಲಿ, ಏನ ಬೆಳೆದು ಮಾರಿದಳು? ಬೆಳೆ ಮಾರಿದಳೋ, ಅತ್ತೆಯ ಬಳೆ ಮಾರಿದಳೋ, ಹಂಡೆ ಬುಂಡೆಗಳ ಅಡವಿಟ್ಟಳೋ, ಒಟ್ಟಿನಲಿ, ಎಲ್ಲವೂ ಎಲ್ಲರ ಮನೆಯಲ್ಲೂ ನಡೆವಂತೆ ನಡೆಸಿದಳು. ಆ ಊರವರು ಈಗಲೂ ನನ್ನ ಮಾವಂದಿರಿಗೆ ಹೇಳುತ್ತಾರೆ. “ಊರಗ್ ಎಣ್ಣಾಗಿ ಕಾಡಗ್ ಗಂಡಾಗಿ ನಿಮ್ಮವ್ವ ನಿಮ್ಮನೆಲ್ಲ ಸಾಕಳ ಕಣ್ರಪ್ಪ, ಚೆಂದಾಗ್ ನೋಡ್ಕಳಿ” ಅಂತ. ಅವಳು ಅಂತವಳೇ, ಹೆಣ್ಣು ದೇಹದ ಗಂಡು ಆತ್ಮದವಳು.ಗಂಡನಿರದ ಮನೆಯ ಹೆಂಗಸೆಂದು ದಾಯಾದಿಗಳಿಗೆ ಒಂದಂಗುಲ ಬಿಡದೇ ಬಡಿದಾಡಿದವಳು.“ನೆಲಕ್ಕಿರುವೆನೆಂದು ಬಗೆದಿರಾ?ಛಲಕ್ಕಿರುವೆನು” ಅಂದ ದುರ್ಯೋದನನ ಮಾತಿನಂತೆ ನಡೆದವಳು.

ಈಯಮ್ಮ ಎಂತಾ ಅತಿಕೆಟ್ಟ ಸ್ವಾಭಿಮಾನಿ ಹೆಂಗಸೆಂದು ಹೇಳುತ್ತೇನೆ.ಈಚೆಗೆ ನನ್ನ ಮಗ ಹುಟ್ಟಿದಾಗ ನನ್ನ ಬಾಣಂತನದಲ್ಲಿ ಜೊತೆಗಿದ್ದಳು.ಮಗುವನ್ನೆತ್ತಿಕೊಳ್ಳಲು ಆಗುತ್ತಿರಲಿಲ್ಲ.ಕೈ ನಡುಗುತ್ತಿತ್ತು.ಸುಮ್ಮನೆ ನೋಡುತ್ತಿದದ್ದಳು.ನನ್ನ ಸೋದರಮಾವ ಬಂದಾಗ, ಅವನ ಕೈಗೆ ಒಂದು ಚೀಟಿ ಕೊಟ್ಟು ಇದನ್ನ ಕೊಟ್ ಕಳಿಸು ಅಂದಳು.ಅದು ಅವಳ ಮಾತ್ರೆ ಚೀಟಿ.ಮಗಳ ಮನೆ ಇದು. ಅಳಿಯನ್ನ ಯಾಕೆ ಕೇಳಬೇಕು ಅನ್ನೋ ಸ್ವಾಭಿಮಾನ! “ಎಂತಾ ಕೇಡಿ ಮುದುಕಿ ಇರಬೇಕು ನೀನು.ನಮ್ಮಪ್ಪ ದಿನ ಬೆಳಗಾದ್ರೆ ಮೈಸೂರಿಂದ ಸಾಮಾನು ತರಲ್ವ?ನಿನಗೊಂದ್ ಮಾತ್ರೆ ತರೋಕ್ ನಮಗಾಗ್ತಿರ್ಲಿಲ್ವಾ?ಅಂತ ಕ್ಲಾಸು ತಗೊಂಡಿದ್ದೆ.“ಕಾಫಿ ಕುಡೀತೀಯಾ?” ಅಂದರೆ ಹ್ಞೂ ಅಂತಾಳೆ.ನಾವು ಕೇಳದ ಹೊರತು ಅವಳಾಗಿ ಬೇಕಿದ್ದರೂ ಕೇಳಲ್ಲ. ನೂರಕ್ಕೂ ಮಿಕ್ಕಿ ಸೀರೆಗಳಿವೆ.ಇನ್ನೇನು ಸಾಯ್ತೀನಿ. ಉಟ್ಟುಬಿಟ್ಟರೆ ಹಳೇದಾಗತ್ತೆ, ಹೊಸದಾಗೇ ಇದ್ರೆ ಮಕ್ಕಳು ಸೊಸೇರು ಉಟ್ಕೋತಾರೆ ಅನ್ನೋ ಲೆಕ್ಕಾಚಾರ.!ಈ ಲೆಕ್ಕಾಚಾರ ಅವಳ ಬದುಕು ಕಲಿಸಿದ ಪಾಠವೇ ಇರಬೇಕು.
ತಾನು ಸತ್ತರೆ ಮಕ್ಕಳು ತಕ್ಷಣ ಪರದಾಡಬಾರದು ಅಂತ, ಹೆಣಕ್ಕೆ ಸುತ್ತುವ ಬಿಳಿಬಟ್ಟೆಯನ್ನೂ ರೆಡಿಮಾಡಿಟ್ಟುಬಿಟ್ಟಿದ್ದಾಳೆ.“ಆ ಗಾಡ್ರೇಜ್ ಬೀರು ಅದಲ್ಲ, ಅಲ್ಲಿ ಬೆಳಿ ಬಟ್ಟ ಮಡುಗಿನಿ, ನಿನಗ್ ಯೋಳ್ತೀನಿ.ಗೆಪ್ತಿ ಮಡಿಕೋ.ಅವರಿವರನ್ ಕ್ಯೋಳ್ಬೇಡಿ” ಅಂತ ನನ್ನ ಚಿಕ್ಕಮ್ಮನ ಮಗಳಿಗೆ ಹೇಳಿದಳಂತೆ.ನಾವೆಲ್ಲ ಸೇರಿ, “ಬರೀ ಬಿಳಿ ಬಟ್ಟೇನಾ?ಅಥವಾಇನ್ನೂ ಏನಾದ್ರೂ ಇಟ್ಟಿದೀಯಾ ಗುಟ್ಟಾಗಿ?” ಅಂತ ರೇಗಿಸುತ್ತೇವೆ.ನಿಜ, ಅವಳ ಸಾವಿನ ವಿಷಯ ನಮಗೊಂಥರಾ ತಮಾಷೆಯೇ ಆಗಿಹೋಗಿದೆ. ನಾನು ಹತ್ತನೇ ಕ್ಲಾಸಲ್ಲಿದ್ದಾಗಲೆ ಶುರು ಮಾಡಿದ್ದಳು “ನಿನ್ ಮದ್ವ ಆಗಗಂಟ ನಾ ಇದ್ದನೋ ಇರಲ್ವೋ” ಅಂತ. ಆಮೇಲೆ “ನಿನಗೊಂದ್ ಕೂಸಾಗಗಂಟ ನಾ ಇದ್ದನೋ ಇರಲ್ವೋ’ ಆಮೇಲೆ “ನಿನ್ ತಂಗಿ ಮದ್ವ ಆಗಗಂಟ ನಾ ಇದ್ದನೋ ಇರಲ್ವೋ?” “ನಿನ್ ಕೂಸ್ನೇನೋ ನೋಡ್ಕಂಡೆ, ಅವಳಿಗೋಂದ್ ಆಗಾಗಂಟ…” ಎಲ್ಲಾ ಮೊಮ್ಮಕ್ಕಳಿಗೂ ಇದೇ ಡೈಲಾಗು. “ಮಾದೇಶ್ವರನ ಬೆಟ್ಟಕ್ಕೆ ಹೋದರೆ . ಇದೇ ಕೊನ, ಇನ್ನು ಪುನ ಬರಾಗಂಟ ನಾ ಇದ್ದನೋ ಇರಲ್ವೋ” ಮಕ್ಕಳ ಮನೆಗೆ ಬಂದು ಹೋಗೋವಾಗ “ಇನ್ನು ಬಂದನೋ ಬರಲ್ವೋ” ನಾವೆಲ್ಲ, “ನನ್ನ ಮಗನಿಗ್ ಮದ್ವೆ ಆಗೋವರೆಗೂ ನೀ ಸಾಯಲ್ಲ ಬಿಡು. ಇದೇ ಕೊನೆ, ಇದೇ ಕೊನೆ ಅಂದ್ಕಂಡ್ 8 ಸತಿ ಬಂದ್ಯಲ್ಲ ಬೆಟ್ಟಕ್ಕೇ ..ಅಂತ ನಗುತ್ತೇವೆ.
ಸಾವೆಂಬುದು ಅವಳ ಪಾಲಿಗೆ ಒಂಥರಾ ಸಂಭ್ರಮ. “ನಾ ಸತ್ತೋದ್ರ ನೀವೆಲ್ಲ ಬಾಯ್ಬಡ್ಕಂಡ್ ಅಳ್ತಿದ್ದರಿ ಅಲ್ವಾ?ಮೊಮ್ಮ್ಕಕಳು ಏನಾರೀ ಅತ್ವೋ ಅಂತ ನಮ್ಮೂರವರೆಲ್ಲ ಮಾತಾಡ್ತರ” ಅನ್ನುತ್ತಾಳೆ. “ನಾವಾ? ನಾವ್ಯಾಕ್ ಅಳಣ?ಅದೂ ಬಾಯ್ಬಡ್ಕಂಡೂ?” ಇಲ್ಲಪ್ಪ. ಅಂತ ಛೇಡಿಸಿದರೆ, “ಅಂಗ್ಯಾ? ಅಂಗಾರ್ ಅಳಲ್ವಾ?ವಾಸೆತು ಬುಡು, ನಿನ್ ಮಗನ್ಯಾರೂ ಅಳಲ್ವಾ? ಮುತ್ತಜ್ಜೀ..ಅನ್ಕಂಡು?ಅಂತ ಮತ್ತೆ ಕೇಳುತ್ತಾಳೆ.ನಾನು ಒಳಗೇ ನಗುತ್ತೇನೆ.“ಸುದ್ದಿ ಗೊತ್ತಾದೇಟ್ಗೆ, ಎಲ್ಲ ಬತ್ತರ.ನೀವ್ ಒಸಿ ಲೇಟಾಯ್ತದ ಬೆಂಗಳೂರಿಂದ್ ಬರದು, ಆಗ ಅವರ್ ಮೊಮ್ಮಕ್ಕ ಬೆಂಗಳೂರ್ಲಿದಾರಂತ, ಅಲ್ಲಿಂದ್ ಬರಬೇಕಂತ ಅಂತ ಎಲ್ಲ ಮಾತಾಡ್ಕತ್ತರ, ಎಣ ಮಡಿಕಂಡ್ ಕಾಯ್ತರ” ಅನ್ನುತ್ತಾಳೆ.ನನ್ನ ಎಷ್ಟೋ ಫ್ರೆಂಡ್ಸ್ನ “ನಾ ಸತ್ತೋದ್ರ ನೀವ್ ಬಂದರ್ಯಾ? ಅಂತಲೂ ಕೇಳಿದ್ದಾಳೆ.“ಮರಣವೇ ಮಹಾನವಮಿ” ಅಂತ ಬಸವಣ್ಣ ಅಂದದ್ದು ಗೊತ್ತಿಲ್ಲ ಇವಳಿಗೆ.ಆದರೂ ಇವಳ ಸಾವಿನ ಕನಸು ನವಮಿಯ ಸಂಭ್ರಮವನೂ ಮೀರಿಸುವಂಥದ್ದು.
ಏನಿಲ್ಲವೆಂದರೂ ಈಗ ಅವಳಿಗೆ 85 ದಾಟಿರಬೇಕು.(ಅವಳ ಎದೆಹಾಲು ಕುಡಿದು ಬೆಳೆದ ತಮ್ಮನೇ ರಿಟೈರ್ ಆಗಿ ಐದು ವರ್ಷವಾಯ್ತು.)ಈಗ ಎಲ್ಲ ಮಕ್ಕಳಿಗೂ ಮದುವೆಯಾಗಿ ಅವರಿಗೂ ಮಕ್ಕಳಾಗಿ, ಮೊಮ್ಮಕ್ಕಳಾಗಿವೆ.ನಗರಗಳಲಿ ಹೆಂಡತಿ ಮಕ್ಕಳೊಡನೆ ಬದುಕು ಕಟ್ಟಿಕೊಂಡಿರುವ ನನ್ನ ಮಾವಂದಿರಿಗೆ ಆ ಊರು ಆಮನೆ ಬೇಕಾಗಿಲ್ಲ. ಬೇಕು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಅವರಿಲ್ಲ ಪಾಪ. ಆದರೆ ಅವಳ ಜೀವ ಅಲ್ಲೇ ಇದೆ. ಸಿಟಿಯಲ್ಲಿ, ಮಕ್ಕಳ ಮನೆಯ್ಲಲಿ ಇರುವುದು ಅವಳ ದೇಹ ಮಾತ್ರ. ಐವತ್ತು ವರ್ಷಗಳ ಹಿಂದೆಯೇ ಬದುಕು ಕಟ್ಟಿಕೊಡಲಾಗದ ಬರಗಾಡು ನಂಬಿ, ಈ ಜಮಾನಾದಲ್ಲಿ ಬದುಕೋಕಾಗತ್ತಾ? “ನನ್ನಟ್ಟೀ ನನ್ನಟ್ಟೀ, ನನ್ ಹಿತ್ತಲು, ನನ್ ಹೊಲ ಅಂತ ಬಡ್ಕೋತೀಯಲ್ಲ. ಏನ್ ಜಾಗೇರಿ ಇಟ್ಟಿದೀಯಾ ಅಲ್ಲಿ?” ಸಿಟೀಲಿ ಸುಖವಾಗಿರು ಅಂದ್ರೆ ಕೊರಗೋ ಅಮ್ಮನ ಬಗ್ಗೆ ಮಕ್ಕಳದು ಅಸಹನೆ. ಹೌದು, ಅಲ್ಲಿ ಅಂತದೇನಿಲ್ಲ. ನಾಕು ಜಂತಿ, ಔಟ್ಡೇಟೆಡ್ ಆದ ಸೂರು, ಗಳಗಳು, ಸಣ್ಣ ಹೆಂಚಿನ ಹೊದಿಕೆ ಅಷ್ಟೇ. ಮಾರಿದರೂ ಎಕರೆಗೆ 25 ಸಾವಿರವೂ ಬಾಳದ ಭೂಮಿ ಅದು.ಏನು ಮಾಡೋದು ಅಲ್ಲಿ?ಅವರ ಪ್ರಶ್ನೆಯಲಿ ಲಾಜಿಕ್ ಇದೆ.ಅವರ ಮ್ಕಕಳ ಭವಿಷ್ಯ, ವಿಧ್ಯಾಭ್ಯಾಸ ಅವರಿಗೆ ಮುಖ್ಯ. ಆದರೆ ಅಜ್ಜಿಗೆ “ನನ್ನಟ್ಟೀ, ನನ್ನಟ್ಟೀ” ಅನ್ನೋದು ಬಿಡದ ಖಾಯಿಲೆ.ಮತ್ತು ಖಯಾಲಿ.
ಆ ಮನೆ ಕೂಡ ಇಷ್ಟು ಮಟ್ಟಿಗೆ ಇರುತ್ತಿತ್ತೋ ಇಲ್ಲವೋ, ಸರಕಾರದ ವೃಧ್ದಾಪ್ಯ ವೇತನ ಬರುತ್ತದಲ್ಲ, ಅದನ್ನ ಕೂಡಿಟ್ಟುಕೊಂಡು, ಅವಳದನ್ನು ಖರ್ಚು ಮಾಡುವುದು ಆ ಮನೆಗೆ. ಬೀಳುತ್ತಿರುವ ಗೋಡೆ ನಿಲ್ಲಿಸೋದು.ಹಿತ್ತಲಿಗೆ ಯಾರೂ ಅತಿಕ್ರಮ ಮಾಡಿ, ಒಂದು ಇಂಚೂ ಕಡಿಮೆ ಮಾಡಬಾರದೆಂದು ಬೇಲಿ ಹಾಕಿಸೋದು.ಎಂದಾದರೂ ನನ್ನ ಮಕ್ಕಳು ಮೊಮ್ಮಕ್ಕಳು ಬಂದರೆ ಇರಲೆಂಬ ಕನಸಿಗೆ, ಕಕ್ಕಸು ಕಟ್ಟಿಸೋದು.ಅವಳಿಗೆ ಬರೋ ದುಡ್ಡೆಲ್ಲ ಇದಕ್ಕೇ ಖರ್ಚಾಗುತ್ತದೆ.ಮೊನ್ನೆ ನಮ್ಮ ಚಿಕ್ಕಮ್ಮನ ಊರಿನ ಕಾರ್ಯಕ್ರಮಕ್ಕೆ ಕರಕೊಂಡು ಹೋಗ್ತಿದ್ದಾಗ ಕಾರಿಂದ ಇಣುಕೀ ಇಣುಕೀ ನೋಡ್ತಿದ್ದಳು.ಏನು?ಅಂದರೆ, “ಬಾಣಹಳ್ಳಿ ಆಯ್ತಾ?” ಅಂದಳು.ಹ್ಞೂ ಅಂದೆ.“ಈಗ್ ನೋಡ್ಕೋ.ಎಡಚೊರಿ ನಮ್ ಜಮೀನ್ ಕಾಣ್ತದ” ಅಂದಳು.ಆಮೇಲೆ, “ಕಂಡ್ಯಾ?” ಅಂದಳು.“ಹ್ಞೂ” ಅಂದೆ.“ಅಣ್ಣಯ್ಯನ ಹಟ್ಟಿಯವರು ಬೇಲಿ ಆಕಂಡಿದರಾ?ಅಂದಳು.‘ಇಲ್ಲ” ಅಂದೆ.ಅವಳಿಗೆ ಸಮಾಧಾನವಾಯಿತು.ಮೂರೊ ನಾಕೋ ಕ್ಲಾಸು ಓದುವಾಗ ನೋಡಿದ್ದೆನೋ ಏನೋ, ಅವಳ ಜಮೀನು ನನಗೆಲ್ಲಿ ನೆನಪಿರಬೇಕು?
ನಿಜ ಏನೆಂದರೆ, ಅವಳ ಜಮೀನಿನ ಪತ್ರಗಳು ಕಳೆದು ಹೋಗಿವೆ.ಖಾತೆಯೇ ಇಲ್ಲ. ಆ ಜಮೀನಿನ ಅರ್ಧಕ್ಕಿಂತಲೂ ಹೆಚ್ಚನ್ನು ಅಕ್ಕಪಕ್ಕದ ಜಮೀನುಗಳವರು ಸುತ್ತುವರೆದಿದ್ದಾರೆ.ಕೇಳುವ ಪುರುಸೊತ್ತು, ಹಕ್ಕು ಎರಡೂ ಯಾರಿಗೂ ಇಲ್ಲ. ಹಿತ್ತಲ ಹುಣಿಸೇಮರಗಳು ಆಗಲೇ ಮಾರಾಟವಾಗಿವೆ.ಆ ದೊಡ್ಡ ತೊಟ್ಟಿಮನೆಯ ಒಂದು ಭಾಗವನ್ನ ಹಿಂದಿನ ಬೀದಿಯವರಿಗೆ ಮಾರಿ, ಅದರ ಬದಲು ಮುಂದಲ ಖಾಲಿ ಜಾಗ ಪಡೆದಿದ್ದಾರೆ.ಮನೆ ಹಳೆಯ ಶೇಪು ಕಳಕೊಂಡಿದೆ.ಇದ್ಯಾವುದೂ ಅವಳಿಗೆ ಗೊತ್ತಿಲ್ಲ. ಮೊನ್ನೆ ಹೋಗಿ ನೋಡಿದೆ.ಆ ಮನೆಯಲ್ಲಿ ಬಾಲ್ಯ ಕಳೆದ, ಅದರ ತೆರೆದ ಆಕಾಶ ನೋಡುತ್ತಾ ಭಾವಲೋಕ ತುಂಬಿಸಿಕೊಂಡ ನನಗೆ, ಅದರ ಸ್ಥಿತಿ ನೋಡಿ ಕರುಳು ಹಿಂಡಿದಂತಾಯ್ತು.ಹಾರ್ಟ್ ಅಟ್ಯಾಕ್ ಆದವರು ಕೂರುವಂತೆ ಕುಸಿದು ಕೂತು ಜೋರಾಗಿ ಅತ್ತುಬಿಟ್ಟೆ. ಇನ್ನು ಅಜ್ಜೀ.. ಇದೆಲ್ಲ ಗೊತ್ತಾದರೆ, ಅವತ್ತೇ “ ನನ್ನ ಹಟ್ಟೀ, ನನ್ನ ಹೊಲ, ನನ್ನ ಹಿತ್ತಲೂ” ಅನ್ನುತ್ತಾ ಜೀವ ಬಿಟ್ಟುಬಿಡುತ್ತಾಳೆ.
ಸತ್ತರೆ, ಅವಳ ಸಾವಿನ ಕನಸೇನೋ ನನಸಾಗುತ್ತದೆ.ಬದುಕ ಕನಸು?ಅವಳ ಹಟ್ಟೀ, ಹಿತ್ತಲು, ಹೊಲದ ಕನಸು??
 

‍ಲೇಖಕರು G

10 March, 2015

ನಿಮಗೆ ಇವೂ ಇಷ್ಟವಾಗಬಹುದು…

8 Comments

  1. Anil Talikoti

    ಒಂದು ತಲೆಮಾರಿನ ಸ್ಥಿತ್ಯಂತರದ ಕಥೆ-ವ್ಯಥೆ ಚೆನ್ನಾಗಿದೆ.

  2. ಮಮತ

    Oh .. ಇದು ತೀರಾ ಭಾವನಾತ್ಮಕವಾಗಿದೆ. ನಿಮ್ ಜೊತೆ ನಾನೂ ಕಣ್ಣು ತುಂಬಿಕೊಂಡೆ.
    ತೀರಾ ಹಿಡಿಸಿದ್ದು ಅಜ್ಜಿಯ ಸ್ವಾಭಿಮಾನ. ಭೂಮಿ ಜೊತೆಗಿನ ಅಭಿಮಾನ. ಸಾವಿನೆಡೆಗಿನ ಕುತೂಹಲದ ದುಮ್ಮಾನ. ಬೇರೆ ಆಕರ್ಷಣೆಯೇ ಇರದ ಅವರ ಕಡೇ ತೀರವದು.ಆ ಮುಗ್ಧತೆ ಬದುಕಿನೆಡೆಗಿನ ಅದಮ್ಯ ಪ್ರೇಮ ಕುಟುಂಬ ಸುತ್ತ ಸುತ್ತಿಕೊಂಡ ಅವರ ಬದುಕು ತೀರಾ ಸೆಳೆಯುತ್ವೆ. ಎಂದಿನಂತೆ ಚೆನ್ನಾಗಿದೆ

  3. ತಿಲಕ್ ರಾಜ್ ಸೋಮಯಾಜಿ

    “ಅಳಯನ್ ಮುಂದೇ ಬಸುರಿ, ಬಾಣಂತಿ ಆಗಿದ್ದೆ?ಆಗ ನಾಚಿಕೆ ಆಗಲಿಲ್ವಾ ನಿನಗೆ?’” ಓದಿದ ಕೂಡಲೇ ನಗು ಬರಿಸಿದ ಸಾಲು ಇದು. ನನ್ನಜ್ಜಿಯ ಕಥೆಯೂ ಇದೇ. ಇತ್ತ ಮಗಳು ಅತ್ತ ತಾಯಿ ಇಬ್ಬರು ಜೊತೆ ಜೊತೆಗೆ ಮಗು ಹೆರುತ್ತಿದ್ದರು. ಅಜ್ಜಿಯ ಹಾಗು ಊರಿನ ಹಳೆ ನೆನಪುಗಳು ಮರುಕಳಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಕುಸುಮ ಬಾಲೆಯವರೇ.

  4. Radhika

    aaptavaada baraha. I like your ajji 🙂

  5. umavallish

    ಕುಸುಮಬಾಲೆ ಅವರೇ ಕಣ್ಣಮುಂದೆ ನಿಮ್ಮ ಅಜ್ಜಿ ಬಂದ ಹಾಗಾಯಿತು.ಸಿಟಿ ಜೀವನದಲ್ಲಿ ಹುಟ್ಟಿ ಬೆಳೆದು ಓದಿ ನಾಗರಿಕತೆಯ ಸೌಲಭ್ಯ ಪಡೆದು ಏನೋ ಸಾದಿಸಿ ಗುಡ್ಡೆ ಹಾಕುತ್ತೇವೆ ಎಂದು ಬೀಗುವವರು ನಿಮ್ಮ ಅಜ್ಜಿಯವರನ್ನು ಕಂಡು ನಾಚಿಕೊಳ್ಳಬೇಕು.ತ್ಯಾಗ ,ನಿಸ್ವಾರ್ಥತೆ,ಆ ಮಹಾನ್ ಅಜ್ಜಿಯಲ್ಲಿ ಇರುವ ಸಾದನಾಶಕ್ತಿ,ಓಹ್ ವ0ದನೀಯ.ಹಟ್ಟಿ,ಹಿತ್ತಲ ಕನಸು ಪಾಪ. ಮರಣ ಮಹಾನವಮಿ ಯಾಗಲಿ. ಇಂಥವರು ಮಹಿಳಾ ದಿನಾಚರಣೆ ಯಂದು ಮಾತ್ರವಲ್ಲ ಸದಾಕಾಲ ಪ್ರಶಂಸನೀಯರು.

  6. shivaprakash

    No words to explain the loss of Ajji……ಹೆಣ್ಣು ದೇಹದ ಗಂಡು ಆತ್ಮದವಳು…

  7. sindhu

    ಕುಸುಂ
    ಅಜ್ಜ-ಅಜ್ಜಿಯರು ನಂಗೆ ಒಂದ್ ಥರಾ ಒಬ್ಸೆಷನ್ನೇ… ನನ್ನ ಬಾಲ್ಯವನ್ನ ಸಮೃದ್ಧಗೊಳಿಸಿದ್ದೇ ಅವರು.
    ನಿಮ್ಮ ಅಜ್ಜೀ ನಂಗೆ ಸಿಕ್ಕಾಪಟ್ಟೆ ಇಷ್ಟ ಆಗೋದ್ರು. ಅವ್ರಿಗೆ ಬಿಳಿ ಬಟ್ಟೆ ಹೊದ್ಸೋಕಿಂತ ಮುಂಚೆ ನಾನು ಅವ್ರನ್ನ ನೋಡಬೇಕು. ನಿಮ್ಮೂರಿಗೆ ಕರ್ಕೊಂಡು ಹೋಗಿ.
    ನಿಮ್ಮ ಬರಹದಲ್ಲಿ ನನ್ಗೆ ಇಷ್ಟ ಆಗೋದು ನಿಮ್ಮ ವಿಷ್ಯಗಳ ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸ್ವರೂಪ.
    ಈ ಅಜ್ಜಿ ನೀವು ಹೇಳಿದ ಹಳ್ಳಿಯಲ್ಲಿ ಇರುವಷ್ಟೆ ಪ್ರಪಂಚದ ಲಕ್ಷ ಹಳ್ಳಿಗಳಲ್ಲೂ ಇದ್ದಾಳೆ.
    ಹೆಣ್ಣಿನ ಸಶಕ್ತತೆ ಮತ್ತು ನಿರ್ಬಲತೆಯ ಮಿತಿಗಳನ್ನ ಯೋಚಿಸಲೇಬೇಕಾದ ಈ ವಾರದಲ್ಲಿ ನಿಮ್ಮ ಬರಹ ನನಗೆ ನಡುಬೇಸಿಗೆಯಲ್ಲಿ ಸುರಿದ ಮಳೆಯ ತಂಪು ತಂದುಕೊಟ್ಟಿದೆ.
    ಊರಗ್ ಎಣ್ಣಾಗಿ ಕಾಡಗ್ ಗಂಡಾಗಿ ಇರುವ ಈ ಮಹಾನ್ ಮಹಿಳೆಯರು ನಮ್ಮ ದಿಕ್ಕು ಬದಲಿಸಿದವರು ಅಂತ ನಂಗೆ ಅನ್ಸುತ್ತೆ. ಅವ್ರು ಹೇಗ್ ಇದ್ರೋ ಹಾಗೇನೇ ಆಂಟಿಕ್ ಆಗಿ ಆ ತತ್ವಗಳನ್ನ ಅಪ್ಪಿಕೊಳ್ಳುವ ಬದಲು ಇವತ್ತಿನ ಕಾಲಮಾನಕ್ಕೆ ಒಗ್ಗಿಸಿ ನುಗ್ಗುವುದರಲ್ಲಿ ಬೆಳಕಿನ ದಾರಿ ಅನ್ಸುತ್ತೆ.
    ಸಾವನ್ನು ಸಂಭ್ರಮಿಸುವ ನಿಮ್ಮ ಅಜ್ಜಿಯ ಸ್ವಭಾವ ಮಾತ್ರ ಅಪರೂಪದ್ದು ಮತ್ತು ವಿಶಿಷ್ಟವೆನಿಸಿದ್ದು ನಂಗೆ.
    ಅವರು ನಿಮ್ಗೆ ಸಿಕ್ಕ ಕೂಡಲೇ ನನ್ ಕಡೆಯಿಂದ ಅವರ ಸುಕ್ಕು ಕೆನ್ನೆಗೆ ಒಂದು ಮೆತ್ತನೆ ಮುತ್ತು ಕೊಟ್ ಬಿಡಿ.

  8. ಅಮರದೀಪ್.ಪಿ.ಎಸ್.

    ಹಳೇ ಮುದುಕ, ಮುದುಕೀರ ನಂಟೇ ಅಂಥದ್ದು. ಅಲ್ಲೇ ಪ್ರಾಣ ಬಿಟ್ರೂ ಬಿಟ್ಟಾರು ಈ “ನನ್ನೂರು, ನನ್ನಟ್ಟಿ, ನನ್ ಹಿತ್ಲ… ನನ್ ಜಾಗ ಬೇಲಿ ಎಲ್ಲಾ ಅವರ ಜೀವದ್ ಜೊತೆ ಅಂಟಿಗ್ಯಂಡಿರುತ್ತೆ….. ಮಸ್ತ್. ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading