ಕುಸುಮಬಾಲೆ ಕಾಲಂ : 'ಜಮೀನ್ ವಾಪಸೀ' ಜಾರಿಯಾಗಲಿ, ಬೆಳಗಲಿ ತಾರೆ 'ಜಮೀನ್' ಪರ್


“ ಚಿಂತನೆಗಳು ಸಮಕಾಲೀನ” ನನ್ನ ಗುರುಗಳಾದ ವೇಣೂಜಿ ಸದಾ ಹೇಳುವ ಮಾತಿದು. ನೀವು ಇಲ್ಲಿ ಕೂತು ಯೋಚಿಸುವುದನ್ನು ಎಲ್ಲೋ ಯಾವುದೋ ದೇಶದ ಮೂಲೆಯೊಂದರಲ್ಲಿ ಕುಳಿತವನೂ ಯೋಚಿಸುತ್ತಾನೆ. ಲೇಖಕರಾಗಿ ನಿಮಗೆ ಹೊಳೆಯುವುದು ಯಾರೋ ಚಿತ್ರಕಾರನಿಗೂ ಹೊಳೆಯುತ್ತದೆ. ಮತ್ತು ಅದನ್ನು ಅವನು ತನ್ನ ಕ್ಯಾನ್ವಾಸಿನ ಮೇಲೆ ಹರಡುತ್ತಾನೆ. ವ್ಯಂಗ್ಯಚಿತ್ರಕಾರ, ಶಿಲ್ಪಿ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಅಭಿವ್ಯಕ್ತಿಸುತ್ತಾರೆ. ಆದರೆ ಯೋಚನೆ ಮಾತ್ರ ಒಂದೇ ತೆರನಾದ್ದು.ಮತ್ತು ಏಕಕಾಲಕ್ಕೆ ಬರುವುದು.
ಹೌದೆನಿಸುತ್ತದೆ. ಒಮ್ಮೆ ಮಲೆಮಾದೇಶ್ವರನ ಬೆಟ್ಟದ ನಾಗಮಲೆಗೆ ಹೋಗಿ ಬಂದು ಆ ಬಗ್ಗೆ ಒಂದು ಲೇಖನ ಬರೆಯೋಣವೆಂದು ನಾನು ಯೋಚಿಸುವ ವೇಳೆಗೇ ಅದಾಗಲೇ ಯಾರೋ ಚಿತ್ರಸಮೇತ ಬರೆದಾಗಿತ್ತು. ಫೇಸ್ ಬುಕ್ಕಿನಲ್ಲಿ ಯಾರೋ ಪದ್ಯ ಬರೆದಾಗ, ಇನ್ಯಾರೋ ಹೇ.. ಇದನ್ನೇ ಹೋಲುವ ನಂದೂ ಒಂದು ಪದ್ಯ ಹೀಗಿದೆ, ಅಂತ ಕಮೆಂಟು ಬಾಕ್ಸಿನಲಿ ಹಾಕುತ್ತಾರೆ. ಅಲ್ಯಾವುದೋ ಸಾಪ್ತಾಹಿಕದಲಿ ಓದಿದ ಕನ್ನಡದ ಕಥೆಯಂತದೇ ವಸ್ತು ವಿಷಯ,, ಯಾವುದೋ ಬ್ಲಾಗಿನ ಲೇಖನದಲ್ಲಿರುತ್ತದೆ.
2006ರ ಆಚೀಚೆ ನಾನು ಟಿ ಎನ್ ಸೀತಾರಾಮ್ ಜೊತೆ ಕೆಲಸ ಮಾಡುವಾಗ, ಧಾರವಾಡದ ಹುಡುಗಿ ಕಾವ್ಯ ಡೈರೆಕ್ಷನ್ ಡಿಪಾರ್ಟ್ ಮೆಂಟ್‍ ನಲ್ಲಿದ್ದಳು. ಅವಳದು ಧಾರವಾಡದ ಪುಟ್ಟ ಹಳ್ಳಿ, ನಾಟಕದ ಗೀಳು ಹತ್ತಿಸಿಕೊಂಡು ನಡೆಯುತ್ತಾ ಇಲ್ಲಿ ಬಂದಿದ್ದಳು. ನಾನೂ ಮೈಸೂರಿನ ಪುಟಾಣಿ ಹಳ್ಳಿಯಿಂದ ಬಂದು ಸೇರಿದ್ದೆ. ಧಾರಾವಾಹಿ, ಶೂಟಿಂಗ್, ಅದರ ಕೃತಕತೆಗಳು ನಮಗೆ ಒಮ್ಮೊಮ್ಮೆ ರೇಜಿಗೆ ಹುಟ್ಟಿಸುತ್ತಿದ್ದವು. ಒಮ್ಮೆಯಂತೂ ಧಾರಾವಾಹಿಯಲ್ಲಾಗಬೇಕಾದ ಒಂದು ಕೊಲೆಯ ಬಗ್ಗೆ ಆಫಿಸಿನಲ್ಲಿ ಕೂತು ನಾವದೆಷ್ಟು ಜೋರು ಜೋರಾಗಿ ಚರ್ಚಿಸಿದ್ದೆವೆಂದರೆ, ಪಕ್ಕದ ಮನೆಯವರು ಇಲ್ಯಾವುದೋ ಕೊಲೆ ಸಂಚು ನಡೆದಿದೆ ಅಂತ ಕಂಪ್ಲೇಂಟ್ ಕೊಡಲಿಲ್ಲ ಪುಣ್ಯ. ಆ ಕ್ಷಣಕ್ಕೆ, ಕೆಲಸದ ಅನಿವಾರ್ಯತೆಗೆ ಅದರಲ್ಲಿ ಭಾಗಿಗಳಾದರೂ ಆನಂತರ ಛೇ, ನಾವಿದೇನು ಮಾಡುತ್ತಿದ್ದೇವೆ ? ಅನಿಸಿಬಿಡುತ್ತಿತ್ತು. (ಈ ಕೆಲಸ ಮತ್ತು ಅನಿಸಿಕೆಯಿಂದ ಈಗಲೂ ಮುಕ್ತಿ ಸಿಕ್ಕಿಲ್ಲ ಅನ್ನೋದು ಬೇರೆ ಮಾತು)
ಆಗ “ಇದೆಲ್ಲ ಬಿಟ್ಟು, ನಮ್ಮೂರಿಗೆ ಹೋಗಿ ಒಂದು ಶಾಲೆ ತೆರೆಯಬೇಕು ಕಣೆ” ಅಂದಿದ್ದೆ. ಅವಳು ನನ್ನ ಮನಸಲ್ಲಿರೋದೂ ಅದೇ. ನಮ್ಮ ಹಳ್ಳೀಲಿ ನಾನೊಂದು ಕಲಾಶಾಲೆ ತೆರೆಯಬೇಕು ಅಂದಳು. ಅದಾದ ಮೇಲೆ ನಮ್ಮ ದಾರಾವಾಹಿಯ ಹೀರೋ ಪಾತ್ರಧಾರಿ ಅಂಬರೀಶ್ ಸಾರಂಗಿ ಸಂದರ್ಶನದಲ್ಲಿ ನಮ್ಮೂರಲ್ಲಿ ನಾನೊಂದು ನಾಟಕಶಾಲೆ ಮಾಡಬೇಕೆಂಬ ಕನಸು ಹೇಳಿದ. ಹೀರೋಯಿನ್ ಹರಿಣಿಯೂ ಇನ್ಯಾವುದೋ ಸಂದರ್ಭದಲ್ಲಿ ಮಲ್ಲೇಶ್ವರಂನಲ್ಲಿ ಸಂಸ್ಥೆ ತೆರೆಯಬೇಕೆಂದಳು. ಮತ್ತು ತೆರೆದಳು. ಮಲ್ಲೇಶ್ವರಂನಲ್ಲಿ ಕ್ಲಾಸು ಶುರುಮಾಡುವುದಕ್ಕೂ ಹಳ್ಳಿಗೆ ವಾಪಾಸು ಹೋಗಿ ಶಾಲೆ ಕಟ್ಟಲು ಇಟ್ಟಿಗೆ ಹೊರೋಕೂ ಸಾಕಷ್ಟು ವ್ಯತ್ಯಾಸವಿತ್ತು. ನಾವೆಲ್ಲ ಆಗಷ್ಟೇ ನಮ್ಮ ಬದುಕು ಕಟ್ಟಿಕೊಳ್ಳಲಿಕ್ಕೇ ಬಳಲುತ್ತಿದ್ದವರು. ಆದರೆ ಒಂದೊಳ್ಳೆ ಯೋಚನೆಯಂತೂ ಬಂದಿತ್ತು. ಅದೂ ಏಕಕಾಲದಲ್ಲಿ. ಶಿಕ್ಷಣ ಪದ್ದತಿ ಬಗ್ಗೆ ಸಿಕ್ಕ ಸಿಕ್ಕ ಪುಸ್ತಕಗಳನೆಲ್ಲ ತರುತ್ತಿದ್ದೆ. ಇದೇ ಸಮಯದಲ್ಲಿ ನಾನು ಮಹಾರಾಷ್ಟ್ರದ ಗಾಂಧೀ ಸೇವಾಗ್ರಾಮಕ್ಕೆ ಹೋಗಬೇಕಾಯಿತು. ಅಲ್ಲಿ ಗಾಂಧೀ ಆಶ್ರಮಕ್ಕೆ ಬಿನು ಎಂಬ ಯುವಕನೊಬ್ಬ ಬಂದಿದ್ದ. ರಾಂಚಿಯಲ್ಲಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದ ಅವನು, ಅವತ್ತು ಈ ದೇಶದ ಶಿಕ್ಷಣ ಪದ್ದತಿಯ ಬಗ್ಗೆ ತುಂಬ ಮಾತಾಡಿದ್ದ. ಪರ್ಯಾಯ ಶಿಕ್ಷಣ ಪದ್ದತಿಯ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿದ್ದ. ಅವನಿಗೂ ಅದೇ ಅನಿಸಿತ್ತು. ಹೊಸ ರೀತಿಯ ಶಾಲೆ ತೆರೆಯಬೇಕು. ಹೊಸ ತರದ ಶಿಕ್ಷಣ ಕೊಡಬೇಕು. ಹೀಗೆ ಯೋಚಿಸುವ ಲ್ಲರನೂ ಒಗ್ಗೂಡಿಸಿ ಎಲ್ಲರ ಚಿಂತನೆಗಳನೂ ಪರಸ್ಪರ ಹಂಚಿಕೊಂಡು , ಒಂದು ನೆಟ್ವರ್ಕ್ ಸೃಷ್ಟಿಸಬೇಕೆಂಬ ನನ್ನ ಕನಸು ಕನಸಾಗೇ ಉಳಿಯಿತು. ತಾತ್ಕಾಲಿಕವಾಗಿ.

ಈಗ 2014 ರ ವೇಳೆಗೆ ನನ್ನ ಮಗನನ್ನ ಶಾಲೆಗೆ ಸೇರಿಸಬೇಕಾದ ಸಮಯ ಬಂದಿದೆ. ಬದುಕಿನ ಬಡಿದಾಟಗಳಿಗೆ ಸಿಲುಕಿ ನಾನಂತೂ ಶಾಲೆ ತೆರೆಯಲಾಗಲಿಲ್ಲ. ಕನಿಷ್ಟ ನನ್ನ ಮಗನನ್ನಾದರೂ ಅಂತ ಶಾಲೆಯಿದ್ದರೆ ಅಲ್ಲಿ ಓದಿಸೋಣ. ಶಾಲೆ ತೆರೆದಿರುವವರೊಂದಿಗೆ ಕೈ ಜೋಡಿಸೋಣವೆಂದುಕೊಂಡೆ. ಹುಡುಕಲು ಶುರುಮಾಡಿದೆ. ಅಂತ ಶಾಲೆಗಳು ಸಿಕ್ಕವು ಕೂಡ. ಅಚ್ಚರಿಯೆಂದರೆ ಅದರಲ್ಲಿ ಬಹುತೇಕ ಶಾಲೆಗಳು ಆ ಅದೇ ನಮಗೆ ಯೋಚನೆ ಬಂದಿತ್ತಲ್ಲ. ಆ ವರುಷಗಳ ಹಿಂದೆಮುಂದೆ ಶುರುವಾದವು. ಅಂದರೆ ಅದೇ ಸಮಯದಲಿ ನಮಗೆ ಪರಿಚಯವಿರುವ, ಮತ್ತು ಇರದ ಯಾರ್ಯಾರಿಗೆಲ್ಲ ಪರ್ಯಾರ ಶಿಕ್ಷಣದ ಬಗ್ಗೆ ಯೋಚನೆ ಬಂದಿದ್ದಿರಬೇಕು. ಮೊನ್ನೆ ಗೆಳತಿ ದೀಪದಮಲ್ಲಿಯೊಂದಿಗೆ ಮಾತಾಡ್ತಾ ಮಗನ ಸ್ಕೂಲಿನ ವಿಚಾರ ಹೇಳಿದಾಗ ಅವಳೂ ನನ್ನ ಮಗಳನ್ನೂ ಅಂತಾ ಶಾಲೆಗೆ ಸೇರಿಸಲು ಯೋಚಿಸಿದ್ದೇನೆ ಅಂದಳು! ಅಮ್ಮಂದಿರ ಚಿಂತನೆಗಳೂ ಸಮಕಾಲೀನ!
ಈಗ ಇದನ್ನೆಲ್ಲ ಬರೆಯಲಿಕ್ಕೆ ಕಾರಣವಾಗಿದ್ದು ಫೇಸ್ ಬುಕ್ಕಿನ ಒಂದು ಸ್ಟೇಟಸ್ಸು. ಪಲ್ಲವಿರಾವ್ ಹಾಕಿದ್ದು. ಲೇಖಕಿ ದೀಪಾ ಹಿರೇಗುತ್ತಿಯ ಪತಿ ಸುಧೀರ್ ಮುರೋಳಿ ಕೃಷಿಗೆ ಸಂಬಂಧಿಸಿದಂತೆ ಹೊಸ ಪತ್ರಿಕೆಯೊಂದನ್ನು ತರುವ ಸುದ್ದಿ ಅದಾಗಿತ್ತು. ಈ ಸ್ಟೇಟಸ್ಸಿಗೆ ಎರಡು ದಿನ ಮುಂಚೆ ವಿಜಯವಾಣಿ ಪತ್ರಿಕೆಯಲ್ಲಿ ವಿದೇಶದಲ್ಲಿದ್ದ ಭಾರತದ ಹೈದನೊಬ್ಬ, ದೇಶಕ್ಕೆ ಮರಳಿ ಕೃಷಿಕನಾಗುತ್ತೇನೆ ಅಂದದ್ದಕ್ಕೆ, ಅವನ ಹೆಂಡತಿ ವಿಚ್ಛೇದನ ಕೇಳಿದ ಸುದ್ದಿ ಪ್ರಕಟವಾಗಿತ್ತು. ಆ ಡಿವೋರ್ಸ್ ಮ್ಯಾಟರಿಗಿಂತ ಅವನ್ಯಾರೋ ಮಹಾನುಭಾವನಿಗೆ ಕೃಷಿ ಬಗ್ಗೆ ಬಂದ ತುಡಿತಕ್ಕೆ ಮನಸೋತಿದ್ದೆ. ಈ ಏಪ್ರಿಲ್‍ಗೆ ಬೆಂಗಳೂರಿಂದ ಗಂಟುಮೂಟೆ ಕಟ್ಟಲು ನಾನು ಸಿಧ್ದವಾದ ಹೊತ್ತಲ್ಲಿ ಇವೆಲ್ಲ ಒಂಥರಾ ಸಮಾಧಾನದ ಸಂಗತಿಗಳಾಗಿ ಕಂಡವು. ಮತ್ತು ಸದರಿ ಪಲ್ಲವಿ ಸ್ಟೇಟಸ್ಸಿಗೆ ಪ್ರತಿಕ್ರಿಯಿಸಿದ ಒಬ್ಬರು ಕೃಷಿಗೆ ಸಂಬಂಧಿಸಿದಂತೆಯೇ ಇರುವ ಆನ್‍ಲೈನ್ ಮ್ಯಾಗಜಿ಼ನ್ ಒಂದರ ವಿಳಾಸ ಲಗತ್ತಿಸಿದರು. ಮತ್ಯಾರೋ ಇನ್ಯಾಔಉದೋ ವೆಬ್‍ಸೈಟಿನ ಬಗ್ಗೆ ಹೇಳಿದರು. ಈಚೆಗೆ ಫೇಸ್‍ಬುಕ್ಕಿನಲ್ಲೇ ಇರುವ “ಅಗ್ರಿಕಲ್ಚರಿಸ್ಟ್” ಅನ್ನುವ ಗುಂಪೊಂದನ್ನೂ ಫಾಲೋ ಮಾಡುತ್ತಿದ್ದೇನೆ.
ಸುಮ್ಮನೇ ಊಹಿಸುತ್ತೇನೆ. ಆಗ ಶಿಕ್ಷಣದ ಬಗ್ಗೆ ಅನಿಸಿದಂತೆ ಈಗ ಹಳ್ಳಿಗೆ ಹೋಗಿ ಕೃಷಿಮಾಡುವ ಯೋಚನೆ ನಮಗೆ ಗೊತ್ತಿರುವ ಮತ್ತು ಗೊತ್ತಿರದ ಎಷ್ಟೋ ವಿದ್ಯಾವಂತರಿಗೆ ಬಂದಿರಬಹುದು. ಆಗ ನೆಟ್‍ವರ್ಕ್ ಸೃಷ್ಟಿಸಲು ಇದ್ದಷ್ಟು ಕಷ್ಟ ಈಗಿಲ್ಲ. ವಾಟ್ಸಪ್ಪಿದೆ. ಸೋಷಿಯಲ್ ಮೀಡಿಯಾಗಳಿವೆ. ಯಾವ್ಯಾವುದೋ ಗುಂಪುಗಳಿದ್ದಾವಂತೆ ನೆಟ್‍ವರ್ಕ್ ಲೋಕದಲ್ಲಿ ,ನಮ್ಮದೂ ಆಗಲಿ. ಅಲ್ಯಾರೋ ತೆಂಗಿನಮರದ ರೋಗಕ್ಕೆ ಮಾಡಿದ ಪರಿಹಾರವನ್ನು ವೀಡಿಯೋ ಮಾಡಿ ಅಪ್‍ಲೋಡ್ ಮಾಡುತ್ತಾರೆ.. ನಾವದನ್ನ ನೋಡುತ್ತೇವೆ. ನಾವಿಲ್ಲಿ ಮಾಡಿದ ಹೊಸ ಪ್ರಯೋಗದ ಫೋಟೋ , ವೀಡಿಯೋ ಅವರಿಗೆ ತಲುಪುತ್ತದೆ. ಮಾಸಿದ ಬಟ್ಟೆಯ, ಹೆಬ್ಬೆಟ್ಟಿನ, ಸದಾ “ಕುರಿಗಳು ಸಾರ್” ಆಗೇ ಕಾಣುವ ರೈತನ ಚಿತ್ರ ಬದಲಾಗುತ್ತದೆ. ನಾವು ಈ ಜಮಾನಾದ ರೈತರು.ಧಿರಿಸು ಟಿಪ್ ಟಾಪ್. ಕೈಯಲ್ಲಿ ಲ್ಯಾಪ್‍ಟಾಪ್. ಆಧುನಿಕತೆಯ ಅಥವಾ ಇನ್ಯಾವುದರದೋ ಪ್ರವಾಹ ತಡೆಯಲಿಕ್ಕಾಗುವುದಿಲ್ಲ ಅಂತ ಖಾತ್ರಿಯಾದಾಗ ನಾವು ಅದರ ದಿಕ್ಕನ್ನು ನಮಗೆ ಬೇಕಾದ ಹಾಗೆ ತಿರುಗಿಸಿಕೊಂಡುಬಿಡಬೇಕು. ಅದೇ ಜಾಣತನ. ಮತ್ತು ಈ ಹೊಸಕಾಲದ ರೈತರನ್ನು ಯಾಮಾರಿಸುವುದು ರಾಜಕಾರಣಿಗಳಿಗೆ ಸುಲಭವಾಗಲಿಕ್ಕಿಲ್ಲ. ಸೋಸಿಯಲ್ ಮೀಡಿಯಾದಲ್ಲಿ ರುಬ್ಬುತ್ತೇವೆ…. ಹೀಗೆಲ್ಲ ಆಗುವ ಬಗ್ಗೆ ಕನಸು ಕಾಣುತ್ತೇನೆ. ಚಿಂತನೆಗಳು ಸಮಕಾಲೀನವಾದರೆ ಖಂಡಿತಾ ಇನ್ನೊಂದಿಷ್ಟು ವರ್ಷಗಳಲಿ ಇದರ ರಿಸಲ್ಟು ಸಿಗುತ್ತದೆ.
ತತ್ಸಮಾನ ಸಮಯದಲ್ಲೆ ಮತ್ತಿನ್ಯಾವುದೋ ಚಿಂತನೆ( ಚಿಂತೆ) ಯದೂ ಸಮಕಾಲೀನತೆಯೇ ಆಗಿರುತ್ತದೆ.” ಬ್ಯಾಸಾಯ, ನಾಸಾಯ, ನೀಸಾಯ ಮನೆಮಂದಿಯೆಲ್ಲಾ ಸಾಯಾ” ಅನಿಸಿ ಸಾಕಾಗಿ ಹೋದವರದು ಇದನ್ನು ಸಾಕುಮಾಡುವ ಚಿಂತನೆ. ಎಲ್ಲ ಮೇಷ್ಟರುಗಳಿಗೂ ಮಕ್ಕಳನು ಸಿಇಟಿಗೆ ಸಿಧ್ದಮಾಡುವ ಚಿಂತನೆ. ಬ್ಯುಸಿನಸ್ ಮನೆತನದ ಎಲ್ಲ ಸೊಸೆಯರಿಗೂ ಏಕಕಾಲಕೆ ಮಕ್ಕಳನು ಡಾಕ್ಟರಿಕೆ ಮಾಡಿಸುವ ಚಿಂತನೆ. ರಾಜಕಾರಣದ್ದು ಹೊಸ ಹೊಸ ಚಿಂತನೆ. ಹೀಗೇ… ಏನೂ ಆಗಬಹುದು. ಸುಮ್ಮನೇ ಗಮನಿಸಿದರೆ ಇಡೀ ಜಗತ್ತು ಬೇರೆ ಬೇರೆ ಚಿಂತನೆಗಳಿಂದ ತುಂಬಿಹೋದಂತೆ ಅನಿಸುತ್ತದೆ. ಮತ್ತು ಸಮಾಜದ ಒಟ್ಟಾರೆ ಹರಿವು ಆಯಾಕಾಲಕ್ಕೆ ಬದಲಾಗುವ ಸಮಕಾಲೀನ ಚಿಂತನೆಗಳನ್ನೇ ಆಧರಿಸಿದೆ ಅನಿಸುತ್ತದೆ. ಮತ್ತು ಯಾವ ಚಿಂತನೆ ಹೆಚ್ಚು ಜನರಿಗೆ ಏಕಕಾಲಕ್ಕೆ ಬರುತ್ತದೋ ಅದೇ ಆ ಕಾಲಘಟ್ಟದ ಮುಖ್ಯಚಳವಳಿಯಾಗಿ ಮಾರ್ಪಡುತ್ತದೇನೋ. ಸಮಾಜವಾದ, ಸ್ವದೇಶೀ, ದಲಿತ ಚಳುವಳಿ, ಮಹಿಳಾವಾದ, ಜಾಗತಿಕ ಮಟ್ಟದ ಸಾಹಿತ್ಯಿಕ, ಸಾಮಾಜಿಕ ಚಳುವಳಿಗೇಲ್ಲ ಪೀಕ್ ಅನಿಸುವ ಮಟ್ಟ ತಲುಪಿ ಮತ್ತೆ ಆಗಾಗ ಏರಿಕೆ ಇಳಿಕೆ ಕಾಣುವುದೆಲ್ಲ ಇದೇ ಕಾರಣಕ್ಕಿರಬಹುದು.
ನೀವು ನೋಡಿರುತ್ತೀರಿ. “ಅಖಿಲ ಕರ್ನಾಟಕ—–ಸಂಘ” “ಅಖಿಲ ಭಾರತ —-ಪರಿಷತ್ತು” ಅಂತೆಲ್ಲ ಬೋರ್ಡುಗಳಿರುತ್ತವೆ. ಅಲ್ಲಿ ಐವತ್ತೋ ಐನೂರೋ ಜನವಿದ್ದಾರು. ಆದರೂ ಅದು “ಅಖಿಲ” ! ನಾವೂ ಹಾಗೇನಾ? ಅಲ್ಲಿ ಯಾರೋ ಪತ್ರಿಕೆ ಆರಂಭಿಸಿದರು. ಇಲ್ಲಿ ಯಾರೋ ವಾಪಾಸು ಬಂದರು. ಆದರೆ ಒಟ್ಟಾರೆ ಎಷ್ಟು ಜನ? ಕೃಷಿಗೆ ಮರಳುವ ಸಮಕಾಲೀನ ಚಿಂತನೆಯದು ಮೇಲುಗೈಯೋ, ಬಿಟ್ಟು ಪಟ್ಟಣ ಸೇರುವ ಚಿಂತೆಯದು ಮೇಲುಗೈಯೋ? ಲೆಕ್ಕ ಸಿಗುವುದು ಹೇಗೆ? ವರಮಹಾಲಕ್ಷ್ಮಿ ಹಬ್ಬದ ಟೈಮಿಗೆ ಬಾಳೆ ಬಂದರೆ ರೇಟು ಸಿಗತ್ತೆ ಅಂತ ಇಲ್ಲೊಬ್ಬ ರೈತ ಯೋಚಿಸಿದಂತೆ, ಅಲ್ಲೂ ಹತ್ತು ಜನ ಯೋಚಿಸಿರುತ್ತಾರೆ. ಎಲ್ಲರೂ ಒಟ್ಟಿಗೇ ಬೆಳೆಯಲೂಬಹುದು. ಆಳುಸಿಗದೆ ಒಂದಷ್ಟು ಜನರ ಸಮಯ ಚೂರು ಹಿಂದುಮುಂದಾಗಬಹುದು. ಮಳೆಗಾಳಿಗೆ ಸಿಕ್ಕಿ ಬಹುತೇಕ ಬೆಳೆ ನಾಶವಾಗಲೂಬಹುದು. ಏನೂ ಆಗಬಹುದು. ಯೋಚನೆಗಳು ಬರುತ್ತವೆ. ಜಾರಿಯಾಗುವುವೆಷ್ಟು? ಅನ್ನುವ ಲೆಕ್ಕಾಚಾರದಲ್ಲೇ ಎಲ್ಲ ಕರಾಮತ್ತೂ ನಡೆವುದು. ಆದರೆ ಆ ಲೆಕ್ಕಾಚಾರ ಮಾತ್ರ ಯಾರ, ಯಾವ ಗಣತಿಗೂ ಸಿಗುವಂತದಲ್ಲ.
“ಅಖಿಲ” ದ ಹಾಗೆ, ನಾವು ಸುತ್ತಮುತ್ತ ನೋಡಿ ಉಬ್ಬುತ್ತೇವೆ. ವಾಚ್ ಕೊಳ್ಳುವ ಯೋಚನೆ ಇಟ್ಟುಕೊಂಡು ಬಸ್ಸತ್ತಿರೆ, ಬಸ್ಸಿನ ಎಲ್ಲ ಪ್ರಯಾಣಿಕರ ವಾಚನ್ನೂ ಅರಿವಿರದೇ ಗಮನಿಸುತ್ತೇವೆ. ಬಟ್ಟೆ, ಚಪ್ಪಲಿ ಎಲ್ಲಕೂ ಇದು ಅನ್ವಯ. ಹಾಗೇ ನಮ್ಮ ಯೋಚನೆಗೆ ತಕ್ಕಂತ ಜನರೇ ನಮಗೆ ಸಿಗುತ್ತಾರೆ. ಅಂದ ಮಾತ್ರಕ್ಕೇ ಎಲ್ಲ ಕಡೆ ಅವರೇ ತುಂಬಿಕೊಂಡಿರುತ್ತಾರೆ ಅಂತಲ್ಲ, ತುಂಬಿಕೊಂಡಿರಲೂಬಹುದು. ನಮಗೆ ಅಕ್ಕಪಕ್ಕ ಮಾತ್ರ ನೋಡಲಿಕ್ಕಾಗುತ್ತದೆ. ಟಾಪ್ ಆಂಗಲಿನ ಕ್ಯಾಮರಾಕ್ಕೆ ಮಾತ್ರ ಎಲ್ಲೆಲ್ಲಿ ಏನಾಗುತ್ತಿದೆ ಅಂತ ಗೊತ್ತಾಗುವುದು. ಅದು ಯಾರಿಗೋ ಸಿಗ್ನಲ್ಲು ಕೊಟ್ಟು, ಎಲ್ಲವೂ ಆಗಿಂದಾಗ್ಗೆ ಪ್ರಾಕೃತಿಕವಾಗಿಯೇ ಬ್ಯಾಲೆನ್ಸ್ ಆಗುತ್ತಿರಬಹುದು.
ಅವಧಿಗೆ ಲೇಖನಗಳನ್ನು ಬರೆಯಲು ಆರಂಭಿಸಿದ ಮೇಲೆ, “ನನ್ನ ಮನಸಿನ ಮಾತುಗಳೇ ಅನ್ನುವಂತಿವೆ” “ನಾನೂ ಯಾವಾಗಲೂ ಇದನ್ನೇ ಯೋಚಿಸುತ್ತಿದ್ದೆ” ಅನ್ನುವಂತ ಮೆಸೇಜುಗಳು ಬರುತ್ತವೆ. ನಿಜ. ನಾನು ಬರೆಯುತ್ತೇನಷ್ಟೆ. ಆದರೆ ಈ ಯೋಚನೆಗಳು ಎಷ್ಟೋ ಜನಕ್ಕೆ ಬಂದಿರುತ್ತವೆ. ಬಂದಿರಲಿಕ್ಕೇಬೇಕು. ಯಾಕೆಂದರೆ “ಚಿಂತನೆಗಳು ಸಮಕಾಲೀನ”
“ಜಮೀನ್ ವಾಪಸೀ” ಅಭಿಯಾನ ಜಾರಿಯಾಗಲಿ ಬೇಗ. ಬೆಳಗಲಿ ತಾರೆ “ಜಮೀನ್ “ ಪರ್.
 

‍ಲೇಖಕರು G

March 3, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. ಅಕ್ಕಿಮಂಗಲ ಮಂಜುನಾಥ

    ನಂಗೂ ನಿಮ್ಗೆ ಅನ್ನಿಸಿದ ಹಂಗೇ ಬೇಕಾದಷ್ಟು ಸಾರಿ ಅನ್ನಿಸ್ತು. ಆದ್ರೆ ವ್ಯವಸಾಯ. ..ಸಾಯ.. .ಸಾಯ….ಅಂತ ಏನೂ ಮಾಡಕ್ಕೇ ಆಗುಲ್ಲ. ನಂತರಾನೇ ಓರಗೆಯವರೂ ರೇಟು ಸಿಗುತ್ತೆ ಉದ್ಧಾರ ಆಗ್ತೀವಿ ಅಂಥ ಬೆಳೆದದ್ದನ್ನೇ ಬೆಳೆದೂ ಬೆಳೆದೂ- ಔಷದಿ ಅಂಗಡಿಗಳನ್ನ, ಕಂಪನಿಗಳನ್ನ, ಕೃಷಿ ಆಫೀಸುಗಳನ್ನ, ಆ ಆಫೀಸುಗಳನ್ನ, ಈ ಆಫೀಸುಗಳನ್ನ, ರಾಜ ಕಾರಣಿಗಳನ್ನ, ಅವರನ್ನ, ಇವರನ್ನ, ಮುಖ್ಯವಾಗಿ ಮದ್ಯ ವರ್ತಿಗಳನ್ನ…….ಅಂಥ ಒಟ್ಟಿನಾಗ ಪ್ರಪಂಚವನ್ನ ಉದ್ಧಾರ ಮಾಡೋದರಲ್ಲೇ ಕಾಲ ಕಳೀತ ತಾವು ಮಾತ್ರ ಹಂಚಿ ಪುಳ್ಳೆಯಷ್ಟೂ ಮೇಲೇರಕ್ಕೆ ಆಗ್ಲಿಲ್ಲ.
    ಲೇಖನ ಚೆನ್ನಾಗಿದೆ; ಅಭಿನಂದನೆಗಳು.

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    arthapoorna, endinate. ;jameen ko vapasi’ antaagabekeno…

    ಪ್ರತಿಕ್ರಿಯೆ
  3. ಸುಗುಣ ಮಹೇಶ್

    ಹೌದು ನಾನು ಸ್ಕೂಲ್ ಮಾಡೋಣ ಅದಕ್ಕೆ ದುಡ್ಡು ಸ್ವಲ್ಪ ಸಂಪಾದನೆ ಮಾಡ್ಕೊಂಡು ಹೋಗೋಕ್ಕೆ ಗಲ್ಫ್ ಗೆ ಬಂದನವ್ವಾ, ಊರಲ್ಲಿ ಏನೇನೋ ರೂಲ್ಸ್ ಲಂಚಾವತಾರ ಎಲ್ಲ ಕೇಳಿ ಭಯವಾಗೋಗಿದೆ. ಚಿಂತನೆಗಳು ಎಲ್ಲರಲ್ಲೂ ಒಂದಿಲ್ಲೊಂದು ರೀತಿ ಕಾಡುತ್ತಲೇ ಇರುತ್ತೆ ನೀವು ಹೇಳಿದಂತೆ.

    ಪ್ರತಿಕ್ರಿಯೆ
    • ಮಮತ

      ಹಾಂ, ಯೋಚನೆಗಳು ಸಮಕಾಲೀನ. ಶಾಲೆ ತೆರೆಯೋಕೆ, ಅಲ್ಲಿ ಎಲ್ಲಾ ಬಗೆಯ ಶಿಕ್ಷಣ ಕೊಡೋಕೆ, ೆಲ್ಲಾ ಬಗೆಯ ಲಲಿತ ಕಲೆಗಳು ಅಲ್ಲಿ ಸಿಗುವಂತಾಗಬೇಕು , ಹಾಗಿರಬೇಕು, ಹೀಗಿರಬೇಕು ಅಂತ ಸಿಕ್ಕಾ ಪಟ್ಟೆ ಕನಸನ್ನ 10 ವರ್ಷಗಳ ಹಿಂದೆ ನಾವೊಂದಿಷ್ಟು ಗೆಳೆಯರು ಕನಸಿದ್ದೆವು, ನೊ, ಅದು ಅಷ್ಟು ಸುಲಭವಲ್ಲ, ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಬೇಕು, ಅಂತ ಅನ್ನಿಸಿತು. ಈಗ ೆಲ್ಲಾ ಕ್ಷೇತ್ರಗಳೂ ಹೀಗೆಯೇ, ವಿಪರೀತ ಕಾಂಪಿಟೇಷನ್.. ಮತ್ತು ವಿಪರೀತ ಏರಿಳಿತಗಳು. ಈ ಕಾಲಘಟ್ಟದಲ್ಲಿ ಯಾವುದೂ ಶಾಶ್ವತ ಇರಲಿ ಒಂದಷ್ಟು ವರ್ಷಗಳು ಕಳೆಯೋದ್ರೊಳಗೆ ಬೋರ್ ಹುಟ್ಟಿಸುವುದು ಏಕೆಂದು ಅರ್ಥವೇ ಆಗೋದಿಲ್ಲ ಕೆಲವೊಮ್ಮೆ.
      ಇರಲಿ ತಾವೀಗ ಬೆಂಗಳೂರಿಂದ ಕಾಲು ಕೀಳ್ತಿದ್ದೀರಿ ಹಾಗಾದ್ರೆ ? ಮಗನ ಶಾಲೆ ಸೇರಿಸೋ ಹೊತ್ತಲ್ಲಿ ಈ ಎಲ್ಲಾ ಆಲೋಚನೆಗಳು ಬಂದು ಅದನ್ನೂ ಒಂದು ಲೇಖನ ಮಾಡಿಬಿಟ್ಟಿರಿ…:) ಸೊ ನೈಸ್… ಪುನಃ ಅದೇ ಆಳ , ಅ
      ಗಲ…

      ಪ್ರತಿಕ್ರಿಯೆ
  4. ಮಂಜುನಾಥ ಸಿ. ತಿಪಟೂರು

    ಮರಳಿ ಮಣ್ಣಿಗೆ…. ಸಾರ ಹೊತ್ತಂತಿರುವ ನುಡಿಗಳು.

    ಪ್ರತಿಕ್ರಿಯೆ
  5. sindhu

    ಪ್ರೀತಿಯ ಕುಸುಂ
    ಚಿಂತನೆ ಸಮಕಾಲೀನ… ಆಗಿರೋದ್ರಿಂದಲೇ ಅದು ಚಿಂತನೆ. ಚಿಂತೆ ಅಥವಾ ಪ್ರಪೋಗ್ಯಾಂಡಾ ಅಲ್ಲ ಅನ್ಸುತ್ತೆ ನಂಗೆ.
    ಈ ಶಾಲೆ ಬಗ್ಗೆ ನಂಗೆ ಏನಾರೂ ಮಾಡೋಕ್ಕೆ ಆಗೋಲ್ಲಿವರೆಗೂ ಏನೂ ಮಾತಾಡ್ಬಾರದು ಅಂತ ನಾನಂದ್ಕೊಂಡಿದೀನಿ.
    ಮೊದಮೊದಲು ಪಂಚತಂತ್ರ ಕತೆಗಳು ಹೇಗೆ ರೂಪಿತವಾದಾವು ಅನ್ನುವ ಕಥೆ ಕೇಳಿದಾಗ, ಹಲವಾರು ಪಂಚತಂತ್ರ ಕಥೆ ಓದಿದಾಗ ತುಂಬ ಇರಿಟೇಟ್ ಆಗ್ತಿತ್ತು ನಂಗೆ. ಎಷ್ಟೆಲ್ಲ ದ್ರೋಹ, ಟ್ಯಾಕ್ಟಿಕ್ಸ್ ತುಂಬಿದಾರೆ ಈ ಕಥೇಲಿ. ಇದ್ರ ಮೂಲಕ ಶಿಕ್ಷಣ ಪಡೆದ ಆ ರಾಜಕುಮಾರರು ಎಂಥ ಹಿಟ್ಲರ್ ಗಳಾಗಿ ಬೆಳೆದ್ರೋ ಏನೋ ಅಂಥ.
    ಅದು ನಾನು ಚಿಕ್ಕವಳಿದ್ದ ಕಾಲ. ಈಗ ತುಂಬ ಬಿದ್ದೆದ್ದು,ತಡವರಿಸಿ, ಎಡವಿ ಮುಖ್ಯರಸ್ತೆಯ ಬದಿಯಲ್ಲಿ ಅವಡುಕಚ್ಚಿ ಓಡಾಡುತ್ತಿರುವ ಕಾಲ. ಅದೆಲ್ಲ ತುಂಬ ಬೇಕೇ ಬೇಕಿದ್ದ ನೀತಿ ಅನ್ಸುತ್ತೆ. ಅವೆಲ್ಲ ಗೊತ್ತಿದ್ರೆ ಅಷ್ಟೂ ಅಲ್ಲದೆ ಇದ್ರೆ ಒಂದೆರಡು ಮುಗ್ಗರಿಸೋದನ್ನ, ಒಂದು ಪಲ್ಟಿಯನ್ನ, ಒಂದು ಸುತ್ತು ಬಳಸು ಹಾದಿಯನ್ನ ತಡೀಬೋದಿತ್ತೇನೋ ಅನ್ನಿಸುತ್ತಿರುತ್ತೆ. ಇದೆಲ್ಲ ಬದುಕು ನಮಗೆ ಕಲಿಸಲೇಬೇಕಾದ ಪಾಠ ಅಂತನೂ ಅನ್ನಿಸ್ತಿರುತ್ತೆ.
    ಯುನಿಫಾರ್ಮ್ ಬಾಕ್ಸ್ ಮೆದುಳುಗಳನ್ನ ಚುರುಕಾಗಿ ತಯಾರು ಮಾಡೋ ಶಿಕ್ಷಣ ಫ್ಯಾಕ್ಟರೀಲಿ ನನ್ ಮಕ್ಕಳ ನುಗ್ಗಿಸಿ ಸೇರಿಸಲಿಕ್ಕೆ ಇಷ್ಟವಿಲ್ಲದೆಯೂ ಲೈನಲ್ಲಿ ನಿಂತ ಒಬ್ಬ ಅಮ್ಮ ನಾನು. ಇದರ ಹೊರತಾಗಿ ಏನ್ ಮಾಡೋದು ಅಂತನೂ ಗೊತ್ತಾಗ್ತಾ ಇಲ್ಲ ನಂಗೆ. ಹೌದು ಈ ಸೋಷಿಯಲ್ ಮೀಡಿಯಾ ಕಾಲದಲ್ಲೂ..
    ಇತ್ತೀಚೆಗಂತೂ ನಾನು ಕ್ಲಬ್ 99 ನ ಪ್ರೀಮಿಯಂ ಸದಸ್ಯೆ ಆಗಿದೀನಿ ಅನ್ನಿಸ್ತಾ ಇದೆ.
    ಏನು ಮಾಡೋದು? ಇದನ್ನ ಯೋಚಿಸೋದಿಕ್ಕೂ ಟೈಮಿಲ್ಲದ ಹಾಗೆ.
    ನನ್ನ ಕತೆ ಇರಲಿ. ನಿಮ್ಮ ಕನಸು ಆಸ್ ಈಸ್ ಅಲ್ಲದೆ ಇದ್ರೂ ಸಾಕಷ್ಟಾದರೂ ನನಸಾಗಲಿ. ಸಮರ್ಥ ಒಬ್ಬ ಜವಾಬ್ದಾರಿಯುತ ಮತ್ತು ಸೆನ್ಸಿಬಲ್ ಮನುಷ್ಯನಾಗಿ ಬೆಳೆಯಲಿ ಅಂತ ಹಾರೈಸುತ್ತೀನಿ.
    ಪ್ರೀತಿಯಿಂದ
    ಸಿಂಧು

    ಪ್ರತಿಕ್ರಿಯೆ
  6. Anil Talikoti

    ನನ್ನದು ಇಂಥವೇ ಯೋಚನೆಗಳು -ಹುಚ್ಚಾಟವಲ್ಲವೆಂಬ ಖುಷಿಯಾಯಿತು -ಎಂದೋ ಒಂದು ದಿನದ ನಿರೀಕ್ಷಿಯಲ್ಲಿ!

    ಪ್ರತಿಕ್ರಿಯೆ
  7. umavallish

    ಒಳ್ಳೆಯದು ಒಳ್ಳೆಯ ಕೆಲಸ ಒಳ್ಳೆಯ ಆಲೋಚನೆಗಳು ಅನ್ನಿಸಿದಷ್ಟು ಸುಲಭವಾಗಿ ಆಚರಣೆಗೆ ಬರುವಹಾಗಾದರೆ,ಎಷ್ಟು ಚೆನ್ನಾಗಿರುತ್ತದೆ ಅಲ್ವಾ?ಸಹಚಿಂತಕರ ಸಂಖೆ ಜಾಸ್ತಿಯಾಗಲಿ ಎನ್ನುವ ಆಶಾಭಾವನೆ ಒಂದೇ ಆಶಾ ಕಿರಣ. ಲೇಖನದ ಉದ್ದೇಶ ಸುಂದರ.

    ಪ್ರತಿಕ್ರಿಯೆ
  8. Kantha

    Farming is already passed far away from laymen, I mean from laymen. Still, few risk takers,tough people can only have the joy of farming. Any how congradulations to you Kusuma and wish you best of luck and great success from April.

    ಪ್ರತಿಕ್ರಿಯೆ
  9. ಗುಡ್ಡ

    ಹಂಗೆ ನಿಮಗೆ ಗೊತ್ತಿರಲಿ ಅಂತ: ನಿಮಗೆ ಪಿತ್ರಾರ್ಜಿತವಾಗಿ ಜಮೀನು ಬಂದಿಲ್ಲಾ ಎಂದರೆ ಕರ್ನಾಟಕದಲ್ಲಿ ನೀವು ಕಾನೂನು ಬದ್ಧವಾಗಿ ಜಮೀನು ಹೊಂದಿರುವ ರೈತರಾಗುವುದು ಕನಸೇ ಸರಿ.
    ಕರ್ನಾಟಕ ಭೂಸುಧಾರಣೆ ಕಾನೂನಿನ ಪ್ರಕಾರ ಕೃಷಿಕರಲ್ಲದವರು ಹೊಲ ಕೊಳ್ಳಲು ಅವರ ವಾರ್ಷಿಕ ವರಮಾನ ಎರಡು ಲಕ್ಷಕ್ಕಿಂತ ಕಡಿಮೆ ಇರಬೇಕು. ನಿಮ್ಮ ವರಮಾನ ಅದಕ್ಕಿಂತ ಕಡಿಮೆ ಇದ್ದರೆ, ಜಮೀನಿನ ರೇಟು ನಿಮ್ಮ ಕೈಗೆಟುವುದಿಲ್ಲ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: