ಕುಸುಮಬಾಲೆ ಕಾಲಂ : ಕೊಲ್ಲದೇ “ಬದುಕೋಣ”ವಾ?

ಗೊತ್ತು ನಿಮಗೆಲ್ಲ, ಕಾಡು ಊರಾಗುತ್ತಿದೆ.. ಆಸ್ಪತ್ರೆ ವೇಸ್ಟುಗಳು. ಫ್ಯಾಕ್ಟರಿ ವೇಸ್ಟುಗಳು.ಆಟೋಮೊಬೈಲ್ ವೇಸ್ಟುಗಳು, ”ಈ” ವೇಸ್ಟುಗಳು ಇದನ್ನೆಲ್ಲ ಸುರಿಯೋದೆಲ್ಲಿ? ಕರಗದ ರಾಶಿ ರಾಶಿ ವಸ್ತುಗಳನ್ನೆಲ್ಲ ಏನು ಮಾಡಬೇಕು? ಅನ್ನುವ ಸರಿಯಾದ ಯೋಜನೆ ಇಲ್ಲದೇ, ಎಲ್ಲೆಲ್ಲೋ ಬಿಸಾಕಿರುತ್ತೇವೆ.ಬೆಂಗಳೂರಲಿ ಕೊಚ್ಚೆನೀರು ನದಿಯಾಗಿದೆ.ವಿಷಕಂಠನಿಗೇ ಸೆಡ್ಡು ಹೊಡೆದ ಹಲವು “ವಿಷಉದರಿಗಳು” ನಾವು. ಹೆಂಗಸರು ಈಗೀಗ ಸರಿಯಾಗಿ ಮುಟ್ಟಾಗುವುದಿಲ್ಲ, ಮಕ್ಕಳಾಗುವುದಿಲ್ಲ. ಬೀದಿಗೊಂದೊಂದು ಕೃತಕ ಗರ್ಭಧಾರಣಾ ಘಟಕಗಳು. ರೋಗವಿಲ್ಲದ ಮನುಷ್ಯನ ದುರ್ಬೀನಲಿ ಹುಡುಕಬೇಕು.
ಇಷ್ಟೆಲ್ಲದರ ನಡುವೆ ಹಲವರು ಒಟ್ಟಾಗಿ, “ಬಳಸಿಯು ಉಳಿಸಲು ನೆಡಬೇಕು” ಅಂತ ತೀರ್ಮಾನಿಸಿದ್ದಾರೆ. ಟೀಚರ್ ಗಳು, ಕೈಗಾರಿಕೆ ನಡೆಸೋರು, ಅರಣ್ಯ ಇಲಾಖೆಲಿರೋರು. ಬಿಬಿಎಂಪಿ ಉದ್ಯೋಗಿಗಳು. ಹೀಗೆ ವೆರೈಟಿ ಜನರುಳ್ಳ ಒಂದು ಟೀಮ್, ಪ್ರತಿವರ್ಷ ಸಾವಿರಾರು ಗಿಡಗಳನ್ನು ಹಳ್ಳಿಗಳು ಮತ್ತು ಸರಕಾರೀ ಶಾಲಾ ಅವರಣಗಳಲ್ಲಿ ನೆಟ್ಟು, ಅವುಗಳ ಪೋಷಣೆಯ ಜವಾಬ್ದಾರಿಯನ್ನ ಮಕ್ಕಳಿಗೆ ವಹಿಸುತ್ತಾರೆ.ಇದರಿಂದ, ಮರವೂ ಬೆಳೀತು, ಮಕ್ಕಳ ಪರಿಸರ ಪ್ರಜ್ಞೆಯೂ ಬೆಳೀತು,ಫೇಸ್ ಬುಕ್ ಮೂಲಕ ಇವರ ಕಾರ್ಯಕ್ರಮ ತುಮಕೂರಿನಲ್ಲಿರೋದು ಗೊತ್ತಾಯ್ತು. ವಲ್ಡ್ ಕಪ್ ಮ್ಯಾಚ್ ನಲ್ಲಿ ಆಸಕ್ತಿಯಿರದ ನಾನು, ಗಿಡ ನೆಡುವ ಕಾರ್ಯಕ್ರಮಕ್ಕೆ ಹೋಗಲು ನಿರ್ಧರಿಸಿದೆ.
ಸರಕಾರೀ ಬಸ್ಸು ಹತ್ತಿ, ತುಮಕೂರಿಗೆ ಹೋಗಿ, ಅಲ್ಲಿಂದ ಆ ಹಳ್ಳಿಗೆ, ಅವರು ಹೇಳಿದ ಜಾಗಕ್ಕೆ ಹೋದರೆ, ಕಂಡಿದ್ದು ಒಂದು ಆಶ್ರಮ. ನೂರಾರು ಮಕ್ಕಳು. ವಿತ್ ಕೆಂಪು ಟವಲು. ಗಿಡ ನೆಡುವುದೆಂದರೆ ದೊಡ್ಡ ಬಯಲಲ್ಲಿ ಅಂದುಕೊಂಡಿದ್ದವಳು, ಏನೊಂದೂ ಅರ್ಥವಾಗದೇ, ಇದೇನು ಕಾರ್ಯಕ್ರಮ? ಇಲ್ಲೇನು ಮಾಡ್ತೀರಿ? ಇದೇನು ಸಂಸ್ಥೆ? “ಅ ಆ ಇಈ” ಯಿಂದ ಎಲ್ಲ ಹೇಳಿ,ಅನ್ನಬೇಕಾಯ್ತು. ವೃಕ್ಷಮಿತ್ರರು ಇಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟು, ಮಕ್ಕಳಿಗೆ ಪರಿಸರದ ಬಗ್ಗೆ ಡಾಕ್ಯುಮೆಂಟರಿ ತೋರಿಸೋದು , ಚಿತ್ರ ಬರೆಸೋದು.ಇದು ಅಸಲು ಕಾರ್ಯಕ್ರಮ. ಒಂದಷ್ಟು ಸುತ್ತಾಡಿ, ಮಕ್ಕಳನೂ ಮಾತಾಡಿಸುವ ಹೊತ್ತಿಗೆ “ಅಂ .ಅಃ” ವರೆಗೂ ಎಲ್ಲ ಗೊತ್ತಾಯಿತು.
ಮಕ್ಕಳಿಲ್ಲದ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಅನಾಥ, ಬಡ, ಮಕ್ಕಳನ್ನು ಕರೆತಂದು ವಸತಿ, ವಿಧ್ಯಾಭ್ಯಾಸ ಎಲ್ಲ ಕೊಟ್ಟು ಬೆಳೆಸುತ್ತಿದ್ದಾರೆ. ಮಕ್ಕಳು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಆದರೆ ಸೌಲಭ್ಯಗಳ ಕಲ್ಪಿಸಲು ಕಷ್ಟವಿದೆ. ಮೇಲೆ ಶೀಟ್ ಇರುವ ಕಟ್ಟಡ . ಬೇಸಿಗೆಯಲ್ಲಿ ಮಹಾಕಷ್ಟ. ವಿಷಯ ಆ ಕಷ್ಟದ್ದಲ್ಲ, ಅದನ್ನು ಆ ಮಕ್ಕಳ ಮುಂದೆಯೇ ಹೇಳುವುದು.ನೀವು ಅನಾಥರು. ಗತಿ ಇಲ್ಲದೋರು ಅಂತ ಪದೇಪದೇ ಅವರಿಗೆ ನೆನಪು ಮಾಡಿಕೊಡೋದು. ಈ ಅಶ್ರಮದ ಮಕ್ಕಳ ಕಥೆಗೆ ಬರುವ ಮುನ್ನ, ಕಳೆದ ವರ್ಷದ ಘಟನೆಯೊಂದನ್ನ ಹೇಳುತ್ತೇನೆ ನಿಮಗೆ.
ಮಗನ ನಾಕನೇ ವರ್ಷದ ಹುಟ್ಟು ಹಬ್ಬಕ್ಕೆ “ಸಾರ್ಥಕ”ವಾದ ಒಂದು ಕೆಲಸ ಮಾಡಲು ಯೋಚಿಸಿದೆವು. ನಮ್ಮ ಪಾಲಿನ ಸಾರ್ಥಕ ಕೆಲಸವೆಂದರೆ ಅನಾಥ ಮಕ್ಕಳಿಗೆ ಊಟ ಹಾಕುವುದು ತಾನೇ? ಮೈಸೂರಿನ ಅನಾಥಾಶ್ರಮವೊಂದರಲ್ಲಿ ವ್ಯವಸ್ಥೆ ಆಗಿತ್ತು. ನಾವು ಗೇಟಿನ ಮುಂದೆ ನಿಲ್ಲುತ್ತಿದ್ದಂತೆಯೇ ಮಕ್ಕಳು. ಅನಗತ್ಯ ಅತಿವಿನಯದಿಂದ ನಮಸ್ಕಾರ ಮಾಡಿದವು. ಒಳಗೆ ಹೋದರೆ ರಂಗೋಲಿ. ದೊಡ್ಡ ಬೋರ್ಡಿನಲಿ ನಮ್ಮ ಪುಟ್ಟನ ಹೆಸರು, ಪಕ್ಕದಲಿ ಅಣಿಯಾದ ದೀಪಕಂಬ. ಅದರ ಮುಂದೆ ಮಕ್ಕಳು ಸಾಲಾಗಿ ಕೂತಿವೆ. ಆಗುತ್ತಿರುವುದು ಸಂತೋಷವೋ ಮುಜುಗರವೋ.. ಗೊಂದಲದಲ್ಲಿದ್ದೆ. ಅಲ್ಲಿನ ವ್ಯಕ್ತಿ ಕೇಳಿದ. “ನಿಮ್ಮ ಪುಟ್ಟನಿಗಾಗಿ ಈಗ ನಮ್ಮ ಮಕ್ಕಳಿಂದ ಏನು ಮಾಡಿಸೋಣ? ಹಾಡು ಹೇಳಿಸೋಣವಾ? ಡಾನ್ಸ್ ಮಾಡಿಸೋಣವಾ? “ ಒಳಗಿದ್ದ ಮುಜುಗರ ಕೋಪವಾಯ್ತು. ಆ ಮಕ್ಕಳಿರೋದು ಇವನಿಗೆ ಎಂಟರ್ ಟೇನ್ ಮೆಂಟ್ ಕೊಡೋಕಾ? ಇವನೇನು ಆಕಾಶದಿಂದ ಉದುರಿದವನಾ? “ಬೇಡ ಬೇಡ. ಅಂತದೇನೂ ಬೇಡ” ಊಟಕ್ ಹೋಗಣ ನಡೀರಿ. ಅಂದರೆ ಆ ಪುಣ್ಯಾತ್ಮ ಕೇಳಲಿಲ್ಲ. ದೀಪ, ಆರತಿ. ಮಕ್ಕಳ ಒಕ್ಕೊರಲಿನ, ಯಾರು ಬಂದರೂ ಹೇಳಬೇಕಾದ, ಸ್ಟೀರಿಯೋ ಟೈಪ್ ವಿಶ್ ನಡೀತು. ಮತ್ತೆ ಊಟಕ್ಕೆ ಹೋದರೆ ವ್ಯಕ್ತಿ ಶುರುಮಾಡಿದ. “ಇವರ ಹುಟ್ಟುಹಬ್ಬದ ಪ್ರಯುಕ್ತ ನಿಮಗೆಲ್ಲ ಇವತ್ತು ವಿಶೇಷ ಊಟ” . ಮಕ್ಕಳಿಂದ ಮತ್ತೆ ಪ್ರಾರ್ಥನೆ, ಅನ್ನದಾತರಿಗೆ ಸುಖೀಭವ ಆಶೀರ್ವಾದ. ಅವತ್ತಿನ ನನ್ನ ಸಂತೋಷ ಸರ್ವನಾಶವಾಗಿತ್ತು.
ಇದೆಲ್ಲ ಒಂದು ರೀತಿಯ ತರಬೇತಿ. “ನೋಡಿ, ನೀವು ಅನಾಥರು. ಬಡವರು. ನಿಮ್ಮ ಬದುಕು ನಡೆಯಬೇಕಾದರೆ ಯಾರಾದರೂ ಮನಸು ಮಾಡಿ, ದಾನ ಮಾಡಬೇಕು. ಅವರು ಹಾಗೆ ಮಾಡಬೇಕಾದರೆ, ನೀವು ಅವರ ಪ್ರೀತಿ- ವಿಶ್ವಾಸ ಗಳಿಸಿಕೊಳ್ಳಬೇಕು” ಎಂಬುದು ಮಕ್ಕಳಿಗೆ ಹೇಳದೆಯೂ ಹೇಳಲಾದ ಮಾತು. ಮತ್ತು ಬಂದವರನ್ನೆಲ್ಲ ಅಕ್ಕ, ಅಣ್ಣ , ಅಪ್ಪ,ಅಮ್ಮ ಅನ್ನುವ ಕೃತಕತೆ ಬೇರೆ. ಕಾಸು ಕೊಟ್ಟ ಮಾತ್ರಕ್ಕೇ, ಮುಖ ನೋಡಿದ ಮರುಗಳಿಗೆ ಯಾರಾದರೂ ಅಪ್ಪನೋ, ಅಮ್ಮನೋ ಆಗಿಬಿಡ್ತಾರಾ? ಆ ಮಕ್ಕಳ ಮನಸಲ್ಲೇನಾಗುತ್ತಿದೆ ಯೋಚಿಸುತ್ತೇವಾ? ಹೀಗೆ, ದಿನವೂ ಅಪ್ಪ, ಅಮ್ಮನೊಟ್ಟಿಗೆ ಬರುವ ಮಕ್ಕಳ ನೋಡುತ್ತಾ, ಅವರಿಗೆ ವಿಶ್ ಮಾಡುತ್ತಾ, ರಾತ್ರಿ ಚಾದರ ಎಳಕೊಂಡು ಕಣ್ಣು ಮುಚ್ಚುವ ಮಗು, ಏನು ಯೋಚಿಸಬಹುದು? ಅಪ್ಪಿ ಮುತ್ತಿಡುವ ಅಮ್ಮ, ಹೆಗಲಮೇಲೆ ಮೆರೆಸುವ ಅಪ್ಪ. ಎತ್ತಾಡಿಸುವ ಅಣ್ಣ, ಮುದ್ದಾಡಲು ತಂಗಿ. ಇಲ್ಲ,ಯಾರೂ ಇಲ್ಲ. ಹಗಲು ಕೆಲ ಗಂಟೆಗಳಿಗೆ ಬಂದು ಹೋಗುವ ಮಂದಿ ರಾತ್ರಿ ಆ ಮಕ್ಕಳ ಜೊತೆಯಾಗುವುದಿಲ್ಲ, ಕೊರಳು ಬಳಸಲು ಅಮ್ಮನಿರದ ಮಗು, ತೊಡೆಗಳ ಸಂದಿಗೆ ಕೈಗಳ ಹುದುಗಿಸಿ ಕಣ್ಣುಮುಚ್ಚುತ್ತದೆ.

ಅವರು ಅನಾಥರಾಗಿ ಹುಟ್ಟಿದ್ದರಲ್ಲಿ ಅವರ ತಪ್ಪೇನಿದೆ? ತಪ್ಪಿಲ್ಲದಿದ್ದರೂ ನಾವು ಶಿಕ್ಷೆ ಕೊಡುತ್ತೇವೆ. ನೀನು ಅನಾಥ , ನೀನು ಅನಾಥ ಅಂತ ಗೊತ್ತುಮಾಡಿಸುವಂತೆ ನಡೆದುಕೊಳ್ಳುತ್ತಾ ಅವರ ಹೃದಯಕ್ಕೇ ಚಾಟಿ ಬೀಸುತ್ತೇವೆ. ಮನೆಗೆ ಬಂದಾಗ ಫೊಟೋ ನೋಡುತ್ತಾ ಮಗ ಹೇಳಿದ. “ಅಮ್ಮ, ಇಲ್ಲಿ ನೋಡು, ನಾವು ಅನಾಥ ಮಕ್ಕಳಿಗ್ ಊಟ ಹಾಕಿಸಿದ್ವಲ್ಲ, ಫೋಟೋ” ಇವನಿಗೆ ಮೇಲರಿಮೆ ಬಂದಿತ್ತು. ಆ ಮಕ್ಕಳಿಗೆ? ಇಲ್ಲ, ಈ ತಪ್ಪು ಮತ್ತೆ ಬದುಕಿರುವ ತನಕ ಮಾಡುವುದಿಲ್ಲ ಅಂತ ನಿರ್ಧರಿಸಿದೆ. ಆದರೆ ಯಾವ ಪೂರ್ವಯೋಜನೆಯೂ ಇರದೇ ಈ ಆಶ್ರಮಕ್ಕೆ ಬಂದುಬಿಟ್ಟಿದ್ದೆ. ಅದೂ ನನ್ನ ಹುಟ್ಟುಹಬ್ಬದ ದಿನ! ಹುಟ್ಟೆಂಬುದು ಕೂಡ ಸಾವಿನಷ್ಟೇ ಕಾಡುಬಹುದಾದ ಜಾಗದಲಿ ನಿಂತಿದ್ದೆ.
ಫೇಸ್ ಬುಕ್ನಿಂದಾಗಿ ಅವರಿಗೆ ಹುಟ್ಟುಹಬ್ಬವೆಂದು ಗೊತ್ತಾಗಿದ್ದು. ವಿಶ್ ಮಾಡಿರೆಂದು ಸೂಚನೆ ಕೊಟ್ಟುಬಿಟ್ಟರು. ಶುರುವಾಯಿತು ನೋಡಿ. “ನೂರು ವರುಷಾ ಬಾಳಿರೀ…ನೂರು ದೀಪ ಬೆಳಗಿರೀ” ಅಂತ ಮಕ್ಕಳು ಹಾಡುತ್ತಿದ್ದರೆ. ಆ ಕ್ಷಣಕ್ಕೆ ನನ್ನ ಹುಟ್ಟುಹಬ್ಬ ನನಗೇ ಅಸಹ್ಯ ತರಿಸಿ, ಆ ಹಾಡು ಕರ್ಣ ಕಠೋರವೆನಿಸಿ. ಸಾಕೂ, ದಯವಿಟ್ಟು ನಿಲ್ಲಿಸಿ ಅಂತ ಬೇಡಿಕೊಳ್ಳಬೇಕಾಯ್ತು. ಮುಂದೇನು ಮಾಡುತ್ತಾರೋ ಅನ್ನುವ ಭಯದಲ್ಲಿ ಡಾಕುಮೆಂಟರಿಯನ್ನೂ ನೋಡದೇ ಹಾಲ್‍ನಿಂದ ಹೊರಬಿದ್ದೆ.
ದೊಡ್ಡ ಬಾಣಲೆ ಇಟ್ಟು ಆ ಪುಟ್ಟ ಹುಡುಗಿ ಕೈಯಾಡಿಸುತ್ತಿದ್ದಾಳೆ. ಕೇಳಿದರೆ, ದಿನಾ ಇರುವ ಭಟ್ಟರು ಇವತ್ತು ಬಂದಿಲ್ಲ. ನಮ್ಮನ್ನೂ ಸೇರಿ ಮುನ್ನೂರು ಜನಕ್ಕೆ ಅಡುಗೆಯಾಗಬೇಕು. ಯಾರು ಮಾಡುವುದು? ಟೆನ್‍ಷನ್ನೇ ಇಲ್ಲ. ನಾಕೈದು ಜನ ಹೈಸ್ಕೂಲು ಹುಡುಗೀರು ಸೇರಿ, ಪಲ್ಯ, ಕೋಸಂಬರಿ, ಪಾಯಸ. ಚಿತ್ರಾನ್ನ ಎಲ್ಲ ಮಾಡಿಹಾಕಿದ್ದಾರೆ. ಬೆಚ್ಚಿಬಿದ್ದೆ ನಾನು. ಆಶ್ರಮದ ಹೊಲದಲ್ಲೂ ಮಕ್ಕಳೇ ಭತ್ತ ಬೆಳೆಯುತ್ತಾರಂತೆ. ಪುಸ್ತಕದ ಬದನೆಕಾಯಿ ತೋರಿಸೋದರ ಜೊತೆ. ನಿಜದ ಬದನೆಕಾಯ ಬೆಳೆವುದನೂ ಕಲಿಸಬೇಕು. ಅದೇ ನಿಜವಾದ ಶಿಕ್ಷಣ. ಒಪ್ಪೋಣ. ಆದರೆ ಒಪ್ಪಲಾಗದ್ದು ಹಲವಿದೆ.
ಡಾಕುಮೆಂಟರಿ ನೋಡಿ ಬಂದ ಮಕ್ಕಳು ಊಟಕ್ಕೆ ಸಿದ್ದವಾಗುತ್ತಿದ್ದರೆ, ಮ್ಯಾನೇಜ್‍ಮೆಂಟಿನ ಮುಗ್ದ ಮುಖದ ವ್ಯಕ್ತಿ ಶುರು ಮಾಡಿದ. “ಇಲ್ಲಿ ಎಲ್ಲ ಥರದ ಮ್ಕಕಳು ಇದಾರೆ . ಇಲ್ಲಿ ನೋಡಿ, ಇವಳು, ಇವಳ ತಮ್ಮ ಇಟ್ಟಿಗೆ ಹೊರ್ತಾ ಇದ್ರು. ಈಗ ಇಲ್ಲಿ ಓದ್ತಾ ಇವೆ. ಅವರಪ್ಪಾಮ್ಮ ನೋಡೋಕೂ ಬಂದಿಲ್ಲ ವರ್ಷ ಆಯ್ತು. ಅಂತ ಶುರುಮಾಡಿ ಒಂದಷ್ಟು ಮಕ್ಕಳ ಹಿನ್ನೆಲೆ ಹೇಳಿದರು. ತಿಂಗಳಿಗೆ ಎರಡು ಮೂರು ಬರ್ತ್‍ಡೇ ಆಗತ್ತೆ ಇಲ್ಲಿ. ಕೆಲವರು ಬೆಳೆದದನ್ನ ತಂದುಕೊಡ್ತಾರೆ. ಬಿಲ್ಡಿಂಗ್ ಇಲ್ಲ. ಎರಡೇ ಬಾತ್‍ ರೂಮು. ಏನೋ ನಡೆಸ್ತಾ ಇದೀವಿ. ನಿಮ್ಮಂತೋರ ಸಹಾಯದಿಂದ.. …….” ಸಾಗುತ್ತಲೇ ಇತ್ತು ಮಾತು. ಮಕ್ಕಳ ಮುಂದೆಯೇ. ಇದೆಲ್ಲ ಕಿವಿಗೆ ಬೀಳುತ್ತಾ, ಇಂತಲ್ಲಿ ಬಾಲ್ಯ ಕಳೆವ ಮಕ್ಕಳು ಆತ್ಮವಿಶ್ವಾಸದಿಂದ ಧೈರ್ಯದಿಂದ , ಎದೆಯೇರಿಸಿ ಬದುಕಲಾಗುತ್ತದೆಯೇ?
ಕಾಲೆಜಿನಲ್ಲಿದ್ದಾಗ ಯಾವುದೋ ಅಸೈನ್‍ ಮೆಂಟ್ ನಿಮಿತ್ತ ಸಂಸ್ಥೆಯೊಂದಕ್ಕೆ ಹೋಗಿದ್ದೆ. ಅದು ವೇಶ್ಯಾವಾಟಿಕೆಯಿಂದಾಗಿ ಹುಟ್ಟುವ ಮಕ್ಕಳಿಗಾಗಿ ಇರುವ ಸಂಸ್ಥೆ. ಅವತ್ತು ಅಲ್ಲಿ ಎರಡು ತಿಂಗಳ ಹಸುಳೆಯೂ ಇತ್ತು. ಹೆಸರು ಐಶ್ವರ್ಯ. ಅಲ್ಲಿನ ಮುಖ್ಯಸ್ಥರು ಎಲ್ಲ ವಿವರಿಸಿ, ನಮ್ಮ ಸಂಸ್ಥೆಯ ಮೊದಲು ಮಗು ಈಗ ಇಂತಾ ಕಾಲೇಜಿನಲ್ಲಿ ಎಲ್‍,ಎಲ್‍,ಬಿ ಓದುತ್ತಿದ್ದಾನೆ. ಹೆಸರು ಇಂತದು ಅಂತ ಹೇಳಿದರು. ಮತ್ತು ಬರುವ ಎಲ್ಲರಿಗೂ ಅದನ್ನೇ ಹೇಳಿ ಅವನನ್ನು ತೋರಿಸುತ್ತಿದ್ದರು. ಆ ಹುಡುಗ ಆಗೀಗ ಅವನ ಕಾಲೇಜಿನಲ್ಲೂ, ಅಲ್ಲೂ ಇಲ್ಲೂ ಆಗಾಗ ಸಿಗುತ್ತಿದ್ದ. ಅವನ ಮುಖದಲ್ಲಿ ನಾನು ಎಂದೂ ನಗು ನೋಡಲೇ ಇಲ್ಲ.
ಬರ್ತ್ ಡೇಗೋ, ತಿಥಿಗೋ, ಇನ್ಯಾವುದಕ್ಕೋ ಹೋಗಿ ಮಕ್ಕಳಿಗೆ ತಾವೇ ಊಟ ಬಡಿಸುತ್ತೇವೆ. ನಮ್ ಮಕ್ಕಳ ಕೈಲಿ ಕ್ಯೂನಿಲ್ಲಿಸಿ ಒಂದೊಂದೇ ಮಗುವಿಗೆ ಪುಸ್ತಕವನೋ ಬಟ್ಟೆಯನೋ ಹಂಚುತ್ತೇವೆ. ವರ್ಷವೊಂದಕ್ಕೆ ಎಷ್ಟೊಂದು ಜನಕ್ಕೆ “ನೂರು ವರುಷಾ ಬಾಳಿರಿ” ಅಂತ ಹಾಡಬೇಕು ಆ ಮಕ್ಕಳು.? ಬರುವವರ ಹಬ್ಬಗಳಿಗೆ. ಕ್ಯಾಲೆಂಡರಿನ ಹಬ್ಬಗಳಿಗೆ.ಸಿಹಿಗೆ, ಬಟ್ಟೆಗೆ, ಪುಸ್ತಕಕೆ. ಪಟಾಕಿಗೆ,ಚಾಕೋಲೇಟಿಗೆ, ಎಷ್ಟು ನೂರಾರು ಸಲ ತಮ್ಮ ಪುಟ್ಟ ಪುಟ್ಟ ಕೈಗಳ ಚಾಚಬೇಕು?. ಅನಾಥಾಶ್ರಮಗಳಿಲ್ಲದೆ, ಈ ಮಕ್ಕಳಿಗೆ ಬದುಕಿಲ್ಲ. ಅವು ಬೇಕು. ಮತ್ತು ಅದು ನಡೆಯಲು, ಕಾಸಿರುವ ಜನ ಕೊಡಲೂಬೇಕು. ಆದರೆ ಕೊಡುವ ವಿಧಾನ ಬದಲಾಗಬೇಕು. ಮ್ಯಾನೇಜ್‍ಮೆಂಟಿಗೆ ಕೊಟ್ಟರೆ ಆಯಿತಲ್ಲ? ಕೊಟ್ಟುಕೊಟ್ಟಾಗೆಲ್ಲ ಮಕ್ಕಳಿಗೆ ಮುಖ ತೋರಿ, ಕೊಟ್ಟವರು ನಾವು. ಕೈ ಮುಗಿಯಿರಿ ಅನ್ನಬೇಕಾದ ದರ್ದೇನು?
ಬೇಕಾದಷ್ಟು ಶ್ರೀಮಂತರಿದ್ದಾರೆ, ಆದರೆ ಎಲ್ಲರೂ ಹೀಗೆ ಕೊಡುವ ಮನಸು ಮಾಡುವುದಿಲ್ಲ. ಕೊಡುವುದಕೊಂದು ಸಲ್ಯೂಟ್. ಆದರೆ ಮಗುವಿನ ಕೈಗೇ ಕೊಡುತ್ತೇವಲ್ಲ ಆಗ ಕೈ ಒಡ್ಡುವ ಮಗುವಿನ ಮನಸಿನ ಮೇಲಾಗುವ ಪರಿಣಾಮವನ್ನು ಕುರಿತು,. ಕೊಡುವ ಮಂದಿಯೂ, ಆಶ್ರಮ ನಡೆಸೋರೂ ಚೂರು ಯೋಚಿಸಬೇಕು. ಮೊದಲೇ ಅಪ್ಪ,ಅಮ್ಮನಿರದ, ಮನೆಯಿರದ ಮಗುವಿನ ಮನಸಲಿ ಸಾವಿರ ತಳಮಳಗಳಿರುತ್ತವೆ. ಬಡಮಕ್ಕಳ ನೋವೂ ಅಂತದೇ. ಇಂತಾ ಸೂಕ್ಷ್ಮಪರಿಸ್ಥಿತಿಯಲ್ಲಿ ಮಕ್ಕಳಿಗೆ ವಿಶೇಷವಾದ ಆರೈಕೆ ಕೊಡಬೇಕು. ಹೆಚ್ಚೆಚ್ಚು ಮನೋಬಲ ತುಂಬಬೇಕು. ಮುಂದಣ ಸ್ವಾಭಿಮಾನದ ಬದುಕಿಗೆ ಅಣಿಗೊಳಿಸಬೇಕು. ಬದಲಿಗೆ, ಕೈಚಾಚುವಂತೆ ಮಾಡಬಾರದು. ಕೀಳರಿಮೆ ತುಂಬಬಾರದು.
ಇದನ್ನೆಲ್ಲ ಅಲ್ಲಿನ ಮುಖ್ಯಸ್ಥರಿಗೆ ಹೇಳಿದೆ. “ನೀವು ಹೇಳುವುದು ಸರಿ. ಆದರೆ ಏನು ಮಾಡೊದು? ಚಾಕೋಲೇಟು ಕೊಟ್ಟು ಫೊಟೋ ತೆಗೆಸಿಕೊಂಡು ಪೇಪರಿನಲಿ ಹಾಕಿಸಿಕೊಳ್ಳೊರಿದಾರೆ.” ಅಂದು ಹೋಗಿಬಿಟ್ಟರು.” ನಮಗೇ ಕೊಟ್ಟು ಹೋಗಿ ಅಂದರೆ , ಈಗ ಬರೋರೂ ಬರಲ್ಲ. ಕೊಡೋರೂ ಕೊಡಲ್ಲ. ಅನ್ನುವ ವಿಷಾದ ಅವರ ಮುಖದಲ್ಲಿತ್ತು. ಇಡೀ ದೇಶದಲ್ಲಿ ಇಂತ ಲಕ್ಷ ಲಕ್ಷ ಮಕ್ಕಳಿದ್ದಾರೆ. ಹರಕಲು ಅಂಗಿ, ದಾನದ ಊಟ, ಭಿಕ್ಷೆಯೇ ಅನಿಸಿಬಿಡುವಂತ ಬದುಕಿಗೆ ಕೈ ಒಡ್ಡುವಿಕೆ ಅನಿವಾರ್ಯ. ಸ್ವಾಭಿಮಾನವೆಲ್ಲಿಂದ? ಭಾರತ ಪ್ರಕಾಶಿಸಲು ಇವರ ಹಣತೆ ಬೇಡವೇ? ಎಣ್ಣೆ ಎಲ್ಲಿ? ಬತ್ತಿ ಎಲ್ಲಿ?
ಗಮನಿಸಿ ನೋಡಿ, ಬಾಲ್ಯದಲ್ಲಿ ಬಡತನದ ಕಹಿ ಕಂಡುಂಡವರು ದೇಶದ ಅತ್ಯುನ್ನದ ಸ್ಥಾನದಲ್ಲಿ ಕುಳಿತರೂ ಒಳಗೆ ಸಣ್ಣ ಕೀಳರಿಮೆ ಗೂಟ ಹೊಡೆದುಕೊಂಡು ಕೂತಿರುತ್ತದೆ. ಇನ್ನು ಇಂತಾ ಮಕ್ಕಳು? ಹೀಗೆ ಮತ್ತೆ ಮತ್ತೆ ಮತ್ತೆ ಕೈಚಾಚಿ, ಕೈಚಾಚಿ , ಕೈಚಾಚಿ ರೋಸಿಹೋದ ಕೈಗಳೇ ಒಂದು ದಿನ ಬಂದೂಕು ಹಿಡಿದುಬಿಡುತ್ತವೆ. ಕೊಡಬಲ್ಲ ಜಾಗದಲ್ಲಿರುವವರ ಬಗ್ಗೆ, ಕೊಲ್ಲುವಂತ ಕೆಟ್ಟ ಕೋಪ. ಕಾರಣರಾರು ಈ ಕೋಪಕ್ಕೆ, ರೋಷಕ್ಕೆ? ವ್ಯವಸ್ಥೆಯ ದೋಷದಿಂದಾಗಿ ಆಗಿರುವುದು ಇದೆಲ್ಲ. ಇಲ್ಲಿ ಹುಟ್ಟಿದ ಅವರಿಗೂ ಇಲ್ಲಿನ ಎಲ್ಲದರ ಮೇಲೂ ಹಕ್ಕುಂಟು. ಕೊಡಲು ನಾವ್ಯಾರು? ಕೈಚಾಚಲು ಅವರ್ಯಾರು?
ನಮ್ಮ ಹುಟ್ಟುಹಬ್ಬದಂದು ಆ ಮಕ್ಕಳ ಆತ್ಮವಿಶ್ವಾಸದ ಸಾವಾಗಬೇಕೇ? ಕೊಲ್ಲದೇ “ಬದುಕೋಣ”ವಾ?
 

‍ಲೇಖಕರು G

February 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

19 ಪ್ರತಿಕ್ರಿಯೆಗಳು

  1. ಋತಊಷ್ಮ

    ” ಇಲ್ಲಿ ಹುಟ್ಟಿದ ಅವರಿಗೂ ಇಲ್ಲಿನ ಎಲ್ಲದರ ಮೇಲೂ ಹಕ್ಕುಂಟು. ಕೊಡಲು ನಾವ್ಯಾರು? ಕೈಚಾಚಲು ಅವರ್ಯಾರು? ” ಕಣ್ಣು ತೆರೆಸುವ ಅಂಕಣ.

    ಪ್ರತಿಕ್ರಿಯೆ
  2. Geetha b u

    yenu barithye thaayi…nanna mandaala da maathige akshararoopa….belagge enyaavudho context nalli heege yochisuthidhe…..

    ಪ್ರತಿಕ್ರಿಯೆ
  3. Tejaswini Hegde

    ಮನಸು ಒದ್ದೊದ್ದೆಯಾಗಿ ಹೋಯ್ತು ಓದಿ Kusuma…:( frown emoticon too good… very thoughtful (Y) ಅದಕ್ಕೇ ನಾನು ನನ್ನ ಮಗಳ ಹುಟ್ಟಿದ ದಿನದಂದು ಒಮ್ಮೆ Malathi Holla ಅವರ ಮಾತೃ ಛಾಯಾ ಕ್ಕೆ ಕರೆದುಕೊಂಡು ಹೋಗಿದ್ದೆ… ನನ್ನಂತೇ… ಏನೋ ಒಂದು ನ್ಯೂನ್ಯತೆ ಇದ್ದರೂ, ಬಾಳಲ್ಲಿ ಆತ್ಮವಿಶ್ವಾಸದಿಂದ ಬದುಕ ಕಟ್ಟಿಕೊಳ್ಳಲು ಸೇರಿದ್ದ ೧೭ ಮಕ್ಕಳ ಜೊತೆ ಒಂದಾಗಿ ಬೆರೆಯಲು… ಅವರಿಂದ ಕಲಿತು, ಮಗಳಿಗೂ ಕಲಿಸಲು. ಹಿಂತಿರುಗುವಾಗ ಮನದ ತುಂಬಾ ಮತ್ತಷ್ಟು ಆತ್ಮವಿಶ್ವಾಸ ಹೊತ್ತು ಬಂದಿದ್ದೆ ಅವರಿಂದ. ಆ ಸುಖ, ನೆಮ್ಮದಿ ಈಗಲೂ ನನ್ನೊಂದಿಗೆದೆ. ಅಲ್ಲಿಂದ ಬಂದ ಮೇಲೆ ಮಗಳು ತನ್ನ ಆಟಿಕೆಗಳನ್ನೆಲ್ಲಾ ತಾನೇ ಸ್ವಯಂ ಇಟ್ಟುಕೊಳ್ಳುವುದನ್ನು ಮತ್ತಷ್ಟು ಚೆನ್ನಾಗಿ ಅರಿತುಕೊಂಡಿದ್ದಳು.. 🙂

    ಪ್ರತಿಕ್ರಿಯೆ
  4. Gn Nagaraj

    ನಿಜ ವ್ಯವಸ್ಥೆಯಲ್ಲಿಯೇ ದೊಡ್ಡ ದೋಷ. ಻ಡಿಪಾಯದಲ್ಲಿಯೇ ಇರುವಂತೆ . ಸರ್ಕಾರ ವಿದ್ಯಾರ್ಥಿಗಳಿಗೆ ನಡೆಸುವ ಹಾಸ್ಟೆಲ್ ಗಳಲ್ಲಿಯೇ – ಒಂದೊಂದು ಜ಻ತಿ ಗುಂಪಿಗೆ ಬೆರೆ ಬೇರೆ ಯಾಗಲ್ಲದೆ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಹಾಸ್ಟೆಲ್ ಮಾಡಿ ಅದರಲ್ಲಿ ಈ ಮಕ್ಕಳನ್ನೂ ಸೇರಿಸಿ ಒಟ್ಟಿಗೇ ಬೆಳಸ ಬಹುದಾದ್ದು ತಕ್ಷಣದ ಮಾರ್ಗ. ಾದರೆ ತಂದೆ , ತಾಯಂದಿರು ಇದ್ದರೂ ಅವರು ಅನಾಥರಾಗದಂತೆ ಅವರಿಗೆ ಒಂದು ಕನಿಷ್ಟ ಾದಾಯ ಬರುವಂತಹ ಕೆಲಸ , ತಂದೆ ತಾಯಂದಿರು ಸಾವನ್ನಪ್ಪದಂತೆ ಆರೋಗ್ಯ ವ್ಯವಸ್ಥೆ ಇವು ದೂರದ ಕ್ರಮಗಳು . ಇವುಗಳಿಗಾಗಿ ಎಲ್ಲರೂ ದನಿಯೆತ್ತಬೇಕು ಫೇಸ್ ಬುಕ್ ನಲ್ಲಿ ಕೃಷ್ಣಮೂರ್ತಿಯವರು ಬೂಟ್ ಪಾಲಿಷ್ ಮಾಡುವ ಹುಡುಗನ ಬಗ್ಗೆ ಪದ್ಯ ಬರೆದಿದ್ದರೆ ಅದಕ್ಕೊಮದು ಕಾಮೆಂಟ್ ಇಂತವನ್ನು ಬರೆಯಬೇಡಿ ಇವು ಇದ್ದೆ ಇರುತ್ತವೆ, ಸಂತಸದ ಬಗ್ಗೆ ಕವನ ಬರೆಯಿರಿ ಎಂದು

    ಪ್ರತಿಕ್ರಿಯೆ
  5. samyuktha

    Nice write up! Nija….eshto baari ee reeti sookshmateyanne kaledukoNDiruttEve!

    ಪ್ರತಿಕ್ರಿಯೆ
  6. shivaprakash

    ಹೌದು…..ಕೊಡುವುದು ನಮ್ಮ ಹಕ್ಕು…ಬೇಡುವುದು ಅವರ ಕರ್ಮ ಎನ್ನುವ ನಮ್ಮ ಮನಸ್ಸೇ ಅಹಂಕಾರಿಯಾಗಿ ಕೂತಿದೆ….

    ಪ್ರತಿಕ್ರಿಯೆ
  7. sindhu

    ಕುಸುಮ್,
    ನಮಸ್ಕಾರ. ಈ ಆರ್ಟಿಕಲ್ಲು ಯಾವ ನಾಟಕೀಯತೆಯೂ ಇಲ್ಲದೆ ನೇರವಾಗಿ ತಟ್ಟುವ ರೀತಿಗೆ ಮಾತು ಮರೆತು ಹೋಗಿದೆ. ತಲ್ಲಣ ಕಾಲಂ ಅಂತಲೇ ನೆನೆಸಿಕೊಳ್ಳುವೆ ನಿಮ್ಮ ಕಾಲಂನ ನಾನು.
    ನನ್ನ ಮಗಳ ಎರಡನೆಯ ಹುಟ್ಟಿನದಿನಕ್ಕೆ ನಾನು ಅವಳನ್ನು ಇದೇ ತರಹದ ಇನ್ನೊಂದು ಬಾಲಮಂದಿರಕ್ಕೆ ಕರೆದುಕೊಂಡು ಹೋಗಿ ಮುಜುಗರಪಟ್ಟೆ. ನಾವು ಬೇಡವೆಂದರೂ ಅವರಿಗೆ ಕಲಿಸಿಕೊಟ್ಟದ್ದನ್ನು ಅವರು ಹಾಡಲೇ/ಮಾಡಲೇಬೇಕು. ಆಮೇಲಿಂದ ಆ ದಿನಕ್ಕೆ ಅವರ ಸಂಸ್ಥೆಗೆ ನನ್ನ ವಾರ್ಷಿಕ ದೇಣಿಗೆ ಕೊಟ್ಟುಬಿಡುವೆ. ರಸೀದಿಯನ್ನು ಮತ್ತೆ ಇನ್ನೊಂದು ಸಲ ನೋಡದ ಹಾಗೆ, ಕಳೆದುಹಾಕುವೆ ಕೂಡ. ನನ್ನ ಮಗಳು ಮತ್ತೆ ಅಲ್ಲಿಗೆ ಹೋಗಿಲ್ಲ.
    ನಿಮ್ಮ ಮಾತು ನಿಜ. ಸಮಾಜದ ಅಸಮವಿವರಗಳಲ್ಲಿ, ಅಸಮ ವ್ಯವಸ್ಥೆಯಲ್ಲಿ ಕಡಿಮೆ ಅವಕಾಶದ, ಇಲ್ಲದ ಗೂಡುಗಳ ಅವರ ಬದುಕಿಗೆ ನಮ್ಮ ಕೈಲಾದ ಭರವಸೆ ತುಂಬಬೇಕಾಗಿರುವುದು, ಅವಕಾಶವಿರುವ ನಮ್ಮ ಜವಾಬ್ದಾರಿ. ಅದನ್ನು ಆದ ಹಾಗೆ ನಡೆಸಬೇಕು ಕೂಡ. ಅನ್ನುವುದು ನನ್ನ ಅಭಿಪ್ರಾಯ.
    ಹಾಗೆಯೇ ಮಾಡಿದ್ದನ್ನ ಹೊತ್ತು ಮೆರೆಯುವ ಮನೋಭಾವನೆಗೆ ಕುಮ್ಮಕ್ಕು ಕೊಡದ ಹಾಗೆ, ಒಂದು ಹುಟ್ಟಿದ ದಿನದ ಸಲುವಾಗಿ ಇನ್ನೊಂದು ಅಥವಾ ಇನ್ನಷ್ಟು ಮನಸು ಬಾಡದ ಹಾಗೆ, ಯಾತನೆಯಲ್ಲಿ ಬೇಯದ ಹಾಗೆ ನೋಡಿಕೊಳ್ಳುವುದು ಅದಕ್ಕೂ ಹೆಚ್ಚಿನ ಜವಾಬ್ದಾರಿ.
    ಬೇರೆಯದೆಲ್ಲ ಬಿಡಿ. ಅಪ್ಪ ಅಮ್ಮನ ಅಂಗಿ/ಸೆರಗು ಬಿಡದೆ ನಲಿವ ಮಗುವಿನ ನೋಟ ಆ ಮಕ್ಕಳ ಹೊಟ್ಟೆಯಲ್ಲಿ ಸಂಕಟ ಉಕ್ಕಿಸುವುದಿಲ್ಲವೇ?! ಇದು ನನ್ನನ್ನು ತುಂಬ ಕಲಕಿತ್ತು ಅವತ್ತು. ಇವತ್ತು ಮತ್ತೆ ಇಲ್ಲಿ ಓದಿ.
    ಇವರ ನಡುವೆ ಕೆಲ ವಿಭಿನ್ನ ಆಸರೆ ಹೋಮ್ ಗಳಿವೆ. ತೇಜಸ್ವಿನಿ ಹೇಳಿದ ಮಾತೃಛಾಯಾ ತರದ್ದು.
    ಹೌದು. ಕೊಲ್ಲದೆ ಬದುಕಬೇಕು. ಮುರಿಯದೆ ಅರಳಬೇಕು. ಪುಡಿಗಟ್ಟಿಸದೆ ಕಟ್ಟುತ್ತ ಹೋಗಬೇಕು.
    ನಿಮ್ಮ ಪೋಸ್ಟು ಪ್ರತೀವಾರದ ಎಮ್ಮೆ ಇಂಜಕ್ಷನ್ ಅಂದ್ಕೊಳ್ತಾ ಇದೀನಿ. ಆ ತರ ಚುಚ್ಚುತ್ತೆ. ಹಾಗೆಯೇ ನಮ್ಮ ಎಮ್ಮೆ ಚರ್ಮದ ಮನಸ್ಸಿನ ಆರೋಗ್ಯಕ್ಕೆ ತುಂಬ ಅವಶ್ಯಕ ಕೂಡ.

    ಪ್ರತಿಕ್ರಿಯೆ
  8. ಬಸವರಾಜ.ಜೋ.ಜಗತಾಪ

    ಕೊಟ್ಡಿದ್ದೇವೆ ಅಂತಾ ತೋರ್ಸಕ್ಕೊಳಕೆ, ತಮ್ಮ ಪ್ರಸಿದ್ದಿಗೆ, ಮಾದ್ಯಮಗಳ ಮಾರು ಹೋಗೊರ ಕಾಲ ಇದು.
    ಆದರೂ ಇಲ್ಲಿ ಕಾಣದ ಸಹಾಯ ಹಸ್ತವತೋರಿಸುವ ಒಳ್ಳೆಯ ಸೂಚನಾ ಬರಹ ಇದಾಗಿದೆ…..

    ಪ್ರತಿಕ್ರಿಯೆ
  9. ಅ೦ಗಡಿ ಇಂದುಶೇಖರ

    ಸಿನಿಮಾ ನಟ, ರಾಜಕೀಯ ನೇತಾರರಂಥವರ ಹುಟ್ಟು ಹಬ್ಬವನ್ನು ಅವರ ಚೇಲಾಗಳು ಆಚರಿಸುವ ಪರಿಯೂ ಇದೇ ರೀತಿಯ ಬೂಟಾಟಿಕೆ ಒಳಗೊಂಡಿರುತ್ತದೆ. ಎಂದೂ ಸರಕಾರೀ ದವಾಖಾನೆಗೆ ಕಾಲಿಡದವರು ಆ ದಿನ ಹೋಗಿ ಬಡ ರೋಗಿಗಳಿಗೆ ಹಣ್ಣು-ಹಾಲು ಕೊಡುವ ಕಾರ್ಯಕ್ರಮ ಇಟ್ಟುಕೊಂಡಿರುತ್ತಾರೆ. ಮಾಧ್ಯಮದವರಿಗೆ ಮೊದಲೇ ಕರೆ ಹೋಗಿರುತ್ತದೆ. ಪ್ರೆಸ್ಸಿನವರ ಮುಂದೆ, ಹಣ್ಣು ಪಡೆದುಕೊಳ್ಳುವ ಪೋಜ್ ನೀಡುವಾಗ ಆ ರೋಗಿಗಳೋ ನಗಲಾರದೇ ನಗಬೇಕಾಗಿರುತ್ತದೆ. ಇಂಥಾ ತೋರಿಕೆಯ ಬೂಟಾಟಿಕೆಗಳು ಬೇಕೇ ? “ಎಡಗೈಯಿಂದ ಕೊಟ್ಟದ್ದು ಬಲಗೈಗೆ ಗೊತ್ತಾಗಬಾರದು” ಅಂತಾ ಹಿರಿಯರು ಹೇಳುತ್ತಾರೆ. ಈ ಅತ್ಮವಂಚನೆಯ ನಾಟಕಗಳು ನಿಲ್ಲಬೇಕಾಗಿದೆ..

    ಪ್ರತಿಕ್ರಿಯೆ
  10. ಮಮತ

    Excellent.. nimma yav mathanna quote maadodu bidodu… idee lekhana aardhravaagide. Yentha writing. Realy kannu oddeyaadvu.. nice

    ಪ್ರತಿಕ್ರಿಯೆ
  11. Anil Talikoti

    ತುಂಬಾ ಒಳ್ಳೆಯ ಲೇಖನ -ಮಕ್ಕಳಲ್ಲಿ ಇಂತಹ ಕೀಳರಿಮೆ ಬಾರದಿರಲು ಗುಪ್ತವಾಗಿ ಸಹಾಯ ಮಾಡುವದೇ ಉತ್ತಮವಾದುದು.
    -anil

    ಪ್ರತಿಕ್ರಿಯೆ
  12. Roopashree kalliganur

    Akka… Ninna yochana laharigiro shakti nijakku adbhuta. One of the best idu. Houdu nammalli anaatharanna, vikalachetanaranna ade hesarininda kareva mattu haage nodikolluva ketta manastitigalive. Adanna bidade avra bhavushyavanna ujwala madoke saadhya illa.

    ಪ್ರತಿಕ್ರಿಯೆ
  13. Kusuma

    ಇಲ್ಲಿ ಹುಟ್ಟಿದ ಅವರಿಗೂ ಇಲ್ಲಿನ ಎಲ್ಲದರ ಮೇಲೂ ಹಕ್ಕುಂಟು. ಕೊಡಲು ನಾವ್ಯಾರು? ಕೈಚಾಚಲು ಅವರ್ಯಾರು?
    super.tumba chenagide.

    ಪ್ರತಿಕ್ರಿಯೆ
  14. Palahalli Vishwanath

    ಬಹಳಾ ಚೆನ್ನಾಗಿ ಬರೆದಿದ್ದೀರಿ. ಈ ಸೂಕ್ಷ್ಮತೆ ಅನೇಕರಲ್ಲಿ ಕ೦ಡುಬರುವುದಿಲ್ಲ. ನಮ್ಮ ನಡೆವಳಿಕ್ಲೆಗಳು ಮಕ್ಕಳ ಮೇಲೆ ಎ೦ತಹ ಪರಿಣಾಮ ಬೀರುತ್ತದೆ ಎ೦ದು ನಾವು ಯೋಚಿಸುವುದಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: