ಕುಸುಮಬಾಲೆ ಕಾಲಂ : ’ಇದು ಕತ್ತಿ ಹಿಡಿಯದ, ಒನಕೆ ಎತ್ತದ ನಿರಂತರ ಯುದ್ಧ’

ಬೆನ್ನಿಗೆ ಲ್ಯಾಪ್ ಟಾಪು. ಕೈಲಿ ಮಗ. ಅವನ ಬಟ್ಟೆ ಬರೆ , ಸಿಡಿಗಳು. ಹಾಳೂಮೂಳು ಅಂತ ಒಂದು ಗಂಟು. ಎಲ್ಲೋದ್ರೂ ಈ ಮಿನಿ ಟೆಂಟ್ ಸಂಸಾರ ಎತ್ಕೊಂಡ್ ಹೋಗ್ಲೇಬೇಕು. ಒಂದ್ ಡಾಟಾ ಕೇಬಲೋ. ಅವನ ಬಾಟಲೋ ಮಿಸ್ಆದ್ರೂ ಕಷ್ಟ. ಜೊತೆಗೆ ಜಮೀನಿಂದ ತಂದ ಕಾಯಿ ಕಸಿ , ಮಣ್ಣು ಮಸಿ.. ಬ್ಯಾಗು ಜೋಡಿಸ್ತಾನೇ ಇದ್ದೆ. “ಹೊತ್ತಾಯ್ತು. ಬದ್ನಾಳ್ ಪಾರತ್ಮಮ ಅಂತ್ ತಿಳ್ಕಂಡ್ಯಾ ನಿನ್ನ ನೀನು? ಟ್ರೇನು ನಿನ್ ಕಾಯ್ಕಂಡ್ ನಿಂತ್ಕಂಡದಾ?” ಅಂತ ಬೈತಾನೆ ಇದ್ರು.
ಬದನವಾಳು ಅನ್ನೋ ಊರಿನ ಹೆಸರು ಕೇಳೇ ಇರುತ್ತೀರಿ ನೀವು. ಸುಮಾರು 15-20 ವರ್ಷಗಳ ಹಿಂದೆ ಬದನವಾಳು-ಉಮ್ಮತ್ತೂರು ಅನ್ನೋ ಎರಡು ಊರುಗಳಲ್ಲಿ ದಲಿತರು ಮತ್ತು ಲಿಂಗಾಯತರ ನಡುವೆ ಆದ ಗಲಾಟೆ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು. ನಮ್ ಪುಣ್ಯ ನ್ಯೂಸ್ ಚಾನೆಲ್ಗಳು ಬಂದಿರ್ಲಿಲ್ಲ ಆಗ. ಅದೇ ಬದನವಾಳುವಿನಲ್ಲಿ ಸುಮಾರು 50 ವರ್ಷಗಳ ಹಿಂದೆ ಟ್ರೈನಂತಾ ಟ್ರೈನೇ ಅವಳ ಬರುವಿಕೆಗೆ ಕಾಯುತ್ತಿದ್ದ ಪಾರ್ವತಮ್ಮನೂ ಇದ್ದದ್ದು ಪೇಪರಿನವರಿಗೆ ಹೇಗೆ ಗೊತ್ತಾಗಬೆಕು ಪಾಪ. ಇರಲಿ, ಟ್ರೈನೇ ಕಾಯುತ್ತಿರಬೇಕೆಂದರೆ ಅವಳು ಪೂಲನ್ ದೇವಿಯಂತ ಬಂಧಕುಧಾರಿಣಿಯೇ ಆಗಿರಬೇಕು ಅಂತ ನೀವು ಊಹಿಸಿದ್ದರೆ ಒಮ್ಮೆ ಊಫಿ ಊಫಿ ಅಂದುಬಿಡಿ. ಪಾಪ ಪಾರ್ವತಮ್ಮ ಬೆಣ್ಣೆಧಾರಿಣಿ. ಅಂದರೆ ಆ ಕಾಲಕ್ಕೆ ನೂರಾರು ಸೇರು ಬೆಣ್ಣೆ, ಹಾಲು, ಮೊಸರು ವ್ಯಾಪಾರ ಮಾಡುತ್ತಿದ್ದಾಕೆ. ಒಂಥರದ “ಬ್ಯುಸಿನೆಸ್ ವುಮೆನ್” ಇವರ ಪ್ರಾಡಕ್ಟುಗಳಿಗೆ ನಂಜನಗೂಡಿನ ಬ್ರಾಹ್ಮಣರ ಬೀದಿಯಲ್ಲಿ ಭಾರೀ ಬೆಡಿಕೆ ಇತ್ತಂತೆ. ಆದರೆ ಈ ಮೊಸರಮ್ಮನಿಗೆ ಟ್ರೈನು ಯಾಕೆ ಕಾಯುತ್ತಿತ್ತು.? ಯಾಕೆಂದರೆ ಟ್ರೈನು ಅಧಿಕಾರಿಗಳೂ ಬೆಣ್ಣೆ ತಿಂದಿದ್ದರು. ಅಷ್ಟೇ ಅಲ್ಲ. ಆಯಮ್ಮನ ಗತ್ತು ಗೈರತ್ತು ಕೂಡ ಹಾಗೇ ಇತ್ತು ಅಕಸ್ಮಾತ್ ಐದತ್ತು ನಿಮಿಷ ತಡವಾಗಿ ಟ್ರೈನು ಕಾಯದೆ ಹೊರಟು ಹೋದರೆ, ನಂಜನಗೂಡಿನ ಎಷ್ಟೋ ಮನೆಗಳ ಮಕ್ಕಳಿಗೆ ಹಾಲಿರುತ್ತಿರಲಿಲ್ಲ. ಹಾಗಾಗಿ ಪಾರ್ವತಮ್ಮ ಹತ್ತದಿದ್ದರೆ ಪ್ರಯಾಣಿಕರೇ ಚೈನು ಎಳೆದುಬಿಡ್ತಿದ್ರು. ಈ ಚೈನು ಎಳೆವ ಕಸುಬನ್ನ ಕೂಡ ಕಲಿಸಿದ ಕೀರ್ತಿ ಕೂಡ ಪಾವತಮ್ಮನದೇ. ಹತ್ತಾರು ದೊಡ್ಡ ದೊಡ್ಡ ಹಂಡೆಗಳಷ್ಟು ಹಾಲು, ಮೊಸರು, ಬೆಣ್ಣೆಗಳನ್ನ ರೈಲಿನಲ್ಲಿ ಸಾಗಿಸಿಕೊಂಡು, ನಂಜನಗೂಡಲ್ಲಿ ಇಳಿಸಿಕೊಂಡು, ಊರು ಸುತ್ತಿ ವ್ಯಾಪಾರ ಮಾಡಿ, ಮತ್ತೆ ಖಾಲಿ ಹಂಡೆಗಳೊಂದಿಗೆ ರೈಲಿನಿಂದ ಹಿಂದುರುಗುತ್ತಿದ್ದ ಆ ಪಾರ್ವತಮ್ಮನ ಬಗ್ಗೆ ಒಂಥರದ ಹೆಮ್ಮೆಯಾಗುತ್ತದೆ.
ಇನ್ನೂ ಒಂಚೂರು ಹಿಂದಕ್ಕೆ ಹೋಗೋಣ, ಸುಮಾರು 100 ವರ್ಷಗಳಾಗಿದೆ ಈ ಕಥೆಗೆ. ಹಳೆಯ ಎಷ್ಟೋ ಕಾದಂಬರಿಗಲಲ್ಲಿ ಓದಿದ್ದೇವೆ ನಾವು ಪ್ಲೇಗಿನ ಬಗ್ಗೆ. ಹಾಗೆ ನಂಜನಗೂಡು ಸುತ್ತ ಮುತ್ತಲೂ ಒಮ್ಮೆ ಪ್ಲೇಗು ಮಾರಿ ಬಡಕೊಂಡಿತ್ತು. ನೋಡನೋಡುತ್ತಿದ್ದಂತೆಯೇ ಮನೆಯ ಜನವೆಲ್ಲ ಹೆಣಗಳಾಗಿ ಹೋಗುತ್ತಿದ್ದರು. ಪ್ಲೇಗುಮಾರಿ ಪುಟ್ಟಮ್ಮನ ಮನೆಯನ್ನೂ ಬಿಡಲಿಲ್ಲ. ಗಂಡ ಹೋದ, ಅತ್ತೆ ಹೋದರು. ಇದ್ದ ಒಬ್ಬನೇ ಮಗ ಬೆಳಗ್ಗೆ ಹೋದ. ಸಂಜೆ ಹೊತ್ತಿಗೆ ಸೊಸೆಯೂ. ಒಮ್ಮೆ ಹೆಣ ಹೊತ್ತವರು ಅವತ್ತೇ ಮತ್ತೊಂದು ಹೆಣ ಹೊರುವಂತಿಲ್ಲ ಅನ್ನುವ ಪದ್ದತಿ ಬೇರೆ. ಮನೆಮನೆಗೂ ಹೆಣ . ಹೊರಲು ಇಲ್ಲ ಜನ. ಪುಟ್ಟಮ್ಮ ಹೇಗೋ ಮೂರು ಜನರನ್ನ ಹೊಂದಿಸಿ ತಾನು ಒಂದು ಕೈಹಾಕಿ ಸೊಸೆಯನ್ನು ಮಣ್ಣುಮಾಡಿಬಂದಳು. ಮನೇಲಿ ಉಳಿದಿದ್ದ ಒಂದೇ ಒಂದು ಹೆಣ್ಣು ಕೂಸು ಕುಯ್ಯೋಮರ್ರೋ ಅನ್ನುತ್ತಿದ್ದು. ಪುಟ್ಟಮ್ಮನಿಗೆ ವಿಧಿಯ ಮೇಲಿನ ಆಕ್ರೋಶ ಕಟ್ಟೆಯೊಡಿದಿತ್ತು. ಇದನ್ನಾದರೂ ಯಾಕೆ ಉಳಿಸಿದ್ದೀಯ? ಅನ್ನುವಂತೆ ಮಗುವನ್ನೆತ್ತಿ ಬಿಸಾಡಿದಳು. ದೇವೀರಿ ಬಂದು ತನ್ನ ಬಲಾಡ್ಯ ತೋಳುಗಳೊಂದಿಗೆ ಮಗುವನ್ನ ಆತುಕೊಂಡು ಸಮಾಧಾನಿಸಿದಳು.
ಪ್ಲೇಗುಮಾರಿ ಹೋಗಿ ಉಳಿದ ಮಂದಿಯಲ್ಲಿ ಶಾನುಭೋಗನೂ ಒಬ್ಬ. ಪುಟ್ಟಮ್ಮನ ಮನೆಯ ಆಸ್ತಿ ದೊಡ್ಡದಿತ್ತು. ಪ್ಲೇಗು ಎಲ್ಲರನೂ ಕೊಂದು ಈ ಎರಡು ಹೆಣ್ಣು ಜೀವಗಳನ್ನು ಉಳಿಸಿತ್ತು. ಒಂದು ಬೇರು ಒಂದು ಚಿಗುರು. ಊರ ಮೀಸೆ ಹೊತ್ತವರು ಕುಂತು ಸಂಚು ಹೂಡಿದರು. ದಾಯಾದಿ ಜನ ಶಾನುಭೋಗ ಎಲ್ಲ ಸೇರಿ ಗಂಡು ಸಂತತಿಯಿರದ ಪುಟ್ಟಮ್ಮನ ಆಸ್ತಿಯ ಮೇಲೆ ಕೇಸು ಜಡಿದರು. ವಿಚಾರ ಪುಟ್ಟಮ್ಮನ ಕಿವಿಗೆ ಬಿತ್ತು. ಶಾನುಭೋಗರ ಮನೆಗೆ ಹೋಗಿ ಕೇಳಿದಳು, ಕುಹಕವಾಡಿ ನಕ್ಕರು. “ಇದು ನಮ್ಮ ಆಸ್ತಿ. ಮೊಮ್ಮಗಳ ಹಕ್ಕು” “ಹಕ್ಕಿದ್ರ ಕೋರ್ಟ್ ನಲ್ಲಿ ತಕ್ಕೋ ಓಗಮ್ಮ” ಅಂತ ಮತ್ತೆ ನಕ್ಕ. ಮಾತಿಗೆ ಮಾತಾಯಿತು. ಜನ ಸೇರಿದರು. “ನೀನು ಈ ಕೇಸ್ ಗೆದ್ಕಂಡ್ ಬಂದ್ರ ನನ್ ಜನಿವಾರ ಕಿತ್ತು ನಾಯಿಗಾಕಿ ನಾನು ಮಿಣಿಹುರಿ ಕಟ್ಕತೀನಿ” ಅಂತ ಶಪಥ ಮಾಡಿದ. ನರಸೀಪುರ ನಂಜನಗೂಡು ಕೋರ್ಟುಗಳಲಿ ಕೇಸು ನಡೆಯಿತು. ಪುಟ್ಟಮ್ಮತಾಯಿಲ್ಲದ ಕೂಸನ್ನ ಕಂಕುಳಲಿಟ್ಟು ದೇವೀರಿ ಸಂಗಡ ಅಲೆದಲೆದಳು. ಕಡೆಗೂ ಆ ದಿನ ಬಂದೇಬಿಟ್ಟಿತು. ನ್ಯಾಯಾಧೀಶರು ಪುಟ್ಟಮ್ಮನ ಪರವಾಗಿ ತೀರ್ಪಿತ್ತರು.

ಇದಕ್ಕೆಂದೇ ಕಾದಿದ್ದವಳಂತೆ ಪುಟ್ಟಮ್ಮ ಕೂಸನ್ನ ದೇವೀರಿ ಕೈಗಿತ್ತು. ಸೀದಾ ಹೋಗಿ ಶಾನುಭೋಗನ ಕುತ್ತಿಗೆ ಪಟ್ಟಿ ಹಿಡಿದು ನಿಂತಳು. ಕಾಲಿನ ಚಡಾವು ಕೈಗೆ ತಕ್ಕೊಂಡು ಬಡಿದೇ ಬಡಿದಳು. ಇಡೀ ಕೋರ್ಟ್ ಹಾಲ್ ಈ ಅನಿರೀಕ್ಷಿತ ಬೆಳವಣಿಗೆಯಿಂದ ಸ್ಟನ್ ಆಗಿಹೋಗಿತ್ತು. “ಅಮ್ಮಾ.. ಇದು ನ್ಯಾಯಾಲಯ. ನೀವೇನು ಮಾಡುತ್ತಿದ್ದೀರಿ. ಬಿಡಿ:” ಅಂತ ಲಾಯರ್ಗಳೂ ತಿಳಿದವರೂ ಬಿಡಿಸಿದರು. ಎಲ್ಲರನೂ ಸಮಾಧಾನಿಸಿದ ನ್ಯಾಯಾಧೀಶರು ವಿವರ ಕೇಳಿದರು. ಪುಟ್ಟಮ್ಮ ಪೂರಾ ಕಥೆ ಬಿಡಿಸಿಟ್ಟಳು. ನ್ಯಾಯಾಧೀಶರು ವಂಶಪಾರಂಪರಿಕವಾಗಿ ಬಂದ ಆತನ ಶಾನುಭೋಗಿಕೆ ಕಿತ್ತುಹಾಕಿದರು. ಹೆಸರಿಡದ ಆ ಮಗುವಿಗೆ ‘ಜಯಶೀಲೆ” ಎಂದು ಹೆಸರಿಟ್ಟರು. ಯಾವಾಗೇ ಕೇಳಿದರೂ ಈ ಕಥೆ ರೋಮಾಂಚನ ಹುಟ್ಟಿಸುತ್ತದೆ. ಊರಿಗೂರೇ ಹೆಣವಾಗಿ ಹೋದರೂ ಹಿಂಗದ ಆ ದುರಾಸೆಯ ಪರಿ ಅಚ್ಚರಿ ಹುಟ್ಟಿಸುತ್ತದೆ. ಮತ್ತು ಆ ನ್ಯಾಯಾಧೀಶರ ನಡೆ ಬಗ್ಗೆ ಮೆಚ್ಚುಗೆಯಾಗುತ್ತದೆ.
ಇದೇ ಭಾಗದಲ್ಲಿ ಚಿನ್ನಂಬಳ್ಳಿ ಅಂತೊಂದು ಊರು ಅಲ್ಲಿ ದೊಡ್ಡಮಾದಮ್ಮಅಂತೊಬ್ಬರಿದ್ರಂತೆ ದೊಡ್ಡಮನೆತನದ ಸೊಸೆ ಆಕೆ. ಇದ್ದಕ್ಕಿದ್ದಂತೇ ಗಂಡ ತೀರಿಕೊಂಡರು. ಆಮೇಲೆ ಆಕೆ ಆ ಇಡೀ ಕುಟುಂಬವನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ಆಸ್ತಿಯನ್ನೂ. ಮನೆತನದ ಮರ್ಯಾದೆಯನ್ನೂ ಕಾಪಾಡಿಕೊಂಡದ್ದು ಜನಜನಿತ ಕಥೆ. ಎಷ್ಟೆಂದರೆ “ಏನ್ ಮಹಾ ಇವ್ಳೂ ಭಾರೀ ಚಿನ್ನಂಬಳ್ಳಿ ಪುಟ್ಟಮಾದಮ್ಮ ಅನ್ನುವಂಗ್ ಆಡ್ತಾಳೆ” ಅನ್ನೋದು ಒಂದು ಸ್ಲೋಗನ್ ಆಗಿಹೋಗಿತ್ತು. ಗುಂಡ್ಲುಪೇಟೆಯ ಕಬ್ಬಳ್ಳಿ ಊರಿನ ಕೆ. ಎಸ್ .ನಾಗರತ್ನಮ್ಮ ಎಂಎಲ್ಎ ಆಗಿದ್ದು, ವಿಧಾನಸಭೆ ಸ್ಪೀಕರ್ ಆಗಿದ್ದು ಕರ್ನಾಟಕದ ಇತಿಹಾಸ. ನಾನು ಚಿಕ್ಕವಳಿದ್ದಾಗ ಸ್ಕೂಲಲ್ಲಿ ಭಾಷಣ ಮಾಡಿದರೆ ಊರವರು “ಯಾನವ್ವ ನಿಮ್ಮೆಣ್ಣು ಕಬ್ಬಳ್ಳಿ ನಾಗರತ್ನಮ್ಮನಂಗ್ ಆಯ್ತಳ ಅನ್ನಂಗದ” ಅನ್ನುತ್ತಿದ್ದ ನೆನಪು ನನಗೆ.
ನಮ್ಮೂರಿನ ಕಥೆ ಕೇಳಿ. ಐವತ್ತೆಕರೆಗೂ ಹೆಚ್ಚು ಭುಮಿಯುಳ್ಳ ದೊಡ್ಡ ಮನೆತನ ಅವರದು. ಆಳುಗಳಿಗೂ ಗಟ್ಟಿ ಮೊಸರು ಸುರಿಯುತ್ತಿದ್ದ ಜನ ಅವರು. ಆ ಮನೆಯ ಅಜ್ಜಿ ಮರಮ್ಮನಿಗೆ ಒಬ್ಬನೇ ಮಗ. ನಾನು ನೋಡುವ ಹೊತ್ತಿಗೆ ಅಜ್ಜಿಗೆ ಸ್ವಲ್ಪ ವಯಸಾಗಿತ್ತು. ಅವರ ಮಗನ ಪೂರ್ತಿ ಹೆಸರು ಗೊತ್ತಿಲ್ಲ. ಅಪ್ಪ ಮತ್ತು ಊರವರು ಸ್ವಾಮಿ ಅನ್ನುತ್ತಿದ್ದರು. ಅವರ ಚರ್ಮ ಯಾಕೋ ಇಂಗ್ಲೆಂಡಿನವರಂತೆ ಕೆಂಪಾಗಿತ್ತು. ತುಂಬಾ ಮುಗ್ದರು. ಯಾರು ಏನೇ ಹೇಳಿದರೂ ನಂಬುತ್ತಿದ್ದರು, ಮಗುವಿನಂತವರು. ಅವರ ಹೆಂಡತಿಯಾಗಿ ಪ್ರೇಮ ಬರದೇ ಹೋಗಿದ್ದರೆ ಅವರ ಮನೆ ಉಳಿಯುತ್ತಿರಲಿಲ್ಲ. ಕೊಡಗು ಮೂಲದ ಪ್ರೇಮ ಸೊಸೆಯಾಗಿ ಬಂದ ಮೇಲೆ ವ್ಯವಹಾರ ಕೈಗೆ ತಗೊಂಡರು. ಜಮೀನು ದನಕರು ಆಳುಕಾಳು ಎಲ್ಲ ಅವರದೇ ಉಸ್ತುವಾರಿ. ಚಿಕ್ಕ ಹುಡುಗರಿಂದ ದೊಡ್ಡವರವರೆಗೂ ಎಲ್ರೂ ಅವರನ್ನ ಪ್ರೇಮಕ್ಕಯ್ಯ ಅನ್ನುತ್ತಿದ್ದರು. ತುಂಬಾ ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ ಅವರಿಗೆ. ಆಮೇಲೆ ಒಬ್ಬ ಮಗ ಹುಟ್ಟಿದ. “ಪೂರ್ಣಚಂದ್ರ” ಅಂತ ಹೆಸರಿಟ್ಟರು. ಪ್ರೇಮಕ್ಕನಿಗೆ ಊರಲ್ಲಿ ಯಾರನ್ನ ನಂಬಬೇಕು, ಯಾರನ್ನ ನಂಬಬಾರದು ಅನ್ನುವ ಜಡ್ಜ್ ಮೆಂಟ್ ಇತ್ತು. ಯಾರ್ಯಾರೊಂದಿಗೆ ಹೇಗೆ ಹೇಗೆ ಮಾತಾಡಬೇಕು ಅನ್ನುವುದು ಗೊತ್ತಿತ್ತು. ಅವರ ಬಾಡಿ ಲ್ಯಾಂಗ್ವೇಜ್. ಮಾತಿನ ವೈಖರಿ, ಗತ್ತುಗಳೆಲ್ಲ ಯಾವ ಗಂಡಸಿಗೂ ಕಡಿಮೆಯಾಗಿರಲಿಲ್ಲ.
ಆ ಹುಡುಗ ಹೈಸ್ಕೂಲಿದ್ದನೋ ಇಲ್ಲವೋ ಅಪ್ಪ ತೀರಿಕೊಂಡ್ರು. ಹಿಂದೆಯೇ ಅಜ್ಜಿ. ಮತ್ತೆ ಎರಡು ಮೂರು ವರ್ಷವಷ್ಟೇ ಪ್ರೇಮಕ್ಕ ಬದುಕಿದ್ದು. ಆಸ್ಪತ್ರೆಯಲ್ಲಿ ಒಂದಷ್ಟು ದಿನ ಒದ್ದಾಡಿ ಜೀವ ಬಿಟ್ಟಿದ್ದರು. ಪೂರ್ಣ ಆಗಿನ್ನೂ 15-16 ವರ್ಷದವನಿರಬೇಕು. ಅಷ್ಟು ಚಿಕ್ಕ ಹುಡುಗ, ಅಷ್ಟು ದೊಡ್ಡ ಮನೆತನ. ಆಸ್ತಿಪಾಸ್ತಿ. ಅವನ ವಯಸಿನ ತರ ಹುಡುಗರು ಕುಡಿದು, ಇಸ್ಪೀಟಾಡಿ, ಮನೆಬಿಟ್ಟುಹೋಗಿ ಮಾಡುತ್ತಿದ್ದರು. ಇವನ ಕೈಲಿ ಕೋಟಿಗಟ್ಟಲೆ ಹಣವಿತ್ತು ಕೇಳೋರ್ಯಾರೂ ಇರಲಿಲ್ಲ. ಬೇಕಾದ ಶೋಕಿ ಮಾಡಬಹುದಿತ್ತು. ಅವನು ಹಾಗೆ ಮಾಡಲಿಲ್ಲ. ಅವನಮ್ಮ ಮಗನಿಗೆ ಅಂತದೊಂದು ಟ್ರೇನ್ ಅಪ್ ಮಾಡಿ ಹೋಗಿದ್ದರು. ಮೊದಲು ಒಂದು ಬೈಕ್ ಕೂಡ ತಗೊಂಡಿರಲಿಲ್ಲ ಸೈಕಲ್ಲಿನ್ಲಲೇ ಜಮೀನಿಗೆ ಹೋಗ್ತಿದ್ದ. ಅಮ್ಮನಿಗಿಂತ ಚೆನ್ನಾಗಿ ಮನೆ ರೂಢಿಸಿದ. ಶಿವಮೊಗ್ಗೆಯ ಕಡೆಯ ತಾಯಿಯಿಲ್ಲದ ಹುಡುಗಿಯನ್ನ ಮದುವೆಯಾದ. ಈಗೊಬ್ಬ ಮಗನಿದ್ದಾನೆ ಅವನಿಗೆ. ಪಂಚಾಯಿತಿಯ ಅದ್ಯಕ್ಷ ಆಗಿದ್ದಾನೆ. ಅವನು ಅದ್ಯಕ್ಷನಾದ ದಿನ ಊರೆಲ್ಲ ಅವನನ್ನ ಹೊತ್ತು ಕುಣಿದಿದ್ದರಂತೆ ಜನ. ಬಾಳಿದ ಮನೆಯಲ್ಲಿ ಅವನಮ್ಮ ಹಚ್ಚಿಟ್ಟ ದೀಪ ಆರದಂತೆ ನೋಡಿಕೊಳ್ಳುತ್ತಿದ್ದಾನೆ. ಅವರು ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತಿದ್ದಾನೆ. ಬಸ್ಸಿಳಿದ ತಕ್ಷಣ ಎದುರಾದರೆ “ ಅಕ್ಕಾ ಈಗ್ ಬಂದ್ರ್ಯಾ?” ಅನ್ನುತ್ತಾನೆ. ಅವನ ಮುಖದಲ್ಲಿ ನಡಿಗೆಯಲ್ಲಿ. ನಿಲುವು ಮಾತುಗಳ ತುಂಬೆಲ್ಲ ನನಗೆ ಪ್ರೇಮಕ್ಕ ಕಾಣುತ್ತಾರೆ.
ಮಂಜುಳ ಅಂತೊಬ್ಬರಿದ್ದಾರೆ. ವಿಧ್ಯಾವಂತ ಕುಟುಂಬ ಅವರದು. ನಮ್ಮೂರಿಂದ ಆಲತ್ತೂರಿಗೆ ಮದುವೆಯಾಗಿದ್ರು. ಎರಡು ಗಂಡು ಮಕ್ಕಳಾಗುವವರೆಗೂ ಕಣ್ಣೀರಲ್ಲೇ ಮಿಂದರು. ಕಡೆಗೂ ಹಿಂಸೆ ತಾಳದೇ ತವರಿಗೆ ಮರಳಿದರು.. ಜನ ಆಡಿಕೊಂಡರು, ನಕ್ಕರು ಅವರು ತಲೆಕೆಡಿಸಿಕೊಳ್ಳಲಿಲ್ಲ. ಹಾಗೆಂದು ತವರಿನ ಮೇಲೂ ಡಿಪೆಂಡ್ ಆಗಲಿಲ್ಲ. ಎಸ್ ಎಸ್ ಎಲ್ ಸಿ ಪಾಸು ಮಾಡಿದ್ದು ಕೆಲಸಕ್ಕೆ ಬಂತು. ಅಂಗನವಾಡಿ ಕೆಲಸ ಹಿಡಿದರು. ಸ್ರ್ತೀಶಕ್ತಿ ಸಂಘ ಕಟ್ಟಿದರು. ಎಲ್ ಐ ಸಿ ಏಜೆನ್ಸಿ ತಗೊಂಡರು. ಕಷ್ಟಪಟ್ಟು ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸಿದರು. ಮಕ್ಕಳೀಗ ದೊಡ್ಡ ಸಂಬಳ ತರುವ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. “ಇನ್ನೂ ಏನಾರೀ ಓದ್ಸಿರಿ ಮದ್ವ ಗಿದ್ವ ಮಾಡಲ್ವ? “ ಅಂತ ನನ್ನ ವಿಷಯದಲ್ಲಿ ಊರೆಲ್ಲ ಚುಚ್ಚುವಾಗ, ನನ್ನ ದಿನ ಬಗ್ಗೆ ಹೆಮ್ಮೆ ಪಡುತ್ತಿದ್ದ ಊರ ಬೆರಳೆಣಿಕೆಯಷ್ಟು ಜೀವಗಳಲ್ಲಿ ಈ ಮಂಜುಳಕ್ಕನೂ ಒಬ್ಬರು. ಅಮ್ಮನಿಗೆ ಸಿಕ್ಕಿದಾಗೆಲ್ಲ “ನಿಮ್ಮ ಮಕ್ಕಳು ಸಾಧಿಸಿದ್ರು ಬಿಡಿ” ಅನ್ನುತ್ತಾರಂತೆ. ಆದರೆ ಅವರದು ಕಡಿಮೆ ಸಾದನೆಯೇನು?
ಇವರ್ಯಾರೂ ಕತ್ತಿ ಹಿಡಿಯಲಿಲ್ಲ ಒನಕೆ ಎತ್ತಲಿಲ್ಲ ಹಾಗೆಂದು ಇವರೆಲ್ಲ ಮಾಡಿದ್ದು ಯುಧ್ದವಲ್ಲವೆಂದಲ್ಲ. ಇಂತ ಕಥೆಗಳು ಸಿಲಬಸ್ ಗಳಲ್ಲಿ ಸಿಗುವುದಿಲ್ಲ. ಹೇಳಬೇಕಾದವರು ಹೇಳುವುದಿಲ್ಲ. ಇರಲಿ, 100 ವರ್ಷದ ಹಳೆ ಕತೆಯಿಂದ ಬನ್ನಿ ಈಗಿನ 2014ಕ್ಕೆ. ಮೊನ್ನೆ ಊರಿನ ಬಸ್ ಕಾಯುತ್ತಾ ಮೈಸೂರಿನ ಗನ್ ಹೌಸ್ ಹತ್ತಿರ ನಿಂತಿದ್ದೆ. ಪಕ್ಕದೂರಿನ ಸೋಮೆಶ್ವರಪುರದ ಒಬ್ಬರು ಬಂದ್ರು. “ನೀವು ಆಯರಳ್ಳಿಯವರಲ್ವ? ಬೆಂಗಳುರಲ್ಲಿರಾದಲ್ವ? ಟಿವಿ ಸಿರಿಯಲ್ ಬರೀತೀರಾಲ್ವ? ಅಂದರು. ಹೌದು ಅಂದಾಗ. “ಇದೇನು ಬಸ್ಸಿಗ್ ಬಂದ್ಬುಟಿದ್ದರಿ? ಅಂದರು ಮತ್ತೊಬ್ಬರು. ಪಾಪ ಜನಕ್ಕೆ ಟಿವಿಲಿ, ಸಿನೆಮಾದಲಿ ಇರೋರು ಅಂದ್ರೆ ಕಾರಲ್ಲೇ ಓಡಾಡೊರು ಅನ್ನೋ ಭ್ರಮೆ ಪೂರ್ತಿ ಬಿಟ್ಟಹಾಗಿಲ್ಲ. ಬಸ್ಸು ಬಂತು. ಬೆಳಗ್ಗೆ ನಾನು ಬಂದ ಬಸ್ಸಲ್ಲೇ ಬಂದಿದ್ದ ನಮ್ಮೂರ ಹುಡುಗೀರೂ ಇದ್ದರು. ಸೀಟು ಭರ್ತಿ. ನಿಂತುಕೊಂಡಿದ್ದರು. ಕಣ್ಣಾಡಿಸಿದೆ. “ಹೆಂಗಸರಿಗೆ” ಅಂತ ಬರೆದ ಸೀಟಿನಲ್ಲಿ ಕಾಲೇಜು ಹುಡುಗರು ಕೂತಿದ್ದರು. “ಏ ಸುಮಾ ಏಳ್ಸೇ ಅವರನ್ನ. ಲೇಡೀಸ್ ಸೀಟಲ್ವ?” ಅಂದೆ. “ಅಯ್ಯೋ ಬೇಡ ಸುಮ್ನಿರಿ ಅಕ್ಕ. ಮುಂದೆ ಯಾರಾಧ್ರೂ ಇಳೀತಾರೆ” ಅಂದ್ಲು. “ರೀ ಇದು ಲೆಡೀಸ್ ಸೀಟು. ಏಳಿ ಮೇಲೆ” ಅಂದೆ. “ಅವೆಲ್ಲ ಸಿಟಿ ಬಸ್ಸಲ್ಲಿ ಹಳ್ಳಿ ಬಸ್ಸಲ್ಲೇನೂ ಇಲ್ಲ. “ ಅಂದರವರು. ಕಂಡಕ್ಟರಿಗೆ ಹೇಳಿದೆ. “ಅಯ್ಯೋ ಮೇಡಂ, ಈ ರೂಟ್ ಬಸ್ಗಳಲ್ಲಿ ಅವೆಲ್ಲ ಫಾಲೋ ಮಾಡೋಕಾಗಲ್ಲ. ನೀವ್ ಕೇಳಿ ಸೀಟ್ ಕೊಟ್ರ ಕೂತ್ಕಳಿ. ನಾವ್ ಕೇಳಿದ್ರ ಜಗಳಕ್ಕೇ ಬರ್ತಾರೆ. ಹೊಡೀತಾರೆ. ನಾವ್ ಮಾಡೋ ಕೆಲ್ಸ ಬಿಟ್ ದಿನಾ ಇದ್ನೇ ಮಾಡಬೇಕಾಯ್ತದೆ. ಎಲ್ಲಿಗೇಳಿ ಟಿಕೆಟ್ಟು? ಅಂತ ಬಟನ್ನು ಒತ್ತಿ ಚೀಟಿ ಹರಿದ. ಅಷ್ಟರಲಿ ಸೀಟು ಸಿಕ್ಕಿತು.
“ಅಲ್ರೇ ಕಾಲೇಜ್ ಹುಡುಗೀರು ನೀವೆಲ್ಲ ಒಟ್ಟಾಗ್ ಕೇಳಬೇಕಲ್ವ? ನಾನ್ ಓದ್ತಿದ್ದಾಗ ಒಬ್ಬಳೇ ಇದ್ನಪ್ಪ ಈಗೇನು ಇಷ್ಟ್ ಜನ ಇದೀರಲ್ಲ. ಅಂದೆ. “ಅಯ್ಯೋ ಅಕ್ಕಾ. ಕೇಳೋಕೋದ್ರೆ ಯಾರೂ ಸಪೋರ್ಟ್ ಮಾಡಲ್ಲ. ಬಸ್ಸಲ್ಲಿರೋ ನಮ್ಮೂರ್ ಜನ ಹೋಗಿ ಊರಲ್ಲಿ ನಾವ್ ಜಗಳ ಆಡಿದ್ ಹೇಳ್ತಾರೆ. ಊರಲ್ಲೆಲ್ಲ ಏನೇನೋ ಮಾತಾಡ್ತಾರೆ. ನಮ್ಮಪ್ಪಾಮ್ಮ. ಎಷ್ಟ್ ದೂರದ್ ದಾರಿ ನಿಂತ್ಕಂಡ್ ಬಂದ್ರೇನಾಗೋದ್ದು? ಮುದುಕೀರಾ.. ಮೋಟೀರಾ? ಬಸ್ಸಲ್ಲಿ ಜಗಳ ಆಡದ ಜನ ನೋಡಿ ನಾಳೆ ದಿನ ಗಂಡುಗಳ್ ಬಂದ್ರ ಈ ಎಣ್ಣು ಓದ್ ಮನೆಲ್ ಬಾಳಲ್ಲ ಅಂತರ . ನೀ ಕಾಲೆಜ್ಗೇ ಓಗದ್ ಬ್ಯಾಡ ಅಟ್ಟೀಲಿರು” ಅಂತಾರೆ ಅಕ್ಕ. ಅಂದರು. ಈ ಇದೇ ಮಾತುಗಳು. ಒಂದಕ್ಷರವೂ ವ್ಯತ್ಯಾಸವಿಲ್ಲ. ನಮ್ಮಪ್ಪಾಮ್ಮ ಆಡಿದ್ದು. ನಾನೂ ವರ್ಷಾನುಗಟ್ಟಲೆ ಕೇಳಿದ್ದು. ಕಡೆಗೆ ಆದದ್ದಾಗಲೀ ಮಾದಯ್ಯನ ಜಾತ್ರೆ ಅಂತ ಪೇಪರಲಿ ಬರೆದು. ನಾನೇ ಕಾಸು ಕೊಟ್ಟು ಪೇಪರ್ ಕೊಂಡು ಕಂಡಕ್ಟರ್ ಗೆ ಕೊಟ್ಟು ಓದಿಸಿ, ಆಮೇಲೆ ರೂಟಿನ ಎಲ್ಲ ಕಂಡಕ್ಟರುಗಳೂ ಒಂದಾಗಿ. ಮಾತಲ್ಲೇ ಕಿರುಕುಳ ಕೊಟ್ಟದ್ದು, ಬೇಕಂತಲೇ ಕರೆಕರೆದು ಲೇಡೀಸ್ ಸೀಟಲಿ ಹುಡುಗರ ಕೂರಿಸಿ ಗಹಗಹಿಸಿದ್ದು. ಕಾಲೇಜು ಬಿಡಿಸಿಬಿಡುವ ಭಯಕ್ಕೆ ನಾನು ಅಸಹಾಯಕಳಾಗಿಗಿ ನಿಂತದ್ದು . ದಾಯಾದಿಗಳು ಆಡಿದ್ದು, ಅಮ್ಮ ಅತ್ತದ್ದು, ಎಲ್ಲ ನೆನಪಾಗುತ್ತದೆ.
ಅವಧಿಯ ನನ್ನ ಎಷ್ಟೋ ಲೇಖನಗಳಲ್ಲಿ ಕೇವಲ ಇಪ್ಪತ್ತು ವರ್ಷಗಳಲ್ಲಿ ನಮ್ಮ ಸುತ್ತಮುತ್ತಲ ಹಳ್ಳಿಗಳಲ್ಲಾದ ಭಾರೀ ಬದಲಾವಣೆ ಬಗ್ಗೆ ಬರೆದಿದ್ದೇನೆ. ಆದರಿಲ್ಲಿ, ಕೆಲವು ವಿಚಾರಗಳಲ್ಲಿ ಏನೇನೂ ಬದಲಾಗಿಲ್ಲ. 100 ವರ್ಷಗಳ ಹಿಂದೆ ಕೋರ್ಟಿನಲಿ ಕೆರ ಎತ್ತಿಕೊಂಡಳು ಪುಟ್ಟಮ್ಮ .ರೈಲೆಂಬ ರೈಲನ್ನೇ ಜಗ್ಗಿ ನಿಲ್ಲಿಸಿದಳು ಪಾರ್ವತಮ್ಮ. ಸೆಣಸಾಡಿದಳು ದೊಡ್ಡಮಾದಮ್ಮ. ಕಾಲೇಜು ಕಲಿಯಲಿಲ್ಲ ಅವರು. ಇವತ್ತು ನಮ್ಮಗಳ ತೊಡೆಯ ಮೇಲೆ ಜೀನ್ಸ್ ಇದೆ. ಕೈಯಲಿ ಸ್ಮಾರ್ಟ್ ಫೋನಿದೆ. ಯಕಶ್ಚಿತ್ ಒಂದು ಲೇಡೀಸು ಸೀಟು ಬಿಡಿಸಿಕೊಳ್ಳಲಾಗುತ್ತಿಲ್ಲ ನಮಗಳ ಕೈಲಿ. ಥತ್ ಹಾಳು ಸಮಾಜವೇ.. ಯಾವುದು ಹೇಳು ನಿನ್ನ ಅಭಿವೃಧ್ದಿಯ ಮಾನದಂಡ??
 

‍ಲೇಖಕರು G

October 14, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ಅಮರದೀಪ್ ಪಿ. ಎಸ್

    ನನ್ನ ಹೆಣ್ಣಜ್ಜಿ ಕೊಟ್ರಬಸವ್ವ ಎಪ್ಪತ್ತು ವರ್ಷದ ಹಿಂದೆ ಬೆಳಿಗ್ಗೆ ಹೋದರೆ ರಾತ್ರಿ ಬರೋ ಬಸ್ಸಲ್ಲಿ ಬ್ಯಾಗಲ್ಲಿ ಬಿಸ್ಕೆಟ್ ಪ್ಯಾಕ್, ಬ್ರೆಡ್ಡು ಇಟ್ಗಂಡ ಹಾಗೆ ಚೀಲದಲ್ಲಿ ಗಟ್ಟಿ ಗಟ್ಟಿ ಬಂಗಾರದ ತುಂಡು, ಒಡವೆಗಳನ್ನು ತಗೊಂಡು, ಮೈಮೇಲೆ ಹಾಕ್ಕೊಂಡು ಒಬ್ಳೇ ತೌರು ಮನೆಯಿಂದ ದೊಡ್ಡ ಗಂಟಲಿಂದ ಜಬರಿಸುತ್ತಲೇ ಓಡಾಡ್ತಾ ಇದ್ಲು ಅನ್ನೋ ವಿಷ್ಯ ಸಟ್ನ ನೆನಪಾತು ನೋಡ್ರಿ ……

    ಪ್ರತಿಕ್ರಿಯೆ
  2. Maluru Venkataswamy

    ಕುಸುಮಾರವರೆ, ಮೂರು ನಾಲ್ಕು ಧಾರಾವಾಹಿಗಳಿಗೆ ಸಾಕಾಗುವ- ಸಾಮಾನ್ಯರಲ್ಲಿ ಅಸಾಮಾನ್ಯರ ಕಥೆಗಳನ್ನು ನಿಮ್ಮ ಕಾಲಮ್ ನಲ್ಲಿ ಬರೆದುಬಿಟ್ಟೀದೀರಲ್ಲಾ! ನೀವೂ ಸಾಮಾನ್ಯರಲ್ಲಿ ಅಸಾಮಾನ್ಯರೆ!

    ಪ್ರತಿಕ್ರಿಯೆ
  3. vidyashankar

    Super and Inspiring! Liked it 🙂 ಡಬ್ಬಾ ಸಮಾಜ ಅದರ ಎದೆ ಮೇಲೆ ಕಾಲಿಟ್ಟು ಮುಂದೆ ನಡಿಬೇಕು ಅಷ್ಟೇಯಾ!

    ಪ್ರತಿಕ್ರಿಯೆ
  4. Kiran

    Amazing, truly thrilling stuff, but heartening to learn they are all real.
    One thing that will make a huge difference in our society as a whole is living with public decency and social responsibility. This is one thing no parents or teachers are teaching today, teachers have lost their moral high standing to teach kids and parents think if their kids are stronger than others it is good enough, they don’t have to be decent!
    If only our society learns to live in a civilized and responsible manner India will be a heaven on earth, hopefully acche din ayega!!!

    ಪ್ರತಿಕ್ರಿಯೆ
  5. jogi

    ಕುಸುಮಾ ಅವರ ಈ ಲೇಖನದಲ್ಲಿ ಎಷ್ಟೊಂದು ಕತೆಗಳಿವೆ. ಆ ಕತೆಗಳು ಆಖ್ಯಾನದಂತೆ, ಅನುಭವದಂತೆ ನಮ್ಮನ್ನು ತಟ್ಟುತ್ತಾ ಹೋಗುತ್ತವೆ. ಒಳಗಿಳಿಯುತ್ತವೆ. ಕುಸುಮಬಾಲೆಯ ಕಥಾಭಂಡಾರದ ಬಗ್ಗೆ ನನಗೆ ಅಸೂಯೆಯಾಗುತ್ತಿದೆ. ಪಾರ್ವತಮ್ಮನ ಉದಾಹರಣೆ ದಶಕಗಳ ಹಿಂದಿನ ಸಮಾಜವನ್ನೇ ಕಣ್ಮುಂದೆ ತಂದಿಟ್ಟರೆ, ಪುಟ್ಟಮ್ಮನ ಕತೆ ಆಕೆಯ ದಿಟ್ಟತನ, ಹೋರಾಟ, ಛಲ ಮತ್ತು ಅನ್ಯಾಯದ ವಿರುದ್ಧ ಸಿಡಿದೇಳುವ ಮೂಲಭೂತ ಅಗತ್ಯವನ್ನು ಹೇಳಿತು. ನೀವಿದನ್ನು ಖಂಡಿತಾ ಪುಸ್ತಕವಾಗಿ ಹೊರತರಬೇಕು. ಅಭಿವೃದ್ಧಿಯೆಂಬ ಭ್ರಮೆ, ಬದಲಾಗಿದ್ದೇವೆ ಎಂಬ ಹುಂಬ ನಂಬಿಕೆ, ಹೋರಾಡುತ್ತೇವೆ ಎಂದು ಚಾನಲ್ಲುಗಳಲ್ಲಿ ಕೂತು ಚೀರಾಡಿ ಹೋಗುವ ಕ್ಷಣಭಂಗುರತೆ, ಮತ್ತೆ ಮತ್ತೆ ಅದೇ ಅಳುಬುರುಕಿ ಹೆಣ್ಮಕ್ಕಳನ್ನು ತೋರಿಸಿ, ನೀವಿಷ್ಟೇ ಅಂತ ಹೇಳುವ ಸೀರಿಯಲ್ಲುಗಳು, ಅಂಥದ್ದೇ ಮಾಡಿ ಅನ್ನುವ ಚಾನಲ್ಲುಗಳ ಮುಖ್ಯಸ್ಥರು, ಕತೆ ಬರೆಯುವ ಬದಲು ನಾಲ್ಕು ಮಂದಿ ಕೂತು ಕತೆ ಮಾಡುವ ಕೃತ್ರಿಮತೆ- ಎಲ್ಲವನ್ನೂ ನೆನಪಿಸಿತು ಈ ಬರಹ. ಇಂಥ ಕತೆಗಳನ್ನು ಸ್ಕೂಲಿಗೆ ಹೋಗುವ ಮಕ್ಕಳಿಗೆ ಓದಿಸಬೇಕು. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಅಬ್ಬಕ್ಕರಾಣಿಯರ ಹಾಗೆ ಈ ಜನಪದದ ತಾಯಂದಿರು, ಪುಟ್ಟಮ್ಮಂದಿರು, ಸೋದರಿಯರು ಸ್ಪೂರ್ತಿಯಾಗಿ ಕೆಚ್ಚಾಗಿ ಕಿಚ್ಚಾಗಿ ಆವರಿಸಿಕೊಳ್ಳದೇ ಹೋದರೆ, ದೇಹ ಸೌಂದರ್ಯ, ಬಣ್ಣ ಮತ್ತು ಸೊಫಿಸ್ಟಿಕೇಷನ್ನು ಎಂಬ ಪಂಜರದಲ್ಲಿ ಬಂದಿಯಾಗಿ, ಅಸ್ಮಿತೆಯನ್ನೇ ಕಳಕೊಳ್ಳುವ ಕಾಲ ಬರಬಹುದೆಂದು ಭಯವಾಗುತ್ತಿದೆ.

    ಪ್ರತಿಕ್ರಿಯೆ
  6. ಕುಸುಮಬಾಲೆ

    ಜೋಗಿ ಬಾಸ್, ನಿಮ್ಮ ಬರವಣಿಗೆಗಳ ಮಧ್ಯೆ ನಮ್ಮಂತ ಕಿರಿಯರನ್ನೂ ಓದುತ್ತೀರಿ, ಪ್ರತಿಕ್ರಿಯಿಸುತ್ತೀರಿ. ತುಂಬಾ ಖುಷಿ ಮತ್ತು ದೊಡ್ಡ ಸ್ಪೂರ್ತಿ. ಧನ್ಯವಾದಗಳು. ಓದಿದ ಪ್ರತಿಯೊಬ್ಬರಿಗೂ.

    ಪ್ರತಿಕ್ರಿಯೆ
  7. shammi

    adesht chanda barediddiye taayi…nijaa mai melina dirisu fashion agideye horatu..namma atmaabhimaana passion age illa nodu..nanu nannanthavaru ella badalaaguvude illa….i jagattu ashte….

    ಪ್ರತಿಕ್ರಿಯೆ
  8. Anil Talikoti

    ನಿಮ್ಮ ಅನುಭವಗಳ ಆಳ ಕೊಂಡು ಬೆರಗಾಗುತ್ತಿದೆ. ಯಾವುದು ಹೇಳು ನಿನ್ನ ಅಭಿವೃಧ್ದಿಯ ಮಾನದಂಡ? ಕೆಣಕುವ ಪ್ರಶ್ನೆ.
    ~ಅನಿಲ

    ಪ್ರತಿಕ್ರಿಯೆ
  9. ಬೊಳುವಾರು

    ನಿಜ ಹೇಳಿ; ನಿಮ್ಮ ವಯಸ್ಸೆಸ್ಟು? ಫೊಟೋದಲ್ಲಿರುವ ಮುಖ ನಿಮ್ಮ ಮೊಮ್ಮಗಳದ್ದಾ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: