ಕುಳ್ಳು, ಕೂಳೆ ಮತ್ತು ಕೂಳು!

ಅರಬಗಟ್ಟೆ ಅಣ್ಣಪ್ಪ

ಎಲ್ ಪಿ ಜಿ ಬರುವುದಕ್ಕೂ ಮೊದಲು ಉರುವಲು/ಸೌದೆಗಾಗಿ ನಾವು ಬಳಸದಿರುವ ವಸ್ತುಗಳೇ ಇರಲಿಲ್ಲ. ನಾಲ್ಕು ಜನಕ್ಕಾಗುವಷ್ಟು ಚಾ ಕಾಯಿಸಲು ಗರಿಕೆಯ ಬೇರನ್ನಿಷ್ಟು ಧಗ್ ಅನಿಸಿಬಿಟ್ಟರಾಗುತ್ತಿತ್ತು. ಹಪ್ಪಳ ಸಂಡಿಗೆ ಅಂತ ದೊಡ್ಡ ಕೆಲಸಗಳಿದ್ದಾಗ ಈರುಳ್ಳಿ ಬಜಿಯನ್ನೇ ಹೋಲುವ ಆದರೆ ದೊಡ್ಡದಾದ ಕೊರಲುಗಳಿಷ್ಟು ಉಪಕಾರಿಯಾಗುತ್ತಿದ್ದವು.

ನಮ್ಮದು ಅಂಕಲು ನಾಡು. ಮಳೆ ಕಂಡ ಬೆಳೆ. ಶುದ್ಧ ಬಯಲು ಸೀಮೆ. ಅಲ್ಲಲ್ಲಿ ಹಳ್ಳದ ಬದಿ ಒಂದಿಷ್ಟು ಸರ್ಕಾರಿ ಜಾಲಿ, ಮಾಮೂಲಿ ಜಾಲಿ ಗಿಡಗಳು ಬಿಟ್ಟರೆ ಇನ್ನೆಲ್ಲ ಹೊಲ, ಕೊಪ್ಪಲು, ಬೀಳುಗಳೆ. ತೋಟಗಳು ಅಲ್ಲಲ್ಲಿ. ಆದರೆ ತೋಟದ ಉತ್ಪನ್ನಗಳಾದ ತೆಂಗಿನ ಮಟ್ಟೆ, ಕಾಯಿಸಿಪ್ಪೆ, ಮಡ್ಲು, ಗರಿ ನಮಗೆ ಉರುವಲುಗಳಾಗಿ ಬಳಸುವ ಯೋಗ ತುಂಬಾ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಿಕ್ಕರೆ ಒಂದಿಬ್ಬೆ ಅನ್ನ ಬೇಯಿಸಲಿಷ್ಟು ತೆಂಗಿನಗರಿಗಳು ಸಾಕಾಗುತ್ತಿದ್ದವು.

ಈ ಮಣ್ಣಿನ ಒಲೆಯ ವಿನ್ಯಾಸ ಹಾಗೂ ರಚನೆಯು ಸೌದೆಯ ಬಳಕೆ ಮತ್ತು ಬಾಳಿಕೆಯನ್ನು ನಿರ್ಧರಿಸುತ್ತಿತ್ತು. ವರುಷಕ್ಕೊಮ್ಮೆ ಅವ್ವಳು ಇರುವ ಒಲೆಯನ್ನು ಕೆತ್ತಿ ಮೆತ್ತಿ ಚೆಂದಗಾಗಿಸುತ್ತಿದ್ದಳು. ಈ ಗಂಡಸರಾದ ನಮಗಂತೂ ಒಲೆ ಅದೆಷ್ಟೇ ಚೆಂದವಿದ್ದರೂ ಅದರ ತುಂಬ ಸೊಪ್ಪು ಸೆದೆ ತುರುಕಿ ಗಾಳಿಯಾಡದಷ್ಟು ಒತ್ತಡ ಹಾಕಿ ಹೊಗೆ ಏಳಿಸುತ್ತಿದ್ದದ್ದೇ ಸಾಧನೆ. ಹೆಣ್ಣು ಮಕ್ಕಳೆಲ್ಲ ಎರಡೆರಡೇ ಕಸಕಡ್ಡಿಯಲ್ಲೆ ಒಲೆಯನ್ನು ಬಹುಚೆಂದಗೆ ಉರಿಸುತ್ತಿದ್ದದ್ದೇ ಒಂದು ಕಲೆ.

ಹಳ್ಳ ಸರಗಳಲ್ಲಿ ಆಗಾಗ ಸವರಿ ತರುತ್ತಿದ್ದ ಮುಳ್ಳಿನ ಗಿಡಗಳು ನಮಗೊಳ್ಳೆ ಉರುವಲಾಗುತ್ತಿದ್ದವು. ಹಿಂಗಾರಿನ ಬೆಳೆ ಕಳೆದು ಹೊಲಗಳೆಲ್ಲ ಒಣಗಿ ಬೆಂಡಾರಿರುತ್ತಿದ್ದವು. ಬುಟ್ಟಿಯನ್ನೋ ತಲೆಗಿಷ್ಟು ಕಟ್ಟಿಕೊಂಡ ಸೀರೆ ತುಣುಕಿನ ಜೋಪಡಿಯಂತದ್ದನ್ನೋ ನೇತು ಹಾಕಿಕೊಂಡು ಬಣಗುಡುವ ಬಿಸಿಲಲೂ ಎರೆಹೊಲ, ಕೆಂಗಲು, ಹಳ್ಳ, ದಿಣ್ಣೆ, ಸರಗಳನ್ನು ಎಗ್ಗಿಲ್ಲದೆ ತಿರುಗಾಡಿ ಉರುವಲು ಸಂಗ್ರಹಿಸುತ್ತಿದ್ದೆವು.

ದನಗಳು ಹಾಕಿ ಹೋದ ಒಣಗಿದ ಸಗಣಿ(ಕುಳ್ಳು), ಗರಿಕೆಯ ಬೇರು, ಬಿಳಿಜೋಳ ಸಪ್ಪೆಯ ಬೇರು(ಕೂಳೆ), ಅಳಿದುಳಿದ ಕಡ್ಡಿ , ಉರುಬ್ಲು ಒಂದೇ ಎರಡೆ. ತೀರಿಹೋದ ನನ್ನ ತಂಗಿ ಆ ಬಟಾಬಯಲು ಬಿಸಿಲ ಮಧ್ಯೆಯೂ ಅದೆಷ್ಟು ರಾಶಿರಾಶಿ ಸಂಗ್ರಹಿಸುತ್ತಿದ್ದಳು. ಚೂರು ಓದಿಕೊಂಡಿದ್ದ ನನಗಿಷ್ಟು ಸೊಕ್ಕಿತ್ತು. ನನಗೆ ಅವೆಲ್ಲ ಕಾಣುತ್ತಲೇ ಇರಲಿಲ್ಲ. ಆದರೂ ಅನಿವಾರ್ಯಕ್ಕೆ ಬಿದ್ದು ಆಗಾಗ ಬಾಚಿ ಬಳಿದು ತಂದದ್ದಿದೆ. ಎಷ್ಟೋ ಬಾರಿ ತೊಗರಿಯ ಹೊಟ್ಟನ್ನೂ ಬಳಸಿದ್ದುಂಟು. ಇಂಥದ್ದಿಲ್ಲ ಅನ್ನಂಗಿಲ್ಲ ಎಲ್ಲವನ್ನೂ ಉರುವಲಿಗಾಗಿ ಬಳಸುತ್ತಿದ್ದೆವು. ಬೆಳಗ್ಗೆ ಸಂಜೆ ಕಸ ಗುಡಿಸಿದಾಗಲೂ ಅದರಲ್ಲಿರುವ ಕಡ್ಡಿ ಮತ್ತೊಂದು ಆರಿಸಿ ತೆಗೆದಿಟ್ಟುಕೊಂಡು ಧೂಳನ್ನಷ್ಟೆ ತಿಪ್ಪೆಗೆಸೆಯುತ್ತಿದ್ದೆವು.

ಮುಂಗಾರಿಗೆ ಸೂರ್ಯಕಾಂತಿಯನ್ನು ಬೆಳೆಯುತ್ತಿದ್ದರಿಂದ ಸೂರ್ಯಕಾಂತಿ ಕಡ್ಡಿಗಳ ಬಣವೆ ಹಾಕಿಕೊಂಡು ಸೌದೆಯಾಗಿ ಬಳಸುತ್ತಿದ್ದೆವು. ಬುರುಬುರೆಂದರೂ ಸಧ್ಯಕ್ಕವೇ ಬಲವಾದ ಸೌದೆಯೆನಿಸಿಕೊಂಡಿದ್ದವು. ಹಾಗೆ ನೋಡಿದರೆ ಇತ್ತೀಚೆಗೆ ಮೆಕ್ಕೆಜೋಳದ ಖಾಲಿತೆನೆಗಳು ಹೆಚ್ಚಿನ ಶಾಖ ನೀಡಿದ ಉರುವಲುಗಳು! ಹಿಂಗಾರಿಗೆ ಬರುತ್ತಿದ್ದ ತೊಗರಿಯನ್ನು ಬಡಿದಾದ ಮೇಲೆ ಅದರ ಕಡ್ಡಿ, ಬೇರು ಸಾಕಷ್ಟಾಗುತ್ತಿತ್ತು. ಒಂದೇ ಒಂದು ಹೊತ್ತಿನ ಅಡುಗೆ ಮಾಡಿ ಎದ್ದರೆ ಸಾಕು, ತಲೆ ಮೈ ಕೈ ಮೇಲೆಲ್ಲ ಉದುರಿದ ಬೂದಿ ಪುಕ್ಕಗಳ ಅಭಿಷೇಕವಾಗಿರುತ್ತಿತ್ತು. ಕೊಳಪೆಯ ಕೆಲಸ ವ್ಯತ್ಯಾಸವಾದರಂತೂ ಇನ್ನಷ್ಟು ಧೂಮ, ಧೂಳಿನ ಸ್ನಾನವಾಗುತ್ತಿತ್ತು.

ನಮ್ಮವ್ವರ ತವರು ಸೋಮಿನಕೊಪ್ಪದಲ್ಲಿ ಹತ್ತಿ ಬೆಳೆಯುತ್ತಿದ್ದರಿಂದ, ಅರೆಮಲೆನಾಡೂ ಆಗಿದ್ದರಿಂದ ಉರುವಲಿಗೆ ಕೊರತೆಯಿರಲಿಲ್ಲ. ಹತ್ತಿ ಬಿಡಿಸಿದ ಮೇಲೆ ಒಣಗಿರುತ್ತಿದ್ದ ಹತ್ತಿಕಡ್ಡಿಗಳನ್ನು ಬಾಯ್ಗುದ್ದಲಿಯಲ್ಲಿ ಬಗಿದು ಗುಡ್ಡೆಹಾಕಿ ಗಾಡಿಯೋ ಟಿಲ್ಲರೋ ಟ್ರ್ಯಾಕ್ಟರ್ ಮೇಲೋ ಅಪರೂಪಕ್ಕೆ  ತರುತ್ತಿದ್ದೆವು. ಐದಾರು ವರ್ಷಕ್ಕೊಮ್ಮೆ ಅನುಕೂಲವಿದ್ದಾಗ ಹೀಗಾಗುತ್ತಿತ್ತಷ್ಟೆ. ಸೌದೆಯು ಅಲ್ಲಿ ಯಥೇಚ್ಛವಾಗಿ ಸಿಗುತ್ತಿತ್ತಾದರೂ ಅದನ್ನು ಇಪ್ಪತ್ತು ಮೈಲಿ ದೂರದ ನಮ್ಮೂರಿಗೆ ತರುವುದೇ ಸಾಹಸವಾಗುತ್ತಿತ್ತು.

ಹಾಗೊಮ್ಮೆ ತಂದರಂತೂ ನಮ್ಮಷ್ಟು ಶ್ರೀಮಂತರು ಅನುಕೂಲಸ್ಥರೂ ಯಾರೂ ಇಲ್ಲವೆಂದುಕೊಂಡೇ ಭಾವಿಸುತ್ತಿದ್ದೆವು. ಹತ್ತಿಕಡ್ಡಿ ಒಂದೊಳ್ಳೆ ಉರುವಲು. ಮುರಿಮುರಿದು ಬಳಸಬೇಕಾಗಿದ್ದರೂ ಹೇಳಿದಂತೆ ಕೇಳುತ್ತಿದ್ದವು. ಅದಷ್ಟೇ ಅಲ್ಲದೆ ಕೆಲ ಒಣಕಟ್ಟಿಗೆಯ ತುಂಡುಗಳು, ಯಾವುದೋ ಕಾಲದ ಮರದ ಬೇರು ಅಂದರೆ ಕೊರಲುಗಳು ಹೆಚ್ಚುವರಿಯಾಗಿ ಬರುತ್ತಿದ್ದವು. ವರ್ಷವರ್ಷಗಳಿಗಾಗುವಷ್ಟು ಅನುಕೂಲವಾಗುತ್ತಿತ್ತು. 

ಉರಿದು ಬೂದಿಯಾಗುವ ಸೌದೆಗಳಿಗಿಂತ ಇದ್ದಿಲಾಗುತ್ತಿದ್ದವೇ ಹೆಚ್ಚು ಶಾಖ ಕೊಡುತ್ತಿದ್ದವು ಮತ್ತು ಹೆಚ್ಚಿನ ಉಪಯೋಗವೂ ಆಗುತ್ತಿತ್ತು. ಆ ಇದ್ದಿಲಿನ ಕೆಂಡದಲ್ಲಿ ಸುಟ್ಟು ತಿಂದ ಹಪ್ಪಳ, ಹುಣಸೆಪಿಕ್ಕ, ದುಡ್ಡಿಗೆ ತಂದ ಹಲಸಿನ ತೊಳೆ ತಿಂದ ಮೇಲುಳಿಯುವ ಬೀಜ, ಮೆಕ್ಕೆಜೋಳ ಹೀಗೆ ತರಹೇವಾರಿಯಾಗಿ ಸುಟ್ಟು ತಿನ್ನಲು ಒಳ್ಳೆಯ ಅನುಕೂಲವಾಗುತ್ತಿತ್ತು. ಮುಳುಗಾಯಿ ಮತ್ತೊಂದನ್ನು ಸುಟ್ಟು ಅದಕ್ಕಿಷ್ಟು ಉಪ್ಪು ಖಾರ ಮೆತ್ತಿ ಮಾಡಿಕೊಂಡ ಚಟ್ನಿಯೂ. ಸೌದೆ ಉರಿದ ಮೇಲಿನ ಬೂದಿಯನ್ನು ಪಾತ್ರೆ ಪಡಗ ತಿಕ್ಕಲು ಬಳಸುತ್ತಿದ್ದೆವು. ಇದ್ದಿಲನ್ನು ಸ್ಟೀಲ್ ಚೊಂಬಿಗೆ ಹಾಕಿಕೊಂಡು ಇಸ್ತ್ರೀ ಮಾಡಿಕೊಳ್ಳಲು ಅಪರೂಪಕ್ಕೆ ಬಳಸುತ್ತಿದ್ದೆವು. ಉಳಿದಂತೆ ಇದ್ದಿಲು ಉಪ್ಪು ಹಾಕಿ ದುಂಡಿಯಲ್ಲಿ ತಿರುವಿ ಡಬ್ಬವೊಂದಕ್ಕೆ ಹಾಕಿಟ್ಟರೆ ಅದೇ ನಮಗೆ ಪ್ರತಿನಿತ್ಯದ ಹಲ್ಲಿನಪುಡಿ. ಅದನ್ನಿಷ್ಟು ತೋರು ಬೆರಳಿಗೆ ತೆಗೆದುಕೊಂಡು ಹಲ್ಲನ್ನು ಗಸಗಸ ತಿಕ್ಕುತ್ತಿದ್ದರೆ ಅದು ಯಾವ ಕಟ್ಟಿಗೆಯದ್ದೆಂಬುದೆಲ್ಲಾ ನೆನಪಾಗಿ ಇನ್ನೇನು ಮಣಿಕಟ್ಟಿಗೆ ಇಳಿಯುವಷ್ಟರಲ್ಲಿ ಜ್ಞಾನೋದಯವಾಗುತ್ತಿತ್ತು.

ಈ ಸೌದೆಯ ಬಳಕೆಯನ್ನು ಅತಿ ಕಡಿಮೆ ಮಾಡಿಕೊಳ್ಳಲು ಇನ್ನಿಲ್ಲದ ಟ್ರಿಕ್ಕುಗಳೂ ಚಾಲ್ತಿಯಲ್ಲಿದ್ದವು. ನೀರು ಕಾಯಿಸುವಾಗ ಪಾತ್ರೆಯ ಮೇಲೊಂದು ಅಡ್ಡವಾಗಿ ಕಡ್ಡಿ ಇಡುತ್ತಿದ್ದದ್ದು ಅನಾದಿ ಕಾಲದಿಂದಲೂ ಬಂದಿತ್ತು. ಚಾ ಕಾಯಿಸುವಾಗ ನೀರು ಸಕ್ಕರೆ ಪುಡಿ ಕುದ್ದ ಕೂಡಲೆ ಕೆಳಗಿಳಿಸಿದ ಮೇಲೆ ಶಾಸ್ತ್ರಕ್ಕೆಂಬಂತಿಷ್ಟು ಹಾಲು ಹನಿಸಿ ಸೋಸುತ್ತಿದ್ದೆವು.

ಹಬ್ಬದ ದಿನಗಳಂದು ಈ ಬೇಳೆ ಬೇಯಿಸಲು ಕಿಲೋಮೀಟರ್‌ಗಟ್ಟಲೆ ದೂರದಿಂದ ಸಿಹಿನೀರು ತಂದು ಉರುವಲಿನ ಬೇಡಿಕೆಯನ್ನು ಇಳಿಸಿಕೊಳ್ಳುತ್ತಿದ್ದೆವು. ನಮಗೆ ರೇಜಿಗೆ ಹುಟ್ಟಿಸುತ್ತಿದ್ದ ವಿಷಯವೆಂದರೆ ಒಲೆ ಹೊತ್ತಿಸುವುದು. ಇಷ್ಟೇ ಇಷ್ಟು ಅನ್ನ ಬೇಯಿಸಿಕೊಳ್ಳಲು ಪಡಬಾರದಷ್ಟು ಕಷ್ಟ ಪಟ್ಟು, ಮನೆಯಲ್ಲಿರುವ ಕಸ ಕಡ್ಡಿ ನಾರು ಕಾಗದ ಒಂದೇ ಎರಡೆ! ಅಂತೂ ಹೊತ್ತಿಸಿ ಅದನ್ನು ಕೊನೆಯವರೆಗೂ ಅಷ್ಟೇ ಕಾಳಜಿಯಿಂದ ಕಾಪಿಟ್ಟುಕೊಳ್ಳುವುದೂ ಒಂದು ತಪಸ್ಸಾಗಿತ್ತು.

ಅಡುಗೆಯ ರುಚಿ ಮನೆ ಹಾಳಾಗಿ ಹೋಗಲಿ ಈ ಅರೆಬರೆ ಕೊರೆ ಸೌದೆಗಳ ಕಾಟಕ್ಕೆ ಎಂಥದೋ ಒಂದಿಷ್ಟು ಬೆಂದರೆ ಸಾಕಿತ್ತು. ಸೀಮೆಎಣ್ಣೆ ಎಂಬುದಿಷ್ಟು ನಮಗೆ ಅಗ್ನಿದೇವನಾಗಿತ್ತು. ಹೆಣ್ಣುಮಕ್ಕಳು ಚೂರೇ ಚೂರು ಒಲೆಯ ತಳದ ಬೂದಿ ನೆಲಕ್ಕಿಷ್ಟು ಸೀಮೆಎಣ್ಣೆ ಹಾಕಿಕೊಂಡು ಒಲೆಯನ್ನು ಬಂಗಾರದಂತೆ ಉರಿಸಲು ತೊಡಗಿದರೆ, ಈ ಗಂಡುಜಾತಿಯ ನಮ್ಮಣ್ಣ ನಾನಂತೂ ಇರೋಬರೋ ಸೌದೆನೆಲ್ಲಾ ತುರುಕಿ ಅವಕ್ಕೆಲ್ಲ ಸ್ನಾನ ಮಾಡಿಸುವಂತಿಷ್ಟು ಸೀಮೆಎಣ್ಣೆ ಹೊಯ್ದರೆ ಧಗ್ಗನೆದ್ದು ತೆಪ್ಪಗಾಗುತ್ತಿತ್ತಷ್ಟೆ. ನಾವು ಹೆಚ್ಚೆಂದರೆ ನೀರು ಕಾಯಿಸಲು ಒಲೆಯ ಬಳಿ ಹೋಗುತ್ತಿದ್ದೆವು. ಇನ್ನುಳಿದಂತೆ ಮನೆಯಲ್ಲಿ ಯಾರೂ ಇಲ್ಲದಿದ್ದರೆ ನಮ್ಮದೇ ಎಲ್ಲ.

ಸಾಮಾನ್ಯ ನನ್ನ ಐದು ಆರನೆಯ ತರಗತಿಗೆಲ್ಲ ಶಾಲೆ ಬಿಟ್ಟೊಡನೆ ಮನೆಗೆ ಓಡಬೇಕಿತ್ತು. ಅಣ್ಣ ಅವ್ವರು ದೂರದೂರದ ಊರುಗಳಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಯ ಕಸ ಮುಸುರೆ ಮುಗಿಸಿ ಅಂಗಳಕ್ಕಿಷ್ಟು ನೀರು ಹಾಕಿರಬೇಕಿತ್ತು. ಸೊಸೈಟಿ ಅಕ್ಕಿ ಹೆಚ್ಚಾಗಿ ಲಭ್ಯವಿದ್ದ ದಿನಗಳಂದು ಮಾತ್ರ ಅವರು ಬರುವ ಮೊದಲೇ ಅನ್ನ ಮಾಡಿಡಬೇಕಿತ್ತು.

ಮಸಿ ಹಿಡಿದ ಪಾತ್ರೆಗೆರಡು ಪಾವು ಅಕ್ಕಿ, ಮೂರು ಬಾರಿ ತೊಳೆದು, ಮಧ್ಯಬೆರಳಿನ ಮೂರನೇ ಗೆಣ್ಣಿಗೆ ಬರುವಷ್ಟು ನೀರು ಹಾಕಿ, ಮೇಲೊಂದು ಅಡ್ಡಲಾಗಿ ತೊಗರಿಕಡ್ಡಿಯಿಟ್ಟು… ಇಲ್ಲಿಯವರೆಗೂ ಕಷ್ಟವೆನಿಸುತ್ತಿರಲಿಲ್ಲ… ಇನ್ನೇನು ಒಲೆ ಹಚ್ಚಬೇಕೆನ್ನುವಷ್ಟರಲ್ಲಿ… ಅದು ಕುದಿ ಬಂದು … ಆಗಾಗ ಒಂದಗುಳು ಹಿಸುಕಿ ನೋಡುತ್ತ… ನೀರು ಇಂಗುವ ಸ್ವಲ್ಪೇ ಮೊದಲು ಒಲೆ ಆರಿಸಿ ಅದು ಮಾಗಲು ಬಿಡುವಷ್ಟರ ವೇಳೆಗೆ ಬೆಂಕಿಯಿಂದೆದ್ದು ಬಂದಂತಾಗುತ್ತಿತ್ತು. ಅದಕ್ಕೆ ಕಾರಣ ಉರುವಲಿನ ನಿರ್ವಹಣೆ!

ನಮ್ಮಲ್ಲಿ ದನಗಳು ಇರಲಿಲ್ಲವಾದ್ದರಿಂದ ಸಗಣಿಯ ಬೆರಣಿಯನ್ನು ಅಷ್ಟಾಗಿ ತಟ್ಟಲಿಲ್ಲ. ಬೀದಿಯಲ್ಲಿ ಬೀಳುತ್ತಿದ್ದ ದನಗಳ ಸಗಣಿಯನ್ನು ಊರಲ್ಲಿ ಹರಾಜಾಕುತ್ತಿದ್ದದ್ದರಿಂದ ಅದು ದುರ್ಲಭವಾಗಿತ್ತು. ಆದರೂ ಹರಾಜಿಲ್ಲದ ದಿನಗಳಂದು ಆಗಾಗ ಬಾಚಿಬಳಿದ ಸಗಣಿಗಿಷ್ಟು ಕಾಳುಕಡೆಗಳ ಹೊಟ್ಟು ತೌಡನ್ನಿಷ್ಟು ಕಲೆಸಿಕೊಂಡು ಮಣ್ಣಿನ ಗೋಡೆಗೆ ತಟ್ಟಿ ಒಣಗಿ ಬಿದ್ದ ಬೆರಣಿಗಳನ್ನು ಬಳಸಿದ್ದಿದೆ, ಆದರೆ ಅಪರೂಪ.

ನಮ್ಮ ಭೈರನಹಳ್ಳಿ ದೊಡ್ಡವ್ವನ ಊರಲ್ಲಿ ಗೋಬರ್ ಗ್ಯಾಸಿತ್ತು. ಇನ್ನೇನು ಅಡುಗೆ ಮಾಡಲು ಗ್ಯಾಸ್ ಬೇಕೆಂದಾಗಲೂ ಅದರ ತೊಟ್ಟಿಗಿಷ್ಟು ಸಗಣಿ ಹಾಕಿ ನೀರು ಸುರಿದು ಚೆನ್ನಾಗಿ ಅಂಬಲಿಯಂತೆ ಕಲೆಸಿ ಅದರ ತೂತಿಗಿಟ್ಟ ಕಲ್ಲು ತೆಗೆದರೆ ಬುಳುಬುಳು ನುಗ್ಗಿ ಅದರ ಡ್ರಮ್ ಮೇಲೇರುತ್ತಿತ್ತು. ಅಂಥದ್ದೊಂದು ನಮ್ಮೂರಲ್ಲೇ ಇರಲಿಲ್ಲವಾದರೂ ನಮ್ಮನೆಗೊಂದನ್ನು ಅಂಥದ್ದು ಮಾಡಿಸಬೇಕೆಂದು ಕನಸು ಕಂಡಿದ್ದೆ ಬಿಟ್ಟರೆ ನಮ್ಮ ಮನೆಗಳ ಒಲೆಯ ಮುಂದೆ ನಾವೇ ಉರುವಲಾಗಿ ಹೋದದ್ದೇ ಹೆಚ್ಚು.

ಆ ಮಣ್ಣಿನ ಒಲೆಗಳು, ಸಿಕ್ಕಸಿಕ್ಕ ಸೌದೆಗಳು ಎಷ್ಟೋ ಬಾರಿ ಜಾಲಿಯ ಮುಳ್ಳುಗಳೂ ಉರುವಲೆ… ಇಷ್ಟೆಲ್ಲ ತೊಡಕುಗಳ ಮಧ್ಯೆಯೂ ಬೇಯಿಸಿಕೊಂಡು ತಿಂದ ಗೋಧಿಹುಗ್ಗಿ, ಸಂಡಿಗೆಹುಗ್ಗಿ, ಉತ್ಗ ಮುದ್ದೆ, ತಂಬ್ಳೆ, ಹಸೆಂಬ್ರ, ರೊಟ್ಟಿ, ಎಣ್ಗಾಯಿ, ಬೇಯ್ಸಿಚಟ್ನಿ, ಹುಳ್ಳಿಕಾಳು, ಪರಗಿಕಾಯಿ, ಹೊಯ್ಯಪ್ಪಳ, ಕಾಳಪ್ಪಳ, ಜೋಳದಪ್ಪಳ… ದೊಡ್ಡ ಸಾಲಿದೆ. ಒಲೆಯ ಬೂದಿ ತೆಗೆದು, ಚೆಂದಗೆ ಸಗಣಿ ಸಾರಿಸಿ ಬಳಿದು, ರಂಗೋಲಿ ಹಾಕಿ ಬ್ಯಾನಪ್ಪ ಮೂರು ಕಲ್ಲಿಟ್ಟು ಒಲೆಯನ್ನು ಪೂಜೆ ಮಾಡುತ್ತಿದ್ದ ಮಹಾದೇವಿಯಂಥ ನಮ್ಮವ್ವರಿಗೆ ಮೊದಲ ಪ್ರಣಾಮಗಳು.

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: