ಶರತ್ ಕಲ್ಕೋಡ್ ಹೊಸ ಕಾದಂಬರಿ- ಐರಾವತವನ್ನೇರಿ..

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.

ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

2

ಬ್ಯಾಣ ಬ್ಯಾಣವಾಗಿಯೇ ಉಳೀಬೇಕು…

ಬಾಳೆಸರಬಲ್ಲಡಿ ಕೊಟ್ಟೆ ಕಟ್ಟಿದ್ದು ಎಲೆಕಡ್ಜಲು, ಕೋವಿಮಂಜ-ಗಿರಿಗೆ ನವಿಲೇಬ್ಯಾಣದಲ್ಲಿ ಲಾಠೀ ಚಾರ್ಜ ಮಾಡಿದ್ದು ಹುಲಿಕಡ್ಜಲು. ಹೀಗೆ ಕಡ್ಜಲಲ್ಲೂ ಎರಡು ಬಗೆ. ಎಲೆಕಡ್ಜಲನ್ನು ಕೊಟ್ಟೆಕಡ್ಜಲೆಂದೂ ಕರೆಯುವುದುಂಟು. ಕೊಟ್ಟೆಯಲ್ಲಿ ಹತ್ತರಿಂದ ಹದಿನೈದು ಹುಳಗಳಿರುತ್ತವಷ್ಟೇ. ಹುಲಿಕಡ್ಜಲು ಗಾತ್ರದಲ್ಲಿ ಹೆಜ್ಜೇನಿಗಿಂತಲೂ ದೊಡ್ಡದು. ಕಪ್ಪುಬಣ್ಣ. ಹಿಂಬದಿ ಹೊಟ್ಟೆ ನಡುಭಾಗವೆದ್ದು ಕಾಣುವ, ಅರಶಿನ ಬಣ್ಣದುಂಗುರ. ನೋಡಲು ಆಕರ್ಷಕ. ಗಮನ ಸೆಳೆವ ಝೇಂಕಾರ. ಆಕ್ರಮಣ, ಹಾರಾಟದಲ್ಲೂ ಗತಿ ಬಹಳ ತೀವ್ರ.

ವಾಸಿಸಲು ಕಟ್ಟುವ ಕೊಟ್ಟೆ ನಯವಾಗಿ ಮೇಳೈಸಿದ ಕಾಮನಬಿಲ್ಲಂತೆ ವರ್ಣಮಯ! ಎಳೆ ಬಿಸಿಲು ಬಿದ್ದರೆ ಪ್ರತಿಫಲಿಸುವ ದೃಶ್ಯ ನಯನ ಮನೋಹರ! ಆದರೆ ಕೊಟ್ಟೆ ಮೇಲ್ಪದರು ತುಂಬಾ ತೆಳು, ಸೂಕ್ಷ್ಮ. ಫುಟ್ಬಾಲ್ ಗಾತ್ರದಿಂದ ಹಿಡಿದು ಕೊಟ್ಟೆ ಆಳೆತ್ತರವರೆಗೂ ಇರುವುದುಂಟು. ಸೀಗೆಬಲ್ಲೆ, ವಾಟೆಹಿಂಡ್ಲು, ಬೆತ್ತ-ಬಿದರಮೆಳೆ, ಮುಂಡಗ, ಕೇದಿಗೆವುಡಿ, ದಟ್ಟಪೊದೆ, ಕುರುಚಲಗಿಡ, ಲಂಟಾನ, ಕೆಂಜಿಗೆಮಟ್ಟು, ಜೋತುಬಿದ್ದ ಅಡಿಕೆಸೋಗೆ, ಸೊಂಪಾದ ಬಾಳೆಹಿಂಡ್ಲ ಹೆಡಲಮರೆ-ಹೀಗೆ ಸುರಕ್ಷತೆ, ಸ್ಥಳಾವಕಾಶ ನೋಡಿ ಕೊಟ್ಟೆ ಕಟ್ಟುವುದು ಸಾಮಾನ್ಯ.

ಸಂಖ್ಯೆಯಲ್ಲಿ ಸಹಸ್ರಸಹಸ. ಜೇನುಹುಳಗಳಂತೆ ಒಂದರ ಹಿಂದೆ ಮತ್ತೊಂದು, ಕೊಟ್ಟೆಯಿಂದ ಬುದಬುದನೆದ್ದು ಚಿಮ್ಮುವ, ಮರಳಿ ಸೇರುವ ಹಾರಾಟ ರಭಸ ಶಬ್ದದಲ್ಲೇ ಅವುಗಳ ಇರುವಿಕೆ, ತಾಣ ಗುರುತಿಸುವುದು ಸುಲಭ. ಹಾರಾಡುತ್ತಾ ಆಹಾರ ಸಂಗ್ರಹಿಸುತ್ತಾ, ಮೊಟ್ಟೆಯಿಟ್ಟು ಮರಿಮಾಡಿ ಹಾರಿಸುತ್ತಾ, ತಾವಾಯ್ತು, ತಮ್ಮ ಪಾಡಾಯ್ತು ಅಂತಿರುವ ಹುಲಿಕಡ್ಜಲಿಗೆ ಕೀಟಲೆ ಮಾಡಿದರೆ, ಎಗ್ಗಿಲ್ಲದ ಓಡಾಡುವ ಕಾಡುಪ್ರಾಣಿ ದಾಳಿಗೆ ಸಿಲುಕಿದರೆ, ಹುಲಿಯಂತೆ ಕೆರಳಿ ಭೋರ್ಗರೆಯುತ್ತಾ ಹಿಂಡು ಹಿಂಡಾಗಿ ಬೀಡೆದ್ದು ಬೆನ್ನಟ್ಟಿ ಬಾರಿಸಲಾರಂಭಿಸುತ್ತವೆ.

ವಿಶೇಷವೆಂದರೆ ಜೇನಿನ ಹಾಗೆ ಕಚ್ಚಿದ ಕೂಡಲೇ ಹುಲಿಕಡ್ಜಲ ಅಂಬು ಕಿತ್ತು ಹೋಗುವುದಿಲ್ಲ! ಹುಳ ಸಾಯುವುದೂ ಇಲ್ಲ. ಹಾಗಾಗಿ ಶೀಘ್ರಗತಿಯಲ್ಲಿ ಮರಮರಳಿ, ಆಕ್ರಮಣ ನಡೆಸುತ್ತಲೇ ಇರುತ್ತವೆ. ಅನುಭವಸ್ಥರ ಪ್ರಕಾರ ಈ ಅಪಾಯದಿಂದ ಪಾರಾಗಲಿರುವ ಏಕೈಕ ಮಾರ್ಗವೆಂದರೆ, ಸನಿಹದ ಹೊಳೆ, ಕೆರೆಹಳ್ಳಕೊಳ್ಳ, ನದೀಲ್ಲಿ ಮುಳುಗಿ ಹೊದ್ದ ಕಂಬಳಿ, ತಲೆಗೆ ಸುತ್ತಿದ ಟವಲ್, ಮಂಡ್ಹಾಳೆ ನೀರಲ್ಲಿ ತೇಲಿಬಿಡುವುದು. ಸಿಟ್ಟಿನಭರದಲ್ಲಿ ಮರ್ಮವರಿಯದೇ ವಸ್ತುವಿನ ಜಾಡು ಹಿಡಿದು ಕಡ್ಜಲ ಮತ್ತೆ ಮತ್ತೆ ಬಾರಿಸುತ್ತಾ, ಶ್ರಮ ವ್ಯರ್ಥ ಮಾಡುತ್ತಾ ಸೇಡು ತೀರಿಸಿಕೊಳ್ಳುತ್ತಿರುತ್ತವೆ!!

ಹುಲಿಕಡ್ಜಲ ಕೈಯಲ್ಲಿ ಪೆಟ್ಟು ತಿಂದವರು, ಪಣ ತೊಟ್ಟು ಸೇಡು ತೀರಿಸಿಕೊಳ್ಳುವ ಕರಾಮತ್ತು ಬಹಳ ಸ್ವಾರಸ್ಯ! ರಾತ್ರಿ ಕೊಟ್ಟೆ ಮೇಲೆ ಪೆಟ್ರೋಲ್, ಡಿಸೇಲ್, ಸೀಮೆಯೆಣ್ಣೆ ಸುರಿದು, ದೊಂದಿಯಿಕ್ಕಿದರೆ, ಭಗ್ಗನೆ ಹತ್ತಿ, ಅರಗಿನರಮನೆಯಂತೆ ಕ್ಷಣಾರ್ಧದಲ್ಲೇ ಭಸ್ಮ!

***

ಬ್ಯಾಣ ಬ್ಯಾಣವಾಗಿಯೇ ಉಳೀಬೇಕು

ಪಟ್ಟು ಸಡಲಿಸದ ನನ್ನ ಮಾತು, ನೆರದಿದ್ದ ಬಹಳ ಮಂದಿಯ ಪಿತ್ಥ ನೆತ್ತಿಗೇರಿಸಿತು.

‘ಹಾಡಿದ್ದೇ ಹಾಡೋ ಕಿಸಬಾಯಿ ದಾಸಯ್ಯಾಂತ, ಮತ್ತೆ ಮತ್ತೇ ಅದನ್ನೇ ಹೇಳ್ತೀಯಲ್ಲಯ್ಯಾ?’ ಎಂಭತ್ತರ ಗುಂಡಯ್ಯ ಹೆಗ್ಡೇರು, ಕವಳದ ರಸ ವೇಸ್ಟ್ ಆಗದಂತೆ ಎಚ್ಚರವಹಿಸಿ ಆಕಾಶದತ್ತ ಮುಖ ಮಾಡಿ, ಮೂಗರಳಿಸಿ, ಕಣ್ಣುಬಿಟ್ಟು ಗದರಿಸಿದರು ಹಿರಿತನದ ಗತ್ತಲ್ಲಿ!

‘ಎಂಥ ಮಾರಾಯ್ರೇ, ಒಳ್ಳೇ ಉಡ್ದತರ ಪಟ್ಟಿಡಿದ್ಹಾಂಗಾಡ್ತೀರಲ್ಲಾ…?’ ನಂಜ ಕಾರಿದ ವೆಂಕೇನಾಯ್ಕ.

‘ಕೈತುಂಬಾ ಸಂಬಳ ತಗ್ಹೊಂಡು ಬೆಂಗಳೂರಲ್ಲಿ ಸೈಟು, ಮನೆ ಮಾಡಿಕೊಂಡು ಮಜವಾಗದಾರೆ. ಬಿಡುವಾದಾಗ ಹಳ್ಳಿಗೆ ಬತ್ತಾರೆ. ಮಕ್ಕಳು ಬೇರೆ ದುಡೀತ್ತಾವೆ. ನಮ್ಮಂತ ಬಡ ಕೃಷಿಕರ ಕಷ್ಟ ಗೊತ್ತಾಗೋದಾದ್ರೂ ಹೆಂಗ್ಹೇಂತೀನಿ?’ ತೋಟದ ಗಡಿಬೇಲಿ ಬಗ್ಗೆ ರ‍್ಲೆ ತೆಗೆದು ಜಗಳವಾಡಿದ್ದ ಶೇಷಪ್ಪ, ರಾಗವೆಳೆಯುತ್ತಾ ಸಿಕ್ಕಿದ್ದೇ ಚಾನ್ಸ್ ಅಂತ ಮುಯ್ಯಿ ತೀರಿಸಿಕೊಳ್ಳಲು ಟ್ರಂಪ್ ಕಾರ್ಡ್ ಎಸ್ದ.

‘ಮಳೆಕೊಳೆ, ಮಂಗ, ದೊಡ್ಡು, ಆನೆ, ಹಂದಿ, ನವಿಲು ಜೀವಾದಿಗಳ ಕಾಟ ಬೇರೆ. ಕಣ್ಣು ತುಂಬಿದ ಬೆಳೆ, ಕೈಗೆಟಕದೇ ಹೋತದೆ. ವರ್ಷವರ್ಷವೂ ಹೆಚ್ಚಾಗೋದೆಂದ್ರೆ ಅಡಿಕೆಮಂಡಿ ಸಾಲ, ಬಡ್ಡಿ ಮಾತ್ರ…’ ನಶ್ಯವೇರಿಸಿ ಮೂಗೊರೆಸುತ್ತಾ ಆಕಾಶದತ್ತ ಕೈಮಾಡಿ ನಿಟ್ಟುಸಿರುಗರೆದರು ಕೂಸಪ್ಪಯ್ಯ.

‘ಕೃಷಿಕರ ಕಷ್ಟ ಪ್ಯಾಟೇಲ್ಲಿದ್ದವರಿಗೇನು ಗೊತ್ತಾತದೆ? ಬ್ಯಾಣ ಬ್ಯಾಣವಾಗಿಯೇ ಉಳಿಬೇಕಂತೆ ಅವ್ರಿಗೆ!’ ಚಿಗುರು ಮೀಸೆ ತಿರುವುತ್ತಾ, ಕುರುಚಲ ಗಡ್ಡ ಕೆರೆಯುತ್ತಾ, ಕಣ್ಣಲ್ಲಿ ರೋಷದ ಕಿಡಿಕಾರಿದ ಯುವ ಕ್ರಾಂತಿಕಾರಿ ವೀರೇಶ.

‘ಇಲ್ಲಾ ಅವ್ರ ಹೇಳದರಲ್ಲೂ ಪಾಯಂಟ್‌ ಅದೆ. ‘ಆಗುಂಬೆಯಾ…ಪ್ರೇಮ ಸಂಜೆಯಾ…’ ಡಾ. ರಾಜ್‌ಕುಮಾರ್, ‘ಅಕಸ್ಮಿಕ’ದ ಹಾಡ್ನಲ್ಲೂ ನವಿಲೇಬ್ಯಾಣದ ಸೀನುಂಟಲ್ವಾ? ರಾಜ್‌ಕುಮಾರೇ ಇಲ್ಲಿಗೆ ಬಂದು ಹಾಡಿ, ಡ್ಯಾನ್ಸ್ ಮಾಡಿದ್ದಾರೆಂದ್ಮೇಲೆ ಹುಡುಗಾಟಿಕೇನಾ? ನವಿಲೇಬ್ಯಾಣ ಹಾಗೇ ಉಳಿಸಿಕೊಳ್ಳೋದು ಒಳ್ಳೇದು…’ ಅಣ್ಣಾವ್ರ ಭಕ್ತಾಗ್ರೇಸ ರತ್ನಾಕರ ನನ್ನ ಪರ ವಕಾಲತ್ತು ವಹಿಸಿದ.

ಥರಾವರಿ ಜನ, ತಲೆಗೊಂದು ಮಾತು. ಗುಂಪಿನ ಅಮಲು ಬೇರೆ. ಏನಾದರೂ ಜಪ್ಪಯ್ಯ ಅನ್ನದ ನಾನು!

-ಹೀಗೆ ನವಿಲೇಬ್ಯಾಣ ಸಮಸ್ಯೆ ಬಗೆ ಹರಿಸಲು ಕರೆದಿದ್ದ ನಾಲ್ಕೂರ ಸಮಸ್ತರ ಮಹಾಸಭೆ. ಯಾವುದೇ ನಿರ್ಣಯಕ್ಕೆ ಬರಲಾಗದೆ ಗೊಂದಲದ ಗೂಡಾಗಿ, ಯಥಾಪ್ರಕಾರ ಅನಿರ್ದಿಷ್ಠಾವಧಿ ಮುಂದೂಡಲಾಯಿತು.

****

ಬಯಲುಸೀಮೆ ಹೊಲಗಳಂತೆ ಮೈಲಾನುಗಟ್ಟಲೆ ವಿಸ್ತಾರದವಲ್ಲ, ಮಲೆನಾಡ ಬ್ಯಾಣಗಳು. ಗುಡ್ಡಬೆಟ್ಟ, ಕಾಡುಮೇಡು, ಹಾಡಿಹಕ್ಲು, ಹಳ್ಳಕೊಳ್ಳ, ತೋಟ ಗದ್ದೆ, ಅಬ್ಬರಿ, ತಗ್ಗುದಿನ್ನೆ, ಅಲ್ಲಲ್ಲಿ ಸೊಂಪಾಗಿ ಬೆಳೆದ ಗಿಡಮರ, ಪೊದೆಬಳ್ಳಿ, ಕುರುಚಲಮಟ್ಟು ಸಂದುಗೊಂದುಗಳ ನಡುವೆ ಕಣ್ಣಿಗೆ ಕಟ್ಟುವ ಅಂಗೈಯಗಲದ ಹುಲ್ಲುಗಾವಲೇ ಮಲೆನಾಡಿಗರ ಪಾಲಿನ ಸಂಭ್ರಮದ ಬ್ಯಾಣ (ನಕಾಶೆ ನಮೂದಿತ, ಅಲಿಖಿತ ಹಕ್ಕಿನ ಗೋಮಾಳ).

ಆಗುಂಬೆ ಘಾಟಿಯೇರಿ, ಶಿವಮೊಗ್ಗ ಕಡೆ ಸ್ವಲ್ಪ ದೂರ ಸಾಗಿದರೆ, ಎಡಗಡೆ ಕಣ್ಮನ ಸೆಳೆವ ಹತ್ತಾರು ಎಕರೆ ಪ್ರದೇಶವೇ ನಮ್ಮೂರ ನವಿಲೇಬ್ಯಾಣ.

ಪೂರ್ವದಲ್ಲಿ ದಟ್ಟಾರಣ್ಯ ಹೊದಿಕೆ ಹೊದ್ದ ಕಾರ್‌ಬೈಲ್‌ಗುಡ್ಡ, ಮಗ್ಗುಲಲ್ಲಿ ಕುಂದಾದ್ರಿ ಬೆಟ್ಟ. ಅದರಾಚೆ- ಮುಂಜಾನೆ ಎಳೆ, ಸಂಜೆ ಇಳಿಬಿಸಿಲಲ್ಲಿ ಚಿನ್ನದಂತೆ ಮಿರಮಿರುಗುವ, ಖನಿಜ ಭರಿತ ಆಗುಂಬೆ ಹೊನ್ನಗುಡ್ಡ, ಸನಿಹದಲ್ಲಿರುವುದೇ ಕೆಳಗರ್ಧ ದಟ್ಟಾರಣ್ಯ, ಮೇಲ್ಭಾಗ ಅಚ್ಚಹಸುರ ಕುಲಾವಿ ತೊಟ್ಟ ಮೈಸೂರರಸರ ರಾಜ್ಯದ ಗಡಿ ನಿಶಾನೆಗುಡ್ಡ (ಕೆಳಗೆ ಕರಾವಳಿ, ಸ್ವಾತಂತ್ರ್ಯ ಪೂರ್ವ ಆದು ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಾಂತ್ಯ). ಪಶ್ಚಿಮದಲ್ಲಿ ಕುದುರೆ ಮುಖ ನೆನಪಿಸುವ ಅಕ್ಕಿಭತ್ತ ರಾಶಿ ಗುಡ್ಡ. ಮಗ್ಗುಲಲ್ಲೇ ಶೋಲಾ ಭೂಪ್ರದೇಶ ಹೋಲುವ ಜೋಡುಮಲೈ. ನಡುವೆ ಕಂಗೊಳಿಸುವ ಅಚ್ಚಹಸುರ ದ್ವೀಪವೇ ನವಿಲೇಬ್ಯಾಣ.

ಸೆರಗಿನಂಚಿನಲ್ಲಿ ಕಾಡು, ಹಾಡಿಹಕ್ಲ ಕುಚ್ಚುಕಟ್ಟಿಸಿಕೊಂಡ ನವಿಲೇಬ್ಯಾಣದ ಕಡುಹಸುರಿನ ಸೀರೆ ಉದ್ದಗಲವೂ ಕುರುಚಲಗಿಡ, ಗಿಡಮರಬಳ್ಳಿ ಬುಟ್ಟಾಗಳ ಬೆಡಗು! ದಟ್ಟಡವಿ ಬಾರ್ಡರ್ ಮುಸುಕು ಹೊದ್ದು, ಮೇಲ್ನೋಟಕ್ಕೆ ಕಾಣದಂತೆ ಬೆಚ್ಚಗಡಗಿ ಕುಳಿತಿರುವ- ಗುಡ್ಡೇಕೇರಿ, ಮಾರ್ಲುಬೈಲು, ಅಸೀಮನೆ, ಕಲ್ಕೋಡ್, ಇಳೀಮನೆ, ಅವರೇಮನೆ, ದಾಸನಕುಡಿಗೆ, ಚಪ್ಪಿನ ಕುಡಿಗೆ – ಹತ್ತಾರು ಊರ ಜನ-ಜಾನುವಾರಿಗೆ ಒಂದು ಕಾಲದ ಹುಲ್ಲು, ಕರಡದ ಆಶ್ರಯ ತಾಣ.

ಆದರೀಗದು ಮೊದಲಿನಂತಿಲ್ಲ. ನೆಲಬಾಕರ ಹಾವಳಿಯಿಂದಾಗಿ ದಿನದಿಂದ ದಿನಕ್ಕೆ ಚಹರೆ ಬದಲಾಗುತ್ತಿರುವ ನವಿಲೇಬ್ಯಾಣ ಮುಂದೊಂದು ದಿನ, ಕೇವಲ ನಕಾಶೆ ನಮೂದಿತ ಹೆಸರಾಗಿ ಉಳಿದರೆ ಆಶ್ಚರ್ಯವೇನಲ್ಲ! ಹಾಗಾಗಬಾರದು, ಉಳಿದಿರುವ ಚೂರುಪಾರನ್ನಾದರೂ ಉಳಿಸಿಕೊಳ್ಳಬೇಕೆಂಬುವ ಹಲವರಲ್ಲಿ ನಾನೂ ಒಬ್ಬ. ಅಂಥ ಹೋರಾಟದ ಮಹಾಸಭೆಗಳಲ್ಲಿ ಮೊನ್ನೆಯದೂ ಒಂದು! ಪರ, ವಿರೋಧ ಕಾವಿನ ನಡುವೆಯೂ ಪಟ್ಟುಹಿಡಿದು ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದು:

‘ಬ್ಯಾಣ, ಬ್ಯಾಣವಾಗಿಯೇ ಉಳಿಯಬೇಕು.’

***

‘ಏನಾಯ್ತಯ್ಯ, ನವಿಲೇಬ್ಯಾಣದ ಮಹಾಸಭೆ? ಮೊಬೈಲ್‌ನಲ್ಲಿ ವಿಚಾರಿಸಿದರು ಅನಂತಭಟ್ಟರು.

‘ಮಾಮೂಲಿ ಗಲಾಟೆ, ಯಥಾಪ್ರಕಾರ ಟಿವಿ ಸಿರೀಯಲ್ ಹಾಗೆ ಮುಂದೂಡಿಕೆ…’

‘ಸಿಕ್ಕಿದ್ದನ್ನ ಹರ್ಕೊಂಡು ತಿನ್ನೋದೇ ಧರ್ಮ, ನ್ಯಾಯವೆನ್ನುವ ತೋಳಗಳಿಗೆ, ನಿನ್ನ ಪರಿಸರ ಕಾಳಜಿ ಎಲ್ಲಿ ಅರ್ಥವಾಗುತ್ತೋ?’

‘ಪರಿಸರ ನಾಶ ಮಾಡೋದು ಧರ್ಮವೂ ಅಲ್ಲ. ನ್ಯಾಯವೂ ಅಲ್ಲ. ಹಾಗೆ ಮಾಡಿದರೆ ಭವಿಷ್ಯದಲ್ಲಿ ನಾವೋ, ನಮ್ಮ ಮಕ್ಕಳೋ ಬೆಲೆ ತೆರಬೇಕಾಗುತ್ತೆಂತಾ ಹೇಳದೆ ಸುಮ್ನೆ ಕೂತ್ರೆ ಹೇಗಾಗುತ್ಹೇಳಿ?’

‘ಧರ್ಮಾಧರ್ಮದ ಸೂಕ್ಷತೆ, ಅಂತರ ತಿಳಿಯದವರಿಗೆ ಅಧರ್ಮವೇ ಧರ್ಮವಾಗುತ್ತದೆ…!’

। ಇನ್ನು ನಾಳೆಗೆ ।

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: