ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!

ಗಿರಿಜಾ ಶಾಸ್ತ್ರೀ

ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!
ಅದರೊಳಗೆ ಸಿಲುಕಿದ ಅಜ್ಜಿ ಮನೆಯ ಬಚ್ಚಲು ಮನೆ:

ರಾತ್ರಿಯೆಲ್ಲಾ ತೌಕ್ತೆಯ ಅಟ್ಟಹಾಸ! ಈಗಲೂ ಸುಂಯ್ಯೋ ಎನ್ನುತ್ತಿದೆ. ಬೀಸಿದ ಬಿರುಗಾಳಿಗೆ ಬಾಲ್ಕನಿಯಲ್ಲಿಟ್ಟ ಹೂಕುಂಡಗಳೆಲ್ಲಾ ಬುಡಮೇಲು ಆಗಿದ್ದವು. ಹದಿನಾರನೇ ಮಹಡಿಯಾದ ಕಾರಣವೋ ಏನೋ ಝಂಝಾವಾತದ ಹೊಡೆತವೂ ಜೋರಾಗಿಯೇ ಇತ್ತು. ಗಾಜಿನ ಸಂದುಗಳಿಂದ ಭೂತದ ಸೀಟಿ, ದೆವ್ವದ ಸಿಳ್ಳು! ಬೆಳಿಗ್ಗೆ ಎದ್ದರೆ ಜಿಟಿ ಜಿಟಿ ಮಳೆ. ಬಂದು ಹೋಗುವ ವಿದ್ಯತ್ತು.

ಕತ್ತಲಾದ ಬಚ್ಚಲು ಮನೆಹೊಕ್ಕರೆ ಧುತ್ತನೇ ಪಿರಿಯಾ ಪಟ್ಟಣದ ಅಜ್ಜಿಯ ಮನೆಯ ಬಚ್ಚಲು ಮನೆ ಕಣ್ಣಮುಂದೆ ಬಂದುಬಿಡಬೇಕೆ? ಕತ್ತಲು, ಮಳೆ, ಗಾಳಿಗಳಿಗೆ, ಅವು ಹೊತ್ತು ತರುವ ವಿಶಿಷ್ಟ ವಾಸನೆಗೆ ನಮ್ಮ ಆದಿಮ ನೆನಪುಗಳನ್ನು ಬಡಿದೆಚ್ಚರಿಸುವ ಶಕ್ತಿ ಇದೆಯೇನೋ. ಆದಿಮ ಎಂದೆ, ಬಹುಶಃ ನನ್ನ ಮೂರು ವರುಷಗಳ ಈಚಿನದಿರಬೇಕು.

ಮೂರು ವರುಷಗಳಾಚೆ ನಮ್ಮ ನೆನಪುಗಳು ಹೋಗಲಾರವಲ್ಲಾ? ಅವುಗಳಾಚೆಯ ವಾಸನೆ, ಶಬ್ದ ಮತ್ತು ಸ್ಪರ್ಶದ ಅನುಭವಗಳು ನಮ್ಮ ಗ್ರಹಿಕೆಗೆ ದಕ್ಕಲಾರದ ಅವ್ಯಕ್ತ ಸಂಕಟದಲ್ಲಿ ಪ್ರತಿಯೊಬ್ಬರೂ ನರಳುತ್ತೆವೇನೋ. ನಮ್ಮ ಅಜ್ಜಿಗೆ ನಾವು ಒಟ್ಟು ಮೂವತ್ತೈದು ಜನ ಮೊಮ್ಮಕ್ಕಳು. ನಮ್ಮದೇ ವಯಸ್ಸಿನ ಮರಿ ಮಕ್ಕಳೂ ಇದ್ದರು! ನಾವೆಲ್ಲಾ ಬಾಲ್ಯದಲ್ಲಿ ಅಜ್ಜಿಯ ಊರಿಗೆ ಆಗಾಗ್ಗೆ ಲಗ್ಗೆ ಹಾಕುವುದಿತ್ತು. ಅಜ್ಜಿಯ ಮನೆಯ ಬಚ್ಚಲು ಮನೆ ಈಗೇಕೆ ಎದುರು ಬಂದಿತು ಎನ್ನುವುದಕ್ಕೆ ಕಾರ್ಯಕಾರಣ ಸಂಬಂಧ ಗೊತ್ತಿಲ್ಲ.

ನಮ್ಮ ಮುಂಬಯಿಯ ಮಧ್ಯಮ ವರ್ಗದ ಕನಸೆಂದೇ ಬಿಂಬಿಸಲಾಗಿರುವ ಆರುನೂರು ಚದುರ ಅಡಿಯ ಮನೆಗಿಂತಲೂ ದೊಡ್ಡದಾಗಿತ್ತು ಅಜ್ಜಿ ಮನೆಯ ಬಚ್ಚಲು ಮನೆ! ಎಂದೆಂದಿಗೂ ಕತ್ತಲೇ ಅದರ ಆವರಣ. ಎಲ್ಲೋ ಅಂತರಿಕ್ಷದಲ್ಲಿ ಒಂದು ಸಣ್ಣ ಕಿಟಕಿ. ಕಂಭ ತೊಟ್ಟಿಗಳಿರುವ ದೊಡ್ಡ ಹಜಾರಕ್ಕೇ ನಲವತ್ತು ಕ್ಯಾಂಡಲಿನ ಮಿಣಿ ಮಿಣಿ ಬಲ್ಬು. ಇನ್ನು ಬಚ್ಚಲು ಮನೆಯಲ್ಲಿ?? ಅದಕ್ಕಿಂತ ಸಣ್ಣದಿರಬೇಕು! ಇದ್ದೂ ಇಲ್ಲದಂತೆ! ಇಷ್ಟಾದರೂ ಬೆಳಗಿನ ಹೊತ್ತು ಅದು ಉರಿದದ್ದು ಕಾಣೆ! ರಾತ್ರಿ ಹೊತ್ತು ಮಾತ್ರ ಉರಿಸುತ್ತಿದ್ದರೇನೋ! ಅದರಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಅದು ಬೇರೆ ಮಾತು. ಇಷ್ಟಾದರೂ ಆ ಕತ್ತಲಿನಲ್ಲೇ ನಾವು ಏನೇನೋ ಕಂಡುಕೊಂಡಿದ್ದೆವು.

ಒಂದು ಬದಿಯಲ್ಲಿ ದೊಡ್ಡ ಹಂಡೆ ಬಹುಶಃ ನೂರು ಜನ ಸ್ನಾನ ಮಾಡಲು ಸಾಕಾಗುತ್ತಿತ್ತೇನೋ. ಇನ್ನೊಂದು ಬದಿಯಲ್ಲಿ ಅದಕ್ಕಿಂತ ಚಿಕ್ಕಹಂಡೆ. ಅವುಗಳ ಕೆಳಗೆ ಸದಾ ಉರಿ ಧಗಧಗ. ಒಳಗೆ ಕೊತ ಕೊತ ಬಿಸಿ ನೀರು. ನೀರೊಲೆಯೊಳಗೆ ಹಲಸಿನ ಬೀಜ ಎಸೆದು ಸುಟ್ಟು ತಿನ್ನುತ್ತಿದ್ದ ರುಚಿ ಇನ್ನೂ ನಾಲಗೆಯ ಮೇಲಿದೆ. ಈ ಎರಡು ಹಂಡೆಗಳ ಮಧ್ಯೆ ಒಂದು ಆಳವಾದ ಸಣ್ಣ ತೊಟ್ಟಿ. ಅದರೊಳಗೆ ಇಳಿದು ಸ್ನಾನ ಮಾಡಬೇಕು. ಅಲ್ಲಿ ಎಷ್ಟು ಕತ್ತಲು ತುಂಬಿತ್ತೆಂದರೆ, ಮಹಿಳೆಯರು ಸ್ನಾನ ಮಾಡುವಾಗ ಬಾಗಿಲು ಹಾಕಿಕೊಳ್ಳದಿದ್ದರೂ ನಡೆಯುತ್ತಿತ್ತು. (ಗಂಡಸರು ಸ್ನಾನ ಮಾಡುವಾಗ ಬಾಗಿಲು ಹಾಕಿಕೊಳ್ಳುವ ಪದ್ಧತಿಯೇ ಇರಲಿಲ್ಲ) ಏನೆಂದರೆ ಏನೂ ಕಾಣಿಸುತ್ತಿರಲಿಲ್ಲ.

ಸಾಮಾನ್ಯವಾಗಿ ಚಿಕ್ಕಮಕ್ಕಳನ್ನು ಒಳಗೆ ಇಳಿಸುತ್ತಿರಲಿಲ್ಲ. ಮೇಲೆಯೇ ಕೂರಿಸಿ ಸ್ನಾನ ಮಾಡಿಸುತ್ತಿದ್ದರು. ಬಚ್ಚಲು ಮನೆಯ ಇನ್ನೊಂದು ಬದಿಗೆ ಒಣ ಕಟ್ಟಿಗೆ, ತೆಂಗಿನ ಸೋಗೆ ಮೊಟ್ಟೆಗಳ ರಾಶಿ. ಮತ್ತೊಂದು ಬದಿಗೆ ಕಟ್ಟೆ ಕಟ್ಟಿದ ಬಾವಿ. ಮನೆಯ ಆಳು ಸುಬ್ಬ ನೆಗೆದು ನೆಗೆದು ಸೇದುತ್ತಿದ್ದ. ಮಾಮಿ ಅವನನ್ನು ಮುಟ್ಟದಂತೆ ಜೋಪಾನವಾಗಿ ಕೊಡವನ್ನು ಹಗ್ಗದಿಂದ ಬಿಡಿಸಿ ಹಂಡೆಗಳಿಗೆ ನೀರು ತುಂಬುತ್ತಿದ್ದ ಚಿತ್ರವನ್ನೂ, ಸಾಲುಗಟ್ಟುತ್ತಿದ್ದ ಅವರ ಮುಖದ ಮೇಲಿನ ಬೆವರ ಮಣಿಗಳನ್ನೂ ಮರೆಯುವ ಹಾಗೇ ಇಲ್ಲ.

ಮೊನ್ನೆ ಎಂಬತ್ತೆಂಟರ ಮಾಮಿ ಕೊರೋನಾದಿಂದ ತೀರಿಕೊಂಡಾಗ ಕಣ್ಣಮುಂದೆ ಬಂದಿದ್ದು ಈ ಚಿತ್ರವೇ! ಬಚ್ಚಲು ಮನೆಯ ಗೋಡೆಯ ಮೇಲೆ ಸಣ್ಣದೊಂದು ಕರಿಗಟ್ಟಿದ ಗೂಡು. ಅದರೊಳಗೆ ಅರಿಶಿನದ ಕರಡಿಗೆ, ಮನೆ ಮಂದಿಗೆಲ್ಲಾ ಒಂದೇ ಸೋಪಿನ ಪೆಟ್ಟಿಗೆ, ದೊಡ್ಡ ಮರಿಗೆಯಲ್ಲಿ ಸೀಗೆಪುಡಿ, ಹರಳೆಣ್ಣೆ ಇತ್ಯಾದಿ. ಅರಿಶಿನದ ಕರಡಿಗೆ ಖಾಲಿಯಾಗಬಾರದು. ಹಾಗೆ ಆಗದಂತೆ ನೋಡಿಕೊಳ್ಳುವುದು ಮನೆಯೊಡತಿಯ ಜಬಾಬ್ದಾರಿ. ಆಗೆಲ್ಲಾ ಅರಶಿನ, ಕುಂಕುಮ ಖಾಲಿಯಾದರೆ ಅವು ಖಾಲಿಯಾದವು ಎನ್ನುವಂತಿಲ್ಲ. ‘ಅರಿಶಿನ ಹೆಚ್ಚಿದೆ’, ‘ಕುಂಕುಮ ಹೆಚ್ಚಿದೆ’ ಇದೇ ಭಾಷೆ.

ಒಮ್ಮೊಮ್ಮೆ ಹುಡುಗಿಯರೆಲ್ಲಾ ಒಟ್ಟೊಟ್ಟಿಗೆ ನಾಲ್ಕೈದು ಜನ ಸ್ನಾನಕ್ಕೆ ಇಳಿಯುತ್ತಿದ್ದುದೂ ಉಂಟು. ಏನೋ ಮಾತು ಮಾತು ಮಾತು ಮಥಿಸಿದ ನಗು! ಆದರೆ ಗಂಡಸರು ಹೀಗೆ ಮಾಡುತ್ತಿದ್ದ ನೆನಪಿಲ್ಲ. ನೂರು ಜುಟ್ಟು ಒಟ್ಟಿಗೆ ಇರಬಹುದು, ಎರಡು ಜಡೆಗಳು ಇರಲಾರವು ಎನ್ನುವುದು ಎಷ್ಟು ಸುಳ್ಳು!! ನಾವುಗಳು ಹಾಸಿಗೆಯಿಂದ ಏಳುವ ಮೊದಲೇ ಮಡಿಯುಟ್ಟು ಅಡುಗೆ ಮನೆ ಸೇರುತ್ತಿದ್ದ ಅಜ್ಜಿಯನ್ನು ಬಚ್ಚಲು ಮನೆಯಲ್ಲಿ ನೋಡಿದ ನೆನಪೇ ಇಲ್ಲ. ಅಲ್ಲೆಲ್ಲಾ ಮಾಮಿಯಂದಿರು, ಚಿಕ್ಕಮ್ಮ, ದೊಡ್ಡಮ್ಮಂದಿರದೇ ಸಾಮ್ರಾಜ್ಯ! ಗಸ ಗಸ ತಿಕ್ಕುವ, ರಪ್ಪ ರಪ್ಪನೆ ಎಣ್ಣೆ ಬಳಿದ ಮೈಮೇಲೆ ನೀರು ಹೊಯ್ಯುವ ಸದ್ದು. ಮುಖದ ಮೇಲೆ ಬೆವರ ಮಣಿಗಳ ಸಾಲು… ಹಳ್ಳಿಯ ಹಿನ್ನೆಲೆಯಲ್ಲಿನ ಯಾವುದೇ ಕತೆ ಕಾದಂಬರಿಗಳನ್ನು ಓದುವಾಗಲೂ ಅಲ್ಲಿ ಬಂದು ಕೂರುವುದು ಈ ಅಜ್ಜಿಯ ಮನೆಯ ಬಚ್ಚಲು ಮನೆಯೇ! ತುಂಬಿದ ಹೊಗೆ, ಕಣ್ಣೀರು, ಕೆಂಪಾದ ಕಣ್ಣುಗಳು, ತಣ್ಣನೆಯ, ಬೆಚ್ಚಗಿನ ಪಿಸುಮಾತುಗಳೇ! ಸುಂಯ್ಯೋ ಎನ್ನುತ್ತಿದೆ ನೆನಪಿನ ಬಿರುಗಾಳಿ!!!!!

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: