ಕುಲಾಂತರಿ ಬೀಜ ಸಂಪೂರ್ಣ ಸಾವಯವದ ವಿರೋಧಿ…

ಸುಂದರ ರಾಮನ್ ಸಂದರ್ಶನ

 

ತಮಿಳುನಾಡಿನ ಸತ್ಯಮಂಗಲದ ಹೆಸರಾಂತ ಸಾವಯವ ಕೃಷಿಕ ಎಸ್. ಆರ್. ಸುಂದರ ರಾಮನ್ ಅವರು ಇತ್ತೀಚೆಗೆ ನಂಜನಗೂಡು(ಮೈಸೂರು ಜಿ|), ಮಾಗಡಿ(ರಾಮನಗರ ಜಿ|) ಮತ್ತು ಕೊಟ್ಟೂರು(ಬಳ್ಳಾರಿ ಜಿ|)ಗಳಲ್ಲಿ ‘ಸಾವಯವ ಕೃಷಿಯಲ್ಲಿ ಸಸ್ಯ ಸಂರಕ್ಷಣೆ’ ಕುರಿತು ಅನೇಕ ಕಾರ್ಯಗಾರಗಳನ್ನು ನಡೆಸಿಕೊಟ್ಟರು. ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಹತ್ತಾರು ಬಗೆಯ ದ್ರಾವಣಗಳನ್ನು ಮಾಡಿ ತೋರಿಸಿದರು. ಸಾವಿರಾರು ರೈತರು ಇದರ ಪ್ರಯೋಜನ ಪಡೆದರು.

ಅವರು ಕೊಟ್ಟೂರಿನಲ್ಲಿದ್ದ ಸಂದರ್ಭದಲ್ಲಿ ಸಾವಯವ ಕೃಷಿಯಲ್ಲಿ ತೀವ್ರ ಆಸಕ್ತಿ ಹೊಂದಿರುವ ಕೂಡ್ಲಗಿಯ ಕನ್ನಡ ಪ್ರಭ ಪತ್ರಿಕೆಯ ವರದಿಗಾರ, ಭೀಮಣ್ಣ ಗಜಾಪುರ ಅವರಿಗೆ ನೀಡಿದ ಸಂದರ್ಶನವನ್ನು ನಮ್ಮ ಓದುಗರಿಗಾಗಿ ಇಲ್ಲಿ ಕೊಡುತ್ತಿದ್ದೇವೆ.

ಭೀಮಣ್ಣ : ನಿಮ್ಮ ಸಾವಯವ ಕೃಷಿ ಹಾದಿಯ ಬಗ್ಗೆ ಹೇಳಿ.

ಸುಂದರ್ ರಾಮನ್: ನಮ್ಮದು ಪರಂಪರಾಗತ ರೈತ ಕುಟುಂಬ. ನನ್ನ ತಾತ, ತಂದೆ, ನಾನು, ನನ್ನ ಮಗ ಎಲ್ಲರೂ ರೈತರೆ. ನಾನು ಕಣ್ಣುಬಿಟ್ಟಿದ್ದೇ ರಾಸಾಯನಿಕ ಕೃಷಿಯಲ್ಲಿ. ರಾಸಾಯನಿಕದಲ್ಲಿ ಮಾಡುತ್ತಿದ್ದಾಗಲೂ ನಾನು ತುಂಬಾ ಹೆಸರುವಾಸಿ. ಬೇರೆಯವರಿಗೂ ಪ್ರೇರಣೆ ಮಾಡುತ್ತಿದ್ದೆ. ಇಪ್ಪತೈದು ವರ್ಷಗಳ ಸತತ ರಾಸಾಯನಿಕ ಕೃಷಿಯ ನಂತರ ಎಂಬತ್ತರ ದಶಕದ ಕೊನೆಯ ವೇಳೆಗೆ ಎಲ್ಲಾ ರೈತರಂತೆ ನಾನೂ ಸೋತು ಹೋಗಿದ್ದೆ. ಆವೇಳೆಗೆ ಸಾವಯವ ಕೃಷಿಯ ತಂಗಾಳಿ ಬೀಸತೊಡಗಿತ್ತು. ನನಗೆ ಸಾವಯವ ಕೃಷಿಯಲ್ಲಿ ಸಿಕ್ಕಿದ ಮೊದಲ ಗುರು ಕರ್ನಾಟದವರೆ ಆದ ನಾರಾಯಣರೆಡ್ಡಿ. ನಂತರ, ತೀರ್ಥಹಳ್ಳಿಯ ಪುರುಷೋತ್ತಮರಾಯರು, ಬೆಳಗಾಂನ ಸುರೇಶ್ ದೇಸಾಯಿ, ಮಹಾರಾಷ್ಟ್ರದ ಶ್ರೀಪಾದ ಡಾಬೊಲ್ಕರ್ ಮತ್ತು ಬಾಸ್ಕರ ಸಾವೆ ಇವರೆಲ್ಲರಿಂದ ನಾನು ತುಂಬಾ ಕಲಿತೆ. ತಂಜಾವೂರಿನವರಾದ ಜಿ. ಬಾಲಕೃಷ್ಣ ಅವರಿಂದಲೇ ನಾನು ಸೂಕ್ಷ್ಮಜೀವಿ ಚಟುವಟಿಕೆಯ ಪಾಠ ಕಲಿತದ್ದು. ಇವರೆಲ್ಲ ನನ್ನ ಸಾವಯವ ಕೃಷಿ ಗುರುಗಳು.

2000ನಲ್ಲಿ ನನಗೆ ಸೃಷ್ಟಿ ಸನ್ಮಾನ್ ಪ್ರಶಸ್ತಿ ಸಿಕ್ಕಿತು. ಸೂಕ್ಷ್ಮ ಜೀವಿ ಚಟುವಟಿಕೆ ಹೆಚ್ಚು ಮಾಡುವಲ್ಲಿ ನಾನು ಮಾಡಿದ ಅನುಶೋಧನೆಗೆ ಈ ಪ್ರಶಸ್ತಿ ಸಿಕ್ಕಿತು. ವಿವಿಧ ದ್ರಾವಣಗಳನ್ನು ಸಿಂಪಡಣೆ ಮಾಡುವುದರಿಂದ ಗಿಡಗಳಿಗೆ, ಮಣ್ಣಿಗೆ ಏನಾಗುತ್ತದೆ, ಮಣ್ಣಿನಲ್ಲಿ ಉಪಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆ ಹೇಗೆ ಹೆಚ್ಚುತ್ತದೆ ಎಂಬುದು ನನ್ನ ಪ್ರಯೋಗ. ನನ್ನ 25 ವರ್ಷಗಳ ಸಾವಯವ ಕೃಷಿ ಬದುಕಿನಲ್ಲಿ ಸಾವಿರಾರು ಜನರಿಂದ ಕಲಿತಿದ್ದೇನೆ, ಕಲಿಸಿದ್ದೇನೆ. ನಾವು ಹತ್ತು ಮಂದಿ ಅನುಭವಿ ರೈತ ಸಂಪನ್ಮೂಲ ವ್ಯಕ್ತಿಗಳು ಸೇರಿ ‘ತಮಿಳುನಾಡು ಫಾರ್ಮರ್ಸಿ ಟೆಕ್ನಾಲಜಿ ಅಸೋಸಿಯೇಷನ್’ ಎನ್ನುವ ಗುಂಪು ಮಾಡಿಕೊಂಡಿದ್ದೆವೆ. ನಾರಾಯಣರೆಡ್ಡಿಯವರು 2002-2008ವರೆಗೆ ಪ್ರತಿ ತಿಂಗಳು 2 ದಿನದ ತರಬೇತಿ ಕಾರ್ಯಕ್ರಮ ನಮ್ಮ ಹೊಲಗಳಲ್ಲಿ ನಡೆಸಿಕೊಡುತ್ತಿದ್ದರು.

ಭೀ: ಇತ್ತೀಚಿನ ದಿನಗಳಲ್ಲಿ ‘ಸಹಜ ಕೃಷಿ’, ‘ಸಾವಯವ ಕೃಷಿ’ ಎಂಬ ಗೊಂದಲಗಳು ಹೆಚ್ಚಾಗುತ್ತಿವೆ. ಇವುಗಳ ನಡುವಿನ ವ್ಯತ್ಯಾಸವೇನು? ರೈತರ ಆಯ್ಕೆ ಯಾವುದಾಗಿರಬೇಕು?

ಸುಂ: ಕೆಲವರು ಈ ರೀತಿ ಪ್ರತ್ಯೇಕಿಸಿ ಹೇಳುತ್ತಿದ್ದಾರೆ. ನನ್ನ ಅನುಭವದಲ್ಲಿ ಇವೆರಡೂ ಒಂದೆ. ಸಹಜ ಕೃಷಿ ಎನ್ನುವುದು ಜೀವ ವೈವಿಧ್ಯ ಕೃಷಿ. ಒಂದು ಪ್ರದೇಶದಲ್ಲಿ ಸಹಜವಾಗಿ ಬೆಳೆಯುವಂಥ ಎಲ್ಲಾ ಬೆಳೆಗಳನ್ನು ಬೆಳೆಯುವುದು. ಮಿಶ್ರ ಬೆಳೆ ಪದ್ಧತಿ. ಸಾಮಾನ್ಯವಾಗಿ ಮಳೆಯಾಶ್ರಿತ ಬೇಸಾಯದಲ್ಲಿ ಇದನ್ನು ನೋಡುತ್ತೇವೆ.

ಹಸಿರು ಕ್ರಾಂತಿಯಿಂದ ಏಕಬೆಳೆ ಪದ್ಧತಿ ಬಂತು. ಹೈಬ್ರಿಡ್ ಬೀಜಗಳು, ಅಧಿಕ ಇಳುವರಿ ಬೀಜಗಳು ಬಂದವು. ನೀರಾವರಿಯಲ್ಲಿ ರಾಸಾಯನಿಕವಾಗಿ ಏಕಬೆಳೆ ಪದ್ಧತಿ ವ್ಯಾಪಕವಾಗಿ ಬೆಳೆದುಬಂತು. ರೈತರು ಏಕಬೆಳೆ ಪದ್ಧತಿಯ ವ್ಯಸನಿಗಳಾಗಿ ಹೋಗಿದ್ದಾರೆ. ತೀವ್ರ ಕೃಷಿ ಮಾಡುವ ರೈತರೆಲ್ಲಾ ಏಕಬೆಳೆ ಪದ್ಧತಿ ಮಾಡುವವರೆ. ಇವರೆಲ್ಲಾ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾವಯವಕ್ಕೆ ಹೊರಳಬೇಕೆಂಬ ಮನಸ್ಸಿದ್ದರೂ ‘ನೀರಾವರಿಯಲ್ಲಿ, ಹೈಬ್ರಿಡ್/ಅಧಿಕ ಇಳುವರಿ ಬೀಜ ಹಾಕಿ ಏಕಬೆಳೆ ಪದ್ಧತಿಯಲ್ಲಿ ಸಾವಯವ ಕೃಷಿ ಸಾಧ್ಯವಿಲ್ಲ’ ಎಂದು ನಂಬಿಕೊಂಡಿದ್ದಾರೆ. ಸಾಧ್ಯ ಎಂದು ನಾವು ತೋರಿಸಿಕೊಡುತ್ತಿದ್ದೇವೆ. ಏಕಬೆಳೆ ಪದ್ಧತಿಯಲ್ಲಿ, ಹೈಬ್ರಿಡ್ ಬೀಜ ಬಳಸಿ ವಿಷರಹಿತ ಕೃಷಿಯ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ತಮಿಳುನಾಡಿನಲ್ಲಿ ಅನೇಕಾನೇಕ ರೈತರು ಭತ್ತ, ಕಬ್ಬು, ಬಾಳೆ, ಅರಿಶಿಣ, ಮೆಕ್ಕೆ ಜೋಳ ಮೊದಲ್ಗೊಂಡು ಎಲ್ಲಾ ಬೆಳೆಗಳನ್ನು ಸಾವಯವದಲ್ಲಿ ಬೆಳೆಯುತ್ತಿದ್ದಾರೆ. ನಾನು ಸಾವಯವ ಕೃಷಿ ಅನ್ನುವುದನ್ನು ಹೆಚ್ಚಾಗಿ ಈ ಅರ್ಥದಲ್ಲಿ ಹೇಳಲು ಇಷ್ಟಪಡುತ್ತೇನೆ.

ಭೀ: ಸಾವಯವ ಬೇಸಾಯದಲ್ಲಿ ಇಳುವರಿ ಕಡಿಮೆ ಎನ್ನುವ ವಿಚಾರದಲ್ಲಿ ನಿಮ್ಮ ಅನುಭವವೇನು?

ಸುಂ: ಇದು ಕಟ್ಟುಕತೆ. ಪ್ರತಿಯೊಂದು ಬೆಳೆಯಲ್ಲೂ ರಾಸಾಯನಿಕದಲ್ಲಿ ಬರುವ ಗರಿಷ್ಟ ಇಳುವರಿಯನ್ನು ಸಾವಯವದಲ್ಲಿ ಪಡೆಯಬಹುದು ಎಂದು ನಾವು ಸಾಬೀತುಪಡಿಸಿದ್ದೇವೆ. ಭತ್ತ, ಬಾಳೆ, ಕಬ್ಬು, ಅರಿಶಿಣ, ಮೆಕ್ಕ ಜೋಳ… ಎಲ್ಲಾ. ಹೈಬ್ರಿಡ್ ಮೆಕ್ಕೆ ಜೋಳ ಕಷ್ಟಕರವಾದ ಬೆಳೆ. ಹೈಬ್ರಿಡ್ ಬೀಜ ಸಾವಯವಕ್ಕೆ ಆಗುವುದಿಲ್ಲ ಎನ್ನುತ್ತಾರೆ. ಅದನ್ನೂ ನಾವು ಯಶಸ್ವಿಯಾಗಿ ಮಾಡಿ ತೋರಿಸಿದ್ದೇವೆ. ರಾಸಾಯನಿಕದಲ್ಲಿ ಹೈಬ್ರಿಡ್, ಏಕಬೆಳೆ ಪದ್ಧತಿಗಳಿಂದ ಅಧಿಕ ಇಳುವರಿ ಸಾಧಿಸಿದ್ದೇವೆ ಎನ್ನುತ್ತಾರೆ. ಸಾವಯವದಲ್ಲೂ ಏನೂ ಕಡಿಮೆ ಆಗದಂತೆ ಅಷ್ಟೇ ಇಳುವರಿ ತೆಗೆಯಬಹುದು ಅನ್ನುವುದನ್ನು ನಾವು ಮಾಡಿ ತೋರಿಸಿದ್ದೇವೆ.

ರಾಸಾಯನಿಕದಿಂದ ಸಾವಯವಕ್ಕೆ ಪರಿವರ್ತನೆ ಆಗಲು 3 ವರ್ಷ ಬೇಕು ಎಂದು ಹೇಳುತ್ತಾರೆ. ನಾವು ಒಂದೇ ಹಂಗಾಮಿನಲ್ಲಿ ಯಶಸ್ವಿಯಾಗಿ ಬೆಳೆದು ತೋರಿಸಿದ್ದೇವೆ. ಪರಿವರ್ತನೆಯ ಮೊದಲನೆ ವರ್ಷದಲ್ಲೇ, ಮೊದಲನೆ ಹಂಗಾಮಿನಲ್ಲೇ ಇಳುವರಿಯಲ್ಲಿಯಾವುದೆ ಕುಂಠಿತವಾಗದಂತೆ ತಮಿಳುನಾಡಿನಲ್ಲಿ ನಾವು ಮಾಡಿದ್ದೇವೆ. ನಿಮಗೆ ಅನುಮಾನವಿದ್ದರೆ, ಇಲ್ಲೇ ನಿಮ್ಮ ಭೂಮಿಯಲ್ಲೇ ಮಾಡಿ ತೋರಿಸುತ್ತೇನೆ. ಇಷ್ಟು ವರ್ಷದ ಅನುಭವದಿಂದ ನಮಗೆ ಆ ಆತ್ಮವಿಶ್ವಾಸ ಇದೆ.

ಭೀ: ಹಾಗಾದರೆ ಏರುತ್ತಿರುವ ಜನಸಂಖ್ಯೆಗೆ ಸಾವಯವ ಕೃಷಿ ಉಣಿಸಬಲ್ಲುದು ಎನ್ನುತ್ತೀರಿ. ತಮ್ಮಂಥ ರೈತರು, ಸಂಘ ಸಂಸ್ಥೆಗಳು ಉತ್ತೇಜನ ಕೊಡುತ್ತಿದ್ದಾಗ್ಯೂ 10% ರೈತರು ಕೂಡಾ ಸಾವಯವಕ್ಕೆ ಹೊರಳಿಲ್ಲ ಯಾಕೆ?

ಸುಂ: ಆಹಾರ ಭದ್ರತೆ ಒದಗಿಸಲು ಸಾಧ್ಯವಿರುವುದು ಸಾವಯವ ಕೃಷಿಯಲ್ಲೇ. ಈ ವ್ಯವಸ್ಥೆಯ ಕುತಂತ್ರದಿಂದಾಗಿ ಅದಕ್ಕೆ ಅವಕಾಶ ಸಿಗುತ್ತಿಲ್ಲ. ಇದಕ್ಕೆ ನೀವು ಸರ್ಕಾರದ ನೀತಿಗಳನ್ನು, ಧೋರಣೆಯನ್ನು ಅರ್ಥ ಮಾಡಿಕೊಳ್ಳಬೇಕು. ಸಾವಯವ ಕೃಷಿಯನ್ನು ಉತ್ತೇಜಿಸಿದರೆ ನಾವು ಆಹಾರ ಭದ್ರತೆ ಕಾಯ್ದುಕೊಳ್ಳಲು ಸಾಧ್ಯವಿಲ್ಲ ಎಂಬುದು ಸರ್ಕಾರದ ನಿಲುವಾಗಿದೆ. ಇದಕ್ಕೆ ಹಿನ್ನೆಲೆ ಇದೆ. ನಿಮ್ಮಲ್ಲಿ ಇದುವರೆಗೆ ಬಿಜೆಪಿ ಸರ್ಕಾರ ಇತ್ತು. ಇವತ್ತು ಕಾಂಗ್ರೆಸ್ ಬಂದಿದೆ. ಸರ್ಕಾರ ಯಾವುದೇ ಇರಲಿ, ಅವರಿಗೆ ಈ ವಿಚಾರದಲ್ಲಿ ಏನು ಮಾಡಬೇಕು, ಮಾಡಬಾರದು ಎಂಬ ಕಲ್ಪನೆ ಇಲ್ಲ. ಇದರ ಹಿಂದೆ ಇರುವುದು ಈ ಅಧಿಕಾರಶಾಹಿ(ಐಎಎಸ್/ಕೆಎಎಸ್) ಮತ್ತು ವಿಜ್ಞಾನಿಗಳು. ಸರ್ಕಾರ ಬದಲಾದರೂ ಅವರು ಬದಲಾಗುವುದಿಲ್ಲ. ಅವರು ಹೇಳುವುದನ್ನೇ ಸರ್ಕಾರ ಮಾಡುತ್ತದೆ. ಇವರು ರಾಸಾಯನಿಕ ಕೃಷಿಯ ಕಟ್ಟಾ ಪ್ರಚಾರಕರು. ಸಾವಯವ ಕೃಷಿಯ ಸಾಧನೆಗಳನ್ನು ಎತ್ತಿ ತೋರಿಸುವ ಮನಸ್ಸು ಇವರಿಗಿಲ್ಲ. ಸಾವಯವ ಕೃಷಿ ಸಾಧನೆ ಮಾಡಿದ (ರೈತ)ವಿಜ್ಞಾನಿಗಳಿಗೆ ಮಾಡಿತೋರಿಸಲು ಅವಕಾಶವನ್ನೇ ಕೊಡದೆ, ‘ಸಾವಯವ ಕೃಷಿಯಿಂದ ಆಹಾರ ಭದ್ರತೆ ಸಾಧ್ಯವಿಲ್ಲ’ ಎಂದು ಹೇಳುತ್ತಿದ್ದಾರೆ.

ಏರುತ್ತಿರುವ ಜನಸಂಖ್ಯೆಯ ಆಹಾರ ಭದ್ರತೆ ಒದಗಿಸುವುದು ಸರ್ಕಾರದ ಕೈಯಲ್ಲಿದೆ. ಒಂದು ಸಣ್ಣ ಗುಂಪಿನ (ರೈತ) ವಿಜ್ನಾನಿಗಳು ಸಾವಯವದಲ್ಲಿ ಸಾಧ್ಯ ಹೇಳುತ್ತಿದ್ದೇವೆ. ಸರ್ಕಾರ ನಮಗೆ ಪ್ರತ್ಯೇಕವಾಗಿ ಮಾಡಿ ತೋರಿಸುವ ಅವಕಾಶ ಕೊಡಬೇಕು. ರಾಸಾಯನಿಕ ಮತ್ತು ಸಾವಯವ ವಿಜ್ಞಾನಿಗಳನ್ನು ಯಾವತ್ತೂ ಒಂದೇ ವೇದಿಕೆಯಲ್ಲಿ ಒಟ್ಟಿಗೆ ತರಕೂಡದು. ಇವರಿಬ್ಬರ ನಡುವೆ ಒಮ್ಮತ, ಹೊಂದಾಣಿಕೆ ಸಾಧ್ಯವೇ ಇಲ್ಲ. ಪರಸ್ಪರ ಟೀಕೆ ಮಾಡುತ್ತಾ ಕಾಲಹರಣ ಮಾಡಕೂಡದು. ಸರ್ಕಾರದ ಇಲಾಖೆ, ವಿಶ್ವವಿದ್ಯಾಲಯ ಕೂಡ ಸಾವಯವ ಮತ್ತು ರಾಸಾಯನಿಕ ಎಂದು ಎರಡು ಪ್ರತ್ಯೇಕ ವಿಭಾಗವಾಗಿ ಸಾಧನೆ ಮಾಡುವ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಆಗ ಚುರುಕು ಹತ್ತುತ್ತದೆ.

ಸಾವಯವ ಕೃಷಿ ಆಯ್ಕೆಯನ್ನು ರೈತರಿಗೆ ಬಿಟ್ಟುಬಿಡಬೇಕು. ಅವರ ಮೇಲೆ ಒತ್ತಡ ಹೇರಕೂಡದು. ಅಡಿಯಿಂದ ಮುಡಿವರೆಗೆ ಎಲ್ಲವನ್ನೂ ರೈತರಿಗೆ ಬಿಟ್ಟುಬಿಡಬೇಕು. ಮೇಲೆ ಎಲ್ಲೋ ಯೋಜನೆ ತಯಾರು ಮಾಡಿಕೊಂಡು ಅದನ್ನು ಅನುಷ್ಟಾನ ಮಾಡಲು ರೈತರನ್ನು ಬಳಸಕೂಡದು. ಕೊಟ್ಟೂರಿನ ‘ಭೂಮಿಮಿತ್ರ ಸಾವಯವ ರೈತ ಒಕ್ಕೂಟ’ದ ರೈತರು ಇಕ್ರಾ ಸಂಸ್ಥೆಯ ಮಾರ್ಗದರ್ಶನದಲ್ಲಿ ತಾವೇ ತಯಾರಿಸಿದ ಯೋಜನೆಯನ್ನು ತಾವೇ ಹೇಗೆ ಅನುಷ್ಟಾನಮಾಡುತ್ತಿದ್ದಾರೆ ಎಂಬುದನ್ನು ನೋಡಿ.

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರದ ಮುಂದೆ ನಾವು ಇಂತಹ ಒಂದು ಸಲಹೆಯನ್ನು ಇಟ್ಟಿದ್ದೆವು.

 

ಭೀ: ಹೈಬ್ರಿಡ್ ಸಾವಯವಕ್ಕೆ ಆಗಬಹುದು ಎಂದಿರಿ. ಕುಲಾಂತರಿ ಬೀಜ ಸಾವಯವಕ್ಕೆ ಸಲ್ಲುತ್ತಾ?

ಸುಂ: ಕುಲಾಂತರಿ ಸಂಪೂರ್ಣ ಸಾವಯವದ ವಿರೋಧಿ. ಇದು ಭಾರತದ ಕೃಷಿಯನ್ನು ಸರ್ವನಾಶಮಾಡಲು ಅಮೆರಿಕದ ವ್ಯವಸ್ಥಿತ ಪೂರ್ವ ನಿಯೋಜಿತ ಹುನ್ನಾರ. ಹೈಬ್ರಿಡ್ ಮತ್ತು ಕುಲಾಂತರಿ ಬೀಜಗಳಿಗೆ ಅಜಗಜಾಂತರ ವ್ಯತ್ಯಾಸವಿದೆ. ಹೈಬ್ರಿಡ್ ಒಂದೆ ಜಾತಿಯ ಎರಡು ತಳಿಗಳನ್ನು ಅಥವಾ ಹೆಚ್ಚು ತಳಿಗಳನ್ನು ಕ್ರಾಸ್ ಮಾಡಿ ಮಾಡಿರುವಂಥದ್ದು. ಸಾವಯವ ದೃಢೀಕರಣದ ಅಂತರ ರಾಷ್ಟ್ರೀಯ ನೀತಿ-ನಿಯಮಗಳಲ್ಲಿ ಹೈಬ್ರಿಡ್ ಬೀಜ ಬಳಕೆಗೆ ಅವಕಾಶ ಇದೆ. ಕುಲಾಂತರಿ ಬೀಜಗಳಿಗೆ ಅವಕಾಶವಿಲ್ಲ. ನಿಷೇಧ ಇದೆ.

ಭಾರತೀಯ ರೈತರು ಸಾವಯವ ಕೃಷಿ ಮಾಡತೊಡಗಿದರೆ ಪ್ರಪಂಚದಲ್ಲೇ ಸಾವಯವ ಉತ್ಪನ್ನಗಳನ್ನು ಪೂರೈಕೆ ಮಾಡುವ ಮೊದಲ ಸ್ಥಾನದಲ್ಲಿ ಇರುತ್ತಾರೆ. ಏಕೆಂದರೆ ಭೌಗೋಳಿಕವಾಗಿ ಇಂಡಿಯಾದಲ್ಲಿ ಕೃಷಿಗೆ ಅತ್ಯಂತ ಅನುಕೂಲವಾದ ಸ್ಥಿತಿ ಇದೆ. 365 ದಿನಗಳು ನೂರಾರು ವೈವಿಧ್ಯಮಯ ಬೆಳೆ ಬೆಳೆಯಬಹುದು. ಹೀಗೆ 365 ದಿನಗಳು ಸಾವಯವ ಪದಾರ್ಥಗಳನ್ನು ಪೂರೈಕೆ ಮಾಡಬಹುದು. ಆಗ ಇಡೀ ಪ್ರಪಂಚವನ್ನು ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಹವಣಿಸುತ್ತಿರುವ ಅಮೆರಿಕದ ಕುತಂತ್ರ ಮಣ್ಣು ಪಾಲಾಗಿ ಭಾರತ ಮುಂಚೂಣಿಗೆ ಬರುತ್ತದೆ. ಆದ್ದರಿಂದ ನಮ್ಮ ಕೃಷಿಯನ್ನು ಹೇಗಾದರೂ ನಾಶ ಮಾಡಬೇಕು ಎನ್ನುವ ಹುನ್ನಾರದಲ್ಲಿ ಅಮೆರಿಕ ಕುಲಾಂತರಿ ಬೀಜಗಳನ್ನು ನಮ್ಮ ಮೇಲೆ ಹೇರುತ್ತಿದೆ.

ಭೀ: ಇದು ನಮ್ಮ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೇ?

ಸುಂ: ಯಾಕಿಲ್ಲ? ಇದನ್ನು ಸರಳವಾಗಿ ಅರ್ಥ ಮಾಡಿಕೊಳ್ಳೋಣ. ಅಂತರ ರಾಷ್ಟ್ರೀಯವಾಗಿ ತಮ್ಮ ಸಾವಯವ ಉತ್ಪನ್ನಗಳನ್ನು ರಫ್ತು ಮಾಡುವ ಅವಕಾಶ ಎಲ್ಲಾ ದೇಶಗಳಿಗಿದೆ. ಅಂತರ ರಾಷ್ಟ್ರೀಯ ಕಾನೂನಿನ ಪ್ರಕಾರ ಕುಲಾಂತರಿ ಬೆಳೆಗಳ ಮೇಲೆ ಇಲ್ಲಿ ನಿಷೆೇಧ ಇದೆ. ಅಮೆರಿಕವೂ ಒಳಗೊಂಡಂತೆ ಎಲ್ಲಾ ದೇಶಗಳು ಸೇರಿಕೊಂಡು ಈ ಸ್ಟಾಂಡರ್ಡ್ ಗಳನ್ನು ರೂಪಿಸಿವೆ. ನೀವು ಆ ಸ್ಟಾಂಡರ್ಡ್ ಗಳನ್ನು ಪೂರೈಸಿದಾಗಲೇ ನಿಮಗೆ ರಫ್ತು ಮಾಡುವ ಅವಕಾಶ ಸಿಗುವುದು. ನಮ್ಮ ಸರ್ಕಾರಕ್ಕೆ, ಅಧಿಕಾರ ಶಾಹಿಗೆ, ರಾಜಕಾರಣಿಗಳಿಗೆ, ವಿಜ್ನಾನಿಗಳಿಗೆ ಇದು ಸಂಪೂರ್ಣ ಗೊತ್ತಿದೆ. ಹಾಗಿದ್ದೂ ಇವರು ನಮ್ಮ ದೇಶದಲ್ಲಿ 2002ರಲ್ಲಿ ಬಿಟಿ ಹತ್ತಿಯನ್ನು ವಾಣಿಜ್ಯವಾಗಿ ಬೆಳೆಯಲು ಅನುಮತಿ ಕೊಟ್ಟರು. ಪ್ರಯೋಗಶಾಲೆಗಳಲ್ಲಿ ಕುಲಾಂತರಿ ಪ್ರಯೋಗಗಳಿಗೆ ಅವಕಾಶ ಕೊಟ್ಟರು. ಈಗ ನಮ್ಮ ಆಹಾರ ಪದಾರ್ಥಗಳಲ್ಲಿ ಕುಲಾಂತರಿ ಮಾಲಿನ್ಯ ಆಗಿಹೋಗಿದೆ. ಬಿಟಿ ಹತ್ತಿ ಎಣ್ಣೆ ನಮ್ಮ ಅಡುಗೆ ಎಣ್ಣೆಗಳಲ್ಲಿ ಬೆರೆತು ಹೋಗಿದೆ.

ನಾವು ರಫ್ತು ಮಾಡಿದ ಸಾವಯವ ಪದಾರ್ಥದಲ್ಲಿ ಕುಲಾಂತರಿ ಮಾಲಿನ್ಯ ಏನಾದರೂ ಕಂಡು ಬಂದರೆ ಅದನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಆದ್ದರಿಂದ ಇಡೀ ಇಂಡಿಯಾ ಕುಲಾಂತರಿ ಮಾಲಿನ್ಯವಾಗಬೇಕು. ನಾವು ನಮ್ಮ ಆಹಾರ ಪದಾರ್ಥಗಳನ್ನು ಮಾಡುವ ಸ್ಥಿತಿಯಲ್ಲಿ ಇರಕೂಡದು. ಇದಕ್ಕೆ ನಮ್ಮ ಕೃಷಿಯನ್ನು ಕುಲಾಂತರಿ ಮಾಲಿನ್ಯ ಮಾಡಿ ಸರ್ವನಾಶ ಮಾಡಬೇಕು, ಆಗ ಅವರ ಕುಲಗೆಟ್ಟ ಆಹಾರ ಪದಾರ್ಥಗಳನ್ನು ನಮ್ಮ ಮೇಲೆ ಹೇರಲು ಸಾಧ್ಯ ಎನ್ನುವುದು ಅಮೆರಿಕದ ಹುನ್ನಾರ. ತಮ್ಮ ಕುಲಗೆಟ್ಟ ಕುಲಾಂತರಿ ಆಹಾರ ಪದಾರ್ಥಗಳನ್ನು ತಂದು ಸುರಿಯಲು ಇಂಡಿಯಾದಷ್ಟು ಜನಸಂಖ್ಯೆ ಹೊಂದಿದ ದೇಶಕ್ಕಿಂತ ಸೂಕ್ತವಾದ ಸ್ಥಳ ಅವರಿಗೆ ಇಲ್ಲ. ನಮ್ಮ ಅಹುವಾಲಿಯ, ಚಿದಂಬರಂ, ಮನ್ ಮೋಹನ್ ಸಿಂಗ್ ಎಲ್ಲಾ ಅಮೆರಿಕದ ಹಿಂಬಾಲಕರು. ಇವರ ಈ ಲಾಬಿಗೆ ನಮ್ಮ ಇಡೀ ಭಾರತೀಯ ಸಮಾಜ ಬಲಿಪಶುವಾಗಿದೆ.

ಭೀ: ಇಷ್ಟಿದ್ದೂ ರೈತರು ಬಿಟಿ ಹತ್ತಿಗೆ ಒತ್ತು ಕೊಡುತ್ತಿದ್ದಾರೆ. ಆಹಾರ ಬೆಳೆಗಳನ್ನ ಬೆಳೆಯಲು ಇಷ್ಟ ಪಡುತ್ತಿಲ್ಲವಲ್ಲ.

ಸುಂ: ರೈತರು ಏನು ಬಿತ್ತಬೇಕು ಅನ್ನುವುದು ರೈತರ ಕೈಯಲ್ಲಿಲ್ಲ. ರೈತರಿಗೆ ಯೋಚಿಸಲು ನೀವು ಅವಕಾಶ ಕೊಡುತ್ತಿಲ್ಲ. ಎಲ್ಲಿಯವರೆಗೆ ಬಿಟಿ ಹತ್ತಿ ಬೀಜವನ್ನು ಕೊಂಡಾಡುತ್ತಾ ಮಾರಾಟ ಮಾಡುತ್ತಿರುತ್ತಾರೋ ಅಲ್ಲಿಯವರೆಗೆ ಜನ ಕೊಂಡು ಹಾಕಿಯೇ ತೀರುತ್ತಾರೆ. ಸರ್ಕಾರಕ್ಕೆ ಈ ವಿಷಯದಲ್ಲಿ ಬದ್ಧತೆ ಇರದಿದ್ದಾಗ ರೈತರು ರೈತರೇನು ಮಾಡಲು ಸಾಧ್ಯ.

ಭೀ: ನೀವು ರೈತರಿಗೆ ತರಬೇತಿ ಕೊಡಲು ಇಷ್ಟೊಂದು ಓಡಾಡುತ್ತಿರಲ್ಲ, ಹಾಗಾದರೆ ನೀವೀಗ ಕೃಷಿ ಮಾಡುತ್ತಿಲ್ಲವೇ?

ಸುಂ: ನಾನು ಕೃಷಿಯನ್ನು ಬಿಟ್ಟ ಗಳಿಗೆ ನಾನು ಸಾವಯವ ಕೃಷಿಯ ಬಗ್ಗೆ ಇತರ ರೈತರಿಗೆ ಹೇಳುವುದಕ್ಕೆ ನಾಲಾಯಕ್ಕಾಗುತ್ತೇನೆ. ಅನರ್ಹನಾಗಿಬಿಡುತ್ತೇನೆ. ಅನೇಕ ರೈತರು ನನ್ನನ್ನು ಅವರ ಜಮೀನಿಗೆ ಕರೆಯುತ್ತಾರೆ. ನನ್ನ ಪರಿಸ್ಥಿತಿ ನೋಡಿ ಏನು ಮಾಡಬೇಕೆಂದು ಮಾಡಿ ತೋರಿಸಿ ಎನ್ನುತ್ತಾರೆ. ಅನೇಕರು ಫೋನ್ ಮಾಡಿ ಪರಿಹಾರ ಕೇಳುತ್ತಿರುತ್ತಾರೆ. ನಾನು ಪ್ರತಿ ದಿನ ನನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದರೆ ನಾನು ಇನ್ನೊಬ್ಬರಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಜನರಿಗೆ ನಾನು ಕೃಷಿಯ ಬಗ್ಗೆ ಹೇಳುತ್ತಿರುತ್ತೇನೋ ಅಲ್ಲಿಯವರೆಗೆ ನಾನು ಕೃಷಿ ಮಾಡುತ್ತಲೆ ಇರಬೇಕು. ನನ್ನ ಜಮೀನೇ ಒಂದು ತರಬೇತಿ ಕೇಂದ್ರ. ನೀವು ಗೂಗಲ್ ಸರ್ಚ್ ನಲ್ಲಿ ‘ಆರ್ಗಾನಿಕ್ ಫಾರ್ಮರ್ ಸುಂದರರಾಮನ್’ ಎಂದು ಕೊಟ್ಟು ನೋಡಬಹುದು.

ಭೀ: ನಿಮ್ಮೊಂದಿಗೆ ಮಾತನಾಡಿದ್ದು ಬಹಳ ಕುಷಿ ಕೊಡ್ತು. ನಿಮ್ಮಲ್ಲಿ ನೋವಿದೆ, ಕಳಕಳಿ ಇದೆ. ನಿಖರವಾದ ಜ್ಞಾನ ಇದೆ. ಮಾಡಿದ್ದನ್ನೇ ಹೇಳುತ್ತೀರಿ. ಇನ್ನೊಬ್ಬರಿಗೆ ಮಾಡಲು ಹೇಳಿದ ಮೇಲೆ ಪ್ರತಿ ಹಂತದಲ್ಲೂ ಅವರಿಗೆ ಹೇಗೆ ವಿಶ್ವಾಸ ಕೊಡಬೇಕು ಎನ್ನುವುದು ತಮಗೆ ತಿಳಿದಿದೆ. ಸಾವಯವ, ಸಹಜ ಕೃಷಿಗಳ ವಿಚಾರದಲ್ಲಿ, ಕುಲಾಂತರಿ ರಾಜಕೀಯದ ಬಗ್ಗೆ ಇದ್ದ ಗೊಂದಲ ತಮ್ಮಿಂದ ಪರಿಹಾರವಾಯ್ತು.

ಸುಂ: ತುಂಬಾ ಸಂತೋಷ. ನಿಮ್ಮ ಹತ್ತಿರ ಪತ್ರಿಕೆ ಇದೆ, ಬರೆಯುವ ಕೌಶಲ್ಯ ಇದೆ. ಎಷ್ಟೋ ಜನ ಸಾವಯವ ಕೃಷಿಕರು ಅದ್ಭುತ ಸಾಧನೆ ಮಾಡುತ್ತಿದ್ದಾರೆ. ಅವರ ಯಾವ ಸಾಧನೆಯೂ ಬೆಳಕಿಗೆ ಬಾರದಂತಿದೆ. ನೀವು ಇಕ್ರಾದವರ ಜೊತೆಗೂಡಿ ಅವರನ್ನೆಲ್ಲಾ ಗುರುತಿಸಿ ನಿಮ್ಮ ಬರವಣಿಗೆಯ ಮೂಲಕ ಅವರನ್ನು ಪರಿಚಯಿಸಿ. ಕೊಟ್ಟೂರಿನ ಸಾವಯವ ರೈತರ ಬಗ್ಗೆ ಒಂದು ಪುಸ್ತಕವನ್ನೇ ಮಾಡಿ. ನಿಮಗೆ ಶುಭವಾಗಲಿ.

ಸುಂದರ ರಾಮನ್ ಅನುಶೋಧನೆಯ ಪ್ರಮುಖ ದ್ರಾವಣಗಳು

1. ಆರ್ಕಿ ದ್ರಾವಣ- ಹಸುವಿನ ಸಗಣಿ, ಬೆಲ್ಲ, ಅಳಲೆಕಾಯಿ ಪುಡಿ, ಅತಿಮಧುರ ಪುಡಿ, ನೀರು ಮೂಲ ವಸ್ತುಗಳು

2. ಅಮುದಂ ದ್ರಾವಣ- ಹಸುವಿನ ಸಗಣಿ, ಗಂಜಲ, ಬೆಲ್ಲ, ಪಪಾಯ ಹಣ್ಣು, ನೀರು ಮೂಲ ವಸ್ತುಗಳು

3. ಪಂಚಗವ್ಯ- ಹಸುವಿನ ಸಗಣಿ, ಗಂಜಲ, ಹಾಲು, ಮೊಸರು, ತುಪ್ಪ, ಬೆಲ್ಲ, ಎಳನೀರು, ಬಾಳೆಹಣ್ಣು, ಪಪಾಯ ಹಣ್ಣು, ನೀರು ಮೂಲವಸ್ತುಗಳು

4. ಮಜ್ಜಿಗೆ ದ್ರಾವಣ – ಮಜ್ಜಿಗೆ, ಎಳನೀರು, ಪಪಾಯ ಹಣ್ಣು, ಅರಿಶಿಣ ಪುಡಿ, ಸೀಗೇಪುಡಿ, ಬೇವಿನ ಸೊಪ್ಪು, ಲೋಳೆಸರ, ಪುದಿನ ಸೊಪ್ಪು, ತುಳಸಿ ಎಲೆ, ಸೀತಾಫಲದ ಎಲೆ ಮೂಲ ವಸ್ತುಗಳು

5. ಮೀನಿನ ಪಾನಕ – ಹಸಿ ಮೀನು, ಬೆಲ್ಲ ಮೂಲ ವಸ್ತುಗಳು

6. ಮೊಟ್ಟೆ ಪಾನಕ – ಮೊಟ್ಟೆ, ನಿಂಬೆ ರಸ, ಬೆಲ್ಲ ಮೂಲ ವಸ್ತುಗಳು

7. ಎಲೆಗಳ ಕಶಾಯ- ಎಕ್ಕದ ಎಲೆ, ಕರಿಮತ್ತಿ(ಉಮ್ಮತ್ತಿ) ಎಲೆ ಮತ್ತು ಕಾಯಿ, ಬೇವಿನ ಸೊಪ್ಪು, ನುಗ್ಗೆ ಸೊಪ್ಪು, ಲಕ್ಕಿ

ಸೊಪ್ಪು, ಸಗಣಿ, ಗಂಜಲ.

ಹೆಚ್ಚಿನ ವಿವರಗಳಿಗೆ ಪತ್ರಿಕೆಯ ಈ ಸಂಚಿಕೆಯನ್ನು ನೋಡಬಹುದು.

 

‍ಲೇಖಕರು avadhi

June 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. hema

    ಬಹಳ ಒಳ್ಳೆಯ ಮಾಹಿತಿಗಳು ತಿಳಿದವು. ಒಳ್ಳೆಯ ಸಂದರ್ಶನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: