’Facebook ಪರಿಣಯ ಪ್ರಸಂಗ!’ – ಹೇಮಾ ಹೆಬ್ಬಗೋಡಿ

ಹೇಮಾ ಹೆಬ್ಬಗೋಡಿ

Fb ಯೊಂದಿಗಿನ ನನ್ನ ಒಡನಾಟ ಶುರುವಾದದ್ದು ನನ್ನ ಕಾಲೇಜಿನ ಕೊನೆಯ ದಿನಗಳಲ್ಲಿ. ಕಾಲೇಜು ಶುರುವಾಗಿ ಸ್ವಲ್ಪದಿನಗಳಿಗೆ ಮುದುಡಿಕೊಂಡಿದ್ದ ಮೈಮನಸುಗಳು ಮೆಲ್ಲಗೆ ಹರಡಿಕೊಳ್ಳಲಾರಂಭಿಸಿತು. ಕ್ರಮೇಣ ಜೊತೆಯವರೊಂದಿಗೆ ಸ್ನೇಹ, ಸಲಿಗೆ ಬೆಳೆಯಿತು. ಹಳೆಯ ಸ್ನೇಹಿತರು ಮರೆವೆಗೆ ಸರಿದಂತೆ ಹೊಸ ಸ್ನೇಹಿತರ ಬಳಗ ಬೆಳೆಯಲಾರಂಭಿಸಿತು. ನನಗೇನೂ ಅಂಥ ಹೇಳಿಕೊಳ್ಳುವಂತ ಆರ್ಥಿಕ ಹಿನ್ನಲೆಯಿರಲಿಲ್ಲ. ಹಾಗಾಗಿ ಸಣ್ಣ ಊರೊಂದರ ಸಣ್ಣ ಶಾಲೆಯಲ್ಲಿ ಓದಿ ಬಂದ ನನಗೆ ಬೆಂಗಳೂರಿನ ಮಕ್ಕಳು ಅವರಾಡುವ ಮಾತು ಎಲ್ಲ ಅರ್ಥವಾಗಲು ಸಾಕಷ್ಟು ಸಮಯ ಹಿಡಿದಿತ್ತು. ಕಂಪ್ಯೂಟರ್ ನೋಡಿದ್ದ ನನಗೆ ಇಂಟರ್ನೆಟ್ ಅನ್ನೋ ಪ್ರಪಂಚದ ಮೊದಲ ಪರಿಚಯ ಸರಿಯಾಗಿ ಆದದ್ದು ಇಲ್ಲಿಗೆ ಬಂದ ನಂತರವೇ. ನನ್ನ ಈ-ಮೇಲ್ ಐಡಿ ಕೂಡ ನಾನು ಮಾಡಿಕೊಂಡಿದ್ದು ಪಿಯುಸಿ 2ನೇ ವರ್ಷದಲ್ಲಿ. ನನಗೆ ಹೆಚ್ಚು ಸ್ನೇಹಿತರಿರಲಿಲ್ಲ. ಇಲ್ಲಿ ಕೂಡ ಇದ್ದವರು ಕೆಲವೇ ಮಂದಿ. ಅವರೆಲ್ಲ ಇಲ್ಲಿನವರೇ ಮತ್ತು ನೆಟ್ಕಿಂಗ್ಸ್ ಅಂದರೆ ಇಂಟರ್ನೆಟ್ ಎಕ್ಸ್ಪರ್ಟ್ಸ್. ನಾನು ಕೂಡ ಇವರಿಂದಲೇ ಇಂಟರ್ನೆಟ್ ಪರಿಚಯ ಮಾಡಿಕೊಂಡಿದ್ದು.

Sms ಮತ್ತು fb ಇವರುಸಿರು. ಬೆಳಗಾಗುತ್ತಿದ್ದುದು ಅಜ್ಜಿ ಕೋಳಿಯಿಂದಲ್ಲ ಮೊಬೈಲು ಮತ್ತು fb ಮೆಸೇಜ್ಗಳಿಂದ. ರಾತ್ರಿಯಾಗುತ್ತಿದ್ದುದು ಹೀಗೆ. ಮನೆಯಾದರೇನು, ‘ಕಾಲೇಜಾದರೇನು ಯಾರಿದ್ದರೇನು ಇಲ್ಲದಿದ್ದರೇನು ಜೊತೆಯಿರಲು ನೀನು ಬೇಕು ನಂಗಿನ್ನೇನು’ ಅನ್ನೋಷ್ಟು ಲವ್ ಇವರಿಗೆ ಮೊಬೈಲು ಮತ್ತು ಫೇಸ್ಬುಕ್ ಬಗ್ಗೆ. ನನಗೆ ಯಾವಾಗಲೂ ಕೊರೆಯುತ್ತಿದ್ದ ಪ್ರಶ್ನೆಯೆಂದರೆ ಇವರ fb friends. ಏನಿಲ್ಲವೆಂದರೂ ಇವರಲ್ಲಿ ಪ್ರತಿಯೊಬ್ಬರಿಗೂ 500-1000ದಷ್ಟು ಸ್ನೇಹಿತರು. ಕೆಲವರಿಗೆ ಇನ್ನೂ ಹೆಚ್ಚು! ಇದು ಹೇಗೆ ಸಾಧ್ಯ? ಅನ್ನೋದು ನನಗೆ ಆಶ್ಚರ್ಯ. ಆ ಲಿಸ್ಟಿನಲ್ಲಿ ಇರುವ ಎಷ್ಟೋ ಮಂದಿಯನ್ನ friend requrest accept ಮಾಡಿ ಅಥವ friend request ಕಳಿಸಿ ಲಿಸ್ಟ್ಗೆ ಸೇರಿಸಿಕೊಂಡಿದ್ದು ಬಿಟ್ಟರೆ ಅವರನ್ನು ವೈಯುಕ್ತಿಕವಾಗಿ ಭೇಟಿ ಮಾಡಿರುವುದು ಅಥವ ಪರಿಚಯ ಮಾಡಿಕೊಂಡಿರುವುದು ಬಹಳ ಕಡಿಮೆ ಅಥವ ಇಲ್ಲವೇ ಇಲ್ಲ. ಅವರಲ್ಲಿ ಕೆಲವರೊಡನೆ ಆಗೀಗ ಚಾಟ್ ಮತ್ತು ಅವರು ಮಾಡುವ updateಗಳ ಮುಖಾಂತರ ಅವರ ಲೋಕದಲ್ಲಿ ಅವರು ನಮಗೆ ತೆರೆದಿಟ್ಟದ್ದನ್ನ ನೋಡುವುದಷ್ಟೇ. ಹೀಗಿದ್ದೂ ಅವರೆಲ್ಲ ನಮ್ಮ ಫ್ರೆಂಡ್ಸ್ friend in fb is a friend in a list only!!

ನಾವೆಲ್ಲ ಕಾಲೇಜು ಮುಗಿಸಿ ಚದುರಿಹೋದ ಮೇಲೂ fbಯಲ್ಲಿ contactನಲ್ಲಿ ಇರೋಣ ಅಂತ ಕಾಲೇಜಿನ ಕೊನೆಯ ದಿನ ಮಾತು ಕೊಟ್ಟುಕೊಂಡು ಚದುರಿದೆವು. ಓದು ಮುಗಿಯಿತು. ಕೆಲಸದ ಬೇಟೆ ಆರಂಭವಾಯಿತು. ಹಾಗೂ ಹೀಗೂ ಕಾಲೂರಲು ನೆಲೆ ಕಂಡುಕೊಂಡೆವು. ಆಗೊಮ್ಮೆ fb ಯಲ್ಲಿ ಅಕಸ್ಮಾತ್ತಾಗಿ ಹಿಂದಿನ ಕಾಲೇಜಿನ ಗೆಳೆಯ ಒಮ್ಮೆ ಮಾತಿಗೆ ಸಿಕ್ಕ. ಪರಸ್ಪರ ಹಾಯ್ ಹಲೋಗಳ ನಂತರ ಸದ್ಯದ ನಮ್ಮ ನಮ್ಮ ಬದುಕಿನ status update ಮಾಡಿದ ನಂತರ ಹಾಗೇ ಮಾತು ಊರು ಕೇರಿ ಅಲೆದು ಯಾರ್ಯಾರದೋ ಕತೆಗಳನ್ನು ಸುತ್ತಿಹಾಕಿ ಬರುವಾಗ ನಮ್ಮೊಡನೆ ಓದುತ್ತಿದ್ದ ನಮ್ಮ ಸ್ನೇಹಿತನೊಬ್ಬನ ವಿಷಯ ಕೂಡ ಬಂತು. ಆ ಗೆಳೆಯ ಹೇಳಿದ ಕತೆಯೇ ನಾನೀಗ ಇದನ್ನು ಬರೆಯಲು ಕಾರಣ.

ಆ ಗೆಳೆಯನಿಗೆ ಮದುವೆ ಮಾಡಲು ಮನೆಯಲ್ಲಿ ಹುಡುಕಾಟ ಆರಂಭಿಸಿದ್ದರು. ಅವನಿಗೆ ಪ್ರೀತಿಸಿ ಮದುವೆಯಾಗಬೇಕೆಂದು ಆಸೆ. ಆದರೆ ಅವನ ಪ್ರೇಮ ಪ್ರಯತ್ನಗಳು ವಿಫಲವಾಗಿದ್ದವು. ಹಾಗಾಗಿ ಅವನು ಮನೆಯವರ ಒತ್ತಾಯಕ್ಕೆ ಮಣಿದು ಅವರು ತೋರಿಸಿದ ಹುಡುಗಿಯರನ್ನು ನೋಡಲು ಶುರುಮಾಡಿದ್ದ. ಹೀಗೆ ಶುರುವಾದ ನೋಡುವ ಕಾರ್ಯಕ್ರಮ ಯಶಸ್ವಿಯಾಗಿ 50 ಕಂತುಗಳನ್ನು ಪೂರೈಸಿತ್ತು. ಯಾವುದೇ ಸಂಬಂಧ ಮದುವೆಯಲ್ಲಿ ಸಮಾಪ್ತಿಗೊಳ್ಳುವ ಸೂಚನೆಗಳು ಕಾಣದೇ ಮನೆಯವರು ಕಂಗಾಲಾಗಿದ್ದರು. ಜಗದೊಳಗೆ ನಮ್ಮ ಸುಪುತ್ರನ ಮನಸೆಳೆವ ಚೆಲುವೆ ಎಲ್ಲಿಹಳು ಅಂತ ಹುಡುಕಿ ಹುಡುಕಿ ಹೈರಾಣಾಗಿದ್ದರು. ಈ ಭೂಪತಿ ಗಂಡು ಹೀಗೆ ಬಂದ ಹುಡುಗಿಯರನ್ನೆಲ್ಲ ನಿರಾಕರಿಸಲು ಕಾರಣವೇನು ಅನ್ನುವುದು ಎಲ್ಲರಿಗೂ ಯಕ್ಷಪ್ರಶ್ನೆಯಾಗಿತ್ತು. ಏನಾದ್ರೂ ಲವ್ವುಗಿವ್ವು ಮಾಡಿದ್ದರೆ ಹೇಳಪ್ಪ ಎಂದು ಪರಿಪರಿಯಾಗಿ ಕೇಳಿದರೂ ಉತ್ತರ ನಕಾರವೇ ಆಗಿರುತ್ತಿತ್ತು.

 

ಇಂತಿಪ್ಪ ಗಂಡಿಗೆ ಕಡೆಗೂ ಒಬ್ಬಳು ಹುಡುಗಿಯನ್ನು ಒಪ್ಪಿಕೊಳ್ಳುವ ಮನಸ್ಸಾಯಿತು. ಮನೆಯಲ್ಲಿ ಎಲ್ಲರೂ ಈ ಮಾತು ಕೇಳಿ ಕುಣಿದಾಡುವುದೊಂದೇ ಬಾಕಿ ಆಗ ಹುಡುಗಿಯ ಮನೆಯಿಂದ ಫೋನ್ ಬಂತು ‘ನಮ್ಮ ಹುಡುಗಿ ಒಪ್ಪಿಲ್ಲ’ ಅಂತ. ಕಾರಣವೇನು ತಿಳಿಯದೆ ನಿರಾಶರಾದರು. ಆ ಹುಡುಗಿ ಕೂಡ ಇವನ ಹಾಗೇ ಅರ್ಧಶತಕವನ್ನು ಪೂರೈಸಿದ್ದವಳೇ. ಅವರ ಮನೆಯ ಪರಿಸ್ಥಿತಿಯೇನು ಇವರದಕ್ಕಿಂತ ಭಿನ್ನವಾಗಿರಲಿಲ್ಲ. ಕಡೆಗೆ ಎರಡೂ ಮನೆಯವರು ಸೇರಿ ಇವರಿಬ್ಬರ ಈ ನಿರಾಕರಣ ಕ್ರಿಯೆಯ ಹಿಂದೆ ಅಡಗಿರುವ ರಹಸ್ಯವನ್ನು ಭೇದಿಸುವ ಪಣತೊಟ್ಟು ಇವರಿಬ್ಬರ ಸ್ನೇಹಿತರ ಬೆಂಬತ್ತಿದರು. ಆಗ ತಿಳಿದು ಬಂದ ವಿಷಯವೇನೆಂದರೆ ಇಬ್ಬರಿಗೂ fbಯ ಗೀಳು ಎಷ್ಟಿತ್ತೆಂದರೆ ತಮಗೆ ಬಂದ ಹೆಣ್ಣು/ಗಂಡುಗಳ ಜಾತಕವನ್ನು ಇವರು fbಯಲ್ಲಿ ಹುಡುಕುವ ಅಭ್ಯಾಸ ಇಟ್ಟುಕೊಂಡಿದ್ದರಂತೆ. ಅವರ ಗೆಳೆಯರು, ಫೋಟೋಗಳು, ಅವರಿಷ್ಟದ ಹಲವು ಸಂಗತಿಗಳು ಇವನ್ನೆಲ್ಲ ನೋಡಿ ಅವರುಗಳ ಬಗ್ಗೆ ಇವರು ನಿರ್ಧರಿಸುತ್ತಿದ್ದರಂತೆ. ಈ ರಹಸ್ಯ ಕಾರ್ಯಾಚರಣೆಯಿಂದ ತಾವು ತಿಳಿದ ಬಂದ ಈ ಸತ್ಯದಿಂದ ಹಿರಿಯರು ಇವರನ್ನು ತಿದ್ದುವ ಪ್ರಯತ್ನಕ್ಕೆ ಕೈಹಾಕಿದರಂತೆ. ಆದರೇನು ಮಾಡುವುದು Fb rehabilitation centerಗಳು ಇನ್ನೂ ಹುಟ್ಟಿಕೊಂಡಿಲ್ಲವಲ್ಲ. ಹಾಗಾಗಿ ಇವರುಗಳನ್ನು ಈ ಅಭ್ಯಾಸದಿಂದ ಮುಕ್ತಗೊಳಿಸಲು ಸಾಕಷ್ಟು ಕಷ್ಟಪಟ್ಟರಂತೆ. ಕಡೆಗೆ ಹಾಗೂ ಹೀಗೂ ಸಮಸ್ಯೆ ಬಗೆಹರಿದು ಅವರಿಬ್ಬರು ಮದುವೆಗೆ ಒಪ್ಪಿ ತಮ್ಮ ಮದುವೆಯ ಕರೆಯೋಲೆಯನ್ನು fbಯಲ್ಲಿ ಹಾಕಿ ಶುಭಾಷಯಗಳನ್ನು ಪಡೆಯುವ ಮೂಲಕ ಈ fb ಪರಿಣಯ ಮುಗಿಯಿತಂತೆ. ಈಗ ಇಬ್ಬರ profile picture ಅವರ ಮದುವೆಯ ಫೋಟೋನಂತೆ. ಹುಚ್ಚಲ್ಲ ಬೆಪ್ಪಲ್ಲ ಎಲ್ಲ fb ಲೀಲೆ!! ನೀವೇನಂತೀರಿ?

‍ಲೇಖಕರು avadhi

June 18, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: