ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುತೂಹಲ ಕೆರಳಿಸುವ ‘ಪತ್ತೇದಾರ ಪ್ರಣವ’

ಅನುಪಮಾ ಕೆ ಬೆಣಚಿನಮರ್ಡಿ ಅವರ ಕೃತಿ ‘ಪತ್ತೇದಾರ ಪ್ರಣವ ಕೇಸ್ ೨’

‘ಅವ್ವ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಮಂಡಲಗಿರಿ ಪ್ರಸನ್ನ ಅವರ ಅನಿಸಿಕೆ ಇಲ್ಲಿದೆ.

ಪತ್ತೇದಾರ ಪ್ರಣವ ಕೇಸ್ ೨’ ಅನುಪಮಾ ಕೆ. ಬೆಣಚಿನಮರ್ಡಿ ಅವರ ಈಚಿನ ಮಕ್ಕಳ ಸಾಹಿತ್ಯ ಕೃತಿ. ಅನುಪಮಾ ಇಂಜಿನಿಯರಿ೦ಗ್ ಓದಿನ ಮೂಲದವರು. ಹಾಗಾಗೇ ಅವರ ವಿಜ್ಞಾನ ಮತ್ತು ತಂತ್ರಜ್ಞಾನದ ಹಿನ್ನೆಲೆ ಅವರ ಈ ಬರಹಕ್ಕೆ ಪ್ರೇರಣೆ ನೀಡಿರಬಹುದು. ಮಕ್ಕಳ ಸಾಹಿತ್ಯದ ಆಲೋಚನೆಗಳಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ರಾಮಾಯಣ, ಮಹಾಭಾರತ, ಜನಪದ ಕತೆಗಳು, ಪಂಚತ೦ತ್ರದ ಕತೆಗಳು, ಈಸೂಪನ ಕತೆಗಳು, ನೀತಿ ಕತೆಗಳನ್ನು ದಾಟಿ ಬಂದಿರುವ ಮಕ್ಕಳ ಸಾಹಿತ್ಯ ಲೋಕ ಇದೀಗಫ್ಯಾಂಟಸಿ’ ಭರಾಟೆಯಲ್ಲಿ ಸಹಜ ಬಾಲ್ಯದ ಮತ್ತು ವೈಜ್ಞಾನಿಕ ಮನೋಭಾವದ ಕತೆಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ಪತ್ತೇದಾರನಾಗಿ ಕತೆಯಲ್ಲಿ ಇಣುಕಿ ಕುತೂಹಲ ಕೆರಳಿಸಿದ್ದು ‘ಪತ್ತೇದಾರ ಪ್ರಣವ’ ಕೃತಿಯ ಮುಖ್ಯ ಆಶಯ.

ಮಕ್ಕಳ ಸಾಹಿತ್ಯ ಮುಖ್ಯ ಭೂಮಿಕೆ, ನಮ್ಮ ಬಾಲ್ಯದ ಅನುಭವಗಳನ್ನು ಕಟ್ಟಿಕೊಡುವುದು ಮಾತ್ರವಲ್ಲ, ನಮ್ಮ ಸುತ್ತಲಿನ ನೂರಾರು ಮಕ್ಕಳ ವಿಚಿತ್ರ, ವಿಶಿಷ್ಟ, ವಿಭಿನ್ನ ಊಹಾತೀತ ಲೋಕವೊಂದರ ಅನಾವರಣವೂ ಆಗಬಹುದು. ಆ ನಿಟ್ಟಿನ ಒಂದು ಪುಟ್ಟ ಪ್ರಯತ್ನ `ಪತ್ತೇದಾರ ಪ್ರಣವ’ದಲ್ಲಿ ನಿರೂಪಿಸುತ್ತಾ ಹೋಗುವ ಕತೆ.

ಶಾಲೆಯಲ್ಲಿ ಬೇರೆ ಬೇರೆ ಹುಡುಗರ ಎಂಟು ಟಿಫಿನ್ ಬಾಕ್ಸ್ ಗಳು ಕಳ್ಳತನವಾಗುವ ವಿಷಯದೊಂದಿಗೆ ಕತೆ ತೆರೆದುಕೊಳ್ಳುತ್ತದೆ. ನಂತರ ಆರಂಭವಾಗುವುದೇ ಪ್ರಣವನ ಪತ್ತೇದಾರಿ ಕೆಲಸ! ವೃತ್ತಿಪರ ಪತ್ತೇದಾರನಂತೆ ತನಿಖೆ ಆರಂಭಿಸುವ ಪ್ರಣವ, ಪ್ರತಿಯೊಬ್ಬ ಹುಡುಗರನ್ನು ಮತ್ತು ಟೀಚರ್ ಗಳನ್ನು ವಿಚಾರಣೆ ನಡೆಸುವುದು, ತನಿಖೆಗೆ ಅನುಕೂಲವಾಗುವಂತೆ ಮಾಹಿತಿಯನ್ನು ಬರೆದಿಟ್ಟುಕೊಂಡು ವಿವಿಧ ಹಂತಗಳಲ್ಲಿ ವಿಚಾರಣೆ ಮಾಡುತ್ತಾ ಹೋಗುವುದು ಕುತೂಹಲ ಮೂಡಿಸುತ್ತದೆ.

ಲೇಖಕಿ ಮಕ್ಕಳ ಟಿಫನ ಬಾಕ್ಸ್ ಗಳ ಹೆಸರುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕಾರಣದಿಂದ ಸಿಕ್ಕಿರಬಹುದಾದ ಹೆಸರುಗಳು. ಪೆಪ್ಪಾ ಪಿಗ್, ಛೋಟಾ ಭೀಮ್, ಪ್ರಿನ್ಸೆಸ್, ಆಯತಾಕಾರದ, ಸ್ಪೈಡರ್ ಮ್ಯಾನ್, ಚೌಕಾಕಾರದ ಸ್ಟೀಲ್ ಡಬ್ಬ ಹೀಗೆ ಗಮನ ಸೆಳೆಯುತ್ತವೆ.

ಆದರೆ ಕೊನೆಯಲ್ಲಿ ಗಾರೆ ಕೆಲಸದ ಪುಟ್ಟ ಬಾಲಕಿಯೊಬ್ಬಳು ಹುಡುಗರ ಟಿಫಿನ್ ಬಾಕ್ಸ್ ಗಳನ್ನು ಕದ್ದ ಹಿನ್ನೆಲೆ ತಿಳಿದಾಗ ಮನಸಿಗೆ ಬೇಸರವಾಗುತ್ತದೆ. ತಾನು ಶಾಲೆಯಲ್ಲಿ ಓದದಿದ್ದರೂ ಮಕ್ಕಳ ಟಿಫಿನ್ ಬಾಕ್ಸ್ ನಲ್ಲಿ ಊಟ ಮಾಡಬೇಕೆಂಬ ಹಂಬಲ ಬಡತನದಲ್ಲಿ ಕಲಿಕಾ ಲೋಕದಿಂದ ವಂಚಿತ ಸಾವಿರಾರು, ಲಕ್ಷಾಂತರ ಮಕ್ಕಳು ಕಣ್ಣ ಮುಂದೆ ಬಂದು ಹೋಗುತ್ತಾರೆ. ವಿಶೇಷವಾಗಿ ಕಲಿಕೆಯಿಂದ ಹೊರಗುಳಿದ ಹೆಣ್ಣು ಮಕ್ಕಳ ವಿಷಮ ಸ್ಥಿತಿ ಕತೆಯ ಅಂತ್ಯದಲ್ಲಿ ಮನಕಲಕುತ್ತದೆ. ಅಲ್ಲಲ್ಲಿ ಮಿಂಚುವ ಸಹಜ ಹಾಸ್ಯ ಪ್ರಸಂಗಗಳು ಪೂರಕವಾಗಿ ಮೂಡಿಬಂದಿವೆ.

ಅನುಪಮಾ ಅವರ ಕಥಾ ನಿರೂಪಣೆ ಸರಳ ಹಾಗೂ ಸುಂದರವಾಗಿದೆ. ಅನಗತ್ಯ ಪಾತ್ರಗಳ ಸೃಷ್ಟಿ ಇಲ್ಲ. ಮಕ್ಕಳ ಕತೆ ಹೇಳುವ ಅವರ ತುಡಿತ ಯಶಸ್ವಿಯಾಗಿದೆ. ಆದರೆ, ಕತೆಯ ಉಪಶೀರ್ಷಿಕೆಗಳು ಇನ್ನಷ್ಟು ಆಕರ್ಷಕವಾಗಿ ಮಾಡಲು ಅವಕಾಶ ಇದೆ.

ಸಧ್ಯದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಪ್ರಭಾವದಿಂದ ‘ಫ್ಯಾಂಟಸಿ’ ಲೋಕದಲ್ಲಿ ವಿಹರಿಸುತ್ತಿರುವ ಕನ್ನಡ ಬಾಲ ಸಾಹಿತ್ಯ ಸಹಜ ಬಾಲ್ಯದ ನೆನಪುಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಅನುಪಮಾ ಅಂತಹ ಲೇಖಕರು ಮಾಡಬೇಕಿದೆ. ಯಾಕೆಂದರೆ, ಬಾಲ್ಯದ ಕನಸುಗಳು ರಮ್ಯ ಲೋಕದಲ್ಲಿ ಮಾತ್ರ ಕಳೆದು ಹೋಗಬಾರದಲ್ಲವೆ? ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುವ ಅನುಪಮಾ ಕೆ.ಬೆಣಚಿನಮರ್ಡಿ ಈ ದಿಕ್ಕಿನಲ್ಲಿ ಪ್ರಯತ್ನಶೀಲರಾಗಲಿ.

‍ಲೇಖಕರು Admin

8 April, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading