ಕಿರಣ ವಲ್ಲೇಪುರೆ ಓದಿದ ‘ಡಾ ಬಿ ಆರ್ ಅಂಬೇಡ್ಕರ್ ಪುಸ್ತಕಪ್ರೀತಿ’

ಕಿರಣ ವಲ್ಲೇಪುರೆ

ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ, ಅದನ್ನು ತಮ್ಮ ಬದುಕು ಮತ್ತು ಬರಹಗಳಲ್ಲಿ ಮೈಗೂಡಿಸಿಕೊಂಡಿರುವ ಪ್ರೊ. ಎಚ್. ಟಿ. ಪೋತೆ ಸರ್ ಅವರು ಡಾ. ಬಿ. ಆರ್. ಅಂಬೇಡ್ಕರ್ ಪುಸ್ತಕಪ್ರೀತಿ ಎನ್ನುವ ಈ ಕೃತಿಯನ್ನು ಬರೆದಿದ್ದಾರೆ. ಪೋತೆ ಸರ್ ಅವರು ಈ ಕೃತಿಯಲ್ಲಿ ಅಂಬೇಡ್ಕರ್ ಅವರಿಗಿದ್ದ ಅಗಾಧವಾದ ಪುಸ್ತಕಪ್ರೀತಿಯನ್ನು ಹಾಗೂ ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ವ್ಯಕ್ತಿತ್ವಗಳನ್ನು ಮತ್ತು ಅಂಬೇಡ್ಕರ್ ಅವರ ದಾರ್ಶನಿಕ ವಿಚಾರಗಳನ್ನು ಇಲ್ಲಿ ದಾಖಲಿಸಿದ್ದಾರೆ.

ಬಡತನದಿಂದ, ತಳಸಮುದಾಯದಿಂದ ನೊಂದು-ಬೆಂದು ಬಂದಂತಹ ಅಂಬೇಡ್ಕರ್ ಅವರು ಓದುವುದನ್ನೇ ಸಾಧನವನ್ನಾಗಿಸಿಕೊಂಡು, ಜ್ಞಾನಿಯಾಗಿ ಭಾರತದ ಸಂವಿಧಾನದ ಮೂಲಕ ದೇಶದ ಬಡವರಿಗೆ, ತಳಸಮುದಾಯದವರಿಗೆ, ಮಹಿಳೆಯರಿಗೆ ಬೆಳಕಾದದ್ದು ಒಂದು ಇತಿಹಾಸ ಮತ್ತು ವಾಸ್ತವವೂ ಆಗಿದೆ. ಅಂತಹ ಮಹಾನ್ ವ್ಯಕಿಗಿದ್ದ ಅಪಾರವಾದ ಪುಸ್ತಕಪ್ರೀತಿ ಕುರಿತು ಈ ಕೃತಿ ವಿವರಿಸುತ್ತದೆ.

ಪುಸ್ತಕ ಎಂದರೆ ಅಂಬೇಡ್ಕರ್ ಅವರಿಗೆ ಪಂಚಪ್ರಾಣ, ಅದೊಂದು ಸಂಪತ್ತಾಗಿತ್ತು. ಕಡುಬಡತನ ಕುಟುಂಬದಿಂದ ಬಂದಂತಹ ಅಂಬೇಡ್ಕರ್ ಅವರಿಗೆ, ಅವರ ಆರಂಭಿಕ ದಿನಗಳಲ್ಲಿ ಪುಸ್ತಕಗಳನ್ನು ಖರಿದಿಸುವುದು ಸಹ ಕಷ್ಟದ ಸಂಗತಿಯಾಗಿತ್ತು. ಆದರೆ ಆಸಕ್ತಿ ಎನ್ನುವಂತದ್ದು ಕಷ್ಟವನ್ನೂ ಮೀರಿ ಮುನ್ನಡೆಸುತ್ತದೆ. ಪುಸ್ತಕವನ್ನು ಓದುವುದರಲ್ಲಿ ಅಂಬೇಡ್ಕರ್ ಅವರಿಗಿದ್ದ ಅಪಾರವಾದ ಆಸಕ್ತಿಯನ್ನು ಗಮನಿಸಿ ಅವರ ತಂದೆ ರಾಮಜಿ ಸಕ್ಪಾಲ್ ಅವರು ಮನೆಯಲ್ಲಿನ ಆಭರಣಗಳನ್ನು ಒತ್ತೆ ಇಟ್ಟು, ಕೆಲವೊಮ್ಮೆ ಅವುಗಳನ್ನು ಮಾರಿ ಅಂಬೇಡ್ಕರ್ ಅವರಿಗೆ ಪುಸ್ತಕಗಳನ್ನು ಖರಿದಿಸಿಕೊಟ್ಟದ್ದು ಒಬ್ಬ ತಂದೆಯಾಗಿ ಅವರು ಮಾಡಿದ ದೊಡ್ಡ ಕೆಲಸ.

ಖರೀದಿಸಿದ ಪುಸ್ತಕಗಳನ್ನು ಓದಿ ಕರಗತಮಾಡಿಕೊಂಡು ಅಂಬೇಡ್ಕರ್ ಅವರು ಅಪಾರವಾದ ಜ್ಞಾನವನ್ನು ಸಂಪಾದಿಸಿದ್ದರು. ಅನೇಕ ಪುಸ್ತಕಗಳನ್ನು ಸಂಗ್ರಹಿಸಿ ಮನೆಯಲ್ಲಿಯೇ ಗ್ರಂಥಾಲಯದಲ್ಲಿರುವಷ್ಟು ಪುಸ್ತಕಗಳು ಸಂಗ್ರಹವಾಗಿದ್ದವು. ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಅವರು ಸಂಗ್ರಹಿಸಿದ್ದು ವಿಷೇಶ. ಅವರ ಪುಸ್ತಕಪ್ರೀತಿ ಅಪಾರವಾದದ್ದು.

ಪುಸ್ತಕಗಳ ಕುರಿತು ಅವರು ಹೇಳುವಂತೆ ‘ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ ಊಳಿದ ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ. ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ.’ ಎಂಬ ಅವರ ಮಾತು ಮಹತ್ವದ್ದಾಗಿದೆ.

ಅಂಬೇಡ್ಕರ್ ಅವರ ಪುಸ್ತಕಪ್ರೀತಿಯ ಜೋತೆಗೆ ಈ ಕೃತಿಯಲ್ಲಿ ಅಂಬೇಡ್ಕರ್ ಅವರನ್ನು ಪ್ರಭಾವಿಸಿದ ತಂದೆ ರಾಮಜೀ ಸಕ್ಪಾಲ್, ಬುದ್ಧ, ಜೋತಿಭಾ ಫುಲೆ, ಸಯ್ಯಾಜಿರಾವ್ ಗಾಯಕವಾಡ, ಛತ್ರಪತಿ ಶಾಹೂ ಮಹಾರಾಜ ಮುಂತಾದವರ ಕುರಿತ ವಿವರಗಳು ಇವೆ. ಅಂಬೇಡ್ಕರ್ ಅವರ ದಾರ್ಶನಿಕ ವಿಚಾರಗಳನ್ನು ಸಹ ಪೋತೆ ಸರ್ ಅವರು ಇಲ್ಲಿ ದಾಖಲಿಸಿದ್ದಾರೆ. ಅಲ್ಲದೇ ಕಾರ್ಮಿಕನ ಮಗನಾಗಿ ಹುಟ್ಟಿ ತನ್ನ ಪರಿಶ್ರಮದಿಂದ ದೇಶದ ನಾಯಕನಾಗಿ ಬೇಳೆದ ಮಲ್ಲಿಕಾರ್ಜುನ ಖರ್ಗೇ ಅವರ ಕುರಿತ ವಿವರಗಳನ್ನು ಒಳಗೊಂಡ ಒಂದು ಲೇಖನ ಈ ಕೃತಿಯಲ್ಲಿದೆ.

ಈ ಮೇಲಿನ ವಿಷಯಗಳ ಜೋತೆಗೆ ಬುದ್ಧ-ಬಸವ ತೋರಿದ ತಳಾದಿ ಪ್ರೀತಿ ಕುರಿತು, ಚಂದ್ರಪ್ರಸಾದ ತ್ಯಾಗಿ ಅವರ ಕುರಿತು, ಜಗಜೀವನರಾಮ ಅವರ ಕುರಿತು, ನಂಬುಗೆ-ಮೂಢನಂಬುಗೆ, ದೇವರು-ಧರ್ಮ ಕುರಿತು, ದಲಿತ ಸಾಹಿತ್ಯ ವಿಮರ್ಶೆ ಕುರಿತು ಮತ್ತು ಸಂತ ನಾರಾಯಣ ಗುರು ಅವರ ಕುರಿತು ಪೋತೆ ಸರ್ ಅವರು ಇಲ್ಲಿ ತಮ್ಮ ವಿಚಾರಗಳನ್ನು ದಾಖಲಿಸಿದ್ದಾರೆ.

ಈ ಕೃತಿಯ ಪ್ರತಿ ಪುಟದ ಕೆಳಗೆ ಅಂಬೇಡ್ಕರ್ ಅವರ ಒಂದು ವೈಚಾರಿಕ ಹೇಳಿಕೆಯನ್ನು ದಾಖಲಿಸಿದ್ದು, ಕೃತಿಯ ಸೊಬಗನ್ನು, ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಈ ಕೃತಿಯನ್ನು ಓದುವ ಮೂಲಕ ನಾವು ಅಂಬೇಡ್ಕರ್ ಅವರ ಚಿಂತನೆಗಳ ಜೊತೆಗೆ ಪೋತೆ ಸರ್ ಅವರ ಚಿಂತನೆಗಳನ್ನೂ ಸಹ ಗ್ರಹಿಸಬಹುದು.

‍ಲೇಖಕರು Admin

December 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: