ರಹಮತ್‌ ತರೀಕೆರೆ ಕಂಡ ಹಸನ್ ನಯೀಮ್ ಸುರಕೋಡರು…

ರಹಮತ್‌ ತರೀಕೆರೆ

ನಿನ್ನೆ, ಸದಾ ಎಲೆಮರೆಯಲ್ಲೇ ಇರುವ ಹೂವಿನಂತಹ ಲೇಖಕ ಹಸನ್ ನಯೀಮ್ ಸುರಕೋಡರ ಹುಟ್ಟುಹಬ್ಬ. ಈ ಹೊತ್ತಲ್ಲಿ ಅವರ ಅನುವಾದ ಮತ್ತು ಬರೆಹಗಳಲ್ಲಿ ಪ್ರೇಮತತ್ವವು ಹೇಗೆ ಮುಖ್ಯವಾಗಿದೆ ಎಂದು ನೆನೆಯಲು ಬಯಸುತ್ತೇನೆ.

ಸುರಕೋಡರು ಕನ್ನಡಿಸಿದ ಸಜ್ಜಾದ್ ಜಾಹಿರ್ ಕಾವ್ಯ, ಮಂಟೂ ಕಥೆಗಳು, ಅಮೃತಾ ಪ್ರೀತಂ ಆತ್ಮಕಥೆ, ಸಾರಾಶಗುಫ್ತಾ ಎಂಬ ಕವಯಿತ್ರಿಯ ಜೀವನ ಚರಿತ್ರೆ, ಲೋಹಿಯಾರ `ಜಾತಿಪದ್ಧತಿ’ – ಎಲ್ಲದರಲ್ಲೂ ಈ ತತ್ವವಿದೆ. ಸಜ್ಜಾದ್ ಕುರಿತ ಅವರ ಕೃತಿ `ಪ್ರೇಮಲೋಕದ ಮಾಯಾವಿ’. ಕನ್ನಡದಲ್ಲಿ ಪ್ರೇಮವನ್ನು ಮುಖ್ಯ ಆಶಯ ಮತ್ತು ದರ್ಶನವಾಗಿಸಿಕೊಂಡ ಇನ್ನೊಬ್ಬ ಲೇಖಕರೆಂದರೆ, ಪಂಡಿತ ತಾರಾನಾಥರು. ಅವರ ಆಶ್ರಮದ ಹೆಸರು `ಪ್ರೇಮಾಯತನ’. ಸಾಮಾನ್ಯವಾಗಿ ಪ್ರೇಮವನ್ನು ತತ್ವವಾಗಿಸಿಕೊಂಡ ಲೇಖಕರು, ಧರ್ಮ ರಾಷ್ಟ್ರನಿಷ್ಠೆ ಜಾತಿ ಭಾಷೆಗಳ ಹೆಸರಲ್ಲಿ ಮನುಷ್ಯರನ್ನು ವಿಭಜಿಸುವ ಸಿದ್ಧಾಂತಗಳನ್ನು ಒಪ್ಪುವುದಿಲ್ಲ.

ಸುರಕೋಡರು ತಮ್ಮ ವ್ಯಕ್ತಿತ್ವದ ಭಾಗವಾಗಿ ಪ್ರೇಮತತ್ವವನ್ನು ಜೋಡಿಸಿಕೊಂಡಿದ್ದು ಉತ್ತರ ಭಾರತದ ಪ್ರಗತಿಶೀಲ ಚಳುವಳಿಯಿಂದ. ಸಾಮಾಜಿಕವಾಗಿ ಬ್ರಾಹ್ಮಣ ಆಯಾಮದಿಂದ ಕೂಡಿದ ಕನ್ನಡದ ಪ್ರಗತಿಶೀಲ ಚಳುವಳಿಗೆ ಹೋಲಿಸಿದರೆ ಇದು ಭಿನ್ನ. ಪಂಜಾಬ್ ಲಾಹೋರ್‌ಗಳಿಂದ ಶುರುವಾದ ಈ ಚಳುವಳಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರೂ ಸಮಾಜವಾದಿಗಳೂ ಎಡಪಂಥೀಯರೂ ಇದ್ದರು. ಇವರು ಜೀವವನ್ನೇ ಪಣವಾಗಿಟ್ಟು ಬದುಕಿ ಬರೆದವರು. ಇವರು ಪ್ರಕಟಿಸುತ್ತಿದ್ದ ಪತ್ರಿಕೆ `ಪ್ರೀತಲಡಿ’. ಇವರ ಪ್ರಯೋಗಗಳಲ್ಲಿ ಅಮೃತಸರದ ಬಳಿಕ ಕಟ್ಟಿದ ಪ್ರೀತನಗರವೂ ಒಂದು.

ಇದು ಆಧ್ಯಾತ್ಮಿಕ ಹಸಿವುಳ್ಳವರು ದೇಶ ಜಾತಿ ಧರ್ಮಗಳ ಗಡಿಯಿಲ್ಲದೆ ಬದುಕಲು ಅರವಿಂದರು ಪಾಂಡಿಚೇರಿಯಲ್ಲಿ ಕಟ್ಟಿದ `ಅರೊವಿಲ್ಲ’ ಗ್ರಾಮದ ಪ್ರಯೋಗಕ್ಕೆ ಹತ್ತಿರುವಾದುದು. ಅಮೃತಾ ಪ್ರೀತಂ, ಸಜ್ಜಾದ್ ಜಾಹಿರ್, ಫೈಜ್ ಅಹಮದ್, ಕೆ. ಎ. ಅಬ್ಬಾಸ್ ಮುಂತಾದವರು ಸ್ವತಃ ದೇಶವಿಭಜನೆಯ ದುರಂತಗಳನ್ನು ಕಂಡವರು; ಮತಧರ್ಮಕ್ಕಾಗಿ ಜನರನ್ನು ಸೀಳುವ ಸಿದ್ಧಾಂತ ಮತ್ತು ರಾಜಕಾರಣವನ್ನು ಒಪ್ಪದವರು; ರಾಷ್ಟ್ರ, ಧರ್ಮ ಹಾಗೂ ಜಾತಿಯ ಸರಹದ್ದುಗಳಾಚೆ ಇರುವ ಮಾನವೀಯ ಸಂಬಂಧ ಚಿತ್ರಿಸಿದವರು; ನೊಂದವರ ಪರ ನಿಲ್ಲುವುದು ಕಲೆಯ ಗುರಿಯೆಂದು ಭಾವಿಸಿದವರು. ಇಂತಹ ಮಾನವತೆಯ ವಕ್ತಾರರನ್ನೇ ಸುರಕೋಡರು ಮುದ್ದಾಮಾಗಿ ಅನುವಾದಕ್ಕೆ ಆರಿಸಿಕೊಂಡರು.

ಸುರಕೋಡರ ಬರೆಹ ಮತ್ತು ತರ್ಜುಮೆಗಳಲ್ಲಿರುವ ಪ್ರೇಮತತ್ವದ ಇನ್ನೊಂದು ಮೂಲ, ಸೂಫಿಸಂ ಮತ್ತು ಉರ್ದುಸಾಹಿತ್ಯದಲ್ಲಿ ಅವಗಿರುವ ಸೆಳೆತದಲ್ಲಿದೆ. ಸೂಫಿಸಂ ದೈವದ ಹುಡುಕಾಟವನ್ನು ಪ್ರೇಮ(ಇಶ್ಕ್) ಪರಿಭಾಷೆಯಲ್ಲಿ ಮಾಡುತ್ತದೆ. ಅಲ್ಲಿ ಗುರುಶಿಷ್ಯ ಸಂಬಂಧಗಳೂ ಪ್ರೇಮದ ನುಡಿಗಟ್ಟಲ್ಲಿವೆ. ಸುರಕೋಡರು ಅನುವಾದಿಸಿದ ಬಹಳಷ್ಟು ಲೇಖಕರು ಸೂಫಿಸಂ ಪ್ರಭಾವಿತರು. ಅಮೃತಾ ಪ್ರೀತಂ, ಸೂಫಿಸಂತ-ಪಂಜಾಬಿ ಕವಿ ವಾರಿಸ್‌ಶಾ ಕುರಿತು ನೀಳ್ಗವಿತೆ ಬರೆದವರು. ಫೈಜ್ ಕವಿಯಾಗದಿದ್ದರೆ ಸೂಫಿ ಸಂತನಾಗುತ್ತಿದ್ದ ಎಂದು ಅವರ ಗೆಳೆಯರು ಹೇಳುತ್ತಿದ್ದರು.

ಫೈಜರ `ಉಠೇಗಾ ಅನಲ್‌ಹಖ್ ನಾರಾ ಜೋ ಮೈಭೀ ಹೂಂ ವೊ ತುಂ ಭೀ ಹೋ’ (ನಾನೇನಾಗಿರುವೆನೊ ಅದು ನೀನೂ ಆಗಿರುವಿ ಅನಲ್‌ಹಖ್ ಘೋಷವು ಮೊಳಗುತ್ತಿದೆ) ಎಂಬ ನುಡಿ, ಸೂಫಿದಾರ್ಶನಿಕ ಮನ್ಸೂರ್ ಹಲ್ಲಾಜ್ ಪ್ರತಿಪಾದಿಸಿದ ಅದ್ವಯ ದರ್ಶನದ ಪ್ರತಿಬಿಂಬ. ವಿರಹ-ಶೃಂಗಾರಗಳು ಪ್ರಮುಖವಾಗಿರುವ ಉರ್ದು ಗಜಲ್‌ನಲ್ಲಿ ಆಸ್ಥೆಯುಳ್ಳ ಸುರಕೋಡರು, ಅನೇಕ ಉರ್ದುಕವಿಗಳನ್ನು ಅನುವಾದಿಸಿದರು. ಉತ್ತರದ ಲೇಖಕರಿಗೆ ಪ್ರೇಮವನ್ನು ಜರೂರಿ ತತ್ವವಾಗಿಸಿದ್ದು ದೇಶವಿಭಜನೆ ಹಾಗೂ ಮತೀಯ ಗಲಭೆಗಳು. ಸುರಕೋಡರು ಮಂಟೂ ಕಥೆಗಳನ್ನು ಅನುವಾದಿಸಿದರು.

ಸಂಕಲನದ ಮುನ್ನುಡಿಯಲ್ಲಿ ‘ಮಾನವೀಯತೆಯ ಮೇಲೆ ಹಲ್ಲೆಯಾಗುತ್ತಿರುವಾಗ ಕಣ್ಣು ಮುಚ್ಚಿಕೊಂಡು ಕೈಕಟ್ಟಿಕೊಂಡು ಕುಳಿತುಕೊಳ್ಳುವುದು ಬರೀ ಹೇಡಿತನವಲ್ಲ. ಮಹಾ ಅಪರಾಧ. ಒಡೆದ ಮನಸ್ಸುಗಳನ್ನು ಬೆಸೆಯುವ ಆಶಯದ ಚಳುವಳಿಗಳನ್ನು ಬಲಪಡಿಸುವುದು ಅನಿವರ‍್ಯವಾಗಿದೆ. ಈ ನಿಟ್ಟಿನಲ್ಲಿ ಮಾನವತಾವಾದಿ ಮಂಟೂ ಅವರ ಕತೆಗಳ ಅನುವಾದ ನೆರವಾಗಬಲ್ಲದೆಂದು ಆಶಿಸುತ್ತೇನೆ’ ಎಂಬ ಆಶಯ ಪ್ರಕಟಿಸಿದರು.

ಧಾರ್ಮಿಕ ವಿಕಾರಗಳು ಮಾಡಿದ ಆಳವಾದ ಗಾಯಗಳೇ, ಮಾನವತೆ ಮತ್ತು ಪ್ರೀತಿಗಳನ್ನು ಸ್ವತಂತ್ರ ಭಾರತವನ್ನು ಕಟ್ಟುವ ಬುನಾದಿ ತತ್ವವನ್ನಾಗಿ ಸ್ವೀಕರಿಸಲು ಲೇಖಕರನ್ನು ಪ್ರೇರಿಸಿದವು. ಸುರಕೋಡರ ಪ್ರೇಮ ತಾತ್ವಿಕತೆಯನ್ನು ರೂಪಿಸುವಲ್ಲಿ ಉತ್ತರ ಕರ್ನಾಟಕದ ಕೂಡುಬಾಳಿನ ಸಂಸ್ಕೃತಿಯ ಪಾತ್ರವೂ ಇದೆ. ಅಲ್ಲಿನ ಮೊಹರಂ, ಕೃಷ್ಣಪಾರಿಜಾತ, ಕಂಪನಿ ನಾಟಕ ಹಾಗೂ ಸೂಫಿ ಪರಂಪರೆಗಳು ಮತಾತೀತವಾಗಿ ರೂಪುಗೊಂಡ ದಾರ್ಶನಿಕ ಮತ್ತು ಕಲಾಲೋಕಗಳು.

ಸುರಕೋಡರ ಗೆಳೆಯ ಬಳಗ ಹಿಂದೂ-ಮುಸ್ಲಿಂ ವಿಂಗಡಣೆಯ ಆಚೆಗೆ ಹರಡಿರುವುದನ್ನು ಅವರ ಮುನ್ನುಡಿಯ ಸ್ಮರಣೆಗಳು ಅರುಹುತ್ತವೆ. ಅಲ್ಲಿ ಅವರು ಗೆಳೆಯರನ್ನು `ಪ್ರೀತಿ’ `ಕರುಳಬಳ್ಳಿ’ಯ ನುಡಿಗಟ್ಟಿನಲ್ಲಿ ಕರೆಯುತ್ತಾರೆ. ವ್ಯಕ್ತಿಯಾಗಿ ಸುರಕೋಡರು ಒಬ್ಬ ಒಲುಮೆಯ ಜಲತುಂಬಿದ ಮಲಪಹಾರಿ ಹೊಳೆ.ಸುರಕೋಡರಿಗೆ ಧರ್ಮ ಮತ್ತು ಜಾತಿಗೆ ಅತೀತವಾಗಿರುವ ಗಂಡುಹೆಣ್ಣುಗಳ ಪ್ರೇಮವು ಸದಾ ಕಾಡಿದೆ. ಅವರು ಅನುವಾದಿಸಿದ ಸಾಹಿರ್, ದಲಿಪ್ ಅಮ್ರೋಜ್, ಸಾರಾ ಶಗುಫ್ತಾ, ಅಮೃತಾ ಪ್ರೀತಂ; ಅವರು ಚಿತ್ರಿಸುವ ಅಮ್ರೋಜ್ ಸೈಯದ್ ಮುಂತಾದವರು, ಧರ್ಮ ಮತ್ತು ಕುಟುಂಬಗಳ ಚೌಕಟ್ಟನ್ನು ಮುರಿದು ಪ್ರೇಮಿಸಿದವರು.

ಸುರಕೋಡರ ಬರೆಹಗಳಲ್ಲಿ ಲೈಲಾ ಮಜನೂ ರೂಪಕ ಮತ್ತೆಮತ್ತೆ ಬರುತ್ತದೆ. ಸ್ವತಃ ವೈಯಕ್ತಿಕವಾಗಿ ಸುರಕೋಡರು ತಮ್ಮ ಪರಿಸರದಲ್ಲಿರುವ ಧೀರಪ್ರೇಮಿಗಳ ಕಥೆಗಳನ್ನು ಬರೆದವರು. ಅವರು ಚಿತ್ರಿಸಿದ ಅಂತರ್‌ಧರ್ಮೀಯ ಪ್ರೇಮಿಗಳ ಬಾಳುವೆಯನ್ನು ನೋಡಲೆಂದೇ ನಾನೊಮ್ಮೆ ರಾಮದುರ್ಗಕ್ಕೆ ಹೋಗಿದ್ದುಂಟು. ಪ್ರೇಮಲೋಕದ ಕಥನಗಳನ್ನು ಬರೆಯಲು ಮತ್ತು ಅನುವಾದಿಸಲು ಅವರು ಕೋಮಲವಾದ ಭಾಷೆಯನ್ನು ರೂಪಿಸಿಕೊಂಡಿದ್ದಾರೆ. ಅಲ್ಲಿ “ಆಸೆಯೊಂದು ಮಾದ ಗಾಯ ಹಕ್ಕಳೆಗಟ್ಟಿ ಉದುರುತ್ತಿದೆ ಎನ್ನುವಂತೆ ತುಟಿಗೆ ಅಂಟಿಕೊಂಡಿತ್ತು’’ ಎಂಬ ಸಾಲುಗಳಿವೆ. ಈ ರಮ್ಯಭಾಷೆ, ಸಾಮಾಜಿಕ ವಾಸ್ತವಿಕತೆಯ ಸಂಕೀರ್ಣತೆಯನ್ನು ಕಾಣಿಸಲು ಕೆಲವೊಮ್ಮೆ ಅಡ್ಡಿಯೂ ಆಗಿದೆ.

ಸುರಕೋಡರ ಅನುವಾದಗಳು ಒಂದು ಬಗೆಯಲ್ಲಿ ತಾಯಂದಿರ ಕಥನಗಳು. ಈ ತಾಯಂದಿರು ಮಕ್ಕಳಿಗಾಗಿ ಲೋಕದ ಕಣ್ಣಲ್ಲಿ ಪ್ರಶ್ನಿತರಾಗುತ್ತಾರೆ. ಸಮಾಜ ಕಸಿದುಕೊಂಡ ಮಕ್ಕಳನ್ನು ಮರಳಿ ಪಡೆಯಲು ಸೆಣಸುತ್ತಾರೆ. ಮಕ್ಕಳಿಗೆ ತಮ್ಮ ತಾಯ್ತನದ ಮೂಲಕವೇ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಾರೆ. ಸಾರಾ ಶಗುಫ್ತಾಳನ್ನು ಲೋಕವು ಹುಚ್ಚಿ ಅಶ್ಲೀಲ ಲೇಖಕಿ ಎಂದು ದೂರಿದಾಗ, ತಾಯಿಯಾದವಳು ಆತುಕೊಳ್ಳುವ ಪರಿ ಗಮನಿಸಬೇಕು. ಸುರಕೋಡರ ಅನುವಾದಗಳು ಒಂದು ಬಗೆಯಲ್ಲಿ ತಾಯಂದಿರ ಹೋರಾಟದ ಕಥನಗಳು. ಸುರಕೋಡರ ಅನುವಾದಗಳಲ್ಲಿ ಬಿಕ್ಕಟ್ಟುಗಳನ್ನು ಹಾಯುವ ಮತ್ತು ಹಾಯ್ದರೂ ಮುರಿಯದ ಗೆಳೆತನಗಳ ಕಥನಗಳಿವೆ. ಅವುಗಳಲ್ಲಿ ಶಾಮ್-ಮಂಟೂ ಗೆಳೆತನವೂ ಸೇರಿದೆ. ಸಾರಾ-ಅಮೃತಾರ, ಅಮೃತಾ-ದಲೀಪಳ ಗೆಳೆತನಗಳೂ ಇಂತಹವೇ.

ಈ ಸ್ನೇಹಗಳು ಧರ್ಮಾತೀತ ಮನುಷ್ಯ ಸಂಬಂಧದ ಪರಿಣಾಮಗಳು. ಮುಸ್ಲಿಮರು ಲಸ್ಸಿ ಕುಡಿದ ಲೋಟಗಳನ್ನು ಪ್ರತ್ಯೇಕವಾಗಿಡುವ ಅಜ್ಜಿಯನ್ನು ಬಾಲಕಿ ಅಮೃತಾ ವಿರೋಧಿಸುವ ಪ್ರಕರಣವನ್ನು ಗಮನಿಸಬೇಕು. ಸುರಕೋಡರು ಅನುವಾದಿಸಿದ ಹೆಚ್ಚಿನ ಸಾಹಿತ್ಯವು ದೇಶವಿಭಜನೆಯ ದುರಂತ ಕುರಿತದ್ದು.

ಧರ್ಮ ಮತ್ತು ರಾಷ್ಟ್ರವಾದಗಳು ಮಸೆದುಕೊಟ್ಟ ಕತ್ತಿಯಿಂದ ಕಡಿದುಹೋದ ನಂಟುಗಳನ್ನು ಶೋಧಿಸುವಂತಹದು. ಕರಾಚಿ-ಲಾಹೋರ್‌ಗಳಲ್ಲಿ ಮುಸ್ಲಿಮರು ಸಿಖ್ಖರ ಮೇಲೆ ಮಾಡಿದ ಹಲ್ಲೆಯ ಕಥೆಗಳನ್ನು ಕೇಳುವಾಗ, ಶಾಮ್‌ಗೆ ಜೀವದ ಗೆಳೆಯ ಮಂಟೊನನ್ನು ಕೊಲ್ಲುವ ಆಲೋಚನೆ ಬರುತ್ತದೆ. ಆದರೆ ಹೀಗೆ ಹೇಳಿ ಗೆಳೆಯನ ಮನಸ್ಸನ್ನು ಮುರಿದ ಶಾಮ್ ತುಂಬ ಪರಿತಪಿಸುತ್ತಾನೆ. ತನ್ನನ್ನು ತ್ಯಜಿಸಿ ಹೋದ ಮಂಟೂನನ್ನು ಕಾಣಲು ಲಾಹೋರಿಗೆ ಹೋಗುತ್ತಾನೆ; ಹಣ ಕಳಿಸುತ್ತಾನೆ.

ಸುರಕೋಡರು `ರಸೀದಿ ತಿಕೀಟು’ ಅರಿಕೆಯಲ್ಲಿ ‘ಒಂದು ದೇಶದಲ್ಲಿ ಕೇವಲ ಮುಸಲ್ಮಾನರು ಹಾಗೂ ಇನ್ನೊಂದು ದೇಶದಲ್ಲಿ ಬರೀ ಹಿಂದೂಗಳಿಲ್ಲ. ಎರಡೂ ಕಡೆ ಮನುಷ್ಯತ್ವದಲ್ಲಿ ನಂಬಿಕೆಯುಳ್ಳವರಿದ್ದರು, ಎಪ್ಪತ್ತು ವರ್ಷಗಳ ನಂತರವೂ ಅಂಥ ನಂಬಿಕೆಯುಳ್ಳವರಿದ್ದಾರೆ. ಎರಡೂ ದೇಶದ ಜನತೆಯ ಹಿತದೃಷ್ಟಿಯಿಂದ ಕೋಮು ಸೌಹಾರ್ದ ನೆಲೆಗೊಳ್ಳಲೇಬೇಕು.. ಎರಡೂ ದೇಶದ ಜನತೆ ಪರಸ್ಪರ ಸೌಹಾರ್ದ ಸಂಬಂಧ ಬೆಳೆಸುವುದರಲ್ಲಿ ಆಸಕ್ತರಾಗಿದ್ದಾರೆ. ಆದರೆ ಎರಡೂ ದೇಶದ ಸರ್ಕಾರಗಳಿಗೆ ಅಧಿಕಾರದ ಗದ್ದುಗೆಯದೇ ಚಿಂತೆ. ಹೃದಯಹೀನ ಸರ್ಕಾರಗಳು ಜನ ಪರಸ್ಪರ ಹತ್ತಿರವಾಗುವುದನ್ನು ಸಹಿಸಿಕೊಳ್ಳುವುದಿಲ್ಲ’ ಎಂದು ವಿಷಾದಿಸುತ್ತಾರೆ.

ಸುರಕೋಡರು ಅನುವಾದಿಸಿದ ಲೋಹಿಯಾ ಕೂಡ, ನೆರೆದೇಶಗಳು ದ್ವೇಷವಿಲ್ಲದೆ ಬದುಕುವ ದಿನವನ್ನು ಕನಸಾಗಿ ಕಂಡವರು. ಪ್ರೇಮವನ್ನು ಒಂದು ತತ್ವವಾಗಿ ಪ್ರತಿಪಾದಿಸುವ ಯಾರೂ ದ್ವೇಷವನ್ನು ಎದುರಾಳಿ ಮಾಡಿಕೊಳ್ಳಲೇಬೇಕು. ಇಲ್ಲಿ ದ್ವೇಷತತ್ವ ಎಂದರೆ ಧಾರ್ಮಿಕ ನೆಲೆಯದ್ದು ಮಾತ್ರವಲ್ಲ, ಪುರುಷವಾದ-ಜಾತಿವಾದ-ಜನಾಂಗವಾದಗಳದ್ದು ಕೂಡ. ಸುರಕೋಡರು ಕನ್ನಡಿಸಿದ ಸಾರಾಶಗುಪ್ತಾಳ ಜೀವನ ಚರಿತ್ರೆಯು ಪುರುಷವಾದಿ ಕ್ರೌರ್ಯದ ಕಥನವಾದರೆ, ಲೋಹಿಯಾರ `ಜಾತಿಪದ್ಧತಿ’ ಜಾತಿಕ್ರೌರ್ಯದ ಕಥನ.

‘ಇಂದು ಮತ್ತೆ ಕೋಮು ಸಾಮರಸ್ಯ ಹದಗೆಡುತ್ತಿರುವಾಗ, ಮತ್ತೆ ಮತ್ತೆ ಅಮಾಯಕರು ಕೋಮುವಾದಿಗಳ ಕರಾಳ ಕೃತ್ಯಗಳಿಗೆ ಬಲಿಯಾಗುತ್ತಿರುವ ಸಂದರ್ಭದಲ್ಲಿ, ಮಂಟೂ ಕತೆಗಳು ನಾವು ಇತಿಹಾಸದಿಂದ ಪಾಠ ಕಲಿಯುತ್ತಿಲ್ಲವೆಂದು ಎಚ್ಚರಿಸುತ್ತಿವೆ. ಸಾಹಿತ್ಯ ಬದುಕಿನ ಕನ್ನಡಿಯೆನ್ನುವುದನ್ನು ಈ ಕತೆಗಾರ ಸಾಬೀತುಪಡಿಸಿದ್ದಾರೆ. ಆದರೆ ಈ ಕನ್ನಡಿ ಒಡೆದು ಚೂರಾಗಿದೆ. ಹೊಸ ಕನ್ನಡಿಯಲ್ಲಿ ಹೊಸ ಸಾಹಿತ್ಯದ ಪ್ರತಿಬಿಂಬ ಕಾಣುವುದನ್ನೇ ಎದುರು ನೋಡಬೇಕಿದೆಯೇನೋ? ಮಾನವೀಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮನಸ್ಸುಗಳು ಚಿಂತನೆಗೆ ತೊಡಗುವುದಕ್ಕಾಗಿ ಮಂಟೋರಂಥ ಕತೆಗಾರರನ್ನು ಓದುವುದು ಅನಿವಾರ್ಯ’ ಎಂದು ಸುರಕೋಡರು ಬರೆಯುತ್ತಾರೆ.

ಸುರಕೋಡರು ಭಾರತದ ಆರ್ದ್ರ ಮನುಷ್ಯತ್ವದ ಸಾಹಿತ್ಯವನ್ನು ಕನ್ನಡಿಗರಿಗೆ ಒದಗಿಸಿದರು-ಸುತ್ತಾಡಿ ತಂದ ಗುಟುಕನ್ನು ಮರಿಗಳಿಗೆ ಊಡುವ ಹಕ್ಕಿಯಂತೆ. ಆ ಗುಟುಕಿನಲ್ಲಿ ಪ್ರೇಮವು ಪ್ರಮುಖ ತತ್ವಾದರ್ಶವಾಗಿದೆ. ಅದು ಗಂಡುಹೆಣ್ಣಿನ ತಾಯಿ-ಮಕ್ಕಳ ಗೆಳೆಯರ ನೆಲೆಯಿಂದ ಹೊರಟು ಎರಡು ದೇಶಗಳ ಸಂಬಂಧಗಳಿಗೆ ವಿಸ್ತರಣೆ ಪಡೆಯುತ್ತದೆ.

ಎರಡು ದೇಶಗಳ ನಡುವೆ ರಾಜಕೀಯ ಗಡಿಗಳಾಚೆ ಸಾಹಿತ್ಯಕ ಮತ್ತು ಮಾನುಷ ಸಂಬಂಧಗಳ ವಿಸ್ತರಣೆಯನ್ನು ಆಶಿಸುತ್ತದೆ. ಸುರಕೋಡರು ಅನುವಾದಿಸಿದ ಮಂಟೂ, ಫೈಜ್, ವಾರಿಸಶಾ, ಅಮೃತಾ, ಸಜ್ಜಾದ್ ಹಾಗೂ ಸಾರಾ ಕೂಡ ದೇಶಾತೀತವಾಗಿ ಸಲ್ಲುವ ಲೇಖಕರಾಗಿದ್ದುದು, ಆಕಸ್ಮಿಕವಲ್ಲ.

‍ಲೇಖಕರು Admin

December 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: