ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರಣ ಭಟ್ ಹೊಸ ಕವಿತೆ – ಬೆಳ್ಳಿ ಬೆಟ್ಟದ ಹಾದಿ…

ಕಿರಣ ಭಟ್

ಬೆಳಗು ಬೆಳಗು ಚಂದ ಕನಸು
ಹೊಳೆವ ಬೆಳ್ಳಿ ಬೆಟ್ಟ
ಕಣ್ಣುಜ್ಜಿದರೆ ಕಿಟಕಿಯಾಚೆ
ಅದೇ ಬಿಳಿಯ ಘಟ್ಟ

ಪುಟ್ಟಿಗೋ ಬೆರಗು ಬೆರಗು
ಹತ್ತಬೇಕು ಬೆಟ್ಟ
ಬ್ಯಾಗೇರಿಸಿ ಹೊರಟುಬಿಟ್ಳು
ಪುಟ್ಟಿ ಫಟ್ ಫಟ್ಟ

ಬೆಳ್ಳಿ ಬೆಟ್ಟಕೊಂದೆ ದಾರಿ
ಸುತ್ತ ಹಸಿರು ಚಿಗುರು
ಹೂವಿನಿಂದ ಹೂವಿನೆಡೆಗೆ
ಚಿಟ್ಟೆ ಹಾರು ಹಾರು

ಗಗನದಲ್ಲಿ ಊದ್ದ ಉದ್ದ
ಬೆಳ್ಳಕ್ಕಿಯ ತೋರಣ
ತೋರಣವನು ಹೊಳೆಸುವಂತೆ
ಎಳೆಯ ಸೂರ್ಯ ಕಿರಣ

ಪುಟ್ಟಿಯದೋ ಪುಟ್ಟ ಕಾಲು
ಪುಟ್ಟ ಪುಟ್ಟ ಹೆಜ್ಜೆ
ನಡೆಯ ಲಯಕೆ ತಾಳದಂತೆ
ಪುಟ್ಟಿ ತೊಟ್ಟ ಗೆಜ್ಜೆ

ಅರ್ಧ ಹಾದಿ ನಡೆದಾಗಲು
ಸುಸ್ತು ಬಳಲಿ ಬರಲು
ತಿರುವಿನಲ್ಲಿ ಕಂಡಿತಾಗ
ಹಳೆಯ ಬಿದಿರು ಗುಡಿಸಲು

ಬಿಳಿಯ ಹೂವ ರಾಶಿ ನಡುವೆ
ಬೆಳ್ಳಿ ತಲೆಯ ಅಜ್ಜಿ
ಪುಟ್ಟಿಗೆಂದು ಕೊಟ್ಟಳಾಕೆ
ಹಣ್ಣು ಹಣ್ಣು ಉಜ್ಜಿ

ಹಣ್ಣು ತಿಂದು ನೀರು ಕುಡಿದು
ಮುಂದುವರಿದ ಪಯಣ
ಎದುರಿಗಿದೋ ಕಾಣುತಿದೆ
ಮಿರುಗು ಬೆಳ್ಳಿ ‘ಯಾಣ’

ಪುಟ್ಟಿಯೀಗ ತುತ್ತ ತುದಿಗೆ
ಆಹಾ! ತಂಪು ಗಾಳಿ
ಮುತ್ತನಿಡುವ ತುಂಟ ಮೋಡ
ಚುಮ್ಮು ಚುಮ್ಮು ಚಳಿ ಚಳಿ

ಕೆಳಗೆ ನೋಡೆ ಮೋಡದರಳೆ
ಇನ್ನೂ ಕೆಳಗೆ ಊರು
ಆಟಿಗೆಯ ಬೊಂಬೆಯಂತೆ
ವೆನೆಯ ಸೂರು ಸೂರು

ಬೆಳ್ಳಿ ಬೆಟ್ಟ ಹೊಳೆವ ಕಾಡು
ಕುಣಿ ಕುಣಿದಿದೆ ಮನಸು
ಎಷ್ಟು ಬೇಗ ಆಗಿ ಹೋಯ್ತು
ಪುಟ್ಟಿ ಕನಸು ಕನಸು

‍ಲೇಖಕರು Admin

7 February, 2022

2 Comments

  1. ಕಿರಣ್ ಭಟ್

    ಧನ್ಯವಾದಗಳು ‘ಅವಧಿ’

  2. ವಾಸುದೇವ ಶರ್ಮಾ

    ಚೆನ್ನಾಗಿದೆ.
    ವೆನೆಯ ನನಗೆ ಹೊಸ ಪದ. ಏನು ಹಾಗೆಂದರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading