ನಾಗರಾಜ್ ಹರಪನಹಳ್ಳಿ
ಅಲ್ಲಿ
ನೀ ಅಂಗಳದ ಕಸ ಗುಡಿಸಿ, ನೆಲಕ್ಕೆ ನೀರಾಕಿ,ಅಂಗಳದ ತುಳಸಿಗೆ ಮನದಲ್ಲಿ
ಕೈ ಮುಗಿದು
ಆಕಾಶ ದಿಟ್ಟಿಸಿ, ಗುಬ್ಬಚ್ಚಿ ಚಿಲಿಪಿಲಿಯ ಕಿವಿಯೊಳಗೇ ಸಿಕ್ಕಿಸಿಕೊಂಡು
ಮನುಷ್ಯರ ಜಂಜಾಟವ ಒಳಗೊಳಗೆ ನೆನೆದು
ಇನಿಯ ದನಿ ನೆನಪಿಸಿಕೊಂಡು
ಉಲ್ಲಾಸಗೊಂಡಿರಬಹುದು…
ಚಹಾಕ್ಕೆ ಒಲೆಯಿಟ್ಟು
ಸಕ್ಕರೆ ಮೌಂಟನ್ ಮಿಸ್ಟ ಬೆರೆಸಿ
ಟೀ ಕುಡಿಯಲು
ಅದರ ಎಂಜಲ ತುಟಿ ತಾಗಿದ ಒಂದೇ ಕಪ್ ಜೊತೆ ಅವನಿರಬೇಕಿತ್ತು ಎಂದು
ಅಂದುಕೊಂಡಿರಬಹುದು
ಟಿಫಿನ್ ಮುಗಿಸಿ, ಒಂದು ಬೆಚ್ಚಗಿನ ಸ್ನಾನ ಮುಗಿಸಿ, ಸೀರೆಯುಟ್ಟು,
ಹಣೆಗೊಂದು ಬಿಂದಿಯಿಟ್ಟು
ಕನ್ನಡಿಯ ಮುಂದೆ ನಿಂತು ಬೆರಗಿನ ಸೆರಗ ಸರಿಪಡಿಸಿಕೊಳ್ಳುವಾಗ
ನೆರಿಗೆಯಲ್ಲಿ ನಾ ನಕ್ಕಿದ್ದು ನೆನಪಾಗಿರಬಹುದು
ಇಲ್ಲಿ
ಮೊಬೈಲ್ ಹಿಡಿದು ನಿನ್ನ ಗುಡ್ಮಾರ್ನಿಂಗ್ ಇನಿಗಾಗಿ ಕಾಯುವ ನಾನು
ನಿನ್ನ ಎಲ್ಲಾ ಅಂದುಕೊಳ್ಳುವುದ
ಮನದ ಭೂಮಿಕೆಯಲ್ಲಿ ದಿನವೂ ಬಿತ್ತಿ
ಬೆಳೆಯುತ್ತೇನೆ
ಮುಂಗಾರಿನ ಮಳೆ
ಹಿಂಗಾರಿನ ಅಕಾಲಿಕ ಮಳೆಯ ಹಿಡಿದಿಟ್ಟು, ಚಳಿಗೆ ನಿನ್ನ ಮಧುರ ನೆನಪುಗಳ
ಕೌದಿ ಒದಿಸುತ್ತೇನೆ
ಬೇಸಿಗೆಗೆ ದಂಡೆಯಲ್ಲಿ ವಿರಹ ಕಾಪಿಟ್ಟು
ಮತ್ತೆ ವಸಂತಕ್ಕೆ ಕಾಯುತ್ತೇನೆ
ಹಾಗೂ
ಇಲ್ಲಿ ನಿನ್ನ ಧ್ಯಾನಿಸುತ್ತೇನೆ
0 ಪ್ರತಿಕ್ರಿಯೆಗಳು