ಕಾಸು ಕುಡಿಕೆ: ಗುರುಗುಂಟಿರಾಯರಿಗೆ ಮಸಾಲೆದೋಸೆ-ಕಾಫಿ

ಕಾಸು ಕುಡಿಕೆ -15 When you feel that the risks are at the minimum, over confidence takes over and precautions are forgotten – Ian Macfarlane ರಿಸ್ಕ್ ಕನಿಷ್ಟ ಎಂಬ ಭಾವನೆ ಬಂದಾಗ ಹುಚ್ಚು ಧೈರ್ಯ ಹೆಚ್ಚಾಗಿ ಎಚ್ಚರಿಕೆಗಳು ಮರೆಯಾಗುತ್ತವೆ – ಇಯಾನ್ ಮ್ಯಾಕ್‌ಫ಼ರ್ಲೇನ್ ಗೂಳಿತ್ತಾಯರನ್ನು ಇಂಟ್ರೊಡ್ಯೂಸ್ ಮಾಡಿಯಾದ ಮೇಲೆ ಮಾರುಕಟ್ಟೆಯಲ್ಲಿ ಖಾಯಂ ಆಗಿ ಅವರ ವಿರುದ್ಧ ಕತ್ತಿ ಮಸೆಯುವ ಅವರ ಜಾನಿ ದುಷ್ಮನ್ ‘ಬಿಗ್ ಬೇರ್ ಭಲ್ಲೂಕರಾಯ’ರನ್ನು ಯಾವ ಮಸಾಲೆಯ ಜೊತೆ ಪರಿಚಯಿಸಬೇಕು ಎಂಬ ಬ್ಯಾಕ್‌ಗ್ರೌಂಡ್ ಯೋಚನೆಯಲ್ಲೇ ಮುಳುಗಿದ್ದು ಬಿಸಿನೆಸ್ ಸ್ಟಾಂಡರ್ಡ್ ಪತ್ರಿಕೆ (೮.೩.೨೦೧೦) ತಿರುವುತ್ತಿರುವಾಗ ಈ ಕೆಳಗಿನ ನ್ಯೂಸ್ ಐಟಂ ನನ್ನ ಗಮನ ಸೆಳೆಯಿತು: ಬಾಂಡ್ ಖಾತೆಯಲ್ಲಿ ಸ್ಟೇಟ್ ಬ್ಯಾಂಕಿಗೆ ೭೦೦ ಕೋಟಿ ರೂಗಳ ಪೆಟ್ಟು: ಇಲ್ಲಿ ಬಾಂಡ್ ಎಂದರೆ ಜೇಮ್ಸ್ ಬಾಂಡ್ ಅಲ್ಲ, ಇಲ್ಲಿ ಬಾಂಡ್ ಅಂದರೆ ನಮ್ಮೆಲ್ಲರ ಚಿರಪರಿಚಿತ ಗುರುಗುಂಟಿರಾಯರ ಫ಼ೇವರಿಟ್ ಆದ ಸರಕಾರಿ ಗಿಲ್ಟ್ ಬಾಂಡ್.  ಸ್ಟೇಟ್ ಬ್ಯಾಂಕ್ ಸರಕಾರಿ ಗಿಲ್ಟ್ ಗಳಲ್ಲಿ ಮಾಡಿದ ಹೂಡಿಕೆಯಲ್ಲಿ ೭೦೦ ಕೋಟಿ ರೂಗಳ ನಷ್ಟವನ್ನನುಭವಿಸಿದೆ. (ಇದು ಕಳೆದವಾರ ವಿವರಿಸಿದ ಮಾರ್ಕ್-ಟು-ಮಾರ್ಕೆಟ್ ಆಧಾರದಲ್ಲಿ) ಕಾಕು-೩ ರಲ್ಲಿ ಸರಕಾರಿ ಬಾಂಡ್‌ಗಳ ಬಗ್ಗೆ ಮತ್ತು ಅದರಲ್ಲಿ ಅಡಕವಾಗಿರುವ ರಿಸ್ಕ್ ಬಗ್ಗೆ ರಾಯರೊಡನೆ ಹೋಟೆಲೊಂದರಲ್ಲಿ ಕುಳಿತು ಮಸಾಲೆ ದೋಸೆ ಚಪ್ಪರಿಸುತ್ತಾ ಚರ್ಚಿಸಿದ ಬಗ್ಗೆ ಹೇಳಿದ್ದೆ, ನಿಮಗೆ ನೆನಪಿರಬಹುದು. ನನ್ನ ಎಚ್ಚರಿಕೆಯ ಮಾತುಗಳಿಂದ ಆ ದಿನ ಅವರಿಗೆ ಮಸಾಲೆ ದೋಸೆ ಕೂಡಾ ರುಚಿಸದೆ ಹೋಗಿತ್ತು. ಸರಕಾರಿ ಬಾಂಡುಗಳು ಭದ್ರವೇ ಆದರೂ ಅದರಲ್ಲಿ ಹಣ ಹೂಡುವ ಮ್ಯೂಚುವಲ್ ಫಂಡ್‌ಗಳಲ್ಲಿ ಭಾರಿ ನಷ್ಟ ಕೂಡಾ ಹೇಗೆ ಉಂಟಾಗಬಹುದು ಎಂದು ವಿವರಿಸಿದ್ದು ಅವರ ಮೂಲಭೂತ ನಂಬಿಕೆಯನ್ನೇ ಅಲುಗಾಡಿಸಿತ್ತು. ತಮ್ಮ ದೃಢ ನಂಬಿಕೆಗಳು ಅಲುಗಾಡುವುದನ್ನು ಯಾರೂ ಇಷ್ಟ ಪಡುವುದಿಲ್ಲ- ಅದು ಸರಿಯಿರಲಿ, ತಪ್ಪಿರಲಿ! ತಮ್ಮ ಸ್ವಾಭಿಮಾನಕ್ಕೆ  ಪೆಟ್ಟು ಬಿದ್ದಂತೆ, ಅದನ್ನು ಅರಗಿಸುವುದು ಕಷ್ಟವಾಗಿ ರಾಯರು ಅಂದು ಅಲ್ಲಿಂದ ಬಿರಬಿರನೆ ಹೊರಟೇ ಹೋದ ಚಿತ್ರ ಇಂದಿಗೂ ನನ್ನ ಕಣ್ಣೆದುರು ‘Action replay’ ಆಗುತ್ತಿರುತ್ತದೆ. ನಮ್ಮ ಗುರುಗುಂಟಿರಾಯರಂತವರು ಹಲವರಿದ್ದಾರೆ. ಅವರು ಎಷ್ಟು ಹೇಳಿದರೂ ಕಿವಿಗೆ ಹಾಕಿಸಿಕೊಳ್ಳುವುದೇ ಇಲ್ಲ. ತಮ್ಮದೇ ತರ್ಕದಲ್ಲಿ ತಾವಿರುತ್ತಾರೆ. ‘ಸರಕಾರಿ ಸಾಲ ಪತ್ರ ಎಂದಾದ ಮೇಲೆ ರಿಸ್ಕ್ ಪ್ರಶ್ನೆ ಎಲ್ಲಿಂದ ಬರುತ್ತದೆ?’ ‘ಅವುಗಳಲ್ಲಿ ಹೂಡುವ ಬಾಂಡ್ ಫಂಡುಗಳಲ್ಲಿ ನಷ್ಟವಾಗುವುದಾದರೂ ಹೇಗೆ?’ ಎಂಬ ವಿತಂಡವಾದವನ್ನೇ ಚೂಯಿಂಗ್ ಗಮ್ಮಿನಂತೆ ಜಗಿಯುತ್ತಾ ಇರುತ್ತಾರೆ. ಸೇಫ಼್ಟಿ ಎಂಬ ಮಿಥ್ಯಾ ಭ್ರಮೆಗೆ ಬಲಿಯಾಗುತ್ತಾರೆ. ಒಂದೆಡೆ ಈ ರೀತಿ ಸೇಫ್ಟಿ ಎಂಬ ಭ್ರಮೆಗೆ ಬಲಿಯಾದ ಗುರುಗುಂಟಿರಾಯರಂತವರು ಇದ್ದರೆ ಇನ್ನೊಂದೆಡೆ ‘ದುಡ್ಡು ಮಾಡಬೇಕಾದರೆ ಶೇರು ಮಾರುಕಟ್ಟೆಯೇ ಸರಿ’ ಎಂಬ ಆಧುನಿಕ ಮೂಢನಂಬಿಕೆಯಲ್ಲಿ ಮುಳುಗಿರುವ ಗೂಳಿತ್ತಾಯರಂತಹ pseudo-ಪ್ರಗತಿಶೀಲರೂ ಇದ್ದಾರೆ. ಇಬ್ಬರದ್ದೂ ಅತಿರೇಕವೇ! ಮೇಲ್ನೋಟಕ್ಕೆ ಕಾಣುವ ಸೇಫ್ಟಿಯ ಕೆಳಗಡಗಿರಬಹುದಾದ ಕರಾಳ ಸತ್ಯವನ್ನೂ, ಪ್ರಗತಿಯೆಂಬ ಮಾಯೆಯ ಹಿಂದಿರಬಹುದಾದ ಕಠೋರ ಸತ್ಯವನ್ನೂ ಸರ್ವರೂ ಚೆನ್ನಾಗಿ ಅರಿತುಕೊಂಡೇ ಮುಂದಡಿಯಿಡಬೇಕೆಂಬುದು ನಮ್ಮ ಅಪೇಕ್ಷೆ. ಕಾಕು-೩ ರಲ್ಲಿ ವಿವರಿಸಿದಂತೆ ಬಾಂಡ್ ಫಂಡಿನಲ್ಲಿ ರಿಸ್ಕ್ ಇರುವುದು ಹೀಗೆ: ಸರಕಾರಿ ಗಿಲ್ಟ್ ಪತ್ರವಿರಲಿ, ಕಂಪೆನಿ ಡಿಬೆಂಚರ್ ಇರಲಿ, ವಿತ್ತ ಸಂಸ್ಥೆಗಳ ಬಾಂಡ್‌ಗಳೇ ಇರಲಿ, ಅವೆಲ್ಲವೂ ಒಂದು ನಿರ್ದಿಷ್ಟ ಬಡ್ಡಿದರ (ಕೂಪನ್ ರೇಟ್) ಗಳೊಂದಿಗೆ ಬಿಡುಗಡೆಯಾಗುತ್ತವೆ. ಅಮೇಲೆ ಅವುಗಳು ಸಾಲಪತ್ರಗಳ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಮ್ಯೂಚುವಲ್ ಫ಼ಂಡ್‌ಗಳು ಇದೇ ಮಾರುಕಟ್ಟೆಯಲ್ಲಿ ಈ ಬಾಂಡುಗಳನ್ನು ಕೊಡುತ್ತಾರೆ, ಕೊಳ್ಳುತ್ತಾರೆ. ಮಾರಾಟವಾಗುತ್ತವೆ ಅಂದಮೇಲೆ ಅದಕ್ಕೊಂದು ಮಾರುಕಟ್ಟೆಯ ಬೆಲೆ ಇರುತ್ತದಲ್ಲವೇ? ಪ್ರಚಲಿತ ಬಡ್ಡಿದರ ಇಳಿದಂತೆಲ್ಲ ಹಳೆಯ ಹೆಚ್ಚಿನ ಬಡ್ಡಿದರ (ಕೂಪನ್ ರೇಟ್) ಗಳುಳ್ಳ ಬಾಂಡುಗಳ ಬೆಲೆ ಮಾರುಕಟ್ಟೆಯಲ್ಲಿ ಏರುತ್ತವೆ. ಅದರಿಂದಾಗಿ ಬಡ್ಡಿ ದರ ಇಳಿದಂತೆಲ್ಲ ಹಳೆಯ ಬಾಂಡ್ ಫಂಡುಗಳ ಮೌಲ್ಯ ಅಥವ NAV ಹೆಚ್ಚಾಗುತ್ತಾ ಹೋಗುತ್ತದೆ. ಈ ರೀತಿಯಲ್ಲಿ ಇಳಿಮುಖ ಬಡ್ಡಿದರದ ಕಾಲದಲ್ಲಿ ಬಾಂಡ್ ಫಂಡುಗಳಿಗೆ ಸುಗ್ಗಿ. ೨೫% ಯಾಕೆ ೫೦% ಕೂಡಾ ಪ್ರತಿಫಲ ತೋರಿಸಬಹುದು. ಕಳೆದ ವರ್ಷ ರಿಸೆಶನ್ ಸಲುವಾಗಿ ಸರಕಾರವು ಬಡ್ಡಿದರವನ್ನು ಸತತವಾಗಿ ಇಳಿಸಿತ್ತು ಅಲ್ಲವೇ? ಹಾಗಾಗಿ ಈ ವರ್ಷ ಅಷ್ಟು ಜಾಸ್ತಿ ಪ್ರತಿಫಲ ಸಿಕ್ಕಿತು. ಬಾಂಡುಗಳಲ್ಲಿ ಪ್ರತಿಫಲ ಬರುವುದು ಅದರಲ್ಲಿ ನಮೂದಿಸಿದ ಕೂಪನ್ ರೇಟ್‌ನಿಂದ ಮಾತ್ರವಲ್ಲ; ಅದರ ಮಾರುಕಟ್ಟೆಯ ಸಧ್ಯದ ಬೆಲೆಯಿಂದಲೂ. ಮುಂದೊಂದು ದಿನ ಬಡ್ಡಿದರ ಏರುಮುಖವಾದಾಕ್ಷಣ ಬಾಂಡ್ ಫಂಡುಗಳು ಇಡೀ ಪ್ರಕ್ರಿಯೆ ಉಲ್ಟಾ ಆಗಿ NAV ಕಡಿಮೆಯಾಗಿ ನಷ್ಟ ತೋರಿಸಲು ಆರಂಭಿಸುತ್ತದೆ. ಜನರು ಹೂಡಿದ ಹಣ ಕಳೆದುಕೊಳ್ಳುತ್ತಾರೆ. ಬಾಂಡ್ ಫಂಡ್‌ಗಳಲ್ಲಿ ಲಾಸ್ ಬರುವುದು ಹೀಗೆ. ಹೌದು. ಈಗ ಅದೇ ಆಗತೊಡಗಿದೆ. ಜನವರಿಯ ಕ್ರೆಡಿಟ್ ಪಾಲಿಸಿಯಲ್ಲಿ ಆರ್.ಬಿ.ಐ ಯು ಹಣದ ಹರಿವಿಗೆ ಕಡಿವಾಣ ಹಾಕಿ  ಮುಂದಿನ ದಿನಗಳಲ್ಲಿ ಬದ್ದಿದರವು ಏರುವ ಸೂಚನೆ ನೀಡಿದೆ. ಅದರ ಸುಳಿವು ಸಿಗುತ್ತಲೇ ಬಾಂಡ್‌ಗಳ ಬೆಲೆಯಿಳಿಕೆ ಇದೀಗ ಆರಂಭವಾಗಿದೆ.  ಅಂದಿನ ಎಚ್ಚರಿಕೆ ಇಂದಿನ ಸತ್ಯವಾಗುತ್ತಿದೆ. ಸ್ಟೇಟ್ ಬ್ಯಾಂಕ್ ಸರಕಾರಿ ಬಾಂಡುಗಳಲ್ಲಿ ೭೦೦ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ. ಇದು ಒಂದು ಬ್ಯಾಂಕಿನ ಕತೆ. ಎಲ್ಲ ಬ್ಯಾಂಕುಗಳದ್ದೂ ಹೆಚ್ಚು ಕಡಿಮೆ ಇದೇ ಕತೆ. ಬ್ಯಾಂಕುಗಳು ದುಡ್ಡು ಕಳೆದುಕೊಂಡಾಗ ಅದು ಪರೋಕ್ಷವಾಗಿ ಡೆಪಾಸಿಟ್ ಇಟ್ಟವರನ್ನೋ ಅಥವ ಶೇರುದಾರರನ್ನೋ ಅಥವ ಇಬ್ಬರನ್ನೋ ತಟ್ಟದೆ ಇರದು. ಬಾಂಡುಗಳಲ್ಲಿ, ಡಿಬೆಂಚರುಗಳಲ್ಲಿ ಹೂಡಿದ ಮ್ಯೂಚುವಲ್ ಫಂಡ್ ಹೌಸ್‌ಗಳದ್ದೂ ಇದೇ ಅವಸ್ಥೆ. ಇಲ್ಲಿ ಫಂಡ್ ಹೌಸ್ ಕಳೆದುಕೊಳ್ಳುವುದು ಏನೂ ಇಲ್ಲ. ಕಳೆದುಕೊಳ್ಳುವುದು ಗುರುಗುಂಟಿರಾಯರಂತಹ ಹೂಡಿಕೆದಾರರು ಮಾತ್ರ. ಇದೀಗ ಆರಂಭವಷ್ಟೆ.  ಕ್ರಮೇಣ ಬಡ್ಡಿದರ ಏರಿದಂತೆಲ್ಲಾ ಈ ಸಮಸ್ಯೆ ಉಲ್ಬಣವಾಗುತ್ತದೆ. ಬಾಂಡ್ ಬೆಲೆಗೂ, ಬಡ್ಡಿದರಕ್ಕೂ ಇನ್ವರ್ಸ್ ಸಂಬಂಧ ಇದೆ. ಇದನ್ನು ಅರಿತಿರುವುದು ಅತಿ ಮುಖ್ಯ. ಕಳೆದ ವರ್ಷ ಬಡ್ಡಿದರ ಇಳಿದಾಗ ಬಾಂಡ್ ಫಂಡ್‌ಗಳು ಬೀಗಿದಂತೆ ಈಗ ಬಡ್ಡಿದರ ಏರಿದಾಗ ಅವುಗಳು ಕಮರುತ್ತಿವೆ. ವಿತ್ತ ಪತ್ರಿಕೆಗಳಲ್ಲಿ ಪ್ರತಿ ವಾರವೂ ಬಾಂಡ್ ಪ್ರತಿಫಲವನ್ನು ಗ್ರಾಫ್ ಮೂಲಕ ವಿವರಿಸುತ್ತಾರೆ. ಫಿಕ್ಸ್ಡ್ ಇನ್‌ಕಂ ಮತ್ತು ಬಾಂಡ್ ಫಂಡ್‌ಗಳಲ್ಲಿ ಹಣ ಹೂಡುವವರು ಅವುಗಳ ಮೇಲೆ ಯಾವತ್ತೂ ಒಂದು ಕಣ್ಣಿಡುವುದು ಒಳ್ಳೆಯದು. ಪ್ರತಿಯೊಂದು ಮ್ಯೂಚುವಲ್ ಫಂಡ್ ಜಾಹೀರಾತಿನಲ್ಲೂ ಶಾಸನ ವಿಧಿಸಿದ ಎಚ್ಚರಿಕೆ ಪ್ರಕಟವಾಗುತ್ತದೆ. ಅದರಲ್ಲಿ ‘Past performance is no guarantee of future results’ ಎಂದು ಸ್ಪಷ್ಟವಾಗಿ ಬರೆದೇ ಇರುತ್ತಾರೆ. ಆದರೇ ಇಡೀ ಜಾಹೀರಾತಿನ ಆಶಯವು, ಹಳೆಯ ಸಾಧನೆಯನ್ನು ಒಂದು ಕೋಷ್ಟಕದಲ್ಲಿ ಕೊಟ್ಟು ಅದರ ಮೂಲಕ ನಮ್ಮ ಬಾಯಿಯಲ್ಲಿ ನೀರೂರಿಸುವುದೇ ಆಗಿದೆ. ಇದೂ ಒಂದು ರೀತಿಯ  ವಿಪರ್ಯಾಸವೇ ಅಲ್ಲವೇ? ಆದರೂ ಪ್ರತಿಯೊಂದು ಸಾಧನೆಯೂ ಏರುತ್ತಾ ಹೋಗಿ ಅತ್ಯುತ್ತಮ ಸ್ಥಿತಿ ತಲಪಿ ಇನ್ನೇನು ಕುಸಿಯಬೇಕು ಅನ್ನುವ ಸ್ಥಿತಿಗೆ ತಲಪಿದಾಗ  ಅದರ ಹಳೆಯ ಸಾಧನೆಯನ್ನು ನೋಡಿಯೇ ಗರಿಷ್ಟ ಹೂಡಿಕೆ ಅದಕ್ಕೆ ಬರತೊಡಗುತ್ತದೆ. ಯಾವಾಗ ಆ ಸ್ಕೀಂನಿಂದ ಹೊರ ಬರಬೇಕೋ ಆವಾಗ ಅದಕ್ಕೆ ಜನ ಮುಗಿಬೀಳುತ್ತಾರೆ ಹಾಗೂ ಯಾವಾಗ ಅದನ್ನು ಪ್ರವೇಶಿಸಬೇಕೋ ಆವಾಗ ಅದರ ಸಾಧನೆ ಸರಿಯಿಲ್ಲ ಎಂದು ಜನ ಅದರತ್ತ ಹೋಗುತ್ತಿಲ್ಲ. ಫಂಡ್ ಹೌಸ್‌ಗಳು ಕೂಡಾ ಈ ಅಪನಂಬಿಕೆಯನ್ನು ಸರಿಪಡಿಸುವ ಬದಲು ಅದೇ ಅಪನಂಬಿಕೆಯ ಪೂರ್ತಿ ಲಾಭವನ್ನು ಪಡೆಯುತ್ತವೆ. ಮಾರುಕಟ್ಟೆ ಉಚ್ಚ್ರಾಯದಲ್ಲಿರುವಾಗ ಗರಿಷ್ಟ ಜಾಹೀರಾತುಗಳು! ಕುಸಿದು ಕನಿಷ್ಟದಲ್ಲಿರುವಾಗ ಜಾಹೀರಾತೇ ಇರುವುದಿಲ್ಲ. ಜಾಹೀರಾತಿನಲ್ಲಿ ಹಳೆಯ ಸಾಧನೆಯಲ್ಲಿ ಮೈನಸ್ ಅಂಕಿಗಳನ್ನು ತೋರಿಸಲು ಯಾರೂ ಇಷ್ಟಪಡುವುದಿಲ್ಲ. ಅವುಗಳು ಪ್ಲಸ್ ಆಗುವ ತನಕ ಕಾದು ಜಾಹೀರಾತುಗಳು ಆರಂಭಗೊಳ್ಳುತ್ತವೆ. ಈ ಕ್ರಮ ಅವರ ಬಿಸಿನೆಸ್ಸಿಗೆ ಒಳ್ಳೆಯದೇ ಆದರೂ ಒಬ್ಬ ಹೂಡಿಕೆದಾರನ ಹಿತದೃಷ್ಟಿಯಿಂದಲೂ ಒಳ್ಳೆಯದು ಎಂದು ಹೇಳುವಹಾಗಿಲ್ಲ. * * * * ಎಲ್ಲಿಂದಲೋ ಹೊರಟು ಎಲ್ಲಿಗೋ ತಲುಪಿದೆವು. ಇವತ್ತಿನ ಎಜೆಂಡಾ- ಗೂಳಿತ್ತಾಯರ ಜಾನಿ ದುಶ್ಮನ್ ಭಲ್ಲೂಕರಾಯರನ್ನು ಪರಿಚಯಿಸುವ ಕಾರ್ಯಕ್ರಮ, ಈ ಬಾರಿ ಆಗಲೇ ಇಲ್ಲ. ಸರಿ, ಮುಂದಿನ ವಾರ ನೋಡೋಣ. ಕೆಲವು ಕೆಲಸಗಳು ಹಾಗೇನೇ. ಆತ್ಯಾವಶ್ಯಕ ಹಾಗೂ ಅರ್ಜೆಂಟ್. ಬಾಂಡ್ ಬೆಲೆಯಿಳಿಕೆಯ ಸುದ್ದಿ ನೋಡಿದ ಕೂಡಲೇ ಗುರುಗುಂಟಿರಾಯರ ನೆನಪುಗಳೆಲ್ಲವೂ ಬಂದವು. ಅವರನ್ನು ಇದರ ಬಗ್ಗೆ ಎಚ್ಚರಿಸುವುದು ಒಳಿತು. ಹೌದು. ಈ ಸುದ್ದಿಯ ಬಗ್ಗೆ ಅವರಿಗೆ ತಿಳಿಹೇಳಲೇ ಬೇಕು. ಆದರೆ, ಹಾಗೇ ಸುಮ್ಮನೇ ಫೋನ್ ಮಾಡಿ ವಿವರಣೆ ನೀಡಿದರೆ ಸರಿಯಾಗಲಿಕ್ಕಿಲ್ಲ. ಮುಖತಃ ಕಂಡು ಮಾತನಾಡಿ ಸಾವಕಾಶವಾಗಿ ವಿವರಿಸಬೇಕು. ಕಳೆದ ಬಾರಿಯಂತೆ ಮಸಾಲೆ ದೋಸೆ ಮೆಲ್ಲುತ್ತಲೇ ಯಾಕೆ ಚರ್ಚಿಸಬಾರದು?  ಈ ಬಾರಿ ನಾನೇ ಆಹ್ವಾನಿಸಿ ನಾನೇ ಯಾಕೆ ಅವರಿಗೆ ದೋಸೆ-ಕಾಫಿ ಕೊಡಿಸಬಾರದು? ಕಿಸೆಯಿಂದ ಸೆಲ್‌ಫೋನ್ ತೆಗೆದೆತ್ತಿಕೊಂಡು ಗುರುಗುಂಟಿರಾಯರ ಹೆಸರಿಗಾಗಿ ತಡಕಾಡತೊಡಗಿದೆ. . . . . * * * * ಕಳೆದ ವಾರದ ಫ್ಯೂಚರ್ಸ್ ಟ್ರೇಡಿಂಗ್ ಬಗ್ಗೆಗಿನ ಕಾಕು ಪ್ರಕಟವಾಗುವ ಒಂದು ದಿನ ಮೊದಲೇ ಅಂತಹ ಸಮೂಹ ನಾಶಕ ಶಸ್ತ್ರಾಸ್ತ್ರಗಳ ವಿಪತ್ತನ್ನು ತಗ್ಗಿಸಲು ಅವುಗಳನ್ನು ಡೆಲಿವರಿ ತೆಗೆದುಕೊಳ್ಳುವ ಸೌಲಭ್ಯವನ್ನು  ಸರಕಾರ ನೀಡುವ ಸಂಭವ ಇದೆಯೆಂಬ ವರದಿ ವಿತ್ತೀಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇದು ಒಂದು ಅತ್ಯಂತ ಸ್ವಾಗತಾರ್ಹ ಹೆಜ್ಜೆ. ಫ್ಯೂಚರ್ಸ್ ಟ್ರೇಡಿಂಗ್‌ನ ವಿಷದ ಹಲ್ಲು ಕೀಳುವ ಸಮಯ ಎಂದೋ ಬಂದಾಗಿತ್ತು. ಬೆಲೆಯ ಸ್ಥಿರತೆಗೆಂಬ ಅಫೀಶಿಯಲ್ ನೆಪದಿಂದ ಇಂದಿಗೂ ಜೀವಂತವಾಗಿದ್ದು ಬರೇ ಜೂಜಾಟಕ್ಕಾಗಿ ಬಳಸಲ್ಪಡುವ ಈ ಫ್ಯೂಚರ್ಸ್ ಟ್ರೇಡಿಂಗ್ ಸಾಕಷ್ಟು ಜನರನ್ನು ಇಗಲೇ ವಿನಾಶದಂಚಿಗೆ ಒಯ್ದಿದೆ. ಮಾರುಕಟ್ಟೆ ಕುಸಿದಾಗ ಡೆಲಿವರಿ ತೆಗೆದುಕೊಂಡು ಆಗುವ ಅವಗಡವನ್ನು ತಪ್ಪಿಸುವ ಅವಕಾಶವನ್ನು ಸರಕಾರ ಬೇಗನೇ ಕಲ್ಪಿಸಿಕೊಡಲಿ ಎಂದು ಹಾರೈಸುತ್ತೇವೆ. ಮಂಗಳೂರಿನ ಮಹಾಲಿಂಗ ಭಟ್ ಅವರು ಎಸ್.ಎಮ್.ಎಸ್ ಕಳುಹಿಸಿ ಗೂಳಿತ್ತಾಯರಿಗೆ ನಮಸ್ಕಾರ ತಿಳಿಸುವಂತೆ ಹೇಳಿದ್ದಾರೆ. ತಿಳಿಸಬಹುದು. ಆದರೆ ಸಮಸ್ಯೆ ಏನೆಂದರೆ, ಈ ಕಾಸು-ಕುಡಿಕೆಯ ದೆಶೆಯಿಂದ ಗೂಳಿತ್ತಾಯರನ್ನು ಇತ್ತೀಚಿನ ದಿನಗಳಲ್ಲಿ ಹಿಡಿಯುವವರೇ ಇಲ್ಲ ಎಂದಾಗಿದೆ.  ಪಬ್ಲಿಸಿಟಿಯ ಬೇಗೆಯಲ್ಲಿ ಬೀಗುತ್ತಿದ್ದಾರೆ. ಸಧ್ಯಕ್ಕೆ ಅವರು ಭಟ್ಟರಿಗೆ ಪ್ರತಿ ನಮಸ್ಕಾರ ಹೇಳುವ ಮೂಡಿನಲ್ಲಿಲ್ಲ. ಆ ಮೂಡು ಬರಬೇಕಾದರೆ ಮಾರ್ಕೆಟ್ ಒಂದೆರಡು ಸಾವಿರ  ಪಾಯಿಂಟುಗಳಷ್ಟಾದರೂ ಇಳಿದು ಅವರ ಕಿಸೆ ಸ್ವಲ್ಪ ಹಗುರಾಗಬೇಕು. ಎಲ್ಲಾ ‘ಶೇರು ಮಹಾತ್ಮೆ’ ಸಾರ್! ಏನು ಮಾಡುವುದು? ಅಲ್ಲಿಯವರೆಗೆ ಕಾಯೋಣ. ]]>

‍ಲೇಖಕರು avadhi

June 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: