ಕಾಸು ಕುಡಿಕೆ:‘ವಾರೆನ್ ಬಫೆ ಎಂಬ ಶೇರು ಗಾರುಡಿಗ’

ಕಾಸು ಕುಡಿಕೆ-23 -ಜಯದೇವ ಪ್ರಸಾದ ಮೊಳೆಯಾರ Price is what you pay, value is what you get . . . . . . . . . . Warren Buffet ನೀವು ಕೊಡುವುದು ಬೆಲೆ; ಕೊಳ್ಳುವುದು ಮೌಲ್ಯ. . . . . . . . . . . . . . . . . . ವಾರೆನ್ ಬಫೆ ಜಗತ್ತಿನ ಅತಿಶ್ರೀಮಂತ ವ್ಯಕ್ತಿ ಮೈಕ್ರೋಸಾಫ್ಟಿನ ಬಿಲ್ ಗೇಟ್ಸ್. ಅದು ಎಲ್ಲರಿಗೂ ಗೊತ್ತು. ಜಗತ್ತಿನ ಎರಡನೆಯ ಅತಿಶ್ರೀಮಂತ ವ್ಯಕ್ತಿ ವಾರೆನ್ ಬಫೆ (ಸಧ್ಯಕ್ಕೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ). ಇದ್ರಲ್ಲಿ ವಿಶೇಷ ಏನಪ್ಪಾ ಅಂದ್ರೆ, ಅವರು ೩೦ ಬಿಲಿಯನ್ ಡಾಲರಿಗೂ ಮೀರಿದ ತನ್ನ ಎಲ್ಲಾ ಸಂಪತ್ತನ್ನೂ ಶೇರು ಮಾರುಕಟ್ಟೆಯಲ್ಲಿಯೇ ಸಂಪಾದಿಸಿದರು. ಅಬ್ಬಾ!!! ಬಫೆ ಇಂದು ಜಗತ್ತಿನ ಅತ್ಯಂತ ಪ್ರಭಾವಶಾಲೀ ಇನ್ವೆಸ್ಟರ್ ಹಾಗೂ ಶೇರಾನುರಾಗಿ ಜನರ ಆರಾಧ್ಯ ದೈವ! ವಾರೆವ್ವಾ. . . , ನ್ಯೂಸ್ ಅಂದ್ರೆ ಇದು ನೋಡಿ! ಹಾಗಾದ್ರೆ ಯಾರು ಈ ವಾರೆನ್ ಬಫೆ? ಅವರ ಕುಲಗೋತ್ರವೇನು? ಅದು ಹೇಗೆ ಅವರು ಅಷ್ಟು ಧನ ಮಾರುಕಟ್ಟೆಯಲ್ಲಿ ಸಂಪಾದಿಸಿದರು? ಅದರ ಗುಟ್ಟೇನು? ನಾವೂ ಹಾಗೆ ಮಾಡಬಹುದೇ? ಎಂದು ನೀವು ಖಂಡಿತಾ ಕೇಳುವಿರಿ ಎಂದು ನನಗೆ ಗೊತ್ತು. ಅದಕ್ಕೇ ನಾನು ಮುಂಚಿತವಾಗಿಯೇ ಅಂತರ್ಜಾಲವನ್ನು ಜಾಲಾಡಿ ಆತನ ಪೂರ್ವಾಪರಗಳ ಬಗ್ಗೆ ಒಂದಿಷ್ಟು ಮಾಹಿತಿ ಕಲೆ ಹಾಕಿದ್ದೇನೆ. ಆಗಸ್ಟ್ ೩೦, ೧೯೩೦ ರಂದು ಅಮೇರಿಕದ ಓಮಹದಲ್ಲಿ ಹೋವರ್ಡ್ ಎಂಬ ಶೇರು ಬ್ರೋಕರನ ಮಗನಾಗಿ ಜನಿಸಿದ ವಾರೆನ್ ಬಫೆ ಎಳವೆಯಲ್ಲಿಯೇ ಗಣಿತ ಮತ್ತು ಬಿಸಿನೆಸ್ ಬಗ್ಗೆ ತನಗಿರುವ ಅದ್ಭುತ ಪರಿಣಿತಿಯಿಂದ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದ. ಬರೇ ಆರನೇ ವಯಸ್ಸಿನಲ್ಲಿ ಕೊಕಾ ಕೋಲದ ಒಂದು ಬಾಕ್ಸ್ ಖರೀದಿಸಿ ಗೆಳೆಯರಿಗೆ ಮಾರಿ ಲಾಭ ಸಂಪಾದನೆ ಮಾಡಿದ ವಾರೆನ್ ತನ್ನ ೧೦-೧೧ ವಯಸ್ಸಿಗೆಲ್ಲಾ ಶೇರುಗಳನ್ನು ಖರೀದಿಸಿ ದುಡ್ಡು ಮಾಡಲು ಆರಂಭಿಸಿದ್ದ. ೧೯೪೭ ರಲ್ಲಿ ಹೈ-ಸ್ಕೂಲ್ ಮುಗಿಸಿದ ಆತ ತಂದೆಯ ಒತ್ತಾಯದ ಮೇರೆಗೆ ಮನಸ್ಸಿಲ್ಲದ ಮನಸ್ಸಿನಿಂದ ಪ್ರಸಿದ್ಧ ವಾರ್ಟನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ (ಪೆನ್ಸಿಲ್ವೇನಿಯ) ಎರಡು ವರ್ಷ ಕಲಿತು ಇಷ್ಟವಾಗದೆ ಮನೆಗೆ ವಾಪಾಸು ಬಂದನು. ಬಳಿಕ ಲಿಂಕನ್‌ನಲ್ಲಿರುವ ನೆಬ್ರಾಸ್ಕ ಯುನಿವರ್ಸಿಟಿಯಲ್ಲಿ ಅರ್ಠಶಾಸ್ತ್ರದಲ್ಲಿ ಡಿಗ್ರಿ ಪಡೆದು ಮನಸ್ಸಿಲ್ಲದ ಮನಸ್ಸಿನಿಂದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ಗೆ ಸ್ತಾತಕೋತ್ತರ ಶಿಕ್ಷಣಕ್ಕಾಗಿ ಅರ್ಜಿ ಹಾಕಿದನು. ಆತನ ಚಿಕ್ಕ ವಯಸ್ಸಿನ ಕಾರಣಕ್ಕಾಗಿ ಜಗತ್ಪ್ರಸಿದ್ಧ ಹಾರ್ವರ್ಡ್ ಆತನ ಅರ್ಜಿಯನ್ನು ತಿರಸ್ಕರಿಸಿತು. ಬಳಿಕ ಆತನು ಕೊಲಂಬಿಯಾ ಯುನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಸೇರಿಕೊಂಡನು. ಆ ಸಂದರ್ಭದಲ್ಲಿ ಅಲ್ಲಿ ಪಾಠ ಮಾಡುತ್ತಿದ್ದ ಬೆನ್ಜಮಿನ್ ಗ್ರಾಹಮ್ ಮತ್ತು ಡೇವಿಡ್ ಡೋಡ್ ಎಂಬಿಬ್ಬರು ಮೇಧಾವಿಗಳು ಆತನ ಮೇಲೆ ಬೀರಿದ ಪ್ರಭಾವ ಆತನ ಬದುಕನ್ನೇ ಬದಲಿಸಿತು. ಬೆಂಜಮಿನ್ ಗ್ರಾಹಮ್ ಅಗಾಗಲೇ ‘ಸೆಕ್ಯೂರಿಟಿ ಎನಾಲಿಸಿಸ್’ ಮತ್ತು ‘ಇಂಟೆಲಿಜೆಂಟ್ ಇನ್ವೆಸ್ಟರ್’ ಎಂಬ ಎರಡು ಅದ್ಭುತ ಬೆಸ್ಟ್ ಸೆಲ್ಲರ್ ಪುಸ್ತಕಗಳನ್ನು ಮಾರುಕಟ್ಟೆಯ ಬಗ್ಗೆ ಬರೆದಿದ್ದು ತನ್ನ ‘ವಾಲ್ಯು ಇನ್ವೆಸ್ಟ್‌ಮೆಂಟ್’ ಎಂಬ ತತ್ವವನ್ನು ಪ್ರತಿಪಾದಿಸಿ ಸ್ವತಃ ಹೇರಳ ದುಡ್ಡು ಕೂಡಾ ಮಾಡಿದ್ದ. ವಾಲ್ಯೂ ಇನ್ವೆಸ್ಟಿಂಗ್ ಅಥವ ಮೌಲ್ಯಾಧಾರಿತ ಹೂಡಿಕೆಯ ಪ್ರಕಾರ ಪ್ರತಿಯೊಂದು ಶೇರಿಗೂ ಅದರದೇ ಆದ ಆಂತರಿಕ ಮೌಲ್ಯವಿರುತ್ತದೆ. ಮಾರುಕಟ್ಟೆಯ ಸಧ್ಯದ ಬೆಲೆ ಆ ಮೌಲ್ಯವನ್ನು ಪ್ರತಿಫಲಿಸಲೇ ಬೇಕು ಎಂದೇನೂ ಇಲ್ಲ. ಆಂತರಿಕ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುವ ಶೇರುಗಳನ್ನು ಹೆಕ್ಕಿಕೊಳ್ಳುವುದೇ ಮೌಲ್ಯಾಧಾರಿತ ಹೂಡಿಕೆ. ಮಾರುಕಟ್ಟೆ, ಇಂದಲ್ಲ ನಾಳೆ, ಕ್ರಮೇಣ ಆಂತರಿಕ ಮೌಲ್ಯವನ್ನು ಅರಿತುಕೊಂಡು ಮೇಲೇರಲೇ ಬೇಕು. ಆಗ ಕಡಿಮೆ ಬೆಲೆಯಲ್ಲಿ ಹೂಡಿದ ಹಣಕ್ಕೆ ಉತ್ತಮ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸರಳ, ಆದರೆ ಅತ್ಯಂತ ಪವರ್‌ಫುಲ್ ತತ್ವ. ತನ್ನ ಗುರುವಾದ ಗ್ರಾಹಮ್ ಜೊತೆ ಆತನ ಕಂಪೆನಿಯಲ್ಲೇ ಕೆಲಸ ಮಾಡಲು ಇಚ್ಛುಕನಾಗಿದ್ದರೂ ಗುರು ಆತನನ್ನು ಜ್ಯೂಯಿಷ್ ಎಂಬ ಕಾರಣಕ್ಕಾಗಿ ನಿರಾಕರಿಸಿದನಂತೆ. ಬಳಿಕ ವಾರೆನ್ ಬಫೆ ಗೈಕೋ ಎಂಬ ಕಂಪೆನಿಯಲ್ಲಿ ಅತ್ಯಂತ ನಾಟಕೀಯ ರೂಪದಲ್ಲಿ ಕೆಲಸಕ್ಕೆ ಸೇರಿಕೊಂಡ ಬಹಳ ಹೆಸರು ಮಾಡಿಕೊಂಡನು. ಬಳಿಕ ವಾಪಾಸು ಮನೆಗೆ ಬಂದು ತಂದೆಯ ಬ್ರೋಕರೇಜ್ ಸಂಸ್ಥೆಯಲ್ಲಿ ಕೆಲಸಮಾಡತೊದಗಿದನು. ಆ ಸಂದರ್ಭದಲ್ಲಿ ಪರಿಚಯವಾದ ಸೂಸಿ ಥಾಮ್ಸನ್ ಎಂಬಾಕೆಯೊಂದಿಗೆ ೧೯೫೭ ರಲ್ಲಿ ವಿವಾಹವೂ ಆದನು. ಆ ಸಮಯದಲ್ಲಿ ಕೆಲ ಕಾಲ ಶಿಕ್ಷಕನಾಗಿಯೂ ಕೆಲಸ ಮಾಡಿದನು, ಭಾಷಣ ಕಲೆಯನ್ನೂ ಕಲಿತುಕೊಂಡನು; ಇಲಿಗಳಿಂದ ತುಂಬಿದ ಒಂದು ಚಿಕ್ಕ ಕೆಟ್ಟ ಮನೆಯಲ್ಲಿರುತ್ತಾ ಜೀವನದಲ್ಲಿ ಸಂಘರ್ಷದ ದಿನಗಳನ್ನು ಕಂಡನು. ಕೊನೆಗೊಮ್ಮೆ ಗುರುವಾದ ಗ್ರಾಹಮ್ ಮನಸ್ಸು ಬದಲಾಯಿಸಿ ಆತನನ್ನು ತನ್ನ ಕಂಪೆನಿಯಲ್ಲಿ ಕೆಲಸ ಮಾಡಲು ಕರೆಸಿಕೊಂಡನು. ಐದಾರು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಗುರುವನ್ನೂ ಮೀರಿಸುವಂತಹ ವಿಶೇಷ ಪರಿಣಿತಿಯನ್ನು ಬೆಳೆಸಿಕೊಂಡನು. ಗುರುವಿನ ಮೌಲ್ಯಾಧಾರಿತ ಹೂಡಿಕೆಯಲ್ಲಿ ಕಂಪೆನಿಯ ಅಂಕಿ-ಅಂಶಗಳೇ ಪ್ರಧಾನವಾದರೆ ಶಿಷ್ಯ ಅದರಿಂದಲೂ ಒಂದು ಹೆಜ್ಜೆ ಮುಂದೆ ಹೋಗಿ ಕಂಪೆನಿಯ ಆಡಳಿತ ಮಂಡಲಿಯ ಉದ್ಧೇಶ ಮತ್ತು ಪರಿಣಿತಿಯನ್ನು ಹೂಡಿಕೆಯ ನಿರ್ಧಾರಕ್ಕೆ ಮುನ್ನ ಗಣನೆಗೆ ತೆಗೆದುಕೊಳ್ಳತೊಡಗಿದನು. ಅಂದಿನಿಂದ ಇಂದಿನವರೆಗೂ ಇದು ಆತನ ಪ್ರಭಲಾಸ್ತ್ರಗಳಲ್ಲಿ ಒಂದಾಗಿದೆ. ಬಳಿಕ ತನ್ನದೇ ಆದ ‘ಬಫೆ ಅಸೋಸಿಯೇಟ್ಸ್’ ಎಂಬ ಕಂಪೆನಿಯನ್ನು ಆರಂಭಿಸಿದ ವಾರೆನ್ ಹಿಂತಿರುಗಿ ನೋಡಲೇ ಇಲ್ಲ. ಇಂದು ವಾರೆನ್ ಬಫೆ ‘ಬೆರ್ಕ್‌ಶೈರ್ ಹಾಥವೇ’ ಕಂಪೆನಿಯ ಚೇರ್ಮನ್ ಹಾಗೂ ಜಗತ್ತಿನ ಎರಡನೆಯ/ಮೂರನೆಯ ಅತ್ಯಂತ ಶ್ರೀಮಂತ ವ್ಯಕ್ತಿ. ಆತನ ರಾಕೆಟ್ ಸ್ಪೀಡಿನ ಬಿಸಿನೆಸ್ ಪ್ರಗತಿಯ ಬಗ್ಗೆ ಆಸಕ್ತರು ಇಂಟರ್ನೆಟ್‌ನಲ್ಲಿ ಓದಿಕೊಳ್ಳಬಹುದು. ಎಲ್ಲಾ ವಿವರಗಳನ್ನು ಇಲ್ಲಿ ಬರೆಯುವುದು ಅಸಾಧ್ಯ ಹಾಗೂ ಅನಗತ್ಯ ಕೂಡಾ. ಆತನ ಪರಿಚಯ ಮತ್ತು ವ್ಯಕ್ತಿತ್ವ ರೂಪಣೆಗೆ ಅಗತ್ಯವಾದ ವಿವರಗಳನ್ನು ಮಾತ್ರ ಕೊಟ್ಟಿದ್ದೇನೆ. ಕಾಸು-ಕುಡಿಕೆಯ ಓದುಗರಾದ ನಮಗೆ ಮುಖ್ಯವಾಗಿ ಬೇಕಾಗಿರುವುದು ಆತನ ಜೀವನ ಚಿರಿತ್ರೆಗಿಂತ ಹೆಚ್ಚಾಗಿ ಆತನ ಹೂಡಿಕೆಯ ತಂತ್ರ. ‘ವಾರೆನ್ ಬಫೆ ಫಿಲಾಸಫಿ, ಅಥವ ಬಫೆಟಾಲಜಿ’ ಎಂದೇ ಜಗತ್ಪ್ರಸಿದ್ಧವಾದ ಆತನ ಹೂಡಿಕಾ ತಂತ್ರದ ಮೇಲೆ ಒಮ್ಮೆ ಕಣ್ಣು ಹಾಯಿಸೋಣ: ವಾರೆನ್ ತಾನು ಹೂಡುವ ಕಂಪೆನಿಗಳ ಬಗ್ಗೆ ವಿವರವಾಗಿ ಈ ಕೆಳಗಿನ ವಿಷಯಗಳಲ್ಲಿ ಅಧ್ಯಯನ ಮಾಡುತ್ತಾನೆ. ೧. ಕಂಪೆನಿಯು ಸತತವಾಗಿ ದೀರ್ಘಕಾಲಕ್ಕೆ ಉತ್ತಮ ಸಾಧನೆಯನ್ನು (ಹೂಡಿಕೆಯ ಮೆಲೆ ಪ್ರತಿಫಲ) ಕೊಟ್ಟಿದೆಯೇ? ೨. ಕಂಪೆನಿಯು ಸಾಲದ ಬಲದಲ್ಲಿ ನಿಂತಿದೆಯೇ? ಅಥವ ಸ್ವಂತ ಕಾಪಿಟಲ್ ಬಲದಲ್ಲಿಯೇ? ವಾರೆನ್ ಸಾಲವನ್ನು ಇಷ್ಟ ಪಡುತ್ತಿರಲಿಲ್ಲ. ೩. ಉತ್ತಮ ಲಾಭಾಂಶವಿದೆಯೇ? ಹಾಗೂ ಅದು ಹೆಚ್ಚುತ್ತಿದೆಯೇ? ೪. ಒಂದು ಪಬ್ಲಿಕ್ ಕಂಪೆನಿಯಾಗಿ ಎಷ್ಟು ವರ್ಷಗಳಾದವು? ೫. ಕಂಪೆನಿಯ ಬಿಸಿನೆಸ್ ಒಂದು ಬ್ರಾಂಡಿನ ಬಲದಲ್ಲಿ ನಿಂತಿದೆಯೇ? ಅಲ್ಲ ಯಕಶ್ಚಿತ್ ಕಮಾಡಿಟಿಯೇ? ಬೇರೆ ಕಂಪೆನಿಗಳ ಸರಕಿನಿಂದ ಎಷ್ಟು ಭಿನ್ನವಾಗಿದೆ? ೬. ಆಂತರಿಕ ಮೌಲ್ಯದಿಂದ ಕನಿಷ್ಟ ೨೫% ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವೇ? ೭. ಕಂಪೆನಿಯ ಆದಳಿತ ವರ್ಗ ವಿಚಾರಶೀಲರೇ? ೮. ಆಡಳಿತವರ್ಗ ಹೂಡಿಕೆದಾರರೊಡನೆ ಪ್ರಾಮಾಣಿಕವಾಗಿದೆಯೇ? ೯. ಈ ಕಂಪೆನಿಯ ಬಿಸಿನೆಸ್ ನನಗೆ ಅರ್ಥವಾಗುತ್ತದೆಯೇ? ಇತ್ಯಾದಿ ಇನ್ನೂ ಕೆಲವು ಚಿಕ್ಕ ಚೊಕ್ಕ ಪ್ರಶ್ನೆಗಳನ್ನು ವಾರೆನ್ ಬಫೆ ಕೇಳುತ್ತಾರೆ. ಇಲ್ಲಿ ಎಲ್ಲವನ್ನೂ ಕೊಟ್ಟಿಲ್ಲ. ಎಲ್ಲವೂ ಯಾರಿಗೂ ತಿಳಿದೂ ಇಲ್ಲ. ಇದೊಂದು ಪರಿಚಯಾತ್ಮಕ ಲಿಸ್ಟ್ ಅಷ್ಟೆ. ಆದರೆ ಈ ಪ್ರಶ್ನೆಗಳಲ್ಲಿ ಮುಖ್ಯವಾಗಿ ಎರಡು ಅಂಶಗಳನ್ನು ಗಮನಿಸಬೇಕು. ಒಂದನೆಯದು, ಅವರ ಪ್ರಶ್ನೆಗಳು ಅತ್ಯಂತ ಸರಳವಾಗಿವೆ. ಎರಡನೆಯದು, ಅವುಗಳ ಉತ್ತರಗಳು ವಸ್ತುನಿಷ್ಟವಾಗಿರದೆ ತೀರಾ ವ್ಯಕ್ತಿಗತ (ಸಬ್ಜೆಕ್ಟಿವ್) ಆಗಿವೆ. ಅವರು ಈ ವಿಷಯಗಳನ್ನು ಯಾವ ರೀತಿ ವಿಶ್ಲೇಷಿಸಿ ತನ್ನ ಹೂಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೋ ತಿಳಿಯುವುದಿಲ್ಲ. ಅದು ಆತನಿಗೆ ಮಾತ್ರ ಸಿದ್ಧಿಸಿದ ಒಂದು ಕೌಶಲ್ಯ ಎಂದು ಧಾರಳವಾಗಿ ಹೇಳಬಹುದು. ಅತನ ಫಿಲಾಸಪಿಯನ್ನು ಜಗತ್ತಿನಾಧ್ಯಂತ ಲಕ್ಷಾಂತರ ಮೇಧಾವಿಗಳು ಸ್ಟಡಿ ಮಾಡಿದರೂ ಇನ್ನೊಬ್ಬ ವರೆನ್ ಬಫೆ ಇದುವರೆಗೆ ಸೃಷ್ಟಿಯಾಗಿಲ್ಲ. ಸಚಿನ್ ತನ್ನ ಬ್ಯಾಟಿಂಗ್ ತಂತ್ರದ ಬಗ್ಗೆ ಎಷ್ಟು ವಿವರವಾಗಿ ಹೇಳಿಕೊಟ್ಟರೂ, ನಾವು ಅವನನ್ನು ಎಷ್ಟು ವರ್ಷ ವೀಡಿಯೋ ನೋಡಿ ಅಧ್ಯಯನ ಮಾಡಿದರೂ ಮೈದಾನಿನಲ್ಲಿ ಕ್ರೀಸ್ ಹಿಡಿದು ನಿಂತಾಗ ಬ್ರೆಟ್ ಲೀ ಯ ಒಂದೇ ಒಂದು ಫಾಸ್ಟ್ ಪೇಸ್ ಬಂದರೂ ನಾವು ಜೀವ ಭಯದಿಂದ ಬ್ಯಾಟು ಬಿಟ್ಟು ಓಡಿಹೋಗುವುದಿಲ್ಲವೇ? ಸಚಿನ್‌ನ ಹಾಗೆ ಆ ಬಾಲಿನಿಂದ ಒಂದು ಸಿಕ್ಸರ್ ಎತ್ತಲು ನಮ್ಮಿಂದ ಸಾಧ್ಯವಾಗುತ್ತದೆಯೇ? ಬಫೆಯವರ ಇನ್ವೆಸ್ಟಿಂಗ್ ಸ್ಟೈಲ್ ಕೂಡಾ ಹಾಗೆಯೇ. ಅದೊಂದು ಸಿದ್ಧ ಸಮೀಕರಣಗಳಲ್ಲಿ ಹಿಡಿದಿಡಬಹುದಾದ, ಯಾವುದೇ ಕಂಪ್ಯೂಟರ್ ಸಹಾಯದಿಂದ ಅನುಷ್ಟಾನಕ್ಕೆ ತರಬಹುದಾದ ವಿಜ್ಞಾನ ಖಂಡಿತಾ ಅಲ್ಲ. ಅದೊಂದು ಕಲೆ. It is an Art; not a Science!! ನಿರಾಸೆಯಾಯಿತೇ? ನನಗೂ ಆಗಿತ್ತು. ಏನ್ ಮಾಡೋದು, ಸಾರ್? ಶೇರು ಬಜಾರಿನಲ್ಲಿ ಸುಲಭವಾಗಿ ಹಣ ಮಾಡುವ ರಿಸ್ಕ್‌ರಹಿತ ವಿದ್ಯಮಾನ ಯಾವುದೂ ಇಲ್ಲವಲ್ಲ. ಕಂಪ್ಯೂಟರ್ ಅಂದಾಕ್ಷಣ ನೆನಪಾಯಿತು. ಬಫೆ ಎಂದೂ ಕಂಪ್ಯೂಟರ್, ಕಾಲಿಕ್ಯುಲೇಟರ್ ಸಹಾಯ ಪಡೆದವರೇ ಅಲ್ಲ. ಟೆಕ್ನಿಕಲ್ ಚಾರ್ಟ್, ಶೇರು ಕುಂಡಲಿ, ಉದ್ದುದ್ದ ಲೆಕ್ಕಾಚಾರಗಳಿಂದ ದೂರವೇ ಉಳಿದರು, ಇತರರಿಗೂ ದೂರ ಉಳಿಯಲು ಹೇಳಿದರು. ಬರೇ ಕಾಗದ, ಪೆನ್ಸಿಲ್ ಮತ್ತು ತನ್ನ ತಲೆ ಇವಿಷ್ಟೇ ಅವರ ಸಲಕರಣೆಗಳು. ಅವರ ಕೈಯಲ್ಲಿ ಮೊಬೈಲ್ ಫೋನ್ ಕೂಡಾ ಇಲ್ಲವಂತೆ, ಈಮೈಲ್ ಐಡಿ ಕೂಡಾ ಇಲ್ಲವಂತೆ. ತನಗೆ ಅರ್ಥವಾಗದ ಬಿಸಿನೆಸ್‌ನಲ್ಲಿ ದುಡ್ಡು ಹೂಡಲಾರೆ ಎಂದು ಡಾಟ್.ಕಾಮ್ ಗುಳ್ಳೆಯಿಂದ ದೂರವೇ ಉಳಿದ ಇವರ ಜಡ್ಜ್‌ಮೆಂಟ್ ಸಾಮರ್ಥ್ಯ ಅಸಾಮಾನ್ಯ, ವರ್ಣಿಸಲಸದಳ. ಶೇರುಗಳ ಆಂತರಿಕ ಮೌಲ್ಯಮಾಪನ ಹಾಗೂ ಆಡಳಿತ ವರ್ಗದ ಬಗ್ಗೆ ಆತನು ತಾಳುವ ಅಭಿಪ್ರಾಯವನ್ನು ಅರ್ಥಮಾಡಿಕೊಂಡು ಡುಪ್ಲಿಕೇಟ್ ಮಾಡಲು ಕಾಪಿಕಲಾವಿಶಾರದರಾದ ಭಾರತೀಯರಿಗೂ ಇದುವರೆಗೆ ಸಾಧ್ಯವಾಗಲಿಲ್ಲ. ಮುಂದಕ್ಕೆ ಸಾಧ್ಯವಾಗುವುದೂ ಇಲ್ಲ, ಬಿಡಿ. ಇಂದು ವಾರೆನ್ ಅಂದರೆ ಮಾರುಕಟ್ಟೆಯಲ್ಲಿ ಒಂದು ಮಂತ್ರಶಕ್ತಿ. ಅವರು ಮುಟ್ಟಿದ ಶೇರುಗಳ ಮೇಲೆ ಜನತೆ ಕಣ್ಣುಮುಚ್ಚಿ ಮುಗಿ ಬೀಳುತ್ತಾರೆ. ಅವರ ಚಿಂತನೆ, ವಿಚಾರಗಳನ್ನು ಬಹಳ ಸೂಕ್ಷವಾಗಿ ಪರಿಶೀಲಿಸಲಾಗುತ್ತದೆ. ಅವರ ಮುಂದಿನ ಹೆಜ್ಜೆಯ ಬಗ್ಗೆ ಸದಾ ಸ್ಪೆಕ್ಯುಲೇಶನ್ ಇರುತ್ತದೆ. ಅವರ ಆಣಿಮುತ್ತುಗಳು ಬಹಳ ಪ್ರಸಿದ್ಧ. ಕೆಲವನ್ನು ನಾವೂ ಕಾಕುವಿನಲ್ಲಿ ಪ್ರಕಟಿಸಿದ್ದೇವೆ. ಮುಂದಿನ ವರ್ಷ ಅವರು ಭಾರತಕ್ಕೆ ಬರುತ್ತಾನಂತೆ. ಆಗ ನಮ್ಮಲ್ಲಿ ಯಾವ ಯಾವ ಶೇರುಗಳ ಭಾಗ್ಯದ ಬಾಗಿಲು ತೆರೆಯಲಿರುವುದೋ ಯಾರು ಬಲ್ಲ? ಇಷ್ಟೆಲ್ಲಾ ದುಡ್ಡು ಸಂಪಾದಿಸಿ ನಮ್ಮವರೇ ಆದ ನಾರಾಯಣ ಮೂರ್ತಿಯವರಂತೆ ಒಂದು ಸಾದಾರಣ ಮನೆಯಲ್ಲಿ ವಾಸಿಸುವ ವಾರೆನ್ ತನ್ನ ಸಂಪತ್ತಿನ ೯೦% ವನ್ನು ಮೈಕ್ರೋಸೋಫ್ಟ್‌ನ ಗೇಟ್ಸ್ ಫೌಂಡೇಶನ್ ಮೂಲಕ ದಾನವಾಗಿ ಕೊಟ್ಟಿದ್ದಾರೆ, ಲೋಕ ಕಲ್ಯಾಣಕ್ಕಾಗಿ. ಈತ ನಿಜಕ್ಕೂ ಒಬ್ಬ ಗಾರುಡಿಗನಲ್ಲವೇ? ಅಟ್ಯಾಚ್‌ಮೆಂಟ್: ಶೇರು ಜೋಯಿಸರ ಬಗ್ಗೆ ಬರೆದ ಲೇಖನ ಕಡುಬು ಇಳಿಯದ ಗಂಟಲಿಗೆ ನೀರು ಹೊಯ್ದಂತಾಯಿತು. ಅಷ್ಟೇ ಸುಲಲಿತವಾಗಿ ಒಳಕ್ಕೆ ಹೋಯಿತು ಎಂದಿದ್ದಾರೆ ಉಡುಪಿಯ ಒಬ್ಬ ಸಾಹಿತಿ. (ಉಡುಪಿಯ ಸಾಹಿತಿಗಳಿಗೂ ಕಡುಬಿಗೂ ಅನಾದಿಕಾಲದ ಸಂಬಂಧ!) ಅವರ ಹೆಸರು ಇಲ್ಲಿ ಹಾಕುವುದು ಬೇಡವಂತೆ! ಯಾಕೆಂದು ಹೇಳಲಿಲ್ಲ. ನಾನು ಕೇಳಲೂ ಇಲ್ಲ. ಕೇಳಿದರೆ ಅದಕ್ಕವರು ಕೊಟ್ಟ ಉತ್ತರವನ್ನು ಕೂಡಾ ಕೇಳಬೇಕಾಗುತ್ತದಲ್ಲವೇ? ಅದಕ್ಕೇ ಕೇಳಲಿಲ್ಲ. ನನಗೆ ಬರುವ ಎಲ್ಲಾ ಪ್ರಶ್ನೆಗಳಲ್ಲಿ ಅತ್ಯಂತ ಹೆಚ್ಚಿನ ಬಾರಿ ಕೇಳಲ್ಪಡುವ ಪ್ರಶ್ನೆ ಏನೆಂದರೆ ‘ನಿಮಗೆ ಈ ಗುರುಗುಂಟಿರಾಯರು ಎಲ್ಲಿ ಸಿಕ್ಕಿದ್ರು ಮರಾಯ್ರೇ?’ ಎಂಬುದೇ ಆಗಿದೆ. ಅದೊಂದು ದೊಡ್ಡ ಕತೆ. ಇನ್ನೊಮ್ಮೆ ಹೇಳ್ತೇನೆ. ಸಧ್ಯಕ್ಕೆ ಈ ಮಹಾಶಯರು ಎಲ್ಲಿ ಕಾಣೆಯಾದರು ಎಂದೇ ತಿಳಿಯಲೊಲ್ಲದು. ಉಡುಪಿಯಲ್ಲಿ ಮಸಾಲೆ ದೋಸೆ ಮಾರಾಟ ಮಾಡುವ ಎಲ್ಲಾ ಹೋಟೆಲುಗಳಲ್ಲಿ ಹುಡುಕಾಡಿದ್ದಾಯಿತು. ಸಿಗಲಿಲ್ಲ. ಈ ನಾಪತ್ತೆಯಾದ ಅಸಾಮಿಯನ್ನು ನಾ ಪತ್ತೆ ಮಾಡದೆ ನಾ ಬಿಡೆನು. ನಿಮಗೂ ಎಲ್ಲಾದರೂ ಕಂಡಲ್ಲಿ ತತ್ಕ್ಷಣವೇ ನನಗೆ ತಿಳಿಸುವುದೂ. . . .]]>

‍ಲೇಖಕರು avadhi

August 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. pradeep

    “ಕಾಪಿಕಲಾವಿಶಾರದರಾದ ಭಾರತೀಯರಿಗೂ ಇದುವರೆಗೆ ಸಾಧ್ಯವಾಗಲಿಲ್ಲ” – ಈ ಲೈನ್ ಬೇಡಾಗಿತ್ತು….

    ಪ್ರತಿಕ್ರಿಯೆ
  2. satish B T

    Very well explained about the Warren Buffet style of investment. Especially he does not go by objectivity but goes by subjectivity.
    Thanks Jayadev for goood article.

    ಪ್ರತಿಕ್ರಿಯೆ
  3. ತಿಪ್ಪೇಸ್ವಾಮಿ ಹೊಸೂರು

    “ಕಾಪಿಕಲಾವಿಶಾರದರಾದ ಭಾರತೀಯರಿಗೂ ಇದುವರೆಗೆ ಸಾಧ್ಯವಾಗಲಿಲ್ಲ”– ತುಂಬಾ ತಮಾಷೆಯಾಗಿದೆ ಹಾಗೂ “ಅರ್ಥ”ಗರ್ಭಿತವಾಗಿದೆ.

    ಪ್ರತಿಕ್ರಿಯೆ
  4. ತಿಪ್ಪೇಸ್ವಾಮಿ ಹೊಸೂರು

    ಲೇಖನ ಚೆನ್ನಾಗಿದೆ.
    ಯಹೂದಿಯಲ್ಲವೆಂಬ ಕಾರಣಕ್ಕೆ ವಾ.ಬ.-ರವರಿಗೆ ಗ್ರಹಾಂ ಕೆಲಸ ಕೊಡಲಿಲ್ಲವೆಂದು ಬರೆದಿದ್ದೀರಿ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗೂಗಲಿಸಿದಾಗ ಇದಕ್ಕೆ ವಿರುದ್ಧ ಮಾಹಿತಿ ಇಲ್ಲಿ ನೀಡಲಾಗಿದೆ(ಸಂಖ್ಯೆ ನಾಲ್ಕರ ವಿವರಣೆ ನೋಡಿ). ಯಾವುದು ಸರಿ ಯಾವುದು ತಪ್ಪು ಎಂಬುದು ಅಷ್ಟು ಮುಖ್ಯವಲ್ಲದಿದ್ದರೂ ಸುಮ್ಮನೆ ಇರಲಿ ಎಂದು ಲಿಂಕಿಸಿದ್ದೇನೆ.
    http://www.jamesaltucher.com/2011/03/8-unusual-things-i-learned-from-warren-buffett/

    ಪ್ರತಿಕ್ರಿಯೆ
  5. Sangamesh Saundattimath

    Style and contents of the article are very very attractive. Congratulation. Will you permit me to publish the gist of the article in my “Samshodhna Vyasanga” a bi-monthly Kannada periodical? (You can see the periodical in my website)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: