ಕಾವ್ಯದ ಕಸುವನ್ನು ಎದೆಗಿಳಿಸುವ ‘ಕಾವ್ಯರಂಗ’

ಸುಧಾ ಆಡುಕಳ

ಓದುವುದೆಂದರೆ ಪದಗಳ ಉಚ್ಛಾರ ಮಾತ್ರವಲ್ಲ, ಪದಗಳಲ್ಲಿ ಅಡಕವಾಗಿರುವ ಭಾವಗಳ ಅನುಸಂಧಾನವೂ ಹೌದು ಎಂದು ಗಾಢವಾಗಿ ನಂಬಿದವರು ರಂಗನಿರ್ದೇಶಕ ಡಾ|ಶ್ರೀಪಾದ ಭಟ್. ಹಾಗಾಗಿಯೇ ರಂಗಪ್ರಯೋಗಗಳನ್ನೂ ಅವರು ರಂಗಪಠ್ಯದ ಒಂದು ‘ಓದು’ ಎಂದೇ ಪರಿಗಣಿಸುತ್ತಾರೆ. ದೇಶ, ಕಾಲ, ಭಾಷೆಗಳ ಗಡಿಯನ್ನು ಮೀರಿ ಮತ್ತೆ, ಮತ್ತೆ ಹೊಸ ಅರ್ಥಗಳನ್ನು ಧ್ವನಿಸುವ ಸಾಹಿತ್ಯ ಮಾತ್ರವೇ ಸಾರ್ವಕಾಲಿಕವಾಗುವುದು ಅದರ ವಿಭಿನ್ನವಾದ ಓದಿನ ಬಗೆಯಿಂದ.

ನಾಟಕ ಪ್ರದರ್ಶನದಲ್ಲಿ ರಂಗಪಠ್ಯವನ್ನು ತಮ್ಮ ಆಂಗಿಕ, ವಾಚಿಕ ಮತ್ತು ಆಹಾರ್ಯಗಳ ಮೂಲಕ ರಂಗನಟರು ಓದುವ ಮೂಲಕವಾಗಿ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ಇದನ್ನೇ ಕಾವ್ಯ ಓದಿಗೆ ವಿಸ್ತರಿಸಿಕೊಂಡಾಗ ಹುಟ್ಟಿಕೊಂಡದ್ದೇ ‘ಕಾವ್ಯರಂಗ’ ಎಂಬ ಹೊಸದೊಂದು ಪ್ರಯೋಗ. ನಾಟ್ಯ, ಚಿತ್ರ, ಕಾವ್ಯ ಇವೆಲ್ಲವನ್ನು ರಂಗದೊಂದಿಗೆ ಸಮಾಸಗೊಳಿಸುವ ನಿರಂತರ ಶೋಧವನ್ನು ಶ್ರೀಪಾದರ ರಂಗನಡೆಯಲ್ಲಿ ಗುರುತಿಸಬಹುದು.

ಸಾಹಿತ್ಯದ ಆತ್ಯಂತಿಕ ಪ್ರತಿಮೆಯಾದ ಕಾವ್ಯವನ್ನು ರಂಗತಂತ್ರಕ್ಕೆ ಅಳವಡಿಸುವ ಕ್ರಿಯೆ ಸರಳವಾದುದೇನೂ ಅಲ್ಲ. ಕವನದ ಪ್ರತಿಪದಗಳನ್ನು ಧ್ವನಿಪೂರ್ಣವಾಗಿ ಓದುತ್ತಿರುವ ಗಳಿಗೆಯಲ್ಲಿಯೇ ರಂಗನಟರು ಸಮೂಹವಾಗಿ ಅದು ಚಿತ್ರಿಸುವ ಶಬ್ದಚಿತ್ರಗಳನ್ನು ರಂಗದ ಮೇಲೆ ಚಿತ್ರಿಸುತ್ತಿರುತ್ತಾರೆ. ಹಾಗಾಗಿ ಕಾವ್ಯವೊಂದು ಶಬ್ದಚಿತ್ರವಾಗಿ ತನ್ನ ಅರ್ಥ ವಿಸ್ತಾರವನ್ನು ಗಳಿಸಿಕೊಳ್ಳುತ್ತ ಸಾಗುತ್ತದೆ. ಮಾತುಗಳು ಹೇಳುವುದಕ್ಕಿಂತ ಹೆಚ್ಚಿನದನ್ನು ಕಾವ್ಯ ಸದಾ ಧ್ವನಿಸುತ್ತಿರುವುದರಿಂದ ಇದು ಸಂಕೀರ್ಣವಾದ ರಂಗಕ್ರಿಯೆಗಳನ್ನು ಬಯಸುತ್ತದೆ.

ಹಾಗಾಗಿ ಕಾವ್ಯರಂಗವೆಂಬುದು ರಂಗ ಓದಿಗಿಂತಲೂ ಸಂಕೀರ್ಣವಾದ ಕ್ರಿಯೆಯಾಗಿದೆ. ಆಹಾರ್ಯದ ಹಂಗಿಲ್ಲದೇ ಶಬ್ದಚಿತ್ರಗಳನ್ನು ಇದು ದಾಟಿಸುವುದರಿಂದ ನಟರ ಆಂಗಿಕಗಳು ಇನ್ನಷ್ಟು ಸ್ಫುಟವಾಗಬೇಕಾಗುತ್ತದೆ. ಆದರೆ ಇದನ್ನೊಂದು ಗಂಭೀರವಾದ ರಂಗಪ್ರಯೋಗವೆಂದು ಇಂದಿಗೂ ರಂಗಭೂಮಿ ಪರಿಗಣಿಸಿಲ್ಲವೆನಿಸುತ್ತದೆ. ಒಂದು ನಿರ್ದಿಷ್ಟ ಪರಿಕಲ್ಪನೆಗೆ ಸಂಬಂಧಿಸಿದ ಕವನಗಳನ್ನು ಆರಿಸಿ, ಪೋಣಿಸುವುದು ಕೂಡ ವಿಸ್ತಾರವಾದ ಓದನ್ನು ಅಪೇಕ್ಷಿಸುತ್ತದೆ.

ಹೀಗೆ ಕನ್ನಡ ಕಾವ್ಯಲೋಕದ ತುಣುಕುಗಳನ್ನು ಬಿರುಕಿಲ್ಲದಂತೆ ಪೋಣಿಸಿ, ರಂಗನಟರ ಮೂಲಕ ಅದನ್ನು ಸಹಜಾಭಿನಯ ಮತ್ತು ಸೂಕ್ತ ಸ್ವರಭಾರಗಳೊಂದಿಗೆ ಓದಿಸುವ ಪ್ರಯೋಗವನ್ನು ಶ್ರೀಪಾದ್ ಪ್ರಾರಂಭಿಸಿದ್ದು ದಶಕಗಳ ಹಿಂದೆ. ಚಿಂತನ ರಂಗ ಅಧ್ಯಯನ ಕೇಂದ್ರದ ನಟರು ಪಾಠನಾಟಕಗಳನ್ನು ಮಾಡುತ್ತಾ, ಶಾಲೆಯಿಂದ ಶಾಲೆಗೆ ಪ್ರದರ್ಶನಕ್ಕೆಂದು ಹೋಗುತ್ತಿರುವ ಸಮಯದಲ್ಲಿಯೇ ಪಠ್ಯದ ಅನೇಕ ಕವಿತೆಗಳನ್ನು ಅಭಿನಯಿಸುವ ಪೂರಕ ಅಭ್ಯಾಸ ಪ್ರಾರಂಭವಾಯಿತು.

ಮುಂದೆ ಕೇವಲ ಕಾವ್ಯವನ್ನು ಮಾತ್ರ ತೆಗೆದುಕೊಂಡು ರಂಗದಲ್ಲಿ ಓದುವ ವಿಭಿನ್ನವಾದ ಪ್ರಯೋಗವೂ ಚಿಂತನ ಕಲಾವಿದರ ಮೂಲಕವೇ ಆರಂಭಗೊಂಡಿತು. ಉತ್ತರಕನ್ನಡದ ಕಾವ್ಯಪ್ರೇಮಿ ಮತ್ತು ಪ್ರಕಾಶಕರಾದ ಶ್ರೀ ವಿಷ್ಣು ನಾಯ್ಕ ಅವರ ಮನೆಯ ಪರಿಮಳದಂಗಳದಲ್ಲಿ ನಡೆದ ಕಾವ್ಯಗೋಷ್ಠಿಯಲ್ಲಿ ‘ಕಾವ್ಯರಂಗ’ ಯಶಸ್ವೀ ಪ್ರಯೋಗವನ್ನು ಕಂಡಿತು.

ಮುಂದೆ ರಾಜ್ಯದ ಬೇರೆ, ಬೇರೆ ಜಿಲ್ಲೆಗಳಿಂದ ಬಂದ ಯುವನಿರ್ದೇಶಕರಿಗಾಗಿ ಬೆಂಗಳೂರಿನಲ್ಲಿ ಕಾವ್ಯ ಓದಿನ ಕಮ್ಮಟವನ್ನೂ ಅವರು ನಡೆಸಿದರು. ವಿಶೇಷ ರಂಗ ಪರಿಕರಗಳ ಬಳಕೆಯಿಲ್ಲದೇ, ರಂಗನಟರು ತಮ್ಮ ಆಂಗಿಕ ಮತ್ತು ವಾಚಿಕವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಾವ್ಯಪ್ರಸ್ತುತಿಯನ್ನು ಮಾಡುವ ಈ ಪ್ರಯೋಗದಲ್ಲಿ ಕಾವ್ಯಪಠ್ಯಗಳ ಆಯ್ಕೆ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ.

“ಭಿನ್ನ ಕಾಲದಲ್ಲಿ, ಭಿನ್ನ ಪ್ರದೇಶಗಳ, ಭಿನ್ನ ಕವಿಗಳಿಂದ ಬರೆಸಿಕೊಂಡ ಕವಿತೆಗಳು ಪರಸ್ಪರ ಸಂಭಾಷಿಸುತ್ತವೆ. ಹಾಗೆ ಮಾತನಾಡುವ ಕಾವ್ಯಗಳನ್ನು ಎತ್ತಿಕೊಂಡಾಗ ಅದೂ ಒಂದು ರಂಗಕೃತಿಯಾಗುತ್ತದೆ. ಕವಿಗಳ ಹೆಸರಿನೊಂದಿಗೆ ಕಾವ್ಯವನ್ನು ಓದುವಾಗ ನಮ್ಮೊಳಗೆ ನಮಗರಿವಿಲ್ಲದೇ ಮೂಡಬಹುದಾದ ಎಲ್ಲ ಪೂರ್ವಾಗ್ರಹಗಳನ್ನು ಈ ರೀತಿಯ ಸಂವಾದವು ಹೊರಗಿಡುವುದರಿಂದ ಕಾವ್ಯದ ನೈಜ ಸೊಬಗನ್ನು ಈ ಪ್ರಸ್ತುತಿಯಲ್ಲಿ ಗ್ರಹಿಸಬಹುದು” ಎನ್ನುತ್ತಾರೆ ಶ್ರೀಪಾದ್.

ರಾಜ್ಯ ಸಮುದಾಯದ ರಂಗಭೂಮಿ ಘಟಕವು ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ರಂಗಪ್ರಸ್ತುತಿಯಲ್ಲಿ ಕಾವ್ಯರಂಗವು ಮುಖ್ಯವಾದ ಭಾಗವಾಗಿತ್ತು. ನಿರಂಜನರ ‘ಚಿರಸ್ಮರಣೆ’, ‘ಕಾವ್ಯರಂಗ’ ಮತ್ತು ‘ಗೋಡೆಗೆ ಕಥೆ ಹೇಳಿ’ ಎಂಬ ಮೂರು ವಿಭಿನ್ನವಾದ ರಂಗಪ್ರಸ್ತುತಿಯನ್ನು ರಾಜ್ಯಾದ್ಯಂತ ವಿವಿಧ ಕಾಲೇಜುಗಳಲ್ಲಿ ಸಮುದಾಯ ರಂಗತಂಡವು ಪ್ರಸ್ತುತಪಡಿಸಿತು. ಅವುಗಳಲ್ಲಿ ‘ಕಾವ್ಯರಂಗ’ ಎಲ್ಲ ವಯೋಮಾನದ, ವಿಭಿನ್ನ ವಿಷಯಗಳನ್ನು ಅಭ್ಯಾಸಿಸುತ್ತಿರುವ ವಿದ್ಯಾರ್ಥಿಗಳನ್ನು ಕಾವ್ಯದ ಓದಿನ ಕಡೆಗೆ ಆಕರ್ಷಿಸಿತು.

ಈ ಪ್ರಯೋಗದಲ್ಲಿ ಕವಿರಾಜ ಮಾರ್ಗದಿಂದ ಪ್ರಾರಂಭಿಸಿ, ಪಂಪನನ್ನು ಒಳಗೊಂಡು, ಮಧ್ಯಕಾಲದ ಕವಿತೆಗಳ ಜೊತೆಗೆ ವರ್ತಮಾನದ ಮುಖ್ಯ ಕವಿಗಳ ಕವನಗಳನ್ನು ಆಯ್ದು, ರಂಗಪಠ್ಯವನ್ನಾಗಿ ರೂಪಿಸಲಾಗಿತ್ತು. ಖ್ಯಾತ ವಿಮರ್ಶಕರಾದ ಡಾ|ಎಂ. ಜಿ. ಹೆಗಡೆಯವರ ಆಯ್ಕೆಯ ಕವನಗಳನ್ನು ರಂಗರೂಪಕ್ಕೆ ಅಳವಡಿಸಲಾಗಿತ್ತು. ರಾಜ್ಯಾದ್ಯಂತ ನೂರೈವತ್ತಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ರಂಗಪ್ರಯೋಗವಿದು. ರಂಗಪ್ರದರ್ಶನದ ಬಳಿಕ ನಡೆದ ಸಂವಾದದಲ್ಲಿ ಅನೇಕ ವಿದ್ಯಾರ್ಥಿಗಳು ಕಾವ್ಯದ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದರು.

ಮೊನ್ನೆಯಷ್ಟೇ ದಾವಣಗೆರೆಯಲ್ಲಿ ನಡೆದ ಮೇ ಮೇಳದ ಮುಖ್ಯ ವಿಷಯ ‘ಸ್ವಾತಂತ್ರ್ಯ -75 ನೆಲದ ದನಿಗಳು’ ಎಂಬುದಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲಿ ಗಳಿಸಿದ್ದೇನು? ಕಳಕೊಂಡಿದ್ದೇನು? ಎಂಬ ಹಿನ್ನೆಲೆಯಲ್ಲಿ ‘ಕಾವ್ಯರಂಗ’ ಪ್ರಸ್ತುತಿ ಆಯೋಜಿಸಲ್ಪಟ್ಟಿತ್ತು. ರವೀಂದ್ರನಾಥ ಟ್ಯಾಗೋರ್, ಸಾದತ್ ಹಸನ್ ಮಾಂಟೋ ಕೈಫಿ ಅಜ್ಮಿ, ಕುವೆಂಪು, ಜಿ. ಎಸ್. ಶಿವರುದ್ರಪ್ಪ, ಅಡಿಗ, ಚಿತ್ತಾಲ, ಚಂಪಾ, ನಿಸಾರ್ ಅಹಮದ್, ಸಿದ್ದಲಿಂಗಯ್ಯ, ಎಚ್. ಎಸ್. ವೆಂಕಟೇಶಮೂರ್ತಿ, ಅರವಿಂದ ಮಾಲಗತ್ತಿ, ಗೋವಿಂದಯ್ಯ, ಮಹಾರಾಷ್ಟ್ರದ ಅಜ್ಞಾತ ಕವಿ, ಎಚ್. ಎಸ್. ಅನುಪಮಾ, ವಿಭಾ, ವಿಜಯಾ ದಬ್ಬೆ, ಎಂ. ಆರ್. ಕಮಲ, ಪ್ರತಿಭಾ ನಂದಕುಮಾರ, ಓಂ ಪ್ರಕಾಶ ವಾಲ್ಮೀಕಿ, ಸಂವರ್ಥ ಸಾಹಿಲ್, ಸುಧಾ ಆಡುಕಳ ಹಾಗೂ ಜನಪದ ಹೀಗೆ ಕನ್ನಡಕ್ಕೆ ಬಂದ, ಕನ್ನಡಕ್ಕೆ ರೂಪಾಂತರಗೊಂಡ, ಕನ್ನಡದ್ದೇ ಆದ ಕವಿತೆಗಳನ್ನು ಆಯ್ದುಕೊಂಡು ರಂಗಪ್ರಸ್ತುತಿಯನ್ನು ನಿರೂಪಿಸಲಾಗಿತ್ತು.

ರಾಜ್ಯದ ವಿವಿಧ ಭಾಗಗಳಿಂದ ಬಂದ ಎಂಟು ಜನ ರಂಗಕಲಾವಿದರು ಒಂದು ಗಂಟೆಯ ಅವಧಿಯಲ್ಲಿ ಮೇಲಿನ ಕಾವ್ಯಗಳನ್ನು ರಂಗಕ್ರಿಯೆಗಳ ಜತೆಯಲ್ಲಿ ಓದಿದರು. ರವೀಂದ್ರನಾಥ ಟ್ಯಾಗೋರರ ವಿಶ್ವಪ್ರಜ್ಞೆಯ ಮೂಲಕ ಆರಂಭಗೊಂಡ ರಂಗ ಓದು, ಸ್ವಾತಂತ್ರ್ಯದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತಲೇ, ಎಪ್ಪತ್ತೈದು ವರ್ಷಗಳ ಅವಧಿಯಲ್ಲಿ ಜರುಗಿದ ತಲ್ಲಣಗಳು ಕಾವ್ಯದಲ್ಲಿ ದಾಖಲೆಗೊಂಡ ಬಗೆಯನ್ನು ಹೇಳುತ್ತಾ, ಸಂವಿಧಾನದ ಪೀಠಿಕೆಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸುವುದರೊಂದಿಗೆ ಮುಕ್ತಾಯಗೊಂಡಿತು. ಕಾವ್ಯದ ಬನಿಯನ್ನು, ಪ್ರತಿಭಟನೆಯನ್ನು, ಆಕ್ರೋಶವನ್ನು, ವಿಷಾದವನ್ನು, ಎಚ್ಚರವನ್ನು, ತಲ್ಲಣಗಳನ್ನು, ಸಾಂತ್ವನವನ್ನು ನೋಡುಗರೆದೆಗೆ ದಾಟಿಸುತ್ತಲೇ ಸ್ವಾತಂತ್ರ್ಯದ ಉಳಿವಿಗೆ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸಿತು.

ಇಂದು ಅನೇಕ ಶಾಲಾ, ಕಾಲೇಜುಗಳಲ್ಲಿ ಮಕ್ಕಳಿಗಾಗಿ ಈ ರೀತಿಯ ರಂಗ ಪ್ರಸ್ತುತಿಯನ್ನು ಶಿಕ್ಷಕರು ಮಾಡಿಸುತ್ತಿದ್ದಾರೆ. ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸುವ ಪರಿಣಾಮಕಾರಿ ತಂತ್ರವಾಗಿ ರಂಗ ಓದು ನಡೆಯುತ್ತಿದೆ. ರಾಜ್ಯಾದ್ಯಂತ ಶಿಕ್ಷಕರಿಗಾಗಿ ಅನೇಕ ರಂಗಶಿಬಿರಗಳನ್ನು ಶ್ರೀಪಾದ ಭಟ್ ನಡೆಸಿದ್ದಾರೆ. ನಾಟಕ ತಯಾರಿಯ ಪೂರ್ವತಯಾರಿಗಾಗಿ, ಮಕ್ಕಳ ಶಿಬಿರಗಳಲ್ಲಿ, ಕಾಲೇಜು ವಿದ್ಯಾರ್ಥಿಗಳಿಗೆ ನಡೆಸುವ ರಂಗಶಿಬಿರಗಳಲ್ಲಿ ರಂಗ ಓದಿನ ಮೂಲಕ ಕಾವ್ಯಪ್ರೀತಿಯನ್ನು ಬಿತ್ತುತ್ತಿದ್ದಾರೆ.

ಭಾಷೆಯನ್ನು ಕಳಕೊಂಡು ಕರ್ಕಶವಾಗುತ್ತಿರುವ ಯುವಜನಾಂಗದ ದನಿಯಲ್ಲಿ ಒಂದಿನಿಸು ಆರ್ದೃತೆ ಒಸರಬೇಕೆಂದರೆ ಅವರ ಭಾವಕ್ಕೆ ಕಾವ್ಯದ ಬನಿಯನ್ನು ಇಳಿಸುವುದೊಂದೇ ಮಾರ್ಗ ಎಂಬ ಅವರ ಅಚಲ ನಂಬಿಕೆ ಇದನ್ನೆಲ್ಲ ಆಗುಮಾಡುತ್ತಿದೆ. ಯಾಕೆಂದರೆ ತೇವವಿಲ್ಲದೇ ಉಸಿರಾಟವೂ ಸರಾಗವಾಗದೆಂದು ಅವರಿಗೆ ತಿಳಿದಿದೆ. ಅವರ ನಿರ್ದೇಶನದಲ್ಲಿ ದೇಶ, ಕಾಲಗಳ ಹಂಗುಮೀರಿ ಮಾತನಾಡುವ ಕಾವ್ಯದ ಮಾತುಗಳನ್ನು ನಮ್ಮೆದೆಗೆ ದಾಟಿಸುವ ಎಲ್ಲ ರಂಗಸಂಗಾತಿಗಳಿಗೆ ಶರಣು.

‍ಲೇಖಕರು Admin

June 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: