ಪಿ ಪಿ ಉಪಾಧ್ಯ ಸರಣಿ ಕಥೆ 30- ಶಾಸ್ತ್ರೀಗಳಿಗೆ ಲಾಟರಿ ಹೊಡೆದಷ್ಟೇ ಸಂತೋಷ…

ಪಿ ಪಿ ಉಪಾಧ್ಯ

30

ಶಾಸ್ತ್ರೀಗಳಿಗೆ ಲಾಟರಿ ಹೊಡೆದಷ್ಟೇ ಸಂತೋಷ…

ಶಾಸ್ತ್ರಿಗಳೂ ಯಕ್ಷಗಾನದಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿದವರೇ. ಅವರದೇ ಶಿಷ್ಯನಾಗಿರುವ ಆ ಯುನಿವರ್ಸಿಟಿ ಪ್ರೊಫೆಸರರೇ ಕೆಲವೊಮ್ಮೆ ತನ್ನ ಸಂಶಯ ಪರಿಹರಿಸಿಕೊಳ್ಳಲೋಸ್ಕರ ಶಾಸ್ತಿçಗಳನ್ನು ಕೇಳುವುದಿತ್ತು. ಸುತ್ತಮುತ್ತ ಚಾಲ್ತಿಯಲ್ಲಿದ್ದ ಬಹುತೇಕ ಯಕ್ಷಗಾನ ಮೇಳಗಳು ಹೊಸ ಪ್ರಸಂಗಗಳನ್ನು ಆಡುವ ಮುನ್ನ ಇವರಿಗೆ ತೋರಿಸಿ ಅಭಿಪ್ರಾಯ ಪಡೆದುಕೊಳ್ಳುತ್ತಿದ್ದವು. ಕನ್ನಡದಲ್ಲಿ ಎಮ್ ಎ ಮಾಡಿದ ಅವರು ಪ್ರಾಚೀನ ಭಾಷೆಗಳ ಅಧ್ಯಯನ ನಡೆಸಿ ವಿಶೇಷ ವರದಿಗಳನ್ನು ತಯಾರಿಸಿ ಪಿ ಎಚ್ ಡಿ ಯನ್ನೂ ಪಡೆದುಕೊಂಡಿದ್ದರು.

ಹತ್ತಿರದ ಪಟ್ಟಣದಲ್ಲಿನ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿ ನಿವೃತ್ತರಾದ ಅವರು ಸ್ವಯಂ ಆಸಕ್ತಿಯ ಮೇಲೆ ಇಂತಹ ಒಂದು ಕೇಂದ್ರವನ್ನು ಸ್ಥಾಪಿಸಿದ್ದು. ಆರ್ಥಿಕವಾಗಿ ತುಸು ಹೊರೆಯೇ ಆಗಬಹುದಾಗಿದ್ದ ಈ ಯೋಜನೆ ಬಹಳ ದಿನಗಳಿಂದ ಅವರನ್ನು ಕಾಡುತ್ತಿದ್ದು ಅನುಷ್ಠಾನಕ್ಕೆ ತರಲು ಸರಿಯಾದ ಪೋಷಕರೊಬ್ಬರನ್ನು ಹುಡುಕುತ್ತಿದ್ದ ಅವರಿಗೆ ಆಕಸ್ಮಿಕವಾಗಿ ಶಾಮಣ್ಣನವರು ಸಿಕ್ಕಿದ್ದರು.

ಊರಿನ ವಂತಿಗೆ ಬಯಲಾಟವನ್ನು ಆಡಿಸಲು ಅಡ್ಡೆಪೆಟ್ಟಿಗೆ ಹೊತ್ತು ತಂದ ಮಂದಿ ಪೇಟೆಯಲ್ಲಿ ಸಿಕ್ಕಿದ ಆದಿಯನ್ನು `ನಿಮ್ಮ ಮನೆಯಲ್ಲಿಯೇ ಇಳಿಸುವುದಾ ಅಯ್ಯ’ ಎನ್ನುತ್ತಿದ್ದಾಗಲೇ ಅಲ್ಲೇ ಪಕ್ಕದಲ್ಲಿ ಮೇಳದ ಯಜಮಾನನೊಂದಿಗೆ ಯಾವುದೋ ಮಾತನಾಡುತ್ತ ನಿಂತಿದ್ದ ಶಾಸ್ತ್ರೀಗಳು `ಹೂಂ.. ಇದೇನು ವಿಶೇಷ ಈ ವರ್ಷ… ಕಾಲ ಕಾಲದಿಂದ ನಡೆದು ಬಂದದ್ದು ತಾನೇ’ ಎನ್ನುತ್ತಿದ್ದ ಆದಿಯನ್ನು ಗಮನಿಸಿದ್ದರು. `ಅಲ್ಲ ನಮ್ಮ ಯಜಮಾನರ ತಮ್ಮ ಇದೇ ಊರಿನಲ್ಲಿ ಇರುವುದಲ್ಲವೇ. ಅದಕ್ಕೇ ಕೇಳಿದ್ದು’ ಎಂದ ಆ ಜನರ ಮಾತಿಗೆ ತನ್ನೊಡನೆ ಮಾತಾಡುತ್ತಿದ್ದ ಶಾಸ್ತಿçಗಳನ್ನು ಕರೆದುಕೊಂಡು ಅಲ್ಲಿಗೇ ಬಂದ ಹೆಬ್ಬಾರರು `ನನ್ನ ತಮ್ಮ ಇಲ್ಲಿದ್ದರೇನಾಯ್ತು. ರಿವಾಜನ್ನು ತಪ್ಪಿಸಲಿಕ್ಕಾಗುತ್ತದೆಯೇ. ಶಾಮಣ್ಣನವರ ಮನೆಗೇ ಹೋಗಲಿ ಅಡ್ಡೆ ಪೆಟ್ಟಿಗೆ’ ಎಂದಿದ್ದರು.

ಈ ವರ್ಷವಷ್ಟೆ ಮೇಳದ ಯಜಮಾನಿಕೆಯನ್ನು ವಹಿಸಿಕೊಂಡಿದ್ದ ಹೆಬ್ಬಾರರು ಮುಂದಾಲೋಚನೆಯಿಲ್ಲದೆ ಅಡ್ಡೆ ಪೆಟ್ಟಿಗೆ ಶಾಮಣ್ಣನವರ ಮನೆಗೇ ಹೋಗಲಿ ಎಂದದ್ದಲ್ಲ. ಅಥವಾ ತಮ್ಮನ ಮೇಲಿನ ದ್ವೇಷದಿಂದಲೂ ಅಲ್ಲ. ಹಾಗೆ ನೋಡಿದರೆ ತಮ್ಮನ ಮೇಲೆ ಅವರಿಗೆ ತುಂಬಾ ವಿಶ್ವಾಸವಿದೆ.

ಅಡ್ಡೆ ಪೆಟ್ಟಿಗೆ ಇಳಿಸಿಕೊಳ್ಳುವುದೊಂದು ಆ ಮನೆಯ ಯಜಮಾನನಿಗೆ ಮರ್ಯಾದೆಯಷ್ಟೇ ಅಲ್ಲ ಖರ್ಚಿನ ಬಾಬತ್ತೂ ಹೌದು. ಅಂದಿನ ಮಧ್ಯಾಹ್ನ, ರಾತ್ರಿ ಮತ್ತು ಮಾರನೆ ದಿನ ಬೆಳಿಗ್ಗೆ ಅವರೆಲ್ಲರಿಗೆ ಊಟ ತಿಂಡಿ ಹಾಕಬೇಕು. ಇಲ್ಲ ತಾವೇ ಅಡಿಗೆ ಮಾಡಿಕೊಳ್ಳುತ್ತೇವೆ ಎಂದರೆ ಅವರು ಕೇಳಿದಷ್ಟು ಅಕ್ಕಿ ಬೇಳೆ ಅಳೆದು ಕೊಡಬೇಕು. ಮೈಲುಗಟ್ಟಲೆ ಹೆಣ ಭಾರದ ಆ ಅಡ್ಡೆ ಪೆಟ್ಟಿಗೆಗಳನ್ನು ಹೊರುವ ಮಂದಿ ಮತ್ತು ರಾತ್ರಿಯಿಡೀ ಬಣ್ಣ ಹಚ್ಚಿಕೊಂಡು ಕುಣಿಯುವ ಮಂದಿ ಊಟ ಮಾಡುವುದೇನು ಕಡಿಮೆಯೇ.

ಸಾಮಾನ್ಯ ಮಂದಿ ಉಣ್ಣುವ ನಾಲ್ಕರಷ್ಟು. ಅವರಿಗೆಲ್ಲ ಹೊಟ್ಟೆ ತುಂಬಿಸುವಷ್ಟು ಅಕ್ಕಿ ಅಳೆಯಬೇಕೆಂದರೆ ಸಾಮಾನ್ಯದವರ ಮನೆಯಲ್ಲಿ ತಿಂಗಳಿಗಾಗುವಷ್ಟು ಬೇಕಾಗುತ್ತದೆ. ತನ್ನ ತಮ್ಮನಿಗೆ ಅಷ್ಟೆಲ್ಲ ಕೊಡುವ ತಾಕತ್ತಿದೆಯೇ. ಅಂತಹುದರಲ್ಲಿ ಮಾಮೂಲಿಯನ್ನು ತಪ್ಪಿಸಿ ತಮ್ಮನ ಒಣ ಪ್ರತಿಷ್ಟೆಗೆ ಬಲಿಯಾಗಿ ಅವನ ಮನೆ ಜಗಲಿಗೆ ಹೋದರೆ ರಾತ್ರಿ ಹೊಟ್ಟೆಗೆ ಒದ್ದೆ ಬಟ್ಟೆ ಕಟ್ಟಿಕೊಂಡು ಮಲಗಬೇಕಾದೀತು. ಇಷ್ಟೆಲ್ಲ ಆಲೋಚಿಸಿಯೇ ಹೆಬ್ಬಾರರು ತಮ್ಮ ಮಂದಿಗೆ ಹಾಗೆ ಹೇಳಿದ್ದು. ಆಗಲೇ ಶಾಸ್ತಿçಗಳು ಆದಿಯನ್ನು ನೋಡಿದ್ದು ಮತ್ತು ಅವನ ಬಗ್ಗೆ ವಿಚಾರಿಸಿದ್ದು. ಶಾಮಣ್ಣನವರ ಮಗನೆಂದ ಕೂಡಲೇ ಹೇಗೆ ಶಾಮಣ್ಣ ಅವರ ತಾಯಿಯ ಕಡೆಯಿಂದ ತನಗೆ ದೂರದ ಸಂಬಂಧ ಎನ್ನುವುದನ್ನು ಹೇಳುತ್ತ ಶಾಮಣ್ಣನವರ ಬಗ್ಗೆ ವಿಚಾರಿಸಿದ್ದರು. ಅಷ್ಟೆಲ್ಲ ಆಗಿ, ಮೇಲೆ ಸಂಬಂಧಿಕರು ಎಂದು ಗೊತ್ತಾದ ಮೇಲೆ ಆದಿ ಸುಮ್ಮನೆ ಬಿಟ್ಟಾನೆಯೇ. ಅವರನ್ನು ತಮ್ಮ ಮನೆಗೇ ಕರೆದುಕೊಂಡು ಹೊರಟಿದ್ದ. ಜೊತೆಯಲ್ಲಿಯೇ ಮೇಳದ ಯಜಮಾನರಾದ ಹೆಬ್ಬಾರರನ್ನೂ.

ಹಾಗೆ ಹೋಗುವಾಗ ದಾರಿಯ ಮೇಲೆಯೇ ಶಾಸ್ತಿçಗಳು ತನ್ನ ಮನಸ್ಸಿನಲ್ಲಿನ ಆಸೆಯನ್ನು ಆದಿಯಲ್ಲಿ ಹೇಳಿಕೊಂಡದ್ದು ಮತ್ತು ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಹೆಬ್ಬಾರರೂ `ಅಯ್ಯೋ ನಮ್ಮ ಆದಿ ಮನಸ್ಸು ಮಾಡಿದರೆ ಇದೆಲ್ಲ ಎಂತಹ ಕೆಲಸ’ ಎಂದು ಸೋಬಾನೆ ಹಾಡಿದ್ದು. ಎಂದಿಗೂ ಆದಿ ಅಂತಹ ಯೋಜನೆಗಳಿಗೆ ಅಲ್ಲ ಎನ್ನುವವನೇ ಅಲ್ಲ. ಆದರೂ `ಹೇಗೂ ಮನೆಗೇ ಹೋಗುತ್ತಿದ್ದೇವಲ್ಲ. ಅಪ್ಪಯ್ಯನ ಹತ್ತಿರವೇ ಮಾತನಾಡೋಣ’ ಎಂದ.

ಆಗಲೇ ಮಗನ ಕಾರುಭಾರುಗಳಿಗೆ ಮನಸೋತಿದ್ದ ಶಾಮಣ್ಣನವರೂ ಹೂಂ ಅಂದರು. ಹೆಂಡತಿ ಕಮಲಮ್ಮನನ್ನು ಒಮ್ಮೆ ಕೇಳಬೇಕಿತ್ತು ಎನ್ನಿಸಿದರೂ ಆದಿಯ ಮೂಲಕ ಬಂದ ಯೋಜನೆಯಾದ್ದರಿಂದ ಆಕೆ ಇಲ್ಲವೆನ್ನಲಾರಳು ಎನ್ನುವ ಧೈರ್ಯ. ಕೂಡಲೇ ಒಪ್ಪಿದ್ದರು. ತಾನು ತಂದ ತನ್ನ ಸಲಹೆಯನ್ನು ಅಪ್ಪ ಅದಕ್ಕಿಂತ ಹೆಚ್ಚಾಗಿ ಅಮ್ಮ ತಳ್ಳಿಹಾಕಲಾರರು ಎನ್ನುವುದರ ಅರಿವಿದ್ದರೂ ಅಪ್ಪನ ಹತ್ತಿರವೇ ಒಪ್ಪಿಗೆ ಕೊಡಿಸುವುದು ಒಳ್ಳೆಯದೆಂದು ಆದಿ ಹಾಗೆ ಮಾಡಿದ್ದು. ಅದು ಬೇರೆ ಶಾಸ್ತಿçಗಳು ತಮ್ಮ ಹಳೆಯ ಸಂಬಂಧದ ವರಸೆ ತೆಗೆದದ್ದೇ ಅಪ್ಪ ಇದ್ದದ್ದೂ ದಾನ ಶೂರ ಕರ್ಣನಾಗಿದ್ದರು. ಅಂತಹ ಒಂದು ತರಬೇತಿ ಕೇಂದ್ರ ಶಾಸ್ತ್ರೀಗಳಂತವರ ಉಸ್ತುವಾರಿಕೆಯಲ್ಲಿ ನಡೆಯುವುದಾದರೆ ಅದಕ್ಕೆ ಬೇಕಾದ ಜಾಗವನ್ನು ತಾನೇ ಕೊಡುವುದಾಗಿ ಹೇಳಿ ಆದಿಯನ್ನು ಕರೆದು ಪೇಟೆ ಬದಿಯಲ್ಲಿದ್ದ ತಮ್ಮ ಜಾಗದಲ್ಲಿ ಅವರಿಗೆ ಬೇಕಾದಷ್ಟನ್ನು ಅಳೆಸಿ ಕೊಡಿಸು ಎಂದು ಹೇಳಿದ್ದೇ ಅಲ್ಲದೆ ಅದೇ ಆದಿಯ ಹತ್ತಿರ ಆ ತರಬೇತಿ ಕೇಂದ್ರದ ವರ್ಷದ ಖರ್ಚಿಗೆ ಬೇಕಾಗುವಷ್ಟಕ್ಕೆ ಒಂದು ಅನುದಾನದ ವ್ಯವಸ್ಥೆಯನ್ನೂ ಮಾಡಲು ಹೇಳಿದ್ದರು.

ಶಾಸ್ತ್ರೀಗಳಿಗೆ ಒಂದು ಲಾಟರಿ ಹೊಡೆದಷ್ಟೇ ಸಂತೋಷ. ಏನಾದರೂ ಒಂದಿಷ್ಟು ಹಣದ ಸಹಾಯ ಕೇಳಬೇಕು ಎಂದು ಬಂದವರು ಅವರು. ತನ್ನ ಮನಸ್ಸಿನಲ್ಲಿನ ಆಸೆಯನ್ನು ಪೂರೈಸಿಕೊಳ್ಳಲು ಎಷ್ಟು ಜನರ ಕಾಲು ಹಿಡಿಯಬೇಕಾಗುತ್ತದೋ ಎಂದು ಹೆದರಿದವರು. ಹಾಗೆ ಆರು ಮೂರು ಕಾಸು ಕೊಟ್ಟವರೂ ಸಂಸ್ಥೆಯ ಯಜಮಾನಿಕೆಯಲ್ಲಿ ಪಾಲು ಕೇಳುತ್ತಾರೆ. ಅವರನ್ನು ಬಿಡುವ ಹಾಗೂ ಇಲ್ಲ ಹಿಡಿದುಕೊಳ್ಳುವ ಹಾಗೂ ಇಲ್ಲ ಎನ್ನುವ ಉಭಯ ಸಂಕಟಕ್ಕೆ ಒಳಗಾಗಬೇಕಾಗುತ್ತದೆ ಎಂದೂ ಹೆದರಿದವರು.

ಈಗ ನೋಡಿದರೆ ಇಷ್ಟು ಸುಲಭದಲ್ಲಿ ಕೆಲಸ ಆಗಿಯೇ ಬಿಟ್ಟಿತಲ್ಲ. ಆ ಮಟ್ಟಿಗೆ ಪೇಟೆಯಲ್ಲಿ ಸಿಕ್ಕಿ ತನ್ನೊಡನೆ ಮಾತನಾಡುತ್ತ ನಿಂತು ಆದಿಯ ಪರಿಚಯವಾಗುವಂತೆ ಮಾಡಿದ ಹೆಬ್ಬಾರರ ಮೇಲೆ ವಿಶ್ವಾಸ ಮತ್ತು ಆದಿಯ ಮೇಲೆ ಅಭಿಮಾನ ಉಕ್ಕಿತು. ತಾನು ಸಂಬಂಧಿಕನೆಂದು ತಿಳಿದ ಕೂಡಲೇ ಅಂತಹ ದೊಡ್ಡ ದಾನವನ್ನು ಕೊಟ್ಟು ಸಂಸ್ಥೆಗೆ ಪೋಷಕರಾಗಿರೆಂದು ಕೇಳಿದರೆ `ಅದೆಲ್ಲ ನನಗೆ ಯಾಕೆ. ಏನಾದರೂ ಕೊಡುವುದಾದರೆ ನಮ್ಮ ಮಗ ಆದಿಗೇ ಕೊಡಿ’ ಎಂದು ಹೇಳಿದ ಶಾಮಣ್ಣನವರು ಪ್ರತ್ಯಕ್ಷ ದೇವರಾಗಿಯೇ ಕಂಡರು. ಆದಿಯೂ ಅಷ್ಟೆ. ಅಂತಹ ಹುದ್ದೆ ಗಿದ್ದೆ ಎಲ್ಲ ಏನೂ ಬೇಡ. ಅದೆಲ್ಲ ನೀವೇ ನೋಡಿಕೊಳ್ಳಿ.  ಏನಾದರೂ ಸಹಾಯ ಬೇಕೆಂದಾದಾಗ ಮಾತ್ರ ದಯವಿಟ್ಟು ಕೇಳಿ. ಅದು ಯಾವುದೇ ತೆರನದ್ದಾದರೂ ಸರಿ. ನಾನಿರುತ್ತೇನೆ’ ಎಂದ. ಶಾಸ್ತಿçಗಳಿಗೆ ಇದ್ದದ್ದೂ ಅಯೋಮಯ. `ಇಂಥವರೂ ಇದ್ದಾರೆಯೇ ಪ್ರಪಂಚದಲ್ಲಿ’ ಎಂದು

ಮುಖ್ಯವಾದ ಹಣದ ವ್ಯವಸ್ಥೆ ಮತ್ತು ಕೇಂದ್ರಕ್ಕೊಂದು ಜಾಗದ ವ್ಯವಸ್ಥೆ ಆಗಿದ್ದೇ ಸಂಸ್ಥೆಯ ಸ್ಥಾಪನೆಯ ಬಗ್ಗೆ ಮುಂದೆ ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ತಾವೇ ಓಡಾಡಿದ್ದರು. ಆ ಸಂಸ್ಥೆ ಅವರ ಕನಸಿನ ಕೂಸು. ಅದಕ್ಕೆ ಜೀವ ಕೊಡಬೇಕಾಗಿದ್ದುದು ಅವರೇ ತಾನೇ. ಪರವಾನಗಿ ಪಡೆಯಲು ಮುಂದೆ ಅಲ್ಲಿ ಬರಬಹುದಾದ ಅಭ್ಯರ್ಥಿಗಳಿಗೆ ಊಟ ವಸತಿಯ ವ್ಯವಸ್ಥೆಯ ಬಗ್ಗೆ ಸರಕಾರದಿಂದ ಅನುದಾನವೇದಾರೂ ಸಿಗುತ್ತದೋ ನೋಡಲು ಕೂಡ ಚಪ್ಪಲಿ ಸವೆಸಿದ್ದರು.

ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ಅವರದ್ದೇ ವಿದ್ಯಾರ್ಥಿಗಳು ತಮ್ಮ ಈ ಗುರುವಿನ ಯೋಜನೆಯ ಬಗ್ಗೆ ಪ್ರಶಂಸೆಯ ಮಳೆಯನ್ನೇ ಸುರಿಸಿ ಅವರಲ್ಲಿ ಆಸೆ ಮೊಳೆಯುವಂತೆ ಮಾಡಿದರೂ ಅನುದಾನದ ಪ್ರಶ್ನೆ ಬಂದಾಗ ಅವರೆಲ್ಲ ತಮ್ಮ ಹುದ್ದೆ ಮತ್ತು ಪ್ರಭಾವದ  ಹೊರತಾಗಿಯೂ ಏನೂ ಮಾಡಲಾರದವರಾಗಿದ್ದರು. ಕೊನೆಗೆ ತಮ್ಮ ಗುರುವಿನ ಪೆಚ್ಚು ಮೋರೆಯನ್ನು ನೋಡಲಿಕ್ಕಾಗದೇ `ನೋಡಿ ಶಾಸ್ತ್ರೀ ಸರ್.. ಈ ಸರಕಾರದ ಹಣೆಬರಹವೇ ಹೀಗೆ. ಕೆಲಸ ಆಗುವುದಿಲ್ಲ ಎನ್ನಲು ಸಾವಿರ ರೂಲುಗಳನ್ನು ಹೇಳುವ ಮಂದಿ ಅಂತಹುದನ್ನು ಆಗುವಂತೆ ಮಾಡಲು ಒಂದೇ ಒಂದು ಕಾರಣವನ್ನೂ ಹುಡುಕಲು ತಯಾರಿಲ್ಲ ನೋಡಿ. ನಾವಾಗಿಯೇ ದಾರಿ ತೋರಿಸಿಕೊಟ್ಟರೂ ಅದನ್ನು ಒಪ್ಪುವುದಿಲ್ಲ.

ಹೋಗಲಿ ನಮ್ಮ ಗುರುಗಳು ನೀವು. ನಾವು ಈ ಮಟ್ಟಕ್ಕೆ ಬಂದದ್ದರಲ್ಲಿ ನಿಮ್ಮ ಪಾತ್ರ ತುಂಬ ಹೆಚ್ಚಿನದು. ನೀವು ಇಂತಹ ಒಳ್ಳೆಯ ಕೆಲಸಕ್ಕೆ ಹೊರಟಿದ್ದೀರಿ. ಅದಕ್ಕೆ ನಮ್ಮ ಕೈಯಿಂದಲೇ ಸಾಧ್ಯವಾದಷ್ಟು ಕೊಡುತ್ತೇವೆ ಎಂದವರು ಪ್ರತಿಯೊಬ್ಬರೂ ಐದು ಹತ್ತು ಸಾವಿರ ಕೊಡಲು ಮುಂದೆ ಬಂದಿದ್ದರು. ನಿರಾಶೆಯ ಮೋರೆ ಹೊತ್ತ ಶಾಸ್ತ್ರೀಗಳು ಅದರಲ್ಲಿ ಯಾವುದನ್ನೂ ಸ್ವೀಕರಿಸದೇ `ಅಷ್ಟು ಅಗತ್ಯ ಬಿದ್ದರೆ ಬರುತ್ತೇನೆ’ ಎಂದು ಹೇಳಿ ಊರ ದಾರಿ ಹಿಡಿದಿದ್ದರು.

|ಇನ್ನು ನಾಳೆಗೆ |

‍ಲೇಖಕರು Admin

June 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: