ಕಾಡುವ ‘ಸೀತಾಳೆದಂಡೆ’

ಗೀತಾ ಕುಂದಾಪುರ

ಉತ್ತರ ಕನ್ನಡದ ಗ್ರಾಮೀಣ ಪ್ರದೇಶದ ಹಿನ್ನಲೆಯಲ್ಲಿ ಹೆಣೆದ ಕತೆಗಳು. ಅಲ್ಲಲ್ಲಿ ಇದು ಕತೆಯಾಗಿರದೆ ಒಂದು ವ್ಯಕ್ತಿಯ ಪರಿಚಯ ಎನ್ನಿಸಿದರೂ ವ್ಯಕ್ತಿಯ ವ್ಯಕ್ತಿತ್ವವೂ ವಿಚಿತ್ರವಾಗಿದ್ದು ನಿರೂಪಣೆ ಬಿಗಿಯಾಗಿರುವುದರಿಂದ ಕತೆಯು ಕುತೂಹಲದಿಂದಲೇ ಓದಿಸಿಕೊಂಡು ಹೋಗುತ್ತದೆ.

ಇಲ್ಲಿ ಆದರ್ಶ ಹೇಳುವ ನಾಯಕ, ನಾಯಕಿಯರಿಲ್ಲ, ಕತೆಯು ಒಂದು ಚೌಕಟ್ಟಿನಲ್ಲಿ ಬಂದಿಯಾಗಿಲ್ಲ, ಹೆಚ್ಚಿನವು ಮಹಿಳಾ ಪ್ರಧಾನ ಕತೆಗಳು, 3-4 ದಶಕಗಳ ಹಿಂದಿನ ಪರಿಸರ, ಮಹಿಳೆಯು ತನ್ನ ಮೇಲೆ ಹೇರಿರುವ ಕಟ್ಟುಪಾಡುಗಳಿಂದ, ಪರೀದಿಯಿಂದ ಹೊರಬರಲು ಪ್ರಯತ್ನಿಸಿ ಸೋತು ಮತ್ಯಾವುದೋ ರೀತಿಯಲ್ಲಿ ಹೊರಗೆ ಬರಲು ಪ್ರಯತ್ನಿಸಿದಾಗ ಏರ್ಪಡುವ ವಿಚಿತ್ರ ಸನ್ನಿವೇಶವೇ ಕತೆಗಳು. ಮುಖ್ಯ ಪಾತ್ರಗಳಲ್ಲಿ ಒಂದು ತರಹದ ಎಡಬಿಡಂಗಿತನ, ಪೆದ್ದುತನ ಕಂಡು ಬರುತ್ತದೆ, ಹೆಚ್ಚಿನವು ಸುತ್ತ ಇರುವ ಪರಿಸರಕ್ಕೆ ಹೊಂದಿಕೊಳ್ಳಲಾಗದೆ ಉಸಿರುಗಟ್ಟಿ ಏರ್ಪಡುವಂತಹದ್ದು.

ಕತೆ ನಡೆಯುವ ಪರಿಸರದಲ್ಲಿ ಏಕತಾನತೆ ಇದೆ,‌ ಅದೇ ಉತ್ತರ ಕನ್ನಡದ ಗ್ರಾಮೀಣ ಪ್ರದೇಶ, ಹವ್ಯಕ ಸಮಾಜ, ಆದರಿದು ಕತೆಗೆ ಋಣಾತ್ಮಕವಲ್ಲ, ಕತೆಯಿಂದ ಕತೆಗೆ ಸಾಗಿದಂತೆ ನಾವೇ ಪರಿಸರದಲ್ಲಿ ಒಂದಾಗಿ ಬಿಡುತ್ತೇವೆ, ನಾವೇ ಆ ಸಮಾಜದ ಒಂದು ಭಾಗವಾಗಿ ಬಿಡುತ್ತೇವೆ, ನಮ್ಮ ಸುತ್ತಮುತ್ತ ಘಟನೆ ನಡೆಯುತ್ತಿದೆ ಅನಿಸುತ್ತದೆ, ಆರ್. ಕೆ. ನಾರಾಯಣರ ಮಾಲ್ಗುಡಿಯಂತೆ.

ಪರಿಸರ ಒಂದೇ ಆದರೂ ಎಷ್ಟೊಂದು ಕತೆಗಳು, ಎಷ್ಟೊಂದು ಪಾತ್ರಗಳು, ಎಲ್ಲವೂ ಒಂದಕ್ಕಿಂತ ಒಂದು ಭಿನ್ನ. ಭಾರತಿಯವರು ವಿಭಿನ್ನ ಪರಿಸರದ ಕಥೆಯನ್ನು ಬರೆದಿಲ್ಲವೆಂದಲ್ಲ, ಒಂದೇ ಪರಿಸರದ ಹಿನ್ನೆಲೆಯಲ್ಲಿ ಬರೆದ ಕತೆಗಳನ್ನೇ ಒಟ್ಟು ಸೇರಿಸಿದ್ದಾರೆ ಅಷ್ಟೇ. ಕೆಲವೊಂದು ಕತೆಗಳಲ್ಲಿ ಕಂಡು ಬರುವ ಸಾಮ್ಯವೆಂದರೆ ಮುಖ್ಯ ಪಾತ್ರಗಳು ಅಲ್ಲಿನವರಾಗಿರದೆ ಮತ್ತೊಂದು ಗ್ರಾಮದಿಂದ ವಲಸೆ ಬಂದು ನೆಲೆಸಿದವರು.

ಕತೆಯ ಕೊನೆಯಲ್ಲಿ ಏನಾದರೂ ಅನಿರೀಕ್ಷಿತ ತಿರುವು ಇರಲೇ ಬೇಕೆಂದೇನಿಲ್ಲವಲ್ಲ, ಭಾರತಿಯವರ ಹೆಚ್ಚಿನ ಕತೆಗಳು ಹಾಗೆಯೇ ಸಾಧಾರಣ ಪರಿಸರದಲ್ಲಿ ಹುಟ್ಟಿ, ಬೆಳೆದು, ಕೊನೆಯೆಂದರೆ ಸಾವು ಇಲ್ಲ ಹಾಗೆಯೇ ಉತ್ತರ ಸಿಕ್ಕದೆ ಮುಂದುವರಿಯುವುದೂ ಇದೆ.

ಚೌಡಿ ಮೈ ಮೇಲೆ ಬಂದು ಕೊಂಕಣಿ ಮಾತಾಡುವ ದುಗ್ಗತ್ತೆ, ಗೋಡೆಯೊಂದಿಗೆ ಮಾತಾಡುವ ಅಮ್ಮಮ್ಮ, ಬೀಡಿ ಸುಬ್ಬಮ್ಮ ಮತ್ತು ಗಂಡನಿಗೆ ಹೊಡೆಯುವ ಬಾಗತ್ತೆಯಾಗಲಿಸಂಪ್ರದಾಯದ ವಿರುದ್ಧ ಹೋರಾಟ ನಡೆಸುತ್ತಿಲ್ಲ, ಯಾವ ಆದರ್ಶವನ್ನೂ  ಹೇಳಲು ಹೊರಟಿಲ್ಲ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಕಂಡುಕೊಂಡ ಮಾರ್ಗ ಮಾತ್ರ ವಿಭಿನ್ನ, ಆ ಮಾರ್ಗವೇ ಕತೆಯ ಹೂರಣ.

17 ಕಥೆಗಳ ಗೊಂಚಲಿನಲ್ಲಿ ಇಷ್ಟವಾಗುವುದು ‘ಪಾರ್ಲೆ ಜಿ ಬಿಸ್ಕಿಟ್ಟೂ ಮತ್ತು ಓಡಿ ಹೋದವರು’. ಕತೆ ಸಿರಿ ಎಂಬ ಹುಡುಗಿ ಮತ್ತು ಪಾರ್ಲೆ ಜಿ ಬಿಸ್ಕಿಟ್ಟಿನ ಮೇಲಿನ ಅವಳಾಸೆಯಸುತ್ತ ಸುತ್ತುತ್ತಿದ್ದರೂ ಗ್ರಾಮೀಣ ಪ್ರದೇಶದ ಜನರ ಬಡತನ, ಏನೇನೋ ಕನಸು ಕಂಡು ಇದ್ದಲಿಂದ ಪಲಾಯನ ಮಾಡಿದರೇ ನನಸಾಗಿಸಲು ಸಾಧ್ಯ ಎಂಬಂತೆ ಓಡಿ ಹೋಗುವ ಪ್ರಕರಣಗಳು 3-4 ದಶಕಗಳ ಹಿಂದಿನ ಗ್ರಾಮೀಣ ಪ್ರದೇಶದ ಚಿತ್ರಣಕ್ಕೆ ಕನ್ನಡಿ ಹಿಡಿದಂತಿದೆ. ಸಿರಿಯ ಗೆಳತಿ ಶೆಲ್ಲಿ ಓಡಿ ಹೋಗುವಪ್ರಕರಣ ಮತ್ತು ಅವಳ ಗೆಳತಿಯರು ಮಾಡುವ ಸಹಾಯ ಕತೆಯನ್ನು ವಿಭಿನ್ನವಾಗಿಸುತ್ತದೆ.

ಕತೆ ಎಲ್ಲಿಯೂ ಭಾರವಾಗಿಲ್ಲ, ಬಲವಂತವಾಗಿ ಹೇರುವುದೂ ಇಲ್ಲ, ಲೇಖಕಿ ಸರಳವಾಗಿ ಓದುಗನನ್ನುತನ್ನ ಪರಿಸರಕ್ಕೆ ಕರೆದುಕೊಂಡು ಹೋಗಿ ಪ್ರಧಾನ ಪಾತ್ರಗಳ ಮಾನಸಿಕ ತಮುಲವನ್ನು ಬಿಚ್ಚಿಡುತ್ತಾರೆ. ಹೀಗೇಕೆ ಎಂಬ ಪ್ರಶ್ನೆಗಳನ್ನು ಓದುಗನೇ ಕೇಳಿಕೊಳ್ಳಬೇಕು, ಉತ್ತರವೂ ಅಲ್ಲೇ ಇದೆ. ಸಂಭಾಷಣೆಗೆ ಉಪಯೋಗಿಸಿದ ಹವ್ಯಕ ಭಾಷೆ ತೊಡಕಾಗದೆ ಕತೆಗೆ ಪೂರಕವಾಗಿದ್ದು ಗ್ರಾಮೀಣ ಪರಿಸರವನ್ನು ಸೃಷ್ಟಿಸುವಲ್ಲಿ ಸಹಾಯ ಮಾಡುತ್ತದೆ.

ಬಹುಶಃ ಸಂಭಾಷಣೆಗೆ ಹವ್ಯಕ ಭಾಷೆ ಉಪಯೋಗಿಸದಿದ್ದರೆ ಕತೆಗಳು ಇಷ್ಟೊಂದು ಆಪ್ತವಾಗುತ್ತಿರಲಿಲ್ಲವೋ ಏನೋ. ನಗರ ಪ್ರದೇಶದಲ್ಲಿ ಹುಟ್ಟಿ ಬೆಳೆದವರಿಗೆ ಇದು ಕತೆಯಂತೆ ಕಂಡರೂ, ಗ್ರಾಮೀಣ ಪ್ರದೇಶದ ಹಿನ್ನಲೆಯುಳ್ಳವರಿಗೆ ಖಂಡಿತವಾಗಿಯೂ ಇಂತಹ ಪಾತ್ರಗಳು ಅವರ ಸುತ್ತಮುತ್ತ ಬಂದು ಹೋಗಿರುವಂತಹದ್ದು, ತಾವೇ ಒಂದು ಪಾತ್ರವಾಗಿರುವ ಸನ್ನಿವೇಶವೂಇರಬಹುದು.ನಗರ ಜೀವನದಲ್ಲಿ ಎಲ್ಲವೂ ಇದ್ದರೂ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಕಥೆಗಳು ಹುಟ್ಟುತ್ತವೆಯೋ ಏನೋ !!!

ಹಾಗೆಯೇ ಪುರುಷ ಪ್ರಧಾನ ಕಥೆಗಳು ಇಲ್ಲವೆಂದಿಲ್ಲ, ವೆಂಕಟ್ರಮಣನ ಬೋಳೆ ಸ್ವಭಾವವೇ ಕಥಾವಸ್ತುವಾಗಿರುವ ‘ದಿಗ್ಭಮೆ ವೆಂಕಟ್ರಮಣನ ದಶಾವತಾರಗಳು’, ವಿಪರೀತ ಊಟ ಮಾಡುವ ಸೂರಳ್ಳಿ ಅಣ್ಣನ ಕಥೆ ‘ಸೂರಳ್ಳಿ ಅಣ್ಣ ಆಮೇಲೆ ಊಟಕ್ಕೆ ಬರಲೇ ಇಲ್ಲ’, ಮಹಿಳೆಯರ ಸೀರೆಯನ್ನು ಕದ್ದು ಉಡುವ ಸ್ವಭಾವದ ‘ಸೀರೆ ಕದಿಯೋ ಶಾಮಣ್ಣ’ ಎಲ್ಲವೂ ನಮ್ಮನ್ನು ನಕ್ಕು ನಗಿಸಿ ದುಃಖಾಂತ್ಯಗೊಳ್ಳುವ ಕಥೆಗಳು.

‘ಶೇಷಣ್ಣನ ಮಡದಿ ಸರಸೋತಕ್ಕ ಬಾವಿಯಲ್ಲಿ ತೇಲಿದ್ದು’, ಅದೇ ಗ್ರಾಮೀಣ ಪರಿಸರ ಆದರೆ ವಿಭಿನ್ನ ಕಥಾವಸ್ತು. ತನ್ನದೇ ಮಾನಸಿಕ/ದೈಹಿಕ ತೊಂದರೆಯಿಂದ ಹಲವು ಬಾರಿ ಪೇಚಿನ ಪ್ರಸಂಗದಲ್ಲಿ ಸಿಲುಕಿ, ಎಲ್ಲರಿಂದ ದೂರಿಕರಿಸಲ್ಪಟ್ಟಾಗ ಎದುರಾದದ್ದು ಸಾವು, ಕೊನೆಗೂ ಇದು ಆತ್ಮಹತ್ಯೆಯೇ ಇಲ್ಲ ಕೊಲೆಯೇ ಎನ್ನುವುದು ಓದುಗನಿಗೆ ಬಿಟ್ಟಿದ್ದು.

ಸ್ವಲ್ಪ ಮುಜುಗರ ಹುಟ್ಟಿಸುವ ಕಥಾವಸ್ತು ಮತ್ತು ಕಥಾ ಪಾತ್ರ ಆದರೆ ಅದನ್ನು ಸರಳ ರೀತಿಯಲ್ಲಿ, ಹಾಸ್ಯದ ನವೂರಾದ ಎಳೆಯೊಂದಿಗೆ ನಮ್ಮ ಮುಂದೆ ಇರಿಸಿದ್ದಾರೆ, ಕೊನೆಯಲ್ಲಿ ಸರಸೋತಿಯ ಹೆಣದೊಂದಿಗೆತೇಲುವ ಉಳಿದವರ ನಿಟ್ಟುಸಿರುಗಳಿಗೆ ಓದುಗ ಒಂದು ತರಹದ ದಿಗ್ಭ್ರಮೆ ಪಡುವಂತಾಗುತ್ತದೆ. ಇಂತಹ ವಿಷಯಗಳನ್ನೂ ತೆಗೆದುಕೊಂಡು ಲೀಲಾಜಾಲವಾಗಿ ಹೆಣೆದು ಭಾರತಿಯವರು ಗೆಲ್ಲುತ್ತಾರೆ.

‘ಪಾರ್ಲರ್ ಲಲಿತಕ್ಕ’, ‘ಗಡ್ಡದಾರಿ ಸ್ವಾಮಿಗಳ ಪೂರ್ವಾಪರ’, ‘ಸಣ್ಣ ಸದ್ದಿಗು ಬೆಚ್ಚುತ್ತಿದ್ದ ಮೀನಾಕ್ಷಿ’ಯಂತಹ ಕತೆಗಳು ಸರಳ ತಿಳಿಹಾಸ್ಯದ ಕಥೆಗಳು ಎಂದೆನಿಸಿದರೂ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರು ಇಂತಹ ಕಥಾ ಪಾತ್ರಗಳೊಂದಿಗೆ ಖಂಡಿತವಾಗಿಯೂ ಮುಖಾಮುಖಿಯಾಗಿರುತ್ತಾರೆ.

ವೈದೇಹಿಯವರು ಕಥೆಗಳಲ್ಲಿ ಹೆಚ್ಚಾಗಿ ಕರಾವಳಿ ಗ್ರಾಮೀಣ ಪ್ರದೇಶದ ಚಿತ್ರಣ ಕೊಟ್ಟರೆ ಭಾರತಿಯವರು ಮಲೆನಾಡಿನ ಹವ್ಯಕ ಸಮಾಜವನ್ನು ನಮಗೆ ಪರಿಚಯಿಸಿದ್ದಾರೆ ಎಂದರೆ ತಪ್ಪಾಗಲಾರದು. 

‍ಲೇಖಕರು Avadhi

May 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: