ಕಾಡುವ ‘ವಿಚಿತ್ರಸೇನನ ವೈಖರಿ’

ಎಚ್ ಆರ್ ರಮೇಶ

ಕವಿತೆಗಳ ಕುರಿತು ಆಡಿರುವ ಜನರಲ್ ಮಾತುಗಳು ಕವಿತೆಗಳೇ ಆಗಿವೆ, ಆದರೆ, ಕವಿತೆಗಳು ಮೌನದಲ್ಲಿದ್ದೇವೆಂದು ತೋರಿಸಿಕೊಳ್ಳುತ್ತ ಮಾತಿನ ಕಡೆ ಹೊರಳುವಂತೆ ತೋರುತ್ತಿವೆ, of course ಹೀಗೇಳಿದ್ದು ಸಂಕಲನದ ಇಡೀ ಕವಿತೆಗಳನ್ನು ಸುಮ್ಮನೆ ಗ್ಲ್ಯಾನ್ಸ್ಮಾಡಿದಾಗ, ಹಾಗಾಗಿ it is not a judgment or opinion. Poems run like narratives dressed in poetry.

ಇವರ ಕತೆಗಳಿಗೆ ಕಾವ್ಯದ ಮೋಹವಿದೆ, ಕವಿತೆಗಳಿಗೆ ಗದ್ಯದ ಸೆಳೆತವಿದೆ. ಅದರೆಡೆಗಿನ ಅವುಗಳ ತಹತಹಿಕೆಯನ್ನು ಇಮೇಜ್ ಗಳು ತೋರಿಸುತ್ತವೆ; ಇವರ ಕವಿತೆಗಳು ಗದ್ಯವನ್ನು ಮೈಮೇಲೆ ಎಳೆದುಕೊಳ್ಳುತ್ತವೆ, ಆದರೆ ಗದ್ಯದ ಒರಟು ಕೊರಡನ್ನು ನಯಗೊಳಿಸುತ್ತವೆ, ಓದುತ್ತ ಹೋದ ಹಾಗೆ ಇವೇನು ಗದ್ಯದ ಸಾಲುಗಳು ತಪ್ಪಿಸಿಕೊಂಡು ಕೂತಿದ್ದಾವೆ ಅನ್ನಿಸುತ್ತೆ. ಅಂದರೆ ಇಲ್ಲಿ ಎರಡೂ ಪ್ರಕಾರಗಳ ಬ್ಯೂಟಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಇದೆ. ಅತ್ಯುತ್ತಮ ಉದಾಹರಣೆ ‘ಹಸ್ತಾಂತರ’ ಕವಿತೆ. ಇದೊಂಥರದ ಶಬ್ದ ಚಿತ್ತಣ. ಮತ್ತು, ಜತನದಿಂದ ಕಟ್ಟಿರುವ ಹೂವಿನ ದಂಡೆ. ಕೆಲವು ಸಾಲುಗಳು: ನಿಶಾಚರಿ ಬಸ್ಸು ತಡರಾತ್ರಿ ಎಲ್ಲೋ ಒಂದು ಕಡೆ ನಿಂತಾಗ/ಒಂದು ವಿಚಿತ್ರ ನಿಚ್ಚಳ ನೀರವದಲ್ಲಿ ಚಾಲಕರು ಮಾತಿಲ್ಲದೆ ಅದಲು ಬದಲಾಗುತ್ತಾರೆ.

ಈ ಸೃಷ್ಟಿಯಲ್ಲಿ ಸುಮ್ಮನೆ ಬಿದ್ದುಕೊಂಡಿರುವ ವಸ್ತುಗಳು, ಸರಿದು ಹೋಗುವ ಕಾಲ, ಘಟಿಸುವ ಘಟನೆಗಳು ಜಯಂತರ ಕವಿತೆಯಲ್ಲಿ ಅಲೌಕಿಕ ವಾದ ಮೆರುಗನ್ನು ಪಡೆದುಕೊಳ್ಳುತ್ತವೆ, ಅರೆ, ನಮಗೆ ಯಾಕೆ ಹೀಗೆ ಕಾಣಲಿಲ್ಲ ಎಂದು ಹೊಟ್ಟೆಕಿಚ್ಚು ಮೂಡಿಸುತ್ತವೆ, ಇಲ್ಲಿ ನೋಟನೇ ಸಂವೇದನೆಯಾಗಿ ಒದಗಿಬಂದು ಕವಿತೆಗಳಿಗೆ ಘನತೆಬರುತ್ತೆ, ಸೀಯಿಂಗ್ ಈಸ್ ಬಿಲೀವಿಂಗ್ ಎನ್ನುವಂತಹ ಈ ವಿಲಕ್ಷಣ ಕಾಲದಲ್ಲಿ ಈ ಕವಿತೆಗಳು ಸೀಯಿಂಗ್ ಈಸ್ ಲಿವಿಂಗ್ ಅಂಡ್ ಅನ್ಅರ್ಥಿಂಗ್ ಲೈಫ್ಎನ್ನಿಸುತ್ತವೆ.

ಕವಿತೆಯೊಂದು ಆಗುವ ಸಂದರ್ಭದಲ್ಲೇ ವಿಲಕ್ಷಣ ಸೌಂದರ್ಯವನ್ನು ಮೆತ್ತಿಕೊಳ್ಳುತ್ತೆ, ‘ಅರ್ಧ ಕಿಲೋ ಸಮುದ್ರ’ ಆಹಾ ವಾಟ್ ಎ ಬ್ಯೂಟಿ!ತುಂಬಾ ಇಷ್ಟ ಆಗುವ ಕವಿತೆ. ಅರ್ಧ ಕಿಲೋ ಸಮುದ್ರ ನೀನು ತಂದು ಬಿಟ್ಟಿದ್ದರೆ/ಕತೆಯೇ ಬೇರೆ ಇತ್ತು. ಅದರಲ್ಲೊಂದು ಸಣ್ಣಲಾಂಚು/ಬರಬಹುದಿತ್ತು./ಅದರ ಅಂಚಿನಲ್ಲಿ ಕೂತುಕೊಂಡು ಬಯೋಡಾಟದ ಗಾಳಿಪಟ ಮಾಡಿ ಆಕಾಶಕ್ಕೇ ಗಾಳ/ಹಾಕಬಹುದಿತ್ತು. ನೀನು ಮನಸ್ಸುಮಾಡಲಿಲ್ಲ.

ಸಿಕ್ಕುವುದು ಪೂರ್ಣ ವಿರಾಮ, ಸಿಗದಿರುವುದು ಅಲ್ಪವಿರಾಮ- ಇದು ಕಾವ್ಯದ ಮೂಲ ಭಿತ್ತಿ, ಸೃಷ್ಟಿಯ ತತ್ವವೂ ಇದೆ ಆಗಿದೆ, ಮುಗಿಯುವುದಕ್ಕಿಂತ ಮುಗಿಯದೇ ಇರುವಲ್ಲಿ ಸಾಧ್ಯತೆಗಳಿವೆ, ಹೆಚ್ಚಾಗಿ ನಿರೀಕ್ಷೆಗಳಿದ್ದಂತೆ ಭ್ರಮೆಗಳಿವೆ, ಇವು ಬದುಕನ್ನು ಆಗಮಾಡಿಕೊಳ್ಳಲು ಸೆಳೆಯುತ್ತವೆ. ಇಮೇಜ್ ಗಳಿಗಾಗಿ ಕವಿತೆ ಆದಂತಿದೆ, ಅವೇ ಇದನ್ನು ಕವಿತೆಯೆಂದು ನಂಬುವಂತೆ ಒತ್ತಾಯಿಸುತ್ತವೆ. ‘ಜಾರಿಯಲ್ಲಿರುವ ನಮಸ್ಕಾರ’, ‘ಶಬ್ದಕೋಶದಲ್ಲಿ ಕಾದುಕೂತ ಪದಗಳಂತೆ’ ಇವು superb ಆದಂತಹ images.

ಇಲ್ಲಿ ಕವಿತೆಗಳು ನಡೆದುಕೊಂಡು ಹೋಗುತ್ತವೆ, ಹೋಗುವಾಗ ಇವುಗಳ ಮಡಿಲಿಗೆ ಬದುಕೇ ಬಂದು ಬೀಳುತ್ತದೆ, ಆಗ ಅಲ್ಲಿ ಸತ್ಯ ಸೌಂದರ್ಯಗಳ ಕರಗುವಿಕೆ, ಆರ್ಡಿನರಿ ಘಟನೆಗಳು ಅದ್ಭುತ ದೃಶ್ಯಗಳಾಗುವುವು ಕುಸುಮ ಸಮಯದಂತೆ ಕವಿಸಮಯದಲ್ಲಿ. ಹೆಸರೀಗಷ್ಟೇ ಇಲ್ಲಿನ ಕವಿತೆಗಳಿಗೆ ಹೆಸರು, ಆದರೆ ಒಂದೊಂದೂ ಬದುಕಿನ ತುಣುಕು,ಕೇಕಿನಂತೆ ಎತ್ತಿ ಇಡಲಾಗಿದೆ. ‘ಗಾಳಿಯ ಕೈಗೆಸಿಕ್ಕದನಿ’ಈಕವಿತೆಯುಈಮಾತುಗಳಿಗೆಪುಷ್ಚಿಕೊಡುತ್ತವೆ.

ನೆನಪು ಹಳವಂಡವಾಗಬಾರದು, ಅದು ಹಾಗೆ ಆದರೆ ಸದ್ಯದ ವಾಸ್ತವವೂ ಇಲ್ಲ, ಕಾಣದೆಬರುತ್ತೆ ಎನ್ನುವ ಅನಿಶ್ಚಿತ ನಿರೀಕ್ಷೆಯ ನಾಳೆಯೂ ಇಲ್ಲ, ಈ ಅನಿಸಿಕೆಗಳು ‘ಖೋಡಿ ಬೈರಾಗಿ’ ಕವಿತೆ ಓದುವಾಗ ಬಂದವು. ನೆನಪಿಗೆ ಸರಿದಿರುವುದು ಆಗಿಹೋಗಿರುವಂತಹದ್ದಲ್ಲ, ಬದಲಿಗೆ, ಕಾಲದ ಚಲನೆಯಲ್ಲಿ ಮನುಷ್ಯರು ಹೇಗೆ ಸಾಗುತ್ತಾರೆ ಎನ್ನುವುದು, ಈ ಕವಿತೆಯ – ಏನೇಹೇಳ್ರಿ, ಧಾರವಾಡ ಮೊದಲಿನಂತಿಲ್ರೀ ಅಂತ/ಯಾರಿಗೂ ಏನನ್ನೂ ಹೇಳಲು ಬಿಡದೆ ಒರಲುವ ನಾವು/ಧಾರವಾಡದ ದತ್ತು ಮಕ್ಕಳು/ನಿಜಕ್ಕೂ ಹೇಳುತ್ತಿರುವುದು ಧಾರವಾಡದ ಬಗ್ಗೆ ಅಲ್ಲ/ನಮ್ಮ ಬಗ್ಗೆ/ಎಂದು ನಗುತ್ತಾಳೆ ಸದ್ದಿಲ್ಲದೆ ಶಾಲ್ಮಲಿ ಎನ್ನುವ ಕೊನೆಯ ಸಾಲುಗಳು ಮುಖಕ್ಕೆ ರಪ್ಪಂಥ ರಾಚುತ್ತವೆ. ನೆನಪು ಹಾಳಾಗಿ ಹೋಗಲಿ ಅತ್ತ, ಆದರೆ ಸದ್ಯವನ್ನಾದರೂ ಹಸನುಗೊಳಿಸಿಕೊಳ್ಳಬೇಕಲ್ಲ ಎನ್ನಿಸುತ್ತದೆ ಇದು.

ಕಾಲವೆಂದರೆ ಅದು ಬದುಕಲ್ಲದೆ ಮತ್ತೇನಲ್ಲ, ಬದುಕಿನಲ್ಲಿ ಮನುಷ್ಯ ಇರಲೇ ಬೇಕೆಂದಿಲ್ಲ, ಅದನ್ನು ಯಾರು ಹೇಳಿದ್ದು ಗೊತ್ತಿಲ್ಲ, ‘ದಿಲೀಪ’ ಕವಿತೆ ಸ್ನೇಹಿತ ನನ್ನು ಕುರಿತು ಹೇಳುತ್ತಿಲ್ಲ ನಿರೂಪಕನ ವಿಕಸನ, ಸ್ಥಿತ್ಯಂತರ, ಕಾಲದ ಚಲನೆಗಳನ್ನು ಹೇಳುತ್ತದೆ, ಅಷ್ಟಕ್ಕೂ ಬೇರಿಯವರ ಬಗ್ಗೆ ಹೇಳೋದು, ನಮ್ಮ ಬಗ್ಗೆ ನಾವೇ ಹೇಳಿಕೊಳ್ಳುವುದೇ ಆಗಿದೆ. ಈ ಕವಿತೆಯ ಕೆಲವು ಸಾಲುಗಳು : ಬಾಲೆಗಾಗಿ ಅವನಿಗೆಂದು ಬರೆದುಕೊಟ್ಟ ಪ್ರೇಮ ಕಾಗದದ/ ನನ್ನ ಅಕ್ಷರದ ನಿಚ್ಚಳ ಸುಂದರ ಕೊಂಬುಗಳು ಈ ದಾರಿಯ ಬೇಗೆಯಲ್ಲಿ ಹೇಗೆ ಮೊಂಡಾದವು.

ತತ್ವಜ್ಞಾನಿಗೂ ಮಿಗಿಲಾಗಿ ಕವಿ ಬದುಕಿಗೆ ತೀವ್ರ ತೆರವಾಗಿ ಸ್ಪಂದಿಸುವನು/ಳು. ತತ್ತ್ವಜ್ಞಾನ ಯಾವುದನ್ನಾದರೂ ಅರ್ಥೈಸಿಕೊಳ್ಳಲು ಚೌಕಟ್ಟಿಗೆ ತಂದರೆ, ಕವಿತೆಯು ಅದನ್ನುಮೀರುತ್ತದೆ. ‘ಇಶಾರೆ’ ಕವಿತೆ : ಎಲ್ಲವಕ್ಕೂ ಅಲ್ಲಲ್ಲೇ ಒಂದು ನಗ್ನ ಬಿಡುಗಡೆ.

ಕನ್ನಡ ಕಾವ್ಯದ ಸಂದರ್ಭದಲ್ಲಿ ಹೇಳುವುದಾದರೆ, ಪ್ರಾದೇಶಿಕತೆಯನ್ನು ಕೆಲವರು ಭಾಷೆಯಲ್ಲಿ ತೋರಿಸಿದ್ದಾರೆ, ಇಡೀಯಾಗಿ ಹಿಡಿದುಕೊಟ್ಟಿರುವುದು ತುಂಬ ಕಡಿಮೆಯೆಂದೇ ಹೇಳಬೇಕು. ಆದರೆ ಜಯಂತರು ಪ್ರಾದೇಶಿಕತೆಯನ್ನು ಬದುಕಿನ ಮೂಲಕ ಕಟ್ಟಿಕೊಡುವ ರೀತಿ ಗಮನಿಸಲೇ ಬೇಕಾದಂತಹ ಸಂಗತಿ, ತಮ್ಮಸಂವೇದನೆಯೊಳಗೆ ದಟ್ಟವಾಗಿ ಆವರಿಸಿಕೊಂಡಿದೆ. ಹಾರ್ಡಿಯ ವೆಸ್ಸೆಕ್ಸ್, ಕುವೆಂಪುರ ತೀರ್ಥಹಳ್ಳಿ, ದೇವನೂರರ ನಂಜನಗೂಡು, ಕಾರಂತರ ಕರಾವಳಿ.

ಕವಿತೆಯನ್ನು ಕಾದಂಬರಿಗಳ ಪಕ್ಕ ಇಟ್ಟು ನೋಡುವುದು ಸಮಂಜಸವೋ ಅಸಮಂಜಸವೋ ತಿಳಿದವರೇ ಹೇಳಬೇಕು! ಗೋಕರ್ಣ ಸುತ್ತಮತ್ತಲಿನ ಬದುಕನ್ನು ಇಡಿಕಿರಿದಿರುವನಡುವಲ್ಲಿ ಬಸವನ ಹುಳುವಿನ ಥರ ಗೊತ್ತಾಗದಂತೆ ಕ್ರಮಿಸುತ್ತ ಸಿನೆಮಾ/ಪೇಂಟಿಂಗ್ ನ ಕೊಲಾಜಾಗಿ ಚಿತ್ರಿಸುತ್ತಾರೆ, ಅಲ್ಲಿ ದರ್ಶನಗೊಳ್ಳುವ ಬದುಕು ಯವ್ವೀ ಹೀಗಿದೆಯಾ ಅನ್ನಿಸುವಂತೆ ಮಾಡಿಸುವ ಅವರ ಕಣ್ಣುಗಳು ಓದುಗರನ್ನು ಆಕರ್ಷಿಸಿ ಲೋಕದ ಚಿಂತೆಯನ್ನು ಕ್ಷಣ ಮಾಡುವಂತೆ ಮಾಡುತ್ತವೆ, ಬೆರಗನ್ನೂ ಮೂಡಿಸುತ್ತವೆ.

ಶಬ್ದ ಚಿತ್ರಣದಿಂದಾಗಿ ಕವಿತೆ ಮಾಯವಾದಂತೆ ಕಂಡರೂ ಗದ್ಯಕ್ಕೆ ಕಾವ್ಯದ ಸ್ಪರ್ಶ ಝರಿಯಂತೆ ದುಮುದುಮು ಇಳಿಯುವ ಸೊಬಗನ್ನು ನೋಡತ್ತ ಕಾವ್ಯವಾದರೇನು ಗದ್ಯವಾದರೇನು ಕನ್ನಡಕ್ಕೆ ಈಥರದ ಲಯವನ್ನು ಕಡೆದು ಕೊಟ್ಟಿರುವ ಕವಿ ಜಯಂತರು ವಾವ್ ಅನ್ನಿಸಿಕೊಳ್ಳುತ್ತಾರೆ. ‘ಒಂದು ಸಣ್ಣ ನೀರವ’ ಕವಿತೆಯ ಆರಂಭದ ಸಾಲುಗಳು ಕವಿಯೊಬ್ಬನ ಬದುಕನ್ನು ಅವಿರತ ಧ್ಯಾನದಿಂದ ಮೂಡಿಬಂದಿರುವ ಸಾಲುಗಳಾಗಿವೆ : ಭರತದ ವೇಳೆ ಯಾರೂ ಇಲ್ಲದ್ದ ನೋಡಿ/ತೀರದ ಮೆಟ್ಟಿಲುಗಳು ಮೆಲ್ಲಗೆ/ನೀರಿನಲ್ಲಿಳಿಯುತ್ತವೆ.

ಕವಿಯ ಕುರಿತು ಬರೆದ ಕವಿತೆಗಳಲ್ಲಿ ಸಾಮಾನ್ಯವಾಗಿ ಗುಣವಿಶೇಷಣಗಳೇ ತುಂಬಿರುತ್ತವೆ, ಮತ್ತು ಬಹಳ ಸಂದರ್ಭದಲ್ಲಿ ಯಾರ ಬಗ್ಗೆಯಾದರೂ ಬರೆಯಲ್ಪಟ್ಟಿರುವ ಕವಿತೆಗಳಾಗಿಯೂ ಕಾಣುತ್ತವೆ, ಆದರೆ ಯೇಟ್ಸ್ ನ ಕುರಿತು ಬರೆದಿರುವ ಆಡನ್ ನ ಕವಿತೆ ಮತ್ತು ಕೀಟ್ಸ್ ನ ಕುರಿತು ಶೆಲ್ಲಿಯ ಅಡೋನಿಸ್ ನ ಕವಿತೆಗಳಲ್ಲಿ ಬೇರೆಯದೆ ಜಗತ್ತೊಂದನ್ನು  ಕಾಣಬಹುದು. ಇವುಗಳಲ್ಲಿ ಕವೆಯೊಬ್ಬನ ಸೃಜನಶೀಲ ಸೆಲೆಗಳ್ಯಾವುವು, ಮತ್ತು ಕಲೆಯಲ್ಲಿ ಕವಿಗಳು ಏನನ್ನು ಕಾಣಲು ಹಂಬಲಿಸಿದರು ಎನ್ನುವುದನ್ನು ಕಾಣಬಹುದು.

ಈ ಮಾತುಗಳನ್ನು ಹೇಳಲು ಕಾರಣ ಜಯಂತರು ಅಗಲಿ ಹೋದ  ಕನ್ನಡದ ಮಹತ್ವದ ಕವಿ ಎಸ್. ಮಂಜುನಾಥ್ ಕುರಿತು ಬರೆದಿರುವ ಕವಿತೆಯಿಂದಾಗಿ. ಕವಿತೆ ಕವಿಯನ್ನು ಹೇಗೆ ಭಿನ್ನವಾಗಿ ನಿಲ್ಲಿಸುವುದು ಎನ್ನುವುದನ್ನು ಕಾಣುತ್ತೇವೆ,  ಮತ್ತು ಬದುಕಿನ ಸಂಕೀರ್ಣತೆಯನ್ನು ಅರಿಯುವ ನಿಟ್ಟಿನಲ್ಲಿ ಕವಿ ಕವಿತೆಯಲ್ಲಿ ಇಮೇಜ್ ಗಳನ್ನು ಹೇಗೆ ಮುಖಾಮುಖಿಯಾದ ಮತ್ತು ಕವಿಯ ಸಂವೇದನೆ ಮತ್ತೊಬ್ಬನ ಕವಿತೆಯೊಳಗೆ ಹೋಗಿ ಅದರ ಆಳದಲ್ಲಿ ಹುದುಗಿರುವ ಅರ್ಥದ ಮಿಂಚನ್ನು, ಮುಟ್ಟಿರುವ ಕಾಲದ ರೀತಿಯನ್ನು ತೋರಿಸಿರುವುದು ನಿಷ್ಠುವಾಗಿ ಬಂದಿದೆ ಮಂಜುನಾಥನ ಕವಿತೆಯಲ್ಲಿ.ಮೊದಲ ಮತ್ತು ಕೊನೆಯ ಚರಣದ ಸಾಲುಗಳು ಈ ಮಾತಿಗೆ ಸಾಕ್ಷಿಯಾಗಿವೆ.

ಒಂದು ಇಮೇಜನ್ನೇ ಕವಿತೆಯ ಶೀರ್ಷಿಕೆಯನ್ನಾಗಿಸುವುದು ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ, ಅಂದರೆ ಅದೇನು ದೈವಾನುಗ್ರಹದಿಂದ ಬರಬೇಕು ಅಂತ ಅಲ್ಲ. ಅದು ಸಾಧ್ಯವಾಗುವುದು ಕವಿ ತನ್ನ ಕವಿತೆಯೆಂಬ ಸಂವೇದನೆಯನ್ನು ಬದುಕಿನಲ್ಲಿ ಅದ್ದಿದಾಗ, ಕವಿಯ ಭಾಷೆಗೆ ಅಂಟಿಕೊಳ್ಳುತ್ತದೆ ಹೂವಿಗೆ ಪರಿಮಳ ಅಂಟಿಕೊಂಡಂತೆ, ಮತ್ತು ಪರಿಮಳದಿಂದ ಹೂವೋ ಹೂವಿನಿಂದಾಗಿ ಪರಿಮಳವೋ ಎನ್ನುವ ಭಾವವನ್ನು ಉಂಟುಮಾಡುತ್ತೆ. ಕೊಕ್ಕರೆಯಂತೆ ಕವಿತೆ ಹೀಗಿದೆ. ಕೊಕ್ಕರೆಗೆ ಏಕಾಗ್ರತೆಯೇ ಪ್ರಾಣ. ಒಂದು ಚಣ ವಿಚಲಿತಗೊಂಡರೂ ಮೀನೋ ಮತ್ತೊಂದೋ ಮಿಸ್ಸಾಗುತ್ತೆ,

ಕವಿ ಎಷ್ಟು ಬದುಕಿನಲ್ಲಿ ಒಳಗೊಳ್ಳುವನೋ/ಳೋ ಅಷ್ಟು ಬದುಕು ತೆರೆದುಕೊಳ್ಳುತ್ತೆ, ಈ ಕವಿತೆಯಲ್ಲಿ ಒಂದು ಕಾದಂಬರಿಗೆ ಆಗುವಷ್ಟು ಪಾತ್ರಗಳು, ಘಟನೆಗಳು. ಅವೆಲ್ಲವೂ ಸ್ವತಂತ್ರ ಇಮೇಜ್ ಗಳಾಗಿ ಕಾಣಿಸಿಕೊಳ್ಳುತ್ತ ಹೋಗುತ್ತವೆ ಓದುಗರೊಳಗೆ ಬೆಳೆಯುತ್ತವೆ. ಇಲ್ಲದಿದ್ದರೆ ಇದೊಂದು ವರದಿಯಾಗುತ್ತಿತ್ತು. ಆದರೆ ಶುದ್ಧ ಅಂದರೆ ನಿಜಕವಿಯ ಭಾಷೆ ಅದನ್ನು ಆ ಅಪಾಯದಿಂದ ಪಾರಾಗಿಸಿದೆ.

ಯಾವುದನ್ನಾದರೂ ಯಾಕೆ ನಿರ್ಧಿಷ್ಟವಾಗಿ ಹೇಳಬೇಕು, ಬದುಕು ಹಾಗಿಲ್ಲದಿರವಾಗ ಎನ್ನುವ ಪ್ರಶ್ನೆಯನ್ನು ನಮ್ಮೊಳಗೆ ಏಳಿಸುವ ಕವಿತೆ ‘ಆ ಕಡೆ ಮುಖಮಾಡಿ’.

ಎಸ್. ಮಂಜುನಾಥ್‍ರ ಕವಿತೆಗಳಂತೆ ವಸ್ತುವಿನ ಒಳಗೆ ಹೋಗಿ, ಮತ್ತು, ಒಂದು ಹಂತದಲ್ಲಿ ಮಾತು ನಿಂತು, ಮೌನ ಸಾಂದ್ರವಾಗಿಬಿಡುವಂತೆ ಕಾಯ್ಕಿಣಿಯವರ ಕವಿತೆಗಳು ಇಲ್ಲ. ಬದಲಿಗೆ, ವಸ್ತು/ವಿಷಯ ಬದುಕೇ ಆಗಿ ಬಿಡುತ್ತದೆ. ಯಾಕೆಂದರೆ ಕವಿಯ ನೋಟದ ಪರಿಯಲ್ಲಿ ಬದುಕು ಸಾವಯವವಾಗಿ ಇರುವಂಥಹದ್ದು. ಹಾಗಾಗಿ, ಊರಲ್ಲಿನ ಹುಚ್ಚನಿಗೂ ಮನೆಮನೆಯ ಹೃದಯಗಳಂತಿರುವ ಒಲೆಗಳಿಗೆ ಸಂಬಂಧವಿದೆ. ಕಾವ್ಯಕ್ಕಿರುವ ಶಕ್ತಿ ನಿರ್ಜೀವದಲ್ಲಿ ಜೀವವನ್ನು, ಜೀವದಲ್ಲಿ ನಿರ್ಜೀವವನ್ನು ಹಾಘೂ ಪೂರ್ವಕಲ್ಪಿತಗಳನ್ನು ವಿರಚಿಸುತ್ತದೆ. ಈ ಕವಿತೆಯ ಹುಚ್ಚ ಇಡೀ ಊರಿಗೆ ಅಥವಾ ಬದುಕಿಗೆ ಪ್ರಜ್ಞೆಯಂತೆ ಕಾಣುತ್ತಾನೆ.

ಈ ಪ್ಯಾರಡಾಕ್ಸ್ ಎಲ್ಲ ನಿರೀಕ್ಷೆಗಳನ್ನು ಉಲ್ಟಮಾಡುತ್ತದೆ. ಈ ಕವಿತೆ ಪ್ರಾರಂಭವಾಗುವುದೇ ನಮ್ಮಲ್ಲಿ ತಿಳುವಳಿಕೆಯನ್ನು, ನಂಬಿಕೆಗಳನ್ನು ಕದಡುವುದರ ಮೂಲಕ: ಊರಿನ ಹುಚ್ಚ ಊರಿನಲ್ಲಿದ್ದರೆ ಊರಿಗೊಂದು ಧೈರ್ಯ ಎನ್ನುವ ಲಕ್ಷಣವಾದ ವಿಲಕ್ಷಣ ಸತ್ಯವನ್ನು ಮಿಂಚಿನಂತೆ ಹರಿಯುವ ಸಾಲುಗಳ ಮೂಲಕ. ಈ ಕವಿತೆಯಲ್ಲಿ ಪ್ರತಿ ವಾಕ್ಯವೂ ಪೇಂಟಿಂಗ್ ನಲ್ಲಿನ ಇಮೇಜ್ ಗಳಾಗಿ ಮತ್ತು ಆ ಇಮೇಜ್ ಗಳು ಚೌಕಟ್ಟಿನಿಂದಾಚೆ ಧುಮುಕು ನಮ್ಮೆದೆಯ ಒಳಗೆ ಜುಳುಜಳು ಹರಿಯುತ್ತವೆ. ಅದರಲ್ಲಿ ಒಂದು ಮಾಸ್ಟರ್ ಸಾಲು ಹೀಗಿದೆ: ಮಕ್ಕಳಿಗೆ ದೂರದಿಂದ ಅವನು ಗೋಡೆಯ ಮೇಲೆ ಅವನೇ ಇಜ್ಜಿಲಿನಿಂದ ಗೀಚಿದ ರೇಖಾಚಿತ್ರದಂತೆ ಕಾಣುತ್ತಾನೆ.

ಈ ಸಾಲು ಫೋಟೋಗ್ರಫಿಯ ಭಾಷೆಯಲ್ಲಿ ಹೇಳವುದಾದರೆ ‘ಲೇಯರ್ಡ್’. ಜಗತ್ತು ಹುಚ್ಚನನ್ನು ಕಂಡು ಗೇಲಿಮಾಡಿದ್ದೇ ಹೆಚ್ಚು. ಅಲ್ಲದೆ, ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಮಾತು. ಸೈಕಾಲಜಿಸ್ಟ್ಗೆಅವನು ಕೇವಲ ಮನೋರೋಗಿಯಂತೆ ಕಾಣುತ್ತಾನೆ. ಕವಿಗೆ ಅವನೊಬ್ಬ ಕೌತುಕದ ಆಗರ. ಅದು ತನ್ನ ಪಾಡಿಗೆ ತಾನು ಬದುಕನ್ನು ಅನುಭವಿಸುವ ಅಪ್ಪಟ ಸಹಜ ಮನುಷ್ಯನಂತೆ ಕಾಣುತ್ತಾನೆ. ಹುಚ್ಚನ ಮನೋ ವ್ಯಾಪಾರವನ್ನು ಅವನು ಮಾತ್ರ ಅರ್ಥಮಾಡಿಕೊಳ್ಳುವನೆನೋ ಅದಕ್ಕೆ ಜಯಂತರು ಅವನ್ನು ಅವನೇ ಗೀಚಿಕೊಂಡ ರೇಖಾ ಚಿತ್ರದಂತೆ ಇರುವನು ಎಂದು ಹೇಳುತ್ತಾರೆ.

ಮನುಷ್ಯರಂತೆ ವಸ್ತುಗಳು, ವಾಹನಗಳು, ಯಂತ್ರಗಳು ಪಾತ್ರಗಳಾಗುತ್ತವೆ ಇವರ ಕವಿತೆಗಳಲ್ಲಿ. ಪರ್ಸಾನಿಫಿಕೇಶನ್ ಗಳ ರಾಶಿಗಳನ್ನೇ ಕಾಣಬಹುದು. ಲಾರಿ ಇವರ ಕವಿತೆಯಲ್ಲಿ ಪರದೇಶಿ ಮನುಷ್ಯನಂತೆ ಕಾಣುತ್ತದೆ. ಮಸಿಗಟ್ಟಿದ ಗೋಡೆಯ ಮೇಲೆ ಹೊಳೆವ ಮಗನ ಹಳೆಯ ಎಣ್ಣೆ ತಲೆಯ ಮೇಲೆ.

ಕವಿ ಕಾಣುವಾಗ ಜಗತ್ತು ಈ ಹಿಂದೆ ಕಂಡದ್ದೆಲ್ಲ ಅಳಿಸಿಹೋಗುತ್ತದೆ. ಏಕೆಂದರೆ ಕವಿಯ ಮುಖ್ಯ ಕಾಳಜಿ ಸತ್ಯವನ್ನು ಅರಿವ ಪರಿ. ಮತ್ತು, ಅದನ್ನು ಹೇಗೆಲ್ಲ ಕಾಣುವುದು, ಕಾಣಿಸುವುದು ಎನ್ನುವುದನ್ನು ಇಲ್ಲಿಯ ಕವಿ ಮನಸು ತುಡಿಯುತ್ತದೆ. ಉದಾಹರಣೆಗೆ ಇಲ್ಲಿಯ ‘ಕೃಷ್ಣ’ ಎನ್ನುವ ಪುಟ್ಟ ಕವಿತೆ. ಈ ಪುಟ್ಟ ಕವಿತೆಯಲ್ಲಿ ಪುರಾಣದ ಕೃಷ್ಣ ಮಾಯವಾಗಿ ಹುಲುಮಾನವರಂತೆ ಆರ್ಡಿನರಿ ಮನುಷ್ಯರಾಗಿ ಕಾಣಿಸಲ್ಪಡುತ್ತಾನೆ. ಒಂದು ಲೆಕ್ಕದಲ್ಲಿ ಆರ್ಡಿನರಿ ಎನ್ನುವುದು ಎಕ್ಸ್ಡ್ರಾಆರ್ಡಿನರಿಯೇ ಆಗಿದೆ. ತಕ್ಷಣಕ್ಕೆ ಗಾಂಧಿ ನೆನಪಾಗುತ್ತಾರೆ. ಮಾದೇವನ ಜೊತೆ ಕವಿತೆ ನಮಗೆ ಮಾತಾಡಲು ಬಿಡದಂತೆ ಮಾಡಿಬಿಡುತ್ತದೆ ಓದಿದ ನಂತರ. ಸಾವಿರಾರು ಪುಟಗಳಜೀವನ ಚರಿತ್ರೆ ಬರೆಯುವುದಕ್ಕಿಂತ ಇಂಥಹ ಎರಡು ಪುಟಗಳ ಕವಿತೆ ಸಾಕು ಎನ್ನಿಸುತ್ತದೆ.

ಈ ಕವಿತೆ ನಮ್ಮ ಪ್ರಜ್ಞೆಯನ್ನು ಆವರಿಸಿಕೊಂಡು ಮಹಾದೇವರನ್ನುಕಣ್ಣಮುಂದೆ ನಿಲ್ಲಿಸುತ್ತದೆ. ಈ ಕವಿತೆಯ ಭಾಷೆ ಗದ್ಯಕ್ಕಿಂತ ಪದ್ಯದ ತಾಕತ್ತನ್ನು ತೋರಿಸುತ್ತದೆ. ಆಫ್ ಕೋರ್ಸ್ ಜಯಂತರ ಕವಿತೆಗಳು ಗದ್ಯಗಳಂತೆ ತೋರುತ್ತವೆ. ಆದರೆ ಅವುಗಳಿಗೆ ಕಾವ್ಯಗಂಧವಿದೆ. ದಂತಕತೆಯೆಂದರೆ ಏನೆಂದು ಗೊತ್ತಾಗಬೇಕೆಂದರೆ ದೇವನೂರರಂತಹವರನ್ನು ನೋಡಿದರೆ ಸಾಕು. ಅಂತಹ ವ್ಯಕ್ತಿತ್ವನ್ನು ತುಂಬಾ ವೈನಾಗಿ ಜಯಂತರು ಚಿತ್ರಿಸಿದ್ದಾರೆ. ದೇವನೂರಿನಿಂದ ಹೊರಟ ಮಾದೇವ ಬಸು ತಪ್ಪಿತೆಂದು ಸೀದಾ ನಡೆದುಕೊಂಡೇ ಬಂದ ಎನ್ನುವ ಸಾಲುಗಳು ಮನಸ್ಸಿಗೆ ತುಂಬಾ ಮುದ ನೀಡುತ್ತವೆ.

ತಮ್ಮ ಕವಿತೆಯಲ್ಲಿ ಕವಿ ಜಯಂತರು ಮಹಾದೇವರ ವ್ಯಕ್ತಿತ್ವನ್ನು ಪ್ರತಿ ಪದವನ್ನೂ ಪ್ರೀತಿಯಲ್ಲಿ ಅದ್ದಿ ಇಟ್ಟು ಚಿತ್ರಿಸಿದ್ದಾರೆ. ಸ್ವಲ್ಪ ರೊಮ್ಯಾಂಟಿಕ್ ಅನ್ನಿಸುತ್ತೆ. ಅನ್ನಿಸಲಿ. ರೊಮ್ಯಾಂಟಿಕ್ ಅನ್ನುವುದೂ ಒಂದು ಸಂವೇದನೆಯೇ. ಹತ್ತೊಂಬತ್ತನೇ ಶತಮಾನದ ವಡ್ರ್ಸ್‍ವರ್ಥ ಮತ್ತವನ ಸಮಕಾಲೀನ ಕವಿಗಳ ಬರಹಗಳನ್ನು ಓದಿದವವರಿಗೆಲ್ಲರಿಗೂ ಗೊತ್ತಿರುವುದೇ ಅವರು ಎಷ್ಟು ಪ್ಯಾಷನೇಟ್ ಆಗಿ ಸತ್ಯವನ್ನು ಹೇಳಲು ತಹತಹಿಸಿರುವರು ಎನ್ನುವುದು.ಮತ್ತು ಫ್ರೆಂಚ್  ಮಹಾಕ್ರಾಂತಿ , ಮತ್ತು ಆ  ಕಾಲಘಟ್ಟದ ಸಾಮಾಜಿಕ ಚಿಂತಕರಿಗೆ ಪ್ರಭಾವಿತರಾಗಿ ತಮ್ಮ ಬರಹದ ಹೊಳಪನ್ನು ಹೆಚ್ಚಿಸಿಕೊಂಡರು ಎನ್ನುವುದನ್ನು ಮನಗಾಣಬಹುದು. 

ಜಯಂತರು ಒರಟು ಕಲ್ಲನ್ನೂ ಒಂದು ಹೂವು ಮುಟ್ಟಿದಂತೆ ಮುಟ್ಟುತ್ತಾರೆ. ಅಂದರೆ ಇವರ ಕವಿತೆಯಲ್ಲಿ ಹೊರಗಿನಿಂದ ಬಂದುದೆಲ್ಲ ಹೂಸ್ಪರ್ಶವನ್ನು ಪಡೆದುಕೊಳ್ಳುತ್ತದೆ. ಇವರ ಈ ಅಭಿವ್ಯಕ್ತಿಗೆ ಭಾಷೆಯೂ ಬಸವನಹುಳುವಿನ ಥರ ಇವರನ್ನು ಕರೆದುಕೊಂಡು ಹೋಗುತ್ತದೆ. ಇಲ್ಲಿಯ ಕವಿಗೆ ಅದು ಮುಖ್ಯ, ಇದು ಮುಖ್ಯ, ಅದನ್ನು ಕಾಣಬೇಕಿತ್ತು, ಇದನ್ನು ಬಿಟ್ಟಿ ಎನ್ನುವ ಕೊರಗಿಲ್ಲ, ಜಿಜ್ಞಾಸೆಗಳಿಲ್ಲ. ಏಕೆಂದರೆ ಅವರು ಕಾಣುವುದೇ ಮುಖ್ಯವಾಗಿದೆ. ಅಂದರೆ ಕವಿತೆಯೊಳಗೆ ಬರುವುದೆಲ್ಲವೂ ಘನಮೌಲ್ಯವನ್ನು ಪಡೆದುಕೊಳ್ಳುತ್ತದೆ. ಬಿಸಾಡಲ್ಪಟ್ಟಿರುವ ವಸ್ತುಗಳೇ ಇವರ ಕವಿತೆಯೊಳಗೆ ಬಂದು ಒಂದು ಇಮೇಜನ್ನು ಸೃಷ್ಟಿಮಾಡುತ್ತವೆ. ‘ಸುಣ್ಣದ ಗೋಡೆಯ ನಂಬರು’ ಉದಾಹರಣೆ. ಕವಿತೆಯೇ ಸಾಕು ಮನುಷ್ಯನಲ್ಲಿನ ಕೊಳೆಯನ್ನು ಸೋಸಿ ಹೊರಗೆ ಹಾಕಲು.

ಈ ಕೊಳೆಯೆನ್ನುವುದು ಸಾಮಾಜಿಕದ್ದಾದರೂ ಆಗಿರಬಹುದು, ಸೈಕಾಲಜಿಕಲ್ ಆಗಿರಬಹುದು, ಮತ್ತಿನ್ನ್ಯಾವುದಾದರೂ ಆಗಿರಬಹುದು. ಆ ಎಲ್ಲ ಅನಿಷ್ಟಗಳನ್ನು ಅಳಿಸುತ್ತದೆ ಕವಿತೆಯೆನ್ನುವ ಮಾಯಾವಿ. ಆದರೆ ಕವಿತೆಯೊಳಗೆ ಹೋಗಬೇಕು. ಖುದ್ದಾಗಿ. ಅದು ತಕ್ಷಣಕ್ಕೆ ತನ್ನ ಬಾಗಿಲನ್ನು ತೆರೆಯುವುದಿಲ್ಲ, ಕಾಯಬೇಕು, ಪ್ರಯತ್ನಮಾಡಲೇಬೇಕು. ನಿರಂತರ. ಅದೇ ಕಷ್ಟ ಲೋಕಕ್ಕೆ. ಹೊರಗೇ ನಿಂತುಕೊಂಡೇ ಕವಿತೆಯನ್ನು ಅಪಾರ್ಥಮಾಡಿಕೊಳ್ಳಲು ಕಾಯುತ್ತಿರುತ್ತದೆ.  ಮತ್ತು ಅದಕ್ಕೆ ಹೊರಗಡೆಯಂದ ಆಶಯಗಳನ್ನಾಗಲಿ, ಸಂದೇಶಗಳನ್ನಾಗಲಿ ಹೇರಿದರೆ ಅದು ಕವಿತೆಯಾಗುವುದಿಲ್ಲ. ಬದಲಿಗೆ ಒಂದು ಕರಪತ್ರವಾದೀತು ಅಷ್ಟೆ. ಕವಿತೆ ಏನನ್ನು ಹೇಳಿದರೂ ಮಾತನ್ನೆ ಅವಲಂಬಿಸಿರುತ್ತದೆ. ಮಾತೇ ಪ್ರಾಣ ಅದಕ್ಕೆ. ಮೌನವನ್ನೂ ಮಾತಿನಲ್ಲೇ ಹೇಳಬೇಕಾದ ಅನಿವಾರ್ಯತೆ, ವೈಶಿಷ್ಟ್ಯತೆ ಅದರದು.

ಕವಿತೆಯಾಚೆಗಿನ ಬರೀ ಮಾತು ಕವಿತೆಯೊಳಗೆ ಸೇರಿಕೊಂಡ ಕೂಡಲೇ ಒಂದು ಇಮೇಜಾಗಿ ಪರಿವರ್ತನೆಗಳ್ಳುತ್ತದೆ. ಕಾಲಾದೇಶ ಸಂದರ್ಭ ಸನ್ನಿವೇಶ ವ್ಯಕ್ತಿಗಳಿಗೆ ಅನುಸಾರವಾಗಿ ತನ್ನ ಅರ್ಥಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತದೆ. ಕಾಲಕ್ಕೆ ಸೆಡ್ಡುಹೊಡೆಯುತ್ತ ಮನುಷ್ಯನ ಪ್ರಜ್ಞೆ, ಅರಿವಿನ ಮೇಲೆ ಬೆಳಕನ್ನು ಚೆಲ್ಲುತ್ತದೆ. ಆಗ ಲೋಕದ ಆತ್ಮವಂಚಕತನಗಳೆಲ್ಲ ಡಅವಮಾನಕ್ಕೊಳಗಾಗಿ ಅಳಿದುಹೋಗುತ್ತವೆ. ಆದರೆ ಕವಿತೆ ಇದನ್ನೆಲ್ಲ ತನ್ನ ಹಣೆಮೇಲೆ ಬರೆದುಕೊಂಡು ಇರುವುದಿಲ್ಲ. ಇದೆಲ್ಲ ಕವಿತೆಯೊಡನೆ ಸಂವಾದಿಸುವಾಗ ಸಂಭವಿಸುವಂತಹದ್ದು, ಆಗುವಂತಹದ್ದು. ಯಾವ ಹೂವೂ ಸಹ ತಾನು ಅರಳುತ್ತಿರುವುದ ನೋಡಿ ಆನಂದಿಸಲು ಕಾಯುತ್ತಿರಿ ಎಂದು ಹೇಳುವುದಿಲ್ಲ. ಕವಿತೆಯೂ ಹಾಗೆ. ಆದರೆ ಇದರ ಮುಂದೆ ಸಮಾಜದ ವಕ್ರಗಳು ಜಗಜ್ಜಾಹಿರವಾಗುವುದಂತೂ ದಿಟ.

ಕವಿತೆಗೆ ಅಂತಹದ್ದೊಂದು ಶಕ್ತಿ ಅದು ಹೇಗೋ ದಕ್ಕಿಬಿಟ್ಟಿದೆ. ಜಯಂತರ ಕವಿತೆಗಳು ನಮ್ಮೊಳಗೆ ಉಂಟುಮಾಡುವುದು ಈ ಅನುಭವಗಳನ್ನೇ. ಆದರೆ ಮಳೆಬರುವುದನ್ನೇ ಕಾಯುತ್ತ ಹೊಲವನ್ನು ಹಸನುಮಾಡಿಕೊಂಡಿರುವ ರೈತರಂತೆ ಕಾಯಬೇಕು ಅವರ ಸಾಲುಗಳ ಹಿಂದೆಯೇ ಹೋಗುತ್ತ. ಅವರು ಕಟ್ಟಿಕೊಡುವ ಬದುಕನ್ನು ಒಳಗೆ ಎಳೆದುಕೊಳ್ಳಬೇಕು. ಬದುಕಿನಲ್ಲಿ ಏಕಕಾಲದಲ್ಲಿ ಎಷ್ಟೊಂದೆಲ್ಲಾ ಘಟಿಸುತ್ತಿರುತ್ತದೆ. ಮನುಷ್ಯನ ಸಂವೇದನೆ ತನಗೆ ಏನು ಸೆಳೆಯುವುದೋ ಅದರ ಕಡೆ ಆಸಕ್ತಿಯನ್ನು ವಹಸಿಸುತ್ತದೆ. ಹೀಗಿರುವಾಗ ಕವಿಯಾದವನು ಇದರ ಬಗ್ಗೆ ಹೇಳಬಗೇಕಿತ್ತು, ಆದನ್ನು ಹೇಳಬೇಕಿತ್ತು ಎಂದು ಆರೋಪ ಮಾಡಿದರೆ ಅದು ಅಸಂಬದ್ದವಾದಂತೆಯೇ ಸರಿ. ಮತ್ತೂ, ಎಲ್ಲವೂ ಈ ಸೃಷ್ಟಿಯಲ್ಲೇ ಆಗಿರುವುದರಿಂದ ಒಂದಕ್ಕೊಂದು ಸಂಬಂಧವಿದ್ದೇ ಇರುತ್ತದೆ.

ಒಂದು ನಿಜಕವಿತೆ ಅಥವಾ ಕಲೆ ಅಥವಾ ಸಾಹಿತ್ಯ ಮನುಷ್ಯತ್ವದ ಬಗ್ಗೆ, ಕರುಣೆ ಬಗ್ಗೆ, ಬದುಕಿನ ಪ್ರೀತಿ ಬಗ್ಗೆ ಅಂತರ್ಗತವಾಗಿ ಮಿಳಿತಗೊಂಡಿರುತ್ತದೆ. ಸಮಾಜದ ಅನ್ಯಾಯದ ಬಗ್ಗೆ ಮಾತಾಡುತವುದು ಅಥವಾ ಟೀಕಿಸುವುದು ಅಂದರೆ ಬದುಕಿನಲ್ಲಿ ಪ್ರೀತಿಯ ದಾರಿಗಳನ್ನು ಕವಿತೆ ಹುಡುಕಲು ತುಡಿದರೆ ಸಾಕಾರಗೊಂಡಂತೆಯೇ ಅಲ್ಲವೆ. ಪ್ರೀತಿಗಿಂತ ಬದ್ಧತೆ ಯಾವುದಿದೆ. ಒಂದು ನಿಜವಾದಂತಹ ಕವಿತೆ ಅದನ್ನು ತನ್ನ ಭಿತ್ತಿಯಾಗಿಯೇ ಇಟ್ಟುಕೊಂಡಿರುತ್ತದೆ. ಜಯಂತರ ‘ಚಿನ್ಹೆ’, ‘ಗುನ್ಹೆಗಾರ’, ‘ಬಾಳೆಗುಳಿ ಕ್ರಾಸ್’ ಕವಿತೆಗಳು ಬದುಕನ್ನು ಎಷ್ಟು ಸಾಂದ್ರವಾಗಿ ಅವಿಸಿಟ್ಟುಕೊಂಡಿದ್ದಾವೆಂದರೆ ಅವೇ ಒಂದು ಪುಟ್ಟ ಜಗತ್ತನ್ನು ಸೃಷ್ಟಿಮಾಡುತ್ತವೆ. ಅವುಗಳಲ್ಲೆಲ್ಲ ವ್ಯಕ್ತವಾಗಿರುವುದ ಜೀವನ ಪ್ರೀತಿ, ಮನುಷ್ಯತ್ವ, ಮತ್ತು ಬದುಕಿನ ಸೊಬಗು, ವಾಸ್ತವದ ಜೊತೆಗೆ ಸಹಜವಾಗಿ ಬದುಕಲು ಹೋರಾಟದಂತಹ ಬದುಕನ್ನು ಬದುಕುತ್ತಿರುವ ವ್ಯಕ್ತಿಗಳು. 

‘ಊರೆಂಬ ಪ್ರಾಣದೇವರು’ ಕವಿತೆಯಲ್ಲಿ ಕಾಲದ ಸ್ಥಿತ್ಯಂತರ, ಮನುಷ್ಯನ ಸಾಮಾಜಿಕ ಬದುಕಿನಲ್ಲಿ ಆದಂತಹ ಬದಲಾವಣೆ ಎಷ್ಟು ಘನಗೊಂಡು ಚಿತ್ರಿತವಾಗಿದೆಯೆಂದರೆ ಈ ಕವಿತೆ ಪ್ರಸ್ತುತದ ಸನ್ನಿವೇಶ, ಸಂದರ್ಭಗಳಿಗೆ ಕನ್ನಡಿ ಹಿಡಿದಂತಿದೆ. ಅದನ್ನು ತೋರಿಸುತ್ತ ರಾಜಕೀಯ ಕವಿತೆಯೂ ಆಗಿಬಿಡುತ್ತದೆ:

ಓಲಾ ನಡೆಸು ಎಂದು ಗೆಳೆಯರು ಕರೆದರೂ ಇಲ್ಲಾ ಹರ್ಗಿಸ್/ ಎಲ್ಲಾ, ಅಲ್ಲಿ ಸೌಂದಾಳೆ ಮಡ್ಲೆ ಇತ್ಯಾದಿ ಪ್ರಾಣದೇವರಂಥ ಮೀನು/ಸಿಗುವುದಿಲ್ಲಾ. ಅಲ್ಲಿ ಅಘನಾಶಿನಿ ಇಲ್ಲಾ, ಅಲ್ಲಿ ಸಮುದ್ರ ಇಲ್ಲಾ..

ಬಂದುಳಿದು ಕೊಂಡವರೂ ವಯಸ್ಸಾದವರೇ. ಯಾವ ಮನೆಯ/ಹಿತ್ತಲ ಒಣಗು ತಂತಿಯ ಮೇಲೂ ಬಣ್ಣಬಣ್ಣದ ಯು ಉಡುಪುಗಳು/ಕಾಣದೇ ದಶಕಗಳಾಗಿವೆ. ವೃದ್ಧಾಶ್ರಮ ಅಂತ ಬೇರೆ ಮಾಡಬೇಕಾಗೇ ಇಲ್ಲ.

ಕೆಲವು ಕವಿತೆಗಳು ಇಡೀಯಾಗಿ ಇಷ್ಟವಾಗಿದ್ದಿದ್ದರೂ ಅದರಲ್ಲಿನ ಕೆಲವು ಮಿಂಚಿನಂತಹ ಸಾಲುಗಳು ಮನಸ್ಸಿನೊಳಗೆ ಇಳಿದು ಬಹಳಕಾಲ ಕಾಡತೊಡಗುತ್ತವೆ. ಅಂತಹ ಅಂತಹ ಸಾಲುಗಳು ಟಪಾಲು ಗಾಡಿ ಕವಿತೆಯಲ್ಲಿ: ಒಂದು ಮಗು ಅತ್ತರೆ ಬಸ್ಸೇ ಮನೆಯಗುವುದು/ಅಮ್ಮ ತಟ್ಟು ಲಯಕೆ ತನ್ನ ಅಳುವನು ತನಗೇ/ಜೋಗುಳವಾಗಿಸುತ ಮಗು ನಿದ್ದೆಗೆ ಜಾರುವುದು.

ವಿಚಿತ್ರಸೇನನ ಹೆಸರಿನಲ್ಲಿ ಮೂರೋ ನಾಕೋ ಕವಿತೆಗಳಿವೆ. ಬದುಕು ಇಷ್ಟೊಂದು ಪ್ರತಿಮೆಗಳ ಸಾಂದ್ರತೆಯಿಂದ ಕೂಡಿದೆಯಾ, ಮತ್ತೆ ನಮಗೆ ಏಕೆ ಕಾಣಲೇ ಇಲ್ಲ ಅವೆಲ್ಲ ಎನ್ನಿಸುತ್ತವೆ ಆ ಕವಿತೆಗಳು. ಪದ್ಯದ ಆತ್ಮದಲಿ ಗದ್ಯದ ರೂಪವಿರುವ ಈ ಕವಿತೆಗಳು ವಿಚಿತ್ರಸೇನನ ಮೂಲಕ ಬದುಕನ್ನೇ ಹೆಣೆದು ತೋರಿಸುತ್ತವೆ. ತನ್ನನ್ನು ಆವರಿಸಿಕೊಂಡಿರುವ ಬದುಕನ್ನು ತೀವ್ರವಾಗಿ ಬದುಕುವ ವಿಚಿತ್ರಸೇನ ಬದುಕಿನ ವ್ಯಾಮೋಹಿ. ಲೋಕದ ಕಾಳಜಿ ಮಾಡುವವನು. ಆದರೆ ಅದರ ಉಸಾಬರಿಗೆ ಹೋಗದೆ ತನ್ನ ಮನದ ಇಂಗಿತದಂತೆ ಒಬ್ಬನೇ ಇದ್ದು ಎಲ್ಲರನಡುವೆ ಬದುಕನ್ನು ಧ್ಯಾನದಂತೆ ಬದುಕುತ್ತಿರುವವನು. ಬಾಕಿ ಅರ್ಧ ಕವಿತೆಯ ಸಾಲುಗಳು : ವಿಚಿತ್ರಸೇನ ಬಸ್ಸಿನಲ್ಲಿ ಅರ್ಧ ಟಿಕೆಟ್ಟು ಕೊಡ್ರೀ ಅಂತಾನೆ/ಯಾಕೋ ಅಂದ್ರೆ ನಾನು ಅರ್ಧಾನೇ ಅದೀನ್ರೀ ಅಂತಾನೆ/ಬಾಕಿ ಅರ್ಧ ಎಲ್ಲಿದೆ ಅಂದ್ರೆ/ಅದನ್ನೇ ಹುಡುಕಾಕ ಹೊಂಟೇನ್ರೀ ಅಂತಾನೆ.

ಇಲ್ಲಿನ ಕವಿತೆಗಳಲ್ಲಿ ತೋರಿಸಲ್ಪಟ್ಟಿರುವ ಜಗತ್ತು, ಲೋಕ, ಸಮಾಜ, ಊರು, ಕೇರಿ, ಶಹರು, ಪರಿಚಿತವೇ; ಆದರೆ ಅವುಗಳ ಒಳಗೆ, ನಡುವೆ ಏನೆಲ್ಲಾ ಘಟಿಸುತ್ತದೆ, ಆಗುತ್ತದೆ, ನಡೆಯುತ್ತದೆ ಎನ್ನುವುದನ್ನು ಕಾದಂಬರಿ ಮಾತ್ರ ತೊರಿಸಬಹುದಾದುದನು ಜಯಂತರು ತಮ್ಮ ಗುಂಗ್ಹಿಡಿಸುವ ಭಾಷೆಯಲ್ಲಿ ಹರಿಸಿದ್ದಾರೆ. ಇದು ಕವಿಗಿಂತಲೂ ಮಿಗಿಲಾಗಿ ಭಾಷೆಯ ಹೆಮ್ಮೆಯೇ ಹೌದು.

‍ಲೇಖಕರು Avadhi

April 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: