ಕಾಡುವ ನೆನಪುಗಳ ಹೊತ್ತ ಆ ದಿನಗಳೇ ಕಾಡದಿರಿ…

ಕನ್ನಡಕ್ಕೆ : ಹೇಮಾ ಖುರ್ಸಾಪುರ

ಇತ್ತೀಚೆಗೆ ನೋಡಿದ Anmiray Opperman  ಬಗ್ಗೆ ಇದ್ದ Green Renaissance ತಯಾರಿಸಿದ ದೃಶ್ಯ-ಕಾವ್ಯದಂತಹ ಡಾಕ್ಯುಮೆಂಟರಿ ಬಿಟ್ಟುಬಿಡದಂತೆ ಕಾಡುತ್ತಿದೆ. LIVE YOUR TRUTH Your struggles don’t define you ಎನ್ನುವ ಡಾಕ್ಯುಮೆಂಟರಿ. ಅಷ್ಟೇನೂ ಬೆಳಕಿಗೆ ಬರದ ಕವಯತ್ರಿ ತನ್ನ ಮೇಲೆ ಚಿಕ್ಕಂದಿನಲ್ಲಾದ ಅತ್ಯಾಚಾರದ ನೆನಪನ್ನು ಬದುಕಿನಿಂದ ಕಿತ್ತೊಗೆದ ಬಗೆಗಿನ ಪುಟ್ಟ ಸಾಕ್ಷ್ಯಚಿತ್ರ. 

ಬಾಲ್ಯದ ಮೇಲೆ ಬಿದ್ದ ಕರಿನೆರಳುಗಳ ವಿರುದ್ಧ ಹೋರಾಡಿ ಗೆದ್ದು ಬದುಕ ಕಟ್ಟಿಕೊಂಡವರ ಕತೆ. ನೋಡುತ್ತಾ ಮನದಲ್ಲಿ ನನ್ನೂರಿನ ನಾ ಕೇಳಿದ ಹೆಣ್ಮಕ್ಕಳ ಕತೆಗಳು ಸುಳಿದು ಹೋದವು. ದೇಹದ ನೋವು ಮನಸಿನ ಗಾಯವಾಗಿ ಬಿಡುವ ಅತ್ಯಾಚಾರ ಅದೆಷ್ಟು… ಘೋರ…

ಆ ಚಿತ್ರದಲ್ಲಿ ಆ ಕತೆಯನ್ನು ಅವಳೊಂದು ಕವಿತೆಯ ರೂಪದಲ್ಲೇ ನಿರೂಪಿಸುತ್ತಾಳೆ. ಕಾಡಿದ ಆ ಸಾಲುಗಳ ಆ ಭಾವವನ್ನಷ್ಟೇ ಇಲ್ಲಿ ನೀಡುತ್ತಿರುವೆ.

ನಾನು, ನನ್ನಪ್ಪನ ಸೂಳೆ

ಮೂಲ : ಅನ್ಮಿರಾಯ್ ಒಪರ್ಮನ್

ನಾನು ನನ್ನ ಕಣ್ಣೀರನ್ನು ಪ್ರೀತಿಸುತ್ತೇನೆ. 
ಕಣ್ಣೀರನ್ನು ಪ್ರೀತಿಸುತ್ತೇನೆ.

ಕಣ್ಣೀರು, ಗುಣಮುಖಳಾಗುವ ಹಾದಿಯನ್ನು ನನ್ನೊಳಗೆ ಕೊರೆದಿದೆ.
ಇದು ಪೂರ್ಣವಾಗುವುದು ಅವರು ಗುರುತಿಸಿದಾಗಲೇ
ನಾನು ನೆಮ್ಮದಿಯಾಗಿದ್ದಾಗ ನೆಮ್ಮದಿಯಾಗಿರುತ್ತೇನೆ.
ನೆಮ್ಮದಿಯಾಗಿಲ್ಲ ಅಂದರೆ ನೆಮ್ಮದಿಯಾಗಿಲ್ಲ ಅಷ್ಟೇ
ಏರಿಳಿತಗಳು ಏರಿಳಿತಗಳು… ಅದುವೇ ಬದುಕು.

ಅದು ಬದುಕು… ನೀವದಕ್ಕೆ ತೆರೆದುಕೊಳ್ಳಬೇಕು, 

ಒಪ್ಪಿಕೊಳ್ಳಬೇಕು

ನೀವು ನೆಮ್ಮದಿಯಾಗಿಲ್ಲದಿರುವಾಗ… ಇರಲಿ ಪರವಾಗಿಲ್ಲ…
ಚೆನ್ನಾಗಿರದಿದ್ದರೂ ಪರವಾಗಿಲ್ಲ.

ಆಳದ ತಿಳಿವಳಿಕೆ ಇರುವುದು ಬಾವಿಯ ತಳದಲ್ಲಿ ಮಾತ್ರವಂತೆ
ಹಾಗಾಗಿ ಆಳಕ್ಕೆ ಇಳಿಯಬೇಕು… ನೀವೇ ಇಳಿಯಬೇಕು,
ಅದರ ಮೂಲ ಕಂಡುಕೊಳ್ಳಿ, ಕಿತ್ತುಹಾಕಿ
ಏನದು ಕಣ ಕಣವಾಗಿ ಬಿಡಿಸಿ ನೋಡಿ
ಕಿತ್ತು ಬೇರೆಡೆ ನೆಡಿ. ಬದಲಾಯಿಸಿ.

ಕಾವ್ಯ ಬಹಳಷ್ಟು ಸಂಗತಿಗಳನ್ನು ಅರಿಯಲು ಸಹಾಯ ಮಾಡುತ್ತದೆ
ಮುಂಜಾನೆ
ಕುಂಚವನ್ನು ಎತ್ತಿಕೊಳ್ಳುತ್ತೇನೆ.
ಜತನದಿಂದ ನನ್ನ ನಗುವನ್ನು ಚಿತ್ರಿಸುತ್ತೇನೆ.
ಗೆರೆಗಳನ್ನು ಎಳೆಯುತ್ತಾ ಒಂದರೊಳಗೊಂದು ಬೆಸೆಯುತ್ತೇನೆ
ಈಗ ಈಗ ಮರೆಮಾಡಬೇಕು
ಆದರೆ, ಅಲ್ಲಿ ಏನೂ ಇಲ್ಲ.
ಸ್ವಲ್ಪ ಯತ್ನಿಸಿ ಹೊರದೂಡುತ್ತೇನೆ
ಇದು ಸತ್ಯದ ಕೊನೆಯ ಹನಿ.

ಮುಸ್ಸಂಜೆ ಇಳಿಯುತ್ತಿದೆ
ಕ್ಯಾನ್ವಸ್‌ ಅಳಿಸುವ ಹೊತ್ತು
ನಾಳೆ… ನಂಬಿಕೆಯ ಮತ್ತೊಂದು ದಿನವಲ್ಲವೇ
ಎಲ್ಲ ಸರಿಯಿದೆ ಎನ್ನುವ ನಟನೆ
ಸದ್ಯಕ್ಕೆ, ನೆಮ್ಮದಿಯಾಗಿದ್ದೇನೆ
ನಾನೀಗ ಗುಣಮುಖಳಾಗುವ ಹಂತದಲ್ಲಿದ್ದೇನೆ.
ಹೇಗಿದ್ದೀಯಾ ಎಂದು ಅವರು ಕೇಳಿದಾಗ ಏನು ಹೇಳಲಿ?
ಹೊರಳಿ ನೋಡಿದರೆ, ಬಹಳ ದಿನಗಳಿಂದ ಆರಾಮಾಗಿಲ್ಲ
ಅದನ್ನು ಸರಿಮಾಡಲು ಅದರ ಬಗ್ಗೆ ತಿಳಿಯಬೇಕಿತ್ತು
ನನ್ನನ್ನು ನಿಯಂತ್ರಿಸಲಾಗಿದೆ.

ಏನಾಗಬೇಕು ಎಂದು ಹೇಳಲಾಗಿದೆ
ನನ್ನ ಅಪ್ಪನಿಂದ.
ಅಪ್ಪ…
ಹ್ಮೂಂ…

ಅಪ್ಪ…
ಬಾಯಿ ಬಿಟ್ಟರೆ ಬರೀ ಬೈಗುಳಗಳೇ.
ಅಪ್ಪ ನನ್ನನ್ನು ಹಾದರಗಿತ್ತಿ ಎನ್ನುತ್ತಿದ್ದ
ಸೂಳೆಯಾಗುತ್ತೇನೆ ಎನ್ನುತ್ತಿದ್ದ
ಅಪ್ಪ ಯಾಕೆ ಹಾಗಂದ ನನಗೆ ಗೊತ್ತು
ನನ್ನನ್ನು ಹಾದರಗಿತ್ತಿ ಅಂದಾಗ ಅದು ಅವನ ಮನಸ್ಸಾಕ್ಷಿಯ ಮಾತಾಗಿತ್ತು

ಏಕೆಂದರೆ ನಾನು ಅವನ ಸೂಳೆಯಾಗಿದ್ದೆ
ಐದನೇ ವಯಸ್ಸಿನಲ್ಲಿ,
ಅವನನ್ನು ಎದುರಿಸಿದೆ
ಬಾಲ್ಯದ ಎಲ್ಲವೂ ನೆನಪಿದೆಯೆಂದು ಅವನಿಗೆ ಹೇಳಿದೆ.
ನೀನು ನನ್ನ ಮೇಲೆ ಅತ್ಯಾಚಾರ ಮಾಡಿದ್ದೀ.

ನಾನು ಸುಮ್ಮನಿರುವುದಿಲ್ಲ
ಇದರಿಂದ ಹೊರಬರಬೇಕು
ಗುಣವಾಗಬೇಕು
ಗುಣವಾಗಲು ಮಾತಾಡಬೇಕು
ಅದನ್ನು ಬೆಳಕಿಗೆ ತರಬೇಕು
ಅದು ನನ್ನನ್ನು ಹಿಡಿದಿಡಲು ಬಿಡುವುದಿಲ್ಲ
ಇದು ನನಗಾಗಿ
ನನ್ನ ಮನಸ್ಸಿನ ಸ್ವಾಸ್ಥ್ಯಕ್ಕಾಗಿ
ಇನ್ನೊಂದು ಹೆಣ್ಣು ಮಗುವನ್ನು ಉಳಿಸುವ ಸಲುವಾಗಿ
ಹೌದು ಅದಕ್ಕಾಗಿಯೇ ಮಾಡಬೇಕು
ನೋವಿನ ಭಾರ, ಅವಮಾನ
ಅಸಹನೀಯ
ನನಗಿದು ಬೇಡ
ಅಪರಾಧಿಭಾವ, ಅವಮಾನದಿಂದ ಮುಕ್ತಗೊಳ್ಳಬೇಕು
ಬಾಯ್ಮುಚ್ಚಿಸುವುದರೊಂದಿಗೆ ಎಲ್ಲ ಮುಗಿಯುತ್ತದೆ
ಯಾರಿಗೆ ಬೇಕಾದರೂ ಗೊತ್ತಾಗಲಿ. ಹೆದರುವುದಿಲ್ಲ
ನಾನು ಸ್ವತಂತ್ರಳು
ನಿಮಗೆ ಗೊತ್ತು.

ಈ ವರ್ಷ ಮೇ ಎರಡರಂದು ಅಪ್ಪ ಸತ್ತ
ಸಾಯುವ ಮುನ್ನ ತನ್ನ ಕೋಣೆಗೆ ಕರೆದ
ಹೋಗಿ ಹಾಸಿಗೆಯ ಪಕ್ಕದಲ್ಲಿ ನಿಂತೆ, ಅಪ್ಪ ಕೇಳಿದ
‘ನಾವು ಹಿಂದಿನದನ್ನು ಮರೆಯಲು ಸಾಧ್ಯವೇ?’
ಅವನು ಕ್ಷಮೆ ಕೇಳುತ್ತಿದ್ದಾನೆ ಎಂದು ಗೊತ್ತಾಯಿತು
ನಾನು ಹೀಗೆಂದೆ:

‘ನಾನು ನಿನ್ನ ಕ್ಷಮಿಸುವ ಸ್ಥಾನದಲ್ಲಿದ್ದೀನಿ ಅಪ್ಪ.’
‘ಮೊದಲು ನಿನ್ನನ್ನು ನೀನು ಕ್ಷಮಿಸಬೇಕು.’
‘ಐ ಲವ್ ಯು. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ ಅಪ್ಪ.’

‘ಇದು ಎಂದಿಗೂ ಬದಲಾಗುವುದಿಲ್ಲ.’
ಇದು ನಾನು ಕಲಿಯಬೇಕಾಗಿದ್ದ ಪಾಠವಾಗಿತ್ತು.
ಕ್ಷಮಿಸುವುದು, ಆಗಿದ್ದು ಆಗಿ ಹೋಯಿತು ಎನ್ನುವುದನ್ನು ಕಲಿಯಬೇಕಾಗಿತ್ತು.
ನಾವು ಕತ್ತಲೆಯಿಂದ ಬೆಳಕಿನತ್ತ ಬರುತ್ತೇವೆ
ಒಳಗೆ ಅಡಗಿರುವ ಸುಳ್ಳುನ್ನು ಬೆಳಕಿನಲ್ಲಿ ತೋರಲು.

ನನ್ನ ಕವಿತೆಗಳು ಉಳಿದ ಹೆಣ್ಣು, ಗಂಡುಗಳಿಗೆ ಸಹಾಯ ಮಾಡಲೆಂದು ಬಯಸುತ್ತೇನೆ

ಅವರ ಬದುಕಿನ ಪಯಣದ ಮೂಲಕ,
ಒಳಗಿನಿಂದ ಗುಣಮುಖರಾಗುವ ಪ್ರಯಾಣಕ್ಕಾಗಿ ಅವರನ್ನು ಮುಂದೂಡಲು.
ನೀವು ಈ ಭೂಮಿಗೆ ಉಡುಗೊರೆಯಂತೆ.
ನಿಮ್ಮ ವಿಶೇಷ ಉಡುಗೊರೆಯನ್ನು ಕಂಡುಕೊಳ್ಳುವುದು ನಿಮಗೆ, ನಿಮಗೆ ಮಾತ್ರ ಬಿಟ್ಟಿದ್ದು,
ಅದನ್ನು ಜೀವಿಸಿ.

ನೀವು ಉಡುಗೊರೆಯಾಗಿದ್ದೀರಿ, ನಿಮ್ಮೊಳಗೆ ಮತ್ತೊಂದು ಉಡುಗೊರೆ ಇದೆ.
ಅದನ್ನು ಹುಡುಕುವಲ್ಲಿ ಬದುಕುವಲ್ಲಿ,
ಅದು ಈ ಜಗತ್ತಿಗೆ ಉಡುಗೊರೆಯಾಗಿದೆ.
ನಾನು ಯಾರೋ ಒಬ್ಬರು ಎಂದು ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೇನೆ
ಈ ಭೂಮಿಯ ಆತ್ಮಗಳಿಗೆ ಯಾರು ಸಹಾಯ ಮಾಡಿದರು…
ಒಬ್ಬರು ಹೇಗೆ ಹೇಳಬಹುದು…

ಇಲ್ಲಿ ಹೂಗಳಂತೆ ಬದುಕೂ ಅರಳುತ್ತವೆ!

ಬದುಕು ಒಳ್ಳೆಯದಿದೆ.
ಬದುಕು ಚೆಂದವಿದೆ.
ನಾನು ಇಲ್ಲಿದ್ದೇನೆ, ನೀವು ಇಲ್ಲಿದ್ದೀರಿ.
ಬದುಕು ನಿಜಕ್ಕೂ ಸುಂದರವಾಗಿದೆ.

‍ಲೇಖಕರು Admin

September 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: