ಸದಾಶಿವ್ ಸೊರಟೂರು ಕಥಾ ಅಂಕಣ- ನಯಾಜ್ – ದಿವ್ಯ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

9

ನಯಾಜ್ ನಿನ್ನೆ ನಂಜೆ ಕೆಲಸದಿಂದ ಬರುವಾಗಲೇ ತಂದಿದ್ದ ‘ಪ್ರೆಗಾ ನ್ಯೂಸ್’ ಅವಳನ್ನು ಇನ್ನೂ ಮುಂಜಾನೆ ನಾಲ್ಕು ಗಂಟೆಗೆ ತಟ್ಟಿ ಎಬ್ಬಿಸಿದಂತಾಯ್ತು. ದಿವ್ಯ ಎದ್ದು ಕೂತಳು. ನಯಾಜ್ – ದಿವ್ಯ ಈ ಎರಡೂ ಹೆಸರುಗಳು  ನೋಡುವವರಿಗೆ ಹೇಗೂ ಹೊಂದುವುದಿಲ್ಲ. ಆದರೆ ಹೆಸರನ್ನು, ಅದರ ಹಿಂದಿನ ಎಲ್ಲಾ ವಿಚಾರಗಳನ್ನು ಕೈಬಿಟ್ಟು ಅವರು ಅವರಾಗಿ ಮಾತ್ರ ಒಂದಾಗಿದ್ದರು. ವಿವಾಹ ನೋಂದಣಿ ಕಛೇರಿಯಲ್ಲಿ ತಮ್ಮ ತಮ್ಮ‌ ಹೆಸರುಗಳಿಂದಲೇ ಗಂಡ-ಹೆಂಡತಿಯರಾಗಿ ಸಹಿ ಮಾಡಿದ್ದರು. 

ಲವ್ ಜಿಹಾದ್ ನಡೆದು ಹೊಯಿತು ಅಂತ ಒಂದಷ್ಟು ದಿನ ಗಲಾಟೆ ಆಯ್ತು. ಖುದ್ದು ದಿವ್ಯ ತನ್ನ ಹೇಳಿಕೆ ಕೊಟ್ಟು ನಮ್ದು ಅಪ್ಪಟ ಪ್ರೀತಿ ಮದುವೆ ಎಂದು ಬಹಿರಂಗ ಪಡಿಸಿದ್ದಳು. ತೀರ ಹಿಂದುಳಿದವರ ಮನೆಯ ಹುಡುಗಿಯಾದ ಅವಳ ಈ ನಡೆಯನ್ನು ಹೆಚ್ಚಿನವರು ಟೀಕಿಸಿ ಮಾತಾಡಿದರು. ನಯಾಜ್‌ಗೆ ತುಂಬಾ ಬೆದರಿಕೆಗಳು ಬಂದವು ತಮ್ಮವರಿಂದ ಮತ್ತು ಹೊರಗಿನಿಂದಲೂ ಕೂಡ.  ಬಹುಸಂಖ್ಯಾತರ ನಡುವೆ ನೆಮ್ಮದಿಯಾಗಿ ಬದುಕುವುದು ಎಷ್ಟೊಂದು ಕಷ್ಟ ಅಂತ ಅವನಿಗೆ ಅರಿವಾಗಿತ್ತು. ಯಾವುದೊ ಕ್ಷುಲಕ ಕಾರಣಕ್ಕೆ ತನ್ನ ಅಪ್ಪನನ್ನು ಕಟ್ಟಿ ಹಾಕಿ ಹೊಡೆದದ್ದು, ಜಾತಿಯ ಕಾರಣಕ್ಕೆ ಎಷ್ಟೊ ಜನ ಆತ್ಮೀಯರಾಗದೆ ಹೋದದ್ದು ಅವಳ ಎದೆಯಲ್ಲಿ ನಿಗಿನಿಗಿಯಾಗಿ ಉರಿಯಿತ್ತಿತ್ತು. ಈಗ ಇಬ್ಬರಿಗೂ ಕೈಯಲ್ಲಿ ಒಂದೊಂದು ಕೆಲಸ. ಇಬ್ಬರೂ ಒಂದಾದ ಒಂದು ಮನ, ಒಂದು ಮನೆ, ಒಂದು ಕನಸು.. ಹೀಗೆ ಇಬ್ಬರೂ ಒಂದಾಗಿದ್ದರು. 

ಮುಟ್ಟು ನಿಂತು ಇಂದಿಗೆ ಹತ್ತು ದಿನ ದಾಟಿದೆ. ಹೊಟ್ಟೆಯಲ್ಲಿ ನಕ್ಷತ್ರ ಮೂಡುತ್ತಿರುವ ಅನುಭವವೂ ಅವಳಿಗೆ ಆಗುತ್ತಿದೆ. ಅದನ್ನು ಖಚಿತಪಡಿಸಲು ನಯಾಜ್‌ಗೆ ‘ಪ್ರೆಗಾ ನ್ಯೂಸ್..’ ತರಲು ಹೇಳಿದ್ದಳು. ನಾಲ್ಕು ಗಂಟೆಗೆ ಎದ್ದು ಕೂತ ಅವಳನ್ನು ಆ ಕಿಟ್ ಸುಮ್ಮನೆ ಬಿಡದೆ ಕಾಡಿ ಪರೀಕ್ಷೆಗೆ ಹಚ್ಚಿತು. ಪರೀಕ್ಷಿಸಿದಳು. ಪಾಸಿಟಿವ್! ಅವಳೀಗ ಅಮ್ಮ. ನಯಾಜ್ ಅಪ್ಪನಾಗಿದ್ದ. ಒಂದು ಕ್ಷಣ ಅವಳಿಗೆ ಕೂಗಾಡುವಷ್ಟು ಖುಷಿಯಾಯಿತಾದರೂ ಖುಷಿ ಸರ್ರನೆ ಜಾರಿತು. ನಯಾಜ್‌ನನ್ನು ಎಬ್ಬಿಸಿ ಹೇಳಿದಳು. ಅವನಿಗೆ ಖುಷಿಯೊ ಖುಷಿ ಅವಳ ಹಣೆಗೆ ಮುತ್ತಿಟ್ಟ. ಆದರೆ  ಅವನಿಗೂ ಮತ್ತೇನು ಕಾಡಹತ್ತಿತು. ಇಬ್ಬರಿಗೂ ಯಾವುದೊ ದುಗುಡ ಕಾಡಿತು. ನಯಾಜ್ ಅವಳನ್ನು ಅಪ್ಪಿಕೊಂಡು ಹೇಳಿದ “ದಿವ್ಯ ನಾವಿಬ್ಬರೂ ನಮ್ಮ ನಮ್ಮ ಮಾತುಗಳನ್ನು ಮೀರಿದ್ವಿ, ನಮ್ಮ ನಿರ್ಧಾರಗಳನ್ನು ನಾವೇ ಮುರಿದು ಹಾಕಿದ್ವಿ ಅನಿಸುತ್ತೆ” ಎಂದ. ಅವಳಿಗೂ ಅವನ ಮಾತು ಸರಿ ಅನಿಸಿತು. ಆದರೆ ಈಗೇನು ಮಾಡಲು ಬರುವಂತಿಲ್ಲ. ಊರು ಇನ್ನೂ ಗಾಢ ನಿದ್ದೆಯಲ್ಲಿ ಇರುವಾಗಲೇ ಇವರಿಬ್ಬರೂ ಮಗುವಿನ ಕುರಿತಾಗಿ ಅದಕ್ಕಿಂತ ಗಾಢ ಚರ್ಚೆಯಲ್ಲಿ ತೊಡಗಿದ್ದರು. ಹೊರಗೆ ಬೆಳಕು ಮೂಡುವ ಹೊತ್ತಿಗೆ ಒಂದು ತೀರ್ಮಾನಕ್ಕೆ ಬಂದಿದ್ದರು. 

ಆಸ್ಪತ್ರೆಗೆ ಹೋಗಿ ಅಲ್ಲಿಂದ ನೇರವಾಗಿ ವಕೀಲರ ಬಳಿ ಹೋದರು. ತಮ್ಮ ವಿಚಾರನ್ನು ತಿಳಿಸಿದರು. ವಕೀಲರು ‘ನೋಡಿ ಇವ್ರೆ ಸಾಮಾನ್ಯವಾಗಿ ಅಪ್ಪನ ಕಡೆಯಿಂದಲೇ ಜಾತಿಯನ್ನು ಗುರುತಿಸಲಾಗುತ್ತೆ..’ ಅಂದು ಮುಗಿಸಿದ್ದರು. ಈ ದಂಪತಿಗಳ ವಾದ ಏನಂದರೆ ಅಮ್ಮ‌ನ ಕಡೆಯಿಂದ ಜಾತಿ, ಧರ್ಮ ಗುರುತಿಸಬೇಕು ಎಂಬುದಾಗಿರಲಿಲ್ಲ; ಅಪ್ಪನ‌‌ ಕಡೆಯಿಂದನೂ ಗುರುತಿಸುವುದಾಗಿರಲಿಲ್ಲ. ಇವರ ಬಗೆಬಗೆ ಪ್ರಶ್ನೆಗಳಿಗೆ ವಕೀಲರು ಉತ್ತರಿಸಲಾಗದೆ ಸುಮ್ಮನಾದರು. ದಂಪತಿಗಳು ಬರಿಗೈಯಿಂದ ವಾಪಸು ಬಂದರು. 

ಅಲ್ಪಸಂಖ್ಯಾತರಾಗಿ ಬಹುಸಂಖ್ಯಾತರ ಮಧ್ಯೆ ಬದುಕುವ ಕಷ್ಟ ನಯಾಜ್‌ನ ಅನುಭವದಲ್ಲಿತ್ತು. ಹಿಂದುಳಿದ ಜಾತಿಯ ಅವಮಾನದಲ್ಲಿ ಬೆಂದು ಅನೇಕ ಅವಕಾಶಗಳಿಂದ ವಂಚಿತಳಾಗಿದ್ದ ನೋವು ದಿವ್ಯಳಿಗಿತ್ತು. ತಮಗೆ ಹುಟ್ಟಿಲಿರುವ ಮಗು ಈ ಎರಡಲ್ಲಿ ಒಂದು ಆಯ್ದುಕೊಳ್ಳಲೇ ಬೇಕಿತ್ತು. ಆದರೆ ಇವರಿಗೆ ಅದು ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ ಯಾವ ಧರ್ಮ ಜಾತಿಯೊಂದಿಗೆ ಗುರುತಿಸಿಕೊಳ್ಳೋದು ಅವರಿಗೆ ಬೇಕಾಗಿರಲಿಲ್ಲ. 

ಈಗ ಈ ಬಗ್ಗೆ ಸರ್ಕಾರಕ್ಕೆ ಒಂದು ಪತ್ರ ಬರೆಯಲು ತೀರ್ಮಾನಿಸಿ ಅಂದೆ ಒಂದು ಪತ್ರವನ್ನೂ ಬರೆದುಬಿಟ್ಟರು. ಪತ್ರದಲ್ಲಿ ಅಂತರ್ಜಾತಿ ವಿಹಾಹಕ್ಕೆ ಸರ್ಕಾರ ಕೊಡುವ ಪ್ರೋತ್ಸಾಹವನ್ನು ಮೆಚ್ಚಿದ್ದರು. ನಮ್ಮ ಈಗಿನ ಜಾತಿ ಕಲಹ, ಧರ್ಮ ಕಲಹಕ್ಕೆ ಇದೊಂದು ಮದ್ದಾಗಬಹುದು ಎಂಬುದನ್ನು ಹೇಳಿದ್ದರು. ಆದರೆ ಅಂತರ್ ಧರ್ಮ ಅಥವಾ ಅಂತರ್ಜಾತಿ ಮದುವೆ ಆದವರಿಗೆ ಹುಟ್ಟುವ ಮಗುವು ಎರಡಲ್ಲಿ ಒಂದು ಜಾತಿ ಅಥವಾ ಧರ್ಮವೊಂದನ್ನು ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುವಾಗ ಅಂತರ್ಜಾತಿಯ ವಿವಾಹಗಳಿಂದ ಮತ್ತು ಸರ್ಕಾರ ನೀಡುತ್ತಿರುವ ಪ್ರೋತ್ಸಾಹದಿಂದ ಏನಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದರು. ತಮಗೆ ಹುಟ್ಟುವ ಮಗುವಿಗೆ ಯಾವ  ಧರ್ಮ ಮತ್ತು ಜಾತಿಗೂ ಸೇರದೆ ಸರ್ಕಾರದ ಎಲ್ಲಾ ಸವಲತ್ತು ಪಡೆಯಲು ಅವಕಾಶ ಮಾಡಿಕೊಡುವುದು ಮತ್ತು ಯಾವ ವರ್ಗಕ್ಕೂ ಸೇರಲು ಬಯಸದ ಮಕ್ಕಳನ್ನು  ಹೊಸ ಒಂದು ಗುಂಪಿನಿಂದ ಕರೆಯುವುದು. ಮೀಸಲಾತಿ ಇತ್ಯಾದಿಗಳನ್ನು ಒದಗಿಸುವುದು. ಕಾನೂನಿನ ರಕ್ಷಣೆ ನೀಡುವುದು ಇದರ ಬಗ್ಗೆ ಕೋರಿದ್ದರು. ಮಗು ಹುಟ್ಟುವ ಮೊದಲೇ ಇದಕ್ಕೊಂದು ದಾರಿ ಕಂಡುಕೊಳ್ಳಬೇಕು ಎಂದು ಅವರು ಬಯಸಿದ್ದರು. 

ಎರಡ್ಮೂರು ತಿಂಗಳಾದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೊಟ್ಟೆಯಲ್ಲಿ ಮಗು ಬೆಳೀತಾ ಇದೆ. ಮಗುವನ್ನು ಭೂಮಿಗೆ ತಂದು ಈ ಜಾತಿಯ ಕೂಪದಲ್ಲಿ ತಳ್ಳುವುದು ಅವರಿಗೆ ಇಷ್ಟವಿರಲಿಲ್ಲ. ಮಗುವನ್ನು ಜಾತಿ, ಧರ್ಮದ ಮಡಿಲಲ್ಲಿ ಹಾಕುವುದು ಇಷ್ಟವಿರಲಿಲ್ಲ. ಸುಮಾರು ದಿನ‌ ಕಳೆದರೂ ಉತ್ತರ ಬರಲಿಲ್ಲ. ಇವರೇ ಕಛೇರಿ ತಡಕಾಡಿದರು. ಮತ್ತೆ ಮತ್ತೆ ಅಲೆದರು. ಆದರೆ ಉತ್ತರವಿಲ್ಲ. ಎಷ್ಟೊ ದಿನದ ನಂತರ ಸರ್ಕಾರದಿಂದ ಉತ್ತರ ಬಂತು ‘ತಂದೆಯ ಜಾತಿಯೊಂದಿಗೆ ಗುರುತಿಸಬೇಕು.. ಬೇಕಾದರೆ ತಾಯಿಯ ಜಾತಿಯೊಂದಿಗೆ ಗುರುತಿಸಿಕೊಳ್ಳಿ ಇಬ್ಬರ ಒಪ್ಪಿಗೆ ಮೇರೆಗೆ. ಆದರೆ ಈ ಎರಡು ಬಿಟ್ಟು ನಿಮಗೆ ಬೇರೆ ಆಯ್ಕೆ ಇಲ್ಲ. ಧರ್ಮಹೀನ ಗುಂಪು ಅಂತ ಯಾವುದೂ ಇಲ್ಲ’ ಎಂದು ಪತ್ರದಲ್ಲಿ ತಿಳಿಸಲಾಯಿತು. 

ಇವರು ಬೇರೆ ದಾರಿ ಕಾಣದೇ ನ್ಯಾಯಾಲಯದ ಬಾಗಿಲು ಬಡಿದರು. ಅಲ್ಲಿ ವಿಚಾರಣೆಗೆ ಬಂತು. ಧರ್ಮವಿಲ್ಲದೆ ನೀವು ಹೇಗೆ ಬದುಕುತ್ತೀರಿ ಎಂಬ ಪ್ರಶ್ನೆಗೆ ದಿವ್ಯ ನಮ್ಮಲ್ಲಿ ಮನುಷ್ಯತ್ವದ ಧರ್ಮ ಇದೆ. ಬದುಕಲು ಅಷ್ಟು ಸಾಕು ಎಂದಳು. ಮನೆಯಲ್ಲಿ ನಿಮ್ಮ ಆಚರಣೆಗಳೇನು ಎಂದು ಕೇಳಿತು‌ ಕೋರ್ಟ್. ಆಗ ದಿವ್ಯ ‘ತುಂಬಾ ದುಃಖ ಆದಾಗ, ಖುಷಿ ಆದಾಗ ದೀಪ ಹಚ್ಚುತ್ತೇವೆ. ಬೆಳಕೆ ನಮ್ಮ ಧರ್ಮ, ದೇವರು. ನನ್ನ ಗಂಡನಿಗೆ ಬುದ್ದ ಇಷ್ಟ, ನನಗೆ ಏಸು ಇಷ್ಟ, ಇಬ್ಬರಿಗೂ ರಾಮ ಇಷ್ಟ ಆಗ್ತಾನೆ. ಅಲ್ಲಾಹನು ಹೇಳಿದ  ಎಷ್ಟೊ ಮಾತುಗಳು ನಮ್ಮ ಬದುಕಿಗೆ ದಾರಿ ದೀಪ ಆಗಿವೆ. ನಮಗೆ ಎಲ್ಲರೂ ಬೇಕು’ ಎಂದಿದ್ದಳು. ಹೀಗೆ ಸತತ ವಿಚಾರಗಳು ನಡೆದವು. ತೀರ್ಮಾನವಾಗಲಿಲ್ಲ. ಇವರು ಮತ್ತೆ ಮತ್ತೆ ಅಲೆಯತೊಡಗಿದರು. ಧರ್ಮ, ಜಾತಿಯೇ ಇಲ್ಲದೆ ವರ್ಗವೊಂದು ರೂಪುಗೊಳ್ಳುವ ಬಗ್ಗೆ ಚರ್ಚೆಯೊಂದು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿತು. ನ್ಯಾಯಾಲಯವು ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಹುಡುಕತೊಡಗಿತು. 

ಇಂತಹ ನೂರೆಂಟು ಕಟ್ಟುಪಾಡು ಇರುವ ಈ ನೆಲಕ್ಕೆ ಬರಲು ಹೊಟ್ಟೆಯಲ್ಲಿರುವ ಆ ಮಗುವೂ ಯೋಚಿಸಿತೊ.. ಈ ಸರ್ಕಾರದ ಕಛೇರಿ, ನ್ಯಾಯಾಲಯ ಪದೇ ಪದೇ ಅಲೆದಾಡಿಸಿದಕ್ಕೊ ಏನೊ ಒಂದು ಸಂಜೆ ನಾಲ್ಕು ತಿಂಗಳಿಗೆ ಆ ಮಗು ಸತ್ತು ಹೊಟ್ಟೆಯಿಂದ ಆಚೆ ಬಂದಿತ್ತು.‌ ದಿವ್ಯಳಿಗೆ ಅಬಾರ್ಷನ್ ಆಗಿ ಹೊಯಿತು. ಮಗುವಿನದೊ ಕೊಲೆಯೊ? ಆತ್ಮಹತ್ಯೆಯೊ? ಉತ್ತರ ಹೇಳುವವರು ಯಾರು? 

ದಿವ್ಯ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದರೆ, ನಯಾಜ್ ತನ್ನ ದುಃಖ ನುಂಗಿಕೊಂಡು ಅವಳ ತಲೆ ನೇವರಿಸುತ್ತಾ ಸಮಾಧಾನಿಸತೊಡಗಿದ.. 

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

September 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: