‘ಕವಿತೆ ಬಂಚ್’ನಲ್ಲಿ ಶ್ರೀಕೃಷ್ಣಯ್ಯ ಅನಂತಪುರ

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಶ್ರೀಕೃಷ್ಣಯ್ಯ ಅನಂತಪುರ
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ‘ಅನಂತಪುರ’ದಲ್ಲಿ ಜನಿಸಿ-ಅನಂತಪುರವನ್ನೇ ತಮ್ಮ ಕರ್ಮ ಭೂಮಿಯನ್ನಾಗಿಸಿಕೊಂಡ ಇವರದ್ದು ನಾಲಕ್ಕೂವರೆ ದಶಕಗಳ ಕಾವ್ಯಯಾನ.

ಈ ಯಾತ್ರೆಯಲ್ಲಿ ‘ಜೀವತಂತಿಯ ಮೀಟಿ’, ‘ಮಗಳು ಮತ್ತು ಮಲ್ಲಿಗೆ ಬಳ್ಳಿ’ ಎಂಬೆರಡು ಕವನಸಂಕಲನ ಹಾಗೂ ‘ಬಿಂದು’ ಎಂಬ ಹನಿಗವನ ಸಂಕಲನದ ಜೊತೆಗೆ ‘ಕಣ್ಣು ಹಾಡಿದ ಕವಿತೆ’ ಎಂಬ ಭಾವಗೀತೆಗಳ ಗುಚ್ಚವೂ ಪ್ರಕಟಗೊಂಡಿವೆ.

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ-ಹನಿಗವನಗಳು ಪ್ರಕಟಗೊಂಡಿರುವ ಇವರ ಮೂರನೇ ಕವನಸಂಕಲನ – ‘ಬೇರುಗಳು ಅಮ್ಮನ ಹಾಗೆ’ ಮತ್ತು ಹನಿಗವನ ಸಂಕಲನ-‘ಎದೆ ಬಿಗಿದ ಕ್ಷಣಗಳು’ ಪ್ರಕಟಣೆಯ ಹಾದಿಯಲ್ಲಿವೆ.

ಮಗಳು ಮತ್ತು ಮಲ್ಲಿಗೆ ಬಳ್ಳಿ

ಮಗಳು ನಾ ನೆಟ್ಟ ಮಲ್ಲಿಗೆ ಬಳ್ಳಿ
ಬೆಳೆದಾಗ
ಚಪ್ಪರ ಹಾಕುವುದ ಕಂಡು
ಸಿಡಿಮಿಡಿಗೊಂಡು
‘ಯಾಕೆ ಬೇಕಪ್ಪ ಈಗಲೇ
ಈ ಕೋಟಲೆ, ಉಸಾಬರಿ
ಏನಿಷ್ಟೊಂದು ಗಡಿಬಿಡಿ
ಅದರಷ್ಟಕ್ಕೆ ಹೋದರೇನು ನಷ್ಟ?
ಸ್ವಾತಂತ್ರ‍್ಯದ ಮೇಲೆ ಸವಾರಿ
ಎಷ್ಟು ಸರಿ?’ ಎಂದು ಕೇಳಿದಳು.

ಅದರಿಷ್ಟಕ್ಕೆ ಬಿಟ್ಟರೆ
ತಪ್ಪಿದ್ದಲ್ಲ ಮಗಳೆ ಅನಿಷ್ಟ
ಯಾವ ಹಾದಿ ಹೇಗೆಂದು
ತಿಳಿದಿರುವುದಿಲ್ಲ
ಬೀಳಿಸುವವುಗಳು ಒದ್ದು ಬರುವ
ಬಿದ್ದರೂ ಎದ್ದು ನಿಲ್ಲುವ
ಶಕ್ತಿ, ಯುಕ್ತಿಗಳೂ ಇಲ್ಲ
ಬದುಕಿನ ಓರೆಕೋರೆ
ಭಯಾನಕ ಮೋರೆಗಳನ್ನು
ಕಲ್ಪಿಸುವುದಕ್ಕೆಸಾಧ್ಯವಿಲ್ಲ
ಇದೊಂದು ಮಾರ್ಗದರ್ಶನ ಹೊರತು
ಸ್ವಾತಂತ್ರ್ಯಹರಣವಲ್ಲ.

ಪಕ್ಕದ ಮನೆಯವರು
ಕೊಂಡಾಟದಿಂದ ಸಾಕಿ
ಕೊಬ್ಬಿದ ಬಳ್ಳಿಗೆ ಚಪ್ಪರಹಾಕಿ
ಅಡ್ಡಾದಿಡ್ಡಿ ಹಬ್ಬಿ
ಧರೆ ದಾಟಿ ಬೀದಿಗಿಳಿದು
ಹಸಿದಗುಳಿಗೆ ಆಹಾರವಾದದ್ದು
ಹೇಗೆ ಮರೆಯಲಿ ಹೇಳು ?

ಚಪ್ಪರ ಹಾಕಿ ಏರಲು ಕೋಲೂರಿ
ತೋರುತ್ತಿದ್ದೇನೆ ಸರಿದಾರಿ
ನೋಡುತ್ತಿದ್ದೇನೆ ಹೂ ಅರಳಿ
ಘಮಘಮಿಸುವ ಪರಿ

ಚಿತ್ರಕ್ಕೆ ಚೌಕಟ್ಟು, ಬೆಳೆಗೆ ಬೇಲಿ
ಮನೆಗೆ ಪಾಗಾರ, ಬಳ್ಳಿಗೆ ಚಪ್ಪರ
ಹಾಕುವುದು ತಪ್ಪೆಂದು
ಈಗನಿಸುತಿದೆಯೇ ಹೇಳು ?
ಎಂದಾಗ ಮಗಳು ಮುಗುಳ್ನಕ್ಕಳು.

ಕೀಚಕ-ನರಕ

ಅಸಹ್ಯ ಹುಟ್ಟಿಸುವ ಈ ಇಬ್ಬರು
ಅಸುರರ ಕೈಕೆಳಗೆ
ಕಮರಿ ಹೋದವರೆಷ್ಟೋ?
ಒಟ್ಟಿನಲ್ಲಿ ಕೀಚಕ-ನರಕ ಎಂಬ ನಾಮ
ನಿರ್ನಾಮಕ್ಕೆ ಇನ್ನೊಂದು ಹೆಸರು.

ಈಗಲೂ ಇವರ ನೆನದರೆ ಸಾಕು
ಎಂಟೆದೆಯವರಿಗೂ ಎದೆ ನಡುಕ
ಹಗಲಿರುಳೂ ನೋಯಿಸುವುದು
ಸಾಯಿಸುವುದೇ ಕಾಯಕವಾದ
ಇವರ ಕತೆಗಳು ಭಯಾನಕ.

ಕೀಚಕ-ನರಕಾಸುರ ಸತ್ತಿಲ್ಲ
ಈಗಲೂ ಇದ್ದಾರೆ ಎಂಬ ಸುದ್ದಿ
ಕಿವಿಗೆ ಬೀಳುತ್ತಲೇ ಇದೆ
ಹಾಗಾದರೆ ಭೀಮ-ಭಾಮ
ಕೊಂದದ್ದು ಯಾರನ್ನು ?
ಕೀಚಕ-ನರಕಾಸುರರು ಸತ್ತರೂ
ಕೀಚಕ-ನರಕಾಸುರರಿಗೆ ಸಾವಿಲ್ಲ
ಇವರ ಇರುವಿಕೆ
ನೂರಾರು ಕಾಮಿನಿಯರು
ಸಾಕ್ಷಿ ಹೇಳುತ್ತಿದ್ದಾರಲ್ಲ ?
ಹಾಗಾದರೆ ಎಲ್ಲಿ ಇವರ ವಾಸಸ್ಥಾನ ?
ನೋಡಿಯೇ ಬಿಡೋಣ ಎಂದು ಹೊರಟರೆ
ಮಠ, ಮಂದಿರ, ವಿದ್ಯಾಲಯ
ಚಿಕಿತ್ಸಾಲಯ, ಅನಾಥಾಲಯ
ವಿದ್ಯಾರ್ಥಿನಿಲಯ, ನ್ಯಾಯಾಲಯಗಳಲ್ಲಿ
ಆರ್ಭಟಿಸುತ್ತ ಕುಣಿವ
ವಿಕಾರ ಕೀಚಕ, ನರಕರ ಕಂಡೆ.

ಪರಮಾತ್ಮ ಮಾತ್ರ ಸರ್ವಾಂತರ್ಯಾಮಿ
ಅಂದು ಕೊಂಡದ್ದು ತಪ್ಪಾಯಿತೇ?
ಇಷ್ಟಕ್ಕೆ ಮುಗಿಯುವುದಿಲ್ಲ ಕತೆ
ಕೀಚಕ-ನರಕಾಸುರರು
ಬಹುರೂಪಿ ಕಾಮರೂಪಿಗಳಾಗಿದ್ದಾರೋಗೊತ್ತಿಲ್ಲ
ಆದರೆ ಕವಿಗಳಲ್ಲೂ
ಕೀಚಕ-ನರಕಾಸುರರಿದ್ದಾರೆ
ಎಂಬುದು ಸುಳ್ಳಲ್ಲ.

ಅಂಕುರ

ಬಂಜೆ ಕ್ಷೇತ್ರವೋ ಬೀಜವೊ ?
ಅಥವಾ ಎರಡೂ ಬರಡೋ
ಒಟ್ಟಿನಲ್ಲಿ ಬೆಳಕಿಲ್ಲಿ
ಮೊಳಕೆಯೊಡೆಯುವುದಿಲ್ಲ

ಕಟ್ಟು ಪಾಡುಗಳಿಲ್ಲದ
ಕತ್ತಲ ಶಕ್ತ ರಕ್ತ ಬೀಜಗಳು
ಬಿದ್ದಲ್ಲಿ ಹತ್ತಾಗಿ ಮೊಳೆತು
ಕಿತ್ತೊಗೆದಷ್ಟು ಚಿಗುರೊಡೆದು
ಸಾರ ನೀರಿನ ಹಂಗು ತೊರೆದು
ಸರಾಗ ಎತ್ತರೆತ್ತರಕ್ಕೇರಿ
ಹೆಮ್ಮರಗಳಾಗಿ
ಬಿತ್ತರಗೊಳ್ಳುತ್ತಿರುವ ಪರಿ
ಬೆರಗೇ ಸರಿ

ಬಲಿಷ್ಠ ಕಪ್ಪು ಕಾಡುಕುದುರೆ
ಹುಚ್ಚು ಹಿಡಿದು ಕೆನೆಯುತ್ತ
ದೌಢಾಯಿಸಿದ್ದೇ ದಾರಿ
ದನಿಯೆತ್ತುವವರಿಲ್ಲ
ಅಟ್ಟಿಸಿ ಹಿಡಿದು ಕಡಿವಾಣ ಬಿಗಿದು
ಪಳಗಿಸುವ ಪ್ರವೀಣರೆಲ್ಲ
ನಾಗಾಲೋಟಕ್ಕೆ ಬೆದರಿ ಪರಾರಿ.

ಅಲ್ಲೊಂದು ಇಲ್ಲೊಂದು
ಉರಿಯುತ್ತಿದ್ದ ಮಿಣುಕು ದೀಪಗಳೂ
ಕರಿಕಾಲ ತುಳಿತಕ್ಕೆ ಆರಿ
ಸರ್ವತ್ರ ಹೆಮ್ಮಾರಿ.

ತುಂಬು ಕತ್ತಲ
ಭ್ರೂಣಗಳ ಹೊತ್ತ
ಅಸಂಖ್ಯ ಬಸಿರುಗಳ
ಸುದೀರ್ಘ ಸರದಿ ಸಾಲು
ಮುಗಿಲು ಮುಟ್ಟಿದ ಹೆರಿಗೆ ಸಂಭ್ರಮ.

ಕಗ್ಗತ್ತಲ ಕಾಡಿನಲ್ಲಿ
ಹಪಹಪಿಸಿ ನಿರಂತರ ತಡಕಾಟ
ಬೆಳಕ ಗಬ್ಬದ ಹಬ್ಬದ
ಹೆಬ್ಬಯಕೆ.

ಗರ್ಭಪಾತಗಳಾಗುವುದನ್ನು
ತಪ್ಪಿಸಲು ದಾರಿಗಳಿವೆ
ಆದರೆ ತಳ ಒಡೆದ
ಹಳೆ ಹಣತೆಗಳಲ್ಲಿ
ತೆಳುವಾಗಿ ತೇಲುವ
ಸಾಲ ತಂದತೈಲ ಅರೆ ನೆನೆದ
ಬಡಕಲು ಬತ್ತಿಗಳ ಬಸಿರಲ್ಲಿ
ಮಹದಾಸೆಯಿಂದ ಬಿತ್ತಿದರೂ
ಬೆಳಕ ಬೀಜಗಳು
ಕರಟಿ ಹೋಗುತ್ತವೆಯೇ ಹೊರತು
ಅಂಕುರಿಸುವುದಿಲ್ಲ.

ಬೇಕು ನಮಗೊಂದು ವಿಶಾಲ
ಫಲವತ್ತಾದ ನೆಲ
ಬತ್ತದ ಜಲ
ಸಾಚಾ ತಾಜಾ
ಧಾರಾಳ ಬೆಳಕ ಬೀಜ

ಬೆಸ್ತ ಮತ್ತು ಬಂಗಾರ ಮೀನು

ಸದಾ ತುಂಬಿ ಹರಿವ ನದಿ
ದಡದಲ್ಲಿ ಏಕಾಗ್ರಚಿತ್ತ ಬೆಸ್ತ.

ಯಾರ ಬಲೆಗೂ ಬೀಳದ
ಬಲಿತ ಬಂಗಾರ ಮೀನೊಂದು
ನದಿಯಲ್ಲಿದೆ ಎಂದು
ಜನರಾಡಿಕೊಳ್ಳುತ್ತಿರುವ ಕಥೆ
ಕೇಳಿದ ಮೇಲೆ
ಬೆಸ್ತನಿಗೆ ಅದರದೇ ಚಿಂತೆ.

ಬಗೆಬಗೆ ಬಣ್ಣದ ಮೀನುಗಳು
ಹಿಂಡು ಹಿಂಡಾಗಿ ಸುತ್ತುತ್ತಿದ್ದರೂ
ಬಲೆ ಬೀಸದೆ
ಈವರೆಗೆ ಯಾರಿಗೂ ಕಾಣಿಸದ
ಬಂಗಾರ ಮೀನಿಗಾಗಿ ಕಾದು ಕುಳಿತ.

ಬೆವರೊರೆಸುತ್ತ ಮೈಯೆಲ್ಲ ಕಣ್ಣಾಗಿ
ಆಸೆಯಿಂದ ಹೊಳೆವ
ಬಂಗಾರ ಮೀನಿನ ಬರವಿಗಾಗಿ
ಧ್ಯಾನಿಸುತ್ತಲೇ ಕಾಲ ಕಳೆದ.

ಬಂಗಾರ ಮೀನಿನ ಕಥೆ
ಜನರಾಡಿಕೊಳ್ಳುತ್ತಲೇ ಇದ್ದರು
ನದಿ ಸೊಕ್ಕಿ ಹರಿಯುತ್ತಲೇಯಿತ್ತು
ಬಸವಳಿದ ಬೆಸ್ತ
ಬಲೆ ಹಿಡಿದು ಕಾಯುತ್ತಲೇ ಇದ್ದ.

ಮಸ್ಸಂಜೆ ಬಾಗಿಲು

ಭೀತಿ, ನಿರಾಶೆ, ನೋವುಗಳ
ಕಲಸಿ ಕಟ್ಟಿದ ದೊಡ್ಡ ಉಂಡೆ
ಈ ಮುಸ್ಸಂಜೆ
ಬಾಗಿಲು ಬಡಿದು
ಯಾರೋ ಕರೆಯುತ್ತಿದ್ದಾರೆ
ನಯ, ವಿನಯವಿದ್ದರೂ ಮಾತಿನಲಿ
ಖಂಡಿತ ತೆರೆಯಲಾರೆ.

ಬದಲಾಗಿದೆ ಕಾಲ
ಯಾವಾಗ? ಯಾಕೆ? ಹೇಗೆ? ಎಲ್ಲಿ?
ಯಾವ ರೂಪದಲಿ ಯಾರು
ಅವತರಿಸುತ್ತಾರೋ ಹೇಳುವಂತಿಲ್ಲ
ಯಾರೇ ಕರೆದರೂ
ಬಾಗಿಲು ತೆರೆಯಬೇಡಿ ಎಂದು
ಮಕ್ಕಳು ಹೇಳಿದ್ದು ಮರೆತಿಲ್ಲ.

ಮತ್ತೆ ಮತ್ತೆ ಗಟ್ಟಿಯಾಗಿ
ಬಾಗಿಲು ಬಡಿಯುವ ಸದ್ದು
ಯಾರವರು? ಏನು ಅಹಂಕಾರ?
ತೆರೆಯಲು ಎಳ್ಳಷ್ಟೂ ಧೈರ್ಯವಿಲ್ಲ
ಚೋರರಿರಬಹುದೇ?
ಇಣುಕಿದರೆ ನಿರಾಕಾರ.

ಯಾರೋ ಏನೋ ವಾರದ ಹಿಂದೆ
ಪಕ್ಕದ ಮನೆಯ ಒಂಟಿ
ಹಿರಿಯರೊಬ್ಬರಿಗೆ
ಗತಿ ಕಾಣಿಸಿದ್ದು
ಮನದಿಂದ ಇನ್ನೂ ಮಾಸಿಲ್ಲ.

ಆಗಲೂ ಹಗಲೂ ಅಲ್ಲದ
ಇರುಳೂ ಅಲ್ಲದ ಹೊತ್ತು
ಹೀಗೇ ಕತ್ತುಮುರಿದು ಬಿದ್ದಿತ್ತು
ಮನೆ, ಮನ ಮೌನ ಹೊದ್ದು ಮಲಗಿತ್ತು
ಅಲ್ಲೊಂದು ಇಲ್ಲೊಂದು
ಮಿನುಗತೊಡಗಿದ ದೀಪಗಳಿಗೆ
ಹಿಂಡು ಹಿಂಡಾಗಿ ಹಾತೆಗಳು ಮುತ್ತಿ
ಸುತ್ತೀಸುತ್ತೀ ಸತ್ತು ಬೀಳುತ್ತಿದ್ದುವು.

ದೀಪ

ಈ ದೀಪದ ಸುತ್ತೂ
ತುಪ್ಪದಲ್ಲೇ ತೊಯ್ದ
ಹಲವಾರು ದಪ್ಪ ಬತ್ತಿಗಳು ಸದಾ
ಜಗಜಗಿಸುತ್ತಿದ್ದ ಕಾಲವೊಂದಿತ್ತು.

ಬತ್ತಿ ಹೊಸೆಯುವ ಕರಗಳಿಗೆ
ಕೋಳ ಬಿಗಿದು
ತುಪ್ಪ ಸುರಿವವರ
ತಲೆಗಳನ್ನೇ ತರಿದು
ರಕ್ಷಕರ ಸದೆ ಬಡಿದು
ತಿಪ್ಪೆ ಸಾರಿಸಲಾಗಿದೆ.

ಕುಸುರಿ ಕೆಲಸಗಳಿಂದ
ಪಳಪಳ ಹೊಳೆದು
ಬೆಳಗಿ ಕಂಗೊಳಿಸುತ್ತಿದ್ದ
ಆಳೆತ್ತರದ ಕನಕ ನಂದಾದೀಪ
ನಂದಿ ಸರಿದು ಹೋಗಿವೆ
ವರ್ಷಗಳು ಹಲವಾರು
ಮುಳುಗಿದ ಮೇಲೆ ನೇಸರು
ಕತ್ತಲೆಯದ್ದೇ ಕಾರುಬಾರು.

ಮುಲಾಜಿಲ್ಲದೆ ಕಸಿದು
ನಾಚಿಕೆ ತೊರೆದು ಇದು ನಮ್ಮದು
ಇದು ನಮ್ಮದು ಎಂದು ಸದಾ ಗುಲ್ಲೆಬ್ಬಿಸುತ್ತಿರುವ
ಬಲಿತ ಕಳ್ಳರು ನುರಿತ ಸುಳ್ಳರು
ನಮ್ಮ ಅನಾದಿ ಅಪೂರ್ವ ಬೆಳಕ
ಸುತ್ತು ಬಿಗಿ ಬೇಲಿ ಬಿಗಿದು
ಹಗಲಿರುಳೂ ಸರ್ಪಗಾವಲು.

ಬಂಧ ಮುಕ್ತಗೊಳಿಸಲು ಬರುವವರ
ಗಡಿಯಲ್ಲೇ ತಡೆದು
ಹೊಸಬತ್ತಿ ಹೊಸೆಯ ಹೊರಟವರ
ತುಪ್ಪ ತರಲು ತಯಾರಾದವರ
ಬಡಿದಟ್ಟಿ
ಭಯದ ಬುಡದಲ್ಲಿ
ಅನ್ಯಾಯದ ತಲೆಗೆ
ನ್ಯಾಯದ ಹಣೆಪಟ್ಟಿ.

ನಿರ್ಜೀವ ಕತ್ತಲ ಕೂಪದಲಿ
ನೆಮ್ಮದಿ, ಉತ್ಸಾಹ
ಉತ್ಸವಗಳು ನಿರ್ನಾಮ
ಎಂದು ಉದಯಿಸುವುದೋ
ಶಾಪ ವಿಮೋಚನೆಯ ಹೊತ್ತು?
ದೀಪವಿಲ್ಲದ ಮನೆಯ ತಾಪ
ಅನುಭವಿಸಿದವರಿಗಷ್ಟೇ ಗೊತ್ತು.

‍ಲೇಖಕರು Avadhi

May 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: