‘ಕವಿತೆ ಬಂಚ್’ನಲ್ಲಿ ಶಿವಪ್ರಸಾದ್ ಜಿ ಭಟ್

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಶಿವಪ್ರಸಾದ್ ಜಿ ಭಟ್

ನನ್ನ ಹೆಸರು ಶಿವಪ್ರಸಾದ್ ಜಿ ಭಟ್. ಮೂಲತಃ ಉತ್ತರ ಕನ್ನಡದವನು. ಪ್ರಸ್ತುತ ಮೈಸೂರಿನಲ್ಲಿ ಎಂ.ಸಿ.ಎ ವ್ಯಾಸಂಗ ಮಾಡುತ್ತಿದ್ದೇನೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಕೆಲವು ಕಥೆ ಕವಿತೆಗಳನ್ನು ಬರೆದಿದ್ದೇನೆ. ಶಾಲೆಯ ಹಂತದಲ್ಲಿ ಶುರುವಾದ ಕವಿತೆಯ ಗೀಳು ಈಗಲೂ ಮುಂದುವರೆದಿದೆ.

1) ಹೊಸಮನೆ

ಹೊಸ ಮನೆಯ ಒಳಗೆ ಕಾಲಿಡಲು ಈಗ
ಉಸಿರಾಡಿದವು ಎಲ್ಲಾ ವಸ್ತುಗಳು
ಮರೆತ ಸಾಮಗ್ರಿ ನೆನಪಾದವು
ಖಾಲಿ ತುಂಬಿ ತುಳುಕಿ ಒಂದು ತೂಕ ಈಗ

ಹಿತ್ತಲಿನಲ್ಲಿ ಅರಳಿ ನಿಂತಿದೆ ಸುಗಂಧ
ಈ ಕಡೆಗೆ ನೋಟ, ಮರೆಮಾಚುವುದಿಲ್ಲ
ನಮ್ಮದೇ ಆ ತೋಟ..
ಗೋಡೆಯ ಮೇಲೊಂದು ಕವಿತೆ
ಬರೆದಿಟ್ಟುಕೋ ಒಂದೇ ಸಮನೆ
ಗೀಚಬೇಕಿದೆ ಉಳಿದ ಸಾಲು..

ಮರುಗಟ್ಟಿದ ಜೀವಗಳಿವು ಮತ್ತೆ
ಚಿಗುರಬಹುದು ಆಸೆಯಲಿ
ಈ ಮನೆಯಲಿ..
ಪ್ರತೀ ಪ್ರೀತಿಯಲಿ ಸವೆದ ಹೆಜ್ಜೆಗಳು
ಗುರುತಾಗಲಿ ಹೆಜ್ಜೆ ಇಟ್ಟ ಹುರುಪಿನಲಿ…

2)ಮತ್ತೇನಿಲ್ಲ ಎಲ್ಲವೂ ಹಿತವೆನಿಸುತ್ತದೆ

ಇತ್ತೀಚೆಗೆ ಒಂದು ಕನಸು ಮಾತ್ರ
ಕಾಡುತ್ತಲೇ ಇದೆ ಬಾರಿ ಬಾರಿ
ನೂರು ಬಾಗಿಲು ನೂರು ಕಿಟಕಿ
ಯಾವುದರಲ್ಲೋ ಅವನು ಇಣುಕುತ್ತಾನೆ

‘ನಿಮ್ಮ ನಿಮ್ಮ ಕನಸುಗಳಿಗೆ ನೀವೇ
ಜವಾಬ್ದಾರಿ’ ಬೋರ್ಡೊಂದು
ಕಾಣಿಸುತ್ತದೆ
ನಸುಕಿನಲ್ಲಿ ಎದ್ದದ್ದೇ ತಡ
ಮತ್ತೆ ಕಾಡುತ್ತದೆ
ಮತ್ತೇನಿಲ್ಲ ಎಲ್ಲವೂ ಹಿತವೆನಿಸುತ್ತದೆ

ಬೆಳಗಿನ ಬಸ್ಸೊಂದು ನಿಂತೇ ಇದೆ
ಅವರಿವರು ಹತ್ತುತ್ತಾರೆ ಇಳಿಯುತ್ತಾರೆ
ಇನ್ನೊಬ್ಬ ಅಲ್ಲೇ ನಿಂತು
ಯಾವುದೋ ಘಟನೆಗೆ ಸಾಕ್ಷಿಯಾಗುತ್ತಾನೆ
ಮತ್ತೇನಿಲ್ಲ ಎಲ್ಲವೂ ಹಿತವೆನಿಸುತ್ತದೆ

3)ಕವಿತೆ ಕವಿತೆಯಾಗುವುದು

ಒಂದು ನೀಳ್ಗತೆಯನ್ನೋ, ಸುಧೀರ್ಘ ಕವಿತೆಯನ್ನೋ
ಬರೆದು ಬಿಡಬೇಕೆಂದು ಅನ್ನಿಸಿದಾಗಲೆಲ್ಲಾ
ಸುಮ್ಮನೆ ಏನನ್ನೋ ಗೀಚಿ
ಮತ್ತೆ ಅಳಿಸಬೇಕೆನಿಸುತ್ತದೆ
ಅತೃಪ್ತಿ ಎಂದರೆ ಇದೇ ಇರಬೇಕು…

ಕವಿತೆ ಕವಿತೆಯಾಗುವುದು ಹೇಗೆ??
ಸೂರ್ಯನ ಕಿರಣ ಭುವಿಗೆ
ಮುತ್ತಿಡುವುದು ಕವಿತೆಯೇ;
ನೆರಳೊಂದು ತಿರುಗಿ ಮಾತಾಡಿದಾಗ
ಕವಿತೆಯೇ;
ಹೂವೊಂದು ನಕ್ಕಾಗ ಕವಿತೆಯೇ;
ಯಾವುದು ಯಾವುದದು ಕವಿತೆಯೆನಿಸುಕೊಳ್ಳುವುದು
ಅಥವಾ ಕವಿತೆಯಾಗದ್ದು ಕವಿತೆಯೇ??

ಈಗ ತಾನೆ ನಾನು ಬರೆದ ಕವಿತೆ
ನನ್ನ ಒಬ್ಬಂಟಿತನವನ್ನು ಛೇಡಿಸುತ್ತಿದೆ
ಬರೆದೂ ಬರೆದೂ ತೀರಿಯೂ
ತೀರಿಲ್ಲ ಕೆಲವು ಸಾಲು
ಖಾಲಿ ಪೀಲಿ ಮಾತುಗಳಲ್ಲಿ ಹೇಳಿ
ಸರಿಪಡಿಸಿಕೊಳ್ಳುತ್ತೇನೆ..

ಪ್ರತಿಮೆಗಳ ಮಾತು ಬೇರೆ
ಕಾಡುವ ಸಾಲಿಗೂ ಒಂದು ಏಕಾಂತ
ಕಾಡಿದರೆ ಕವಿತೆಯ ಬಾಳು ಸಾರ್ಥಕ…

4)ನನ್ನಲ್ಲಿಗೆ ಬಾರದೇ ಇರಲಿ…

ಕಿಟಕಿಯ ಎದುರಲಿ ನಿಂತ
ನಾನು ಸಮುದ್ರ ಕಾಣ
ಬಯಸುತ್ತಿದ್ದೇನೆ..
ಬದುಕಿನಲ್ಲಿ ನೊಂದವನನ್ನು
ಏಕಾಂತವೇ ಸಂತೈಸಬೇಕೆಂದು ಅಂದುಕೊಳ್ಳುವುದು
ಎಷ್ಟು ಸಮಂಜಸ..
ಸಮುದ್ರ ಸಾಗರ ಯಾವ ಲೆಕ್ಕ??

ಬೀದಿಯಲ್ಲಿ ಬರುತ್ತಿರುವ ಉತ್ಸವ
ಮೂರ್ತಿಯ ಮೆರವಣಿಗೆ
ಕಣ್ಣು ಅರಳಿಸುತ್ತದೆ
ನಿಜ ದೇವರ ಪ್ರೀತಿ; ನಿಜ ಮನುಜರಿಗೆ ..

ಹೇಗಿದ್ದಿಯಾ?? ಎಂದು ಕೇಳುವುದು
ಬದುಕಿದ್ದೀಯಾ ಎಂದು ಕೇಳುವಷ್ಟೇ
ಸತ್ಯ ಮತ್ತು ಸುಳ್ಳು ..
ನಿಮ್ಮ ನಿಮ್ಮ ಮಾತುಗಳು ನಿಮ್ಮಲ್ಲೇ
ಇರಲಿ ನನ್ನಲ್ಲಿಗೆ ಬಾರದೇ ಇರಲಿ…

5)ಏಕಾಂತ ಮತ್ತು ಮೌನ

ಕೆಲವೊಮ್ಮೆ ಹೀಗೇ ಹಠಾತ್ತನೆ ಎಲ್ಲಾ ಮರೆಯಾಗುತ್ತವೆ
ನಡುಬೀದಿಯಲ್ಲಿ ಮಲಗಿದ್ದ ನಾಯಿಯೊಂದು
ಓಡಿ ಹೋದಂತೆ
ಸಪ್ನದಲ್ಲಿ ಈಗೀಗ ಎಲ್ಲರ ಚಹರೆಯೂ ನನ್ನ
ಚಿತ್ರದಂತೆ ಕಂಡು ಅಡ್ಡಾದಿಡ್ಡಿ ಓಡುತ್ತೇನೆ
ನನ್ನದೇ ಊರಿನ ಓಣಿಗಳಲ್ಲಿ ..

ನಗರ ಪ್ರಶ್ನೆ ಕೇಳುವುದಿಲ್ಲ
ಜೀವಂತ ಉಳಿಸುತ್ತದೇ ನಮ್ಮದೇ ಆತ್ಮಗಳನ್ನು
ಚಲಿಸುವ ಎಷ್ಟೋ ಮೋಡಗಳು
ನೆಲವನ್ನು ಗುರುತಿಸಿಯೇ ಇರುವುದಿಲ್ಲ
ಥೇಟ್
ನಮ್ಮೂರಿನ ಜಾತ್ರೆಯ ಹುಸೇನ್ ಅಣ್ಣನಂತೆ…

ಏಕಾಂತ ಈ ನಗರದಲ್ಲಿ ಹೊಸತೇನಲ್ಲ
ಇರುವುಗಳೆಲ್ಲ ತಿಳಿಯುವ ಮಟ್ಟಿಗೆ
ಒಬ್ಬಂಟಿಯಾಗಿಸುತ್ತದೆ
ಆದರೆ ಇಲ್ಲಿ ಏಕಾಂತ ಮತ್ತು ಮೌನ ಮಾತ್ರ
ಸತ್ಯ ಉಳಿದಿದ್ದು ನಾವು ನೀವುಗಳು….

6)ಚದುರಿದ ಚಿತ್ರಗಳು

ಸೂರ್ಯ ಹಗಲನ್ನೇ
ಉಸಿರಾಡುತ್ತಿದ್ದ.
ಊರ ಜನರ ಹೆಸರೇ ಕೇಳದೆ
ಸಂಜೆಯ ವೇಳೆ ಸಾಯುತ್ತಿದ್ದ
ಮತ್ತೆ
ಬದುಕುತ್ತಿದ್ದ..

ಮಧ್ಯ ರಾತ್ರಿ ಪಾಳಿಯ ಡ್ರೈವರ್
ಹಗಲಿಗೆ ಅಂಜುತ್ತಾನೆ
ಬಹುಶಃ ಅದು ಅವನ
ನಿದ್ರಾಸಮಯ
ನಂತರ ಪಾಳಿಗೆ ಸಿದ್ಧನಾಗುತ್ತಾನೆ
ಎಳೆಯ ಮಗುವಿನಂತೆ

ಹೀಗೆ ಎಷ್ಟೋ ಹಾಯುವ
ವಾಹನಗಳಿಗೆ
ತಮ್ಮ ಗುರುತುಗಳು
ಮರೆತೇ ಹೋಗಿರುತ್ತವೆ
ಅಥವಾ
ಗುರುತುಗಳೇ ಇಲ್ಲಾ …

ಬಿಡಿ ಬಿಡಿಯಾಗಿರುವ ಈ
ಚಿತ್ರಗಳನ್ನು ಯಾರೋ ಜೋಡಿಸುತ್ತಾರೆ
ಮತ್ತದೇ ಕನಸು
ಪುನರಾವರ್ತಿಸುತ್ತದೆ..
ನಮ್ಮ ನಿಮ್ಮ ಚಿತ್ರಗಳು
ಈಗ ಯಾರ ಕೈಯಲ್ಲೋ
ಇರಬಹುದು…

7)ಬಹುಕಾಲದ ಮನೆ

ಬಹುಕಾಲದ ಹಳೆಯ ಮನೆ
ಇದು.
ಒಬ್ಬಂಟಿಗೆ ಇಕ್ಕಟ್ಟಿಗೆ
ಹೆಸರಾದ ಮನೆ.

ಹಳತು ಹೊಸತು ಬೆರೆತು
ಕಲಕಿದ ಕೊಳ
ಬೆಂದು ಬಳಲಿ ಹೋದ ಜೀವಕೆ
ಉಪಮೆಗಳ ಮಾತು ಥಟ್ಟನೆ
ತಟ್ಟುವುದಿಲ್ಲ..

ಕಡೆಗೊಂದು ದಿನ, ಕಡಲು ದೂರ
ಸುಮ್ಮನೆ ನಡೆದುಬಿಡಬಹುದು
ಕಿಟಕಿಯಿಲ್ಲದ ಗೋಡೆ
ಗೋಡೆ ಇಲ್ಲದ ಮನೆ
ಸಿಗಬಹುದು..

ಭಾವಗೀತೆ ಕೇಳುವ ಹಕ್ಕಿ
ಎಲ್ಲಿ ಹಾರುತ್ತಿದೆ?
ನನ್ನ ಅದೇ ಹಳೇ ಮನೆ
ಈಗ ಎಲ್ಲಿ ಅಲೆಯುತ್ತಿದೆ?…

8) ಒಂದು ನಿರ್ಲಿಪ್ತ ಸಂಜೆ

ನಿರಾಳವಾದ ರಾತ್ರಿಗಳಲ್ಲಿ ಬಿಕ್ಕಿ
ಅತ್ತ ನಿನ್ನ ಮುಖ ಈಗಲೂ
ನೆನಪಿದೆ
ಪ್ರೇಮ ಹೀಗಿರಬೇಕು ಹಾಗಿರಬೇಕೆಂಬ
ನಿನ್ನ ಉದ್ದಟತನಗಳಿಗೆ ಮರುಳಿಗಿದ್ದಾದರೂ
ಏತಕ್ಕೆ..

ತುಸು ಹೊತ್ತು ನೋಡುವ ಪರಿಗೆ
ನೋಟದ ದಾರಿ ಮಾಸುತ್ತದೆ
ನರಕದ ಬಾಗಿಲಿನಂತೆ ನಿನ್ನ
ಶಬ್ದ ಬರ ಮಾಡಿಕೊಳ್ಳುತ್ತಲೇ ಇರುತ್ತದೆ

ಒಂದು ನಿರ್ಲಿಪ್ತ ಸಂಜೆ
ಭೇಟಿಯಾಗಬೇಕು ಹೇಳಿಕೊಳ್ಳಬೇಕು
ಮಾತುಗಳು ಲಯ ದಾಟಿ ಓಡಬೇಕು
ಮತ್ತು ನಾನು ನೀನು ಮಾಯವಾಗಬೇಕು…

ಪಾಪಗಳ ಮಾಡುತ್ತಾ ಆತ್ಮವಿಮರ್ಶೆಗೆ
ಇಳಿಯಬಾರದು..
ನೀಲಿ ಕಣ್ಣುಗಳನ್ನು ಹಿಗ್ಗಿಸಿ ನೋಡು
ನಾನು ನಿನ್ನೆಡೆಗೆ ವಾಲಬಹುದು
ಪಾಪಗಳು ಪುಣ್ಯವಾಗಬಹುದು…

ನಾವಿಬ್ಬರೂ ತುಂಬಾ ಸಲೀಸಾಗಿ
ಬೇರೆಯಾಗುತ್ತೇವೆ
ಮತ್ತೆಂದೂ ಸೇರದಂತೆ ಆದರೆ….
ಹಿತವಾಗಿ ಮಿತವಾಗಿ ಮುಗಿಯುತ್ತದೆ
ಇದೆಲ್ಲವೂ ನಿನ್ನದೇ ಸಲುಗೆ-ಸುಲಿಗೆ
ಅಂತ್ಯ ಸ್ವಾತಂತ್ರ್ಯ ಇದಕ್ಕಿಲ್ಲ
ನಿನ್ನದೇ ಸಮಾಪ್ತಿ…

‍ಲೇಖಕರು Admin

July 4, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಶಿವಪ್ರಸಾದ್ ಅವರ ಈ ಕವಿತೆಗಳು ಓದಿಸಿಕೊಳ್ಳುವ ಶಕ್ತಿಯುಳ್ಳವು. ವಿಜ್ಞಾನದ ವಿದ್ಯಾರ್ಥಿಯೋರ್ವರ ಈ ಹೊಸ ಕವಿತೆಗಳು ಅವರ ಮುಂದಿನ ಕವಿತೆಗಳ ಬಗ್ಗೆ ಕುತೂಹಲ ಇಟ್ಟುಕೊಳ್ಳುವಂತೆ ಮಾಡುತ್ತವೆ.

    ಪ್ರತಿಕ್ರಿಯೆ
    • mehaboobi

      ಸುಂದರ ಕವಿತೆಗಳು..
      ಆಪ್ತ ಕಾಡುವ ಸಾಲುಗಳು…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: